ಬಾಂಧವ್ಯದ ಸೇತುವೆ ಶ್ರೀ ರಕ್ಷೆ

Share Button

ಸಾವಿತ್ರಿ ಭಟ್ ಬಡೆಕ್ಕಿಲ

ನಿನ್ನೆ ಮಧ್ಯಾಹ್ನ ಊಟ ಮಾಡಿ, ಇನ್ನೇನು ಸ್ವಲ್ಪ ವಿಶ್ರಾಂತಿ ಮಾಡೋಣವೆಂದು ಹೊರಡುವ ಮೊದಲೇ, ಒಮ್ಮೆ ಮೊಬೈಲ್ ಫೋನ್ ಕೈಗೆತ್ತಿಕೊಂಡು ಮೆಸ್ಸೇಜ್ ಗಳನ್ನು ನೋಡುತ್ತಿದ್ದೆ. ಆಗಲೇ, ಫೋನ್ ರಿಂಗ್ ಆಯಿತು. ಯಾವುದೋ ಅಪರಿಚಿತ ನಂಬರ್. ಕಿವಿಯಾನಿಸಿದಾಗ, ಆಕಡೆಯಿಂದ ಪರಿಚಿತ ಧ್ವನಿಯೇ. ‘ಅಕ್ಕಾ, ಸರ್ ಗೆ ಒಂದು ಕೋರಿಯರ್ ಬಂದಿದೆ. ಅವರ ಫೋನ್ ರೀಚ್ ಆಗುತ್ತಿಲ್ಲ, ನಾನು ಜಯರಾಮ ಮಾತಾಡುತ್ತಿರುವುದು.’ ನಾನು ಯೋಚಿಸುತ್ತಾ, ಈ ಕೊರೋನ ಕಾಲದಲ್ಲಿ ಯಾರದಪ್ಪಾ ಕೋರಿಯರ್ ಎಂದು ವಿಚಾರಿಸಿದಾಗ, ‘ಉದಯಪುರದಿಂದ ಬಂದಿದೆ, ಅಕ್ಕಾ’ ಎಂದ ಜಯರಾಮ. ನಮ್ಮದು ಹಳ್ಳಿ ಮನೆ ಆದುದರಿಂದ, ಇಲ್ಲಿಗೆ ಯಾವ ಕೋರಿಯರ್ ಸೌಲಭ್ಯವೂ ಇಲ್ಲ. ನಾವು ಪುತ್ತೂರು ಪೇಟೆಯ ನೆಹರು ನಗರದಲ್ಲಿ, ಬಂದಿರುವ ಕೋರಿಯರ್ ಕಾಗದ ಮತ್ತು ಪಾರ್ಸೆಲ್ ಗಳನ್ನು ತೆಗೆದುಕೊಳ್ಳುವಂತೆ ವ್ಯವಸ್ಥೆಯನ್ನು ಮಾಡಿದ್ದೆವು. ಮತ್ತು ಇದು ಪುತ್ತೂರು ಕೋರಿಯರ್ ಆಫೀಸಿನವರಿಗೂ ಗೊತ್ತಿದೆ.

ಉದಯಪುರದಿಂದ ಕೋರಿಯರ್ ಅಂದ ಕೂಡಲೇ ನನ್ನ ಮುಖವರಳಿತು. ಇಂದು ರಕ್ಷಾಬಂಧನವಲ್ಲವೇ? ಇದು ಉದಯಪುರದ ಅಕ್ಕನ ಕೋರಿಯರ್. ಅದರೊಳಗೆ ಏನು ಇದೆಯೆಂದು ನನಗೆ ತಿಳಿದಿದೆ. ಆಲೋಚಿಸುತ್ತಾ ಮನಸ್ಸು ಮೂವತ್ತಾರು ವರ್ಷ ಹಿಂದೆ ಹೋಯಿತು…

ರಾಜಸ್ಥಾನದ ಒಂದು ಸುಂದರವಾದ ಪಟ್ಟಣವೇ ಉದಯಪುರ. ಸರೋವರಗಳ ನಾಡೆಂದೇ ಪ್ರಸಿದ್ಧ. ಅಲ್ಲಿಯ ಸುಂದರವಾದ ಸರೋವರಗಳಾದ ಪಿಚೋಲಾ ಸರೋವರ, ಫತೇಹ್ ಸಾಗರ್ ಸರೋವರ, ಸಹೆಲಿಯೋನ್ ಕಿ ವಾಡಿ ಅಥವಾ ಹತ್ತಿರದ ಧೂದ್ ತಲಾಯಿ ಮೊದಲಾದ ಜಾಗಗಳಿಗೆ ಸಂಜೆ ಹೊತ್ತು ಅಥವಾ ರಜಾದಿನಗಳಲ್ಲಿ ನಮ್ಮ ಒಂದು ಮೊಪೆಡ್ ನಲ್ಲಿ ಮಕ್ಕಳನ್ನೂ ಹಿಡಕೊಂಡು ಹೋಗಿ ಆನಂದ ಪಡುತ್ತಿದ್ದೆವು. ಉದಯಪುರದ ಹತ್ತಿರದ ಕೋಟೆ ಕೊತ್ತಲಗಳು, ಅರಮನೆಗಳು, ಬೆಟ್ಟ ಗುಡ್ಡಗಳು ಅಲ್ಲದೇ ಉದ್ಯಾನವನಗಳು ನಮ್ಮ ‘ನಾಲ್ಕು ವರ್ಷಗಳ ಬದುಕನ್ನು ನಾಲ್ಕು ದಿನಗಳಂತೆ’ ಮಾಡಿದ್ದವು. ಉದಯಪುರವೆಂದರೆ ಸುಂದರ, ಪ್ರೇಕ್ಷಣೀಯ!

ಪುತ್ತೂರು ಪೇಟೆಯ ಹತ್ತಿರ ಹಳ್ಳಿಯಲ್ಲಿ (ಅಡಿಕೆ ತೋಟದ ಮನೆ) ವಾಸವಿದ್ದ ನಮಗೆ, ಯಜಮಾನರ ಉನ್ನತ ವ್ಯಾಸಂಗ ನಿಮಿತ್ತ (ಡಾಕ್ಟರೇಟ್) ನಾಲ್ಕು ವರ್ಷಗಳ ಕಾಲ ಉದಯಪುರದಲ್ಲಿ ವಾಸಿಸುವ ಸುಯೋಗ ಒದಗಿ ಬಂದಿತ್ತು. ನಮ್ಮ ಆತ್ಮೀಯ ಬಂಧುಗಳೂ, ನಮ್ಮ ಯಜಮಾನರ ಪಿಹೆಚ್.ಡಿ. ಮಾರ್ಗದರ್ಶಕರೂ ಆದ, ಡಾlಸಿ.ವಿ.ಭಟ್ ಮತ್ತವರ ಮನೆಯವರು ಅಲ್ಲಿ ನಮಗೆ ಅತ್ಯಂತ ಹತ್ತಿರವಾದವರು. ಸ್ವಂತ ಅಕ್ಕ-ಭಾವನಂತೆಯೇ ಪ್ರೀತಿ ತೋರಿಸಿದವರು. ಅವರೊಂದಿಗೆ ನಾವು ಒಟ್ಟಿಗೆ ಹಬ್ಬ, ಪಿಕ್ನಿಕ್, ಪ್ರವಾಸ ಮೊದಲಾದ ದಿನಗಳನ್ನು ಹಂಚಿಕೊಂಡವರು. ವಾರಾಂತ್ಯದಲ್ಲಿ ಒಮ್ಮೆ ಅವರ ಮನೆಯಲ್ಲಿ ಊಟವಾದರೆ, ಮುಂದಿನ ವಾರ ನಮ್ಮ ಮನೆಯಲ್ಲಿ. ಅವರ ಮಗಳೂ (ನಮ್ಮ ಮಕ್ಕಳಿಂದ ಸ್ವಲ್ಪ ದೊಡ್ಡವಳು) ನಮ್ಮ ದೊಡ್ಡ ಮಗಳೂ ಒಟ್ಟಿಗೆ ಆಡುತ್ತಿದ್ದರು. ಅಂತೂ ಒಟ್ಟಿಗೆ ಸಂಭ್ರಮ ಪಡುತ್ತಿದ್ದೆವು.

(ಸಾಂದರ್ಭಿಕ ಚಿತ್ರ: ಅಂತರ್ಜಾಲಕೃಪೆ)

ಉತ್ತರ ಭಾರತದ ಮುಖ್ಯ ಹಬ್ಬಗಳಲ್ಲಿ ಒಂದಾದ ಶ್ರಾವಣ ಹುಣ್ಣಮೆಯಂದು ಬರುವ ‘ರಕ್ಷಾ ಬಂಧನ’ದ ದಿನ ನಮ್ಮ ಯಜಮಾನರ ಗುರು ಪತ್ನಿಯವರಾದ ‘ಅಕ್ಕ’ ತಪ್ಪದೆ ನಮ್ಮ ಮನೆಗೆ ಬಂದು, ಈ ಸಹೋದರನಿಗೆ ‘ರಾಖಿ’ ಕಟ್ಟಿ, ಸಿಹಿಯುಂಡು ಅವರ ಯುನಿವರ್ಸಿಟಿ ಕ್ವಾರ್ಟರ್ಸ್ ಗೆ ಹಿಂದಿರುಗುತ್ತಿದ್ದರು. ಆಗೆಲ್ಲಾ ಇಂತಹ ರಂಗುರಂಗಿನ ‘ರಕ್ಷೆ’ಗಳನ್ನು ನಮ್ಮ ಮಗಳಿಗೂ ಅವರು ಕಟ್ಟಲೇ ಬೇಕಿತ್ತು. ಅಪ್ಪ-ಮಗಳು ಈ ರಕ್ಷೆಗಳನ್ನು ಕೆಲಕಾಲ ಜೋಪಾನವಾಗಿ ತೆಗೆದಿರುಸುತ್ತಿದ್ದರು. ಮಗಳಿಗಂತೂ ಕೈಯಲ್ಲಿ ಅದನ್ನು ನೋಡುವುದೇ ಖುಷಿ.

ನಾಲ್ಕು ವರ್ಷಗಳು ಕಳೆದವು. ನಮ್ಮವರ ಪಿಹೆಚ್.ಡಿ. ಸಂಶೋಧನಾ ವ್ಯಾಸಂಗವೂ ಮುಗಿಯಿತು. ಉದಯಪುರದಿಂದ ಬೀಳ್ಕೊಟ್ಟು ಪುನಃ ಊರಿಗೆ ಬಂದೆವು. ಯಜಮಾನರು ಮೊದಲಿದ್ದ ಕಾಲೇಜಿನಲ್ಲೇ ಉಪನ್ಯಾಸಕರಾಗಿ ಸೇವೆ ಮುಂದುವರಿಸಿದರು. ಈಗ ಅವರಿಗೆ ನಿವೃತ್ತಿಯಾಗಿ ಕೆಲವು ವರ್ಷಗಳಾಗಿವೆ. ನಿಜವೆಂದರೆ, ಉದಯಪುರ ಬಿಟ್ಟು ಮೂವತ್ತಾರು ವರ್ಷಗಳೇ ಸಂದಿವೆ. ಆದರೆ, ಅಕ್ಕನ ರಕ್ಷೆ ಈ ತಮ್ಮನಿಗೆ ಪ್ರತಿ ವರ್ಷ ತಪ್ಪದೇ, ಅಂಚೆಯಲ್ಲಿ ಬರುತ್ತಲೇ ಇದೆ. ಇತ್ತೀಚೆಯ ವರ್ಷಗಳಲ್ಲಿ ಅಂಚೆಯ ಬದಲು, ಕೋರಿಯರ್ ನಲ್ಲಿ ರಕ್ಷೆಯಂತೂ ಶ್ರಾವಣ ಹುಣ್ಣಮೆಯ ದಿನ, ಇಲ್ಲವೇ ಎರಡು ದಿನ ಮುಂಚಿತವಾಗಿ, ಅವರೇ ಕೈಯಲ್ಲಿ ಬರೆದ ಒಂದು ಪತ್ರದೊಂದಿಗೆ ಬರುತ್ತದೆ. ಈಗ ನಮ್ಮ ಮಗಳಂದಿರಿಗೆ ಮದುವೆಯಾಗಿ ಅವರ ಪತಿಯಂದಿರ ಮನೆಗಳನ್ನು ಸೇರಿದ್ದಾರೆ. ಅವರಿಗೆ ಮದುವೆ ಆಗುವಲ್ಲಿಯವರಿಗೆ ಮಗಳಂದಿರಿಗೂ ಸೇರಿಸಿ, ಅವರಿಗೆ ಒಪ್ಪುವಂತಹ ಬಣ್ಣದ, ಚಂದದ ‘ರಕ್ಷೆ’ಗಳೂ ಪತ್ರದ ಕವರ್ ತೆರೆಯುವಾಗ ಕಂಗೊಳಿಸುತ್ತಿದ್ದವು.

ಒಡಹುಟ್ಟಿದವರೇ ಅಪರಿಚಿತರಂತಿರುವ ಈ ಕಾಲದಲ್ಲಿ, ಪ್ರತಿವರ್ಷವೂ ಸ್ವಂತ ಅಕ್ಕನಂತೆಯೇ ಕೋರಿಯರ್/ಅಂಚೆಯಲ್ಲಿ ರಕ್ಷೆಗಳನ್ನು ಕಳುಹಿಸುತ್ತಿರುವುದು ನಿಜಕ್ಕೂ ಈ ತಮ್ಮನಿಗೆ ಶ್ರೀರಕ್ಷೆ ಆಗಿದೆ. ಹೀಗೆಯೇ ಮುಂದುವರಿಯಲಿ. ‘ಈ ಬಾಂಧವ್ಯದ ಸೇತುವೆ ಇನ್ನಷ್ಟು ಗಟ್ಟಿಯಾಗಲಿ’ – ಎಂಬುದೇ ನನ್ನ ಪ್ರಾರ್ಥನೆ.

-ಸಾವಿತ್ರಿ ಭಟ್ ಬಡೆಕ್ಕಿಲ

11 Responses

  1. Anonymous says:

    ಚಂದದ ಬರಹ .AKKO .

  2. ಬಿ.ಆರ್.ನಾಗರತ್ನ says:

    ಪ್ರೀತಿ ಸುವ ವಿಶಾಲ ಮನೋಭಾವ ಇದ್ದಲ್ಲಿ ಒಡಹುಟ್ಟಿದ ವರೇ ಬೇಕೆನ್ನುವ ಇರಾದೆ ಬರುವುದಿಲ್ಲ. ಉತ್ತಮ ಸಂದೇಶ ಸಾರುವ ಬರಹ ಅಭಿನಂದನೆಗಳು ಮೇಡಂ.

  3. ಉತ್ತಮ ಬರಹ ಸಾವಿತ್ರಿ ಭಟ್.ಈಗಿನ ಎಲ್ಲಾ ಮಕ್ಕಳೂ ಚಂದಕ್ಕಿಂತ ಚಂದದ ರಾಖಿ ಕಟ್ಟಿಸಿಕೊಂಡು ಖುಷಿಪಡುವಕಾಲ. ಸರಿಯಾದ ಪ್ರಸ್ತುತಿ…

  4. ನಯನ ಬಜಕೂಡ್ಲು says:

    ಬಹಳ ಆಪ್ತ ಬರಹ.

  5. Krishnaprabha says:

    ಆತ್ಮೀಯತೆಯ ಅನುಬಂಧ ಬೆಸೆದ ರಾಖಿ

  6. ASHA nooji says:

    SUPER akkooo

  7. Savithri bhat says:

    ಲೇಖನ ಓದಿ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ನನ್ನ ವಂದನೆಗಳು.ಪ್ರಕಟಿಸಿದ ಸಂಪಾದಕಿ ಯವರಿಗೆ ನನ್ನ ವಂದನೆಗಳು

  8. ಶಂಕರಿ ಶರ್ಮ says:

    ಇಂತಹ ನಿಷ್ಕಲ್ಮಶ ಪ್ರೀತಿ ಸಿಗುವುದೂ ಭಾಗ್ಯವೇ ಸರಿ. ದೀರ್ಘ ಕಾಲದಿಂದ ಉದಯಪುರದಿಂಧ ಈಗಲೂ ಸರ್ ಗೆ ಬರುವ ರಾಖಿಯಲ್ಲಿ ತುಂಬಿರುವ ಪ್ರೀತಿ ವಿಶ್ವಾಸವು ಅತ್ಯಂತ ಉತ್ಕೃಷ್ಟ.. ಇದು ಚಿರಕಾಲ ಬಾಳಲೆಂದು ಹಾರೈಕೆಗಳು..ಅಕ್ಕ.

  9. Aparna P I Bhat says:

    ನಿಜ, ಈಗಿನ ಯಾಂತ್ರಿಕ ಬಣ್ಣದ ಬದುಕಿನಲ್ಲಿ ನಿಜವಾದ ರಂಗು ತುಂಬುವುದು ಇಂತಹ ನಿರ್ಮಲ ಬಾಂಧವ್ಯ… ಇದನ್ನು ಜೀವಂತವಾಗಿ ಇರಿಸುವಲ್ಲಿ ನಿಮ್ಮ ಪಾತ್ರವೂ ಅಷ್ಟೇ ಇರಬಹುದು…

  10. Anonymous says:

    ಧನ್ಯವಾದಗಳು ಶಕರಿ ಶರ್ಮಾ ಅವರಿಗೆ..

  11. Anonymous says:

    ಲೇಖನ ಓದಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು

Leave a Reply to Krishnaprabha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: