ದ್ರೌಪದಿ ಶಸ್ತ್ರಧಾರಿಯಾಗು..

Share Button

ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು, ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು.. ಅದರಲ್ಲಿ  ಅವರು ಭಾವಪೂರ್ಣವಾಗಿ, ಗದ್ಗದಿತರಾಗಿ  ಓದಿದ್ದ  ಒಂದು ಸಾಲು ಆ ವೀಡಿಯೋವನ್ನು ಪೂರ್ಣ ನೋಡುವಂತೆ ಮಾಡಿತು.  ಆ ಸಾಲು ಹೀಗಿದೆ:

” ಕೇಳು ದ್ರೌಪದಿ ,  ಶಸ್ತ್ರಧಾರಿಯಾಗು
 ಈಗ  ಗೋವಿಂದ ಬರುವುದಿಲ್ಲ”.
( ಸುನೋ ದ್ರೌಪದಿ / ಶಸ್ತ್ರ ಉಠಾಲೊ/
ಅಬ್ ಗೋವಿಂದ ನ ಆಯೇಂಗೆ)

ಮಹಾಭಾರತದ ಕಾಲದಲ್ಲಿ ದುಶ್ಯಾಸನ ದ್ರೌಪದಿಯನ್ನು ಮುಡಿ ಹಿಡಿದು ಸಭೆಗೆ ಎಳೆದು ತರುತ್ತಾನೆ. ಅವಳನ್ನು ಅವಮಾನಿಸುವ  ಮೂಲಕ ಪಾಂಡವರ ಗೌರವವನ್ನು ತುಚ್ಛೀಕರಿಸುವ ಹೀನ ಮನಸ್ಥಿತಿಯನ್ನು ಇದು ತೋರಿಸುವಂತೆಯೇ,  ಹೆಣ್ಣು ಒಂದು ‘ ಅಸ್ತ್ರ’ ವಾಗಿ ಇಲ್ಲಿ ಉಪಯೋಗಿಸಲ್ಪಡುತ್ತಾಳೆ ಎಂಬುದನ್ನು ಗಮನಿಸಬೇಕು. ತುಂಬಿದ ಸಭೆಯಲ್ಲಿ ಅವಳ ವಸ್ತ್ರಾಪಹರಣ ನಡೆದದ್ದು ಈಗ್ಗೆ 5 ಸಹಸ್ರ ವರ್ಷಗಳ ಹಿಂದೆ!! ಆಗ ದ್ರೌಪದಿ ತನ್ನ  ಮಿತ್ರನಾದ, ಬಂಧುವಾದ ಶ್ರೀಕೃಷ್ಣನ ಮೊರೆ ಹೋಗುತ್ತಾಳೆ. ಅವನು ಅವಳನ್ನು ಸಕಾಲದಲ್ಲಿ  ರಕ್ಷಿಸದಿದ್ದರೆ ಹೆಣ್ಣಿನ ‘ ಅತ್ಯಾಚಾರ ‘ ಕ್ಕೆ ಆಗಲೇ ರಾಜಮುದ್ರೆ ಬಿದ್ದು ಬಿಡುತ್ತಿತ್ತೆನೋ !!

ಈಗ  ಆರಂಭದಲ್ಲಿ  ಹೇಳಲಾದ ಕವಿತೆಯ  ಸಾಲುಗಳನ್ನು ಪು಼ನಃ ಗಮನಿಸೋಣ. 2012ರಲ್ಲಿ ನಿರ್ಭಯಾ ಪ್ರಕರಣ ನಡೆದಾಗ ಆಕೆಯ ಮಿತ್ರ ಅವಳ ಜೊತೆಯೇ ಇದ್ದರೂ ಅವಳನ್ನು ಕಾಪಾಡಲು ಆಗಲಿಲ್ಲ. ಆನಂತರ ಧರ್ಮದ ನೆಲೆಬೀಡಾದ ಈ ನನ್ನ ಭಾರತ ದೇಶದ ಉದ್ದಗಲಕ್ಕೂ ನೂರಾರು ಹೆಣ್ಣುಗಳು ಸಾಮೂಹಿಕ  ಅತ್ಯಾಚಾರಕ್ಕೆ ಗುರಿಯಾಗಿದ್ದಾರೆ.  ತೀರ  ಇತ್ತೀಚೆಗೆ ಸಪ್ಟಂಬರ್ 14ರಂದು ಕೃಷ್ಣನ ಜನ್ಮ ಭೂಮಿಯಾದ ಉತ್ತರ ಪ್ರದೇಶದಲ್ಲಿ (ಇದು  ರಾಮ ಜನ್ಮಭೂಮಿ ಕೂಡ )   ಮನೀಷಾ ಎಂಬ ಹುಡುಗಿ ಪುರುಷ ಅಹಂಕಾರದ  ಅತ್ಯಂತ ಹೀನ ವಿಕ್ರತಿಯಾದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದು ನನ್ನ ದೇಶದ ಸಕಲ ಸಜ್ಜನಿಕೆಯೂ ಮುಖ ಮುಚ್ಚಿ ರೋಧಿಸುವಂತೆ, ಆಡಳಿತ ಬೆನ್ನು ಮುರಿಸಿಕೊಂಡು ಮಕಾಡೆಯಾಗಿ ಉರುಳುವಂತೆ, ರಕ್ಷಣೆಯ ಕಟ್ಟಕಡೆಯ ಆಶಾಕಿರಣವಾಗಿದ್ದ ಕಾನೂನು ಹಾಗೂ ಪೋಲಿಸ್ ದಿಕ್ಕೆಡುವಂತೆ ಮಾಡಿದೆ. ಈ ಕವನ ಹುಟ್ಟಿದ್ದು ಇದೇ ಹೊತ್ತಲ್ಲಿ.  ಅದಕ್ಕಾಗಿ ಕವಿ ಹೀಗೆ ಕಳಕಳಿಸುತ್ತಾನೆ.

ಇದು ಮಹಿಳೆಯರಿಗೆ ತಿಳಿಯದ್ದೇನಲ್ಲ. ಅದಕ್ಕಾಗಿಯೇ 2012  ರಲ್ಲಿ  ಸಂಪತ್ ದೇವಿಯ ನೇತ್ರತ್ವದಲ್ಲಿ 16-60 ವರ್ಷ ವಯಸ್ಸಿನ ಮಹಿಳಾ ವಿಚಕ್ಷಣಾ ದಳ,  ಗುಲಾಬಿ ಗ್ಯಾಂಗ್ ಹುಟ್ಟಿದ್ದು ಇದೇ ರಾಜ್ಯದಲ್ಲಿ. ಪುರುಷರ ವಿರುದ್ಧ  ಮಹಿಳೆಯರ ರಕ್ಷಣೆಗೆ ಮಹಿಳೆಯರೇ ಶಸ್ತ್ರ ಹಿಡಿದರು. ಲಟ್ಟಣಿಗೆ ಹಿಡಿದ ಕೈ ಲಾಠಿ ಹಿಡಿಯಿತು. ಅಪರಾತ್ರಿಯಲ್ಲಿ ಸಂಚರಿಸುವ ಉದ್ಯೋಗಸ್ಥ ಮಹಿಳೆಯರ ಮೇಲೆ ದೌರ್ಜನ್ಯಗಳು, ಅತ್ಯಾಚಾರ, ಕೊಲೆಗಳು ಹೆಚ್ಚಾದಾಗ  ಅವರ ನೆರವಿಗಾಗಿ, ವಯೋವೃದ್ಧ ಮಹಿಳೆಯರ, ಏಕಾಕಿ ಮಹಿಳೆಯರ ಸುರಕ್ಷಿತ  ಸಂಚಾರಕ್ಕೆ   2019 ರಲ್ಲಿ  ಗುಲಾಬಿ ಟ್ಯಾಕ್ಸಿ ತಂಡ ಸನ್ನದ್ಧವಾಯಿತು. ಇದನ್ನು ಆರಂಭಿಸಿದವರು ಬೆಂಗಳೂರು ಮೂಲದ ಗೃಹಿಣಿಯರು. ಹಾಗೆ ನೋಡಿದರೆ  ಇವು ದ್ರೌಪದಿ ಶಸ್ತ್ರ ಹಿಡಿದ ಪ್ರಸಂಗಗಳೇ.  ಶಸ್ತ್ರಗಳೆಂದರೆ ಹರಿತವಾದ ಆಯುಧಗಳೇ ಆಗಬೇಕೆಂದಿಲ್ಲ. ದ್ರೌಪದಿ ಈಗ ಮೊದಲಿನಂತಿಲ್ಲ. ಅವಳಿಗೂ ಅರಿವಾಗಿದೆ ಕೃಷ್ಣನ ಕಾಲವೀಗ ಮುಗಿದಿದೆ ಎಂದು. ಯಾವ ಮಾಯಕದಲ್ಲಿ ದುಶ್ಯಾಸನ, ಶಕುನಿ ಇರುವರೊ, ಬರುವರೊ ಎಂದು ಅವಳು ಜಾಗರೂಕಳಾಗಿದ್ದಾಳೆ.

ಕರ್ನಾಟಕ ಪೋಲಿಸ್, ಮಹಿಳೆಯರ ಆತ್ಮ ರಕ್ಷಣೆಗಾಗಿ ಆಪ್ ಒಂದನ್ನು ತಯಾರಿಸಿ,  2018 ರಿಂದಲೇ  ಚಾಲ್ತಿಯಲ್ಲಿ ತಂದಿದೆ. ಇದನ್ನು ಎಲ್ಲ ಮಹಿಳೆಯರೂ, ಹೆಣ್ಣು ಮಕ್ಕಳೂ ತಮ್ಮ ಮೊಬೈಲಿಗೆ ಅಗತ್ಯವಾಗಿ  ಡೌನ್ಲೋಡ್ ಮಾಡಿಕೊಳ್ಳಬೇಕು.  ಇದು ಪ್ಲೇ ಸ್ಟೋರ್ ನಲ್ಲಿ ಉಚಿತ ಡೌನ್ಲೋಡ್ ಗೆ ಲಭ್ಯವಿದೆ. ಆಪತ್ಕಾಲದಲ್ಲಿ ಮಹಿಳೆಯರು ಪೋಲಿಸರನ್ನು ತುರ್ತು ಸಹಾಯಕ್ಕೆ ಈ ಆಪ್ ಮೂಲಕ ಕರೆಯಬಹುದಾಗಿದೆ. ಇಂಥ ಹಲವಾರು ಸಹಾಯ, ರಕ್ಷಣೆಗಳ ನಡುವೆಯೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. ಇಂಥ ಹೊತ್ತಿನಲ್ಲಿ ಈ ಮೇಲಿನ ಕವನ ಹೊಸ ಆಶಯದೊಂದಿಗೆ ಬಂದಿದೆ. ಪುರುಷನೇ ಮಹಿಳೆಗೆ.  ‘ ನಿನ್ನ ರಕ್ಷಣೆ ಈಗ ನಿನ್ನದೇ ಹೊಣೆ’ ಎಂಬ ಹೊಸ ಮಾರ್ಗ ಸೂಚಿಯನ್ನು ನೀಡಿ ಅವಳನ್ನು ಮುಕ್ತವಾಗಿಸಿರುವುದು ಅವಳ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂಥ ಪುರುಷರ ಸಂಖ್ಯೆ ಹೆಚ್ಚಾಗಲಿ.

-ನೂತನ ದೋಶೆಟ್ಟಿ

4 Responses

 1. Avatar Anonymous says:

  ಉತ್ತಮ ಬರಹ ಮೇಡಂ..

 2. Avatar ನಯನ ಬಜಕೂಡ್ಲು says:

  ಮಹಾಭಾರತದ ಒಂದು ಪುಟ್ಟ ಎಳೆಯನ್ನು ತಗೊಂಡು ಆಗಿನ ಮತ್ತು ಈಗಿನ ಸಂಧರ್ಭವನ್ನು ತಾಳೆಹಾಕಿ ಬರೆಯುತ್ತ ಸಾಗಿದ ಲೇಖನ ಸೊಗಸಾಗಿದೆ.

 3. Avatar ಶಂಕರಿ ಶರ್ಮ, ಪುತ್ತೂರು says:

  ದ್ರೌಪದಿಯು ಕಷ್ಟಕಾಲದಲ್ಲಿ ಕೃಷ್ಣನ ಸಹಾಯವನ್ನು ಯಾಚಿಸಿದಾಗ ಸಿಕ್ಕಂತಹ ಬೆಂಬಲ ಈಗ ನೆನೆಸಲಾದೀತೇ…ಸಕಾಲಿಕ ಬರಹವು ಸ್ತ್ರೀಯರಲ್ಲಿ ಆತ್ಮಸ್ಥೈರ್ಯವಿರಬೇಕಾದ ಅಗತ್ಯತೆಯನ್ನು ಎತ್ತಿಹಿಡಿದಿದೆ

 4. Avatar Krishnaprabha says:

  ಒಳ್ಳೆಯ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: