ಸೊಳ್ಳೆಯ ಮುತ್ತು – ಪ್ರಾಣಕೆ ಕುತ್ತು

Share Button

ಇವರು ಗಾತ್ರದಲಿ ಕಿರಿದಾದರೂ, ಉಂಟು ಮಾಡುವ ಪರಿಣಾಮ ಹಿರಿದು. ಇವರನ್ನು ಹಾಗೆಯೇ ಬೆಳೆಯಲು ಬಿಟ್ಟರೆ ಮನುಕುಲವನ್ನೇ ಅಲ್ಲಾಡಿಸಬಲ್ಲರು. ಇವರ ಒಂದು ಕುಟುಕು ಸ್ಪರ್ಶ ಹಲವರನ್ನು ಸಾವಿನ ದವಡೆಗೆ ದೂಡೀತು! ಸಾವಿಗೂ ಕಾರಣವಾದೀತು! ಇವರು ಪ್ರಕೃತಿಯ ಆಹಾರ ಸರಪಣಿಯ ಒಂದು ಭಾಗ. ಪರಾಗಸ್ಪರ್ಶ ಕ್ರಿಯೆ ನಡೆಯುವಲ್ಲಿ ಇವರದೂ ಪಾತ್ರವಿದೆ.  ಆದರೇನು ಮಾಡುವುದು? ಇವರಿಗೂ ಇದೆಯಲ್ಲವೇ ಪ್ರಜನನ ವ್ಯವಸ್ಥೆ! ಹೆಣ್ಣಿನ ಒಡಲಲ್ಲಿ ಕುಡಿಯೊಡೆದ ಮೊಟ್ಟೆಗಳ ಪೋಷಣೆಗೆ ಸುಲಭದಲ್ಲಿ ಸಿಗುವಂತಹುದು ಮನುಷ್ಯ ಹಾಗೂ ಇತರ ಪ್ರಾಣಿಗಳ ರಕ್ತ! ಇವರಲ್ಲಿ ಹೆಣ್ಣು ಜಾತಿ ಪ್ರಾಣಕಂಟಕ ಎಂಬ ಅಭಿದಾನ ಬೇರೆ.  ಯಾರಿವರು? ಇವರೇ ನಮ್ಮ ಮನೆಯೊಳಗೆ, ವಠಾರದಲ್ಲಿ, ಕೈತೋಟದಲ್ಲಿ ಎಲ್ಲೆಂದರಲ್ಲಿ ಒಂದೇ ಶ್ರುತಿಯಲ್ಲಿ ಹಾಡುತ್ತಾ ಅತ್ತಿಂದಿತ್ತ ಹಾರಾಡುವ ಸೊಳ್ಳೆಗಳು. ಸೊಳ್ಳೆಗಳೇ ಎಂದು ಮೂಗು ಮುರಿಯಬೇಡಿ.

ಸೊಳ್ಳೆಗಳಿಂದ ಮಲೇರಿಯಾ ರೋಗ ಹರಡುತ್ತದೆಂದು ವೈಜ್ಞಾನಿಕ ಪುರಾವೆಗಳೊಂದಿಗೆ ಸಾಬೀತುಪಡಿಸಿದ ವಿಜ್ಞಾನಿ ಸರ್ ರೊನಾಲ್ಡ್ ರಾಸ್. ಮಲೇರಿಯಾ ರೋಗಪೀಡಿತ ಮನುಷ್ಯನಿಂದ ಆರೋಗ್ಯವಾಗಿರುವ ಮನುಷ್ಯನಿಗೆ  ರೋಗ ಹರಡಲು ಹೆಣ್ಣು ಅನಾಫಿಲಿಸ್ ಸೊಳ್ಳೆ ಕಾರಣ ಅನ್ನುವುದನ್ನು ಕಂಡುಹಿಡಿದ ದಿನ ಆಗಸ್ಟ್ 20, 1897.  ಈ ಸಂಶೋಧನೆಗಾಗಿ ನೋಬೆಲ್ ಪ್ರಶಸ್ತಿಗೂ ಭಾಜನರಾದರು. ಆ ಮಹಾನ್ ಸಂಶೋಧನೆಯ ಸ್ಮರಣಾರ್ಥ ವಿಶ್ವ ಸೊಳ್ಳೆ ದಿನ ಆಚರಿಸಲಾಗುತ್ತದೆ.  ಸಂಶೋಧನೆ ಕಡತಗಳಲ್ಲಿಯೇ ಬಾಕಿಯಾದರೆ ಜನಸಾಮಾನ್ಯರಿಗೆ ಗೊತ್ತಾಗುವ ಪರಿಯೆಂತು? ಜನರಲ್ಲಿ ಸೊಳ್ಳೆಗಳ ಬಗ್ಗೆ ಅರಿವು, ಜಾಗೃತಿ ಮೂಡಿಸಲೆಂದು ವಿಶ್ವ ಸೊಳ್ಳೆಗಳ ದಿನವನ್ನು ಪ್ರತಿವರ್ಷ ಆಗಸ್ಟ್ 20ರಂದು ಆಚರಿಸಲಾಗುತ್ತದೆ.


ಉಳಿದ ದಿನಾಚರಣೆಗಳಂದು ಶುಭ ಹಾರೈಸಲಾಗುತ್ತದೆ ಆದರೆ ವಿಶ್ವ ಸೊಳ್ಳೆ ದಿನಾಚರಣೆ ಆಚರಿಸುವಾಗ, ಸೊಳ್ಳೆಗಳಿಂದಾಗಿ ಹರಡುವ ರೋಗಗಳ ಬಗ್ಗೆ ಮಾಹಿತಿ ನೀಡಿ, ಸೊಳ್ಳೆಗಳ ಹಾಗೂ ಸೊಳ್ಳೆ ಉತ್ಪತ್ತಿ ಕೇಂದ್ರಗಳ ನಿರ್ಮೂಲನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.  “London School of hygiene and Tropical Medicine” ಸಂಸ್ಥೆಯು 1930ರಿಂದಲೂ ಸೊಳ್ಳೆ ದಿನವನ್ನು ಆಚರಿಸಿಕೊಂಡು ಬರುತ್ತಿದೆ ಹಾಗೂ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಶ್ರಮಿಸುತ್ತಿದೆ. ವಿಶ್ವದಾದ್ಯಂತ, ಒಂದು ದಶಕದಲ್ಲಿ ಸರಾಸರಿ ಆರು ಮಿಲಿಯ ಜನರು ಮಲೇರಿಯಾ ರೋಗದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅನ್ನುವ ವಿಷಯ ಓದಿ ನಿಜಕ್ಕೂ ಖೇದವೆನಿಸಿತು. ಮಲೇರಿಯಾ ಮಾತ್ರವಲ್ಲದೆ ಇತರ ರೋಗಗಳಾದ ಆನೆಕಾಲು ರೋಗ, ಡೆಂಗ್ಯೂ, ಚಿಕುನ್ ಗುನ್ಯಾ, ಹಳದಿ ಜ್ವರ,.., ಇತ್ಯಾದಿ.  ಹರಡಲು ಸೊಳ್ಳೆಗಳು ಕಾರಣವೆನ್ನುವುದು ಈಗ ನಮಗೆ ಗೊತ್ತಿದೆ.

ಸೊಳ್ಳೆ ಉತ್ಪಾದನೆಯಾಗುವುದನ್ನು ತಡೆಗಟ್ಟಲು, ಅನಗತ್ಯ ನೀರು ನಿಲ್ಲದಂತೆ, ಗಲೀಜು ನೀರು ಶೇಖರಣೆಗೊಳ್ಳದಂತೆ, ನೀರಿನ ಮೂಲಗಳಾದ ಕೆರೆ, ಬಾವಿ, ನದಿ, ಹಳ್ಳ, ಕೊಳ್ಳಗಳು ಕಲುಷಿತಗೊಳ್ಳದಂತೆ ಜಾಗ್ರತೆ ವಹಿಸಬೇಕು, ಹಾಗೆಯೇ ನೈಸರ್ಗಿಕವಾಗಿ ಸೊಳ್ಳೆಗಳ ಲಾರ್ವಾವನ್ನು ನಾಶಪಡಿಸಲು ಬಾವಿಗಳಲ್ಲಿ ಗಪ್ಪಿ ಮೀನುಗಳನ್ನು ಬೆಳೆಸಬಹುದು ಅನ್ನುವ ಅರಿವನ್ನು ಜನಸಾಮಾನ್ಯರಿಗೆ ನೀಡಲಾಗುತ್ತಿದೆ.  ಬರಿಯ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೇ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಜವಾಬ್ದಾರಿಯುತ ಪ್ರಜೆಗಳಾದ ನಮ್ಮ ಜವಾಬ್ದಾರಿ. ಆದರೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಜನರ ಬೇಜವಾಬ್ದಾರಿಯಿಂದ ಅಪಾಯವನ್ನು ನಾವೇ ಆಹ್ವಾನಿಸಿಕೊಳ್ಳುತ್ತಿದ್ದೇವೆ. ಆದರೂ ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಸೊಳ್ಳೆಗಳ ಕಡಿತಕ್ಕೊಳಗಾಗಿ “ಆವ ಕಾಯಿಲೆ ಕಾದಿದೆ ಎನಗಿನ್ನು” ಅನ್ನುವಂತಹ ಸ್ಥಿತಿ ಉದ್ಭವವಾಗಿದೆ.

ಸೊಳ್ಳೆಗಳಿಗೆ ಅಂಜದೆ ಸೊಳ್ಳೆಗಳೊಂದಿಗೆ ಬದುಕ ಸವೆಸುವ ಅನಿವಾರ್ಯತೆ ಎದುರಾಗಿದೆ. ಸೊಳ್ಳೆಗಳನ್ನು ಓಡಿಸಿ ನಮ್ಮನ್ನು ರಕ್ಷಿಸಿಕೊಳ್ಳಲು ಹಲವು ಸೊಳ್ಳೆ ವಿಕರ್ಷಕ ವಿದ್ಯುನ್ಮಾನ ಸಾಧನಗಳು, ಮುಲಾಮುಗಳು, ಅಗರಬತ್ತಿಗಳು, ಸೊಳ್ಳೆಬತ್ತಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇಂತಹ ವಸ್ತುಗಳು ಅಲರ್ಜಿ ಉಂಟು ಮಾಡುತ್ತವೆ ಅಂತ ಅನಿಸಿದರೆ ಸೊಳ್ಳೆ ಪ್ರವೇಶಿಸಲಾಗದ ಪರದೆಯೊಳಗೆ ಮಲಗುತ್ತಾರೆ. ಮನೆಯೊಳಗೆ ಸೊಳ್ಳೆಗಳು ನುಗ್ಗುವುದನ್ನು ತಡೆಯಲು, ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆಪರದೆಯುಳ್ಳ ಜಾಲರಿ ಅಳವಡಿಸಿಕೊಂಡರೆ ಉತ್ತಮ. ನೆಕ್ಕಿಸೊಪ್ಪು, ಚೆಂಡು ಹೂ, ಮಜ್ಜಿಗೆ ಹುಲ್ಲು, ತುಳಸಿ, ಅಗ್ನಿಮಂತ (ಕಿಲೆಂಜಿ ಸೊಪ್ಪು ಅಥವಾ ನೊಣಸೊಪ್ಪು) ಮುಂತಾದ ಸೊಳ್ಳೆ ವಿಕರ್ಷಕ ಸಸ್ಯಗಳನ್ನು ನಮ್ಮ ಮನೆಯ ಕೈತೋಟದಲ್ಲಿ ಬೆಳೆಸಬಹುದು. ನಮ್ಮ ಆರೋಗ್ಯದ ಹೊಣೆ ನಮ್ಮದೇ ತಾನೇ?

-ಕೃಷ್ಣಪ್ರಭಾ. ಎಂ. ಮಂಗಳೂರು 

13 Responses

  1. Sunanda k says:

    ಸೊಳ್ಳೆ ವಿಕರ್ಷಕ ಗಿಡಗಳ ಬಗ್ಗೆ ತಿಳಿಸಿದ್ದೀರಿ.ಉಪಯುಕ್ತ ಮಾಹಿತಿ..ಸೊಳ್ಳೆಗಳಿಂದ. ಹರಡುವ ರೋಗಗಳು.ಎಲ್ಲವನ್ನು ತಿಳಿಸಿದ್ದೀರಿ.ಸೊಳ್ಳೆಗಳ ದಿನಾಚರಣೆಯ ಅಂಗವಾಗಿ ಧನ್ಯವಾದಗಳು

    • Krishnaprabha says:

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು..ಒಣಗಿದ ಸಗಣಿ ಹಪ್ಪಳದ ಹೊಗೆಯ ಸೊಳ್ಳೆ ವಿಕರ್ಷಕವಂತೆ

  2. ASHA nooji says:

    ಖಂಡಿತ ಪ್ರಭ ..ಬರಹ ಸುಪರ್ ಸೊಳ್ಳೆಯಂತ .ರೋಗದ‍ಾಯಕ ಕೀಟಗಳ ಬಗ್ಗೆ ಸರಿಯಾದರೀತಿಯಲ್ಲಿತಿಳಿಪಡಿಸಿದಿರಿ .ಮ‍ಾಹಿತಿ ಯೂ ಕೊಟ್ಟಿರಿ ನಿಮ್ಮಬರಹ ಓದಲು ನನಗೆ ತುಂಬಾಇಷ್ಟ.

    • Krishnaprabha says:

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಅಕ್ಕ

  3. ನಯನ ಬಜಕೂಡ್ಲು says:

    ಉತ್ತಮ, ಮಾಹಿತಿ ಪೂರ್ಣ ಬರಹ ಮೇಡಂ. ಹೌದು ಮೇಡಂ, ಸೊಳ್ಳೆಗಳ ಸಮಸ್ಯೆ ಮಾತ್ರ ಅಲ್ಲ, ಬೇರೆ ಸಮಸ್ಯೆಗಳಿಗೂ ಅಂಜದೆ ಅವುಗಳ ನಿವಾರಣೆಗೆ ಇರುವ ಪರಿಹಾರ ಕಂಡು ಕೊಂಡು ಬದುಕಬೇಕಾಗಿದೆ ಇವತ್ತು.

    • Krishnaprabha says:

      ಹೌದು ನಯನಾ ಅವರೇ…ಸಮಸ್ಯೆಗಳ ಸರಮಾಲೆಯೇ ನಮ್ಮ ಮುಂದಿದೆ..ಬದುಕು ಹೋರಾಟವಾಗಿದೆ

  4. Anonymous says:

    ಉಪಯುಕ್ತ ಮಾಹಿತಿಯ ಬರಹ.

  5. ರಾಜೇಶ್ವರಿ ಕೆಂಭಾವಿ says:

    ಸಾಕಷ್ಟು ತುಳಸಿ ಬೆಳೆದಿದ್ದರೂ ಸೊಳ್ಳೆಗಳ ಸಮಸ್ಯೆ ಕಡಿಮೆ ಆಗಿಲ್ಲ, ಬೇವಿನ ಹೊಗೆ ಹಾಕಿದರೂ ಕಡಿಮೆ ಆಗುತ್ತಿಲ್ಲ, ವಿದ್ಯುತ್ತ್ ಯಂತ್ರ & ಸೊಳ್ಳೆ ಬತ್ತಿ ಅಲರ್ಜಿ, ಸೊಳ್ಳೆಗಳು ಇವೆಲ್ಲವನ್ನೂ ಮೀರಿ ಬೆಳೆದಿವೆ.. ಉತ್ತಮ ಬರಹ..

    • Krishnaprabha says:

      ಸೊಳ್ಳೆಗಳ ಸಂಖ್ಯೆ ಜಾಸ್ತಿಯಾದರೆ ಅವುಗಳ ನಿಯಂತ್ರಣ ಕಷ್ಟಸಾಧ್ಯ

  6. ಶಂಕರಿ ಶರ್ಮ says:

    ಕೈಮೇಲೆ ಕುಳಿತ ಸೊಳ್ಳೆಯನ್ನು ಹೊಡೆಯ ಹೋದರೆ ಅದು ಯಾವ ಮಾಯಕದಲ್ಲೋ ತಪ್ಪಿಸಿಕೊಂಡು ಬಿಡುವ ಚಾಕಚಕ್ಯತೆಗೆ ಅದಕ್ಕೆ ಅದೇ ಸಾಟಿ! ಸೊಳ್ಳೆ ಗಳಿಂದಾಗುವ ಅನಾಹುತಗಳ ಎಚ್ಚರಿಕೆಯ ಗಂಟೆ ಹೊಡೆದಿದೆ ನಿಮ್ಮ ಲೇಖನದಲ್ಲಿ.. ಧನ್ಯವಾದಗಳು

    • Krishnaprabha says:

      ಬೀಸುವ ಬ್ಯಾಟರಿಯಿಂದ ತಪ್ಪಿಸುವ ಚಾಕಚಕ್ಯತೆ ಸೊಳ್ಳೆಗಳಿಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: