ಸಾಗರದ ನಿಟ್ಟುಸಿರ ಕೇಳಿದಿರಾ..??

Share Button

ನಮ್ಮ ಭೂಗೋಲದ ಶೇಕಡಾ75ರಷ್ಟು ಜಲ, ಉಳಿದುದಷ್ಟೇ ಭೂಮಿ. ಅನಂತ ಸಾಗರದ  ನೀರು ಅನೇಕ ಜಲಚರಗಳ ಆವಾಸ ಸ್ಥಾನವೂ ಹೌದು. ಜೀವಿಗಳಲ್ಲಿಯೇ ಅತ್ಯಂತ ಬುದ್ಧಿವಂತನೆನಿಕೊಂಡ ಮಾನವನು; ಜಗತ್ತಿನ ಅತಿ ದೊಡ್ಡ ಗಾತ್ರದ ಜೀವಿ, ಬಲಿಷ್ಟ ಜಲಚರ ನೀಲಿ ತಿಮಿಂಗಲವನ್ನೂ ಬಿಡದೆ, ಅದರ ಜೀವಕ್ಕೂ ಸಂಚಕಾರ ತಂದಿರುವುದು ಖೇದಕರ ವಿಷಯ. ನಮ್ಮ ಜೀವಜಲ ಸಿಹಿನೀರಿನ ಒದಗುವಿಕೆಗೆ ಮುಖ್ಯವಾಗಿರುವ ಮೋಡದ ಜನಕ ಈ ಮಹಾಸಾಗರವೇ ಆಗಿರುವುದಲ್ಲವೇ? ಮಾನವನ ಮಿತಿ ಮೀರಿದ ದುರಾಸೆಯು ಈ ಜಲ ಮೂಲವನ್ನೂ ಬಿಡದೆ ಕಲುಷಿತಗೊಳಿಸುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಸಾಗರ ತೀರಗಳು ಪ್ಲಾಸ್ಟಿಕ್ ನಿಂದ ಕಲುಷಿತಗೊಂಡರೆ, ಸಾಗರ ಮಧ್ಯದಲ್ಲಿ, ಚಲಿಸುವ ಹಡಗುಗಳು ಹೊರಸೂಸುವ ತೈಲ ಅಥವಾ ಹಡಗುಗಳು ಅವಘಡಕ್ಕೆ ಸಿಲುಕಿ, ಅದರಲ್ಲಿರುವ ತೈಲ ಸಾಗರದ ನೀರಿಗೆ ಸೇರ್ಪಡೆಯಾಗಿ ಅದನ್ನು ದೂಷಿತಗೊಳಿಸುತ್ತದೆ. ಇದರಿಂದ ಸಂಭವಿಸುತ್ತಿರುವ ಜಲಚರಗಳ ಸಾವು  ದಿನೇ ದಿನೇ ಹೆಚ್ಚುತ್ತಿದೆ; ಮಾತ್ರವಲ್ಲ, ಅವುಗಳ ಹಲವಾರು ಸಂತತಿಗಳ ನಾಶಕ್ಕೂ ಕಾರಣವಾಗಿದೆ.

ಪರಿಶುದ್ಧ ಸಾಗರ ಹಾಗೂ ಜಲಚರಗಳ ಉಳಿವಿಗಾಗಿ ಹೋರಾಟ ನಡೆಸುವ ಸಲುವಾಗಿ, ಕೆನಡಾದ, ಅಂತರಾಷ್ಟ್ರೀಯ ಸಾಗರಾಭಿವೃದ್ಧಿ ಸಂಸ್ಥೆಯೊಂದು, 1992ರಲ್ಲಿ, ಅಲ್ಲಿ ನಡೆಯುತ್ತಿದ್ದ ಮಹಾ ಸಮ್ಮೇಳನವೊಂದರಲ್ಲಿ ವಿಶ್ವ ಸಾಗರ ದಿನವನ್ನು ಆಚರಿಸುವ ತನ್ನ  ಪರಿಕಲ್ಪನೆಯನ್ನು ಮುಂದಿಟ್ಟಿತು. ಆದರೆ ಅಧಿಕೃತವಾಗಿ, 2008ರಲ್ಲಿ ಯುನೈಟೆಡ್ ನ್ಯಾಷನ್ಸ್ ನಿಂದ ಅದು ಆಂಗೀಕರಿಸಲ್ಪಟ್ಟಿತು. ಕಾರ್ಯಾಚರಣೆಗಳಲ್ಲಿ, ಸಾಗರೋತ್ಪನ್ನಗಳ ಅಭಿವೃದ್ಧಿ, ಸಾಗರ ಸಂರಕ್ಷಣೆ ಮುಖ್ಯವಾಗಿತ್ತು. ಮಾತ್ರವಲ್ಲದೆ, ಇವುಗಳ ಕುರಿತು ತಯಾರಿಸಲಾದ ಸಿನಿಮಾಗಳ ಪ್ರದರ್ಶನ,  ಪ್ರಾಣಿ ಸಂಗ್ರಹಾಲಯ, ಹಾಗೂ ಅಕ್ವೇರಿಯಂಗಳಲ್ಲಿ ವಿವಿಧ ರೀತಿಯ ವಿಶೇಷ ಕಾರ್ಯಕ್ರಮಗಳೊಂದಿಗೆ, ಸಮುದ್ರತೀರದ ಸ್ವಚ್ಛತಾ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಯಿತು. ಸುಮಾರು 2016ನೇ ಇಸವಿಯ ಬಳಿಕ, ಈಗಿನ ಯುವ ಪೀಳಿಗೆಯ ಶ್ರಮದಿಂದ, ಈ ಆಂದೋಲನವು ವಿಶ್ವದಾದ್ಯಂತ ಪಸರಿಸಲು ಪ್ರಾರಂಭವಾಯಿತು. ಆನಂತರದ ವರುಷಗಳಲ್ಲಿ, ವಿವಿಧ ಘೋಷ ವಾಕ್ಯಗಳೊಂದಿಗೆ,  ಪ್ರತೀ ವರುಷವೂ ಜೂನ್ 8ನೇ ತಾರೀಕಿನಂದು ವಿಶ್ವ ಸಾಗರ ದಿನವು ಆಚರಿಸಲ್ಪಡುತ್ತಿದೆ. ವೈವಿಧ್ಯಮಯ , ವಿಶೇಷ, ಧ್ಯೇಯ ವಾಕ್ಯಗಳು ಇಂತಿವೆ..

‘ನಮ್ಮ ಸಾಗರ, ನಮ್ಮ ಬಾಧ್ಯತೆಗಳು’
‘ನಮ್ಮ ಸಮುದ್ರ, ನಮ್ಮ ಅವಕಾಶ ಮತ್ತು ಸವಾಲುಗಳು’
‘ನಮ್ಮ ಸಾಗರದಿಂದ ನಮ್ಮ ಭವಿಷ್ಯ ಹಸಿರು ‘
‘ಸಾಗರ ಮತ್ತು ಮಾನವ’
‘ಆರೋಗ್ಯವಂತ ಸಾಗರದಿಂದ ಆರೋಗ್ಯವಂತ ಪೃಥ್ವಿ’
‘ನಮ್ಮ ಸಾಗರವೇ ನಮ್ಮ ಭವಿಷ್ಯ’
‘ಸಮುದ್ರವನ್ನು ಸ್ವಚ್ಚವಾಗಿಡಿ’ ಇತ್ಯಾದಿ…
ಈ ವರುಷದ ಘೋಷಣಾ ವಾಕ್ಯವು ‘ಸುಸ್ಥಿರ, ಸ್ವಚ್ಛ ಸಾಗರಕ್ಕಾಗಿ ಹೊಸ ಆವಿಷ್ಕಾರಗಳು’ ಎಂದಾಗಿದೆ.

ಇಷ್ಟೆಲ್ಲಾ ಆಂದೋಲನೆಗಳು ನಡೆಯುತ್ತಿದ್ದರೂ, ಯಾವ ರೀತಿಯಲ್ಲಿ ನಮ್ಮ ಪ್ರಾಣವಾಯು, ಜೀವಜಲಗಳು, ಮಾನವನ ಲಾಲಸೆಯಿಂದ, ವಿಷಪೂರಿತವಾಗುತ್ತಿವೆಯೋ ಹಾಗೆಯೇ ಅತ್ಯಮೂಲ್ಯ ಸಾಗರೋತ್ಪನ್ನಗಳು, ಅಸಂಖ್ಯಾತ ಜಲಚರಗಳು ಕೂಡಾ ಅಪಾಯದ ಸ್ಥಿತಿಯಲ್ಲಿವೆ. ಮೊತ್ತ ಮೊದಲಾಗಿ, ಸಾಗರ ತೀರಗಳ ಸ್ವಚ್ಛತೆಗೆ ಎಲ್ಲರೂ ಕಟಿಬದ್ಧರಾಗಬೇಕಿದೆ. ಮುಂದುವರಿದ ರಾಷ್ಟ್ರಗಳಲ್ಲಿ, ಅಗಾಧ ಪ್ರಮಾಣದಲ್ಲಿ ಉಪಯೋಗಿಸಲ್ಪಟ್ಟ, ಅಳಿವಿಲ್ಲದ ಪ್ಲಾಸ್ಟಿಕ್ ಗಳು ಕೂಡಾ ದುರಂತಕ್ಕೆ ಕಾರಣವಾಗಿದೆ. ನಿರುಪಯೋಗಿ ಪ್ಲಾಸ್ಟಿಕ್ ಗಳನ್ನು ಸರಿಯಾದ ರೀತಿಯಲ್ಲಿ ಪುನರ್ಬಳಕೆಗೆ ಉಪಯೋಗಿಸುವ ಬದಲು, ಅವುಗಳನ್ನು ಟನ್ ಗಟ್ಟಲೆಯಲ್ಲಿ ತಂದು, ಸಮುದ್ರಕ್ಕೆ ಎಸೆಯುವುದು ಯಾವ ನ್ಯಾಯ? ಧ್ಯೇಯ ವಾಕ್ಯಗಳು ಬರೇ ಘೋಷಣೆಯಾಗಿ ಉಳಿಯದೆ, ಪೂರ್ಣ ರೂಪದಲ್ಲಿ ಕಾರ್ಯರೂಪಕ್ಕೆ ಬಂದರೆ ಮಾತ್ರ ಭೂಮಾತೆಯ ಮಡಿಲಿನಲ್ಲಿ ಅವಳ ಸುಂದರ, ಆರೋಗ್ಯವಂತ ಮಕ್ಕಳು ನಲಿದಾಡಲು ಸಾಧ್ಯ ಅಲ್ಲವೇ?

-ಶಂಕರಿ ಶರ್ಮ, ಪುತ್ತೂರು.
 

4 Responses

 1. Avatar Jayalaxmi says:

  ಚೆನ್ನಾಗಿದೆ

 2. Avatar ನಯನ ಬಜಕೂಡ್ಲು says:

  ಹೌದು ಎಲ್ಲಿ ಕಂಡರಲ್ಲಿ ಬರೀ ಪ್ಲಾಸ್ಟಿಕ್ ತ್ಯಾಜ್ಯಗಳೇ ತುಂಬಿಕೊಂಡಿವೆ. ಇದು ಸರಿ ಹೋಗಲು ಜನರಲ್ಲಿ ಮೊದಲು ಸ್ವಚ್ಛತೆಯ ಅರಿವು ಮೂಡಬೇಕಿದೆ.

  • Avatar ಶಂಕರಿ ಶರ್ಮ says:

   ತಮ್ಮ ಪ್ರಕೃತಿ ಕಾಳಜಿಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: