ರೋಚಕ ಪ್ರವಾಸ ಕಥನ.. ‘ಮೇಘದ ಅಲೆಗಳ ಬೆನ್ನೇರಿ’

Share Button

ಚಾರಣ, ಪ್ರವಾಸ ಮತ್ತು ಯಾತ್ರೆಗಳನ್ನು ಮಾಡುವವರು ಮುಖ್ಯವಾಗಿ ಮೂರು ಗುಣಗಳನ್ನು ಮೈಗೂಡಿಸಿಕೊಂಡಿರಬೇಕು. ಅವೆಂದರೆ ಮಾರ್ಗಜ್ಞಾನ (ತಾವು ಪಯಣಿಸಬೇಕಾದ ಸ್ಥಳಗಳ ಕುರಿತಾದ ಸೂಕ್ತ ಮಾಹಿತಿ), ಮಾರ್ಗಕ್ರಮಣ (ತಿಳಿದ ದಾರಿಯ ಮೂಲಕ ಸಂಚಾರ ನಡೆಸಿ ಅದರ ಕಷ್ಟ ಸುಖಗಳ ಅನುಭವ ಪಡೆಯುವಿಕೆ), ಮತ್ತು ಮಾರ್ಗದರ್ಶನ (ಅದೇ ಸ್ಥಳಗಳಿಗೆ ಹೋಗಬಯಸುವ ಕುತೂಹಲಿಗಳಿಗೆ ಅವಶ್ಯ ಸಲಹೆ ಸೂಚನೆ ನೀಡಿಕೆ).

ಈ ದೃಷ್ಟಿಯಿಂದ ಮೈಸೂರಿನ ಪ್ರವಾಸ ಕುಶಲೆ ಹೇಮಮಾಲಾ ಬಿ. ಮಾಡಿದ ಸಾಧನೆ ಗಮನಾರ್ಹ. ಹಿಮಾಲಯದ ಚತುರ್ಧಾಮಗಳಿಗೆ ಭೇಟಿ ನೀಡಿ ‘ಚಾರ್ ಧಾಮ್ ಎಂಬ ಸೊಗಸಾದ ಪ್ರವಾಸ ಕಥನವನ್ನು ರಚಿಸಿದ ಅವರು ‘ಮೇಘದ ಅಲೆಗಳ ಬೆನ್ನೇರಿ’ ಎನ್ನುವ ದ್ವಿತೀಯ ಪ್ರವಾಸ ಕಥನವನ್ನು ಗ್ರಂಥ ರೂಪದಲ್ಲಿ ಕನ್ನಡಿಗರ ಕೈಯಲ್ಲಿ ಇರಿಸಿದ್ದಾರೆ. ಮೈಸೂರಿನ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಸಂಘಟಿಸಿದ ಮೇಘಾಲಯ ಗುಹಾಚಾರಣ ಮತ್ತು ಒಡಿಶಾ ಕಡಲ ತೀರದ ಚಾರಣ ಪುಸ್ತಕದ ಬಲುಮುಖ್ಯ ಅಧ್ಯಾಯಗಳು, ಪೂರ್ವ ತಯಾರಿಯ ವಿವರಣೆಯೊಂದಿಗೆ ಪ್ರಾರಂಭವಾಗುವ ಕಥನವು ಮುಂದೆ ಗೌಹಾಟಿ, ಶಿಲ್ಲಾಂಗ್, ಡಾವ್ ಕಿ, ದಾರಾಂಗ್, ಮಾಫ್ಲಿಂಗ್, ಲ್ಯಾಟಿಂಗೋ, ಡೈನ್ ತ್ಲೆನ್ ಜಲಪಾತ, ವೀ ಸಾಡಾಂಗ್ ಫಾಲ್ಸ್, ನೊಹ್ ಕಾ ಲಿಕಾನ್ ಫಾಲ್ಸ್, ಸೆವೆನ್ ಸಿಸ್ಟರ್ಸ್ ಜಲಪಾತ, ಚಿರಾಪುಂಜಿ ಮತ್ತಿತರ ಗುಹೆಗಳ ಕುತೂಹಲಕರ ವರ್ಣನೆಯನ್ನು ಕೊಡುತ್ತದೆ. ಮುಂದೆ ಕಾಮಾಕ್ಯ ಮಂದಿರದ ವರೆಗೆ ಸಾಗುವ ಪ್ರವಾಸದ ಮಧ್ಯೆ ಕಳೆದು ಹೋದ ಬ್ಯಾಗ್, ಫೋನ್ ಗಳ ಪ್ರಸಂಗವನ್ನೂ ಲೇಖಕಿ ದಾಖಲಿಸಿದ್ದಾರೆ. ಅವಶ್ಯ ಕಂಡಲ್ಲೆಲ್ಲ ಸ್ವಾರಸ್ಯಕರ ದಂತಕಥೆ, ಆಖ್ಯಾನಗಳನ್ನು ಉಲ್ಲೇಖಿಸಿದ್ದಾರೆ.

ಒಡಿಶಾ ಪ್ರಯಾಣದ ಕುರಿತಾದ ವಿವರಣೆ ಕೂಡ ಚೇತೋಹಾರಿಯಾಗಿದೆ. ನೃಸಿಂಗಪಟ್ಟಣ, ಲೂನಾಪಾನಿ, ಗಭಾಗುಂಡ, ಬ್ರಹ್ಮಪುರ, ಚಿಲಿಕಾ ಸರೋವರ, ಕೋನಾರ್ಕ್, ಲಿಂಗರಾಜ ದೇವಸ್ಥಾನ, ಪುರಿಯ ಜಗನ್ನಾಥ ಮಂದಿರ(ಅದಕ್ಕೆ ಸಂಬಂಧಿಸಿದ ಪೌರಾಣಿಕ ಕಥೆ ರೋಚಕವಾಗಿದೆ)ಗಳಿಗೆ ಸಂಬಂಧಪಟ್ಟ ನಿರೂಪಣೆಗಳು ಓದುಗರನ್ನು ಮಂತ್ರಮುಗ್ಧರಾಗಿ ಮಾಡುತ್ತವೆ. ಅಲ್ಲಲ್ಲಿ ಆಯಾಯ ಸ್ಠಳಗಳಿಗೆ ಒತ್ತು ಕೊಡುವ ಸೊಗಸಾದ ಕಪ್ಪು ಬಿಳುಪು ಚಿತ್ರಗಳನ್ನು ಕೊಟ್ಟಿರುವುದು ಉಪಯುಕ್ತವಾಗಿವೆ.
ಪುಸ್ತಕದ ಎರಡನೆಯ ಭಾಗದಲ್ಲಿ ಭಾರತದ ವಿವಿಧ ಭಾಗಗಳಿಗೆ ಸೇರಿದ ಹನ್ನೊಂದು ಸ್ಥಳಗಳ ಸಂಕ್ಷಿಪ್ತ ಚಿತ್ರಣವಿದೆ. ಗಂಗಾ- ಬ್ರಹ್ಮಪುತ್ರಾ ಮತ್ತು ಇತರ ಉಪನದಿಗಳು ಬಂಗಾಳಕೊಲ್ಲಿಯನ್ನು ಸೇರುವ ‘ಸುಂದರ ಬನ’ ಬಹಳಷ್ಟು ಸೊಗಸಾಗಿದ್ದರೂ ಪ್ರವಾಸಿಗರಿಗೆ ಮಾತ್ರವಲ್ಲ ಸ್ಥಳೀಯರಿಗೂ ಬಹಳಷ್ಟು ತಲ್ಲಣ ಉಂಟು ಮಾಡುತ್ತವೆ ಎಂದು ಲೇಖಕಿ ಹೇಳುತ್ತಾರೆ.

ಅಶೋಕ ಚಕ್ರವರ್ತಿಯು ಕಟ್ಟಿಸಿದ ಸ್ತಂಭದಲ್ಲಿರುವ ಸಿಂಹಶೀರ್ಷ(ಸಾರನಾಥ), ಲಡಾಕ್ ನಲ್ಲಿರುವ ಸಿಂಧೂ- ಜಂಸ್ಕರ್ ಸಂಗಮ, ಉತ್ತರದಲ್ಲಿ ಭಾರತದ ಕೊನೆಯ ಹಳ್ಳಿಯಾದ ಟುರ್ ಟುಕ್, ನೇಪಾಳದಲ್ಲಿರುವ ಜೋಂಸಮ್, ಗುಜರಾತ್ ರಾಜ್ಯದ ಕಛ್ ಪ್ರದೇಶ, ಲೇಹ್ ನಗರದಲ್ಲಿನ ರಾಂಚೋ ಮಿಂಚಿದ ಶಾಲೆ, ಗುಜರಾತಿನ ಭುಜೋಡಿ, ಪಾಂಡವರು ವನವಾಸ ಮಾಡಿದ ಭೀಮನ ಬೆಟ್ಟ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಬೆಲಮ್ ಕೇವ್ಸ್ ಮತ್ತು ಉತ್ತರಾಖಂಡ ರಾಜ್ಯದ ಬದರೀನಾಥ- ಇವುಗಳ ಸೊಗಸು ರಮ್ಯತೆಗಳನ್ನು ಹೇಮಮಾಲಾ ಸೊಗಸಾಗಿ ವರ್ಣಿಸಿದ್ದಾರೆ. ಈ ಎಲ್ಲಾ ಸ್ಥಳಗಳಿಗೆ ಹೋಗುವ ದಾರಿ, ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಮುಂತಾದುವನ್ನು ಸೂಚಿಸಿರುವುದು ತುಂಬ ಉಪಯುಕ್ತವಾಗಿದೆ.

ಕೃತಿಯಲ್ಲಿ ಬಳಸಲಾದ ಭಾಷೆ ಸರಳವಾಗಿದೆ, ಸುಲಲಿತವಾಗಿದೆ. ಲೇಖಕಿಯ ವಿನೋದಪ್ರಿಯತೆ- ಹಾಸ್ಯಪ್ರಜ್ಞೆಗಳು ಇಡಿಯ ಪುಸ್ತಕಕ್ಕೆ ಮೆರುಗನ್ನು ಕೊಟ್ಟಿವೆ. ಗ್ರಂಥಕರ್ತೆ ಹೇಮಮಾಲಾ ಇನ್ನಷ್ಟು ಸೊಗಸಾದ ಕೃತಿಗಳನ್ನು ಹೊರತರಲಿ ಎಂದು ಹಾರೈಸೋಣ.

– ಪ್ರೊ| ವಿ. ಬಿ. ಅರ್ತಿಕಜೆ, ಪುತ್ತೂರು

6 Responses

  1. Hema says:

    ನನ್ನ ಪುಸ್ತಕವನ್ನು ಓದಿ, ಪ್ರೋತ್ಸಾಹದಾಯಕ ನುಡಿಗಳೊಂದಿಗೆ ಶುಭ ಹಾರೈಸಿದ ತಮಗೆ ಅನಂತ ವಂದನೆಗಳು. ಧನ್ಯೋಸ್ಮಿ!

  2. ನಯನ ಬಜಕೂಡ್ಲು says:

    ತುಂಬಾ ಸೊಗಸಾದ ಪ್ರವಾಸ ಕಥನ, ಈ ಕೃತಿಯ ವೈಷ್ಟ್ಯತೆಯನ್ನು ಪರಿಚಯಿಸಿದ ರೀತಿಯೂ ಬಹಳ ಸೊಗಸಾಗಿದೆ.

  3. Savithri bhat says:

    ಮೇಘದ ಅಲೆಗಳ ಬೆನ್ನೇರಿ” ಪುಸ್ತಕ ವನ್ನು ಬರೆದು ಓದುಗನನ್ನು ಆಸಕ್ತಿಯಿಂದ ಓದುವಂತೆ ನಿರೂಪಿಸಿದ ಹೇಮಮಾಲಾ ಅವರಿಗೆ ಧನ್ಯವಾದಗಳು. ಪುಸ್ತಕ ವನ್ನೂ ಓದಿ ಸೊಗಸಾಗಿ ಪರಿಚಯಿಸಿದಾ ಪರಿ ಬಹಳ ಸೊಗಸಾಗಿತ್ತು.

  4. ಶಂಕರಿ ಶರ್ಮ, ಪುತ್ತೂರು says:

    ಅಪೂರ್ವ ಪ್ರವಾಸ ಕಥನದ ಸೊಗಸಾದ ವಿಮರ್ಶೆಯು ಹಿರಿಯ ಸಾಹಿತಿ, ಪತ್ರಕರ್ತರಾದ ಶ್ರೀಯುತ ವಿ. ಬಿ ಅರ್ತಿಕಜೆಯವರ ಲೇಖನಿಯಿಂದ ಮೂಡಿಬಂದಿರುವುದು ನಿಜಕ್ಕೂ ಅಭಿನಂದನೀಯ..ಶುಭಾಶಯಗಳು ಮಾಲಾ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: