ಪುಸ್ತಕ ಪರಿಚಯ- ಕಾಮೋಲ

Spread the love
Share Button

ಪುಸ್ತಕ :- ಕಾಮೋಲ (ಕಥಾಸಂಕಲನ)
ಲೇಖಕರು:- ಡಾ. ಅಜಿತ್ ಹೆಗಡೆ ಹರೀಶಿ
ಪ್ರಕಾಶಕರು:- ಮಂಗಳ ಪ್ರಕಾಶನ

ಡಾ. ಅಜಿತ್  ಹೆಗಡೆಯವರು fb ಲೋಕದಲ್ಲಿ ಪರಿಚಿತರಾದ ಗೆಳೆಯರು. ಒಳ್ಳೆಯ ಬರಹಗಾರರು, ಅಷ್ಟೊಂದು ಪ್ರಸಿದ್ಧಿ ಇದ್ದರೂ ಸಣ್ಣಪುಟ್ಟ ಬರಹಗಾರರನ್ನು ಪ್ರೋತ್ಸಾಹಿಸಿ ಉತ್ಸಾಹ ತುಂಬುವ ಸರಳ ಹಾಗೂ ಒಳ್ಳೆಯ ಮನಸ್ಸಿನ ವ್ಯಕ್ತಿ.

1. ಕನ್ನಡಿಗಂಟದ ಬಿಂದಿ :-
ಹೆಣ್ಣು ಎಂದೊಡನೆ ಈ ಜಗತ್ತಿನಲ್ಲಿ ಅವಳನ್ನು ಕಾಮದ ಹಸಿವಿನಿಂದ ತುಂಬಿದ ದೃಷ್ಟಿಯಿಂದ ನೋಡುವ ಕಣ್ಣುಗಳೇ ಜಾಸ್ತಿ. ಒಬ್ಬಳು ಹೆಣ್ಣು ತನ್ನನ್ನು ತಾನು ಈ ಕೆಟ್ಟ ಪ್ರಪಂಚದಿಂದ ಕಾಪಾಡಿಕೊಳ್ಳಲು ಪಡುವ ಪಾಡು, ಹೋರಾಟ ಆ ದೇವರಿಗೇ ಪ್ರೀತಿ. ಹೆಜ್ಜೆ ಹೆಜ್ಜೆಗೂ ಅವಳಿಗಿಲ್ಲ ಕಂಟಕ. ಸಹಾಯದ ನೆಪದಲ್ಲಿ ನಡೆಯುವ ಶೋಷಣೆ ,ಎಲ್ಲವನ್ನೂ ಎದುರಿಸಿ ಹಂತ ಹಂತವಾಗಿ
ಹೋರಾಡಿ, ತನ್ನ ಗುರಿಯನ್ನು ತಾನೇ ಗುರುತಿಸಿ ಸಾಗುವ ಹೆಣ್ಣು ಮಗಳ ಕಥೆ. ಇಲ್ಲಿ ಒಂದು ಹುಡುಗಿಯ ಮನಸ್ಥಿತಿ ಅಷ್ಟೇ ಅಲ್ಲ, ಕಾಮ ಲೇಪಿತ ಹೊಲಸು ಮನಸ್ಸುಗಳು ಹೇಗೆ ಒಂದು ಹೆಣ್ಣನ್ನು ಕಾಡುತ್ತವೆ ಅನ್ನುವುದನ್ನು ಅನಾವರಣಗೊಳಿಸಿದ್ದಾರೆ ಲೇಖಕರು. ಇಂತಹ ಕೆಟ್ಟ ಮನಸ್ಸುಗಳಿಗೆ ಸಂಬಂಧಗಳ ಬಂಧನವೂ ಇಲ್ಲ, ತನ್ನವರು ಅನ್ನುವ ವಾಂಛೆಯೂ ಇಲ್ಲ, ಅನ್ನುವ ಒಂದು ಕೆಟಗರಿಯಾದರೆ, ತನ್ನ ಬಯಕೆ ತೀರಿದರೆ ಸಾಕು ಅವಳು ಹೇಗಿದ್ದರೂ ಪರವಾಗಿಲ್ಲ ಅನ್ನುವ ಇನ್ನೊಂದು ರೀತಿಯ ಕಾಮುಕ
ಮನಸ್ಸುಗಳು. ನಿಜಕ್ಕೂ ಇಂತಹ ಕೆಟ್ಟ ಆಲೋಚನೆಗಳಿಂದ ತುಂಬಿದ ಜಗತ್ತಲ್ಲಿ ಹೆಣ್ಣು ಬದುಕಲು ನಡೆಸುವ ಹೋರಾಟ ಬಹಳ ದೊಡ್ಡದೇ.

2. ಗುಪ್ತ ಗಮನ :-
ಇಲ್ಲಿ ನಂಬಿಕೆಯ ಕುರಿತಾದ ಒಂದು ವ್ಯಾಖ್ಯಾನ. ಯಾವುದೇ ವಿಷಯದಲ್ಲೂ, ವಿಚಾರದಲ್ಲೂ ನಾವು ನಂಬಿಕೆಯನ್ನು ಇಟ್ಟಾಗ ಅಥವಾ ಹೊಂದಿದಾಗ ಅದು ಖಂಡಿತಾ ಸಫಲವಾಗುತ್ತದೆ. ನಮ್ಮ ಬದುಕಿನ ನಲಿವು ದುಃಖ ಎರಡಕ್ಕೂ ನಮ್ಮ ಮನಸ್ಸೇ ನೇರ ಹೊಣೆ. ಹೊರಗಿನ ಜಗತ್ತು ಇದಕ್ಕೆ ಬಾಧಕವಲ್ಲ. ನಾವು ಸಂತೋಷವಾಗಿರಬೇಕೆಂದು ನಿರ್ಧರಿಸಿದಲ್ಲಿ ನಮ್ಮನ್ನು ಅದರಿಂದ
ವಿಮುಖಗೊಳಿಸಲು ಯಾವುದರಿಂದಲೂ, ಯಾರಿಂದಲೂ ಸಾಧ್ಯವಿಲ್ಲ. ದುಃಖವೂ ಅಷ್ಟೇ ನಾವಾಗಿಯೇ ಸೃಷ್ಟಿಸಿಕೊಳ್ಳುವ ಒಂದು ಭಾವ. ಇದರಲ್ಲಿ ಹೊರ ಪ್ರಪಂಚದ ತಪ್ಪೇನೂ ಇಲ್ಲ ಅನ್ನುವ ಬದುಕಿನ ಸುಖ ದುಃಖಗಳಿಗೆ ನಾವೇ ಕಾರಣಕರ್ತರು ಅನ್ನುವ ಸಂದೇಶವನ್ನು ನೀಡುವ ಕಥೆ.

3.ಸೆಲೆ :-
ಕವಿತೆ, ಕವನ, ಕಥೆಗಳು ಮಾತುಗಳಲ್ಲಿ ಅರುಹಲಾಗದ ಮನಸ್ಸಿನ ತಾಕಲಾಟ, ಭಾವನೆಗಳು. ಮನೋಗರ್ಭದಲ್ಲಿ ಚಿಮ್ಮುವ ಭಾವಗಳ ಸೆಲೆ. ಎಲ್ಲೂ ಬಾಯಿ ಬಿಟ್ಟು ಅರುಹಲು ಆಗದ್ದನ್ನು ಅಕ್ಷರ ರೂಪ ನೀಡಿ ಹಾಳೆಗಳ ಮೇಲೆ ಅನಾವರಣಗೊಳಿಸಬಹುದಾದಂತಹವು ಕವನಗಳು. ಇವುಗಳಿಗೆ ಮಾತಿನ ಹಂಗಿಲ್ಲ ಅನ್ನುವ ಅಂಶಗಳನ್ನೊಳಗೊಂಡ ಒಂದು ಕಥೆ.

4.ಸಾಬೀತು:-
ಮದುವೆ ಎಂಬ ಬಂಧದೊಳಗೆ ಬೆಸೆಯಲ್ಪಡುವ ಸಂಬಂಧಗಳು ಕೇವಲ ಮೂರು ಗಂಟಿನ ನಂಟಿನೊಂದಿಗೆ ಮುಗಿಯುವಂಥದ್ದಲ್ಲ. ಅಲ್ಲಿ ಹಂತ ಹಂತವಾಗಿ ಮನಸ್ಸುಗಳು ಮಾಗಿ ಬೆಸೆಯುತ್ತವೆ, ಪರಸ್ಪರ ಪ್ರೀತಿ ಅಂತರಾಳದಲ್ಲಿ ಹುಟ್ಟಿರುತ್ತದೆ, ನಗುವಿರುತ್ತದೆ, ಪರಸ್ಪರ ಜಗಳವಿರುತ್ತದೆ. ಅಹಂನ ಪರದೆ ಗಂಡು ಹೆಣ್ಣು ಎರಡು ಮನಸ್ಸುಗಳನ್ನು ಆವರಿಸಿರುತ್ತದೆ. ಇದರ ನಡುವೆಯೂ ಒಂದು ಪರಸ್ಪರ ಅರ್ಥೈಸುವಿಕೆ ಇರುತ್ತದೆ. ಎಷ್ಟೇ ಜಗಳವಾಡಿದರೂ ಒಬ್ಬರು ಸ್ವಲ್ಪ ಕಾಲ ದೂರ ಸರಿದರೂ
ಸಾಕು ಕಣ್ಣಂಚಲ್ಲಿ ತೆಳುವಾದ ನೀರಿನ ಪದರ ಆವರಿಸುವಷ್ಟು ಚಟಪಡಿಕೆ ಇರುತ್ತದೆ. ಗಂಡನ ನಿರ್ಲಕ್ಷ್ಯತನದಿಂದ ಹೆಣ್ಣು ಅವನಿಂದ ದೂರ ಹೋಗುವ ನಿರ್ಧಾರ ಮಾಡಿ ದೂರ ಹೋದಾಗ ಆ ಮನಸ್ಸುಗಳ ನಡುವೆ ಹುಟ್ಟಿಕೊಳ್ಳುವ ತವಕ ತಲ್ಲಣಗಳನ್ನು ಅನಾವರಣಗೊಳಿಸುವ ಕಥೆ.

5.ಹುತ:-

ಬದುಕಿನ ಆಗಸದಲ್ಲಿ ನೋವು, ಹತಾಶೆ, ನಿರಾಶೆ ಯಂತಹ ಕಾರ್ಮೋಡಗಳು ಆವರಿಸುವುದು ಸಹಜ. ಇವು ಒಂದು ಕ್ಷಣವಿದ್ದು ಮತ್ತೊಂದು ಕ್ಷಣದಲ್ಲಿ ಸರಿದು ಹೋಗುವಂತಹವುಗಳು. ಇಂತಹ ಅಲೆಗಳೊಳಗೆ ಸಿಲುಕಿ ಆತ್ಮಹತ್ಯೆಯಂತಹ ಘೋರ  ನಿರ್ಧಾರ ತೆಗೆದುಕೊಳ್ಳುವುದರಿಂದ ಏನನ್ನೂ ಸಾಧಿಸಿದಂತೆ  ಆಗುವುದಿಲ್ಲ ಬಾಳಲ್ಲಿ. ಕಷ್ಟಗಳನ್ನು ಧೈರ್ಯವಾಗಿ ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಮನುಷ್ಯನಾದವನು. ಬಾಲ್ಯ, ಯೌವ್ವನ ಈ ಎಲ್ಲಾ ಹಂತಗಳಲ್ಲೂ ಎಲ್ಲ ರೀತಿಯ
ಬದುಕಿನ ಆಯಾಮಗಳ ರುಚಿ ನೋಡಿ ಸ್ವಲ್ಪ ಕಾಲ ಒಂದೆಡೆ ನೆಲೆಯಾಗುತ್ತಾನೆ ಈ ಕಥಾನಾಯಕ. ಸ್ವಲ್ಪ ಸಮಯದ ನಂತರ ಅಲ್ಲಿಯೂ ಎಡವಟ್ಟಾಗಿ ಆತ್ಮಹತ್ಯೆಯ ಯೋಚನೆ ಮಾಡಿ ಆ ನಿಟ್ಟಿನಲ್ಲಿ ಸಾಗುವ ಅವನ ಪ್ರಯತ್ನ . ಬದುಕು ಒಂದು ಉಡುಗೊರೆ. ಅದನ್ನು ಒಳ್ಳೆಯ ರೀತಿಯಲ್ಲಿ ಬದುಕಬೇಕು. ಅರ್ಧದಲ್ಲಿ ಈ ಬಾಳನ್ನು ಮುಗಿಸುವ ಹಕ್ಕು ಯಾರಿಗೂ ಇಲ್ಲ, ಇದೊಂದು ಸಾಧನೆಯೂ ಅಲ್ಲ ಅನ್ನುವ ಅಂಶಗಳು ಈ ಕಥೆಯನ್ನು ಓದಿದಾಗ ಮನಸ್ಸಿನ ತುಂಬಾ .

6.ಆಯಿ :-
ಅಮ್ಮನೆಂಬ ಮಮತೆಯ ಸೆಲೆ, ತ್ಯಾಗಜೀವಿ, ಸಹನಾಮಯಿಯ  ಬದುಕಿನ ಪುಟಗಳು ಇಲ್ಲಿ ತೆರೆದುಕೊಂಡಿವೆ. ಪ್ರತಿಯೊಬ್ಬ ತಾಯಿಯ ಹಿಂದೆಯೂ ತ್ಯಾಗ ಸಹನೆಯ ಇತಿಹಾಸವಿದೆ. ಈ ನಿಷ್ಕಲ್ಮಶ ಪ್ರೀತಿ ತೋರುವ ಗುಣ, ಬೆಟ್ಟದಷ್ಟು ತಾಳ್ಮೆ ವಿಶಾಲ ಮಮತೆಯ ಅಂಗಳ, ಮಕ್ಕಳನ್ನು ಯಾವ ಒಂದು ಅಪೇಕ್ಷೆಯೂ ಇಲ್ಲದೇ ಮುದ್ದಿಸಿ, ಲಾಲಿಸಿ, ಪೋಷಿಸುವ ಗುಣಗಳಿಂದಲೇ ಒಬ್ಬ ಹೆಣ್ಣು ತಾಯಿ ಎನಿಸಿಕೊಳ್ಳುತ್ತಾಳೆ.

7.ಸೆಲೆಕ್ಟ್ ಆಲ್ ಡಿಲೀಟ್ :-
ಹದಿಹರೆಯದ ಮನಸ್ಸುಗಳಲ್ಲಿ ಹುಟ್ಟಿಕೊಳ್ಳುವ ಪ್ರೀತಿ. ಅದು ಪರಸ್ಪರ ಮನಸ್ಸುಗಳ ಒಳಗೆಯೇ ಇದ್ದು ಬಿಡುವ ರೀತಿ. ಬೇರೆ ಮದುವೆ, ಸಂಸಾರ ಎಂದಾದ ಮೇಲು ಯಾವುದೋ ಒಂದು ತಿರುವಲ್ಲಿ ನೆನಪಾಗುವ ಆ ಮೊದ ಮೊದಲ ಪ್ರೀತಿ.

8.ಗೂಡು :-
ಗೇಣುದ್ದದ ಹೊಟ್ಟೆಯ ಹಸಿವಿನ ಮರುಕವ ತಣಿಸಲು ವಯಸ್ಸಾಗಿದ್ದರೂ ದುಡಿಯಬೇಕಾದ ಅನಿವಾರ್ಯತೆ, ನೌಕರಿ ಮಾಡುವ ಸ್ಥಳದಲ್ಲಿ ಬರಬೇಕಾದ ಸವಲತ್ತುಗಳಿಗಾಗಿ ಎಷ್ಟು ಬಡಿದಾಡಿದರೂ ಕಂಪನಿ, ಕಾರ್ಖಾನೆಯ ಅಭಿವೃದ್ಧಿಗಾಗಿ ಸ್ವಲ್ಪ ಹೆಚ್ಚು ದುಡಿಯುವ ಯೋಚನೆ ಮಾಡದ ನೌಕರರು, ಪ್ರಾಣಿ ಪಕ್ಷಿಗಳು ನಮ್ಮಂತೆಯೇ ಒಂದು ಜೀವ ಅನ್ನುವ ಭಾವವಿಲ್ಲದೆ ಮಾನವನಲ್ಲಿ ಅವುಗಳ ಪ್ರತಿ ತುಂಬಿಕೊಳ್ಳದ ಉದಾರ ಭಾವ, ಅವುಗಳೆಂದರೆ ಉಡಾಫೆ, ಹೀಗೆ ಬದುಕಿನ ಹಲವು ಮಜಲುಗಳನ್ನು
ಒಳಗೊಂಡಂತಹ ಸುಂದರ ಕಥೆ.
ಗೂಡು ಕಥೆಯೊಂದಿಗೆ “ಕಾಮೋಲ” ಕಥೆಗಳ ಸಂಕಲನ ಕೊನೆಗೊಳ್ಳುತ್ತದೆ. ಇಲ್ಲಿನ ಎಲ್ಲ ಕಥೆಗಳು ಸರಳವಾಗಿದ್ದು ಓದಿಸಿಕೊಂಡು ಹೋಗುತ್ತವೆ. ಒಂದು ಹವ್ಯಕ ಭಾಷೆಯ ಕಥೆಯೂ ಇರುವುದು ಈ ಕಥಾ ಸಂಕಲನದ ವಿಶೇಷ.

– ನಯನ ಬಜಕೂಡ್ಲು

2 Responses

  1. ಬಿ.ಆರ್.ನಾಗರತ್ನ says:

    ಒಂದು ಪುಸ್ತಕ ನನ್ನು ಓದಿದಾಗ ಸಿಕ್ಕು ವ ಅನುಭವ ಅದನ್ನು ವಿಚಾರ ಮಾಡಿ ಅದನ್ನು ಹಂತ ಹಂತವಾಗಿ ಪಡಿಮೂಡಿಸಿರುವ ರೀತಿ ಬಹಳ ಚೆನ್ನಾಗಿದೆ.ಅಭಿನಂದನೆಗಳು.

  2. ಶಂಕರಿ ಶರ್ಮ says:

    ಸೊಗಸಾದ ಪುಸ್ತಕ ಪರಿಚಯದೊಂದಿಗೆ ಅದರೊಳಗಿನ ಕಥೆಗಳ ಸೂಕ್ಷ್ಮ ಪರಿಚಯವನ್ನೂ ಸೇರಿಸಿರುವಿರಿ….
    ಚೆನ್ನಾಗಿದೆ..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: