ಲೋಕದಲ್ಲಿ ಪ್ರಥಮವಾಗಿ ರಾಖಿ ಕಟ್ಟಿದಾಕೆ

Share Button

ಅಣ್ಣ ತಂಗಿಯರ ಪ್ರೀತಿಯ ದ್ಯೋತಕವೇ ರಾಖಿ ಕಟ್ಟುವ ಪದ್ಧತಿ.ಇದನ್ನು ಶ್ರಾವಣ ಹುಣ್ಣಿಮೆಯ ದಿನ ಆಚರಿಸುವ ಸಂಪ್ರದಾಯ. ಸೋದರ+ಸೋದರಿಕೆ ಸಂಕೇತವಾಗಿ ಕಟ್ಟುವ ಈ ರಕ್ಷಾಬಂಧನಕ್ಕೆ ವಿಶಿಷ್ಟ ಅರ್ಥವಿದೆ.ಯಾರೇ ಒಬ್ಬ ಹೆಣ್ಣುಮಗಳು ಮತ್ತೊಬ್ಬ ಗಂಡಿಗೆ; ಅಥವಾ ಒಬ್ಬ ಗಂಡು ಮತ್ತೊಬ್ಬ ಗಂಡಿಗೆ ರಾಖಿ ಕಟ್ಟಿದರೆಂದರೆ ಅವರ ನಡುವೆ ಸೋದರಭಾವನೆಯೇ ಹೊರತು ಅನ್ಯಥಾ ಸುಳಿಯುವ ಮಾತೇ ಇಲ್ಲ. ಇಂತಹ ತತ್ವವನ್ನು ಪ್ರತಿಬಿಂಬಿಸುವ ಈ ಹಬ್ಬವನ್ನು ಭಾರತದೆಲ್ಲೆಡೆ ಆಚರಿಸುತ್ತಾರೆ.ಇದನ್ನು ನೂಲ ಹುಣ್ಣಿಮೆ ಹಬ್ಬವೆಂದೂ ಕರೆಯುತ್ತಾರೆ. ಸೋದರಿಯೊಡನೆ ಸೋದರನಾಗಿ ನಾನು ನಿನ್ನನ್ನು ರಕ್ಷಣೆ ಮಾಡುತ್ತೇನೆ ಎಂದು ಪ್ರಮಾಣ ವಚನದಂತಿದೆ ಈ ರಾಖಿ!

ಪಾಂಡವರನ್ನು ಕಪಟದ್ಯೂತದಲ್ಲಿ ಸೋಲಿಸಿದ ದಾಯಾದಿ ದುರ್ಯೋಧನನಿಗೆ ಅವರನ್ನು ಮತ್ಸರದಿಂದ ಮುಗಿಸುವ ಹಠವು ಬೇರೂರಿತು. ಪಾಂಡವರನ್ನು ಕೊಲ್ಲುವುದಕ್ಕಾಗಿ ಅರಗಿನಮನೆಯಲ್ಲಿರಿಸಿ, ಬೆಂಕಿಕೊಡುವ ಹುನ್ನಾರ ದುರ್ಯೋಧನ ಮಾಡುತ್ತಾನೆ. ಈ ದುಷ್ಟವರ್ತನೆಯ ಸುಳಿವು ವಿದುರನಿಗೆ ತಿಳಿದು ಗುಪ್ತವಾಗಿ ತಪ್ಪಿಸುವಂತೆ ಸುರಂಗಮಾರ್ಗವನ್ನು ಸೃಷ್ಟಿಸುತ್ತಾನೆ.ಅಲ್ಲಿಂದ ಪಾರಾದ ಪಾಂಡವರು; ಊರೂರು ಅಲೆದಾಟದಲ್ಲಿ ತೊಡಗಿ ಕೆಲಕಾಲ ಪಾಂಚಾಲ ನಗರದಲ್ಲಿ ಬ್ರಾಹ್ಮಣ ವೇಷಧಾರಿಗಳಾಗಿರುತ್ತಾರೆ.

ಇಂತಿರಲು ಧರ್ಮಸ್ಥಾಪಕನೂ ಪಾಂಡವಪಕ್ಷಪಾತಿಯೂ ಆದ ಶ್ರೀಕೃಷ್ಣನು ಪಾಂಡವರ ಬೇಹುಗಾರನಾಗಿ ದುರ್ಯೋಧನನ ಅರಮನೆಗೆ ಬರುತ್ತಾನೆ. ಆಗ ದುರ್ಯೋಧನನ ಅನುಪಸ್ಥಿತಿ ವೇಳೆ ಆತನ ಮಡದಿ ಭಾನುಮತಿಯೇ ಸ್ವಾಗತಿಸುತ್ತಾಳೆ. ಕುಶಲೋಪರಿ ಕೇಳಿ ಉಪಚಾರಮಾಡುತ್ತಾ ಕೃಷ್ಣನಿಗಾಗಿ ಕಾದಿರಿಸಿದ್ದ ಸರ್ವತೋಬದ್ಧ ಆಸನದಲ್ಲಿ ಕುಳ್ಳಿರಿಸುತ್ತಾಳೆ. ಭಾನುಮತಿ ಹಿಂದೆ-ಮುಂದೆ ನೋಡುತ್ತಾ; ಕೃಷ್ಣಾ..,ನಿನ್ನಲ್ಲೊಂದು ಮಾತಾಡಬೇಕಿದೆಯಲ್ಲಣ್ಣ ಎಂದು ಪ್ರಾರಂಭಿಸಿ ಅಣ್ಣಾ, ದ್ರುಪದರಾಜನ ಮಗಳು ದ್ರೌಪದಿಗೆ ಸ್ವಯಂವರವಂತೆ. ನನ್ನ ಪತಿರಾಯ ದುರ್ಯೋಧನನು ಆಕೆಯನ್ನು ವರಿಸಲು ಹಾತೊರೆಯತ್ತಿದ್ದಾನೆ.ಆ ಸೌಂದರ್ಯಖನಿ ದ್ರೌಪದಿಯನ್ನು ದುರ್ಯೋಧನ ವರಿಸದಂತೆ ತಪ್ಪಿಸಬೇಕು ಎಂದು ದೀನಳಾಗಿ ಕೃಷ್ಣನಲ್ಲಿ ಬೇಡಿಕೊಳ್ಳುತ್ತಾಳೆ ಭಾನುಮತಿ.

ಯಾವ ಹೆಣ್ಣುತಾನೇ ತನ್ನ ಸ್ಥಾನವನ್ನು ಬೇರೊಂದು ಹೆಣ್ಣಿಗೆ ಬಿಟ್ಟುಕೊಡುತ್ತಾಳೆ! ಅದರಲ್ಲೂ ದ್ರೌಪದಿ ಅತಿಚೆಲುವೆ. ಆಕೆಯನ್ನು ತನ್ನ ಪತಿ ವಿವಾಹವಾದರೆ ತನಗಿಲ್ಲಿ ಸ್ಥಾನವಿಲ್ಲ ಎಂದು ಆಕೆ ಭಾವಿಸುವುದು ಸ್ವಾಭಾವಿಕ. ಅವಳಮಾತು ಕೇಳಿದ ಕೃಷ್ಣನಿಗೆ ಮುಗುಳುನಗೆ ಮೂಡಿ ಮರೆಯಾಗಿ ಹೆದರಬೇಡ ತಂಗೀ, ಆ ಸಂದರ್ಭ ಬಾರದಂತೆ ನಾನು ನೋಡಿಕೊಳ್ಳುತ್ತೇನೆ. ಎಂದು ಭರವಸೆ ನೀಡುತ್ತಾನೆ. ಅವನಮಾತಿನಿಂದ ಭಾನುಮತಿ ಸಮಾಧಾನ ತಾಳಿದಳಾದರೂ ಮತ್ತೆ ಮತ್ತೆ ಅದನ್ನೇ ಒತ್ತಿ ಒತ್ತಿ ಹೇಳುತ್ತಾ ತನ್ನ ಸೀರೆಯ ಸೆರಗಿನ ಜರಿ ಅಂಚನ್ನು ಹರಿದು ಕೃಷ್ಣನ ಬಲಕೈಗೆ ರಾಖಿ ಕಟ್ಟುತ್ತಾಳೆ. ಅಣ್ಣ, ದ್ರೌಪದಿಯ ಸ್ವಯಂವರದ ದಿನ ಈ ರಾಖಿಯನ್ನು ನೆನಪುಮಾಡಿಕೊಳ್ಳಣ್ಣ‌ ಎನ್ನುತ್ತಾಳೆ. ದ್ರೌಪದಿಯನ್ನು ದುರ್ಯೋಧನ ವರಿಸದಂತೆ ತಡೆಯಲು ಅಥವಾ ಆ ಪ್ರಕಾರವಾಗಿ ಕಾರ್ಯರೂಪಿಸಲು ಕೃಷ್ಣನೇ ತಕ್ಕುದಾದವ ಎಂದು ಭಾನುಮತಿ ಅರ್ಥಮಾಡಿಕೊಂಡಿದ್ದಳು.ಇಂದಿನ ಸೋದರಿಯರು ಮುಖ್ಯವಾಗಿ ಈ ಅಂಶವನ್ನು ಗಮನಿಸಬೇಕು. ಗುರಿಯಿದ್ದರೆ ಸಾಲದು!, ಅದರ ರೂಪುರೇಷೆಯೂ ತಿಳಿದಿರಬೇಕು!!.

ಹೀಗೆ ಅಣ್ಣ-ತಂಗಿ ಸಂಬಧದ ಪ್ರತೀಕವಾದ ರಾಖಿಯನ್ನು ಲೋಕದಲ್ಲಿ ಪ್ರಥಮವಾಗಿ ಭಾನುಮತಿಯು ಕೃಷ್ಣನ ಕೈಗೆ ಕಟ್ಟಿದಳಲ್ಲದೆ ತನ್ನ ಮನೋಭೀಷ್ಟದಲ್ಲಿ ಜಯ ಸಾಧಿಸಿದಳು.

-ವಿಜಯಾಸುಬ್ರಹ್ಮಣ್ಯ, ಕುಂಬಳೆ 

4 Responses

  1. ಪ್ರಕಟಿಸಿದ ಹೇಮಮಾಲಾ ಹಾಗು ಓದುಗರಿಗೆ ರಕ್ಷಾಬಂಧನ ಶುಭಾಶಯಗಳೊಂದಿಗೆ ವಂದನೆಗಳು.

  2. Savithri bhat says:

    ರಕ್ಷಾಬಂಧನ ದ ಮಹತ್ವ ವನ್ನು ಚೆನ್ನಾಗಿ ನಿರೂಪಿಸಿದ್ದೀರಿ

  3. ನಯನ ಬಜಕೂಡ್ಲು says:

    ರಾಖಿ ಯ ಹಿಂದೆ ಇರುವ ಈ ಕಥೆ ಇವತ್ತೇ ತಿಳಿದದ್ದು. ಚೆನ್ನಾಗಿದೆ ಮೇಡಂ ರಕ್ಷಾ ಬಂಧನದ ಮಹತ್ವ ತಿಳಿಸಿ ಕೊಡುವ ಕಥೆ

  4. ಶಂಕರಿ ಶರ್ಮ says:

    ಚಂದದ ಸಕಾಲಿಕ ಲೇಖನ..ಧನ್ಯವಾದಗಳು ವಿಜಯಕ್ಕ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: