ಬಾಳ ಇಳಿಸಂಜೆ

Share Button

ವಯಸ್ಸಾದವರನ್ನು ಕಾಣುವಾಗ ಮನಸ್ಸಿನ ಮೂಲೆಯಲ್ಲಿ ಅವರಿಗಾಗಿ ಚಿಮ್ಮುವ ಕಾಳಜಿಯ ಒರತೆ, ಹಿರಿಯರು ಅನ್ನುವ ಗೌರವ, ಪಾಪ ಮಕ್ಕಳಂತೆ ಅನ್ನುವ ಭಾವ. ಕೆಲವರು ಮಕ್ಕಳಿದ್ದು ಯಾರೂ ಇಲ್ಲದಂತೆ ಆಶ್ರಮಗಳಲ್ಲಿ ಬದುಕುವುದನ್ನು ಕಾಣುವಾಗ ಹೃದಯ ಚೀರುತ್ತದೆ- ಯಾಕೆ ಮಕ್ಕಳೆನಿಸಿಕೊಂಡವರೆ ನೀವು ನಿಮ್ಮ ತಂದೆ ತಾಯಿಗಳನ್ನು ನಿಮ್ಮಿಂದ ದೂರ ಮಾಡುವಷ್ಟು  ಕಟುಕರು ಆಗುತ್ತೀರಿ, ನಿಮ್ಮ ಎದೆಯಲ್ಲಿ ತುಸುವಾದರೂ ಮಾನವೀಯತೆಯ, ಮಮತೆಯ ಒರತೆ  ಒಸರದೆ? ಎಂದು.

ನಿಜ ವಯಸ್ಸಾದಂತೆ ಮನುಷ್ಯ ಮತ್ತೆ ಮಗುವಿನಂತೆ ಬಾಲಿಶವಾಗಿ ಆಡತೊಡಗುತ್ತಾನೆ, ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಾದವರು ಏಕೆ ತಮ್ಮ ಬಾಲ್ಯವನ್ನು ನೆನೆದು, ತಮಗಾಗಿ ಹೆತ್ತವರು ಮಾಡಿರುವ ತ್ಯಾಗವನ್ನು ನೆನೆದು ತುಸು ಸಮಾಧಾನ ಮಾಡಿಕೊಳ್ಳಬಾರದು?. ಆ ಎತ್ತಿ ಆಡಿಸಿದ ಕೈಗಳೇಕೆ ನೆನಪಿನಿಂದ ಮರೆಯಾಗುತ್ತವೆ?, ಏಕೆ ಹಿರಿಜೀವಗಳನ್ನು ಒಂಟಿಯಾಗಿಸುತ್ತೇವೆ?.

ಇವೆಲ್ಲ ಅಕ್ಷರ ರೂಪದಲ್ಲಿ ಬರೆದು ಲೇಖನವಾಗಿ ಪ್ರಕಟಿಸಿದಷ್ಟು ಸುಲಭದ ಮಾತಲ್ಲ ಬದುಕಲ್ಲಿ ಅಳವಡಿಸಿಕೊಂಡು  ಸಾಗುವುದು. ಇಲ್ಲಿ ಹಿರಿಯರು ಮತ್ತು ಮಕ್ಕಳ ನಡುವೆ ಪ್ರತಿಯೊಂದು ವಿಚಾರದಲ್ಲೂ ವಿಭಿನ್ನ ಮನೋಭಾವವಿರುತ್ತದೆ. ಅದು ಹೊಂದಿಕೆಯಾಗದ ಪರಿಣಾಮ ಪರಸ್ಪರ ಸರಿಹೊಂದುವುದಿಲ್ಲ, ಹೊಂದಾಣಿಕೆ ಅಸಾಧ್ಯ ಅನ್ನುವ ಭಾವ ಹುಟ್ಟಿಕೊಳ್ಳುತ್ತದೆ.

ಹೆಚ್ಚಿನ ಹಿರಿಯರು ಬಹಳ ಕಷ್ಟದ ಹಿನ್ನೆಲೆಯಿಂದ ಬಂದವರೇ ಆಗಿರುತ್ತಾರೆ. ಹಾಗಾಗಿ ಅವರು ಪ್ರತಿಯೊಂದರಲ್ಲೂ ಹಿಡಿತ ಮಾಡುತ್ತಿರುತ್ತಾರೆ. ಇದು ಬಹಳಷ್ಟು ಸಲ ನಮಗೆ, ಇವತ್ತಿನ ಪೀಳಿಗೆಗೆ ಇಷ್ಟ ಆಗುವುದಿಲ್ಲ. ಯಾಕೆಂದರೆ ಕೈತುಂಬ ಸಂಬಳ ಬರುವ ಕೆಲಸವಿರುತ್ತದೆ. ಖರ್ಚು ಅಷ್ಟೇ ಯಾವುದಕ್ಕೂ ಹಿಂದೆಮುಂದೆ ನೋಡದೆ ಮಾಡುತ್ತಿರುತ್ತೇವೆ. ಇಂತಹ ಪರಿಸರ ಇರುವಲ್ಲಿ ಹೆಚ್ಚಿನ ಹಿರಿಯರ ಗೊಣಗಾಟ, ಅಸಹನೆಯನ್ನು ಹೊರಹಾಕುವಿಕೆ ನಡೆದೇ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ಜಾಸ್ತಿ ಮನಸ್ಸಿಗೆ ಹಚ್ಚಿಕೊಳ್ಳದೆ ಸಾಗುವಂತಹ ಮನೆಗಳಲ್ಲಿ ಯಾವ ಒಡಕೂ ಮೂಡದೆ ಸಂಸಾರ ರಥ ಒಗ್ಗಟ್ಟಿನೊಂದಿಗೆ ಸಾಗುತ್ತಿರುತ್ತದೆ. ಆದರೆ ಸಹನೆ ಇಲ್ಲದವರಲ್ಲಿ ಇದುವೇ ದೊಡ್ಡದಾಗಿ ಒಟ್ಟಾಗಿ ಬಾಳುವುದು ಅಸಾಧ್ಯ ಅನ್ನುವ ಭಾವ ಮೂಡಿ ಹಿರಿಯರು ವೃದ್ಧಾಶ್ರಮ ಅಥವಾ ಬೇರೆಯೇ ಮನೆಗಳಲ್ಲಿ ಒಂಟಿ ಗಳಂತೆ ಬದುಕುತ್ತಿರುತ್ತಾರೆ. ಹೀಗೆ ಹಿರಿಯರನ್ನು ಒಂಟಿಯಾಗಿಸುವುದು ಮಾನವೀಯತೆ ಅಲ್ಲ. ಕೆಲವೊಂದು ವಿಚಿತ್ರ ಸನ್ನಿವೇಶಗಳಲ್ಲಿ ಹಿರಿಯರ ಸ್ವ ಇಚ್ಛೆ, ಹಠದಿಂದಲೇ ಎಲ್ಲರಿಂದ ದೂರವಾಗಿ ಬದುಕುತ್ತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಯಾರೂ ಏನೂ ಮಾಡಲಾಗುವುದಿಲ್ಲ.

ಹಿರಿಯರು ಏನೇ ಮಾಡಿದರೂ ಅವರ ಕೃತ್ಯಗಳನ್ನು “ವಯಸ್ಸು” ಅನ್ನುವ ಮಾನದಂಡ ಅಳೆಯುತ್ತದೆ ಹಾಗೂ ಜಗತ್ತು ಅದನ್ನೇ ಪುಷ್ಟೀಕರಿಸುತ್ತದೆ. ಪಾಪ ವಯಸ್ಸಾದವರು ಅನ್ನುವ ಅನುಕಂಪ ಅವರನ್ನು ಬೆಂಬಲಿಸುತ್ತದೆ, ಸಪೋರ್ಟ್ ಮಾಡುತ್ತದೆ. ಹಾಗಾಗಿ ಮಕ್ಕಳು ಅನ್ನಿಸಿಕೊಂಡವರು ಸಂಸಾರದಲ್ಲಿ ನೆಮ್ಮದಿ ಬೇಕಾದಲ್ಲಿ ಎಂತಹ ಕೆಟ್ಟ ಪರಿಸ್ಥಿತಿ ಇದ್ದರೂ ಹೊಂದಿಕೊಂಡು ಹೋಗುವುದೇ ಜಾಣತನ. ಮಕ್ಕಳು ಇವತ್ತು ಹಿರಿಯರೊಂದಿಗೆ ಎದುರಿಸುವ ಪರಿಸ್ಥಿತಿ ನಾಳಿನ ಪಾಠಗಳಾಗಿರುತ್ತವೆ. ಅವರು ಅವರ ಮಕ್ಕಳೊಂದಿಗೆ ಹೇಗಿರಬೇಕು ಅನ್ನೋದನ್ನು ಕಲಿಸುತ್ತವೆ. ನಮ್ಮ ಹಿರಿಯರಿಂದ ಕಲಿತ ಪಾಠವನ್ನು ನಾವು ಬದುಕಲ್ಲಿ ಅಳವಡಿಸಿಕೊಂಡು  ಸಹನೆ, ತಾಳ್ಮೆ, ಒಳ್ಳೆಯತನಗಳನ್ನು ರೂಢಿಸಿಕೊಂಡಾಗ ನಮ್ಮ ಮಕ್ಕಳು ನಮ್ಮೊಂದಿಗೆ ಹೊಂದಿಕೊಳ್ಳುತ್ತಾರೆ. ವಯಸ್ಸಾದ ಮೇಲೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹೊಂದಾಣಿಕೆ ಅನ್ನುವ ಸೂತ್ರ ಒಂದೇ ಈ ಜಗತ್ತಿನಲ್ಲಿ ಸಂಸಾರವನ್ನು ಸುಂದರವಾಗಿಸುವ ಸಾಧನ. ಅದು ಇಲ್ಲದಿದ್ದಲ್ಲಿ ಮನೆ ಮನಗಳೆರಡೂ ಛಿದ್ರ ಛಿದ್ರ.

“ಬಾಳ ಇಳಿಸಂಜೆಯಲಿ
ಆವರಿಸಲಿ ನೆಮ್ಮದಿಯ
ಕಾಮನಬಿಲ್ಲಿನ ಬಣ್ಣ,
ಹೊಂದಿ ಸಹನೆ
ನಾವೇ ಕಟ್ಟಿಕೊಳ್ಳಬೇಕಾಗಿದೆ
ಬದುಕೆಂಬ ಬಾಗಿಲಲ್ಲಿ ಸಂತಸದ ತೋರಣ “.
.

– ನಯನ ಬಜಕೂಡ್ಲು
 

12 Responses

 1. Avatar Asha nooji says:

  ಅಹಾ‌ಎಂತ ಮಾತು ಆಡಿರುವಿರಿ ನಯನಾ ವಯಸ್ಸಾದವರನ್ನು ನೋಡಿಕ್ಕೊಳ್ಳಲು.ಎಷ್ಟುಕಷ್ಟ .ಇದೆ .ಮಕ್ಕಳಂತೆ ವರ್ತಿಸುವರು .ಹೌದು ನನ್ನ ಅನುಭವ.ನನಗೂ ವಯಸ್ಸಾದ ಅತ್ತೆ ಇರುವರು
  ಹೇಳಿದ್ದೆ ಅವರಿಗೆ .. ಚೆನ್ನಾಗಿ ವಿವರಿಸಿ ಬರೆದಿರುವಿರಿ .

 2. Avatar ಪ್ರಭಾಕರ ತಾಮ್ರಗೌರಿ says:

  ಬಹಳ ಚೆನ್ನಾಗಿ ಬರೆದಿದ್ದೀರಿ . ಇಂದಿನ ನಿಜವಾದ ವಾಸ್ತವ ಚಿತ್ರಣವನ್ನು ಎತ್ತಿ ತೋರಿಸಿದ್ದೀರಿ . ಇಂದಿನ ಬಹುತೇಕ ಕುಟುಂಬಗಳು ನೀವು ಬರೆದಂತೆ ಇದೆ . ಈ ಲೇಖನವನ್ನ ಓದಿಯಾದರೂ ಮುಂದೆ ತಿದ್ದುಕೊಳ್ಳ ಬಹುದು . ಒಂದು ವೇಳೆ ಹಾಗೇನಾದರೂ ನೀವು ಕೊನೆಯಲ್ಲಿ ಹೇಳಿದಂತೆ ” ಬದುಕೆಂಬ ಬಾಗಿಲಲ್ಲಿ ಸಂತಸದ ತೋರಣವಾಗಬಹುದು ” ಹಾಗಾಗಲೆಂದೇ ಆಶಿಸುತ್ತೇನೆ .

 3. Avatar ಹರ್ಷಿತಾ says:

  ಇಳಿ ಸಂಜೆಯ ಜೀವನವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ ..ಹಾಗೂ ಕಿರಿಯರ ಕರ್ತವ್ಯಗಳನ್ನೂ ನೆನಪಿಸಿದ್ದೀರಿ…. ಮನಮುಟ್ಟುವ ಲೇಖನ ಮೇಡಂ…

 4. Avatar .ಮಹೇಶ್ವರಿ.ಯು says:

  ನಿಮ್ಮ ಮಾತು ನಿಜ. ಒಮ್ಮೆ ನಮ್ಮನ್ನು ಅವರ ಸ್ಥಾನದಲ್ಲಿ ನಿಲ್ಲಿಸಿ ಸಹೃದಯತೆಯಿಂದ ಯೋಚಿಸಿದರೆ ಸಾಕು ಅವರ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.ನಿಮ್ಮ ಕಾಳಜಿ ಮನಸ್ಸನ್ನು ಮುಟ್ಟುತ್ತದೆ.

 5. Avatar Anant Vaidya says:

  ತಂಬಾ ಚಂದವಾಗಿದೆ. ಒಂದು ಮಗ್ಗಲು ಮಾತ್ರ ಆಯಿತೇನೋ?

  • Avatar ನಯನ ಬಜಕೂಡ್ಲು says:

   ನಿಜ ಸರ್. ನನಗೂ ಹಾಗನ್ನಿಸಿತು. ಇನ್ನಷ್ಟು ವಿಚಾರಗಳು ಇವೆ. ಮುಂದೊಂದು ದಿನ ಅದನ್ನೂ ಹಂಚಿಕೊಳ್ಳುವೆ. ಧನ್ಯವಾದಗಳು ಸರ್.

 6. Avatar ಶಂಕರಿ ಶರ್ಮ says:

  ಬಾಳಸಂಜೆಯಲ್ಲಿರುವ ಹೆಚ್ಚಿನ ವಯೋವೃದ್ಧರ ಸ್ಥಿತಿ ಹೀಗಿದ್ದರೂ, ತಮ್ಮ ಮನೆಯ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳುವವರು ಕೂಡಾ ಇನ್ನೂ ಸಮಾಜದಲ್ಲಿ ಇರುವುದು ಕಂಡುಬರುತ್ತದೆ..ಇದು ಸ್ವಲ್ಪ ಸಮಾಧಾನಕರ ಸಂಗತಿ ಅಲ್ಲವೇ? ಸೊಗಸಾದ ನಿರೂಪಣೆಯ ಸಕಾಲಿಕ ಬರಹ.

  • Avatar ನಯನ ಬಜಕೂಡ್ಲು says:

   ಹೌದು ಮೇಡಂ ನಿಜ ನಿಮ್ಮ ಮಾತು. ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: