ಅಲರ್ಜಿ ಅನ್ನುವ ಬೆದರುಬೊಂಬೆ

Share Button

ನನ್ನ ಬಾಲ್ಯದ ದಿನಗಳು. ನಮ್ಮ ಮನೆಯಿಂದ ತುಸು ದೂರದಲ್ಲಿದ್ದ ಆ ಮರದ ತುಂಬೆಲ್ಲಾ ನೇರಳೆ ಹಣ್ಣನ್ನು ಹೋಲುವ ಕಪ್ಪು ಬಣ್ಣದ ಹಣ್ಣುಗಳು ತೊನೆದಾಡುತ್ತಿದ್ದವು. ಯಾಕೋ ತಿಂದು ನೋಡುವ ಮನಸ್ಸಾಯಿತು. ಹಣ್ಣಿನ ಸಿಪ್ಪೆ ತೆಗೆದಾಗ ಒಳಗೆ ಇತ್ತ ಕೇಸರಿಯೂ ಅಲ್ಲದ ಅತ್ತ ಹಳದಿಯೂ ಅಲ್ಲದ ಬೀಜಸಹಿತ ತಿರುಳು. ತಿಂದಾಗ ರುಚಿಯೆನಿಸಿತು. ಸಾಕೆನಿಸಿದಷ್ಟು ತಿಂದಿದ್ದೆ.  ಯಾವ ಮರ ಅಂತ ವಿಚಾರಿಸಿದಾಗ ತುಳುವಿನಲ್ಲಿ ಚೇರೆ ಮರ /ಸೇರೆ ಮರ/ತೇರೆ ಮರ ಅಂತ ಅಮ್ಮ ಹೇಳಿದ್ದರು (ತೀರಾ ಇತ್ತೀಚೆಗೆ ಆ ಮರಕ್ಕೆ ಕನ್ನಡದಲ್ಲಿ ಹೊಲಗೇರು/ ಕಾಡುಗೇರು ಮರ ಅನ್ನುವರು ಅಂತ ಗೊತ್ತಾಯಿತು). ಆ ಮರದಿಂದ ಕಿತ್ತ ಎಳೆ ಎಲೆಗಳನ್ನು ಬೇಯಿಸಿ ನಂತರ ತೆಂಗಿನತುರಿ, ಒಣ ಮೆಣಸಿನ ಕಾಯಿ ಜೊತೆ ರುಬ್ಬಿ, ನಂತರ ಕುದಿಸಿ ಒಂದು ರೀತಿಯ ಚಟ್ನಿ ಮಾಡುತ್ತಿದ್ದರು. ಒಂದು ದಿನ ನಮ್ಮ ಮನೆಗೆ ಬಂದಿದ್ದ  ಅಕ್ಕನನ್ನು (ದೊಡ್ಡಪ್ಪನ  ಮಗಳು) ಆ ಮರದ ಬಳಿಗೆ ಕರೆದುಕೊಂಡು ಹೋಗಿ ಅವಳೂ ಆ ಹಣ್ಣಿನ ರುಚಿ ನೋಡುವಂತೆ ಮಾಡಿದ್ದೆ. ಎರಡು ದಿನದ ಬಳಿಕ ಸಿಕ್ಕಿದ ಅಕ್ಕ, ಆ ಹಣ್ಣು ತಿಂದ ದಿನ ಅವಳ ಮುಖವೆಲ್ಲಾ ಊದಿ ಬಾಯಿ ಕರಟಿದ ಹಾಗೆ ಆಗಿತ್ತೆಂದು ಹೇಳಿದಳು. ಆ ವಿಷಯ ಅಮ್ಮನಿಗೆ ಗೊತ್ತಾದರೆ, ಬೈಗುಳ ನಿಶ್ಚಿತ ಅಂತ ಹೇಳಿರಲಿಲ್ಲ ನಾನು!  ಆ ಹಣ್ಣು ತಿಂದು ನನಗೆ ಏನೂ ಆಗಲಿಲ್ಲ, ಅಕ್ಕನಿಗೆ ಮಾತ್ರ  ಯಾಕೆ ಹಾಗಾಯಿತು ಅಂತ ಮುಗ್ಧ ಮನಸ್ಸಿನಲ್ಲಿ ಸಂದೇಹ ಕಾಡಿತ್ತು. ನಂತರ ಆ ವಿಷಯ ಮರೆತೇ ಹೋಗಿತ್ತು. ಹಲವು ವರ್ಷಗಳ ಬಳಿಕ ಆ ಘಟನೆ ನೆನಪಿಸುವಂತೆ ಮಾಡಿದ್ದು ನನ್ನ ಓರಗಿತ್ತಿಯ ಅನುಭವ. ಒಂದು ದಿನ  ನನ್ನ ಓರಗಿತ್ತಿಯ   ಕೈ, ಮುಖ ಎಲ್ಲಾ  ದಪ್ಪಗಾಗಿತ್ತು. ಕಾರಣ ಕೇಳಿದಾಗ ಸೇರೆ ಮರದ ಅಡಿಗೆ ಹೋದರೆ ಆ ರೀತಿ ಆಗುವುದೆಂದು ಹೇಳಿದರು. ಬಾಲ್ಯದಲ್ಲಿ ನನ್ನ ಅಕ್ಕನಿಗೆ ಯಾಕೆ ಹಾಗಾಯಿತು ಅನ್ನುವುದಕ್ಕೆ ಉತ್ತರ ಸಿಕ್ಕಿತ್ತು. ಅಂದರೆ ಅಕ್ಕನಿಗೂ, ನನ್ನ ಓರಗಿತ್ತಿಗೂ ಸೇರೆ ಮರ ಅಲರ್ಜಿ ಅನ್ನುವುದು ಗೊತ್ತಾಯಿತು. ಚೇರೆ ಮರದ ಎಲ್ಲಾ ಭಾಗಗಳಲ್ಲಿ ಇರುವ ದ್ರವ ಕ್ಷಾರೀಯ ಗುಣ ಹೊಂದಿರುವುದರಿಂದ ಅಲರ್ಜಿಕಾರಕವಾಗಿದೆ ಅನ್ನುವುದು ಗೊತ್ತಾಯಿತು.

ಅಲರ್ಜಿ ಅನ್ನುವುದು ಇತ್ತೀಚೆಗೆ ತೀರಾ ಸಾಮಾನ್ಯ ವಿಷಯ ಆಗಿಬಿಟ್ಟಿದೆ. ಅಲರ್ಜಿ ಅನ್ನುವುದು ದೇಹದ ಯಾವ ಭಾಗವನ್ನು ಕೂಡಾ ಭಾಧಿಸಬಹುದು. ಸ್ಪರ್ಶೇಂದ್ರಿಯಗಳು ಬಹು ಬೇಗನೇ ಅಲರ್ಜಿಗೆ ಸ್ಪಂದಿಸುವ ಕಾರಣ ಹೆಚ್ಚಿನವರು ಒಂದಿಲ್ಲೊಂದು ರೀತಿಯಲ್ಲಿ ಅಲರ್ಜಿಯ ಉಪದ್ರ ಅನುಭವಿಸಿರುತ್ತಾರೆ ಅಂತ ನನ್ನ ಅಂಬೋಣ. ಈ ಜಗತ್ತಿನಲ್ಲಿ ಅಲರ್ಜಿಗೊಳಗಾಗದವರು ಇರಬಹುದೇ? ಬಹುಶಃ ನಕಾರಾತ್ಮಕ ಉತ್ತರ ಸಿಗಲು ಸಾಧ್ಯವಿಲ್ಲವೆಂದೆನಿಸುತ್ತದೆ. ಸೇವಿಸುವ ಆಹಾರ ಅಥವಾ ಔಷಧಿಯಲ್ಲಿ ದೇಹಕ್ಕೆ ಹಿಡಿಸದ ಯಾವುದೋ ಆಂಶದಿಂದಾಗಿ, ಸೊಳ್ಳೆ, ಇರುವೆ, ಜೇನುನೊಣ, ಕಣಜದ ಹುಳ ಮುಂತಾದ ಕೀಟಗಳ ಕಡಿತದಿಂದಾಗಿ, ಉಸಿರಾಡುವ ಗಾಳಿಯಲ್ಲಿರುವ ಸೇರಿಕೊಂಡಿರುವ ಧೂಳು ಯಾ ಸೋಂಕುಮಿಶ್ರಿತ ವೈರಸ್ ಇತ್ಯಾದಿಗಳಿಂದಾಗಿ ಅಲರ್ಜಿ ಉಂಟಾಗಬಹುದು. ನೀವು ನೋಡಿರಬಹುದು- ಕೆಲವರಿಗೆ ಬದನೆ ತಿಂದರೆ ಅಲರ್ಜಿ, ಇನ್ನು ಕೆಲವರಿಗೆ ಅನಾನಸು ಸೇವಿಸಿದರೆ ಶೀತಭಾಧೆ,  ಕೆಲವು ಜೀವನಿರೋಧಕಗಳನ್ನು ಸೇವಿಸಿದ ಬಳಿಕ ಮೈಯೆಲ್ಲಾ ತುರಿಕೆ, ಗಂಧಕದ ಅಂಶವಿರುವ ಔಷಧಿ ಸೇವನೆಯಿಂದಾಗಿ ಮೈಯೆಲ್ಲಾ ಕೆಂಪಾಗುವುದು,…., ಇವು ಕೆಲವು ಉದಾಹರಣೆಗಳಷ್ಟೇ. ತುರಿಕೆ, ದದ್ದು ಇಂತಹ ಚರ್ಮಸಂಬಂಧಿ ಅಲರ್ಜಿಗಳು ಸರ್ವೇಸಾಮಾನ್ಯ.

ಸ್ಪರ್ಶೇಂದ್ರಿಯಗಳ ಶೀಘ್ರ ಸಂವೇದನೆಯ ಮೂಲಕ ದೇಹವು ತೋರಿಸುವ ಅತಿಸೂಕ್ಷ್ಮ ಪ್ರತಿಕ್ರಿಯೆಯೇ ಅಲರ್ಜಿ. ಅಲರ್ಜಿ ಯಾಕಾಗಿ ಉಂಟಾಗುತ್ತದೆ ಅನ್ನುವುದಕ್ಕೆ ಸ್ಪಷ್ಟ ಉತ್ತರವಿಲ್ಲ. ನಿರ್ದಿಷ್ಟವಾಗಿ ಯಾವುದರಿಂದ ಅಲರ್ಜಿ ಉಂಟಾಗುತ್ತದೆ ಎಂದು ಗೊತ್ತಾದರೆ ಜಾಗ್ರತೆ ವಹಿಸಬಹುದು.  ಗರಗಸದಿಂದ ಮರ ಕತ್ತರಿಸುವ, ಗರಗಸಕ್ಕೆ ಅರ ಹಾಕುವ, ತೆಂಗಿನಸಿಪ್ಪೆ ಸುಲಿಯುವಾಗ, ತೆಂಗಿನಕಾಯಿ ಹೆರೆಯುವಾಗ, ಲೋಹದ ಡ್ರಿಲ್ಲಿಂಗ್/ವೆಲ್ಡಿಂಗ್ ಮಾಡುವಾಗ  ಉಂಟಾಗುವ ಅಹಿತವಾದ ಶಬ್ದಗಳಿಂದಾಗಿ ದೇಹವಿಡೀ ಕಂಪಿಸಿ, ಮೈಯೊಳಗೆ ಚಳಿ ಹೊಕ್ಕಂತಾಗಿ, ರೋಮಗಳೆಲ್ಲಾ ನಿಮಿರಿ ನಿಲ್ಲುವ ಅಲರ್ಜಿಯ ಬಲಿಪಶು ನಾನೇ!

ಎಳೆಬಿಸಿಲು ಸೋಕಿದಾಗ ಸೀನುವ ನನ್ನ ಪತಿ ಹಾಗೂ ಮಗಳು,  ಹರಿದಾಡುವ ಕಂಬಳಿಹುಳ ಕಂಡಕೂಡಲೇ ದದ್ದು, ತುರಿಕೆಯಿಂದ ಸಂಕಟಪಡುವ ನನ್ನ ಭಾವನ ಮಗಳು, ಬಟ್ಟೆ ಒಗೆದರೆ ಸಾಬೂನಿನ ಅಲರ್ಜಿಯಿಂದ ಬಾಧೆಪಡುವ ನನ್ನ ತಮ್ಮನ ಮಗಳು, ಅಲರ್ಜಿಯಾಗುವುದೆಂದು ಜೀವಮಾನವಿಡೀ ಸ್ನಾನದ ಸಾಬೂನು ಬಳಸದ ನನ್ನ ಸ್ನೇಹಿತನ ಅಣ್ಣ, ದನದ ಹಾಲು ಕರೆದರೆ ಅಲರ್ಜಿಯಿಂದ ಬಳಲುವ ನನ್ನತ್ತೆ, ಫ್ಯಾನಿನ ಗಾಳಿ ತಾಗಿದರೆ ಅಸ್ತಮಾ ಉಲ್ಭಣಗೊಳ್ಳುವ ನನ್ನಮ್ಮ ಎಲ್ಲರೂ ನಾನು ಕಂಡ ವಿವಿಧ ಅಲರ್ಜಿಗಳ ಪ್ರತಿರೂಪವಾಗಿ ನಿಲ್ಲುತ್ತಾರೆ.

ಕೆಲವೊಮ್ಮೆ ಮನಸಿನ ಭ್ರಮೆಯಿಂದಲೂ ಅಲರ್ಜಿ ಉಂಟಾಗುವುದು. ಯಾವುದಾದರೊಂದು ತರಕಾರಿ ಅಥವಾ ಧಾನ್ಯ ತಿಂದರೆ ಅಲರ್ಜಿ ಆಗುತ್ತದೆ ಅಂತ ಮನಸ್ಸಿನಲ್ಲಿ ಕೂತುಬಿಟ್ಟರೆ ಅಂದರೆ ಒಂದು ರೀತಿಯ ಭ್ರಮೆ ಆವರಿಸಿದರೆ, ತನಗಾಗದ ತರಕಾರಿ/ಧಾನ್ಯ ಬಳಸಿದ್ದಾರೆ ಅಂತ ತಿಂದಾದ ನಂತರ ಗೊತ್ತಾದರೆ ಅಲರ್ಜಿ ಜೋರಾಗುತ್ತದೆ. ಮೊದಲೇ ಗೊತ್ತಾದರೆ ತಿನ್ನಲು ಸುತರಾಂ ಒಪ್ಪುವುದಿಲ್ಲ. ಬೇಕಾದರೆ, ರಂಪ ರಾಮಾಯಣ ಮಾಡಿ ಬೇಕೆಂದೇ ಈ ರೀತಿ ಮಾಡಿರುವರು ಅನ್ನುವ ನಿರಾಧಾರ ಆರೋಪ ಮಾಡುವವರು ಕೂಡಾ ಇದ್ದಾರೆ.  ಅಂತಹವರಿಗೆ. ತಮಗಾಗದಿರುವ ತರಕಾರಿ/ವಸ್ತು ಬಳಸಿದ್ದು ಗೊತ್ತೇ ಆಗದಿದ್ದರೆ ಅಲರ್ಜಿಯ ವಿಳಾಸವೇ ಇರುವುದಿಲ್ಲ. ಅಲರ್ಜಿಯಾಗುತ್ತದೆ ಎಂಬ ಕಾರಣದಿಂದ ತಮಗಿಷ್ಟವಾದುದನ್ನು ತಿನ್ನದೆ ಇರಬೇಕಾದ ಅನಿವಾರ್ಯತೆ ಕೆಲವರಿಗೆ. ಯಾವುದಾದರೂ ರೀತಿಯ ಅಲರ್ಜಿ ಕಂಡುಬಂದಲ್ಲಿ ನಿರ್ಲಕ್ಷಿಸುವ ವಿಷಯವಂತೂ ಅಲ್ಲ. ಯಾವುದರಿಂದಾಗಿ ಅಲರ್ಜಿ ಉಂಟಾಗುತ್ತದೆ ಎಂದು ಗೊತ್ತಾದರೆ, ಅದರಿಂದ ದೂರ ಉಳಿಯುವುದು ಆರೋಗ್ಯಕ್ಕೆ ಉತ್ತಮ. ನಿಮಗೂ ಅಲರ್ಜಿಯ ಅನುಭವವಾಗಿದೆಯೇ? ಇದ್ದರೆ ದಯವಿಟ್ಟು ಹಂಚಿಕೊಳ್ಳುವಿರಲ್ಲಾ?

-ಕೃಷ್ಣಪ್ರಭಾ. ಎಂ.

21 Responses

 1. Avatar Samatha says:

  ಹೌದು ಮೇಡಂ,ಎಲ್ಲರಿಗೂ ಒಂದಲ್ಲ ಒಂದು ರೀತಿಯ ಅಲರ್ಜಿ ಕಾಡುತ್ತದೆ.ನನಗೆ ಕಸ ಗುಡಿಸಿದರೆ ಸಾಕು ಧೂಳಿಗೆ ಒಂದರ ಹಿಂದೆ ಒಂದು ಸೀನು ಬರಾಲಾರಂ ಭಿಸುತ್ತವೆ.ನನ್ನ ಮಕ್ಕಳಿಬ್ಬರಿಗೂ ಹಾಲಿನ ಅಲರ್ಜಿ ಇದೆ.ಬರಹ ವಿವರಣಾ ತ್ಮಕ ವಾಗಿ ಚೆನ್ನಾಗಿದೆ.

  • Avatar KRISHNAPRABHA M says:

   ಅಲರ್ಜಿಯ ಮೂಲ ಗೊತ್ತಿದ್ದರೆ ಸ್ವಲ್ಪ ನೆಮ್ಮದಿ. ಆ ಮೂಲದಿಂದ ದೂರ ಇದ್ದು ಜಾಗ್ರತೆ ಮಾಡಬಹುದು. ಪ್ರತಿಕ್ರಿಯೆಗೆ ಧನ್ಯವಾದಗಳು

 2. Avatar ASHA nooji says:

  ಇಲ್ಲಪ್ರಭರವರೇ .ನನಗೆ ಇದುವರೆಗೆ ಆಗಿಲ್ಲ .ಕೇಳಿದ್ದೆ ನೋಡಿದ್ದೆ
  ಇದಕ್ಕೆಲ್ಲ ನ‍ಾನು ಚಿಕ್ಕವಳಿದ್ದಾಗ .ಮಂತರಿಸುವರು .ದೃಷ್ಠಿಎಂದು

  • Avatar KRISHNAPRABHA M says:

   ನೀವು ಅದೃಷ್ಟವಂತರು. ಕೆಲವೊಂದು ತರದ ಅಲರ್ಜಿಗಳನ್ನು ಉಳಿದವರಿಗೆ ವಿವರಿಸಲಾಗದೆ ಮೌನವಾಗಿ ಸಂಕಟ ಅನುಭವಿಸಬೇಕಾಗುವುದು

 3. Avatar Anonymous says:

  ಹಾಗಾದರೆ ಎಲರ್ಜಿ ದೈಹಿಕ ಮಾತ್ರವಲ್ಲ ಮಾನಸಿಕ ಕೂಡಾ ಅಲ್ವಾ.ನೀವು ಹೇಳಿದ ಕಾಯಿ ಕೆರೆಯವ,ಲೋಹಗಳ ವೆಲ್ಡಿಂಗ್ ಇತ್ಯಾದಿಗಳ ಸದ್ದಿಗೆ ಎಲರ್ಜಿ!! .ನಂಗೆ ದೇವಸ್ಥಾನದಲ್ಲಿ ಮಹಾಪೂಜೆ ಆಗುವಾಗ ಆ ಸದ್ದುಗದ್ದಲಕ್ಕೆ ದೇಹಕ್ಕೇನೋ ಕಿರಿಕಿರಿ! ನಂಬುತ್ತೀರಾ?.ವೈವಿಧ್ಯಮಯ ಲೇಖನಗಳಿಗೆ ಸ್ವಾಗತ. ಸೂಪರ್ ಲೇಖನ

  • Avatar KRISHNAPRABHA M says:

   ಖಂಡಿತಾ ನಂಬುವೆ. ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು

 4. Avatar ಹರ್ಷಿತಾ says:

  ವಿವಿಧ ರೀತಿಯ ಅಲರ್ಜಿಗಳನ್ನು ಉದಾಹರಿಸಿದ ಉತ್ತಮವಾದ ಲೇಖನ…

  • Avatar KRISHNAPRABHA M says:

   ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು

 5. Avatar ನಯನ ಬಜಕೂಡ್ಲು says:

  ಸೂಪರ್ ಮೇಡಂ. ಸ್ವತಃ ಆದ ಅನುಭವದೊಂದಿಗೆ ಮಾಹಿತಿಯನ್ನು ನೀಡಿದ ರೀತಿ ತುಂಬಾ ಚೆನ್ನಾಗಿದೆ. ನಿಮ್ಮ ಬರಹದಲ್ಲೊಂದು ಗ್ರಾಮೀಣ ಸೊಗಡಿದೆ.

  • Avatar Krishnaprabha says:

   ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ನಯನಾ.. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅಪ್ಪಟ ಗ್ರಾಮೀಣ ಹೆಣ್ಣು ಮಗಳು ನಾನು…ಈಗ ನಗರವಾಸಿ

 6. Avatar Dr. Geetha M L says:

  Thought provoking article Madam. Keep it up

 7. Hema Hema says:

  ಚೆಂದದ ಲೇಖನ..
  ಚಿಕ್ಕವಳಾಗಿದ್ದಾಗ ನನಗೆ ಅನಾನಸ್ ತಿಂದರೆ ಮೈಯಲ್ಲಿ ಅಲ್ಲಲ್ಲಿ ಕೆಂಪಗೆ, ದಪ್ಪಗೆ ಆಗುತ್ತಿತ್ತು ಎಂದು ಅಮ್ಮ ಹೇಳುತ್ತಿದ್ದರು. ಹಾಗಾಗಿ, ಸುಮಾರು ವರ್ಷ ಅನಾನಸ್ ತಿನ್ನುತಿರಲಿಲ್ಲ. ಆಮೇಲೆ ಸ್ವಲ್ಪ ಪ್ರಮಾಣದಲ್ಲಿ ಅನಾನಸ್ ಸೇರಿಸಿದ ಕೇಸರಿಭಾತ್ ತಿನ್ನಲಾರಂಭಿಸಿದೆ. ಏನೂ ಆಗಲಿಲ್ಲ. ಈಗ ಹಸಿ ಅನಾನಸ್ ತಿಂದರೂ, ಹಣ್ಣಿನ ಜ್ಯೂಸ್ ಕುಡಿದರೂ ಏನೂ ಅಲರ್ಜಿ ಆಗುತ್ತಿಲ್ಲ.

  • Avatar Krishnaprabha says:

   ಅನಾನಸು ತಿಂದರೆ ಅಲರ್ಜಿ ಆಗುವ ಸುಮಾರು ಜನರನ್ನು ನೋಡಿರುವೆ. ನಿಮ್ಮ ಪ್ರೋತ್ಸಾಹದ ಹಾಗೂ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು

 8. Avatar Padmanabha Adiga says:

  ನನ್ನ ಬಾಲ್ಯದಲ್ಲಿ ನನಗೂ ಸೇರೆ ಮರದಿಂದ ಇದೇ ಸಮಸ್ಯೆ ಇತ್ತು. ಆದರೆ ನಂತರ ನಾನು ಸೇರೆ ಮರದ ಗೆಲ್ಲುಗಳನ್ನು ದನಗಳ ಹಟ್ಟಿಯಲ್ಲಿ ಹಾಕಲು (ಹಸಿರು ಸೋಪ್ಪುಗಾಗಿ) ಕತ್ತರಿಸುತ್ತಿದ್ದೆ. ಕತ್ತರಿಸಿದ ನಂತರ ನಾನು ನನ್ನ ದೇಹಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಾಕಿ ಕೊಳ್ಳುತ್ತಿದ್ದೆ. ನನ್ನ ತಾಯಿಯಾದರೋ ಸೆರೆ ಮರದ ಚಿಗುರಿನಿಂದ ಚಟ್ನಿ ತಯಾರಿಸುತ್ತಿದ್ದರು. ಸೇರೆ ಮರದ ಚಿಗುರಿನ ಚಟ್ನಿ ನನಗೆ ತುಂಬಾ ಇಷ್ಟ. ಕುಚ್ಚಲು ಅಕ್ಕಿಯ ಗಂಜಿ ತಯಾರಿಸುವಾಗ ಸೇರೆ ಮರದ ಕೆತ್ತೆ ಅಕ್ಕಿಯೊಂದಿಗೆ ಹಾಕುತ್ತಾರೆ. ಆರೋಗ್ಯಕ್ಕೆ ಉತ್ತಮವಂತೆ. ನಿನ್ನ ಈ ಲೇಖನವು ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವಂತೆ ಮಾಡಿತು. ಲೇಖನವು ತುಂಬಾ ಪ್ರಶಂಸನೀಯವಾಗಿವೆ. ಒಳ್ಳೆಯ ಕೆಲಸ. ಹೀಗೇ ಮುಂದುವರಿಸು. ಒಳ್ಳೆಯದಾಗಲಿ.

  • Avatar Krishnaprabha says:

   ಒಂದು ವಿಷಯದ ಬಗ್ಗೆ ಲೇಖನ ಬರೆದಾಗ, ಆ ಲೇಖನಕ್ಕೆ ಸಂಬಂಧಿಸಿದ ಪೂರಕ ಮಾಹಿತಿ ಸಿಗುವಾಗ ತುಂಬಾ ಸಂತೋಷ ಆಗುತ್ತದೆ.. ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಅಣ್ಣ

 9. Avatar Padmanabha Adiga says:

  .

 10. Avatar ಶಂಕರಿ ಶರ್ಮ says:

  ಹೌದು..ಅಲರ್ಜಿ ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ತೊಂದರೆ. ನೀವೆನ್ನುವಂತೆ ಅದರ ಮೂಲ ಕಾರಣ ತಿಳಿದುಬಿಟ್ಟರೆ ತೊಂದರೆ ಪೂರ್ತಿ ನಿವಾರಣೆ. ಇಲ್ಲವಾದರೆ ಅದರ ಗೋಳು ಬೇಡ..! ಉತ್ತಮ ಮಾಹಿತಿಯುಕ್ತ ಲೇಖನ . ಧನ್ಯವಾದಗಳು ಮೇಡಂ.

  • Avatar Krishnaprabha says:

   ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಶಂಕರಿ ಅವರಿಗೆ

 11. Avatar Santosh Kumar Shetty says:

  Nice article..
  It is too late when I have responded.

  Well presented…Krishnaprabha.

  I remembered the days when my brother had similar problem of allergies with so called tree also had issues with all soaps and hence he stopped using it.

  Missed reading it on time. Never thought this would have had influenced me.

  ಚೆಂದದ ಬರಹ..

  • Avatar Krishnaprabha says:

   ಓಹ್…ಚಂದದ ಪ್ರತಿಕ್ರಿಯೆ. ಲೇಖನ ಓದಿ, ಅದಕ್ಕೆ ಪೂರಕವಾಗಿ ಮಾಹಿತಿಗಳನ್ನು ಓದಿದವರು ಹಂಚಿಕೊಂಡಾಗ ನಿಜವಾಗಿಯೂ ಹೃದಯ ತುಂಬಿ ಬರುತ್ತದೆ. ಧನ್ಯವಾದಗಳು ಸಂತೋಷ್

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: