ಭಾತೃ ಭಾಂಧವ್ಯದ ಪವಿತ್ರ ಹಬ್ಬ…

Share Button

ಎಡೆಬಿಡದ, ಗಡಿಬಿಡಿಯ ಈ ದೈನಂದಿನ ಜೀವನದಲ್ಲಿ ಏಕತಾನತೆಯನ್ನು ಮರೆಸಿ ಜೀವನೋತ್ಸಾಹ ತುಂಬಲು ನಮ್ಮ ಹಿರಿಯರು ವರ್ಷವಿಡೀ ಒಂದಿಲ್ಲದಿದ್ದರಿನ್ನೊಂದು ಸಾಂಪ್ರದಾಯಿಕ ಹಬ್ಬಗಳನ್ನು ಆಚರಣೆಗೆ ತಂದರು. ಹಾಗೆಯೇ ಹಬ್ಬಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮನೆಯ ಹಿರಿ ಹೆಣ್ಮಕ್ಕಳಿಗೆ ಸಿಹಿ, ಖಾರ ತಿಂಡಿ ತಿನಿಸುಗಳನ್ನು ತಯಾರಿಸುವ ಸಂಭ್ರಮವಾದರೆ; ಮನೆಯ ಪುಟ್ಟ ಮಕ್ಕಳಿಗೆ ಹೊಸ ಉಡುಪುಗಳನ್ನು ತೊಟ್ಟು ಅವುಗಳನ್ನು ಮುಗಿಸುವ ಸಂಭ್ರಮ! ಇದಾಗಲೇ ಶ್ರಾವಣ ಮಾಸದ ಸಂಭ್ರಮ ಪ್ರಾರಂಭವಾಗಿಯೆ ಬಿಟ್ಟಿದೆ, ಹಾಗೆಯೇ, ಹಬ್ಬಗಳ ಸಾಲೇ ನಮ್ಮೆದುರು ನಿಂತಿದೆ. ನಾಗರಪಂಚಮಿ ಹಬ್ಬ ಹಾಗೂ ವರ ಮಹಾಲಕ್ಷ್ಮಿ ಹಬ್ಬಗಳ ಸಿಹಿ ಬಾಯೊಳಗೆ ಇನ್ನೂ ಕರಗುವ ಮೊದಲೇ ಬಂದೇ ಬಿಟ್ಟಿದೆ ನೋಡಿ ರಕ್ಷಾಬಂಧನದ ರಾಖಿ ಹಬ್ಬ.

ಈ ಹಬ್ಬವು ಬೇರೆ ಹಬ್ಬಗಳಿಗಿಂತ ತುಸು ಭಿನ್ನವೆಂದೇ ಹೇಳಬಹುದು. ಭಾತೃ- ಭಗಿನಿಯರ ಪವಿತ್ರ ಬಾಂಧವ್ಯದ ಪ್ರತೀಕವಾಗಿ ಆಚರಿಸಲ್ಪಡುವ ಈ ರಕ್ಷಾಬಂಧನ ಹಬ್ಬದಲ್ಲಿ  ತಂಗಿಯು  ತನ್ನ ರಕ್ಷಣೆಯ ಹೊಣೆಯನ್ನು ಪ್ರೀತಿಯ ಅಣ್ಣನಿಗೆ ಒಪ್ಪಿಸುವ ಸಂಕೇತವಾಗಿ ಪವಿತ್ರ ನೂಲಿನ್ನು ಅವನ ಕೈಗೆ ಬಿಗಿಯುತ್ತಾಳೆ. ಹಾಗೆಯೇ ಅಣ್ಣನು ಅದಕ್ಕೆ ಬದ್ಧನಾಗಿ ಇರಬೇಕಾಗುತ್ತದೆ. ಇದುವೇ ರಕ್ಷಾಬಂಧನದ ಮಹತ್ವ. ಈ ಹಬ್ಬವು ಯಾವಾಗ ಪ್ರಾರಂಭವಾಯಿತೆಂದು ಹೇಳುವುದು ತುಸು ಕಷ್ಟವಾದರೂ ದ್ವಾಪರ ಯುಗದಲ್ಲಿಯೇ ದ್ರೌಪದಿಯು ಶ್ರೀಕೃಷ್ಣ ಪರಮಾತ್ಮನಿಗೆ ರಾಖಿ ಕಟ್ಟಿದ ಉಲ್ಲೇಖವಿದೆ. ಆದ್ದರಿಂದಲೇ ಅವಳ ಕಷ್ಟಗಳ ನಿವಾರಣೆಯಲ್ಲಿ ಅವನ  ಪಾತ್ರ ಬಹಳ ಮಹತ್ವದ್ದು. ಇನ್ನು ನಮ್ಮ ದೇಶದಲ್ಲಿ 1905ರಲ್ಲಿ; ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ರವೀಂದ್ರನಾಥ ಠಾಗೋರ್ ಅವರು, ಬಂಗಾಳ ವಿಭಜನೆಯ ಸಮಯದಲ್ಲಿ ಈ ಉತ್ಸವಕ್ಕೆ ನಾಂದಿ ಹಾಡಿದರು. ಹಿಂದೂ-ಮುಸ್ಲಿಂ ಮೈತ್ರಿಯು ಅವರ ಉದ್ದೇಶವಾಗಿತ್ತು. ಜೊತೆಗೇ ಎಲ್ಲರೊಂದುಗೂಡಿ ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರೇಪಿಸುವುದು ಕೂಡಾ ಆಗಿತ್ತು.

ಇತಿಹಾಸದಲ್ಲಿ, ವಿಧವೆ ಕರ್ಣಾವತಿಯು ಚಿತ್ತೂರಿನ ರಾಣಿಯಾಗಿದ್ದ ಸಮಯದಲ್ಲಿ ಗುಜರಾತಿನ ಸುಲ್ತಾನ್ ಬಹಾದುರ್ ಶಾ ದಂಡೆತ್ತಿ ಬಂದಾಗ, ಚಕ್ರವರ್ತಿ ಹುಮಾಯೂನ್ ನನಿಗೆ ರಾಖಿ ಕಳುಹಿಸಿ, ಪವಿತ್ರ ಬಂಧವನ್ನು ಏರ್ಪಡಿಸುತ್ತಾಳೆ ಮತ್ತು ತನ್ನ ರಕ್ಷಣೆಯ ಹೊಣೆಯನ್ನು ಅವನ ಕೈಗೊಪ್ಪಿಸುತ್ತಾಳೆ. ಅಂತೆಯೇ, ಚಕ್ರವರ್ತಿಯು ಸಾಕಷ್ಟು ಸೈನ್ಯ ಬಲವನ್ನು ಕಳುಹಿಸಿ ಚಿತ್ತೂರನ್ನು ಕಾಪಾಡಿ ತನ್ನ ಭಾತೃತ್ವದ ಕರ್ತ್ವವ್ಯವನ್ನು ಬಹು ಚೆನ್ನಾಗಿ ನಿಭಾಯಿಸುತ್ತಾನೆ.

(ಚಿತ್ರಮೂಲ: ಅಂತರ್ಜಾಲ)

ಹಬ್ಬದ ದಿನ ದೇವರ ಮುಂದೆ ಸೋದರನನ್ನು ಕುಳ್ಳಿರಿಸಿ ಆರತಿ ಬೆಳಗಿ, ತಿಲಕವನ್ನಿಟ್ಟು ಕೈಗೆ ರಾಖಿ ಕಟ್ಟಿದರೆ, ಸೋದರಿಗೆ ಚಂದದ ಉಡುಗೊರೆಯೊಂದು ಕೈಸೇರುತ್ತದೆ. ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಈ ಹಬ್ಬವು ತುಂಬಾ ಮಹತ್ವಪೂರ್ಣವಾಗಿ ಆಚರಿಸಲ್ಪಡುತ್ತದೆ. ಈ  ದಿನಗಳಲ್ಲಿ ಇದರ ಸಂಭ್ರಮವನ್ನು ಬೇರೆ ಬೇರೆ ರೀತಿಗಳಲ್ಲಿ ಕಾಣಬಹುದು. ಸ್ವಂತ ಅಣ್ಣ ಇಲ್ಲದವರು ಸನ್ಮಿತ್ರರಿಗೆ ರಾಖಿ ಬಿಗಿದು ಅಣ್ಣನನ್ನಾಗಿಸಿಕೊಳ್ಳುವುದು ಸಾಮಾನ್ಯ. ದೂರದೂರು ಅಥವಾ ವಿದೇಶಗಳಲ್ಲಿರುವವರು ಅಂಚೆ ಮೂಲಕ ಕಳುಹಿಸಿ ತಮ್ಮ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಾರೆ. ಅಮೇರಿಕದಲ್ಲಿರುವ ನನ್ನ ಮಗಳು ಅವಳ ತಮ್ಮನಿಗೆ ಪ್ರತೀ ವರ್ಷವೂ ಅಲ್ಲಿಂದ ಸುಂದರ ರಾಖಿಯನ್ನು ಕಳುಹಿಸುವುದು ರೂಢಿ. ಒಮ್ಮೆ ಅವಳು ಕಳುಹಿಸಿದ ರಾಖಿಯು ಹಬ್ಬ ಮುಗಿದರೂ ತಲಪದಾಗ ಅದು ಎಲ್ಲೋ ಮಧ್ಯದಲ್ಲೇ ನಾಪತ್ತೆಯಾದುದು ಖಾತ್ರಿಯಾಯಿತು. ಆ ಮೇಲಿಂದ ತಮ್ಮನಿಗೆ ಆ ದಿನ ಅವಳ ಪರವಾಗಿ ಅವನೇ ಕೊಂಡುಕೊಂಡು ಕಟ್ಟಿಕೊಳ್ಳಲು ಬಿಟ್ಟಿ ಸಲಹೆ ಕೊಟ್ಟಳು! ಅದರ ಮೇಲಿಂದ, ಇನ್ನೂ ಮುಂದಕ್ಕೆ ಹೋದರೆ, ರಾಖಿಯು ಅಂತರ್ಜಾಲದಲ್ಲಿಯೇ ವಿನಿಮಯ..ಎಲ್ಲವೂ ಸಾಂಕೇತಿಕ! ಈ ಸಲದ ಜಾಗತಿಕ ತೊಂದರೆಯಿಂದಾಗಿ ಎಲ್ಲಾ ಹಬ್ಬಗಳಂತೆ ಇದಕ್ಕೆ ಕೂಡಾ ಕೊಂಚ ಉತ್ಸಾಹ ತಗ್ಗಿದಂತೆ ಕಂಡರೂ, ಅಂಚೆ ಇಲಾಖೆಯು ರೂ 100/- ಕ್ಕೆ ಎಲ್ಲಿಗೆ ಬೇಕಾದರೂ ರಾಖಿಯನ್ನು ಕಳುಹಿಸುವ ಭರವಸೆಯೊಂದಿಗೆ ಸಾರ್ವಜನಿಕರಿಗೆ ತನ್ನ ಸಹಕಾರವನ್ನು ನೀಡುತ್ತಿದೆ.

ಭರವಸೆಯೇ ಬೆಳಕು.. ಪರಸ್ಪರ ಪ್ರೀತಿ, ವಿಶ್ವಾಸದ ಪವಿತ್ರ ಬಂಧನದಲ್ಲಿದೆ, ನಮ್ಮ ನಾಳೆಯ ನೆಮ್ಮದಿಯ ಬದುಕು. ಈ ಸಲದ ರಕ್ಷಾಬಂಧನ ಹಬ್ಬವು ಪರಸ್ಪರ ಸೋದರ ಬಾಂಧವ್ಯವನ್ನು ಇನ್ನಷ್ಟು ಬೆಸೆಯುವುದರಲ್ಲಿ ಸಫಲವಾದರೆ ಎಷ್ಟೊಂದು ಒಳ್ಳೆಯದಲ್ಲವೇ?

-ಶಂಕರಿ ಶರ್ಮ, ಪುತ್ತೂರು.

8 Responses

 1. ಒಳ್ಳೆಯ ಬರಹ ಶಂಕರಿಶರ್ಮ..

 2. Avatar Sandhya says:

  Sooper …….

 3. Avatar Anonymous says:

  Very nice Madam.Happy raksha bhandan.

 4. Avatar Sujatha Sundar says:

  Very nice Madam

 5. Avatar Savithri bhat says:

  ಚೆನ್ನಾಗಿ ಬರೆದಿರಿ

 6. Avatar ನಯನ ಬಜಕೂಡ್ಲು says:

  ಸೂಪರ್

 7. Avatar ಶಂಕರಿ ಶರ್ಮ says:

  ಲೇಖನ ಓದಿ ಮೆಚ್ಚಿದ ತಮಗೆಲ್ಲರಿಗೂ ಕೃತಜ್ಞತೆಗಳು.

 8. Avatar Jayalaxmi says:

  ಸುಂದರ ಬರಹ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: