ಹಳ್ಳಿ ಪಟ್ಟಣದ ನಡುವೆ ಕಳಚಿದ ಕೊಂಡಿ…

Share Button

ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ.ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ,ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ  ನನ್ನೆಲ್ಲ  ತುಂಟತನಗಳಿಗೆ ಜತೆಯಾಗಿದ್ದವಳುಮದುವೆಯಾಗಿ ಮಹಾನಗರವನ್ನು ಸೇರಿಸಿಟಿವಂತಳಾಗಿದ್ದಳುಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ  ನನಗೆ ಮಜಬೂತು ಖಾತಿರ್ ದಾರಿ ಪ್ಲಾನ್ ಮಾಡಿಕೊಂಡಿದ್ದಳುಆತ್ಮೀಯತೆಯಿಂದ ನನ್ನನ್ನು ಬರಮಾಡಿ ಮಾತಿನಲ್ಲಿ ಮೈಮರೆತಿದ್ದವಳು ಅಚಾನಕ್ಕಾಗಿ ನಾಲಿಗೆ ಕಚ್ಚಿಕೊಂಡು ತನ್ನ ಏಳೆಂಟು ವರ್ಷಗಳ ಮಗಳನ್ನು ಬಳಿಗೆ ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟಿದಳುಮರುಕ್ಷಣವೇ ಹುಡುಗಿ ಮನೆಯಿಂದ ಹೊರಗೋಡಿ ಸ್ವಲ್ಪ ಹೊತ್ತಿಗೆ ವಾಪಾಸಾಗಿದ್ದನ್ನು ನಾನು ಕಡೆಗಣ್ಣಿನಲ್ಲಿ ಗಮನಿಸಿದೆ .ಇಡೀ ದಿನ ಗೆಳತಿಯ ಭರ್ಜರಿ ಆದರಾತಿಥ್ಯವನ್ನು ಸ್ವೀಕರಿಸಿ ದಣಿದಿದ್ದ ನಾನುಸ್ವಲ್ಪ ಹೊತ್ತು ಆರಾಮಾಗಿ ಕೂತಿರುವಾಗ ಆಕೆಯ ಮಗಳು ನನ್ನ ಜತೆಗೆ ಬಂದು ಕುಳಿತಳುನನಗೋ ತಡೆಯದೆ, “ಆಗ ಅಮ್ಮ ನಿನ್ನ ಬಳಿ ಏನು ಹೇಳಿದುದಕ್ಕೆ ನೀನು ಹೊರಹೋಗಿ ಬಂದೆ?” ಎಂದು ಕೇಳಿದೆ. ಮಾತು ತಪ್ಪಿಸಲರಿಯದ ಮುಗ್ಧ ಮಗು ನಮ್ಮ ಮನೆಯ ಫ್ರಿಜ್ಜಿನಲ್ಲಿ ಹಾಲು ಖಾಲಿಯಾಗಿ ಅಮ್ಮ ನಿಗೆ ತರುವುದು ಮರೆತಿತ್ತುಅದಕ್ಕೆ ಪಕ್ಕದ ಮನೆಯ ಆಂಟಿಯ  ಫ್ರಿಜ್ಜಿನಿಂದ ಹಾಲು ಇಸಿದುಕೊಂಡು ಬರಲು ಅಮ್ಮ ಕಳಿಸಿದ್ಲುಎಂದು ಹೇಳಿತುನಾನು ಪುನಃ   ಫ್ರಿಜ್ಜಿಗೆ ಹಾಲು ಎಲ್ಲಿಂದ ಬರುತ್ತೆ ಎಂದು ಕೇಳಿದೆ. ಅದಕ್ಕೆ ಮಗು ರಾತ್ರಿ ಮಲಗುವಾಗ ಬಾಗಿಲು ಹತ್ರ ಚೀಟಿ ಹಾಕಿದ್ರೆ, ಬೆಳಿಗ್ಗೆ ಬಾಗಿಲು ತೆಗೆಯುವಷ್ಟರಲ್ಲಿ ಹಾಲು ಬಂದಿರುತ್ತೆಎಂದು ಹೇಳಿತು.ಮನದಲ್ಲಿ ಇನ್ನೂ 2-3ಪ್ರಶ್ನೆಗಳಿದ್ದರೂಅವುಗಳು ಮಗುವಿನ ಜ್ಞಾನಕ್ಕೆ ನಿಲುಕದ್ದು ಎಂದು ಸುಮ್ಮನಾದೆ. ಗೆಳತಿಯ ಜತೆ ಬಾಲ್ಯದ ನೆನಪು ಗಳನ್ನು ಪುನಃ ಒಮ್ಮೆ ಹಸಿರಾಗಿಸಿ ಸಂಜೆಗೆ ನಮ್ಮೂರಿನ ಬಸ್ಸು ಹತ್ತಿದವಳಿಗೆಫ್ರಿಜ್ಜಿನ ಹಾಲಿನ ಮೂಲ” ಮನದಾಳದಲ್ಲಿ ದಾರಿ ಹುಡುಕತೊಡಗಿತ್ತು

ಸರಿಯಾಗಿ ನೆನಪಿಲ್ಲವಾದರೂ ಅಂದಾಜು ನಾನು 2-3ನೇ ತರಗತಿಯಲ್ಲಿರುವಾಗಲೊಮ್ಮೆ ನಮ್ಮ ತಾತ ನಮ್ಮ ಮನೆಗೆ ಬಂದಿದ್ದಾಗಅವರಿಗೆ ಕಾಫಿ ಮಾಡಲೂ ನಮ್ಮ ಮನೆಯಲ್ಲಿ ಹಾಲಿರಲಿಲ್ಲ. ಬಡತನದ ಅಂದಿನ ದಿನಗಳಲ್ಲಿ ಮೂರು ಮಕ್ಕಳ ತಾಯಿಯಾದ ನಮ್ಮಮ್ಮ, ಕೊಂಡು ತಂದು ನಮಗೆ ಹಾಲು ಕುಡಿಸುವಷ್ಟು ಸಿರಿವಂತೆಯಾಗಿರಲಿಲ್ಲಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ನಮ್ಮ ತಾತ ಅಮ್ಮನಿಗೆನೀನು ಮದುವೆಗೂ ಮುಂಚೆ ಹಟ್ಟಿತುಂಬಾ ದನಕರುಗಳನ್ನು ಕಟ್ಟಿ, ಸಾಕಿ,ಹಾಲನ್ನು ಮಾರಿ,ಮನೆಯಲ್ಲಿ ಹಾಲು, ಮಜ್ಜಿಗೆ, ತುಪ್ಪ ಎಂದು ಸಮೃದ್ಧಿಯನ್ನು  ಉಂಟುಮಾಡಿದ್ದವಳು. ಈಗ ನಿನ್ನ ಮಕ್ಕಳಿಗೆ ಹಾಲಿಲ್ಲವೆಂದು ಕೊರಗಬೇಡನಿನ್ನಿಷ್ಟದ ಕರು ಈಗ ಹಸುವಾಗಿ ಯಥೇಚ್ಚ ಹಾಲನ್ನು ನೀಡುತ್ತಿದೆ. ಅದನ್ನು ನಿನ್ನಲ್ಲಿಗೆ ಕಳಿಸಿಕೊಡುತ್ತೇನೆ. ಮಕ್ಕಳು ಹಾಲುಮಜ್ಜಿಗೆ ಬಣ್ಣ ನೋಡಲಿ ಎಂದಾಗ ಅಮ್ಮ ಮತ್ತು ಅಜ್ಜನ ಕಣ್ಣಾಲಿಗಳು ತುಂಬಿದ್ದವು.

ಮಾತಿಗೆ ತಪ್ಪದೇ ಅಜ್ಜ ಹಸುವನ್ನೂ ಅದರ ಕರುವನ್ನೂ ನಮ್ಮಲ್ಲಿಗೆ ಕಳುಹಿಸಿಯೇ ಬಿಟ್ಟರು.ಅನೇಕ ವರ್ಷಗಳಿಂದ ಅಮ್ಮನನ್ನು ನೋಡಿರದಿದ್ದ ಅಮ್ಮನೇ ಸಾಕಿದ್ದ ಹಸು ,ಅಮ್ಮನನ್ನು ನೋಡಿ ಬಾಲ ನಿಮಿರಿಸಿ ಕುಣಿದು ಕುಪ್ಪಳಿಸಿತು.”ಬಂದೆಯಾ ಕುಂಟಿಮಾಚಕ್ಕಎಂದು ಅಮ್ಮ ಹಸುವನ್ನು  ಸ್ವಾಗತಿಸಿದಾಗ., ಇದೆಂತ ಹೆಸರು  ಎಂಬ ನಮ್ಮ ಪ್ರಶ್ನೆಗೆ , ಕುಳ್ಳಗಿನ  ಮಾಚಕ್ಕ ಎಂಬ ಹಸು ಕೊಂಡಾಟದಲ್ಲಿ ಕುಂಟಿಮಾಚಕ್ಕ ಎಂದಾಗಿದೆ ಎಂದರುನಮಗಂತೂ ಅದಕ್ಕಾಗಿ ಕಟ್ಟಿದ ಸಣ್ಣ ಹಟ್ಟಿಗೆ ದಿನಕ್ಕೊಂದು ಐವತ್ತು ಸಲ ಹೋಗಿ ಹಸುಕರು ವನ್ನು ನೋಡಿಕೊಂಡು ಬರುವುದೇ ಒಂದು ಸಂಭ್ರಮವಾಯಿತು.ಅಲ್ಲಿಂದ ಮುಂದೆ ನಮಗೆ ಕುಡಿಯಲು ಮಾತ್ರವಲ್ಲದೆ ಮಾರಾಟಮಾಡುವುದಕ್ಕೂ ಹಾಲು ಒದಗತೊಡಗಿತು.

ಅನಂತರ ಹುಟ್ಟಿದ ಕರುಗಳಿಗೆ ಹೆಸರಿಡುವುದೇ ನಮಗೊಂದು ಸಂಭ್ರಮ. ಮೊದಲು ಹುಟ್ಟಿದವಳೇಚಿನ್ನಿ”.ಹೆಸರಿಗೆ ತಕ್ಕಂತೆ ಚಿನ್ನದಂತಹ ಹಸು. ನಮ್ಮಿಂದ ಹೆಚ್ಚಿನ ಕೊಂಡಾಟವನ್ನು ಅಪೇಕ್ಷಿಸದ ಅವಳಿಗೆ ತನ್ನ ಕಣ್ಣುಗಳಲ್ಲಿ ಒಕ್ಕುವ ಪ್ರೀತಿಯನ್ನು ಮರೆಮಾಚಲು ಗೊತ್ತಿರಲಿಲ್ಲ. ಅನಂತರ ಪುಟ್ಟಿಬಂಗಾರಿಹೀಗೆ ಸುಮಾರು ಕರುಗಳಾದವುಮೊದಲ ಎರಡು ತಿಂಗಳು ಕರುಗಳೆಲ್ಲ ಮನೆಯ ಒಳಗೇ ವಾಸ. ಮನೆಯೊಳಗೆ ಅವಕ್ಕೆ ಬೇಕಾದಲ್ಲಿ ಹೋಗಿ ಕೂರುವುದು,ಮಲಗುವುದು ಮಾಡುತ್ತಿದ್ದವು. ಮುಸ್ಸಂಜೆಗೆ ಎಲ್ಲರೂ ಕೂತು ದೇವರ ಭಜನೆ, ಶ್ಲೋಕ ಹೇಳುವಾಗ ನಮ್ಮ ಬಳಿಯೇ ಬಂದು ಅಂಟಿ ಕೂರುತ್ತಿದ್ದವು. ರಾತ್ರಿ ಚಾಪೆ ಹಾಸಿ ಮಲಗುವಾಗ ನಮ್ಮ ಚಾಪೆಯಲ್ಲೇ ಬಂದು ಮಲಗುತ್ತಿದ್ದವು.

ಆದರೆ ಅಸಲಿ ಆಟ ಶುರುವಾಗಿದ್ದೇ ಚಿನ್ನಿ ಕರು ಹಾಕಿದ ನಂತರ. ವರೆಗಿನ ಎಲ್ಲಾ ಕರುಗಳೂ ಊರಿನ ತಳಿಯವಾಗಿದ್ದರೆ, ಚಿನ್ನಿ ಹಾಕಿದ ಕರು ಜರ್ಸಿ ತಳಿಯದಾಗಿತ್ತು. ಉದ್ದ ಉದ್ದ ಕೈ..ಕಾಲಿನ,ದೊಡ್ಡ ದೊಡ್ಡ ಕಿವಿಯ, ನೀಲಿ ಕಣ್ಣಂಚಿನ, ಇಟ್ಟಿಗೆ ಬಣ್ಣದ, ಹಣೆಯ ಮೇಲೆ ಎರಡು ಬಿಳಿಯ ಬೊಟ್ಟುಳ್ಳ, ಬೆಣ್ಣೆಯಂತೆ ನುಣುಪಾದ ಕೂದಲಿನ, ಮುದ್ದು ಮುದ್ದಾಗಿ ಓಡಾಡುತ್ತ ನಮ್ಮ ಮಡಿಲಿನಲ್ಲೇ ಎಂಬಂತೆ ಬಂದು ಕೂರುತ್ತಿದ್ದ ಸುಂದರಿ ಕರುವಿಗೆ ನಾವೆಲ್ಲರೂ ಒಮ್ಮತದಿಂದ ಇಟ್ಟ ಹೆಸರುಸಿಂಗಾರಿ.ನಾವೆಲ್ಲರೂ ಆಕೆ ಧರೆಗಿಳಿದ ಸ್ವರ್ಗದ ಅಪ್ಸರೆಯೇನೋ ಎಂಬಂತೆ ಅವಳ ಮೋಹಕ್ಕೆ ಒಳಗಾಗಿದ್ದೆವು ಸಂಜೆ ಶಾಲೆ ಬಿಟ್ಟಾಗ ಎಲ್ಲಿಯೂ ನಿಲ್ಲದೆ ಓಡೋಡಿ ಬಂದು ಅವಳ ಜೊತೆ ಆಟಕ್ಕೆ ಬೀಳುತ್ತಿದ್ದೆವು. ಸ್ವಲ್ಪ ಸಮಯದ ನಂತರ ಮನೆ ಬಿಟ್ಟು ಆಕೆ ಹಟ್ಟಿಗೆ ಶಿಫ್ಟ್ ಆದ ಮೇಲೆ ನಾವೆಲ್ಲ ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳತೊಡಗಿದರೆ ಕೊನೆಯವನಾದ ನನ್ನ ತಮ್ಮ, ಅವಳ ಜೊತೆ ಹಟ್ಟಿಗೇ ಶಿಫ್ಟ್ ಆಗಿಬಿಟ್ಟಿದ್ದ. ಸಂಜೆ ಹೊತ್ತು ಶಾಲೆಮುಗಿಸಿ ಬಂದು, ತಿನ್ನಲು ಹಾಳು ಮೂಳುಗಳೆಲ್ಲಾ ಇರದ ದಿನಗಳಲ್ಲಿ ,ಬೆಲ್ಲ ತಿನ್ನುವುದು ಅಭ್ಯಾಸ ಮಾಡಿಕೊಂಡಿದ್ದ ಆತ,ತನ್ನ ಅಂಗಿಯ ಕಿಸೆ ತುಂಬಾ ಬೆಲ್ಲದ ಚೂರುಗಳನ್ನು ತುಂಬಿಕೊಂಡು ಹೋಗಿ ದನಗಳಿಗೆ ಹುಲ್ಲು ಹಾಕುವ ಬೈಪಣೆ ಯಲ್ಲಿ ಮಲಗಿಬಿಡುತ್ತಿದ್ದ. ಅವನ ಕೆನ್ನೆ,ಮುಖ, ಕೈಯನ್ನೆಲ್ಲಾ ನೆಕ್ಕುತ್ತಿದ್ದ ಚಿನ್ನಿ ಮತ್ತು ಸಿಂಗಾರಿ ಬೆಲ್ಲದ ಪರಿಮಳಕ್ಕೆ ಕಿಸೆಯೊಳಗೇ……ನಾಲಿಗೆ ಹಾಕಿ ಬೆಲ್ಲ ಖಾಲಿ ಮಾಡುತ್ತಿದ್ದವು

ಕಾಲ ಸರಿದಂತೆ ಕರುವಾಗಿದ್ದ ಸಿಂಗಾರಿ ದನವಾಗಿ ತಾನೇ ಕರುಹಾಕತೊಡಗಿದಾಗ, ನಮಗೋ ಅವುಗಳಿಗೆ ಹೆಸರಿಡುವುದೇ ಒಂದು ಸಂಭ್ರಮ. ರಾಜ….ಭೋಜ ಇನ್ನೂ ಏನೇನೋ..  ನಮ್ಮ ಮೂರುಜನ ಮಕ್ಕಳ ಬದುಕು ರೂಪಿಸುವ ಜವಾಬ್ದಾರಿ ಹೊತ್ತ ನಮ್ಮ ಅಮ್ಮನ ಹೊರೆ ಹೆಚ್ಚಾಗಿದ್ದುದರಿಂದ ಆರ್ಥಿಕ ನಿರ್ವಹಣೆಗೂ ನಾವು ಜಾನುವಾರುಗಳನ್ನು ಅವಲಂಬಿಸಿದ್ದೆವು. ಮೂರು ಹೊತ್ತೂ ಹುಲ್ಲು ಹೆರೆದು  ಹಾಕಿ ಸಾಕಲು ಕಷ್ಟವಾಗುತ್ತಿದ್ದರಿಂದ ಹಗಲು ಹೊತ್ತು ಗುಡ್ಡೆಗೆ ಹೋಗಿ ತಾವೇ ಮೇಯಲು ಬಿಟ್ಟು ಬಿಡುತ್ತಿದ್ದೆವುದಿನವಿಡೀ ಮೆಂದು ಸಂಜೆಗೆ ಮನೆಗೆ ಮರಳುತ್ತಿದ್ದವು ನಮ್ಮ ಚಿನ್ನಿ ನಾಯಕತ್ವದ ದನಗಳ ಗುಂಪು. ಆದರೆ ಎಲ್ಲರಂತಲ್ಲದ ನಮ್ಮ ಸಿಂಗಾರಿ ವಿಷಯದಲ್ಲಿ ಹೇಗೆ ಎಲ್ಲರಂತೆ ಆದಾಳು? ಹಗಲು ಮೇಯುವಾಗ ಅವಳಿಗೆ ಹೊಟ್ಟೆ ತುಂಬುತ್ತಿರಲಿಲ್ಲವೋ,..ಅಲ್ಲ ಬೇಕೆಂದೇ ಚೇಷ್ಟೆ ಮಾಡುತ್ತಿದ್ದಳೋ…..? ಕೆಟ್ಟ ಬುಧ್ಧಿಯೊಂದು ಕಲಿತುಬಿಟ್ಟಳು. ಸಂಜೆ ಎಲ್ಲರೊಂದಿಗೆ ಮನೆಗೆ ಬರದೆಎಲ್ಲಾದರೂ ಮರೆಯಲ್ಲಿ ಕಾದಿದ್ದುಹಗಲು ಗುರುತು ಮಾಡಿಕೊಂಡಿರುವ ಜಾಗಕ್ಕೆ ರಾತ್ರಿ ಹೋಗಿ ಮೆಂದುನಡುರಾತ್ರಿಯಲ್ಲಿ ವಾಪಾಸಾಗುತ್ತಿದ್ದಳುಅದೂ ಇಡೀ ಊರಿಗೇ ಕೇಳುವಂತೆ ಶಂಖ ಊದಿದಂತೆ ಕೂಗಿಕೊಂಡು. ಕ್ರಮೇಣ ದಿನಕಳೆದಂತೆ ಫಸಲು ಕಳೆದುಕೊಂಡ ಒಬ್ಬಬ್ಬರೇ ಬಂದು ಅಮ್ಮನಲ್ಲಿ ದೂರು ಹೇಳಲು ಸುರು ಮಾಡಿದರುಕಟ್ಟಿಹಾಕಿ ಸಾಕುವ ಸಾಧ್ಯತೆಗಳೇ ಇಲ್ಲದೆ ಅಮ್ಮ ಒಳಗಿಂದೊಳಗೇ ಪೇಚಾಡತೊಡಗಿದರುಕಡೆಗೂ ಅವಳನ್ನು ಯಾರಾದರೂ ಸಾಕಿಕೊಳ್ಳುವವರಿಗೆ ಕೊಡುವುದು ಎಂದು ತೀರ್ಮಾನವಾದಾಗ ಹೊಟ್ಟೆಯೊಳಗೆ ಆದ ಸಂಕಟವನ್ನು  ನಾನು ಇವತ್ತಿಗೂ ಅನುಭವಿಸಬಲ್ಲೆ. ಪೇಟೆಯಲ್ಲಿ ಅಪ್ಪನ ಅಂಗಡಿ ಸಮೀಪದ ಮನೆಯವರು ಬಂದು ಅವಳನ್ನು ಕರೆದೊಯ್ಯುವಾಗ  ನಾವು ಮನೆಯಲ್ಲಿರಲಿಲ್ಲ

ಮರುದಿನ ಅಂಗಡಿಗೆ ಹೋದ ಅಪ್ಪ ರಾತ್ರಿ ಮರಳುವಾಗ ಮಾಮೂಲಿನಂತಿರಲಿಲ್ಲ. ಏನೆಂದು ವಿಚಾರಿಸಿದಾಗ ಅವರು ಹೇಳಿದ್ದು, “ಸಿಂಗಾರಿ ಅಂಗಡಿ ಬಳಿ ಬಂದವಳು ಸಂಜೆ ವರೆಗೂ ಹೋಗಲೇ ಇಲ್ಲ. ಅಂಗಡಿ ಬಾಗಿಲಲ್ಲೇ ಮಲಗಿದ್ದಳುಎಂದುನಮಗೆಲ್ಲ ಹೃದಯ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಅನುಭವ. ಹೊಟ್ಟೆಯಲ್ಲಿ ಅದೇನೋ ಕಿಚಿಪಿಚಿಮರುದಿನ ಅಪ್ಪ ಅಂಗಡಿಗೆ ಹೊರಟಾಗ, ಆವತ್ತಿನ ತಿಂಡಿಯದೊಂದು ಪೊಟ್ಟಣ ಕಟ್ಟಿ ಅಮ್ಮ, ಅಪ್ಪನ ಕೈಗಿತ್ತು ಸಿಂಗಾರಿಗೆ ತಿನ್ನಿಸಿಎಂದಾಗ ಆಕೆಯ ಕಣ್ಣಂಚಿನಲ್ಲಿ ನೀರು ಜಿನುಗಿದ್ದನ್ನು ಆಕೆಗೆ ನಮ್ಮಿಂದ ಮರೆಮಾಚಲಾಗಲಿಲ್ಲ ಎಂಬುವುದು ನನಗೆ ಇಂದಿಗೂ ನೆನಪಿದೆ

ಇವತ್ತಿನ ಆಧುನಿಕತೆಯ ನಾಗಾಲೋಟದ ನಡುವೆಯೂ ಹಟ್ಟಿಯಲ್ಲಿರುವ ಹಸುಕರುಗಳಿಗೆ ಹೆಸರಿಟ್ಟು, ಅವುಗಳ ಜೊತೆಗೆ ಕುಣಿದು ಸಂಭ್ರಮಿಸುವ ನನ್ನ  ಮಗಳನ್ನು ನೋಡಿದರೆ, ಸಧ್ಯ ನಾನೂ ನನ್ನ ಗೆಳತಿಯಂತೆ ಸಿಟಿವಂತಳಾಗದೇ ಉಳಿದೆನಲ್ಲಾ ಎಂದು ಸಮಾಧಾನವಾದರೂ…….ಕಾಮನ್ ಸೆನ್ಸ್ ಇಲ್ಲದಹಳ್ಳಿಗರು ಎಂದರೆ ತಾತ್ಸಾರ ಮಾಡುವ ಸಿಟಿಯವರನ್ನು ನೆನೆದರೆ ಮರುಕ ಹುಟ್ಟುತ್ತದೆ

-ವಿದ್ಯಾ ಶ್ರೀ ಎಸ್ ಅಡೂರ್

5 Responses

 1. Avatar ಜಲಜಾರಾವ್ says:

  ಮನೋಜ್ಞ ಲೇಖನ. ನೋವು – ನಲಿವುಗಳು ನಮ್ಮಂತೆಯೇ ಪ್ರಾಣಿಗಳಿಗೂ ಎಂಬುದನ್ನು ಸಶಕ್ತವಾಗಿ ಬಿಂಬಿಸಿದ್ದು ಹಳ್ಳಿಯ ಚಿತ್ರಣ ಆಪ್ತವೆನಿಸಿತು. ಸಿಂಗಾರಿಯ ಸ್ಥಿತಿಗೆ ನನ್ನ ಕಣ್ಣೂ ಒದ್ದೆಯಾಯಿತು.

 2. Avatar ಬಿ.ಆರ್.ನಾಗರತ್ನ says:

  ಚಂದದ ಬರಹ ನಗರ ಮತ್ತು ಹಳ್ಳಿಜೀವನದ ಚಿತ್ರ ಣ ಮೂಕ ಪ್ರಾಣಿಗಳ ಪ್ರೀತಿ ವಾತ್ಸಲ್ಯ.

 3. Avatar ನಯನ ಬಜಕೂಡ್ಲು says:

  ಆಪ್ತ ಬರಹ. “ಸಿಟಿವಂತರು” ಪದ ಚೆನ್ನಾಗಿದೆ .
  ನಿಜಕ್ಕೂ ಹಳ್ಳಿಯ ಬದುಕು ಚಂದ, ನೆಮ್ಮದಿ.

 4. Avatar Krishnaprabha says:

  ದೀಪಾವಳಿಯ ಗೋಪೂಜೆಯಂದು ದಿನದ ಕರುಗಳಿಗೆ ಹೆಸರಿಡುವ ಸಂಭ್ರಮ ನಮಗೆಲ್ಲಾ..ದನಗಳು ತೋರಿಸುವ ಆತ್ಮೀಯತೆಯ ಸವಿ ಉಂಡವರಿಗೇ ಗೊತ್ತು ಆ ಪರಮಸುಖ…ನಾನೂ ಸಿಟಿವಂತಳಾಗಿ ಈ ಸುಖಗಳಿಂದ ವಂಚಿತಳು… ಆಪ್ತ ನಿರೂಪಣೆಯ ಲೇಖನ

 5. Avatar ಶಂಕರಿ ಶರ್ಮ says:

  ಹಳ್ಳಿ ಯಲ್ಲೇ ಹುಟ್ಟಿ ಬೆಳೆದ ನಮಗೆ ತಮ್ಮ ಆತ್ಮೀಯ ಬರಹ ಪುನಃ ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ದುದು ಸುಳ್ಳಲ್ಲ.. ಸೊಗಸಾದ ಲೇಖನ..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: