ಕವಿ ಕೆ ಎಸ್ ನ ನೆನಪು 7: ಅಡಿಗ ಹಾಗೂ ಕೆ ಎಸ್ ನ-ಕಾವ್ಯಸಮರ

Share Button

ಕವಿ ಕೆ ಎಸ್ ನ

ನವ್ಯಕಾವ್ಯ ಪ್ರವರ್ತಕ ಕವಿ ಎನಿಸಿದ್ದ ಗೋಪಾಲಕೃಷ್ಣ ಅಡಿಗ ಹಾಗೂ ನಮ್ಮ ತಂದೆ ಏಕವಚನದ ಸಲುಗೆಯ ಸ್ನೇಹಿತರು. ಭೇಟಿ ಆದಾಗಲೆಲ್ಲ ಅಡಿಗರು “ಏನಯ್ಯ ನರಸಿಂಹ, ಹೇಗಿದ್ದೀಯ?” ಎಂದು ಕುಶಲ ವಿಚಾರಿಸಿದರೆ ನಮ್ಮ ತಂದೆಯವರು “ಬಾರಯ್ಯ  ಅಡಿಗ,ತುಂಬಾ ದಿನ ಆಯ್ತು ನೋಡಿ” ಎಂದು ಉತ್ತರಿಸುತ್ತಿದ್ದರು.ಇಬ್ಬರೂ ಭೇಟಿಯಾದಾಗ ಸಾಹಿತ್ಯದ ಬಗ್ಗೆ ಮತ್ತು ವಿಶೇಷವಾಗಿ ಕಾವ್ಯದ ಬಗ್ಗೆ ಮಾತನಾಡಿದವರೇ ಅಲ್ಲ. ಇತ್ತೀಚೆಗೆ ಏನು ಬರೆದಿದ್ದು ಎನ್ನುವ ಪ್ರಶ್ನೆ ಬಿಟ್ಟು.

ಅಡಿಗರು ನವ್ಯಕಾವ್ಯ ಪ್ರವರ್ತಕರಷ್ಟೇ ಅಲ್ಲದೆ ಅದರ ಪ್ರಬಲ ಪ್ರತಿಪಾದಕರೂ ಆಗಿದ್ದರು ಎಂಬ ಮಾತು ಕಾವ್ಯವಲಯದಲ್ಲಿ ಜನಜನಿತವಾದ ವಿಷಯ. ನವೋದಯದ  ಪರಿಕಲ್ಪನೆಗಳಿಗೆ  ಸಡ್ಡು ಹೊಡೆದು, ಭಿನ್ನ ಲಯದ, ಪ್ರತಿಮಾನಿಷ್ಠ ನವ್ಯಕಾವ್ಯವನ್ನು  ಮುನ್ನೆಲೆಗೆ ತಂದವರು. ಈ ನಿಟ್ಟಿನಲ್ಲಿ ಮೈಸೂರ ಮಲ್ಲಿಗೆ ಅವರಿಗೆ ನವೋದಯ ಕಾವ್ಯದ ಪ್ರತಿಮೆಯಾಗಿ ಕಂಡು, ನವ್ಯಕಾವ್ಯದ  ಸಂದರ್ಭದಲ್ಲಿ  ಕೆ ಎಸ್ ನ ಮಹತ್ವ ನೀಡಬೇಕಾದ ಕವಿಯಲ್ಲ ಎಂಬ ಅಭಿಮತ ತಳೆದಿದ್ದರು. ಅತ್ಯಲ್ಪ ಕಾಲದಲ್ಲಿ  ಆ ಕೃತಿಗೆ ದೊರೆತ  ಜನಪ್ರಿಯತೆಯೂ  ಅಡಿಗರಿಗೆ  ಸಹನೆಯಾಗಿರರಲಿಲ್ಲ.  ಈ ಹಿನ್ನಲೆಯಲ್ಲಿ ಮತ್ತು  ನವೋದಯದ ಕವಿಗಳನ್ನು  ಗೇಲಿ ಮಾಡಲು ಅವರು  ಪುಷ್ಪಕವಿಯ  ಪರಾಕು  ಪದ್ಯವನ್ನು ಬರೆದರು .

ಅವರಿವರೇನು ಬರೆದಾರು ಬಿಡು:ಕೊರೆದಾರು
ಕರುಣೆಯಿಲ್ಲದೆ ರಸಿಕರೆದೆಯ
….
….ಎಲ್ಲವನು ಹೂವಾಗಿ ಕರುವಿಡುವ ರೂವಾರಿ!
ಸುಗ್ಗಿ ಬೆಳುದಿಂಗಳ ಸರೋವರದ ತೀರದಲಿ
ಶೃಂಗಾರ ರಸವುಲಿವ ಕಾಮ ನಾನು;
ಬೆಪ್ಪುಗಳು ಬಲ್ಲರೇ ಈ ರಸವಿಲಾಸವನು?
….
…..

ಈ ಕವನದ ಸಾಲುಗಳು ಕೆ ಎಸ್ ನ ಅವರನ್ನೇ ಗುರಿಯಾಗಿಸಿದೆ ಎಂದು ಕಾವ್ಯಾಸಕ್ತರಿಗೆಲ್ಲ ಅನಿಸಿತು.ನಮ್ಮ ತಂದೆಯವರಿಗೆ ಅಕಡೆಮಿಕ್ ವಲಯದ ಕವಿಗಳಂತೆ ಲಾಬಿ ಮಾಡುವ ವಿದ್ಯಾರ್ಥಿಗಳಾಗಲಿ, ವಿಮರ್ಶಕಗಣವಾಗಲೀ ಇಲ್ಲದ್ದರಿಂದ, ಈ ಪದ್ಯ ಕುರಿತು  ಪತ್ರಿಕೆಗಳಲ್ಲಿ ಪ್ರತಿಕ್ರಿಯೆಗಳು ಬರಲು ಸಾಧ್ಯವಿರಲಿಲ್ಲ.

ಕೆಲವರು ಆಸಕ್ತರು ಈ ಕವನದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ನಮ್ಮ ತಂದೆಯವರನ್ನು ಕೇಳಿದಾಗ “ಅಡಿಗರು ಶ್ರೇಷ್ಠ ಕವಿ . ಪುಷ್ಪಕವಿಯ ಪರಾಕು ತನ್ನದೇ ಸರಿ ಎನ್ನುವಂತೆ ಬಂದಿದೆ. ನಾನು ಇದಕ್ಕೆ ಉತ್ತರಿಸುವುದಿಲ್ಲ.”ಎಂದಿದ್ದರು.

ಆದರೆ ಬಹಳ ವರ್ಷಗಳ ನಂತರ “ನೊಂದ ನೋವನ್ನಷ್ಟೇ ಹಾಡಬೇಕೇನು, ಬೇಡವೆ ಯಾರಿಗೂ ಸಿರಿಮಲ್ಲಿಗೆ?”  ಕವನದಲ್ಲೇ  ಉತ್ತರಿಸಿದರು.

ಅಡಿಗ ಹಾಗೂ ಕೆ ಎಸ್ ನ ನಡುವಣ ಕಾವ್ಯಸಮರದ ಮತ್ತೊಂದು ಉದಾಹರಣೆ, ಅಡಿಗರ  ಭೂತ ಕವನಕ್ಕೆ   ಕೆ ಎಸ್ ನ ರ  ಕುಂಕುಮ ಭೂಮಿ  ಉತ್ತರವಾಗಿದ್ದು . ಭೂತ ಕವನದಲ್ಲಿ

“ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು
ಕೆಳಕ್ಕೆ ,ತಳಕ್ಕೆ ಗುದ್ದಲಿಯೆತ್ತಿ ಕುಕ್ಕಿದರೆ
ಕಂಡೀತು ಗೆರೆಮರಿವ ಚಿನ್ನದದಿರು” ಎಂದಿದ್ದರೆ

ಇದಕ್ಕೆಪ್ರತಿಯಾಗಿ ಕುಂಕುಮ ಭೂಮಿಯಲ್ಲಿ ಕೆ ಎಸ್ ನ

“ಅಗೆದಾಗ ನಕ್ಕದ್ದು ನುಣುಪು ಕುಂಕುಮ ಭೂಮಿ
ಗುದ್ದಲಿಯ ಕೆಲಸ ಅಲ್ಲಿಗೆ ನಿಂತಿದೆ”ಎಂದು ಪ್ರತಿಪಾದಿಸಿದ್ದರು.

ಭೂತ ಕವನದಲ್ಲಿ ಅಡಿಗರು ಚಿನ್ನದ ಅದುರಿಗಾಗಿ ಭೂಮಿಯ ಆಳಕ್ಕೆ ಹೋಗಬೇಕಾದ ಶ್ರಮವನ್ನು ತಿಳಿಸಿದರೆ ,ಕುಂಕುಮ ಭೂಮಿಯಲ್ಲಿ ಕೆ ಎಸ್ ನ ಅವರಿಗೆ ಈ ಭೂಮಿಯೇ ಚಿನ್ನ. ಎಲ್ಲ ಕಾವ್ಯಾಸಕ್ತರು ಈ ಎರಡೂ ಕವನಗಳನ್ನುಇನ್ನೂ ಹೆಚ್ಚು  ಅಭ್ಯಸಿಸುವುದು  ಅಗತ್ಯವಿದೆ.

ಕವಿ ಗೋಪಾಲಕೃಷ್ಣ ಅಡಿಗ

ಅಡಿಗರು ಒಮ್ಮೆ ಅವರನ್ನು ಭೇಟಿಯಾಗಿದ್ದಾಗ “ನಿಮ್ಮಪ್ಪ  ಬಲು ಕಿಲಾಡಿ ಕಣಯ್ಯ,ನಾನು ಅವನನ್ನು ಟೀಕಿಸಿ ಪದ್ಯ ಬರೆದಾಗ ಸುಮ್ಮನಿರುತ್ತಾನೆ, ಮುಂದೆ ಯಾವತ್ತೋ  ಒಂದು ದಿನ ಪದ್ಯದ ಬಾಣ ಬಿಡ್ತಾನೆ.” ಎಂದಿದ್ದರು.

‘ಶಿಲಾಲತೆ’ ಕವನ ಸಂಕಲನ  ಬಂದ ಮೇಲೆ  ನಮ್ಮ ತಂದೆಯವರ  ಕಾವ್ಯದ ಬಗ್ಗೆ ಅಡಿಗರ  ಧೋರಣೆ ಇತ್ಯಾತ್ಮಕವಾಗಿ  ಬದಲಾಯಿತು. ನವ್ಯಶೈಲಿಯಲ್ಲೂ   ಬರೆಯಲು ಸಮರ್ಥರು  ಎಂಬುದು ಅವರಿಗೆ  ಮನವರಿಕೆಯಾಯಿತು.  ಶಿಲಾಲತೆ  ಕೃತಿಗೆ  ದೇವರಾಜ  ಬಹದ್ದೂರ್ ಬಹುಮಾನ ಬಂದಿತು. ಆದರೆ  ಮೂರನೆಯ  ಬಹುಮಾನವನ್ನು  ಇಬ್ಬರಿಗೆ ಹಂಚಿದ್ದರು. (ಪಡೆದ  ಮತ್ತೊಬ್ಬರು ಚನ್ನವೀರ ಕಣವಿ). ಇದರ ಬಗ್ಗೆ ಅಡಿಗರು ವಿಷಾದಿಸಿ, ಕೃತಿಗೆ ಮೊದಲನೆಯ  ಬಹುಮಾನ ಬರಬೇಕಿತ್ತೆಂದು  ನಮ್ಮ  ತಂದೆಯವರಿಗೆ ಪತ್ರ  ಬರೆದಿದ್ದರು.

ಅಡಿಗರು ನಿಧನರಾದ ಸುದ್ದಿ ಸುಮತೀಂದ್ರ ನಾಡಿಗರ ಮೂಲಕ ತಿಳಿದಾಗ  ನಮ್ಮ ತಂದೆ ನನಗೆ “ನೋಡಿಕೊಂಡು ಬರೋಣ ನಡಿ” ಎಂದರು. ಸರಿ ಎಂದು ಆಟೋ ತರಲು ಹೋದಾಗ “ಏನೂ ಬೇಡ ,ನಿನ್ನ ಸ್ಕೂಟರ್ ನಲ್ಲಿ ಹೋಗೋಣ. ಎಂದರು. ನನಗೋ ಅಳುಕು, ಎಂದೂ ಅವರು ನನ್ನ ಸ್ಕೂಟರ್ ಹಿಂದೆ ಕುಳಿತರವರಲ್ಲ. ಬೇಡ ಎಂದರೂ ಕೇಳಲಿಲ್ಲ.  ಸ್ಕೂಟರಿನಲ್ಲೇ  ಹಿಂದೆ  ಕುಳಿತು  ಬಂದರು. ನಾನು  ಆಗಾಗ್ಗೆ ಹಿಂದೆ ತಿರುಗಿ ನೋಡುತ್ತಿದ್ದಾಗ “ರಸ್ತೆ ನೋಡಿಕೊಂಡು ಓಡಿಸು. ನನ್ನ  ಚಿಂತೆ  ಬೇಡ “ಎಂದರು.ಅಡಿಗರ ಪಾರ್ಥಿವ ಶರೀರದ ಹತ್ತಿರ ಮೌನವಾಗಿ ನಿಂತು ಹೊರಬಂದರು.

ಕಾವ್ಯಮಾರ್ಗದಲ್ಲಿ ಭಿನ್ನಮತವಿದ್ದರೂ, ಇಬ್ಬರ ಆತ್ಮೀಯ ಸ್ನೇಹಕ್ಕೆ  ಎಂದೂ ಕುಂದಿರಲಿಲ್ಲ.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:  http://surahonne.com/?p=28910

-ಕೆ ಎನ್  ಮಹಾಬಲ
(ಕೆ ಎಸ್ ನ  ಪುತ್ರ)

4 Responses

  1. km vasundhara says:

    ಹಿರಿಯ ಕವಿಗಳ ನಡುವಿನ ಕಾವ್ಯ ಸಮರ ಕೇಳಿ ಗೊತ್ತಿತ್ತು. ಈಗ ವಿವರ ನೋಡಿ ಹೀಗೂ ಅರ್ಥವತ್ತಾಗಿ ಗುದ್ದಾಡಬಹುದಲ್ಲವೇ ಎನಿಸಿತು. ಕೆ . ಎಸ್. ನ. ಅವರ ಕುರಿತು ಮತ್ತಷ್ಟು ಮಾಹಿತಿಗಳು ತಿಳಿಯಬೇಕು…. ಬರೆಯಿರಿ…

  2. ಶ್ರೇಷ್ಠ ಲೇಖಕರಿಬ್ಬರ ಆತ್ಮೀಯ ಮಾತು.ಸಚ್ಚಾ ಅಣ್ಣತಮ್ನಂದಿರಂತೆ ಕಾಣುವುದು ಸುಳ್ಳಲ್ಲ…‌‌‌

  3. ನಯನ ಬಜಕೂಡ್ಲು says:

    ಸೊಗಸಾಗಿದೆ

  4. ಶಂಕರಿ ಶರ್ಮ says:

    ಹಿರಿ ಕವಿಗಳ ಸಾತ್ವಿಕ ಗುದ್ದಾಟದಿಂಧ ಓದುಗರಿಗೆ ಹೊಸ ಹೊಸ ಕವನಗಳ ರಸದೌತಣ! ಹೊಸರೂಪದ ಸೊಗಸಾದ ಲೇಖನ..ಧನ್ಯವಾದಗಳು ಸರ್.

Leave a Reply to km vasundhara Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: