ಕೊರೊನಾ ಕಾಲದ ಸುವರ್ಣ ನಡಿಗೆ

Share Button

ಈ ವರ್ಷ ಜಗತ್ತನ್ನು ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್ -19 ಪಿಡುಗು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸುಮಾರು 6 ತಿಂಗಳಿನಿಂದ ಎಲ್ಲರೂ ಸಾಧ್ಯವಾದಷ್ಟು ಮಟ್ಟಿಗೆ ಮನೆಯೊಳಗೇ ಇರುವುದು, ಹೊರಗಡೆ ಹೋಗಬೇಕಾದಾಗ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇರುವುದು  ಸಾರ್ವತ್ರಿಕವಾಗಿದೆ. ಶಾಲಾ-ಕಾಲೇಜುಗಳು ಇನ್ನೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಆರ್ಥಿಕ ಪ್ರಗತಿ ಕುಸಿದಿದೆ. ಪ್ರವಾಸೋದ್ಯಮವು ನೆಲಕಚ್ಚಿದೆ. 

ಸಹಜವಾಗಿ, ಮೈಸೂರಿನಲ್ಲಿರುವ  ಯೂತ್ ಹಾಸ್ಟೆಲ್ ಅಸೋಸಿಯೇಷನ್  ಗಂಗೋತ್ರಿ ಘಟಕದವರು  ಪ್ರತಿ ಭಾನುವಾರ ಆಯೋಜಿಸುತ್ತಿರುವ ಚಾರಣ ಕಾರ್ಯಕ್ರಮಗಳು ನಿಂತು ಹೋಗಿದ್ದುವು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡುವುದನ್ನೇ ಹವ್ಯಾಸವಾಗಿಸಿಕೊಂಡ ಯೈ.ಎಚ್.ಎ.ಐ ಸದಸ್ಯರಿಗೆ ಈ ನಿರ್ಬಂಧ ಅಸಹನೀಯವೆನಿಸತೊಡಗಿತ್ತು. ಚಾರಣಕ್ಕೆ ಪರ್ಯಾಯವಾಗಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುಲಭವಾಗಿ ನಿರ್ವಹಿಸಬಹುದಾದ ಕಾರ್ಯಕ್ರಮಗಳನ್ನು ನಿರ್ವಹಿಸುವ ಉದ್ದೇಶದಿಂದ, ಆಗಸ್ಟ್ 30, 2020 ರಂದು ಮೈಸೂರಿನ ಹೊರವಲಯದಲ್ಲಿರುವ ಸುವರ್ಣನಗರ ಬಡಾವಣೆಗೆ ಸಮೀಪದಲ್ಲಿರುವ ರೂಪಾನಗರದಿಂದ ‘ಪ್ರಕೃತಿ ನಡಿಗೆ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಬಹುದಿನಗಳ ನಂತರ ಹಮ್ಮಿಕೊಂಡ ಕಾರ್ಯಕ್ರಮವಾದುದರಿಂದ, ಭಾಗವಹಿಸಿದ ಸದಸ್ಯರಿಗೆ ಉತ್ಸಾಹವಿತ್ತು. ಮೈಸೂರಿನಲ್ಲಿ ಇದ್ದರೂ, ಅಷ್ಟಾಗಿ ಪ್ರಚಾರವಿಲ್ಲದ ಸುವರ್ಣನಗರ ಬಡಾವಣೆಯ ಬಗ್ಗೆ ಕುತೂಹಲವಿತ್ತು. ಆ ಭಾನುವಾರ, ರೂಪಾನಗರದಲ್ಲಿರುವ  ನಮ್ಮ ಮನೆಗೆ ತಮ್ಮದೇ ವಾಹನಗಳಲ್ಲಿ ಬಂದು ಸೇರಿದ ಸದಸ್ಯರ ಸಂಖ್ಯೆ ಮೂವತ್ತು. ಈ ತಂಡದವರು, ರೂಪಾನಗರದಿಂದ 3.5  ಕಿಮೀ ದೂರದಲ್ಲಿರುವ  ಸುವರ್ಣನಗರಕ್ಕೆ ನಡೆದರು. ತಂಪಾದ ವಾತಾವರಣದಲ್ಲಿ, ನಗರದ ಗೌಜಿ-ಗದ್ದಲಗಳಿದ ರಸ್ತೆಯಲ್ಲಿ ನಡೆಯುವುದು ಎಲ್ಲರಿಗೂ ಮುದ ಕೊಟ್ಟಿತು. ಹಕ್ಕಿವೀಕ್ಷಣೆಯ ಹವ್ಯಾಸದವರಿಗೂ ಸಾಕಷ್ಟು ಪಕ್ಷಿಗಳು ಕಾಣಸಿಕ್ಕಿದುವು. ಸುಮಾರು ಒಂದು ಗಂಟೆಗಳ ಕಾಲ ನಡೆದು ಸುವರ್ಣನಗರ ತಲಪಿದರು.

ಚಾಮುಂಡೇಶ್ವರಿ ಕ್ಷೇತ್ರ,ಸುವರ್ಣನಗರ


ಇನ್ನೂ ನಿರ್ಮಾಣದ ಹಂತದಲ್ಲಿರುವ , ಸುವರ್ಣನಗರ ಬಡಾವಣೆಯನ್ನು ಮೈಸೂರಿನ ದೀಪಾ ಗೃಹನಿರ್ಮಾಣ ಸಹಕಾರ ಸಂಘವು  ಸಜ್ಜುಗೊಳಿಸುತ್ತಿದೆ.  ಸದ್ಯಕ್ಕೆ ಇಲ್ಲಿ ಬಹುತೇಕ ಖಾಲಿ ನಿವೇಶನಗಳು. ನಿವೇಶನಗಳಿಗೆ ಹೊಂದಿಕೊಂಡಂತೆ ಹೊಲಗದ್ದೆ, ತೋಟಗಳಿವೆ. ಬೆಳಗಿನ ಜಾವ, ಮುಸ್ಸಂಜೆಯ  ಸಮಯದಲ್ಲಿ ನವಿಲು, ಮೊಲ ಮುಂಗುಸಿ ಇತ್ಯಾದಿ ಕಾಣಸಿಗುತ್ತವೆ. ಒಮ್ಮೆ ಚಿರತೆಯೂ ಬಂದಿತ್ತು ಎಂದು ಅಲ್ಲಿ ವಾಸಿಸುವ ಕಾವಲುಗಾರರು ತಿಳಿಸುತ್ತಾರೆ.

ಬಡಾವಣೆಯಲ್ಲಿ ನೂತನವಾಗಿ ಕಟ್ಟಲಾದ,  ಪುರಾತನ ಶೈಲಿಯಲ್ಲಿರುವ, ಸಂಪೂರ್ಣ ಶಿಲಾಮಯವಾದ ಚಾಮುಂಡೇಶ್ವರಿ ಕ್ಷೇತ್ರವು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.  ಲಭ್ಯ ಮಾಹಿತಿ ಪ್ರಕಾರ, 1500 ವರ್ಷಗಳ ಹಿಂದೆ ಅವಧೂತ ಪರಂಪರೆಯ ಋಷಿಯೊಬ್ಬರು  ‘ಗೋಹಳ್ಳಿಎಂದು ಕರೆಯಲ್ಪಡುವ ಜಾಗದಲ್ಲಿ, ಲಿಂಗಸ್ವರೂಪಿಯಾದ   ಚಾಮುಂಡೇಶ್ವರಿಯನ್ನು  ಸ್ಥಾಪಿಸಿ  ಸಣ್ಣ ಗುಡಿಯಲ್ಲಿಟ್ಟು ಆರಾಧಿಸಿದ್ದರು.   ಕಾಲಾನಂತರದಲ್ಲಿ ಆ ಗುಡಿಯು ನಿರ್ವಹಣೆ ಇಲ್ಲದೆ ಸೊರಗಿತ್ತುಮರವೊಂದರ ಕೆಳಗೆ ಇದ್ದ ಲಿಂಗವನ್ನು ಸ್ಥಳೀಯ ಗ್ರಾಮಸ್ಥರು ತಮ್ಮದೇ  ಶೈಲಿಯಲ್ಲಿ ಪೂಜಿಸುತಿದ್ದರು. ಮುಂದೊಂದು ದಿನ, ಹಾಸನದ ಕಡೆಯಿಂದ ಬಂದಬಸವದೇವರನ್ನು ಬಡಾವಣೆಗೆ ಬರಮಾಡಿಕೊಂಡು ಪ್ರಾರ್ಥಿಸಿದಾಗ, ಬಸವ ತೋರಿಸಿದ ಜಾಗದಲ್ಲಿ   ಅವಧೂತರ ಸಮಾಧಿ ಕಾಣಿಸಿತು.  ಬಸವಲಿಂಗಸ್ವರೂಪಿಯಾಗಿರುವ ಚಾಮುಂಡೇಶ್ವರಿಯ ಸುತ್ತಲೂ ಪ್ರದಕ್ಷಿಣೆ ಬಂದು ದೈವಿಕ ನೆಲೆಯನ್ನೂ ಗುರುತಿಸಿತ್ತು.   
.
2010 ರಲ್ಲಿ, ಇಲ್ಲಿ ಹೊಸ ಬಡಾವಣೆಯನ್ನು ನಿರ್ಮಿಸುವ ಸಲುವಾಗಿ ಕಾರ್ಯನಿರತವಾಗಿದ್ದ ಮೈಸೂರಿನ ದೀಪಾ ಗೃಹ ನಿರ್ಮಾಣ ಸಹಕಾರ ಸಂಘದ ತೀರ್ಮಾನದ ಫಲಶ್ರುತಿಯಾಗಿ, ಅದೇ ಸಂಘದ ಇನ್ನೊಂದು ಘಟಕವಾದ  ಶ್ರೀ ಗೋಕರ್ಣನಾಥೇಶ್ವರ ಟ್ರಸ್ಟ್ ನವರು ದೇವಾಲಯದ ನಿರ್ಮಾಣವನ್ನು ಆರಂಭಿಸಿದರುಮಂದಿರದ ನಿರ್ಮಾಣವು ಸಂಪೂರ್ಣವಾದ ಮೇಲೆ, 2018 ಎಪ್ರಿಲ್ ತಿಂಗಳಿನಲ್ಲಿ   ಬ್ರಹ್ಮಕಲಶೋತ್ಸವವನ್ನು ನೆರವೇರಿಸಿದರುಅಂದಿನಿಂದ ಇಲ್ಲಿ ದೇವತಾರಾಧನೆ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ.   ಸಂಪೂರ್ಣ ಶಿಲಾಮಯವಾದ  ದೇವಾಲಯದಲ್ಲಿ  ಚಾಮುಂಡೇಶ್ವರಿ, ಗಣೇಶ, ಸುಬ್ರಹ್ಮಣ್ಯ ಮತ್ತು ಆಂಜನೇಯರ  ಗುಡಿಗಳಿವೆ. ದೇವಸ್ಥಾನದ ಸುತ್ತಲೂ ವಿಶಾಲವಾದ ಪ್ರಾಂಗಣವಿದೆ. ಒಟ್ಟಿನಲ್ಲಿ, ಮೈಸೂರಿನ ಮಟ್ಟಿಗೆ ಬಲು ಅಪರೂಪ ಎನ್ನಬಹುದಾದ ಕರಾವಳಿ ಶೈಲಿಯ  ಮಂದಿರವಿದು.   

ದೇವಸ್ಥಾನ ತಲಪಿದ ಮೇಲೆ, ಎಲ್ಲರೂ ದೇವರ ದರ್ಶನ, ತೀರ್ಥ ಪ್ರಸಾದ ಪಡೆದುಕೊಂಡೆವು. ಇದೇ ಸಂದರ್ಭದಲ್ಲಿ  ಯೂಥ್ ಹಾಸ್ಟೆಲ್ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಜರ್ಮನಿಯ ರಿಚರ್ಡ್ ಶಿರ್ ಮನ್  ( Richard Schirrmann) ಅವರನ್ನು ಸ್ಮರಿಸಿ,ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದೆವು. ಯೂಥ್ ಹಾಸ್ಟೆಲ್ ನ ಮೂಲ ಉದ್ದೇಶ, ಪ್ರಥಮ ಹಾಸ್ಟೆಲ್ ಸ್ಥಾಪನೆ, ಭಾತರದಲ್ಲಿ ಮೊದಲ ಹಾಸ್ಟೆಲ್ ಮೈಸೂರಿನಲ್ಲಿ ಸ್ಥಾಪಿಸಿದ ಹಿರಿಮೆ ಇತ್ಯಾದಿ ಪ್ರಮುಖ ಘಟನೆಗಳನ್ನು ಶ್ರೀ ಪರಶಿವಮೂರ್ತಿ ಅವರು ಸಾದರಪಡಿಸಿದರು. ಶ್ರೀ  ಸೋಮಶೇಖರ್ ಹಾಗೂ ಶ್ರೀ ದತ್ತಕುಮಾರ್ ಅವರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಜೊತೆಗೆ ತಮ್ಮ ಒಡನಾಟದ ಸವಿನೆನಪುಗಳನ್ನು  ಮೆಲುಕು ಹಾಕಿದರು.

ಬೆಳಗಿನ ಉಪಾಹಾರಕ್ಕೆಂದು ಒಯ್ದಿದ್ದ ಇಡ್ಲಿ, ಚಟ್ನಿ, ವಡೆ, ಸಾಂಬಾರು, ಕೇಸರಿಭಾತ್ ಹಾಗೂ ದೇವಸ್ಥಾನದ ಪ್ರಸಾದವಾದ ಗುಡಾನ್ನ(ಬೆಲ್ಲದ ಅನ್ನ), ಎಲ್ಲರ ಹಸಿವನ್ನು ತಣಿಸಿದುವು.  ಆಗಲೇ ಬಿಸಿಲೇರುತ್ತಿತ್ತು. ತಂಡದ ಎಲ್ಲರೂ ಪುನ: ಅಂದಾಜು ಒಂದು ಗಂಟೆ ನಡೆದು ರೂಪಾನಗರಕ್ಕೆ ಬಂದಾಗ 11 ಗಂಟೆ ಆಗಿತ್ತು. ಆಮೇಲೆ ನಮ್ಮ ಮನೆಯಲ್ಲಿ ಶುಂಠಿ, ಕಾಳುಮೆಣಸು, ನಿಂಬೆಹಣ್ಣು, ಬೆಲ್ಲ ಸೇರಿಸಿದ  ‘ಕೊರೊನಾ ಸ್ಪೆಷಲ್’ ಪಾನಕವನ್ನು ಕುಡಿದು, ಅವರವರ ಮನೆ ಸೇರುವಲ್ಲಿಗೆ ಅರ್ಧ ದಿನದ ಪ್ರಕೃತಿ ನಡಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಕೊರೊನಾ ಸುದ್ದಿಗಳಿಂದ ಬೇಸರಗೊಂಡಿದ್ದ ಮನಸ್ಸುಗಳಿಗೆ, ಬಹಳ ದಿನಗಳ ಏಕತಾನತೆಯನ್ನು ಕಳೆದ ಈ ಚಿಕ್ಕ ಚೊಕ್ಕ ಈ ಪ್ರಕೃತಿ ನಡಿಗೆಯು  ‘ಸುವರ್ಣ ನಡಿಗೆ’ಯಂತೆ ಅನಿಸಿತಂತೆ. ಶ್ರೀ ಎಂ.ವಿ.ಪರಶಿವಮೂರ್ತಿ, ಶ್ರೀಮತಿ ಗೋಪಮ್ಮ ಹಾಗೂ ಡಾ.ರಮಾ.ವಿ ಅವರು ಈ ಸರಳ, ಸುಂದರ ಕಾರ್ಯಕ್ರಮವನ್ನು ಆಯೋಜಿಸಿದ್ದರು. 

ಆಸಕ್ತರಿಗಾಗಿ: ಸುವರ್ಣನಗರ ದೇವಸ್ಥಾನಕ್ಕೆ ಹೋಗುವ ದಾರಿ:
ಮೈಸೂರು ವರ್ತುಲ ರಸ್ತೆಯಲ್ಲಿ ಬೋಗಾದಿ ಜಂಕ್ಷನ್ ನಲ್ಲಿ, ಬೋಗಾದಿ-ಗದ್ದಿಗೆ ರಸ್ತೆಯಲ್ಲಿ ಮುಂದುವರಿಯುತ್ತಾ, ಸುಮಾರು 4  ಕಿ.ಮೀ  ಪ್ರಯಾಣಿಸಿದಾಗ, ರಸ್ತೆಯ ಬಲಬದಿಯಲ್ಲಿ ‘ಯಜಮಾನ್ ಫಾರಂ’ ಕಾನಿಸುತ್ತದೆ. ಅಲ್ಲಿಯೇ ಬಲಬದಿಯಲ್ಲಿ ತಿರುಗಿ, ದೇವಸ್ಥಾನಕ್ಕೆ ದಾರಿ ಸೂಚನಾ ಫಲಕಗಳನ್ನು ಅನುಸರಿಸಿದರೆ ‘ರೈನ್ ಬೋ ಪಬ್ಲಿಕ್ ಸ್ಕೂಲ್     ಸಮೀಪದಲ್ಲಿ ಸುವರ್ಣನಗರ ಬಡಾವಣೆ ಕಾಣಿಸುತ್ತದೆ. 

-ಹೇಮಮಾಲಾ.ಬಿ.

5 Responses

  1. Anonymous says:

    ಸಣ್ಣ ಚಾರಣವನ್ನೂ ಸಹ ಅಚ್ಚುಕಟ್ಟಾಗಿ ಸೂಗಸಾಗಿ
    ನಿರೂಪಣೆ ಮಾಡಿದ್ದೀರಿ ಅಭಿನಂದನೆಗಳು.
    ಸೋಮಶೇಖರ್

  2. ಬಿ.ಆರ್.ನಾಗರತ್ನ says:

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಹೇಮಾ.

  3. ನಯನ ಬಜಕೂಡ್ಲು says:

    ಎಲ್ಲಾ ಸ್ತಬ್ದವಾದಂತಹ ಬದುಕಲ್ಲಿ ಈ ಒಂದು ಬದಲಾವಣೆ ಮತ್ತೆ ಸ್ವಲ್ಪ ಮಟ್ಟಿನ ಉತ್ಸಾಹ ತುಂಬಿರಬಹುದು. ಮೈಸೂರ್ ಗೆ ಬಂದಾಗ ಈ ಜಾಗ ನೋಡಲೇ ಬೇಕು.

  4. ಶಂಕರಿ ಶರ್ಮ says:

    ಮೈಸೂರಿನಂತಹ ಮಹಾನಗರದಲ್ಲಿ ಇಂತಹ ಸೊಗಸಾದ ಐತಿಹಾಸಿಕ, ಆಧ್ಯಾತ್ಮಿಕ ಪರಂಪರೆಯುಳ್ಳ ಸುವರ್ಣ ನಗರದಲ್ಲಿಯ ಸುಂದರ ಶಿಲಾದೇಗುಲ ದರ್ಶನ ಮಾಡಿಸಿರುವಿರಿ. ಚಿಕ್ಕ ಚೊಕ್ಕ ಪ್ರವಾಸವು ಈ ಆತಂಕದ ದಿನಗಳಲ್ಲಿ ಮನಸ್ಸಿಗೆ ತುಸು ಆನಂದ, ಭರವಸೆ ತುಂಬುವುದರಲ್ಲಿ ಸಂಶಯವಿಲ್ಲ. ತುಂಬಾ ಸೊಗಸಾದ ನಿರೂಪಣೆ.. ಧನ್ಯವಾದಗಳು ಮಾಲಾರವರಿಗೆ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: