ಪ್ಲಾಸ್ಟಿಕ್ ಹಾವಳಿ

Share Button

 

ನಾವು ದಿನನಿತ್ಯ ಉಪಯೋಗಿಸುತ್ತಿರುವ ಪ್ಲಾಸ್ಟಿಕ್ ಕವರ್ ಗಳ ವಿಲೇವಾರಿ ಸರಿಯಾಗಿ ಆಗದೆ ಎಲ್ಲ ಗ್ರಾಮಗಳು  ಮತ್ತು ನಗರಗಳ ರಸ್ತೆಗಳು ಪಾಸ್ಟಿಕ್ ಮಯವಾಗಿ ನೋಡಲು ಒಂದು ರೀತಿಯ ಅಸಹ್ಯ ಹುಟ್ಟಿಸುವಂತಹ ವಾತಾವರಣ ಸೃಷ್ಟಿಯಾಗಿದೆ. ಯಾವುದೇ ಊರಿಗೆ ಅಥವಾ ನಗರಕ್ಕೆ ನೀವು ಹೋಗುವಾಗ ಈ ಪ್ಲಾಸ್ಟಿಕ್ ಹಾವಳಿ ನೋಡಬೇಕು. ಟ್ರೈನ್ ನಲ್ಲಿ ಹೋಗುವಾಗ ಅಕ್ಕಪಕ್ಕ ಕುಡಿದ ನೀರಿನ ಬಾಟಲುಗಳು, ತಿಂಡಿ ತಿಂದು ಎಸೆದ ಕವರ್ ಗಳು, ಲೋಟಗಳು ಎಲ್ಲೆಲ್ಲೂ ಹಾರಾಡುತ್ತಿರುತ್ತವೆ. ಇನ್ನು ನಗರ ಪ್ರವೇಶವಾಗುತ್ತಿದ್ದಂತೆ ರಾಶಿ ರಾಶಿ ಪ್ಲಾಸ್ಟಿಕ್ ಕವರ್ ಗಳು ಕಸದ ರಾಶಿ ನಿಮ್ಮನ್ನು ಸ್ವಾಗತಿಸುತ್ತದೆ.

ಬಸ್ ನಲ್ಲು ಹೋಗುವಾಗಲೂ ಅಷ್ಟೆ, ಯಾವಾ ಹಳ್ಳಿ ನೋಡಿದರೂ ಊರ ಹೊರಗೆ ಉಪಯೋಗಿಸಿ ಎಸೆದ ರಾಶಿ ರಾಶಿ ಕವರ್ ಗಳು. ಇವು ನೂರಾರು ವರ್ಷವಿದ್ದರೂ ಭೂಮಿಯಲ್ಲಿ ಕರಗುವುದಿಲ್ಲ. ಇನ್ನು ಸುಟ್ಟರೆ ಪರಿಸರ ಹಾಳು. ಹೀದಿದ್ದರೂ ನಾವು ಈ ಪ್ಲಾಸ್ಟಿಕ್ ಬಳಕೆ ಕಮ್ಮಿ ಏಕೆ ಮಾಡಬಾರದು? ಯಾವ ಬಡಾವಣೆಯಲ್ಲಿ ನೋಡಿ, ರಸ್ತೆ ಅಕ್ಕ ಪಕ್ಕ ಅಥವಾ ಕಸದ ತೊಟ್ಟಿ ಹತ್ತಿರ ಖಾಲಿ ನಿವೇಶನಗಳಲ್ಲಿ ರಾಶಿ ರಾಶಿ ಕವರ್ ಗಳು, ನೋಡಲು ಅಸಹ್ಯವಾಗುತ್ತದೆ.

ಯಾವುದೋ ಒಂದು ಯಾತ್ರಾ ಸ್ಥಳಕ್ಕೆ ಹೋಗಿ. ಎಲ್ಲರ ಕೈಯಲ್ಲೂ ಒಂದೊಂದು ಪ್ಲಾಸ್ಟಿಕ್ ಚೀಲ. ಪ್ರೇಕ್ಷಣೀಯ ಸ್ಥಳಗಳಲ್ಲಿ ನದಿಗಳ ಅಕ್ಕಪಕ್ಕ  ಎಲ್ಲಿ ನೋಡಿದರೂ ರಾಶಿರಾಶಿ ಪ್ಲಾಸ್ಟಿಕ್. ಬಸ್ಸುಗಳಲ್ಲಿ ತಿಂಡಿ ತಿನಿಸು ತಿಂದು ಕಿಟಿಕಿಗಳಿಂದ ಕವರ್‍ ಗಳನ್ನು, ಹಣ್ಣಿನ್ನ ಸಿಪ್ಪೆಗಳನ್ನು ಹೊರಕ್ಕೆ ಎಸೆಯುವುದು ಸರ್ವೇಸಾಮಾನ್ಯ. ಕೆಲವರಂತೂ ಕಡ್ಲೆಕಾಯಿ ತಿಂದು ಬಸ್ಸೊಳಗೇ ಸಿಪ್ಪೆಯನ್ನು ಹರಡಿ ಹೋಗುತ್ತಾರೆ. ಕಿಟಿಕಿಯಿಂದ ಉಗಿಯುವುದು ಕೆಟ್ಟ ಅಭ್ಯಾಸ. ಇವರ ಉಗುಳು ಬೇರೆಯರಿಗೆ ತಾಕಿ ದೊಡ್ಡ ಜಗಳಕ್ಕೆ ಕಾರಣವಾಗುತ್ತದೆ.

ಖಾಸಗಿ ವಾಹನದಲ್ಲಿ ಹೋಗುವವರದೂ ಇದೇ ಹಣೆಬರಹ. ತಿಂಡಿತಿನಿಸುಗಳನ್ನು ಪಾರ್ಸೆಲ್ ತರುವುದು, ದಾರಿಯಲ್ಲಿ ಒಳ್ಳೆ ಮರಗಿಡ ಅಥವಾ ನೀರಿರುವ ಕಡೆ ನಿಲ್ಲಿಸಿ ತಿಂಡಿ ತಿಂದು ತಟ್ಟೆ ಲೋಟಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಸೆದು ಹೋಗುವುದು ಸರ್ವೇಸಾಮಾನ್ಯ. ಆದರೆ ಜವಾಬ್ದಾರಿಯಿರುವ ನಾಗರಿಕರು , ಪ್ರವಾಸಿಗರು, ತಿಂದ ತಟ್ಟೆ , ಲೋಟಗಳನ್ನು ಒಂದು ಬಾಕ್ಸ್ ನಲ್ಲಿ ಹಾಕಿಕೊಂಡು ಕಸದ ತೊಟ್ಟಿಯಲ್ಲಿಯೇ ಹಾಕುತ್ತಾರೆ. ಈ ರೀತಿ ಎಲ್ಲರೂ ಅನುಸರಿಸಿದರೆ ಸಮಸ್ಯೆಯೇ ಇರುವುದಿಲ್ಲ.

ಇನ್ನು ಮದುವೆ ಸಮಾರಂಭಗಳಲ್ಲಿ, ಮನೆಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಶೀಟ್ ಗಳನ್ನು ಉಪಯೋಗಿಸಬಾರದೆಂಬ ನಿಬಂಧನೆ ಇದ್ದರೂ ಕೆಲವರು ಕಾನೂನು ಉಲ್ಲಂಘಿಸಿ ಉಪಯೋಗಿಸುವುದೂ ಅಲ್ಲದೆ ಸರಿಯಾದ ರೀತಿ ವಿಲೇವಾರಿ ಮಾಡದೆ ಅಲ್ಲಿನ ವಾತಾವರಣವನ್ನು ಹಾಳು ಮಾಡಲು ಕಾರಣರಾಗುತ್ತಾರೆ.

ಸಾಮಾನ್ಯವಾಗಿ ಯಾವುದೇ ಊರಿಗೆ ಹೋದರೂ ಮೊದಲು ಕಣ್ಣಿಗೆ ಬೀಳುವುದು ಊರ ಹೊರಗಿರುವ ರಾಶಿ ರಾಶಿ ಪ್ಲಾಸ್ಟಿಕ್ ಕವರ್ ಗಳು. ಅದಕ್ಕೆ ಉದಾಹರಣೆ ನಾವು ಇತ್ತೀಚೆಗೆ ಹೋದ ಬಿಳಿಗಿರಿ ರಂಗನ ಬೆಟ್ಟ. ಇದು ಒಂದು ರಕ್ಷಿತಾರಣ್ಯ ಹಾಗೂ ಬಿಳಿಗಿರಿರಂಗನ ದೇವಸ್ಥಾನಕ್ಕೆ ಹೆಸರುವಾಸಿಯಾದ ಸ್ಥಳ. ದೇವಸ್ಥಾನಕ್ಕೆ ಹೋಗುವ ರಸ್ತೆಯ ಅಕ್ಕಪಕ್ಕದಲ್ಲಿರುವ ಚರಂಡಿಗಳ ಭರ್ತಿ ಕಾಫಿ, ಟೀ ಕುಡಿದು ಎಸೆದ ಪ್ಲಾಸ್ಟಿಕ್ ಲೋಟಗಳು ಚೆಲ್ಲಾಡುತ್ತಿದ್ದುವು. ಮನಸ್ಸಿಗೆ ಕಸಿವಿಸಿಯಾಯಿತು. ಆದರೆ ನಾವು ಮಡಿಕೇರಿ ಜಿಲ್ಲೆಯ ಇನ್ನೊಂದು ಪ್ರವಾಸಿ ತಾಣಕ್ಕೆ ಹೋಗುವಾಗ ಆದ ಅನುಭವ ಚೆನ್ನಾಗಿತ್ತು. ರಸ್ತೆಯ ಅಕ್ಕಪಕ್ಕದಲ್ಲಿ ಎಲ್ಲೂ ಪ್ಲಾಸ್ಟಿಕ್ ಕಣ್ಣಿಗೆ ಬೀಳಲಿಲ್ಲ. ಎಲ್ಲ ಕಡೆ ಪ್ಲಾಸ್ಟಿಕ್ ರಹಿತ ಪ್ರದೇಶ ಎಂಬ ಬೋರ್ಡ್ ಗಳು, ಜೊತೆಗೆ ಜನರೂ ಸಹ ಅಷ್ಟೇ ಶಿಸ್ತಿನಿಂದ ಪ್ರವಾಸಿತಾಣಗಳನ್ನು ಸ್ವಚ್ಚವಾಗಿ ಇಟ್ಟಿದ್ದರು. ನೋಡಿ ತುಂಬಾ ಖುಷಿಯಾಯಿತು.

ಪ್ಲಾಸ್ಟಿಕ್ ಇಷ್ಟಕ್ಕೆ ಸೀಮಿತವಾಗಿಲ್ಲ ಎನ್ನುವುದಕ್ಕಿಂತ ಪ್ಲಾಸ್ಟಿಕ್ ಸಾಮಗ್ರಿಗಳಿಲ್ಲದೇ ದಿನಚರಿಯೂ ಇಲ್ಲ ಎನ್ನುವಷ್ಟರ ಮಟ್ಟಿಗೆ ದಿನ ಬಳಕೆ ವಸ್ತುಗಳಲ್ಲಿ ಸೇರಿ ಹೋಗಿದೆ. ಬೆಳಗ್ಗೆ ಎದ್ದರೆ ಬೇಕಾಗುವ ಹಾಲಿನ ಪಾಕೆಟ್ ಗಳು, ಕುಡಿಯುವ ನೀರು ಕ್ಯಾನ್ ಗಳಲ್ಲಿ, ಬಾಟಲ್ ಗಳಲ್ಲಿ ಎಲ್ಲೆಲ್ಲಿಯೂ ದೊರೆಯುತ್ತವೆ. ಯಾವುದೇ ನೈಸರ್ಗಿಕ ಮೂಲದಿಂದ ದೊರೆಯುವ ನೀರು ಕುಡಿಯಲು ಯೋಗ್ಯವಾಗಿಲ್ಲವಾದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾಟಲ್ ನೀರನ್ನು ಅವಲಂಬಿಸಿದ್ದಾರೆ. ಇನ್ನು ದವಸ ಧಾನ್ಯಗಳು , ಎಣ್ಣೆ, ತುಪ್ಪ, ಅಕ್ಕಿ ಎಲ್ಲವೂ ಪ್ಲಾಸ್ಟಿಕ್ ಕವರ್ ಅಥವಾ ಚೀಲಗಳಲ್ಲಿ ದೊರೆಯುತ್ತವೆ. ಜೊತೆಗೆ ತರಕಾರಿ ಮಾರುವವರೂ ಸಹ ಪ್ಲಾಸ್ಟಿಕ್ ಕವರ್ ನಲ್ಲಿ ಮಾರುತ್ತಾರೆ.

ಬಟ್ಟೆ ಅಂಗಡಿಗಳಲ್ಲಿ, ಮೂಲೆ ಮೂಲೆಗಳಲ್ಲಿ ಎಲ್ಲಾ ಕಡೆಯಿಂದ ಬಂದು ಸೇರುವ ನೂರಾರು ಪ್ಲಾಸ್ಟಿಕ್ ಕವರ್ ಗಳು ಕಸದ ತೊಟ್ಟಿಯನ್ನು ಸೇರುತ್ತವೆ. ಕಸದ ತೊಟ್ಟಿಯಲ್ಲಿರುವ ಆಹಾರವನ್ನು ತಿನ್ನುವ ಆಸೆಗೆ ಒಮ್ಮೊಮ್ಮೆ ಹಸುಗಳು ಪ್ಲಾಸ್ಟಿಕ್ ಕವರ್ ಸಮೇತ ತಿಂದು ಆರೋಗ್ಯ ಸಮಸ್ಯೆಗಳಾಗಿರುವ ವಿಚಾರ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಅದರಲ್ಲೂ ಮಾದುವೆ ಸಮಾರಂಭಗಳಲ್ಲಿ ಉಂಟಾಗುವ ವೇಸ್ಟ್ ಡಿಸ್ ಪೋಸಲ್ ಸರಿಯಾದ ರೀತಿ ಮಾಡುತ್ತಿಲ್ಲ. ಇದರಿಂದ ಅನಾರೋಗ್ಯಕರ ವಾತಾವರಣ ಉಂಟಾಗಲು ಕಾರಣವಾಗಿದೆ.

ಹೊರದೇಶಗಳಲ್ಲಿ, ಅದರಲ್ಲೂ ಅಮೇರಿಕಾದಲ್ಲಿ ನಮಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಉಪಯೋಗಿಸುತ್ತಾರೆ. ಆದರೆ ಅಲ್ಲಿ ವಿಲೇವಾರಿ ಮಾಡುವ ರೀತಿ ಚೆನ್ನಾಗಿದೆ. ನಾವು ಅಮೇರಿಕಾದಲ್ಲಿ ನಮ್ಮ ಮಗನ ಜತೆ ಇದ್ದಾಗ ಹಲವಾರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೆವು. ಯೂರೋಪ್ ಪ್ರವಾಸಕ್ಕೆ ಹೋದಾಗಲೂ ಅಷ್ಟೆ. ಎಲ್ಲೂ ನಮ್ಮಲ್ಲಿ ಕಾಣುವಂತೆ ಅಸಹ್ಯವಾಗುವ ರೀತಿ ಪ್ಲಾಸ್ಟಿಕ್ ಕವರ್ ಗಳು ಹಾರಾಡುವುದನ್ನು ನೋಡಲು ಸಿಕ್ಕಿಲ್ಲ. ಹೊರದೇಶಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಕಸವನ್ನು 3 ಭಾಗಗಳಾಗಿ ವಿಂಗಡಿಸಲಾಗುತ್ತದೆ. Organic, Inorganic, Bottles , Paper waste .. ಈ ರೀತಿ.  Organic waste ನ್ನು paper cover ನಲ್ಲಿ ಹಾಕಿ ಕಸದ ಸಂಗ್ರಾಹಕ ಡಬ್ಬಿಗೆ ಹಾಕಬೇಕು. Switzerland ನಲ್ಲಿ ಹೆಚ್ಚು ಹೆಚ್ಚು ಕಸ ಸಂಗ್ರಹ ಮಾಡಿದಲ್ಲಿ ಹೆಚ್ಚಿನ ಹಣ ಪಾವತಿ ಮಾಡಬೇಕು.

ನಮ್ಮಲ್ಲೂ ಸಹ ಸರ್ಕಾರ ಸರಿಯಾದ ಯೋಜನೆಗಳನ್ನು ರೂಪಿಸಬೇಕು. ಬೇರೆ ದೇಶಗಳಲ್ಲಿ ವಿಧಿಸುವಂತೆ ದಂಡ ವಿಧಿಸಬೇಕು, ಆಗಲೇ ನಮ್ಮ ಜನ ಬುದ್ಧಿ ಕಲಿಯುತ್ತಾರೆ. ಪ್ರಜಾಪ್ರಭುತ್ವದಲ್ಲಿ ಹಕ್ಕುಗಳಷ್ಟೇ ಅಲ್ಲ ಮಾಡಬೇಕಾದ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ಪ್ರತಿಯೊಬ್ಬ ನಾಗರೀಕರು ಕಸ ವಿಲೇವಾರಿಯನ್ನು ಸರಿಯಾದ ರೀತಿ ನಿರ್ವಹಿಸುವುದು, ಪ್ಲಾಸ್ಟಿಕ್ ಮರು ಉಪಯೋಗ ಮತ್ತು ಒಳ್ಳೆ ವಾತಾವರಣವನ್ನು ನಿರ್ಮಿಸಲು ಸಹಯೋಗ ನೀಡುವುದು ಇತ್ಯಾದಿ ಪಾಲಿಸಬೇಕು. ಪ್ರೇಕ್ಷಣೀಯ ಸ್ಥಳಗಳನ್ನು, ನದಿಗಳನ್ನು ಮಲಿನಗೊಳಿಸುವವರಿಗೆ ದಂಡ ವಿಧಿಸಬೇಕು. ಸ್ಥಳೀಯರು ಈ ಬಗ್ಗೆ ತಮ್ಮನ್ನು ತೊಡಗಿಸಿಕೊಂಡರೆ ಇದು ಸಾಧ್ಯ. ನಮ್ಮ ದೇಶದಲ್ಲಿಯೂ ಸಹ ಆಹ್ಲಾದಕರ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಆಶಿಸೋಣ. ಪ್ಲಾಸ್ಟಿಕ್ ಉಪಯೋಗ ಎಲ್ಲ ಕ್ಷೇತ್ರಗಳಲ್ಲೂ ಅನಿವಾರ್ಯವಾಗಿದೆ . ಆದರೆ ಅದನ್ನು ಸರಿಯಾದ ರೀತಿ ವಿಲೇವಾರಿ ಮಾಡಬೇಕು.

ಮರು ಉಪಯೋಗ ಮಾಡುವುದರಿಂದ ಪ್ಲಾಸ್ಟಿಕ್ ಉತ್ಪಾದನೆ ಕಮ್ಮಿ ಮಾಡಬಹುದು.

– ನೀಲಮ್ಮ ಕಲ್ಮರಡಪ್ಪ, ಮೈಸೂರು

8 Responses

  1. Krishnaveni Kidoor says:

    ಪ್ಲಾಸ್ಟಿಕ್ ಬಂದಿದ್ದು ಕೆಲವಾರು ವರ್ಷಗಳ ಹಿಂದೆ. ಅದಕ್ಕೂ ಮೊದಲೂ ಜನ ಅದಿಲ್ಲದೆ ದಿನ ಕಳೆಯುತ್ತಿದ್ದರು. ಈಗ ಪ್ಲಾಸ್ಟಿಕ್ ಉಪಯೋಗ ಕಂಡು ಹಿಡಿದವರಿಗೆ ಶಾಪ ಹಾಕುವ ,.ಈ ಪೀಡೆ ಹಬ್ಬಿ ಹಿಂದೆಳೆಯಲಾಗದಂತೆ .ನಿಂತಿದೆ.ನಮ್ಮಲ್ಲಿ ಪ್ರಜೆಗಳು ಹಕ್ಕಿಗಾಗಿ ಹೋರಾಡುತ್ತಾರೆ ಹೊರತು ಕರ್ತವ್ಯಕ್ಕಾಗಿ ಎಂದೂ ಸ್ಟ್ರೈಕ್ ಮಾಡಿಲ್ಲ :ಮಾಡುವವರು ಕೂಡ ಅಲ್ಲ. ಜ್ವಲಂತ ಸಮಸ್ಯೆಯ ಭೀಕರತೆ ಎತ್ತಿ ಹಿಡಿದಿದ್ದೀರಿ.ಉತ್ತಮವಾಗಿದೆ.

  2. Jennifer Shawn says:

    ಕಳಕಳಿಯ ಬರಹ! ಚೆನ್ನಾಗಿದೆ.

  3. Ghouse says:

    Very good write up and a concern about the mother earth. God knows what will happen in future.

  4. jayashree says:

    Nice article Madam. We really need to think an eco-friendly manner.

  5. ಎಲ್ಲರಿಗು ನನ್ನ ಧನ್ಯವಾದಗಳು

  6. Shruthi Sharma says:

    ತುಂಬಾ ಉತ್ತಮ ಬರಹ

  7. Shankari Sharma says:

    ಬರಹ ಉತ್ತಮವಾಗಿದೆ.ಅಭಿನಂದನೆಗಳು.

  8. ಎಸ್ ಎ ಕಾಂತಿ says:

    ನಿಮ್ಮ ಸಮಾಜಿಕ ಕಳಕಳಿಗೆ ನನ್ನದೊಂದು ಪ್ರಣಾಮ್, ಸರಕಾರ ದಂಡ ಹಾಕಿದರೆ ಪೂರ್ಣ ಪ್ರಮಾಣದ ಪರಿಹಾರವಲ್ಲ ಶ್ರೀಮತಿ ನೀಲಮ್ಮನವರೇ, ಪ್ಲಾಸ್ಟಿಕ ಬಳಸದೇ ಇರುವ ವ್ಯಕ್ತಿಯನ್ನು ನಾವು ತೈಯಾರಿಸಬೇಕು ಕೈಗಾದಲ್ಲಿ ನನ್ನ ಸ್ನೆಹಿಯನೊಬ್ಬ ಸುಮಾರು ಒಂದು ಡಜನಿಗೂ ಹೆಚ್ಚು ಜನರನ್ನು ಈ ರೀತಿಯಲ್ಲಿ ಪ್ಲಾಸ್ಟಿಕ ಬಳಸದೇ ಇರುವ ಜನರನ್ನು ತೈಯಾರಿಸಿದ್ದಾನೆ. ವ್ಯಕ್ತಿ ತೈಯಾರಾದರೆ ವ್ಯವಸ್ಥೆ ತಾನಾಗಿಯೆ ಸರಿಹೋಗುತ್ತದೆ. ಇಂದು ಆ ವ್ಯಕ್ತಿಗಳು ಕೈಚೀಲವಿಲ್ಲದೆ ಅಂಗಡಿಗೆ ಹೋಗುವುದೇ ಇಲ್ಲ. ಹೂವಾಡಗಿತ್ತಿ ಹೂವನ್ನು ಪ್ಲಾಸ್ತಿಕನಲ್ಲಿ ಕೊಡುತ್ತಿದ್ದರೆ ಪೇಪರನಲ್ಲಿ ಸುತ್ತಿಕೊಡು ಎಂದು ಹೆಳುತ್ತಾರೆ. ಸರಕಾರವೆ ಮಾಡಲಿ ಎಂದು ಕಾದು ಕುಳಿತರೇ ಆ ಕಾವಿನಲ್ಲಿಯೇ ನಾವು ಸುಟ್ಟುಹೋಗುತ್ತೆವೆ. ನಾವು ನೀವು ಸೇರಿ ಅಂತಹ ವ್ಯಕ್ತಿಗಳನ್ನು ತೈಯಾರಿಸುವ ಕಾರ್ಖಾನೆ ನಾವಾಗೋಣವೇ?

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: