ನನ್ನೂರಿನ ಬಾಲ್ಯದ ಮಧುರ ದೀಪಾವಳಿ..

Share Button

ನಮಗೆಲ್ಲರಿಗೂ ದೀಪಾವಳಿಯೆಂದರೆ ಈಗಲೂ ಕೂಡ ಎಲ್ಲಿಲ್ಲದ ಸಡಗರ ಸಂಭ್ರಮ. ಒಂದುರೀತಿಯಲ್ಲಿ ಹೇಳಿಕೊಳ್ಳಲಾಗದ ರೋಮಾಂಚನ ಅನುಭವ ನೀಡುತ್ತದೆ. ಈಗ ನಾವು ಬೆಳೆದು ದೊಡ್ಡವರಾಗಿದ್ದರೂ ಕೂಡ ಬಾಲ್ಯದಲ್ಲಿ ನಾವು ಆಚರಿಸಿದ ದೀಪಾವಳಿ ಸವಿನೆನಪಿನ ಚಿತ್ತಾರ ನಮ್ಮ ಮನಗಳನ್ನು ಸೂರೆಗೊಳ್ಳುತ್ತದೆ. ಬಾಲ್ಯದಲ್ಲಿ ಬೇರೆಯವರು ಹಣವನ್ನು ಕೊಟ್ಟರೆ ಮಾತ್ರ ನಮಗೆ ದೀಪಾವಳಿ ಎನ್ನುವಂತಿತ್ತು. ಆದರೆ ಈಗ ನಮಗೆ ಕೈತುಂಬಾ ಹಣವಿದೆ…. ಏನು ಬೇಕಾದರೂ ಕೊಳ್ಳುವ ಮನಸ್ಸಿದೆ….. ವಯಸ್ಸಿದೆ…. ಆದರೂ ಕೂಡ ನಾವು ಬಾಲ್ಯದಲ್ಲಿ ಆಚರಿಸುತ್ತಿದ್ದ ದೀಪಾವಳಿ ಹಬ್ಬದಲ್ಲಿ ಏನೋ ಸಡಗರ ಸಂಭ್ರಮ.

ಬಾಲ್ಯದಲ್ಲಿ ನಮಗೆ ದೀಪಾವಳಿ ಎಂದರೆ ಪಟಾಕಿಗಳನ್ನು ಕೊಳ್ಳುವುದು. ಹೊಸ ಬಟ್ಟೆ ಬರುತ್ತಿತ್ತು. ಸಿಹಿತಿಂಡಿ ಮಾಡುತ್ತಿದ್ದರು. ಮುಖ್ಯವಾಗಿ ಎಲ್ಲರೂ ಸಹ ಒಟ್ಟಾಗಿ ಸೇರುತ್ತಿದ್ದೆವು. ಎರಡು ಮೂರು ದಿನಗಳಿಗೆ  ಮುಂಚೆಯೇ ಹಬ್ಬದ ವಾತಾವರಣ ಊರ ತುಂಬ ಇರುತ್ತಿತ್ತು.  ಹಳ್ಳಿ ಜೀವನ ಎಂದರೆ ಏನೋ ಒಂದು ರೀತಿಯಲ್ಲಿ ಸೊಗಸು.  ಆದರೆ ಈಗ ಯಾಂತ್ರಿಕ, ಒತ್ತಡದ ಜೀವನದಲ್ಲಿ ಅವೆಲ್ಲವನ್ನು ಕಳೆದುಕೊಂಡಿದ್ದೇವೆ ಎನ್ನುವಂತಹ ಭಾವನೆ ನಮ್ಮ ಮನದಲ್ಲಿ ಮೂಡದೇ ಇರದು.ನಮ್ಮ ಮಕ್ಕಳು ಸಹ ತಮ್ಮ ಬಾಲ್ಯದ ದಿನಗಳನ್ನು ನಾವು ಕಳೆದ ರೀತಿಯಲ್ಲಿ ಕಳೆಯುತ್ತಿಲ್ಲ ಎನ್ನುವುದೇ ಒಂದು ದೊಡ್ಡ ಬೇಸರ.ನಮ್ಮ ಬಾಲ್ಯದಲ್ಲಿ ಇರದ ಅನೇಕ ಸವಲತ್ತುಗಳನ್ನು ನಮ್ಮ ಮಕ್ಕಳಿಗೆ ಇನ್ನು ಬೋನಸ್ ಸೇರಿಸಿ ಯಥೇಚ್ಛವಾಗಿ ನೀಡಿದ್ದರೂ ಸಹ ಅವರಿಗೆ ನಮ್ಮ ಬಾಲ್ಯದಲ್ಲಿ ಆಚರಿಸುತ್ತಿದ್ದ ಹಬ್ಬದ ಸಂಭ್ರಮ ಇರುವುದೇ ಇಲ್ಲ. ಇರಲು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ.

ತಂತ್ರಜ್ಞಾನ, ನಾಗರಿಕತೆ ಬೆಳೆದಂತೆ ಹಬ್ಬಗಳು ಕಣ್ಮುಂದೆ ಮರೆಯಾಗುತ್ತಿವೆ. ಜೊತೆಗೆ ತನ್ನತನವನ್ನು ಸಹ ಕಳೆದುಕೊಳ್ಳುತ್ತಿವೆ ಎಂದೇ ಹೇಳಬೇಕು. ಇರಲಿ ಬಿಡಿ. ಇದು ದೀಪಾವಳಿ ಹಬ್ಬಕ್ಕೆ ಮಾತ್ರ ಮೀಸಲು ಎನ್ನುವಂತಿಲ್ಲ. ಪ್ರತಿಯೊಂದು ಹಬ್ಬಗಳು ಸಹ ತನ್ನ ಆಚರಣೆಯ ಮಹತ್ವವನ್ನು, ಪ್ರಾಮುಖ್ಯತೆಯನ್ನು ಒಂದಲ್ಲ ಒಂದು ರೀತಿಯಲ್ಲಿ, ವರ್ಷದಿಂದ ವರ್ಷಕ್ಕೆ ಕಳೆದುಕೊಳ್ಳುತ್ತಾ ಹೋಗುತ್ತಿರುವುದು ವಿಪರ್ಯಾಸಕರ ಸಂಗತಿ. ಬನ್ನಿ ಪೀಠಿಕೆ ಇಷ್ಟು ಸಾಕು ನಾವು ಬಾಲ್ಯದಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತಿದ್ದೆವು ಎಂಬ ಅನುಭವಗಳನ್ನು ಹೇಳಲು ನಿಮ್ಮನ್ನೆಲ್ಲಾ ನನ್ನ ಬಾಲ್ಯದ ದಿನಗಳತ್ತ ಕರೆದುಕೊಂಡು ಹೋಗುತ್ತಿದ್ದೇನೆ. ನೀವು ರೆಡಿ ತಾನೇ?!.

ನಮ್ಮ ಊರು ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲೂಕಿನ (ಪ್ರಸ್ತುತ ಹೊಸ ತಾಲೂಕಾದ ಸರಗೂರು  ಸೇರಿದೆ) ಕಾಳಿಹುಂಡಿ ಗ್ರಾಮ. ಇದು ಒಂದು ರೀತಿಯಲ್ಲಿ ದ್ವೀಪದಂತೆ ಊರಿಗೆ ಬಸ್ಸಿನ ಸೌಕರ್ಯ ಇರಲಿಲ್ಲ.ಕುಗ್ರಾಮವಾಗಿತ್ತು. ಊರಿನ ಪಕ್ಕದಲ್ಲಿಯೇ ಕಪಿಲಾ ನದಿ ಹರಿಯುತ್ತದೆ. ಜೊತೆಗೆ ಕಬಿನಿ ಬಲದಂಡೆ ನಾಲೆಯೂ ಹರಿಯುತ್ತಿದ್ದರೂ ನೀರಿಗೆ ತುಂಬಾ ಅಭಾವವಿತ್ತು. ಈ ಊರಿಗೆ ಯಾರು ಸಹ ಹೆಚ್ಚಾಗಿ ಹೆಣ್ಣನ್ನು ಕೊಡುತ್ತಿರಲಿಲ್ಲ.ಏಕೆಂದರೆ ಕುಡಿಯುವ ನೀರಿಗಾಗಿ ಒಂದೋ, ಎರಡೋ ಕಿಲೋಮೀಟರ್ ವರೆಗೆ ಹೋಗಬೇಕಾಗಿತ್ತು.ಮತ್ತು ಸಾರಿಗೆ ವ್ಯವಸ್ಥೆ ಇರಲಿಲ್ಲ. ರಿಗೆ ಬರಬೇಕಾದರೆ ನಾಲ್ಕೈದು ಕಿಲೋಮೀಟರ್ ದೂರದ ಮಾದಾಪುರದಿಂದಲೂ ಹೊಮ್ಮರಗಳ್ಳಿಯಿಂದ ಸೇತುವೆಯ ಮೂಲಕ ಬರಬೇಕಾಗಿತ್ತು.ಇದು ಒಂದು ಮಾರ್ಗವಾದರೆ ಇನ್ನು ಕಪಿಲ ನದಿಯನ್ನು ಹಾಯ್ದುಕೊಂಡು ಕೋಳಗಾಲ ಮತ್ತು ಕೋಡ್ ಅರಳಿಮರದ ಮೂಲಕವೂ ಸಹ ಬರಬಹುದಾಗಿತ್ತು. ಇವೆಲ್ಲಾ ಸಮಸ್ಯೆಗಳಿಂದ ನಮ್ಮ ಕಾಳಿಹುಂಡಿ ಗ್ರಾಮ ಈಗ ಮುಕ್ತವಾಗಿದೆ. ಎಲ್ಲಾ ಸವಲತ್ತುಗಳು ಸಿಕ್ಕಿವೆ.

ಇಂತಹ ಸೌಲಭ್ಯಗಳ ನಡುವೆ ಕಳೆದುಹೋಗಿರುವ ನಮ್ಮ ಬಾಲ್ಯದ ದಿನಗಳು ಮಾತ್ರ ನಾಪತ್ತೆಯಾಗಿವೆ!.ದೀಪಾವಳಿ ಹಬ್ಬ ಏಳೆಂಟು ದಿನಗಳು ಬಾಕಿ ಇರುವಾಗಲೇ ನಮ್ಮಲ್ಲಿ ನಮ್ಮ ನಮ್ಮಲ್ಲೇ ಹಬ್ಬದ ವಾತಾವರಣ ತಯಾರಿ ನಡೆಯುತ್ತಿತ್ತು. ನಮ್ಮದು ಮೊದಲೇ ಒಟ್ಟು ಕುಟುಂಬ 30 ರಿಂದ 40 ಕ್ಕೂ ಹೆಚ್ಚು ಮಂದಿ ವಾಸವಾಗಿದ್ದ ವಿಶಾಲವಾದ ಮನೆ.ಜೊತೆಗೆ ಅಷ್ಟೇ ದನಕರುಗಳು ಇರುತ್ತಿದ್ದವು. ಮೂರು ದಿನಗಳು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೆವು.ಇಡೀ ರಸ್ತೆ ತಳಿರು-ತೋರಣಗಳಿಂದ ಸಿಂಗಾರಗೊಳ್ಳುತ್ತಿತ್ತು.ಮಾವಿನಸೊಪ್ಪು ಅಥವಾ ಮದುವೆಯ ಆಮಂತ್ರಣ ಇವೆಲ್ಲವನ್ನು ದಾರದಲ್ಲಿ ಕಟ್ಟಿ ತೋರಣದಂತೆ ತಯಾರುಮಾಡಿ ರಸ್ತೆಯ ಒಂದು ತುದಿಯಿಂದ ಮತ್ತೊಂದು ತುದಿಗೆ ಗಳ ಕಟ್ಟಿ ಕಟ್ಟುತ್ತಿದ್ದೆವು.ಇದು ಪ್ರತಿಯೊಬ್ಬರ ಮನೆಯ ಮುಂದೆ ಇರುತ್ತಿತ್ತು.

ಇನ್ನು  ದನಕರುಗಳಿಗೆ ಸಿಂಗಾರ ಮಾಡುವುದೇ ನಮಗೆ ಎಲ್ಲಿಲ್ಲದ ಉತ್ಸಾಹ ಇರುತ್ತಿತ್ತು. ನಮಗೆ ಮೊದಲೇ ಕೊಟ್ಟಿಗೆ, ದನಕರುಗಳನ್ನು ಹಂಚಿ ಬಿಟ್ಟಿದ್ದರು. ಆಯಾ ದನಕರುಗಳನ್ನು ಸ್ವಚ್ಛಮಾಡುವುದು, ಮೇಯಿಸುವುದು, ನಮ್ಮ ನಮ್ಮ ಪಾಲಿಗೆ ಸೇರುತ್ತಿತ್ತು. ಯಾರು ಚೆನ್ನಾಗಿ ಮೇಯಿಸುತ್ತಾರೆ, ಯಾರು ಚೆನ್ನಾಗಿ ತೊಳೆದು ಸಿಂಗಾರ ಮಾಡುತ್ತಾರೆ ಎಂಬ ಪೈಪೋಟಿ ನಮ್ಮ ನಮ್ಮಲ್ಲೇ ಶುರುವಾಗುತ್ತಿತ್ತು. ಇದರಿಂದಾಗಿ ಹಬ್ಬದ ಮೂರು ದಿನಗಳು ಸಹ ಬೆಳಿಗ್ಗೆ ಬೇಗನೆ ಎದ್ದು ದನಕರುಗಳನ್ನು ಇಬ್ಬನಿ ಮೇವು ಮೇಯಿಸಿಕೊಂಡು ಬೇಗನೆ ದನಕರುಗಳನ್ನು ಒಂದೆಡೆ ಕಟ್ಟಿಹಾಕಿ, ಸ್ವಚ್ಛ  ಮಾಡಿ ಹೂಗಳಿಂದ ಅಲಂಕರಿಸಿ ಕೊಂಬುಗಳಿಗೆ ಬಣ್ಣ ಬಳಿದು ವರ್ಣರಂಜಿತ ಟೇಪುಗಳನ್ನು ಸುತ್ತಿ ಬಲೂನ್ ಹಾಕಿ ಮೈಯ ತುಂಬೆಲ್ಲ ಬಣ್ಣದ ನೀರಿನ ಓಕುಳಿಯನ್ನು ಚಿಕ್ಕದಾದ ಪೈಪಿನ ಸಹಾಯದಿಂದ ವೃತ್ತಾಕಾರವಾಗಿ ಗುರುತು ಹಾಕುವುದರೊಂದಿಗೆ, ಸ್ಥಳೀಯ ಬಗ್ಗೆ ಸಿಗುತ್ತಿದ್ದ ಚಂಡು ಹೂವು ಸೇವಂತಿಗೆ ಹೂವು ಗಳಿಂದ  ಮದುವಣಗಿತ್ತಿಯಂತೆ ಸಿಂಗಾರ ಮಾಡುತ್ತಿದ್ದೆವು ನಂತರ ದೃಷ್ಟಿ ತೆಗೆಯುತ್ತಿದ್ದೆವು.

(ಚಿತ್ರಮೂಲ: ಅಂತರ್ಜಾಲ)

ಇವೆಲ್ಲ ಮುಗಿದ ಮೇಲೆ ದೊಡ್ಡವರು ದನಕರುಗಳಿಗೆ ಮೇವು  ಹಾಕುತ್ತಿದ್ದರು ಅಂದು ದನಕರುಗಳನ್ನು ಮೇಯಲು ಬಿಡುತ್ತಿರಲಿಲ್ಲ. ಅದರಿಂದಾಗಿಯೇ ಬೆಳ್ಳಂಬೆಳಗ್ಗೆ ಮೇಯಿಸಿಕೊಂಡು ಬರುತ್ತಿದ್ದೆವು. ಅಷ್ಟರಲ್ಲೇ ಸ್ನಾನ ಮಾಡಲು ಬಿಸಿನೀರು ಕಾದಿರುತ್ತಿತ್ತು. ಬೇಗ ಬೇಗನೆ ಸ್ನಾನ ಮುಗಿಸಿ ಹೊಸಬಟ್ಟೆ ತೊಟ್ಟು ನಾವು ಸಹ ರೆಡಿಯಾಗುತ್ತಿದ್ದೆವು.

ನಮ್ಮ ಅಕ್ಕಪಕ್ಕದ ಊರಿನ ಸಂಪ್ರದಾಯ ಎಂದರೆ ದೀಪಾವಳಿಯ ಸಂದರ್ಭದಲ್ಲಿ ದನಕರುಗಳನ್ನು ಸಿಂಗಾರ ಮಾಡಿ ಊರಿನ ಪ್ರಮುಖ ಬೀದಿಗಳಲ್ಲಿ ಓಡಾಡಿಸುವುದು. ಇದು ಇಂದಿಗೂ ಕೂಡ ರೂಢಿಯಲ್ಲಿದೆ. (ಹಲವು ಕಡೆ ಸಂಕ್ರಾಂತಿ ಹಬ್ಬದಂದು ದನಕರುಗಳನ್ನು ಸಿಂಗಾರ ಮಾಡಿ ಊರಿನ ತುಂಬಾ, ಬೀದಿಗಳಲ್ಲಿ ಓಡಿಸುವುದು ಅಥವಾ ಒಂದು ಕಡೆ ದೊಡ್ಡದಾಗಿ ಬೆಂಕಿಹಾಕಿ ದನಕರುಗಳನ್ನು ಕಿಚ್ಚಾಯಿಸುವುದು ರೂಢಿಯಲ್ಲಿದೆ.)

ಮರೆತಿದ್ದೆ ನಗರ ಪ್ರದೇಶಗಳಲ್ಲಿ ಬೆಳಿಗ್ಗೆ ದಿನಾಲು ಏನಾದರೊಂದು ತಿಂಡಿ ಮಾಡುತ್ತಾರೆ. ಆದರೆ ನಮ್ಮ ಬಾಲ್ಯದ ದಿನಗಳಲ್ಲಿ ಇಡ್ಲಿ, ಉಪ್ಪಿಟ್ಟು ಇತ್ಯಾದಿ ತಿಂಡಿಗಳು ಹಬ್ಬದ ಸಮಯದಲ್ಲಿ ಮಾತ್ರ! ಬೇರೆ ದಿನಗಳಲ್ಲಿ ಬೆಳಿಗ್ಗೆನೇ ಮುದ್ದೆ, ಅನ್ನ ಸಾರು. ಇದೇ ನಮಗೆ ಪರಮಾನ್ನ ಆಗಿತ್ತು! ಇದರಿಂದಾಗಿ ದೀಪಾವಳಿ ಹಬ್ಬದಂದು ಮಾಡುವ ಇಡ್ಲಿ, ವಡೆ, ಚಟ್ನಿ, ದೋಸೆಗೆ ಎಲ್ಲಿಲ್ಲದ ಮಹತ್ವ ಇರುತ್ತಿತ್ತು! ಅಂದು  ಯಾರ ಮನೆಗೆ ಹೋದರೂ ಸಹ ಇದೇ ತಿಂಡಿಗಳು ನಮ್ಮನೆಲ್ಲ ಸ್ವಾಗತಿಸುತ್ತಿದ್ದವು! ಸಿಹಿತಿಂಡಿ ಹೆಚ್ಚಾಗಿ ಮಾಡುತ್ತಿರಲಿಲ್ಲ. ಪಾಯಸದ ರುಚಿ ಮಾತ್ರ ಸಿಗುತ್ತಿತ್ತು.

ಊರಿನ ತುಂಬೆಲ್ಲ ದನಕರುಗಳನ್ನು ಓಡಾಡಿಸಿ 11 ಗಂಟೆ ನಂತರ ಎಲ್ಲರೂ ಸಹ ಒಂದೆಡೆ ಸೇರುತ್ತಿದ್ದೆವು. ಪರಸ್ಪರ ಕುಶಲೋಪರಿ ವಿಚಾರಿಸಿ ಕೊಳ್ಳುತ್ತಿದ್ದೆವು.ದೊಡ್ಡವರೆಲ್ಲ ಸೇರಿ ದುಡ್ಡು ಕಟ್ಟಿಕೊಂಡು ಕೆಲವು ಆಟಗಳನ್ನು ಆಡುತ್ತಿದ್ದರು. ನಾವೆಲ್ಲ ಬಿಡಿಗಾಸನ್ನು ಸಂಗ್ರಹಿಸಿದ್ದ ಗೋಲಕ ಡಬ್ಬಿಗಳನ್ನು ಓಪನ್ ಮಾಡಿ, ಅದಕ್ಕೆ ಪಟಾಕಿಗಳನ್ನೊ ಅಥವಾ ನಮಗೆ ಬೇಕಾದ ತಿಂಡಿ ತಿನಿಸುಗಳನ್ನು  ಕೊಳ್ಳುವುದು ನಡೆಯುತ್ತಿತ್ತು. ಮೂರು ದಿನಗಳು ಸಹ ಸಂಜೆ ಹೊತ್ತಿನ ನಂತರ ಮನೆಯ ಮುಂದೆ, ಕಿಟಕಿಯ ಮುಂದೆ, ಪ್ರತಿಯೊಂದು ಒಳ ಕೋಣೆಗಳಲ್ಲೂ ಸಹ ದೀಪಗಳನ್ನು ಹಚ್ಚುತ್ತಿದ್ದರು. ಜೊತೆಗೆ ದನಗಳ ಕೊಟ್ಟಿಗೆ, ತಿಪ್ಪೆಗಳ ಮೇಲೂ ಸಣ್ಣದಾದ ಗೂಡನ್ನು ಕಟ್ಟಿ ಸಹ ದೀಪಗಳನ್ನು ಹಚ್ಚುವ ಸಂಪ್ರದಾಯ ಈಗಲೂ ಕೂಡ ಇದೆ.

ನಮಗೆ ಪಟಾಕಿಗಳನ್ನು ದೊಡ್ಡವರು ತೆಗೆದುಕೊಡುತ್ತಿರಲಿಲ್ಲ.ಇದೆ ಒಂದು ನಮಗೆ ಆಗ ದೊಡ್ಡ ಸಮಸ್ಯೆಯಾಗಿತ್ತು. ಅವರಿಗೆ ಏನೆಂದರೆ ಪಟಾಕಿಯನ್ನು ಹೊಡೆದು ಸುಮ್ಮನೆ ಹಣ ಪೋಲು ಮಾಡುತ್ತಾರೆ ಎಂಬ ಭಾವನೆ.ನಾವಂತೂ ಹಠ ಹಿಡಿಯುತ್ತಿದ್ದೆವು. ಅಂತೂ ಇಂತೂ ಸ್ವಲ್ಪಸ್ವಲ್ಪವೇ ಪಟಾಕಿಗಳನ್ನು ತಂದುಕೊಡುತ್ತಿದ್ದರು.ಅವುಗಳಲ್ಲಿ ಚಿನುಕುರುಳಿ ಪಟಾಕಿ ಎಂದರೆ ತುಂಬಾ ಮೆಚ್ಚು. ಕೆಲವು ಬಿಡಿಬಿಡಿ ಪಟಾಕಿಗಳು ತರುತ್ತಿದ್ದರು. ಚಿನಕುರಳಿ ಪಟಾಕಿಗಳಲ್ಲಿ ರೋಲ್ ಮಾದರಿಯದ್ದು ಬರುತ್ತಿತ್ತು (ಈಗಲೂ ಇದೆ) ಅದಕ್ಕೆ ಚಿಕ್ಕದಾದ ಗನ್ ತೆಗೆದುಕೊಡುತ್ತಿದ್ದರು. ನಂತರದಲ್ಲಿ ಸುರುಸುರುಬತ್ತಿ, ಹೂವಿನ ಕುಡಿಕೆಗಳು, ಕೃಷ್ಣನ ಚಕ್ಕರ, ಬಣ್ಣದ ಕಡ್ಡಿಗಳು  ಇವೆಲ್ಲವನ್ನು ಚಿಕ್ಕ ಚಿಕ್ಕ ಮಕ್ಕಳು ಹೊಡೆದರೆ, ದೊಡ್ಡವರು ಆನೆಪಟಾಕಿ ಜೊತೆ ಇನ್ನೂ ದೊಡ್ಡ ದೊಡ್ಡ ಪಟಾಕಿಗಳನ್ನು ಹೊಡೆಯುತ್ತಿದ್ದರು. ಚಿಕ್ಕ ಮಕ್ಕಳು ಪಟಾಕಿ ಹೊಡೆದ ನಂತರ ದೊಡ್ಡವರ ಸರದಿ! ಈ ಸಮಯದಲ್ಲಿ ನಾವು ಕಿವಿಗೆ ಎರಡು ಕೈಗಳನ್ನು ಅಥವಾ ಬಟ್ಟೆಯನ್ನು ಅಥವಾ ಹತ್ತಿಯನ್ನು ಹಾಕಿಕೊಂಡು ಕೈಯಿಂದ ಮುಚ್ಚಿಕೊಂಡು ಶಬ್ದವನ್ನು ತಕ್ಕಮಟ್ಟಿಗೆ ನಿಯಂತ್ರಿಸುತ್ತಿದ್ದೆವು. ಪಟಾಕಿ ಹೊಡೆಯುವುದರಲ್ಲೂ ಸಹ ಪೈಪೋಟಿ ಇರುತ್ತಿತ್ತು.

ನಮ್ಮದು ಒಟ್ಟು ಕುಟುಂಬವಾಗಿದ್ದರಿಂದ ಸುಮಾರು ಹತ್ತರಿಂದ ಇಪ್ಪತ್ತು ಮಕ್ಕಳು ಇದ್ದೇ ಇರುತ್ತಿದ್ದರು. ಇದರಿಂದ ನಮಗೆಲ್ಲಾ ಹಂಚಿದ ಪಟಾಕಿಗಳನ್ನು ಹಲವು ಬಾರಿ ಬೇರೆಯವರು ನಾನು ಕೂಡಾ ಕದ್ದಿದ್ದು ಉಂಟು! ಇದರಿಂದಾಗಿ ನಾವು ಭದ್ರವಾಗಿ ಯಾರಿಗೂ ಕಾಣದ ರೀತಿಯಲ್ಲಿ ಪಟಾಕಿಗಳನ್ನು ಇಟ್ಟುಕೊಳ್ಳುತ್ತಿದ್ದೆವು.  ನಮಗೆಲ್ಲ ಕುತೂಹಲ ಎಂದರೆ ಅವನು ಎಷ್ಟು ಪಟಾಕಿಗಳನ್ನು ಹಚ್ಚಿದ, ಇನ್ನೆಷ್ಟು ಅವನ ಬಳಿ ಬಾಕಿ ಇದೆ ಎಂಬ ಲೆಕ್ಕಾಚಾರ ನಡೆಯುತ್ತಿತ್ತು! ಕೆಲವು ಮಕ್ಕಳು ಸುಮ್ಮನೆ ಪಟಾಕಿ ಹೊಡೆಯುವುದನ್ನು ನೋಡುತ್ತಿದ್ದರು. ಏಕೆಂದರೆ ಅವರಿಗೆ ಪಟಾಕಿ ಎಂದರೆ ಭಯ ಅಂತವರಿಗೆ ಸುರುಸುರುಬತ್ತಿ, ಹೂವಿನ ಕುಡಿಕೆಗಳು ಮಾತ್ರ ಸಿಗುತ್ತಿದ್ದವು.  ಅಂತೂ ಇಂತೂ ಮೂರು ರಾತ್ರಿಗಳು ಪಟಾಕಿ ಮಾಯವಾಗುತ್ತಿದ್ದವು. ನಮ್ಮ ಮಿಕ್ಕ ಸಹಪಾಠಿಗಳನ್ನು ಪಡೆದಾಗಲೇ ಏನೋ ಎಲ್ಲಿಲ್ಲದ  ಸಡಗರ ಸಂಭ್ರಮ ಇತ್ತು. ನಮ್ಮಲ್ಲಿ ಮನೆ ಮಾಡಿತ್ತು. ನಮ್ಮ ಹಲವು ಸ್ನೇಹಿತರು ದೀಪಾವಳಿ ಹಬ್ಬ ಮುಗಿದು ಒಂದು ವಾರ ಕಳೆದರೂ ಸಹ ಪಟಾಕಿಗಳನ್ನು ಬಚ್ಚಿಟ್ಟುಕೊಂಡು ಹೊಡೆಯುತ್ತಿದ್ದರು. ಈಗಂತೂ ಪಟಾಕಿ ಚೀಟಿಗಳನ್ನು ಹಾಕಿಕೊಳ್ಳುತ್ತಾರೆ. ಸಾವಿರಾರು ರೂಪಾಯಿಗಳ ಪಟಾಕಿಗಳನ್ನು ಕ್ಷಣಮಾತ್ರದಲ್ಲಿ  ಹಚ್ಚಿ ಬಿಡುತ್ತಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ನಮಗೆ ದೀಪಾವಳಿ ಪಟಾಕಿ ಹೊಡೆಯುತ್ತಿದ್ದ ಸಂಭ್ರಮ ನಮ್ಮ ಕಣ್ಮುಂದೆ ಇನ್ನೂ ಹಸಿಹಸಿಯಾಗಿಯೇ ಬರುತ್ತದೆ.

ಅಂದು ನಮಗೆ ಪಟಾಕಿಗಳನ್ನು ತೆಗೆದು ಕೊಡುವವರು ಯಾರೂ ಇರುತ್ತಿರಲಿಲ್ಲ. ಇವೆಲ್ಲ ನನಗೆ ಇಂದು ನೆನಪಾಗಿ ಪ್ರತಿವರ್ಷ ದೀಪಾವಳಿ ಹಬ್ಬ ಬಂದರೆ ನಾನು ಮೈಸೂರಿನಲ್ಲಿ ವಾಸವಾಗಿದ್ದರೂ ಸಹ ಒಂದಿಷ್ಟು ಸಿಹಿತಿಂಡಿಗಳನ್ನು ತೆಗೆದುಕೊಂಡು ಕಾಳಿಹುಂಡಿ ಗ್ರಾಮಕ್ಕೆ ಹೋಗಿ ಅಲ್ಲಿರುವ ಚಿಕ್ಕಮಕ್ಕಳ ಜೊತೆ ಪಟಾಕಿ ಹಚ್ಚಿ  ನನ್ನ ಬಾಲ್ಯದ ನೆನಪುಗಳ ಸರಮಾಲೆಯನ್ನು ಕಣ್ತುಂಬಿಸಿಕೊಳ್ಳುತ್ತೇನೆ.  ಇದು ವರ್ಷವರ್ಷವೂ ನಡೆಯುತ್ತದೆ.

ಯಾವುದೇ ಆಡಂಬರವಿಲ್ಲದೆ, ಯಾವುದೇ ದುಂದುವೆಚ್ಚ ಇಲ್ಲದೆ ಸರಳ, ಸುಂದರವಾಗಿ ಆಚರಿಸುತ್ತಿದ್ದ ದೀಪಾವಳಿ ಹಬ್ಬದ ಆ ದಿನಗಳು ಎಲ್ಲಿ ಎಂದು ಮತ್ತೆ ಮತ್ತೆ ನನ್ನ ಮನ ಹುಡುಕುತ್ತಲೇ ಇದೆ. ಕಾಲ ಬದಲಾಗಿದೆ. ಹಬ್ಬಗಳು ಒಂದಲ್ಲ ಒಂದು ರೀತಿಯಲ್ಲಿ ಅವನತಿಯ ಹಾದಿ ಹಿಡಿದರು ಸಹ ತನ್ನ ಪ್ರಾಮುಖ್ಯತೆಯನ್ನು ಸಹ ಬಿಟ್ಟುಕೊಟ್ಟಿಲ್ಲ ಉಳಿಸಿಕೊಂಡಿವೆ.

(ಚಿತ್ರಮೂಲ: ಅಂತರ್ಜಾಲ)

ಆದರೆ ಈ ಬಾರಿ ಕರೋನಾ ದಿಂದ ಹಬ್ಬ ಸೊರಗಿದೆ.  2020ರಲ್ಲಿ ಬಂದ ಯುಗಾದಿ ಹಬ್ಬ ದಿಂದ ಹಿಡಿದು ಇವತ್ತಿನವರೆಗೂ ಎಲ್ಲ ಹಬ್ಬಗಳು ಸಹ ಏನೋ ಒಂದು ರೀತಿಯಲ್ಲಿ ನೀರಸವಾಗಿ ಖಾಲಿ ಖಾಲಿ ಎನಿಸಿವೆ.  ಅದರಲ್ಲೂ ಈ ಬಾರಿ ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯುವುದನ್ನು ಕೂಡ ನಿಷೇಧ ಮಾಡಿದ್ದಾರೆ. ಕಾಲ ಹೇಗಾಗಿದೆ ನೋಡಿ. ಒಂದೊಂದು ಊರಿನಲ್ಲಿ ಒಂದೊಂದು ರೀತಿಯಲ್ಲಿ ದೀಪಾವಳಿ ಹಬ್ಬ ಆಚರಿಸುತ್ತಾರೆ. ಇದರಿಂದಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ, ಜಿಲ್ಲೆಯಿಂದ ರಾಜ್ಯದವರಿಗೆ, ಈ ದೀಪಾವಳಿ ಹಬ್ಬವನ್ನ  ವಿಭಿನ್ನ ರೀತಿಯಲ್ಲಿ ಪ್ರೀತಿಯಿಂದ ಆಚರಿಸುತ್ತಾರೆ. ಆಗ ಹೆಚ್ಚಾಗಿ ಟಿವಿಗಳೇ ಇಲ್ಲದ ಕಾಲ ಟಿವಿ ಇದ್ದವರು ಶ್ರೀಮಂತರು!. ಆಗ ಆಕಾಶವಾಣಿಯು ( ರೇಡಿಯೋ) ನಮಗೆಲ್ಲ ದೊಡ್ಡದಾದ ಮನರಂಜನೆ ನೀಡುತ್ತಿತ್ತು. ಆಕಾಶವಾಣಿಯಲ್ಲಿ ಬರುತ್ತಿದ್ದ ದೀಪಾವಳಿ ಕುರಿತ ಹಾಡುಗಳು…. ರೂಪಕ….. ಕಥಾ ಕಾಲಕ್ಷೇಪ…. ಚಲನಚಿತ್ರ ಧ್ವನಿವಾಹಿನಿ…… ಇವೆಲ್ಲವನ್ನು ಕೇಳಿ ಸಂಭ್ರಮಿಸುತ್ತಿದ್ದೆವು. ದೊಡ್ಡವರು ಕೂಡ ನಮಗೆ ಹಲವು ಕಥೆಗಳನ್ನು, ದೀಪಾವಳಿಯ ಮಹತ್ವವನ್ನು ಹೇಳುತ್ತಿದ್ದರು.

ಇನ್ನು ಅಂತಿಮವಾಗಿ ಹೇಳುವುದಾದರೆ ನನ್ನ ಊರಿನ ದೀಪಾವಳಿ ಹಬ್ಬದ ಸವಿ ಸವಿ ನೆನಪು ಇಂದಿಗೂ ಕೂಡ ಅಚ್ಚಳಿಯದೆ ನನ್ನ ಮನಸ್ಸಿನಲ್ಲಿ ಉಳಿದಿದೆ. ನಾವು ಇಂದಿಗೂ ಸಹ ಒಟ್ಟು ಕುಟುಂಬದಲ್ಲಿ ಇರುವುದರಿಂದ ನಮಗೆ ಆ ಬಾಲ್ಯದ ನೆನಪು ಒಂದಲ್ಲ ಒಂದು ರೀತಿಯಲ್ಲಿ ನಿರಂತರವಾಗಿ ನನ್ನ ಮನದಂಗಳದಲ್ಲಿ ಭಾವನೆಗಳನ್ನು ಹುಟ್ಟು ಹಾಕುತ್ತಲೇ ಇದೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

4 Responses

  1. ನಯನ ಬಜಕೂಡ್ಲು says:

    ಸೊಗಸಾದ ಬರಹ. ಬಾಲ್ಯದ ದಿನಗಳಲ್ಲಿ ಆಚರಿಸಿದ ಹಬ್ಬವನ್ನೊಮ್ಮೆ ನೆನಪಿಸಿತು. ಹೇಳ ಹೊರಟರೆ ಮುಗಿಯದಷ್ಟು ಸಾಲು ಸಾಲು ನೆನಪುಗಳ ಮೆರವಣಿಗೆ ನಿಮ್ಮ ಬರಹ ಓದಿ.

  2. Savithri bhat says:

    ನಿಮ್ಮ ಬಾಲ್ಯದ ದೀಪಾವಳಿಯ ಮಧುರ ನೆನಪು ಮನ ತುಂಬಿತು. ಸೊಗಸಾದ ನಿರೂಪಣೆ

  3. ಬಿ.ಆರ್.ನಾಗರತ್ನ says:

    ದೀಪಾವಳಿ ಹಬ್ಬದ ಜೊತೆ ಜೊತೆಗೆ ನಿಮ್ಮ ಬಾಲ್ಯದ ಹೂರಣಸೇರಿಸಿ ಬರೆದಿರುವ ಲೇಖನ ಚೆನ್ನಾಗಿದೆ ಮೂಡಿ ಬಂದಿದೆ.ಅಭಿನಂದನೆಗಳು ಸಾರ್.

  4. ಶಂಕರಿ ಶರ್ಮ, ಪುತ್ತೂರು says:

    ಬಾಲ್ಯದ ಸವಿನೆನಪುಗಳ ಮೂಟೆಯನ್ನು ಬಿಚ್ಚಿ ಮನಸ್ಸಿಗೆ ಮುದನೀಡಿತು.. ಚಂದದ ಬರಹ.

Leave a Reply to ಶಂಕರಿ ಶರ್ಮ, ಪುತ್ತೂರು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: