ಗುರು ವಂದನೆ

Share Button

ಸಹಜವಾಗಿ ನಡೆಯುತ್ತಿದ್ದ ಪ್ರಪಂಚದ ಚಟುವಟಿಕೆಗಳೆಲ್ಲಾ ಭೀಕರ ಅಂಟುಜಾಡ್ಯ ಕೊರೋನದಿಂದಾಗಿ ಒಂದು ರೀತಿಯಲ್ಲಿ ಸ್ತಬ್ಧವಾಗಿದೆ ಎನ್ನಬಹುದು. ಆದರೂ  ಕಾಲಚಕ್ರವೇನೂ ನಿಲ್ಲಲಾರದಲ್ಲವೇ?  ಎಲ್ಲಾ ಮುಖ್ಯ ದಿನಗಳಂತೆ ಬಂದೇ ಬಿಟ್ಟಿದೆ; ಎಲ್ಲರಿಗೂ ಅತ್ಯಂತ ಪ್ರೀತಿಯ ದಿನ.. ಶಿಕ್ಷಕರ ದಿನ..ನಮ್ಮೆಲ್ಲಾ ಗುರುಗಳಿಗೆ ವಂದಿಸುವ ದಿನ.

ಇಂದಿನ ಮಕ್ಕಳೇ ಮುಂದಿನ ಜನಾಂಗವೇನೋ ನಿಜ. ಆದರೆ ಅವರನ್ನು ತಿದ್ದಿ ತೀಡಿ ಉತ್ತಮ ಗುಣಶೀಲರಾದ ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕ ಶಿಕ್ಷಕಿಯರ ಪಾತ್ರ ಅತ್ಯಂತ ಹಿರಿದು. ಅದಕ್ಕಾಗಿ ಅತ್ಯುತ್ತಮ ಗುರುಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವುದು ಕೂಡಾ ಬಹಳ ಮುಖ್ಯವೆನಿಸಿದೆ. ಅಲ್ಲದೆ, ಪುರಾತನ ಕಾಲದಲ್ಲಿಯೇ ಗುರುವಿನ ಸ್ಥಾನವು ಬಹು ಪೂಜನೀಯವಾಗಿದೆ. ಧಾರ್ಮಿಕ ಪದ್ಧತಿಯಲ್ಲಿ ಗುರು ಪೂರ್ಣಿಮದ ದಿನದಂದು ಗುರುನಮನ ಕಾರ್ಯಕ್ರಮದಲ್ಲಿ ಶಿಷ್ಯ-ಶಿಷ್ಯೆಯರು ತಮ್ಮ ತಮ್ಮ ಗುರುಗಳಿಗೆ ವಂದಿಸಿ ಅವರ ಆಶೀರ್ವಾದ ಪಡೆಯುವರು.

1994ನೆಯ ಇಸವಿಯಲ್ಲಿ ಯುನೆಸ್ಕೊವು ಜಾಗತಿಕ ಮಟ್ಟದಲ್ಲಿ, ಅಕ್ಟೋಬರ 5ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸಲು ಪ್ರಾರಂಭಿಸಿತು. ಆ ದಿನದಂದು ವಿಶ್ವ ಮಟ್ಟದಲ್ಲಿ ಗುರುಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುತ್ತದೆ. ನಮ್ಮ ದೇಶದ ಮೊದಲನೆಯ ಉಪರಾಷ್ಟ್ರಪತಿ ಹಾಗೂ ಎರಡನೆಯ ರಾಷ್ಟ್ರಪತಿಗಳಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ ಅವರು ಶಿಕ್ಷಕರ ಬಗ್ಗೆ ಉನ್ನತ ಪೂಜನೀಯಭಾವ ಹೊಂದಿದ್ದರು. ಉನ್ನತ ಧ್ಯೇಯ, ಆಲೋಚನೆಗಳಿರುವ ಅಧ್ಯಾಪಕನು ನಿಜವಾದ ಅರ್ಥದಲ್ಲಿ ಅಧ್ಯಾಪಕನೆನಿಸಿಕೊಳ್ಳುವನೆಂದು ತಿಳಿದಿದ್ದ ಅವರು ತಮ್ಮ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನಾಗಿ ಆಚರಿಸಲು 1962ನೇ ಇಸವಿಯಲ್ಲಿ ಕರೆನೀಡಿದರು. ಅಂತೆಯೇ ಈ ದಿನದಂದು ಗುರು ಶಿಷ್ಯ ಸಂಬಂಧವು ಬಲಗೊಳ್ಳಲು ಪೂರಕವಾಗುವಂತೆ  ದೇಶದೆಲ್ಲೆಡೆ ಶಿಕ್ಷಕರ ದಿನವನ್ನು ಉತ್ಸಾಹದಿಂದ ಆಚರಿಸಲ್ಪಡುತ್ತದೆ… ರಾಷ್ಟ್ರಮಟ್ಟದಲ್ಲಿ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುತ್ತದೆ.

ನಾನು ವೃತ್ತಿಯಲ್ಲಿ ಶಿಕ್ಷಕಿಯಲ್ಲದಿದ್ದರೂ ನಿವೃತ್ತಿಯ ಬಳಿಕ ಅನಾಥಾಶ್ರಮ, ಗುರುಕುಲದ ಮಕ್ಕಳಿಗೆ ಪಾಠಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರಿಂದ ಮಕ್ಕಳ ಒಡನಾಟವು ಮನಸ್ಸಿಗೆ ಖುಷಿಕೊಡುತ್ತಿತ್ತು. ಇಂದಿನ ದಿನಗಳ ಈ ವಿಷಮ ಪರಿಸ್ಥಿತಿಯಿಂದಾಗಿ ಅದು ಕೂಡಾ ನಿಂತು ಹೋಗಿದೆ. ಸ್ವಲ್ಪ ಸಮಯದ ಹಿಂದೆ ನಾನು ಕಲಿತ ವಿದ್ಯಾಸಂಸ್ಥೆಯಲ್ಲಿ; ಕೇಂದ್ರ ಶಿಕ್ಷಣ ಪದ್ಧತಿಯನ್ನು ಅಳವಡಿಸಿರುವ ತರಗತಿಗಳನ್ನು ಪ್ರಾರಂಭಿಸಲು ಯೋಜನೆ ಸಿದ್ಧಪಡಿಸಿದರು, ಸಂಸ್ಥೆಯ ಆಡಳಿತ ಮಂಡಳಿಯವರು. ಹೊಸ ವಿಭಾಗದ ಆಡಳಿತ ಮಂಡಳಿಯ ಸದಸ್ಯಳಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದುದು, ಶಿಕ್ಷಣಕ್ಷೇತ್ರದೊಂದಿಗೆ ನನ್ನ ಬಂಧವನ್ನು ಬೆಸೆಯುವ ಕೊಂಡಿಯಾಯಿತು ಎನ್ನಬಹುದು.

(ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ)

ಶಾಲೆಯೊಂದು ಆರಂಭವಾಗಬೇಕಾದರೆ ಅದಕ್ಕೆ ಶಿಕ್ಷಕರ ಅಗತ್ಯವಿದೆ. ಅವರ ನೇಮಕಾತಿಗಾಗಿ ಅಭ್ಯರ್ಥಿಗಳನ್ನು ಕರೆದು ಪರೀಕ್ಷೆ ನಡೆಸಿ, ಅದರಲ್ಲಿ ಆಯ್ಕೆಯಾದವರಿಗೆ ಮೌಖಿಕ ಪರೀಕ್ಷೆ  ಮತ್ತು ಸಂದರ್ಶನ  ನಡೆಸಲಾಗುವುದು. ಈ ಸಂದರ್ಶನವನ್ನು ಆಡಳಿತ ಮಂಡಳಿಯವರು ನಡೆಸಬೇಕಾಗಿತ್ತು. ಅದರಲ್ಲಿ ನಾನೂ ಒಬ್ಬಳಾಗಿ ಇದ್ದುದರಿಂದ ಹೊಸ ಅನುಭವ ಪಡೆಯಲು ಅವಕಾಶ ಒದಗಿ ಬಂತು. ಆ ದಿನವಂತೂ, ನಾನು ಸಂದರ್ಶನ ನಡೆಸುವವಳಾಗಿದ್ದರೂ, ನಾನೇ ಸಂದರ್ಶನಕ್ಕೆ ಹಾಜರಾಗುವವಳೆಂಬಂತೆ ಆತಂಕದಲ್ಲಿದ್ದೆ. ನನ್ನೊಂದಿಗಿದ್ದ ಉಳಿದ ಸದಸ್ಯರು ಶಿಕ್ಷಣ ಕ್ಷೇತ್ರದಲ್ಲಿ ಪರಿಣಿತರಾಗಿದ್ದರು. ಅಭ್ಯರ್ಥಿಗಳ ಪಟ್ಟಿ ನೋಡುವಾಗಲೇ ಗಾಬರಿಯಾಯ್ತು… ಎಲ್ಲರೂ ಉನ್ನತ ಪದವಿ ಪಡೆದವರಾಗಿದ್ದರು. ಅಂತೂ ಧೈರ್ಯದ ಮುಖವಾಡ ಹಾಕಿಕೊಂಡು ಕುಳಿತಿದ್ದೆ. ಹವ್ಯಾಸಕ್ಕಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದುದು ಇಲ್ಲಿ ಸ್ವಲ್ಪ ಉಪಯೋಗಕ್ಕೆ ಬಂದಿತು ಎಂದುಕೊಂಡರೂ;  ಅದು ಏನೇನೂ ಆಗಿರಲಿಲ್ಲ ಎಂಬುದು ಮನವರಿಕೆಯಾದಾಗ ನಿಜವಾಗಿಯೂ ಸ್ವಲ್ಪ ಭಯವಾಯಿತು.

ಅಭ್ಯರ್ಥಿಗಳಲ್ಲಿ ಅಗತ್ಯದ ಪ್ರಶ್ನೆಗಳನ್ನು ಕೇಳುವುದು ನಡೆದಿತ್ತು. ನಾನು ಎಲ್ಲವನ್ನೂ ಗಮನಿಸುತ್ತಾ ಕುಳಿತು, ಸಾಂದರ್ಭಿಕವಾಗಿ ಒಂದೆರಡು ಪ್ರಶ್ನೆಗಳನ್ನು ಕೇಳಿದ್ದೂ ಆಯ್ತು. ಕೆಲವರು ಗಾಬರಿಯಲ್ಲಿ ತಡಪಡಿಸುವುದು ಕಂಡಾಗ ಪಾಪ ಎನ್ನಿಸುತ್ತಿತ್ತು. ಒಬ್ಬಳಲ್ಲಿ ಅವಳ ತಂದೆಯವರ ಹೆಸರು ಕೇಳಿದ ಬಳಿಕ ವಿವೇಕಾನಂದರ ತಂದೆಯವರ ಹೆಸರು ಕೇಳಿದರು. ಅಭ್ಯರ್ಥಿ ಮೊದಲೇ ಗಾಬರಿಯಲ್ಲಿದ್ದವರು ಥಟ್ಟನೆ ಅವರ ತಂದೆಯ ಹೆಸರನ್ನೇ ವಿವೇಕಾನಂದರ ತಂದೆಯ ಹೆಸರಾಗಿ ಹೇಳಿದಾಗ, ಗಂಭೀರವಾಗಿ ನಡೆಯುತ್ತಿದ್ದ ಸಂದರ್ಶನದಲ್ಲಿ, ಒಮ್ಮೆಲೇ ಎಲ್ಲರಲ್ಲೂ ನಗೆಯು ಸ್ಫೋಟಗೊಂಡಿತ್ತು… ಅಭ್ಯರ್ಥಿಯೂ ಸೇರಿ! ಮುಂದಕ್ಕೆ ಸಾವಧಾನವಾಗಿ ಪ್ರಶ್ನೆಗಳು ಮುಂದುವರಿದರೂ ನನಗೆ ಉಕ್ಕಿ ಬರುತ್ತಿದ್ದ ನಗೆಯನ್ನು ತಡೆದುಕೊಳ್ಳಲು ಸ್ವಲ್ಪ ಕಷ್ಟವಾಯಿತು!

ಇನ್ನೊಬ್ಬರು ಅಭ್ಯರ್ಥಿಗಳಿಗೆ ಆಂಗ್ಲ ಭಾಷೆಯ ಪಾಠ ಮಾಡುವುದಿತ್ತು. ಪುಟ್ಟ ಮಕ್ಕಳಿಗೆ ಪಾಠ ಮಾಡುವಂತೆ ಹಾವಭಾವಯುಕ್ತವಾಗಿ  ಎಷ್ಟು ಚೆನ್ನಾಗಿ ಅವರು ಪಾಠ ಮಾಡಿದರೆಂದರೆ ಅವಧಿ ಮುಗಿದರೂ ಅವರಿಗೆ ಪಾಠ ನಿಲ್ಲಿಸಲು ಯಾರೂ ಹೇಳಲೇ ಇಲ್ಲ. ನಾನು ಎಲ್ಲರ ಮುಖ ಗಮನಿಸಿದಾಗ, ಎಲ್ಲರೂ ಅದರಲ್ಲೇ ತಲ್ಲೀನರಾಗಿದ್ದುದು ಕಂಡುಬಂತು! ಅಂತೂ ಇನ್ನೂ ಸ್ವಲ್ಪ ಸಮಯದ ಬಳಿಕ ಪಾಠ ನಿಲ್ಲಿಸಲು ಹೇಳಿದರೆನ್ನಿ. ಮತ್ತೊಬ್ಬರು ಅಭ್ಯರ್ಥಿಗೆ ಇದ್ದುದು ಪರಮಾಣುವಿನ ಬಗ್ಗೆ ಪಾಠ ಮಾಡಲು. ಅವರು ಬಂದ ತಕ್ಷಣ ಹೊಸದಾದ ಚಾಕ್ ಒಂದನ್ನು ಮಧ್ಯದಿಂದ ತುಂಡು ಮಾಡಿದರು. ಆಮೇಲೆ ಆ ತುಂಡನ್ನು ಇನ್ನೂ ತುಂಡು ಮಾಡಿದರು. ನಾನೋ…”ಛೇ.. ಹೊಸಾ ಚಾಕ್ ನ್ನು ತುಂಡು ಮಾಡಿ ಹಾಳು ಮಾಡಿದರಲ್ಲಾ” ಎಂದುಕೊಂಡೆ. ಅಷ್ಟರಲ್ಲಿ ಗೊತ್ತಾಯಿತು.. ಅದು ಅಣು ಎಂದರೇನು ಎಂಬುದನ್ನು ಉದಾಹರಣೆ ಸಮೇತವಾಗಿ ತೋರಿಸಿದುದು ಎಂದು! ಎಲ್ಲರಿಗೂ ಅದು ಇಷ್ಟವೂ ಆಯಿತು. ಹೀಗೆ, ಪ್ರವೃತ್ತಿಯಾಗಿ ಪಾಠ ಮಾಡುತ್ತಿದ್ದ ನನಗೆ, ಪಾಠ ಮಾಡುವವರನ್ನು ಆಯ್ಕೆ ಮಾಡುವ ಅವಕಾಶ ಸಿಗಬಹುದೆಂದು ಕನಸಲ್ಲೂ ಯೋಚಿಸಿರಲಿಲ್ಲ! ಅದಕ್ಕಾಗಿಯೇ ಒಮ್ಮೊಮ್ಮೆ ಯೋಚಿಸುವೆ…ನಿವೃತ್ತಿಯಾದ ಬಳಿಕವೂ, ಶಿಕ್ಷಣಕ್ಕೂ ನನಗೂ ಇರುವ ಈ ಸಂಬಂಧವು, ಏನೋ ಋಣಾನುಬಂಧವಿರಬಹುದೆಂದು!

ಆಯ್ಕೆಯಾದ ಶಿಕ್ಷಕಿಯರು ತರಗತಿಯಲ್ಲಿ ಪಾಠ ಮಾಡುವ ಬದಲು; ಅದನ್ನು ವೀಡಿಯೋ ಮಾಡಿ ಅಂತರ್ಜಾಲದಲ್ಲಿ ಹಾಕಬೇಕಿತ್ತು. ಅದಕ್ಕೂ ಪುಟ್ಟ ತರಬೇತಿಯ ಅವಶ್ಯಕತೆಯಿತ್ತು. ಎದುರುಗಡೆಗೆ ಪುಟ್ಟ ಮಕ್ಕಳು ಇರುವರೆಂದು ಊಹಿಸಿಕೊಂಡು ಕ್ಯಾಮರವನ್ನು ನೋಡಿಕೊಂಡು, ಹಾವಭಾವ ಸಹಿತ ಪಾಠಮಾಡುವುದೆಂದರೆ ಎಷ್ಟು ಕಷ್ಟವೆಂದು ಅಲ್ಲಿ ನೋಡಿದಾಗ ತಿಳಿಯಿತು. ಸಿನಿಮಾ, ಸೀರಿಯಲ್ ಗಳಲ್ಲಿ ಅಭಿನಯಿಸುವವರದ್ದೂ ಇದೇ ಪಾಡು ಎನ್ನಿಸಿ, ಅಯ್ಯೋ.. ಪಾಪ! ಎಂದುಕೊಂಡೆ.

ಇನ್ನು ಈ ಶಿಕ್ಷಕರ ದಿನದಂದು ವಿದ್ಯಾರ್ಥಿ-ವಿದ್ಯಾರ್ಥಿನಿಯರೆಲ್ಲಾ ಸೇರಿ ತಮ್ಮ ಗುರುಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಿ ಖುಶಿಪಡುವುದನ್ನು ಕಾಣಬಹುದು. ಆದರೆ ಈ ಸಂಕಷ್ಟದ ದಿನಗಳಲ್ಲಿ ಎಲ್ಲಾ ಆಚರಣೆಗಳಂತೆ ಈ ದಿನವನ್ನು ಕೂಡಾ ಸಾಂಕೇತಿಕವಾಗಿ ಆಚರಿಸಬೇಕಾಗಬಹುದು. ಗುರು ಶಿಷ್ಯರ ಸಂಬಂಧವು ಮೊದಲಿನಷ್ಟು ಗಾಢವಾಗಿ ಬೆಸೆದುಕೊಂಡಿಲ್ಲದಿರುವುದನ್ನು ಈಗೀಗ ಗಮನಿಸಬಹುದು. ಏನೇ ಆದರೂ, ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ  ದಾಸರ ಪದಗಳ ಸಾಲಿನಂತೆ, ಗುರುಗಳ ಸ್ಥಾನದ ಪಾವಿತ್ರ್ಯತೆಯನ್ನು ಉಳಿಸಿ ಗೌರವಿಸಿದರೆ ಮಾತ್ರ ವಿದ್ಯೆ ಎನ್ನುವ ಅಮೂಲ್ಯ ಸಂಪತ್ತನ್ನು ಪಡೆಯಲು ಶಿಷ್ಯನಾದವನಿಗೆ ಸಾಧ್ಯ..ಅದೇ ಅವನ ಮುಕ್ತಿಗೆ ಮಾರ್ಗವೂ ಹೌದು.

-ಶಂಕರಿ ಶರ್ಮ, ಪುತ್ತೂರು.

7 Responses

  1. Jayalaxmi says:

    ಚೆನ್ನಾಗಿದೆ.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಲೇಖನ. ನಿಮ್ಮ ನಿವೃತ್ತಿ ಬದುಕಿನ ಹವ್ಯಾಸ ಗಮನ ಸೆಳೆಯಿತು, ಹ್ಯಾಟ್ಸ್ ಆಫ್ ಮೇಡಂ.

  3. Savithri bhat says:

    ನಿಮ್ಮ ಅನುಭವ ,ನಿರೂಪಣೆ ಓದಿ ತುಂಬಾ ಕುಶಿ ಆಯಿತು.

  4. ಶಂಕರಿ ಶರ್ಮ says:

    ಓದಿ ಮೆಚ್ಚಿದ ತಮಗೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

  5. Krishnaprabha says:

    ಚಂದದ ಲೇಖನ…ಒಳ್ಳೆಯ ಅನುಭವಗಳು

  6. ಜಯರಾಮ ರಾವ್ says:

    ಶಂಕರಿ ಅಕ್ಕ…ನಿಮ್ಮ ಅನುಭವ ವನ್ನು ವಿಸೃತ ವಾಗಿ ; ಚೆಂದವಾಗಿ ಬರೆದಿದ್ದೀರಿ.. ಧನ್ಯವಾದಗಳು.ಯಾವಾಗಲೂ ಹೀಗೆ ಬರೆಯುತ್ತಾ ಇರಿ.

  7. N says:

    ಲೇಖನ ತುಂಬಾ ಚೆನ್ನಾಗಿದೆ ಹೀಗೆ ಬರೆಯುತ್ತಾ ಌರಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: