ಪುಸ್ತಕನೋಟ : ‘ಅಟ್ಟುಂಬೊಳದ ಪಟ್ಟಾಂಗ’

Spread the love
Share Button

ಶೈಲಜಾ ಪುದುಕೋಳಿ

ನಾನು ಓದಿದ ಪುಸ್ತಕ ಎಂಬ ಈ ಶೀರ್ಷಿಕೆಯ ಅಡಿಯಲ್ಲಿ ಬರೆಯಲು ಹೋದಾಗ ಹತ್ತು ಹಲವು ಹೊತ್ತಗೆಗಳು ಕಣ್ಣೆದುರು ಬಂದವು. ಸಾಹಿತ್ಯದ ಎಲ್ಲಾ ಪ್ರಕಾರಗಳು ನನಗೆ ಮೆಚ್ಚು. ಅವುಗಳಲ್ಲಿ ಲಲಿತ ಬರಹ ಹಾಗೂ ಅಂಕಣ ಬರಹಗಳು ಅಚ್ಚುಮೆಚ್ಚು. ನನ್ನ ಗುರುಗಳಾದ ಡಾ. ಮಹೇಶ್ವರಿ.ಯು  ಅವರ ಅಟ್ಟುಂಬೊಳದ ಪಟ್ಟಾಂಗವನ್ನು ಇಲ್ಲಿ ತೆರೆದಿಡೋಣವೆನಿಸಿತು. ಲಲಿತವಾದ ಹೃದ್ಯವಾದ ನಲುವತ್ತು ಚಿಕ್ಕಚಿಕ್ಕ ಬರಹಗಳ ಸಂಗ್ರಹವಿದು. ಮುನ್ನುಡಿ ಹೇಳಿದ ಅ. ನ. ಪೂರ್ಣಿಮ ಅವರ ನುಡಿಯಲ್ಲಿ ಹೇಳುವುದಾದರೆ “ಮೇಲ್ನೋಟಕ್ಕೆ ಗಂಭೀರವೆನಿಸಿದರೂ, ಅಟ್ಟುಂಬೊಳವನ್ನು ಹೊಕ್ಕ ಬಳಿಕ ತಮ್ಮ ಬರಹಗಳಲ್ಲಿ ಲಾಲಿತ್ಯವನ್ನೂ ಚಿಂತನೆಯನ್ನು ಯಥೇಚ್ಛ ಉಣಬಡಿಸುವ ಪಟ್ಟಾಂಗದ ಸವಿಯನ್ನು ಮತ್ತೆಮತ್ತೆ ಚಪ್ಪರಿಸಿದಂತಾಗುತ್ತದೆ.

ಈ ಅಟ್ಟುಂಬೊಳ ಎಂಬ ಪದವನ್ನು ಹೀಗೆ ವ್ಯಾಖ್ಯಾನಿಸಬಹುದು. ‘ಅಟ್ಟು ‘ ಎಂದರೆ ಹವ್ಯಕ ಭಾಷೆಯಲ್ಲಿ  ಅಡುಗೆ, ‘ ಉಂಬ ‘ ಎಂದರೆ  ಊಟ ಮಾಡುವ, ಒಳ ಎಂದರೆ ಕೋಣೆ ಎಂದರ್ಥ. ಹಿಂದೆ ಹಳ್ಳಿ ಮನೆಗಳ ಒಂದು ಭಾಗದಲ್ಲಿ ಅಡುಗೆ ಮಾಡುತ್ತಾ ಅಲ್ಲೇ ಉದ್ದಕ್ಕೆ ಪಂಕ್ತಿ ಹಾಕಿ ಊಟ ಮಾಡುವ ಕ್ರಮವಿತ್ತು. ಅಲ್ಲಿ ಮನೆ ಹೆಂಗಸರೂ ಅತಿಥಿ ಅಭ್ಯಾಗತ ಹೆಣ್ಮಕ್ಕಳು ಸೇರಿ ಪಟ್ಟಾಂಗ ಹೊಡೆಯುವ ತಾಣವಾಗಿತ್ತು.

ಇದರಲ್ಲಿ ಬರುವ ಎಷ್ಟೋ ಪಾತ್ರಗಳು ಅಷ್ಟೇ ಭಿನ್ನ ವ್ಯಕ್ತಿತ್ವದವರು. ಸಂಬಂಧ ಆಗಬೇಕಾದಂತೆ ಕರೆಯಲುಬಾರದ ಅಥವಾ ಹಿಂದೆಮುಂದೆ ನೋಡುವ, ಮುಜುಗರ ಪಡುವ ಈ ಕಾಲಘಟ್ಟದಲ್ಲಿ ದೊಡ್ಡಮ್ಮ, ಮಾಲತತ್ತೆ, ಶಾಂತತ್ತಿಗೆ, ಅಣ್ಣ, ದೊಡ್ಡಪ್ಪ, ಸರಸು ಅತ್ತೆ, ಸಣ್ಣಜ್ಜಿ, ಪುಟ್ಟಣ್ಣ, ದೊಡ್ಡಣ್ಣ, ಒಪ್ಪಣ್ಣ, ದೊಡ್ಡಕ್ಕ, ಸಣ್ಣಕ್ಕ, ಮೋನಪ್ಪಜ್ಜ, ಶಂಭಟ್ಟ ಮಾವ, ಮುದ್ದಣ್ಣ ಇತ್ಯಾದಿ ಸಂಬಂಧವಾಚಿ ಪದಗಳು ಆಪ್ಯಾಯಮಾನವೆನಿಸಿವೆ. ಕುಟ್ಟಪ್ಪ ಶೆಟ್ಟರು, ಸುಬ್ಬಣ್ಣ ಬಂಟ, ಟೀಚರ್, ಐಸಮ್ಮ, ಚೆಂಬರ್ಚಿ, ಚಿರ್ದೇಯಿ ಹೀಗೆ ಸಮಾಜದ ಎಲ್ಲ ವರ್ಗದ ಜನರು ಬರಹದೊಳಗೆ ಬರುತ್ತಾರೆ. ಇಲ್ಲಿ ಬಳಕೆಯಾದ ನೇರ್ಪಕೆ, ಕಟ್ಟಪ್ಪುಣಿ, ಅಸಬಡಿ, ಸೇಲೆಸೆಡವು, ಉಮಿಕ್ಕರಿ, ಮಾಳ, ತಪಲೆ, ಬೆಳ್ಳಕ್ಕೆ, ಪೋಕಾಲ, ಹರಿನಿರ್ಣಯ, ಸಿಬ್ಬಿಲು, ತಿನ್ನಾಣ, ಒಪ್ಪಕುಂಞಿ, ಮೆಟ್ಟುಗುಳಿ,  ಚದಿ, ಉಂಡ್ಲಕಾಳು, ಹೇಮಾರಿಸಿದ, ಉರುಟುವುದು, ಕೂಕೆ, ರಾವು, ಪಿಸುರು, ಪಿರ್ಕು, ಚಾಮ್ಬಾರು, ಹುಗ್ಗಾಟ, ಮಂಡಗೆ  ಇತ್ಯಾದಿ ಹವ್ಯಕ ಆಡುನುಡಿ ಪದಗಳು ಅಧ್ಯಯನಕಾರರಿಗೆ ಉಪಯುಕ್ತವಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ ಯೌವನಾದಿಗಳನ್ನು ಕಳೆದು ಮುಂದಕ್ಕೆ ಸಾಗುವಾಗ ಹಳೆಯ ನೆನಪುಗಳು ಒಂದಷ್ಟು ಅಳಿದು ಉಳಿಯುತ್ತವೆ. ಅದನ್ನು ದಾಖಲಿಸಿದವರು ಬಹು ವಿರಳ. ಕೆಲವು ಸಭೆ ಸಮಾರಂಭಗಳಿಗೆ ಹೋದಾಗ  ಸಿಕ್ಕಿದ, ಪುಸ್ತಕ ಪ್ರದರ್ಶನಗಳಿಂದ ಆಯ್ದು ಕೊಂಡವುಗಳಲ್ಲಿ ಕೆಲವು  ಓದಿಸಿಕೊಂಡ ನಂತರ  ಭದ್ರವಾಗಿ  ಕಪಾಟಿನೊಳಗೆ ಸೇರಿಬಿಡುತ್ತವೆ. ಆದರೆ ಓದಿಸಿಕೊಂಡು ಹೋಗುವ, ಮತ್ತೆ  ಓದಬೇಕೆನಿಸುವ  ಹೊತ್ತಗೆಗಳು ಕೆಲವು. ಅವುಗಳಲ್ಲಿ ಅಟ್ಟುಂಬೊಳದ ಪಟ್ಟಾಂಗವೂ ಒಂದು.

ಅಡುಗೆ ಮಾಡಿ ಊಟ ಮಾಡುವ ಕೋಣೆಯೊಳಗಿನ ಪಟ್ಟಾಂಗವೆಂದರೆ ಅಡುಗೆ ತಿಂಡಿಗಷ್ಟೇ ಸೀಮಿತವಲ್ಲವೆಂದು ಲೇಖಕಿಯೇ ಹೇಳುವಂತೆ ಅಲ್ಲಿ  ಹಲವು  ಲೋಕಾಭಿರಾಮದ, ಅನುಭವದ, ಚರ್ಚೆಯ ವಿಷಯವೂ, ಒಳ್ಳೆಯ ಮುಕ್ತಾಯವೂ ಇರಬಹುದು. ಈ ಪುಸ್ತಕದ ಮೊದಲ ಲೇಖನ ‘ರಂಗ ಬರಿದಾಗುವುದಿಲ್ಲ ‘ಆಸಕ್ತ ಎಳೆ ಪ್ರತಿಭೆಗಳನ್ನು ಬೆಳಕಿಗೆ  ತರುವಲ್ಲಿ ಹಿರಿಯರ ಕಾಳಜಿ ವ್ಯಕ್ತವಾಗುತ್ತದೆ. ‘ವಿನಮ್ರತೆಯ ಕಿರು ಹಣತೆ’ ಯಲ್ಲಿ ಹೆಸರಿಗಾಗಿ ನಾನಾ ಕೆಲಸಗಳನ್ನು ಮಾಡಿ ಗರ್ವದಿಂದ ಬೀಗುವ ಮಂದಿಯ ಬಗ್ಗೆ ಹೇಳುತ್ತಾರೆ. ಅಹಂಕಾರ ದರ್ಪಗಳು ಪುರಾಣೇತಿಹಾಸಗಳಲ್ಲೇ ಕೇಳಿ ಬರುವಂತಹದು. ಮಳೆಗಾಲದಲ್ಲಿ ದಾರಿ ಬದಿಯಲ್ಲಿ ಕಾಣುವ ಪುಟಾಣಿ ಹೂಗಳ ಬಣ್ಣ ವಿನ್ಯಾಸಗಳು ಸೃಷ್ಟಿಯ ಸೊಬಗಿನ ಹಾಡಿಗೆ ದನಿಗೂಡಿಸುತ್ತವೆ  ಎಂಬ ರೂಪಕವನ್ನು ಬಳಸಿಕೊಂಡಿದ್ದಾರೆ.

‘ದೊಡ್ಡಮ್ಮ ದೊಡ್ಡ ಬೆಳ್ಳಕ್ಕೆ ಹೋದದ್ದು ‘ ಹಳ್ಳಿ ಮನೆಯ ಪರಿಸರದ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಪಾರ್ವತಮ್ಮನ ಮಾತುಗಳಲ್ಲಿ ಹೆಣ್ಣು ಯಾರ ಹಂಗಿಲ್ಲದೆ ಜೀವನ ನಡೆಸಲು ಪರದಾಡುತ್ತ ಮತ್ತೆ ಹೇಗೋ ತನ್ನ ಕಾಲ ಮೇಲೆ ತಾನು ನಿಲ್ಲುವ ರೀತಿ ಒಂದು ಸಣ್ಣ ಕತೆಯನ್ನು ಹೋಲುತ್ತದೆ. ‘ಉಪಚಾರ’ದಲ್ಲಿ ಹೆಣ್ಣು ಹೆತ್ತವರ ಕಷ್ಟ ಬಿಂಬಿತವಾಗಿದೆ. ಪ್ರೀತಿ ಗೌರವ ಆದರಗಳು ಹೃದಯದಲ್ಲಿ ಹುಟ್ಟಬೇಕು, ಹೃದಯವನ್ನು ತಟ್ಟಬೇಕು. ಮಾತಿಲ್ಲದೆಯೂ ಅದನ್ನು ಸಾಧಿಸಬಹುದು. ಮಾತು ಹೇಳಿದ ಮಾತ್ರಕ್ಕೆ ಭಾವ ಇರಬೇಕೆಂದೇನೂ ಇಲ್ಲ. ಉಪಚಾರದ ತಾತ್ಪರ್ಯ ಈ ಮಾತಿನಲ್ಲಿದೆ. ಬಿರುನುಡಿಗಳ ಕಲುಮಳೆ – ಇತರರನ್ನು ಮಾತಿನ ಬಾಣಗಳಿಂದ ಚುಚ್ಚಿ ನೋಯಿಸುವ ಮಂದಿ ಪ್ರತಿ ಮನೆಯಲ್ಲೂ, ಸಮಾಜದಲ್ಲೂ ಇದ್ದಾರೆ. ಕೋತಿ ತಾನು ಕೆಡುವುದಲ್ಲದೆ ವನವನ್ನೂ ಕೆಡಿಸಿತು ಎಂಬಹಾಗೆ ಇತರರ ಸುಖವನ್ನೂ ಕಸಿಯುತ್ತಾರೆ. ಇಂತಹ ಮಂದಿಯನ್ನು ಬದಲಾಯಿಸಲು
ಸಾಧ್ಯವಿಲ್ಲ ಎಂಬುದನ್ನು ತಿಳಿಸುತ್ತದೆ. ಗಿರಿಜಾ ಟೀಚರ ಬಾಲಪಾಠ -ಈ ಬರಹದಲ್ಲಿ ರೆಂಜೆ ಹೂಗಳನ್ನು ಕಂಡಾಗ ಪುಟ್ಟಕ್ಕನಿಗೆ  ಗಿರಿಜಾ ಟೀಚರ ನೆನಪಾಗುವುದು. ಅಂದಿನ ಗುರು ಶಿಷ್ಯರ ನಡುವಿನ ಆತ್ಮೀಯ ಬಂಧ ಜೀವನಪರ್ಯಂತ ನೆನಪಲ್ಲಿ ಉಳಿಯುವಂತಹುದು. ಬಾಲ್ಯದಲ್ಲಿ ಓದಿದ ಶಾಲೆಯನ್ನು ಹಾಗೂ ದುಡಿಮೆಯ ಗೌರವವನ್ನು, ಸಾಂಘಿಕ ದುಡಿಮೆಯ ಸಂತೋಷವನ್ನು ಕಳಿಸಿದ ಜೀವನಪಾಠಗಳು ಪುಸ್ತಕ ಪಾಠಕ್ಕಿಂತ ಮಿಗಿಲು ಎನ್ನುವುದು ಗಮನಿಸಬೇಕಾದ ಅಂಶ. ಮನೆಯಲ್ಲೂ ಅಷ್ಟೇ ಒಂದಲ್ಲ  ಒಂದು  ಕೆಲಸದಲ್ಲಿ  ತಲ್ಲೀನರಾದಾಗ ಮಕ್ಕಳಿಗೆ ಉದಾಸೀನ  ಎಂಬ ಪದ ಹತ್ತಿರ ಸುಳಿಯದು. ಅತ್ತಿಗೆಯ ಮೂಡ್ ಆಫ್ ಆಗಿದ್ದಕ್ಕೆ ಕಾರಣ ಮುಂದಿನ ಬರಹ. ಗಂಡ ತನ್ನನ್ನು ಕೇಳದೆ ಒಂದು ದನ ತರಲು ಮಾತುಕೊಟ್ಟದ್ದು. ಮನೆಯೊಡತಿಯ ಅಭಿಪ್ರಾಯಕ್ಕೆ ಮಾನ್ಯತೆ  ಬೇಡವೇ? ಈ ಘಟನೆಯಿಂದ ನೊಂದುಕೊಂಡ  ಹೆಣ್ಣೊಬ್ಬಳು ಮಾತಿಲ್ಲದೆ ತನ್ನ ಕೆಲಸವನ್ನು ಮಾಡುತ್ತಾ ಅಸಹನೆಯನ್ನು ಹೊರಗೆಡಹುವುದು – ‘ಹೇಳಬೇಕಾದ  ಮಾತನ್ನು ಹೇಳಬೇಕಾದ ಹಾಗೆ ‘ ಇದರಲ್ಲಿ ಸಹಜವಾಗಿ ಬಿಂಬಿತವಾಗಿದೆ.

ಒಂದಷ್ಟು ತಂಪು ನೆನಪುಗಳು ಇದರಲ್ಲಿ ಮನೆಯಲ್ಲಿನ ಒಂದು ಬೆಕ್ಕು ನಾಪತ್ತೆಯಾಗುತ್ತದೆ. ಮತ್ತೆ ತನ್ನ ಮರಿಗಳೊಂದಿಗೆ ಹಿಂತಿರುಗುವಾಗ ಪಡುವ ಸಂಭ್ರಮ,  ಹಟ್ಟಿಯಲ್ಲಿ  ಕರು ಹುಟ್ಟಿದರೆ ಮಗುವಿನಂತೆ ಆರೈಕೆ ಮಾಡುವುದು,  ಹೆಸರಿಡುವುದು, ಪ್ರಾಯ ಸಂದ ಜಾನುವಾರುಗಳನ್ನು ಆಸ್ಥೆಯಿಂದ ನೋಡಿಕೊಳ್ಳುವ ರೀತಿ , ದನಗಳಲ್ಲಿ ಯಾರದಾದರೂ ಬಂದು ಕುಡಿದುಕೊಂಡು ಹೋಗಲಿ ಎಂದು ಬೇಸಗೆಯಲ್ಲಿ ನೀರು ಮುಗಿದಂತೆ ತುಂಬಿಡುವ ದೊಡ್ಡ ಗುಣವು ನೇಮಿಚಂದ್ರರ  ನೀರು ಕೊಡದ ನಾಡಿನಲ್ಲಿ ಎಂಬ ಬರಹ ನೆನಪಿಸುತ್ತದೆ. ಪತ್ರ ಪುರಾಣ ಇಂದು ಇ- ಮೇಲ್ , ದೂರವಾಣಿ, ಇಂಟರ್ನೆಟ್ ಸೌಲಭ್ಯದಿಂದ ಮಂದಿಗೆ ಈ ಪತ್ರ ಲೇಖನದ ಬಗ್ಗೆ ತಿರಸ್ಕಾರ ವಿರಬಹುದು. ಆದರೆ ಪತ್ರಲೇಖನದ ಒಂದು ಅನುಕೂಲತೆಯೆಂದರೆ ಎಷ್ಟು ಕಾಲದ ಬಳಿಕವೂ ಅವುಗಳನ್ನು ಓದಬಹುದು.

ಸುದ್ದಿಗಳು ಗತಕ್ಕೆ ಸೇರಿದರೂ ಭಾವ ಕೇವಲ ಗತವಾಗದೆ ವರ್ತಮಾನಕ್ಕೆ ಮಾರ್ಗದರ್ಶನ ನೀಡಬಲ್ಲವು,  ಮರೆಗೆ ಸಂದುಹೋದ ಸಂಬಂಧಗಳು ಪುನರುಜ್ಜೀವನ ಆಗಬಹುದು. ಹೀಗೆನ್ನುವಲ್ಲಿ ಪತ್ರಲೇಖನ ಮರೆಯಾಗುತ್ತಿರುವ ಬಗ್ಗೆ ಲೇಖಕಿಯ ಒಂದು ಆತಂಕ ಕಾಣಿಸುತ್ತದೆ. ಪುರಾಣ ಪಾತ್ರಗಳು ಬೀರುವ ಗಾಢವಾದ ಪ್ರಭಾವ ‘ಪುರಾಣ ಲೋಕ’ ಎಂಬ ಬರಹದಲ್ಲಿ ಕಾಣಿಸುವ ಅಂಶ. ಬಾಲ್ಯಕಾಲದ ಮುಗ್ಧತೆ ಎಂದೆನಿಸಿದರೂ ಅಂದಿಗೆ ದೊಡ್ಡ ವಿಷಯವೇ ಆಗಿರುವುದು, ಎಲ್ಲ ವ್ಯಕ್ತಿಗಳ ಜೀವನದಲ್ಲಿ ಘಟಿಸಿರುವುದು. ‘ಕೋಪ ಮಾಡುವುದು ‘ಎಂಬ ಶೀರ್ಷಿಕೆಯಡಿಯಲ್ಲಿ ಎಲ್ಲರ ಸಹಜ ಬುತ್ತಿಗಳಲ್ಲೂ ಇರುವ  ನೆನಪುಗಳನ್ನು ದಾಖಲಿಸಿದ್ದಾರೆ. ‘ಬೀಳ್ಕೊಡುಗೆ ಕ್ಷಣಗಳು’ ವೃತ್ತಿ ಜೀವನದಿಂದ ನಿವೃತ್ತಿ ಹೊಂದುವ ಸಂದರ್ಭದ ಅನಿವಾರ್ಯ ಮತ್ತು ಅನಿರ್ವಚನೀಯ ಗಳಿಗೆ. ಅದೇ ರೀತಿ ದೂರದೂರಿನ ತವರಿನಿಂದ ಬರುವ ಹೆಣ್ಣು ಮಗಳ ಆರ್ದ್ರ ಹೃದಯ ಹೆಣ್ಣಿಗಲ್ಲದೆ ಇನ್ಯಾರಲ್ಲಿದ್ದೀತು?   ‘ಮನೆ ತುಂಬುವುದು’ ನಮ್ಮಲ್ಲಿನ ಆಚರಣೆಗೆ ಸಂಬಂಧಿಸಿದ  ಲೇಖನ. ಗದ್ದೆಯಲ್ಲಿ ಬೆಳೆದ ಹೊಸ ಫಸಲನ್ನು ಒಳಗೆ ತರುವ ಸಂಭ್ರಮದ ದಿನ. ‘ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯ ಎದ್ದೊಂದು ಗಳಿಗೆ ನೆನೆದೇನು’ ಎಂಬ ಜನಪದ ಹಾಡಿನ ಸಾಲು ನೆನಪಿಗೆ ಬರುವುದು. ಮನೆಯ ಹಿರಿಯಾಕೆಯ ಜವಾಬ್ದಾರಿಯನ್ನು, ಒಂದು ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಣಬಡಿಸುವ ಅಥವಾ ದಾಟಿಸುವ ಕೆಲಸವನ್ನು ಮಾಡಿದ್ದಾರೆ.

‘ಹೆಸರು ತನ್ನಿ ‘- ಹೆಸರು ಬರಬೇಕು ಎಂಬುದು  ಮನುಷ್ಯನ ಮನೋಭೂಮಿಕೆ ಒಳಗಿನ ಮಾತು. ‘ಉಂಬಾಗ ಉಡುವಾಗ ಜಗವೆಲ್ಲ ನೆಂಟರು’ ಎಂಬ ಹಾಗೆ ಒಳ್ಳೆಯ ಹೆಸರು ಬಂದರೆ ಕುಟುಂಬ ಸಮಾಜ ಎಲ್ಲವೂ ಅವನ ಬೆನ್ನಿಗೆ ಇರುತ್ತದೆ. ಹೆಸರು ಮಾಡುವ ಮೋಹ ಅಡ್ಡ ದಾರಿಗೆ ಎಳೆಯುತ್ತದೆ ಎನ್ನುವ ವಾಸ್ತವ  ಸತ್ಯವಿದೆ. ‘ಒಂದು ಊರ ಗುಲಾಬಿ ಹೂ  ಮತ್ತೊಂದು ಬೆಣ್ಣೆಯ ಪ್ರಸಂಗ’- ಈ ಶಿರೋನಾಮೆ ಬಹಳ ವಿಚಿತ್ರವಾದದ್ದು. ಅವಿಭಕ್ತ ಕುಟುಂಬಗಳು ಒಟ್ಟಿಗೆ ಬಾಳುತ್ತಿದ್ದು ಸಂಸ್ಕಾರದ ಪಾಠ ಅಲ್ಲಿ ಉಚಿತವಾಗಿ ದೊರೆಯುತ್ತದೆ. ಲೇಖಕಿ ತಾನು ಕಂಡುಂಡ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ‘ಮಧ್ಯ ಪ್ರಸಂಗದ’ಲ್ಲಿ ಕುಡಿತದ ಚಟದಿಂದ ಇಡೀ ಕುಟುಂಬ ತೊಂದರಗೆ ಒಳಗಾಗುವುದನ್ನು ಚಿತ್ರಿಸಿದ್ದಾರೆ. ಕುಡಿತದ ಗೀಳಿಗೆ  ಹಲವಾರು ಕಾರಣಗಳಿರುತ್ತವೆ ಎಂಬುದನ್ನು ಮನೋವೈಜ್ಞಾನಿಕ ನೆಲೆಯಿಂದ  ಹೇಳುತ್ತಾರೆ. ಉಂಡಲಕಾಳು ಪ್ರಸಂಗದಲ್ಲಿ ರೇಡಿಯೋ ಕೂಡ ಮನೆಮನೆಯಲ್ಲಿ ಇಲ್ಲದ ಕಾಲದಲ್ಲಿ ಮಕ್ಕಳು ತಮ್ಮ  ಶಾಲೆಯಲ್ಲಿ ಕೊಟ್ಟ ಹೋಮ್ ವರ್ಕ್ ಮುಗಿಸಿ ಉಂಡ್ಲಕಾಳು ಎಂಬ ತಿಂಡಿ ಮಾಡುವ ಕಾರ್ಯದಲ್ಲಿ ಸಹಕರಿಸುವಂತೆ ಕೆಲಸ ಕೊಡುತ್ತಿದ್ದ ಬಾಲ್ಯದ ನೆನಪುಗಳಿವೆ. ಕೇವಲ ನಾಲ್ಕನೇ ತರಗತಿಯವರೆಗೆ ಓದಿದರೂ ಕಾವ್ಯಪ್ರಯೋಗ ಪರಿಣತಮತಿಯಾದ  ಸರಸು ಅತ್ತೆ ಕಾವ್ಯ ಕಟ್ಟುವ ನಿಪುಣೆ ಎನ್ನುತ್ತಾ ಉಂಡ್ಲಕಾಳು ಮಾಡುವ ವಿಧಾನದಿಂದ ತಿನ್ನುವವರೆಗೆ ಓದುಗರಿಗೆ ರುಚಿ ಹಿಡಿಸಿದೆ.

‘ಕೆಲಸ ನೇರ್ಪಕೆ  ಮಾಡು’, ಇದು ಮನೆಯ ಹಿರಿಯರೊಬ್ಬರ ಮಾತು. ಮಾಡುವ ಕೆಲಸದ ಬಗ್ಗೆ ತತ್ಪರತೆ ‘ಆ ಕೆಲಸದ ಪೂರ್ವಕಲ್ಪನೆ ಇದ್ದಲ್ಲಿ ಅದನ್ನು ಅಚ್ಚುಕಟ್ಟಾಗಿ ನಾವು ನಿರ್ವಹಿಸಬಹುದು. ಪ್ರತಿಯೊಂದು ಕೆಲಸವನ್ನು ಅರೆಬರೆ ಮಾಡಿ ರಗಳೆ ಮಾಡುವವರಿರುತ್ತಾರೆ. ಅಂತಹವರಿಗೆ ಇಲ್ಲಿನ ಸಣ್ಣಜ್ಜಿ  ಹೇಳುವ ಮಾತು ಈ  ಶೀರ್ಷಿಕೆ.  ‘ಅನಲಾ ಪ್ರಸಂಗ’ ಅಲ್ಲಿರುವುದು ಕುವೆಂಪುರವರ ರಾಮಾಯಣ ದರ್ಶನಂ ಕಾವ್ಯ ಭಾಗದ ವಿಚಾರ. ಕಾವ್ಯವಾಚನ ಮಾಡುತ್ತಿದ್ದ ಅಣ್ಣನನ್ನು ಲೇಖಕಿ ನೆನಪಿಸಿಕೊಳ್ಳುತ್ತಾರೆ.  ಸೀತಾಪಹರಣ ಮಾಡಿದ್ದು ಸರಿಯಲ್ಲವೆಂದು ವಿಭೀಷಣ ರಾವಣನಿಗೆ ಬುದ್ಧಿ ಹೇಳಿದ್ದರಿಂದ ದೂರ ಆಗುವ ಸನ್ನಿವೇಶ. ಆದರ ಅವನ ಮಗಳು ಅನಲೆ ರಾವಣನಿಗೆ  ಅಚ್ಚುಮೆಚ್ಚು. ದೊಡ್ಡಪ್ಪ ಮತ್ತು  ಅಪ್ಪ ಇವರ ನಡುವೆ ಹೃದ್ಯವಾದ ವಾತ್ಸಲ್ಯದ ತಂತು ಅನಲೆ.  ಕುವೆಂಪುರವರು ಹೆಣ್ಣುಮಗಳೊಬ್ಬಳಿಗೆ ನೀಡಿದ ಪ್ರಾಶಸ್ತ್ಯದ ಸೂಕ್ಷ್ಮ ಹೊಳಹಿದೆ. ‘ ಕಾರ್ಮಾರು ಸುಬ್ಬಣ್ಣ ಬಂಟರ ತಂಪು ನೆನಪು ‘ ಇದರಲ್ಲಿ ನಾಟಿ ವೈದ್ಯರ ಸೇವೆಯ ನೆನಪುಗಳಿವೆ. ನಡೆ-ನುಡಿ ಉಡುಪು ಎಲ್ಲವೂ ಸರಳ.

ನಮ್ಮ ಹಳ್ಳಿಗಳ ಜೀವಸತ್ವ ಇರುವುದು, ಇದ್ದದ್ದು ಅವರಂಥವರ ಅಂತಃಕರಣಪೂರಿತ ಹಿರಿಯ ಚೇತನಗಳಲ್ಲಿ. ಗೋ ತಳಿಗಳ ಸಂರಕ್ಷಣೆ ಪಶು ವೈದ್ಯಪದ್ಧತಿಯ ಉಳಿವಿನ ಬಗ್ಗೆ ಆಶಯ ವ್ಯಕ್ತವಾಗಿದೆ.  ‘ಹೊಸಜೀವನ ಅರಳಲಿ’ ಇದರಲ್ಲಿ ಸಂಧ್ಯ ಎಂಬವಳ ಮದುವೆ ತಯಾರಿಯನ್ನು ಹೇಳುತ್ತಾ ಹೆಣ್ಣು ಸಂಸಾರದ ಕಣ್ಣು ಎಂಬುದನ್ನು ಎಳೆಎಳೆಯಾಗಿ ತಿಳಿಸುತ್ತಾ ‘ಎಮ್ಮ ಮನೆಯಂಗಳದಿ’ ಎಂಬ ವಿ. ಸೀ ಅವರ ಪ್ರಸಿದ್ಧ ಹಾಡನ್ನು ನಿದರ್ಶನವಾಗಿ ನೀಡಿದ್ದಾರೆ.  ಸಹಬಾಳ್ವೆಯ ಆದರ್ಶವನ್ನು ಇಂದು ವ್ಯಕ್ತಿಹಿತದ ದಮನ ಎಂದು ತಿಳಿಯುವ ಕೆಲವು ಹೆಣ್ಣುಮಕ್ಕಳ ಮನೋಭಾವವನ್ನು ಖಂಡಿಸಿ ಇದರ ಜೊತೆಗೆ ಆಕೆಯ  ಕನಸುಗಳಿಗೆ ಪ್ರಾಮುಖ್ಯತೆ ಇಲ್ಲವೇ ಎಂಬ ತರ್ಕವಿದೆ. ಸಣ್ಣ ಸಂಗತಿಯೇ ಮುಂದೆ ದೊಡ್ಡ ಸಂಗತಿಯಾಗಬಹುದು ಎಂಬುದಕ್ಕೆ ನೀಡುವ ನಿದರ್ಶನ ‘ಸಣ್ಣ ಸಂಗತಿ’ ಯಲ್ಲಿದೆ ಮಕ್ಕಳನ್ನು ತಿದ್ದಿ ಬೆಳೆಸಬೇಕು. ಅದಕ್ಕಾಗಿ ಬೆದರಿಕೆ ಮಾತುಗಳು ಅವಶ್ಯಕ. ಶಾಲೆಯಲ್ಲಿ ಪೆನ್ಸಿಲ್ ರಬ್ಬರ್ ಎಗರಿಸಿ   ಹುಡುಗನ ತಪ್ಪನ್ನು ತಿಳಿದಾಗ ಬುದ್ಧಿ ಹೇಳಿ ಸರಿದಾರಿಗೆ ತರಬೇಕು.ಈ ಸಣ್ಣ ಸಂಗತಿ ಹಿಂದೆ ಬಹು ದೊಡ್ಡ ವಾಸ್ತವ ಸತ್ಯವಿದೆ.

ಇಸ್ತ್ರಿ ಹಾಕಿದ ಯೂನಿಫಾರಂ ಕಾಲುಚೀಲ ಧರಿಸಿ ಕೆಜಿಗಟ್ಟಲೆ ಪುಸ್ತಕಗಳನ್ನು ಬೆನ್ನಿಗೇರಿಸಿಕೊಂಡು ಅಥವಾ ವ್ಯಾನಿನಲ್ಲಿ ತುಂಬಿಕೊಂಡು ಶಾಲೆ- ಗೋಡುವ ಪುಟಾಣಿಗಳ ಅವಸ್ಥೆ ಹೇಳಲಸಾಧ್ಯ. ಅಂದಿನ ಹಾಗೂ ಇಂದಿನ ಮಕ್ಕಳನ್ನು ಹೋಲಿಸುತ್ತಾ ಬಾಲ್ಯದಲ್ಲಿ ಮಾಡುತ್ತಿದ್ದ ಕೆಲಸಗಳನ್ನು ಸ್ಮರಿಸುವಂತೆ ಇರುವುದು ನಮ್ಮ ಶಾಲೆಯ ದಾರಿ. ‘ಗೋಸ್ಬಾರಿಯವರು ‘ಎಂಬಲ್ಲಿ ದೊಡ್ಡಪ್ಪ  ಎಂಬ ವ್ಯಕ್ತಿಯ ಗುಣ ಸ್ವಭಾವವಿದೆ. ಒಟ್ಟಾರೆ ಹೇಗೋ ಮಾಡಿದರಾಯಿತು ಎಂಬಂತವರು ಮಾಡುವ ಕೆಲಸವನ್ನು ಒಂದು ಕ್ರಮದಲ್ಲಿ ಮಾಡಿದರೆ ಚೆಂದ. ಹಪ್ಪಳ, ಮಜ್ಜಿಗೆ ಹುಳಿ ಇತ್ಯಾದಿ ಮಾಡುವಲ್ಲಿ ತಾಯಿಯ ಶ್ರದ್ಧೆ ಜಾಗರೂಕತನದ ಚಿತ್ರಣವಿದೆ. ಕ್ರಿಕೆಟ್ v/s ತಲೆಮಾ-ದೇಶೀಯ ಜನಪದ ಕ್ರೀಡೆಗಳು ಕ್ರಿಕೆಟ್ ದೈತ್ಯ ನಿಂದಾಗಿ ಮಾಯವಾಗುತ್ತಿದೆ. ಟೋಪಿ ಆಟ, ಚೆಂಡಾಟ ಹುಲಿ ಕರು, ಕಾಗೆಗಿಳಿ, ತಲೆಮ ಹೀಗೆ ಹತ್ತು ಹಲವು ಗ್ರಾಮೀಣ ಆಟಗಳು ಇಂದು ಕಾಣೆಯಾಗುತ್ತಿರುವುದರ ಬಗ್ಗೆ ಖೇದವಿದೆ. ತಟ್ಟ ಮುಟ್ಟಿ, ಅವಲಕ್ಕಿ ದವಲಕ್ಕಿ, ಹುಗ್ಗಾಟ, ಬೇಸಾಯದ ಆಟ ಇತ್ಯಾದಿಗಳಿಂದ ಉಲ್ಲಾಸದ ಜೊತೆಗೆ ಪಾಠ ಸಿಗುತ್ತಿತ್ತು ಎಂಬ ಸಾಲುಗಳಲ್ಲಿ ಸತ್ಯಾಂಶವಿದೆ. ಜಾತ್ರೆಯ ಸೀಸನ್ ಬಂದಾಗ ಸಣ್ಣಕ್ಕನಂತಹ ಮುಗ್ದ ಜೀವಿಗಳಿಗೆ ಬಹಳ ಸಂಭ್ರಮದ ದಿನ. ಹಳ್ಳಿಯಲ್ಲಿ ಗೇರುಬೀಜ ದುಡಿದು ಉಳಿಸಿದ ಹಣದ ಒಂದು ಭಾಗ ಜಾತ್ರೆಯ ದಿನದ ಖರ್ಚಿಗಾಗಿ ಮೀಸಲಿಡುವ ವ್ಯಕ್ತಿಯೊಬ್ಬರ ಗುಣಸ್ವಭಾವವನ್ನು  ಹೇಳುತ್ತಾ ಇಂತಹ ಸಂಭ್ರಮದ ವಾತಾವರಣದಿಂದ ವಂಚಿತರಾಗುತ್ತಿರುವ ಇಂದಿನ ಪೀಳಿಗೆಯ ಬಗ್ಗೆ ಬೇಸರವಿದೆ. ಸಮಸ್ಯೆಗಳು ಎದುರಾದಾಗ ಕೈಕಾಲು ಬಿಡುವುದು ಸಾಮಾನ್ಯ. ಮನಸ್ಥಿತಿ ಹದಗೆಟ್ಟು ಹುಚ್ಚರಂತಾಗುತ್ತಾರೆ.  ಆದರೆ ಕೆಲವರು ಎಷ್ಟೇ ಕಷ್ಟ ಬಂದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಅಥವಾ ಉಪಯೋಗಿಸಿ ಪರಿಹಾರ ಕಂಡುಕೊಳ್ಳುತ್ತಾರೆ. ಇದಕ್ಕೆ ಮಹಾದೇವ ಉರುಫ್ ಮುದ್ದಣ್ಣ ಎಂಬ ಪಾತ್ರ ‘ಕೈ ಕಾಲು ಬಿಡುವುದು’ ಎಂಬ ತಲೆಬರಹದಲ್ಲಿ ಬರುತ್ತದೆ. ಅಟ್ಟುಂಬೊಳ ದಿಂದ ಆರಂಭವಾಗುವ ಕಾಯುವಿಕೆ ಮನೆಯ ನಾಯಿ, ಬೆಕ್ಕು, ಕರುವಿನಿಂದ  ಹಿಡಿದು ದೇಶ ಕಾಯುವ ಸೈನಿಕರು ಪುರಾಣ-ಇತಿಹಾಸಗಳ ನಿದರ್ಶನಗಳನ್ನು ನೀಡುತ್ತದೆ. ‘ನೆಟ್ಟ ಸಸಿ ಫಲ ಬರುವ ತನಕ ಶಾಂತಿಯ ತಾಳು ‘ಎಂಬ ದಾಸರಪದವನ್ನು  ನೆನಪಿಸುತ್ತದೆ.’ ಪಾರಂಪರಿಕ ವಿಧಾನಗಳು ಇದು ಅಟ್ಟುಂಬೊಳದಿಂದ ಸಣ್ಣಕ್ಕ ಜೋರಾಗಿ ಅಕ್ಕಿ ಡಿ . ಡಿ. ಟಿ  ವಾಸನೆ ಬರುತ್ತಿದೆ ಎಂದು ಜೋರಾಗಿ ಒದರುವುದರಿಂದ  ಆರಂಭವಾಗುತ್ತದೆ. ಆಹಾರ ವಸ್ತುಗಳು ಕೆಡಬಾರದೆಂದು ಬಳಸುವ ರಾಸಾಯನಿಕಗಳು  ಮನುಷ್ಯನನ್ನು ಕಾಯಿಲೆಯ ಗೂಡಾಗಿಸುತ್ತದೆ.

ನಮ್ಮ ಹಿರಿಯರು ಆಹಾರವಸ್ತುಗಳು ಕೆಡದಂತೆ ಸಂರಕ್ಷಿಸುವ  ವಿಧಾನವನ್ನು  ಅರಿತಿದ್ದರು ಎಂಬ ಸತ್ಯವನ್ನು ತಿಳಿಸುತ್ತಾ ಪಾರಂಪರಿಕ ಕೃಷಿಯನ್ನು ನೆನಪಿಸಿಕೊಂಡಿದ್ದಾರೆ. ಒಳಗೆ ನೋಡುವ ಆಟದಲ್ಲಿ ಏಕಾಗ್ರತೆಯನ್ನು ಹೇಳುವ ಮೂಲಕ ಆಧ್ಯಾತ್ಮ ವಿಚಾರ ಹೊಳಹುತ್ತದೆ. ಒಳಗಣ ಒಡೆಯ  ಇದ್ದಾಗ ಮಾತ್ರ ಅಲ್ಲಿ ಅಂತರಂಗದ ದೃಢತೆ ಇರುತ್ತದೆ. ಅವನನ್ನೇ ಗುಲಾಮನನ್ನಾಗಿಸಿದರೆ ಮಾತ್ರ ಒಳಗಿನ ಡಂಭಾಚಾರದ ವೈಭವ ಮುಗಿಯುತ್ತದೆ. ಮತ್ತೆ ಒಳಗಿನ ಕತ್ತಲೆ ಶರಣರು ಹೇಳಿದ ಅಂತರಂಗ, ದಾಸರು ಹೇಳಿದ ಮನಸ್ಸು ಎಂಬುದು ಅಟ್ಟುಂಬೊಳವೆ ಅಲ್ಲದೆ  ಇನ್ನೇನು?   ‘ ಏನಾಗಬೇಕು’ ನಮಗೆ ಯಾವ ವ್ಯಕ್ತಿಗಳು ಸಂಬಂಧದಲ್ಲಿ ಏನಾಗಬೇಕು ಎಂಬುದನ್ನು ಹೇಳುದರ ಕುರಿತಾಗಿದೆ.  ‘ಆಗಬೇಕು’ ಎಂಬ ಬಂಧುತ್ವದ ಎಳೆ ಇಲ್ಲದೆಯೂ  ಮನುಷ್ಯರಾಗಿ ಮನುಷ್ಯನಿಗೆ ಕಷ್ಟ ಸುಖಗಳಲ್ಲಿ ಒದಗ ಬಹುದಲ್ಲವೇ ಎಂಬಲ್ಲಿ ವಿಶ್ವಮಾನವತೆಯ ದೃಷ್ಟಿಕೋನವಿದೆ. ತನ್ನ ಓದುವ ಹಂಬಲವನ್ನು ಹವ್ಯಕ ಭಾಷೆಯಲ್ಲಿ ‘ರಾವು ‘ (ಆಸೆ ) ಎಂದು ಹೇಳಿಕೊಂಡ ಲೇಖಕಿ ಚಿಕ್ಕವಳಿದ್ದಾಗ ಉಪ್ಪರಿಗೆಯ ಮೆಟ್ಟಲಲ್ಲಿ ಕುಳಿತು ಸೀತಾಪರಿತ್ಯಾಗದ ಒಂದು ಸಂಭಾಷಣೆಯನ್ನು ಓದುತ್ತ ಓದುತ್ತ ಭಾವುಕರಾಗುತ್ತಿದ್ದರು. ಕತೆ ಕಾದಂಬರಿ ಓದುವುದು ಎಂದರೆ ಮಹಾ ಅಪರಾಧ ಎಂದು ಹಿರಿಯರು ತಿಳಿಯುತ್ತಿದ್ದ ಕಾಲ. ಕಾಟು ಕತೆ ಕಾದಂಬರಿ ಓದಿದರೆ ಫೈಲ್ ಆಗುತ್ತಾರೆ ಎಂಬ ಭ್ರಮೆಗೆ ಹಿರಿಯರು ಒಳಗಾಗಿದ್ದರು. ಆ ನಡುವೆಯೂ ಓದು-ಬರಹ ಕಲಿಕೆಯಲ್ಲಿ ತೊಡಗಿಸಿಕೊಂಡ ಸೌಜನ್ಯಳ ಪಾತ್ರ ಬಹಳ ಮಹತ್ವದ್ದು.

ಮುಂದಿನದು ಕರಾವಳಿಯ ದೇಶಿಯ ತಿಂಡಿ ನೀರುಂಡೆಯ ರುಚಿಯನ್ನು ಬಿಚ್ಚಿಟ್ಟು ತಿಳಿಸುವ ಲೇಖನ ‘ನೀರುಂಡೆಯೂ ಅಮ್ಮನ ಚೊಚ್ಚಲ ಬಯಕೆಯೂ’.  ‘ಅನ್ನದಾತನ ಒಡಲಧ್ವನಿಯೇ  :ಅನ್ನದಾತನ ನೆನೆದು.’ ಸಾಲಮನ್ನಾಗಳೆಂಬ ತಾತ್ಕಾಲಿಕ ಉಪಕ್ರಮಗಳಿಂದ   ಭರವಸೆ  ಕಳೆದುಕೊಂಡ ರೈತರ ಸಮಸ್ಯೆ ನಿವಾರಣೆಯಾಗದೆಂದು  ನಿರಾಸಕ್ತಿಯಿಂದ ಕೃಷಿಕರ ಮಕ್ಕಳು ಪಟ್ಟಣದತ್ತ ಮುಖ ಮಾಡುತ್ತಾರೆ. ಇವರು ಮತ್ತೆ ಕೃಷಿಗೆ ಹಿಂದಿರುಗಬೇಕು ಎಂಬ ಆಶಯ ಒಂದೆಡೆ,  ಕೃಷಿಯನ್ನು ನೆಚ್ಚಿದವನಿಗೆ ಹೆಣ್ಣು ಸಿಗುವುದಿಲ್ಲ  ಎಂಬ ಆತಂಕ ಇನ್ನೊಂದೆಡೆ. ಅನ್ನದಾತನ ಬದುಕಿಗೆ ಬಂದ ಕಷ್ಟ ಎಲ್ಲರ ಬದುಕಿಗೆ ಬಂದಂತೆ ಎನ್ನುವ ಸತ್ಯ ದಟ್ಟವಾಗಿದೆ. 2020ರ ವೇಳೆಗೆ ಜನಸಂಖ್ಯೆಯಲ್ಲಿ ನಂಬರ್1 ಸ್ಥಾನದ ಮುಳ್ಳಿನ ಕಿರೀಟವನ್ನು ಭಾರತ ಧರಿಸಲಿರುವುದೆಂಬ  ಎಂಬ ಆತಂಕದ ಬರಹ ‘ಕೊಳ್ಳುಬಾಕತನ ‘. ಸರಳ ಜೀವನ ಮತ್ತು ಉನ್ನತ ಚಿಂತನೆ  ಭಾರತೀಯರ ಬದುಕಿನ ಆದರ್ಶವಾಗಿತ್ತು. ಇದು ಶೀಘ್ರ ವಾಗಿ ಮರೆಯಾಗುತ್ತಿದೆ ಎಂಬ ಖೇದ ಇಲ್ಲಿದೆ.

ನಾಲ್ಕು ದಶಕಗಳ ಹಿಂದಿನ ಘಟನೆ ಯಲ್ಲಿ ಬರುವ ವ್ಯಕ್ತಿಗಳಾದ ಚಿರ್ದೇಯಿ  ಅವಧೂತನಂತೆ ಬರುತ್ತಿದ್ದ ನಾರಾಯಣಭಟ್ಟ ಎಲ್ಲ ಸಮಾರಂಭಗಳಲ್ಲಿ ಹಾಜರಿರುತ್ತಿದ್ದ ಮರಳು ಕಿಟ್ಟ ಇವರ ಬಾಳಿನ ಬೇಗೆಯ ಬಗ್ಗೆ ಯಾರು ಯೋಚಿಸಿದ್ದರು? ಎಂಬಲ್ಲಿ ವಿಶ್ವಕುಟುಂಬಿಯ ಪ್ರಶ್ನೆ ಇದೆ. ‘ಎಷ್ಟು ಹಳಮೆಯ ಈ ಬುವಿ ‘ಎಂಬ ಶೀರ್ಷಿಕೆಯಡಿಯಲ್ಲಿ ಇಂದಿನ ವಿದ್ಯಮಾನಗಳನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.  ‘ಎಷ್ಟು ಹಳಮೆಯ ಈ ಭುವಿಯು ಎಷ್ಟೊಂದು  ಜೀವಿಗಳ ಅಕ್ಕರೆಯ ಮಡಿಲು !  ಸಸ್ಯರಾಜಿಗಳ  ನದಿನದಗಳ ತಂಪಿನೊಡಲು. ಪುಟ್ಟಪುಟ್ಟ ಜಂತುಗಳು  ಪ್ರಾಣಿ ಪಕ್ಷಿಗಳು ನೀರಾನೆ ಕಾಡಾನೆ ಅಬ್ಬಬ್ಬ  ಎಣಿಸಿ ಮುಗಿಯುವುದುಂಟೆ?  ಎಲ್ಲದಕ್ಕೂ ಉಂಟು ತಾಯಿಯ ಮಡಿಲು. ಮನುಷ್ಯನೆಂಬ ಪ್ರಾಣಿ ಹುಟ್ಟಿ ಬಂದದ್ದೇ ಮೊನ್ನೆ ಮೊನ್ನೆ . ಕಾಡಿದ್ದದ್ದು ನಾಡಾಯಿತು, ಅಡವಿ ಊರಾಯಿತು,  ಊರು ಪಟ್ಟಣ ವಾಯಿತು, ನಗರ ಮಹಾನಗರವಾಯಿತು. ಬಿರಿದು ಬಾಯಿಬಿಟ್ಟು ಉಕ್ಕಿಹರಿದು ಸುನಾಮಿಯಾಗಿ ಅಪ್ಪಳಿಸಿ ಎಷ್ಟು ಸಲ ನೆನಪಿಸಿದಳು ಆ ತಾಯಿ. ಒಬ್ಬರನ್ನೊಬ್ಬರು ಕೊಂದು ಕಳೆವ ಕೊಲೆ ಹಬ್ಬಕ್ಕೆ ಕೊನೆಯಾದರೂ ಎಂದು? ‘ ಎಂದು ಹಪಹಪಿಸುತ್ತಾರೆ. ಇಷ್ಟು ಹಳಮೆಯ ಬುವಿಗೆ ಯೋಗ್ಯರಾಗಿ ನಾವು ಬಾಳುವುದೆಂತು?  ಎಂದು ಪ್ರಶ್ನಿಸಿ ಕೊಳ್ಳುತ್ತಾರೆ.

ಪ್ರತಿಯೊಂದು ಉದಯದಲ್ಲಿ ಶುಭದ ನಿರೀಕ್ಷೆಯಿಟ್ಟುಕೊಂಡು ದಿನದಿನದ ಬಾಳುವೆಗೆ ಸಜ್ಜಾಗುವ ಲೇಖನ ‘ಸುಪ್ರಭಾತವೂ  ಉದಯರಾಗವೂ ‘ಅಟ್ಟುಂಬೊಳದ ಪಟ್ಟಾಂಗದ ಕೊನೆಯಲ್ಲಿ ರುಚಿಕರವಾದ ಊಟವನ್ನು ತಟ್ಟೆ ನೆಕ್ಕಿ ಉಂಡು   ಅವರವರ ಕೆಲಸಗಳಿಗೆ ಹೋಗುವಂತೆ ಇರುವ ಬರಹವೇ  ‘ಕೊನೆಯ ಸಿಪ್ ‘. ಒಟ್ಟಾರೆಯಾಗಿ ಹೇಳುವುದಾದರೆ ಡಾ.ಯು ಮಹೇಶ್ವರಿಯವರ  ಅಟ್ಟುಂಬೊಳದ ಪಟ್ಟಾಂಗ ಒಂದು ಓದಲೇಬೇಕಾದ ಕೃತಿಯಾಗಿದ್ದು ನಮ್ಮನ್ನು ಬಾಲ್ಯದ ನೆನಪುಗಳಲ್ಲಿ ಮಿಂದೇಳಿಸುತ್ತದೆ.

-ಶೈಲಜಾ ಪುದುಕೋಳಿ

7 Responses

 1. Avatar ನಯನ ಬಜಕೂಡ್ಲು says:

  ಚಂದದ ಪುಸ್ತಕ ಪರಿಚಯ. ಬಹಳಷ್ಟು ಬಾರಿ ಇಂತಹ ಪುಸ್ತಕಗಳು ಇವೆ ಎಂದೇ ಗೊತ್ತಾಗುವುದಿಲ್ಲ, ಈ ರೀತಿ ಕೃತಿಯನ್ನು ಪರಿಚಯಿಸುವುದರಿಂದ ಓದಿನ ದಾಹ ಇರುವ ಮಂದಿಗೆ ಪುಸ್ತಕ ಕೊಳ್ಳಲು ಸಹಾಯಕ.

 2. Hema Hema says:

  ‘ಅಟ್ಟುಂಬೊಳದ ಪಟ್ಟಾಂಗ’ದ ಪುಸ್ತಕ ಪರಿಚಯ ಸೊಗಸಾಗಿದೆ. ನನಗೆ ಓದಬೇಕೆನಿಸಿದೆ. ಈ ಪುಸ್ತಕ ಎಲ್ಲಿ ಸಿಗುತ್ತದೆ ತಿಳಿಸುವಿರಾ?

 3. Avatar ಶಂಕರಿ ಶರ್ಮ says:

  ಹವ್ಯಕ ಭಾಷೆ ಮೊದಲಿನ ಶುದ್ಧತೆಯನ್ನು ಉಳಿಸಿಕೊಂಡಿಲ್ಲದಿರುವುದು ನಿಜ. ಎಷ್ಟೋ ಶಬ್ದಗಳು ಬಳಕೆಯಲ್ಲಿ ಮರೆಯಾಗಿ ಈಗ ಕನ್ನಡ ಇಂಗ್ಲಿಷ್ ಬೆರಕೆಯ ಅವಿಲು ಆಗಿಬಿಟ್ಟಿದೆ. ಚಂದದ, ಅಪರೂಪದ
  ಪುಸ್ತಕವೊಂದರ ಸೊಗಸಾದ ವಿಮರ್ಶಾತ್ಮಕ ವಿಮರ್ಶೆ…ಧನ್ಯವಾದಗಳು ಮೇಡಂ.

 4. Avatar ಪಾರ್ವತಿಕೃಷ್ಣ. says:

  ಪುಸ್ತಕವಿಮರ್ಶೆ ಓದಿ ಆ ಪರಿಸರದಲ್ಲೇ ಬೆಳೆದ ನಾನು ಆ ಕಾಲದ ಪೆರಡಾಲವನ್ನು ಅನುಭವಿಸಿದೆ. ಇಂದಿಗೂ ನನ್ನ ಪಟಾಲಂ (ಒಡಹುಟ್ಟುಗಳು)ಸೇರಿದಾಗ ಇಲ್ಲಿ ಬರುವ ಕಿಟ್ಟಣ್ಣ ನಾರಾಯಣಭಟ್ಟರು ನೆನಪಾಗುತ್ತಾರೆ.ನಾರಾಯಣಭಟ್ಟರನ್ನು ಹಾಡುವಂತೆ ಕೇಳಿಕೊಂಡು ಸದಾ ಅವರ ಜತೆಇರುತ್ತಿದ್ದ ದೊಡ್ಡ ಕಟ್ಟದ ಮೇಲೆ ಕುಳಿತು ಆಲಿಸುತ್ತಿದ್ದ ತಮ್ಮನನ್ನು ಕೆಣಕುತ್ತೇವೆ.ಧನ್ಯವಾದಗಳು.

 5. ಮೆಚ್ಚುಗೆಗೆ ಧನ್ಯವಾದಗಳು

 6. Avatar .ಮಹೇಶ್ವರಿ.ಯು says:

  ಪುಸ್ತಕವನ್ನು ಪ್ರೀತಿಯಿಂದ ಪರಿಚಯಿಸಿದ ಅಕ್ಕರೆಯ ಶೈಲಜೆಗೂ ಪುಸ್ತಕದ ಬಗ್ಗೆ ಒಲವನ್ನು ತೋರಿದ ಎಲ್ಲ ಸೋದರಿಯರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.ಸುರಹೊನ್ನೆಯ ಹೇಮಮಾಲ ಅವರಿಗೆ ಕೃತಜ್ನತೆಗಳು

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: