ಒಗ್ಗರಣೆ ಅನ್ನ ಉರುಫ್ ಚಿತ್ರಾನ್ನ!

Share Button

ನಿನಗೆ ಅತಿ ಪ್ರಿಯವಾದ ಬ್ರೇಕ್ ಫಾಸ್ಟ್ ಅಥವಾ ಟಿಫನ್ ಯಾವುದೆಂದು ಯಾರಾದರು ಪ್ರಶ್ನಿಸಿದರೆ ನನ್ನ ಉತ್ತರ ಇದೇ ಆಗಿರುತ್ತದೆ. ಅದು ಅಮ್ಮ ಮಾಡಿಕೊಡುತ್ತಿದ್ದ ಒಗ್ಗರಣೆ ಅನ್ನ ಉರುಫ್ ಚಿತ್ರಾನ್ನ!

ರಾತ್ರಿಯ ಅನ್ನ ಉಳಿದರೆ ಬೆಳಿಗ್ಗೆ ಅದೇ ತಂಗಳನ್ನಕ್ಕೆ ಎರಡೇ ಎರಡು ಈರುಳ್ಳಿ ಹಚ್ಚಿ, ಬಿಸಿ ಎಣ್ಣೆಯಲ್ಲಿ ಸಾಸಿವೆ ಸಿಡಿಸಿ, ಜೊತೆಗೆ ನಾಲ್ಕಾರು ಕರಿಬೇವಿನ ಎಲೆ ಬೆರೆಸಿ, ತುತ್ತು ತುತ್ತಿಗೂ ಸಿಗುವಂತೆ ಕಡಲೆಬೇಳೆ ಮತ್ತು ಕಡಲೆಬೀಜ ಇರಿಸಿ, ಹಸಿಮೆಣಸಿನಕಾಯಿ ಇದ್ದರೆ ಸೀಳಿ ಇಲ್ಲವೇ ಒಣಮೆಣಸಿನಕಾಯಿ ಆದರೆ ನಾಲ್ಕೈದು ಮುರಿದು ಹಾಕಿ, ಹಚ್ಚಿಟ್ಟ ಈರುಳ್ಳಿ ಕೆಂಪಾಗುವಂತೆ ಬಾಡಿಸಿ, ಮೇಲಿಷ್ಟು ಉಪ್ಪು ಉದುರಿಸಿ, ಅರಿಶಿಣ ಸೇರಿಸಿ, ಒಲೆ ಬಿಸಿಯಲ್ಲಿ ತಂಗಳನ್ನಕ್ಕೆ ಬೆರೆಸಿದರೆ ರುಚಿಕರವಾಗಿ ಅಮ್ಮ ಮಾಡಿಕೊಡುತ್ತಿದ್ದ ಒಗ್ಗರಣೆ ಅನ್ನ ಸಿದ್ಧವಾಗುತ್ತಿತ್ತು. ಅಮ್ಮ ಒಗ್ಗರಣೆ ಅನ್ನ ಅಂತಿದ್ದಳು. ರುಚಿ ಮತ್ತು ಬಣ್ಣಗಳಲ್ಲಿ ಅದು ಚಿತ್ರಾನ್ನವನ್ನೇ ಹೋಲುತ್ತಿದ್ದುದರಿಂದ ನಾವದನ್ನು ಚಿತ್ರಾನ್ನ ಅಂತಿದ್ದೆವು. ತಂಗಳನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ್ನದಂತೆ ಸಿಂಗಾರಗೊಳಿಸುತ್ತಿದ್ದ ಅಮ್ಮ ಯುಗಾದಿ, ಗೌರಿ, ಶ್ರಾವಣ, ದಸರಾ ಹಬ್ಬಗಳಲ್ಲಿ ಮಾತ್ರ ಸಿಹಿ ಅಡುಗೆಯ ಜೊತೆ ಚಿತ್ರಾನ್ನವನ್ನೇ ಮಾಡಿ ಉಣಬಡಿಸುತ್ತಿದ್ದಳು. ಆ ದಿವಸ ಮಾತ್ರ ಒಗ್ಗರಣೆ ಅನ್ನವನ್ನು ಚಿತ್ರಾನ್ನವಾಗಿಸಲು ಕೊನೆಯಲ್ಲಿ ಎರಳೆಕಾಯಿ ಅಥವಾ ನಿಂಬೆಹಣ್ಣು ಇವೆರಡೂ ಇಲ್ಲವೆಂದರೆ ಹುಣಸೆಹಣ್ಣಿನ ಹುಳಿ ರಸವನ್ನ ಸೇರಿಸುತ್ತಿದ್ದಳು. ಜೊತೆಗೆ ಹೆಚ್ಚುವರಿಯಾಗಿ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿಯ ತುರಿಯೂ ಸೇರಿಕೊಳ್ಳುತ್ತಿತ್ತು.  ಅದನ್ನು ಚಿತ್ರಾನ್ನದ ಗೊಜ್ಜು ಅಂತಿದ್ದಳು ಅಮ್ಮ. ಒಂದು ಹೊತ್ತಿಗೆ ಎಷ್ಟು ಬೇಕೋ ಅಷ್ಟೇ ಗೊಜ್ಜನ್ನು ಬಿಳಿ ಅನ್ನಕ್ಕೆ ಹಾಕಿ ಕಲೆಸಿದರೆ ಚಿತ್ರಾನ್ನ ಸಿದ್ಧವಾಗುತ್ತಿತ್ತು. ಹಬ್ಬ ಮುಗಿದು ಎರಡು ದಿನಗಳವರೆಗೂ ಇರುತ್ತಿದ್ದ ಗೊಜ್ಜು ಮನೆಯಲ್ಲಿರುವ ಮಕ್ಕಳ ಊಟದ ಸಮಯವನ್ನೆಲ್ಲ ಚಿತ್ರಾನ್ನಮಯವಾಗಿಸುತ್ತಿತ್ತು! ಅಷ್ಟು ಮಾತ್ರವಲ್ಲದೇ ಮನೆಗೆ ನೆಂಟರಿಷ್ಟರು ಅತಿಥಿಗಳು ಬಂದಾಗಲೂ ಅವರಿಗಾಗಿ ತಯಾರಾಗುತ್ತಿದ್ದ ದಿಢೀರ್ ತಿಂಡಿ ಚಿತ್ರಾನ್ನ. ಅದರಲ್ಲಿ ಮಕ್ಕಳಿಗೂ ಒಂದು ಪಾಲಿತ್ತು. ನಾವು ಅತಿಹೆಚ್ಚು ತಿಂದ ತಿಂಡಿ, ಬ್ರೇಕ್ ಫಾಸ್ಟ್ ಅಥವಾ ಉಪಹಾರವೆಂಬ ಹೆಗ್ಗಳಿಕೆ ಚಿತ್ರಾನ್ನಕ್ಕೆ ಸಲ್ಲಬೇಕು. ಇಡ್ಲಿ ದೋಸೆ ಪೂರಿ ಪಲಾವ್ ಇಂತಹ ತಿಂಡಿಗಳೆಲ್ಲ ನಮಗಾಗ ಹಬ್ಬಗಳಷ್ಟೇ ಅಪರೂಪವಾಗಿದ್ದವು‌.

ನಮ್ಮ ಬಾಲ್ಯದಲ್ಲಿ ‘ಪಲಾವ್’ ಎಂಬ ತಿಂಡಿಯನ್ನು ಬರೀ ಸಿರಿವಂತರು ಮಾತ್ರ ತಿನ್ನುವ ಆಹಾರವೆಂಬ ನಂಬಿಕೆಯೊಂದು ನನಗಿತ್ತು. ಆ ನಂಬಿಕೆಗೊಂದು ಕಾರಣವಿತ್ತು. ನಮ್ಮ ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ದಸರಾ ಹಬ್ಬದಲ್ಲಿ ಮಾತ್ರ  ಕ್ಯಾರೆಟ್, ಬೀನ್ಸ್ ಇನ್ನಿತರ ತರಕಾರಿಗಳನ್ನು ಮನೆಗೆ ತರುತ್ತಿದ್ದರು. ಅದೂ ಸಹ ಹಬ್ಬದ ಅಡುಗೆಯಲ್ಲಿನ ತರಕಾರಿ ಪಲ್ಯಕ್ಕಾಗಿಯೇ ಹೊರತು, ಪಲಾವ್ ಮಾಡುವುದಕ್ಕಾಗಿಯಲ್ಲ. ನನ್ನ ಬಾಲ್ಯದಲ್ಲಿ ನನ್ನಮ್ಮನ ತವರುಮನೆ ಅಂದರೆ ನಮ್ಮಜ್ಜಿ ಮನೆಯಲ್ಲಿ ಒಂದೆರಡು ಸಲ ‘ಪರವಾಗಿಲ್ಲ’ ಅನ್ನಿಸುವಂತ ಪಲಾವ್ ತಿಂದಿದ್ದು ಬಿಟ್ಟರೆ, ನಾನು ತುಂಬಾ ರುಚಿ ರುಚಿಯಾದ ಪಲಾವನ್ನು ತಿಂದಿದ್ದು ಶಾಲೆಯ ರಜೆಗೆಂದು ಊರಿಗೆ ಹೋದಾಗ; ನಮ್ಮ ಸೋದರಮಾವನ ಮನೆಯಲ್ಲಿ‌. ಇನ್ನೂ ಇಡ್ಲಿ ದೋಸೆಯಂತಹ ತಿಂಡಿಗಳೆಲ್ಲ ವರುಷಕ್ಕೊಂದೆರಡು ಸಲ ಮಾತ್ರ ತಿನ್ನುತ್ತಿದ್ದ ಗರಿಗರಿಯಾದ ನೆನಪುಗಳಿವೆ. ನಮ್ಮೂರ ಕಡೆ ಸಂಕ್ರಾಂತಿ ಹಬ್ಬಕ್ಕೆ ಈಗೆಲ್ಲ ಹೋಳಿಗೆ ಪಾಯಸ ಮಾಡುವರು. ಆದರೆ ನಮ್ಮ ಬಾಲ್ಯದಲ್ಲಿ ಗೆಣಸು ಕುಂಬಳಕಾಯಿ ಬೇಯಿಸಿ, ತೆಂಗಿನಕಾಯಿ ಹಾಲು ಕುದಿಸಿ, ಜೊತೆಗೆ ದೋಸೆ ಮಾಡುತ್ತಿದ್ದರು. ಇನ್ನೂ ಇಡ್ಲಿಯನ್ನು ತಿನ್ನುತಿದ್ದುದು ವರ್ಷಕ್ಕೊಮ್ಮೆ ಖಾರ ಹುಣ್ಣಿಮೆ ಹಬ್ಬದ ದಿನ ಮಾತ್ರ. ಆ ದಿವಸ ಹಸು ಕರುಗಳನ್ನು ಪೂಜಿಸಿ, ಮನೆಯಲ್ಲಿ ಮಾಡಿದ ಇಡ್ಲಿ ಅಥವಾ ದೋಸೆಯನ್ನು ಅವುಗಳಿಗೆ ತಿನ್ನಿಸಿ, ನಂತರ ನಾವು ಇಡ್ಲಿಯ ರುಚಿಯನ್ನು ಡಜನ್ ಲೆಕ್ಕದಲ್ಲಿ ಸವಿಯುತ್ತಿದ್ದೆವು. ಇನ್ನೂ ದಸರಾ ಹಬ್ಬದ ರಾತ್ರಿ ಮಾಡಿದ ತರಕಾರಿ ಪಲ್ಯ ಮರುದಿನವು ಉಳಿದಿದ್ದರೆ ಆ ದಿನ ಬೆಳಿಗ್ಗೆ ಪ್ರತಿವರ್ಷದ ಪುನರಾವರ್ತನೆಯಂತೆ ಚಪಾತಿಗಳು ತಯಾರಾಗುತ್ತಿದ್ದವು. ಹೀಗೆ ಇಡ್ಲಿ, ದೋಸೆ, ಪೂರಿ, ಪಲಾವ್ ಅಪರೂಪದ ತಿಂಡಿಗಳಾಗಿದ್ದಾಗಲೇ, ರಾತ್ರಿಯ ಅನ್ನ ಉಳಿದರೆ ಅಮ್ಮ ಅದನ್ನು ಒಗ್ಗರಣೆ ಅನ್ನವಾಗಿ ಪರಿವರ್ತಿಸುತ್ತಿದ್ದಳು. ಇಷ್ಟೆಲ್ಲ ಕಾರಣಗಳಿಂದಾಗಿ ಇನ್ನುಳಿದ ತಿಂಡಿಗಳು ಅಪರೂಪವಾದ ಕಾಲದಲ್ಲಿ ನಾವು ಅತಿಹೆಚ್ಚು ಬಾರಿ ತಿಂದ ತಿಂಡಿಯೆಂಬ ಹೆಗ್ಗಳಿಕೆ ಒಗ್ಗರಣೆ ಅನ್ನ ಉರುಫ್ ಚಿತ್ರಾನ್ನಕ್ಕೆ ಸಲ್ಲಬೇಕು.

ಚಿತ್ರಾನ್ನದ ಕುರಿತ ಇನ್ನೊಂದು ಘಮಭರಿತ ನೆನಪೆಂದರೆ, ಈಗಿನಂತೆ ಆಗ ಭತ್ತದ ಪೈರಿನ ಕಟಾವಿನ ನಂತರ ಕಾಳುಗಳನ್ನು ಬೇರ್ಪಡಿಸುವ ಯಂತ್ರಗಳಿರಲಿಲ್ಲ. ಅಥವಾ ಇದ್ದರೂ ನಮಗದರ ಪರಿಚಯವಿರಲಿಲ್ಲ. ಭತ್ತದ ಪೈರು ಕಟಾವಿಗೆ ಸಿದ್ಧವಾಗುತ್ತಿದ್ದಂತೆ ಕಣವೆಲ್ಲ ಗುಡಿಸಿ, ಸಗಣಿಯಿಂದ ಸಾರಿಸುತ್ತಿದ್ದೆವು. ನಂತರ ಭತ್ತದ ಪೈರಿನ ಹೊರೆಗಳನ್ನೆಲ್ಲ ಅಲ್ಲಿ ರಾಶಿ ಹಾಕುತ್ತಿದ್ದರು. ಹಗಲಿನಲ್ಲಿ ಭತ್ತದ ಕೆಲಸ ಮಾಡಿದರೆ ಮೈ ಕಡಿತ ಖಚಿತವೆಂದು, ರಾತ್ರಿಯ ವೇಳೆಯಲ್ಲಿ ಭತ್ತ ಬಡಿಯುವ ಕಾಯಕಕ್ಕೆ ಗಂಡಾಳುಗಳು ಸಿದ್ಧವಾಗುತ್ತಿದ್ದರು. ಭತ್ತದ ಹೊರೆಯನ್ನು ಎರಡು ಕೈಯಲ್ಲಿ ಎತ್ತಿ ನಾಲ್ಕಾರು ಬಾರಿ ನೆಲಕ್ಕೆ ಬಡಿದರೆ ಸಾಕು ಒಣಗಿದ ತೆನೆಯಿಂದ ಭತ್ತದ ಕಾಳುಗಳೆಲ್ಲ ಉದುರಿಬೀಳುತ್ತಿದ್ದವು. ಬಾಲಕರಾದ ನಾವು ಚಳಿಯಲ್ಲಿ ಕಂಬಳಿ ಹೊದ್ದು ಬೆರಗಿನಿಂದ ನೋಡುತ್ತಾ ಕುಳಿತಿರುತ್ತಿದ್ದೆವು. ಅರೆ ಮುಂಜಾವಿನ ಹೊತ್ತಿಗೆ ಅಮ್ಮ ಸಿದ್ಧಮಾಡಿಕೊಟ್ಟ ಬುತ್ತಿಯ ಗಂಟನ್ನು ಅಪ್ಪ ಹೊತ್ತು ತರುತ್ತಿದ್ದರು. ಆ ಗಂಟನ್ನು ಬಿಚ್ಚಿದರೆ ಕಣದ ತುಂಬಾ ಹಬೆಯಾಡುವ ಚಿತ್ರಾನ್ನದ ಘಮಲು ಆವರಿಸುತ್ತಿತ್ತು. ಇಲ್ಲಿಯವರೆಗೂ ನಾನು ತಿಂದ ಚಿತ್ರಾನ್ನದಲ್ಲಿ ನನಗೆ ಹೆಚ್ಚು ರುಚಿಕೊಟ್ಟ ಚಿತ್ರಾನ್ನವೆಂದರೆ ಭತ್ತದ ಕಣದಲ್ಲಿ ಬೆಳಗಿನ ಜಾವಕ್ಕೆ ತಿಂದ ಚಿತ್ರಾನ್ನ.

‘ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವರು’ ಎಂಬ ಗಾದೆ ಮಾತಿದೆ. ನನಗೆ ತುಂಬಾ ಜನ ಮಾವಂದಿರು ಇದ್ದಾರೆ. ಆದರೆ ಹೆಣ್ಣು ಕೊಟ್ಟು ಕಣ್ಣಾದ ಮಾವನವರು ಮಾತು ಬಾರದ ಹುಟ್ಟು ಮೂಕರು. ಅವರೊಂದಿಗೆ ನಾವು ಅವರದೇ ಕೈಬಾಯಿ ಭಾಷೆಯಲ್ಲಿ ಮಾತಾಡುವುದು. ಒಮ್ಮೆ ಅವರ ಬಳಿ ‘ತಿಂಡಿ ಆಯಿತೆ?’ ಎಂದು ಅವರ ಮೂಕ ಭಾಷೆಯಲ್ಲಿ ಪ್ರಶ್ನಿಸಿದ್ದೆ. ಅವರು ಆಯಿತೆಂದು ಉತ್ತರಿಸಿದರು. ತಿಂಡಿ ಏನೆಂಬ ನನ್ನ ಪ್ರಶ್ನೆಗೆ ಅವರು ಅನ್ನವೆಂಬುದನ್ನ ತಮ್ಮ ಭಾಷೆಯಲ್ಲಿ ತೋರಿಸಿ, ಜೊತೆಗೆ ಅರಿಶಿಣ ಎಂಬುದನ್ನು ಎರಡು ಬೆರಳುಗಳಿಂದ ತಮ್ಮ ಕೆನ್ನೆಯನ್ನು ಸವರಿಕೊಂಡು ತೋರಿಸಿದರು.  ಹೆಂಗಸರು ಕೆನ್ನೆಗೆ ಅರಿಶಿಣ ಹಚ್ಚುವುದು, ಅನ್ನಕ್ಕೆ ಅರಿಶಿಣ ಹಚ್ಚಿದರೆ ಅದು ಚಿತ್ರಾನ್ನವೆಂಬುದು ಅರ್ಥವಾಯಿತು.

ಇನ್ನೊಂದು ಸಂದರ್ಭದಲ್ಲಿ ಮತ್ತೊಬ್ಬ ಮಾವನವರ ಬಳಿ ಯೋಗಕ್ಷೇಮದ ಕುರಿತು ದೂರಾವಣಿಯಲ್ಲಿ ಮಾತಾಡುತ್ತಿದ್ದೆ. ಅವರ ಬಳಿ ‘ತಿಂಡಿ ಆಯಿತೆ?’ ಎಂಬ ಪ್ರಶ್ನೆಗೆ ಆಯಿತೆಂದರು. ‘ತಿಂಡಿ ಏನೆಂದರೆ?’,  ‘ಇನ್ನೇನ್ ಮಾಡ್ತಾಳೆ ನಿಮ್ಮತ್ತೆ ಅನ್ನಕ್ಕೆ ಅರಿಶಿಣ ಹಾಕಿಟ್ಟವ್ಳೆ’ ಎಂದರು. ಆಗಲೂ ನನಗರ್ಥವಾಯಿತು. ಅವರ ಮನೆಯಲ್ಲಂದು ಚಿತ್ರಾನ್ನವೆಂದು.

ಇನ್ನೊಮ್ಮೆ ನಮ್ಮ ಬಂಧುಗಳಲ್ಲೊಬ್ಬರಾದ ಅಜ್ಜರೊಬ್ಬರು ಮನೆಗೆ ಬಂದಿದ್ದರು ಅವರಿಗೆಂದು ಗಡಿಬಿಡಿಯಲ್ಲಿ ಅಮ್ಮ ತಯಾರಿಸಿದ ಚಿತ್ರಾನ್ನದಲ್ಲವರು ಕಡಲೆಬೇಳೆಯನ್ನು ಹುಡುಕಿ, ಬದಿಗಿಟ್ಟು ನಿಧಾನವಾಗಿಯೇ ತಿನ್ನುತ್ತಾ, ಈ ಚಿತ್ರಾನ್ನವೆಲ್ಲ ನಮ್ಮಂತ ವಯಸ್ಸಾದವರಿಗಲ್ಲ, ನಮ್ಮಂತವರಿಗೆ ಏನಿದ್ರೂ ಉಪ್ಪಿಟ್ಟು ಪಲಾವ್ ಇಡ್ಲಿ ಇವುಗಳಷ್ಟೇ ಸರಿಯೆಂದು, ಮುಂದಿನ ಬಾರಿ ಮತ್ತೆ ನಿಮ್ಮನೆಗೆ ಬಂದಾಗ ಚಿತ್ರಾನ್ನವನ್ನ ಬಿಟ್ಟು, ನಾನು ಹೇಳಿದ ಆ ತಿಂಡಿಗಳಲ್ಲೊಂದನ್ನು ಮಾಡಿರೆಂದು ತಮ್ಮ ಮಾತು ವರ್ತನೆಯಲ್ಲೇ ಸೂಚನೆ ಕೊಟ್ಟರು. ಆದರೆ ಅದಾಗಿ ಕೆಲವು ದಿನಗಳಲ್ಲೇ ಆ ಅಜ್ಜ ತೀರಿಕೊಂಡರೆಂದು ಸುದ್ದಿಬಂತು.

ಈ ಚಿತ್ರಾನ್ನದಲ್ಲಿ ಹಲವು ವಿಧವಿಧವಾದ ಚಿತ್ರಾನ್ನಗಳಿವೆ. ನಿಂಬೆಹಣ್ಣಿನ ಚಿತ್ರಾನ್ನ, ಹೆರಳೆಕಾಯಿ ಚಿತ್ರಾನ್ನ, ಹಸಿ ಹುಣಸೆ ಕಾಯಿ ಚಿತ್ರಾನ್ನ, ಹುಣಸೆ ಹಣ್ಣಿನ ಚಿತ್ರಾನ್ನ, ಮಾವಿನಕಾಯಿ ಚಿತ್ರಾನ್ನ, ಬೆಳ್ಳುಳ್ಳಿ ಚಿತ್ರಾನ್ನ, ಸಾಸಿವೆ ಜೀರಿಗೆ ಚಿತ್ರಾನ್ನ, ಕ್ಯಾಪ್ಸಿಕಂ ಚಿತ್ರಾನ್ನ.. ಹೀಗೆ ಒಂದೆರಡಲ್ಲ! ನಮ್ಮ ಮೊದಲ ಭೇಟಿಯ ದಿನ ಚಿತ್ರಾನ್ನ ನನಗಿಷ್ಟವೆಂದವಳು ಸ್ವೀಟ್ ಕಾರ್ನ್ ಚಿತ್ರಾನ್ನ ಮಾಡಿ ತಂದಿದ್ದಳು. ಆದರೆ ಅಮ್ಮ ತುತ್ತು ತುತ್ತಿಗೂ ಸಿಗುವಂತೆ ಕಡಲೆಬೀಜ, ಕಡಲೆಬೇಳೆ ಸೇರಿಸಿ ಮಾಡುತ್ತಿದ್ದ ಚಿತ್ರಾನ್ನದ ಮುಂದೆ ಅವಳು ಸ್ವತಃ ಕೈಯಾರೆ ಪ್ರೀತಿಯಿಂದ ಮಾಡಿ ತಂದಿದ್ದ ಸ್ವೀಟ್ ಕಾರ್ನ್ ಚಿತ್ರಾನ್ನ ರುಚಿಸಲಿಲ್ಲ. ನಾನಿದನ್ನ ಅವಳಿಗೆ ನೇರವಾಗಿಯೇ ಹೇಳಿದ್ದೆ. ನಂತರದ ದಿನಗಳಲ್ಲಿ ಒಂದೆರಡು ಬಾರಿ ನನಗಿಷ್ಟದ ರೀತಿಯಲ್ಲಿ ಚಿತ್ರಾನ್ನ ಮಾಡಿ ತಂದಿದ್ದಳಾದರೂ ಅಮ್ಮನ ಕೈರುಚಿಗೆ ಇದು ಸಮವಲ್ಲ ಅನಿಸಿದ್ದು ಸುಳ್ಳಲ್ಲ.

ಚಿತ್ರಾನ್ನಕ್ಕೂ ಈಗ ಲೆಮನ್ ರೈಸ್ ಕಲರ್ ರೈಸ್ ಹೀಗೆ   ಬಗೆಬಗೆಯ ಹೆಸರುಗಳು ರುಚಿಗಳು ಬಂದಿವೆ. ಆದರೆ ಬಣ್ಣ ಮಾತ್ರ ಒಂದೇ! ದರ್ಶಿನಿಯಂತಹ ಹೋಟೆಲ್ಲುಗಳಲ್ಲಿ ‘ರೈಸ್ ಬಾತ್’ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತೆ. ಅವರ ಪ್ರಕಾರ ಪಲಾವ್ ಪುಳಿಯೊಗರೆ ಟಮೋಟೋ ರೈಸ್ ಗೀ ರೈಸ್ ಇವೆಲ್ಲವು ‘ರೈಸ್ ಬಾತ್’ಗಳೇ! ಅವುಗಳ ಜೊತೆ ಚಿತ್ರಾನ್ನವು ಸೇರಿದೆ. ಫಿಗರ್ ರೈಸ್ ಎಂಬ ಇನ್ನೊಂದು ಉಪನಾಮವು ಉಂಟು. ಆದರೆ ಈ ಹೆಸರು ಹೆಚ್ಚು ಬಳಕೆಯಲ್ಲಿಲ್ಲದೇ ಕೆಲವೇ ಕೆಲವು ಮಂದಿ ಮಾತ್ರ ಫಿಗರ್ ರೈಸ್ ಅನ್ನುತ್ತಾರಷ್ಟೇ. ಆದರೆ ಎಷ್ಟೇ ಹೆಸರುಗಳಿದ್ದರೂ ಅವು ಯಾವುವು ಸಹ ಚಿತ್ರಾನ್ನದಷ್ಟು ಹೆಸರುವಾಸಿಯಾಗಿಲ್ಲ.

‘ಫಿಗರ್ ರೈಸ್’ ಎಂದಾಗ ಮತ್ತೊಂದು ಘಟನೆ ನೆನಪಾಗುತ್ತಿದೆ. ಒಮ್ಮೆ ಗೆಳತಿಯೊಬ್ಬಳು ಚಿತ್ರಾನ್ನವನ್ನು ‘ಫಿಗರ್ ರೈಸ್’ ಎಂಬ ಹೆಸರಿನಿಂದ ಕರೆದಾಗ ಅಚ್ಚರಿಯಾಯ್ತು. ಅದು ಬೆಂಗಳೂರೆಂಬ ಮಹಾನಗರದ ಮಡಿಲಿಗೆ ಬಿದ್ದ ಮೊದಲ ದಿನಗಳು. ಅಷ್ಟೂ ದಿನ ಚಿತ್ರಾನ್ನ ಚಿತ್ರಾನ್ನವೆಂದು ಕಿವಿ ತುಂಬಿಕೊಂಡಿದ್ದ ನನಗೆ ‘ಫಿಗರ್ ರೈಸ್’ ಎಂಬ ಹೊಸ ಹೆಸರು ಚಿತ್ರಾನ್ನದ ಕುರಿತು ಹೊಸದಾದ ಬೆರಗು ಮೂಡಿಸುವಂತೆ, ಮತ್ತಷ್ಟು ಅಭಿಮಾನ ಹೆಚ್ಚುವಂತೆ ಮಾಡಿತ್ತು. ಈ ಬೆರಗು ಅಭಿಮಾನ ಬಹಳ ದಿನಗಳ ಕಾಲ ನನ್ನೊಳಗೆ ಹಾಗೆಯೇ ಇತ್ತು. ನಾವು ಚಿತ್ರಾನ್ನವೆಂದರೆ ನೀವೇಕೆ ಫಿಗರ್ ರೈಸ್ ಅಂತೀರೆಂದು ಗೆಳತಿಯಲ್ಲಿ ಕೇಳಿದಾಗ ಅವಳು ಹೀಗೆ ಉತ್ತರಿಸಿದ್ದಳು. ಫಿಗರ್ ಅಂದ್ರೆ ಚಿತ್ರ, ರೈಸ್ ಅಂದ್ರೆ ಅನ್ನ. ಚಿತ್ರ ಮತ್ತೆ ಅನ್ನ ಎರಡು ಸೇರಿದರೆ ಚಿತ್ರಾನ್ನವೆಂದು ಉತ್ತರಿಸಿದವಳು ಬಹುದೊಡ್ಡ ಬುದ್ದಿವಂತೆಯಂತೆ ಬೀಗಿದ್ದಳು.

ಇನ್ನೂ ‘ಚಿತ್ರಾನ್ನ’ ಎಂಬ ಹೆಸರನ್ನು ಸೋಲು ಗೆಲುವುಗಳಿಗೂ ರೂಪಕವಾಗಿ ಬಳಸುವ ಉದಾರಿಗಳು ಸಾಕಷ್ಟಿದ್ದಾರೆ. ಉದಾಹರಣೆಗೆ ನೋಡಿ. ಸಿನಿಮಾದಲ್ಲಿ ನಾಯಕನಟನ ಅಭಿನಯ ಅದ್ಭುತ ಅನಿಸುವಂತಿದ್ದರೂ ಪ್ರೇಕ್ಷಕರು ‘ಏನ್ ಆಕ್ಟಿಂಗ್ ಗುರು ಚಿಂದಿ ಚಿತ್ರಾನ್ನ’ ಅಂತಾರೆ. ಬದುಕಿನಲ್ಲಿ ಹಲವು ಸೋಲುಗಳನ್ನು ಕಂಡವನೊಬ್ಬ ತನ್ನ ಸ್ಥಿತಿಗತಿಯ ಕುರಿತು ‘ನನ್ನ ಬದುಕೇ ಚಿತ್ರಾನ್ನವಾಗಿದೆ’ ಅಂತಾನೆ.

ಅದೇನೆ ಇರಲಿ ಕಡಲೆಕಾಯಿ ಅಥವಾ ಶೇಂಗಾವನ್ನ ‘ಬಡವರ ಬಾದಾಮಿ’ ಎನ್ನುವಂತೆ ಚಿತ್ರಾನ್ನಕ್ಕೂ ಕೆಲವರು ‘ಬಡವರ ಬಿರಿಯಾನಿ’  ಎಂಬ ಉಪನಾಮವನ್ನು  ದಯಪಾಲಿಸಿದ್ದಾರೆ. ‘ನಾನು ಬಡವ, ಆಕೆ ಬಡವಿ, ಒಲವೇ ನಮ್ಮ ಬದುಕು’ ಎಂದಿದ್ದರು ಕವಿ. ಬದುಕಿಗೆ ಬೇಕಾದ ಬಹುದೊಡ್ಡ ಸಿರಿವಂತಿಕೆ ಒಲವೆಂದರೆ ತಪ್ಪಲ್ಲ. ಆದರೆ ಚಿತ್ರಾನ್ನಕ್ಕೆ ಅದರ ರುಚಿಯೇ ಸಿರಿವಂತಿಕೆ ಎಂದರೂ ತಪ್ಪಿಲ್ಲ. ಬಡವ ಅಥವಾ ಶ್ರೀಮಂತರ ಮನೆ ಎಂಬ ತಾರತಮ್ಯವಿಲ್ಲದೇ ಎಲ್ಲರ ಮನೆಯಲ್ಲೂ ಒಂದೇ ಬಣ್ಣ ಒಂದೇ ರುಚಿ ಕೊಡುವ ಚಿತ್ರಾನ್ನ ಸಮಾಜದ ಸಮಾನತೆಗೆ ಕಿರೀಟ ಎಂದರೆ ತಪ್ಪೇನಲ್ಲ!
*
‘ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ’ ಎಂಬ ಗಾದೆ ಮಾತಿದೆ. ಅಂದು ನಮ್ಮ ಜಗಳವಾಗಿ ಇಬ್ಬರೂ ಹಸಿದು ಮಲಗಿದ್ದೆವು. ಮರುದಿನ ಬೆಳಿಗ್ಗೆಯೂ ನನ್ನ ಮತ್ತವಳ ನಡುವೆ ಮಾತಿಲ್ಲ ಕತೆಯಿಲ್ಲ ಬರೀ ಮೌನ. ಆಗಲೇ ಈರುಳ್ಳಿ ಹಚ್ಚಿಟ್ಟವಳು ಹಸಿಮೆಣಸಿನಕಾಯಿ ಸೀಳುತ್ತಿದ್ದಳು. ಮೊದಲು ನಾನೇ ಸೋತು ಮಾತಾಡಿಸಲು ಮುಂದಾದೆ. ತಿಂಡಿ ಏನೆಂಬ ನನ್ನ ಪ್ರಶ್ನೆಗವಳು ಕಾದ ಎಣ್ಣೆಯಲ್ಲಿ ಸಿಡಿಯುವ ಸಾಸಿವೆಯಂತೆ ‘ತಿಂಡಿಗಿಂಡಿ ಎಂತಾದ್ದು ಇಲ್ಲ. ರಾತ್ರಿ ಜಂಭ ಮಾಡಿ ತಿನ್ನದೇ ಮಲಗಿದ್ದಲ್ಲ, ಈಗ ಅದೇ ಅನ್ನಕ್ಕೆ ಒಗ್ಗರಣೆ ಹಾಕ್ತೀನಿ ಬಾಯ್ಮುಚ್ಕೊಂಡ್ ತಿನ್ನು’ ಅಂದಳು. ಒಗ್ಗರಣೆ ಅನ್ನ ಉರುಫ್ ಚಿತ್ರಾನ್ನ ಸಿದ್ಧವಾಗುತ್ತಲೂ ನಾನು ತಿನ್ನುವ ಮೃಷ್ಟಾನ್ನ ಮತ್ತೆ ತಂಗಳನ್ನ ಎರಡರಲ್ಲೂ ನೀನು ಪಾಲುದಾರಳೆಂದು ನನ್ನ ಕೈಯ್ಯಾರೆ ನಾಲ್ಕು ತುತ್ತು ತಿನ್ನಿಸಿದೆ. ಜೊತೆಗೊಂದು ಆಶುಗವಿತೆಯನ್ನು ಅವಳಿಗೆ ಹೇಳಿದ್ದೆ.

ಖಾರ

ಹೆಂಡತಿ ಮತ್ತು ಮೆಣಸಿನಕಾಯಿ
ಕೆಲವೊಮ್ಮೆ ಒಂದೇ ರೀತಿ
ಮೆಣಸಿನಕಾಯಿ
ಬಾಯಿಗಿಟ್ಟರೆ ಖಾರ
ಹೆಂಡತಿ ಬಾಯಿಬಿಟ್ಟರೆ ಖಾರ

– ನವೀನ್ ಮಧುಗಿರಿ

9 Responses

  1. Savithri bhat says:

    ಆಹಾ..ಚಿತ್ರಾನ್ನ ಲೇಖನ ಎಷ್ಟು ಚೆನ್ನಾಗಿ ಬರೆದಿರಿ. ಬಾಲ್ಯದ ನೆನಪು,ಅಮ್ಮನ ಅಕ್ಕರೆ,ಪತ್ನಿಯ ಮುನಿಸು,ಒಲುಮೆ ಎಲ್ಲವನ್ನೂ ಸೇರಿಸಿ ಅಲಂಕರಿಸಿ ತುಂಬಾ ಇಷ್ಟವಾಯಿತು.

  2. ನಯನ ಬಜಕೂಡ್ಲು says:

    ತುಂಬಾ ಸೊಗಸಾಗಿದೆ. ಚಿತ್ರಾನ್ನ ದಲ್ಲಿ ಸಂಬಂಧ ಗಳ ಘಮವೂ ಜೊತೆ ಸೇರಿ ಬಹಳ ರುಚಿಕಟ್ಟಾದ ಬರಹವಾಗಿದೆ.

  3. Anonymous says:

    ತುಂಬಾ ತುಂಬಾ ಮುದ ಕೊಟ್ಟು ಲೇಖನ.ಅಭಿನಂಧನೆಗಳು ಸಾರ್.

  4. Hema says:

    ‘ಚಿತ್ರಾನ್ನ’ದ ಲೇಖನ, ‘ಖಾರ’ವಾದ ಕವನ ಸೂಪರ್ ಆಗಿದೆ!

  5. ಸಮತಾ.ಆರ್ says:

    ಚಿತ್ರಾನ್ನ ದಷ್ಟೇ ಸವಿಯಾದ ಬರಹ..

  6. ಶಂಕರಿ ಶರ್ಮ says:

    ಅನ್ನದ ಬಹುರೂಪಿ ತಿಂಡಿಗಳು ಎಲ್ಲರ ಮನೆಯಲ್ಲಿ ಸರ್ವೇಸಾಮಾನ್ಯ… ತಿಳಿಹಾಸ್ಯ ಲೇಪಿತ ಬರಹ ಖುಷಿ ಕೊಟ್ಟಿತು.

  7. ನವೀನ್ ಮಧುಗಿರಿ says:

    ಓದಿ ಪ್ರತಿಕ್ರಿಯಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು..

    • ರು ರಾಘವೇಂದ್ರ says:

      ನಿಮ್ಮ ಕವನಗಳು ಅದ್ಭುತ ಕಣ್ರೀ…. ನನಗೆ ನಿಮ್ಮ ಪುಸ್ತಕಗಳು ಬೇಕು… ದಯಮಾಡಿ ನಿಮ್ಮ contact ತಿಳಿಸಿ
      ನನ್ನ con.9740084575…. ಬೇಸರಮಾಡಿಕೊಳ್ಳದೆ ನೀವು ಒಂದು missed call ಕೊಡಿ

  8. ರು ರಾಘವೇಂದ್ರ says:

    ನಿಮ್ಮ ಪುಸ್ತಕ ಬೇಕು… ಕವನಗಳು … ಎಲ್ಲಿ ಸಿಗುತ್ತದೆ ಹೇಳಿ… ನನ್ನ pho 9740084575
    ದಯಮಾಡಿ ಮೆಸೇಜ್ ಮಾಡಿ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: