ಭಾವದೊಸಗೆಯ ಪೀಯೂಷ ಬಿಂದು

Share Button

ಕವನಸಂಕಲನ: ಭಾವ ಬಿಂದು
ಕವಯತ್ರಿ: ಶಂಕರಿ ಶರ್ಮಾ ಪುತ್ತೂರು
ಪ್ರಕಾಶಕರು: ಜ್ಞಾನ ಗಂಗಾ ಪುಸ್ತಕ ಮಳಿಗೆ
ಬೆಲೆ: ರೂ. 90/-

‘ಭಾವಬಿಂದು’ ಕವಯತ್ರಿ ಶ್ರೀಮತಿ ಶಂಕರಿ ಶರ್ಮ ಪುತ್ತೂರು ಇವರ ಚೊಚ್ಚಲ ಕವನಸಂಕಲನದ ಹೆಸರು. ಇದು. ಹೆಸರು ಮಾತ್ರವಲ್ಲ ಈ ಕವನಸಂಕಲನ ಕೂಡ ಅಷ್ಟೇ ಮೋಹಕವಾಗಿದೆ. ಅದರೊಳಡಗಿರುವ ಕವಿತೆಗಳೆಲ್ಲವೂ ವೈವಿಧ್ಯಮಯ ವಿಷಯಗಳನ್ನಾಧರಿಸಿ ಬರೆದ ಕವನಕುಸುಮಗಳು. ಸದಾ ಉತ್ಸಾಹ ತುಂಬಿರುವ ಕ್ರಿಯಾಶೀಲ ಮನಸ್ಸಿನ ಶ್ರೀಮತಿ ಶಂಕರಿ ಶರ್ಮ ಅವರ ಕವನಗಳಲ್ಲಿ ದೇವರ ಸ್ತುತಿಗಳಿವೆ. ಮೊದಲು ಆದಿ ವಂದ್ಯ ಗಣಪನಿಗೆ ಕರ ಮುಗಿದೇ ಕವನಸಂಕಲನದ ಉಳಿದ ಕವನಗಳತ್ತ ದೃಷ್ಟಿ ಹರಿಸಿದ್ದಾರೆ.

“ಸಕಲ ಕಾರ್ಯಗಳ ಸಿದ್ಧಿಗೆ ಗಣಪನ
ಭಕುತಿಲಿ ಪೂಜಿಸೆ ಶುಭ ಕೊಡುವ
ಶಾಂತಿ, ನೆಮ್ಮದಿ, ಸುಖ,ಸೌಹಾರ್ದವ
ಬೇಡುತ ನಾವು ಪೊಡಮಡುವ “

ಈ ಸಾಲುಗಳಲ್ಲಿ ಕವಯತ್ರಿಯ ಭಕ್ತಿ ಭಾವವನ್ನು ಗುರುತಿಸ ಬಹುದು. ಗಣಪತಿಯ ಜನ್ಮದ ಕತೆ, ಚಂದ್ರನಿಗೆ ಶಾಪವಿತ್ತ ಕತೆ, ಸ್ಯಮಂತಪೋಖ್ಯಾನದ ಹಿತೋಪದೇಶದ ಸಾರವನ್ನೆಲ್ಲ ಈ ಪುಟ್ಟ ಕವನವೊಂದರಲ್ಲೇ ಹಿಡಿದಿಟ್ಟಿರುವುದು ಲೇಖಕಿಯ ಭಾಷಾ ಪ್ರೌಢಿಮೆಗೆ ಒಂದು ನಿದರ್ಶನ ಮಾತ್ರ. ಮುಂದೆ ಅಕ್ಷರಮಾಲೆಯ ಹಾರ ನೇಯ್ದು ಶಾರದಾಮಾತೆಯನ್ನು ಸ್ತುತಿಸುವ ಕವನ ಬಹಳ ಸೊಗಸಾಗಿದೆ. ಸೂರ್ಯೋದಯ ಕವನವಂತೂ ಸೂರ್ಯೋದಯವು ಕಣ್ಣಿಗೆ ಕಟ್ಟಿದಂತೆ ಹೃದ್ಯವಾದ ವರ್ಣನೆಯಿಂದ ಕೂಡಿದೆ.  ಮುಂಜಾನೆ ಅರಳಿದ ಹೂಗಳನ್ನು ಕವಯತ್ರಿ ಇಲ್ಲಿ ಪುಟ್ಟ ಮಕ್ಕಳಿಗೆ ಹೋಲಿಸಿದ್ದಾರೆ. “ಕ್ಷಣಿಕ ಜೀವನದಲ್ಲಿ ಇರಲಿ ಪ್ರೀತಿಯ ಜಗವು” ಎಂಬುದು ಇಲ್ಲಿ ಕವಿಹೃದಯದ ಸದಾಶಯ.

ಪುತ್ತೂರು ಜಾತ್ರೆ, ಬಾನಂಗಳದ ಬೆರಗು,ಗೆಳೆತನ,ಸಂತೃಪ್ತಿ…..ಹೀಗೆ ಕವನಗಳೆಲ್ಲವೂ ವೈವಿಧ್ಯಮಯ ವಿಚಾರಗಳನ್ನು ಒಳಗೊಂಡಿರುವುದು ಮಾತ್ರವಲ್ಲ ಕವಯತ್ರಿಯ ಭಾವಪೂರ್ಣ ಶಬ್ದಪ್ರಯೋಗದ ಬಳಕೆಯೂ ಇಲ್ಲಿ ಕವಿತೆಗಳಿಗೆ ಒಂದು ಘನತೆಯನ್ನು ನೀಡಿವೆ.

“ಕಷ್ಟಗಳ ಕತ್ತಲೆಯು ಶಾಶ್ವತವಾದುದಲ್ಲ
ಅದರೊಳಗೆ ಮುಳುಗುವುದು ಸರ್ವಥಾ ಸಲ್ಲ
ದಿಟ್ಟ ಮನವದು ಬೇಕು ಮೆಟ್ಟಿ ಹೊರಬರಲು
ತುಂಬಿ ನಿಂತಿರೆ ಹೊರಗೆ ಅವಕಾಶ ಕಡಲು”

ಬೆಳಕಿನೆಡೆಗೆ ಎಂಬ ಕವನದ ಈ ಸಾಲುಗಳು ಮನೋಜ್ಞವಾಗಿ, ಹತಾಶೆಯಿಂದ ನರಳುವ ಜೀವಿಗೆ ನೀಡುವ ಭರವಸೆಯ ಸಾಂತ್ವನದಂತಿದೆ.

ಹೂಬನ, ಸಿರಿಮುಡಿ,ಸಂಗೀತ ,ಮುಳ್ಳು ಹೂವು ಇವುಗಳ ಬಗ್ಗೆ ಕವನ ಬರೆದ ಕವಯತ್ರಿ ಬಿದಿರು, ಮರದ ನೆರಳು, ಹೊಲಿಗೆಯಂತ್ರ, ಎತ್ತಿನಬಂಡಿ ,ರಕ್ತದಾನ, ಪಕ್ಷಿಧಾಮ ….ಹೀಗೆ ಅತ್ಯಪೂರ್ವ ವಿಷಯಗಳನ್ನೇ ಕವಿತೆಯ ಮಾಲೆಯಾಗಿಸಿದ್ದಾರೆ.

“ನಾವು ಬಿಡುವ ಸ್ವಾರ್ಥತೆಯ ತ್ಯಾಗವನು ತುಂಬಿ
ವನವೃಕ್ಷಗಳ ಉಳಿಸೆ ಜೀವಿಸಲದ ನಂಬಿ”  ‘ಬಿದಿರು… ಬಾಳು ‘ ಕವನದ ಸಾಲುಗಳಿವು.

“ಛಿದ್ರಮನ ಜೋಡಿಸಲು ಪ್ರೀತಿಯಾ ಸೂತ್ರ
ಮಧುರ ಬಾಂಧವ್ಯ ಬೆಸೆಯುವ ಪಾತ್ರ” ಎಂದು ಹೊಲಿಗೆ ಯಂತ್ರವನ್ನು ವಿಶಿಷ್ಟವಾಗಿ ಬಣ್ಣಿಸಿರುವುದು ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ಕಾಲನ ಓಟ, ಎತ್ತಿನ ಬಂಡಿ, ಸುಜ್ಞಾನಿಗಳ ಮನ, ಮುದ್ದಿನ ಮಗಳಿಗೆ ಒಲವಿನ ಒಸಗೆ, ಸ್ನೇಹ, ಆಷಾಢದ ಮಳೆಯಲ್ಲಿ ಕವನಗಳೆಲ್ಲ ವಸ್ತು ವೈವಿಧ್ಯತೆಯ ಜೊತೆಗೆ ಭಾಷಾ ಸೌಂದರ್ಯವನ್ನೂ ಎತ್ತಿ ಹಿಡಿದಿವೆ. ಸೂರ್ಯಾಸ್ತ, ಸೂರ್ಯಕಾಂತಿ,  ಜಂಗಮವಾಣಿ, ತಾರೆಗಳ ತೋಟ, ಪಾರಿಜಾತ, ಏಕಾಂಗಿ ಶಿಲೆ, ಅಮ್ಮನ ದಿನ, ಮತದಾನ, ಮಂಜು, ನಾಡಹಬ್ಬ,ಸೋಲು ಗೆಲುವು, ಸೇತು ಬಂಧ….ಹೀಗೇ ಶಂಕರಿ ಶರ್ಮ ಅವರು ಕವನ ಹೊಸೆಯದ ವಿಷಯಗಳು ಯಾವುದೂ ಇಲ್ಲವೇನೋ ಎಂದೆನಿಸಿ ಬಿಡುವಷ್ಟು ವೈವಿಧ್ಯಮಯ ಕವನಗಳು ಈ ಪುಟ್ಟ ಹೊತ್ತಗೆಯ ಕಾವ್ಯ ಶ್ರೀಮಂತಿಕೆಯ ಚೆಲುವನ್ನು ಮತ್ತಷ್ಟು ಹೆಚ್ಚಿಸಿವೆ.

ನಿಸ್ವಾರ್ಥ ನಿಷ್ಕಾಮ ನಿಷ್ಕಪಟ ಮನದಂತೆ
ಸಂಪ್ರೀತಿ ಸೌಹಾರ್ದ ಬೆಳಕು ಬರಲು
ಪ್ರೀತಿ ಸ್ನೇಹ ಮಿಳಿತ ಸೌಜನ್ಯ ನಡೆಯಿಂದ
ಪರಮಸೌಖ್ಯದ ಬಾಳು ಸಾರ್ಥಕ್ಯವಿರಲು

ಜೀವನ ವೃಕ್ಷ ಕವನದ ಈ ಸಾಲುಗಳು ಮಾನವನ ಬದುಕಿನಲ್ಲಿ ಸ್ನೇಹ, ಸೌಜನ್ಯತೆಯ ಮಹತ್ವದ ಬಗ್ಗೆ ಕವಯತ್ರಿ ಬೆಳಕು ಚೆಲ್ಲಿದ್ದಾರೆ. “ರೇಡಿಯೋ ಪಾಂಚಜನ್ಯ, ಕುರ್ಚಿ” ಗಳೂ ಕವನ ರೂಪ ತಾಳಿ ಸೊಗಸಾದ ಚಿತ್ರದ ಚೌಕಟ್ಟಿನೊಳಗೆ ಮೂಡಿ ಬಂದು ಭಾವ ಬಿಂದುವಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ನೂರಾರು ಬಯಕೆಗಳು ಜತೆಗೂಡೆ ಚಿಂತೆಗಳು
ಜೀವನದ ಪಯಣದಲಿ ಸಿಗಲು ಅದೆ ನೋವು
ಸ್ಥೈರ್ಯ ಧೈರ್ಯವು ಮನದಿ ನಿಷ್ಠೆ ಕಾಯಕದ ಬಲವು
ಗುರಿ ಸಾಧನೆಯ ಪರಿಯೆ ಅದೆ ನಿಜದಿ ಗೆಲುವು

ಎಂದು ಜೀವನದ ನಿಜವಾದ ಗೆಲುವಿನ ಬಗ್ಗೆ ತಿಳಿಸುವ ಕವಯತ್ರಿಯ ಪ್ರತಿಯೊಂದು ಕವನದಲ್ಲೂ ಸಕಾರಾತ್ಮಕ ಭಾವಗಳೇ ತುಂಬಿವೆ. ಬದುಕನ್ನು ಕ್ರಿಯಾಶೀಲತೆಗ ಮುನ್ನುಗ್ಗುವಂತೆ ಮಾಡುವ ಪ್ರೋತ್ಸಾಹದ ಶಕ್ತಿ ಅಡಗಿದೆ. “ಭಾವಬಿಂದು” ಹೊತ್ತಗೆಯಂತೆಯೇ ಇದರ ಮುಖಪುಟವೂ ಮುದ್ದಾಗಿದೆ. ಸೂರ್ಯಕಿರಣಗಳು ನೀರಹನಿಗೆ ಬಿದ್ದು ಪ್ರತಿಫಲಿಸುವ ಮನೋಹರ ದೃಶ್ಯ ಸೊಬಗು ಮುಖಪುಟದ ಅಂದವನ್ನು ಹೆಚ್ಚಿಸಿದೆ.

ಒಟ್ಟಿನಲ್ಲಿ ಮೃದುವಾಗಿ ಮನದ ಭಾವನೆಗಳ ಕದ ತಟ್ಟುವ ,ಧನಾತ್ಮಕ ಚಿಂತನೆಯನ್ನು ಬಿಂಬಿಸುವ ಶಂಕರಿ ಶರ್ಮಾ ಅವರ “ಭಾವಬಿಂದು” ಕವನಸಂಕಲನ ಓದುಗರ ಹೃದಯ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಶಂಕರಿ ಶರ್ಮಾ ಅವರ ಲೇಖನಿಯಿಂದ ಇನ್ನಷ್ಟು ಭಾವರಸ ಗಂಗೆ ಸುರಿದು ಸಾರಸ್ವತ ಲೋಕವನ್ನು ಸಮೃದ್ಧಗೊಳಿಸಲಿ.

-ಪ್ರಸನ್ನಾ ವಿ ಚೆಕ್ಕೆಮನೆ , ಕಾಸರಗೋಡು ಜಿಲ್ಲೆ

2 Responses

 1. Avatar ನಯನ ಬಜಕೂಡ್ಲು says:

  ಪುಸ್ತಕ ಪರಿಚಯ ಚೆನ್ನಾಗಿದೆ. ಶಂಕರಿ ಮೇಡಂ ಅವರ ಪ್ರವಾಸ ಕಥನ ಸುರಹೊನ್ನೆಯಲ್ಲಿ ಪ್ರಕಟಗೊಂಡಿತ್ತು, ಈಗ ಈ ಬರಹದಿಂದ ಅವರ ಕವನ ಸಂಕಲನದ ಬಗ್ಗೆಯೂ ತಿಳಿದುಕೊಳ್ಳುವ ಹಾಗಾಯಿತು.

  • Avatar ಶಂಕರಿ ಶರ್ಮ, ಪುತ್ತೂರು says:

   ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ..
   ನಯನಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: