ಸಾಂಬಾರು

Share Button

ಅದೇ ಮೆಣಸಿನಪುಡಿಯ ಘಾಟು
ಮೂಗು ಹೊಕ್ಕಾಗಲೆಲ್ಲಾ
ಅವನ ಖಾರದ ಮಾತುಗಳು
ಜ್ಞಾಪಕಾರ್ಥವಾಗಿ…!
ಹುಣಸೆ ಹಿಂಡುವಾಗೆಲ್ಲಾ
ಹುಳಿ ಹಿಂಡಲು ಬಂದವಳೆಂಬ
ಅತ್ತೆಯ ಧೋರಣೆಯ
ನುಡಿಗಳು ಕಿವಿಗಪ್ಪಳಿಸಿ
ಒಡಲಾಗ್ನಿ ಜ್ವಲಿಸುವುದು..!!

ಬೆಂದ ಬೇಳೆಯ,
ಕುದಿಗೆ ಬೆರಸುವಾಗ
ತವರ ಹಂಗಿಸಿದ
ಹೆತ್ತವರ ನಿಂದಿಸಿದ
ಕರ್ಣಕಠೋರ ವ್ಯಂಗ್ಯಗಳು
ಉಕ್ಕೇರಿಸುತ ಎದೆಯ ಲಾವಾ..!
ಕೊತ ಕೊತ ಮಿಶ್ರಣಕೆ ಉಪ್ಪು
ಹಾಕುವ ಸಮಯ..
ಕಣ್ಣೀರ ಲವಣವೂ
ಮುಷ್ಠಿಯೊಳಗಿನ ಹರಳಲ್ಲಿ ಬೆರೆತು….
ಕೊತ್ತಂಬರಿ ಹೆಚ್ಚುವಾಗ ಬೆರಳು
ಚುರ್ ಎಂದ ಮರೀಚಿಕೆಯ ನೋವು..
ಕೆಂಪ ತೊಳೆದು ಅಟ್ಟಣಿಗೆಲಿದ್ದ
ಅರಿವೆ ಬಿಗಿದು, ಅರಿಶಿನ ಮೆಟ್ಟಿ..
ಉಬ್ಬೆದೆಯ ಮೇಲೆ
ಹೊಯ್ದಾಡುವ ಸಡಗರದ
ತಾಳಿ ಕಂಡಾಗ ಸರಪಳಿಯ ಭಾವ…!!

ಹರಿದ ರುಜುವಾತುಗಳ ಮೊಹರು
ಒಡಲು ತುಂಬಿದರೂ ಮೀಸೆಯಾ ಪೊಗರು..!
ಕಂಡಾಗಲೆಲ್ಲಾ ಬೆದರು ಬೆಮರು!!
ಉದ್ಭವಿತ ಭಾವಗಳ ಇಕ್ಕಳದಲಿ
ಹಿಡಿದು ಮತ್ತೆ ಒಗ್ಗರಣೆ ಹಾಕಿದ್ದೆ..
ರಾಗ ದ್ವೇಷ ಅಸೂಯೆಗಳೆಲ್ಲವೂ
ಸರತಿಯಲ್ಲಿ ಪಟಗುಟ್ಟಿದವು..
ಇಂಗು ಹಾಕುವ ಸಮಯ
ಮಂಗನಾಗಿಹ ಮನವ
ತಹಬದಿಗೆ ತಂದು
ಘಮ್ಮನೆ ಒಲವ ಆಘ್ರಾಣಿಸುತಲಿ
ಸಾಂಬಾರಿನ ಪಾತ್ರೆಯೊಳಗೆ
ಸೌಟು ಅದ್ದಿ…
ಮತ್ತದೆ ಚುರುಚುರು ಸದ್ದು!
ಒಳಗಿರುವ ಮಗು ನಗುತ ಒದ್ದು..!!
ಮರೆತ ನಿಂಬೆ ಗಾತ್ರದ ಬೆಲ್ಲ
ಬೆರೆಸಿ ತೊಳಸಿ….
ಸಿಹಿ ಬೆರೆತ ಸಂಭ್ರಮದಿ
ಒಲೆಯಿಂದ ಪಾತ್ರೆ ಇಳಿಸಿ..

 -ಅರ್ಚನಾ. ಎಚ್ , ಬೆಂಗಳೂರು

28 Responses

  1. ವಿದ್ಯಾ ಶ್ರೀ ಎಸ್ ಅಡೂರ್ says:

    ತುಂಬಾ ಚಂದದ ಕವನ… ಓದುತ್ತಾ ಓದುತ್ತಾ ರೋಮಾಂಚನ….

  2. ಶೈಲಜಾ ಹಾಸನ says:

    ಬದುಕಿನ ಅನುಭವ ಪದಗಳ ಲಾಲಿತ್ಯದಲಿ ಮೇಳೈಸಿ ಕಾವ್ಯದೀಪಿಕೆಯಾಗಿ ಬೆಳಗಿದೆ.ಅಭಿನಂದನೆಗಳು ಅರ್ಚನಾ

  3. ಶಶಿಕಲಾ ಹೆಗಡೆ says:

    ಚಂದ ವಾಗಿದೆ

  4. ನಯನ ಬಜಕೂಡ್ಲು says:

    Beautiful. ಬದುಕಿನ ವಾಸ್ತವದ ಪಾಕ ಬಹಳ ಚಂದ ಮೂಡಿ ಬಂದಿದೆ.

  5. ಬಿ.ಆರ್.ನಾಗರತ್ನ says:

    ಮನದ ಭಾವನೆಗಳಿಗೆ ಸುಂದರ ಚೌಕಟ್ಟಿನಲ್ಲೇ ಕೊಟ್ಟಿರುವ ಕವನ.ಚಂದವಾಗಿದೆ.ಅಭಿನಂದನೆಗಳು ಮೇಡಂ.

  6. Hema says:

    ‘ಘಮಘಮಿಸುವ’ ಕವನ ಇಷ್ಟವಾಯಿತು

  7. Savithri bhat says:

    ಸಾಂಬಾರು..ಕವನ ಹೆಸರಿನಂತೆ ಖಾರ,ಹುಳಿ,ಉಪ್ಪು,ಸಿಹಿ ಯಾಗಿ..ಒಗ್ಗರಣೆಯ ಘಮವೂ ಸೇರಿ ಚೆನ್ನಾಗಿತ್ತು

  8. Anonymous says:

    ನನಗೂ ಘಟನೆ ಪರಿಮಳಬಂತು

  9. ಸಮತಾ.ಆರ್ says:

    ತುಂಬಾ ಚೆನ್ನಾಗಿದೆ..

  10. ವೇಣು says:

    ಚೆನ್ನಾಗಿದೆ

  11. Venu says:

    ಚೆನ್ನಾಗಿದೆ

  12. ಶಂಕರಿ ಶರ್ಮ says:

    ಜೀವನದ ಕಷ್ಟ ಸುಖಗಳು ನಿಮ್ಮ ಕವನದಲ್ಲಿ ಖಾರ, ಹುಳಿ, ಉಪ್ಪು, ಬೇಳೆ, ಬೆಲ್ಲವಾಗಿ ಸಾಂಬಾರ್ ಆದ ಬಗೆ ವಿಶಿಷ್ಟವಾಗಿದೆ.. ಚಂದದ ಕವನ.

  13. ಅರ್ಥಪೂರ್ಣ ಕವನ. ವಿವಿಧ ಮಜಲುಗಳ ದರ್ಶನ ಮಾಡಿಸಿದೆ. ಪ್ರಾರಂಭದಿಂದ ಅಂತಿಮದವರೆಗು ಸಹ ತುಂಬ ಲವಲವಿಕೆಯಿಂದ ಓದಿಸಿಕೊಂಡು ಹೋಯಿತು. ತಾವು ಬಳಸಿರುವ ಪದ ಚಮತ್ಕಾರಕ್ಕೆ ನಮ್ಮ ಶರಣು. ಕವನಗಳು ಎಂದರೆ ಹೀಗಿರಬೇಕು. ತಮ್ಮ ಲೇಖನಿಯಿಂದ ಮತ್ತಷ್ಟು ಕವನಗಳು ಹರಿದುಬರಲಿ. ಶುಭಾಶಯಗಳೊಂದಿಗೆ.
    ಕಾಳಿಹುಂಡಿ ಶಿವಕುಮಾರ್, ಮೈಸೂರು.

  14. ಪಾಕದ ಪಕ್ವತೆ ಬದುಕು.

Leave a Reply to Archana Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: