ವಿಶ್ವ ಪರಿಸರ ಸರಿ ಇದೆಯೇ?

Share Button

ಜಗತ್ತು ಉದ್ಭವವಾದಾಗಲೇ, ಸಕಲ ಜೀವಸಂಕುಲಗಳು ಬೆಳೆದು ಬಾಳಲೋಸುಗ ಅವುಗಳಿಗುಚಿತವಾದ ನಿಸರ್ಗ ಪರಿಸರದ ನಿರ್ಮಾಣವೂ ಆಯಿತೆನ್ನಬಹುದು. ಮಾನವ ಜನಾಂಗದ ಉಗಮದೊಂದಿಗೆ, ಅವನ ಸಾಮಾಜಿಕ ಜೀವನ ಪದ್ಧತಿಯು ಯಾವಾಗ ಬೆಳವಣಿಗೆ ಕಂಡಿತೋ, ಆಗಿನಿಂದ, ಪರಿಸರದ ಜೊತೆಗೇ ಬಾಳುತ್ತಿದ್ದವನು, ಅದರ ನಾಶಕ್ಕೆ ಕಾರಣನಾಗತೊಡಗಿದ. ಸುಂದರವಾಗಿ ನಳನಳಿಸುತ್ತಿದ್ದ ಭೂಮಾತೆಯ ಮಡಿಲು ಬರಡಾಗ ಹತ್ತಿತು. ಇದರಿಂದಾಗಿ, ಸೂರ್ಯನ ಅತಿ ನೇರಳೆ ಕಿರಣಗಳಿಂದ ಜಗತ್ತಿನ ಜೀವ ಸಂಕುಲಗಳನ್ನು  ರಕ್ಷಿಸುತ್ತಿರುವ ನಿಸರ್ಗ ನಿರ್ಮಿತ ಓಝೋನ್ ಪದರಕ್ಕೂ ಧಕ್ಕೆಯುಂಟಾಗ ತೊಡಗಿದುದು ನಿಜಕ್ಕೂ ಆಘಾತಕಾರಿ ಸಂಗತಿ! ಮಾನವನ ಅತಿಯಾದ ಹಣದ ದಾಹವು, ನೆಲ, ಜಲ, ವಾಯು ಎಲ್ಲವೂ ವಿಷಪೂರಿತವಾಗಲು ಕಾರಣವಾಯಿತು.

ದಿನೇ ದಿನೇ ವಿಶ್ವದ ಪರಿಸರವು ವಿನಾಶದತ್ತ ಸಾಗುತ್ತಾ, ಭವಿಷ್ಯದ ಕರಾಳತೆಯನ್ನು ಮಾನವನಿಗೆ ಮನದಟ್ಟು ಮಾಡಿಸುತ್ತಿದೆ..ಈ ಪ್ರಕೃತಿ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದುರಂತಕ್ಕೆ ನಾವೇ ಹೊಣೆಯಾಗಬೇಕಾಗಬಹುದು ಎಂಬುದನ್ನು ಮನಗಂಡು; ಯುನೈಟೆಡ್ ನ್ಯಾಷನ್ಸ್ ನಲ್ಲಿ 1972ನೇ ಇಸವಿಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. “ಇರುವುದೊಂದೇ ಭೂಮಿ” ಎಂಬ ಘೋಷಣಾ ವಾಕ್ಯದೊಂದಿಗೆ ನಡೆದ ಸಭೆಯಲ್ಲಿ 143ದೇಶಗಳು ಪಾಲ್ಗೊಂಡಿದ್ದವು. ಜಗತ್ತಿನ ವಿವಿಧ ಜೀವಿಗಳನ್ನು ಉಳಿಸಿ ಬೆಳೆಸುವ ಧ್ಯೇಯದೊಂದಿಗೆ  1974ನೇ ಇಸವಿಯ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಮೊತ್ತ ಮೊದಲಾಗಿ ಆಚರಿಸಲಾಯಿತು. ಮುಂದಕ್ಕೆ ಪ್ರತಿ ವರುಷವೂ ಅದೇ ದಿನದಂದು ಈ ಆಚರಣೆಯು ತಪ್ಪದೇ ನಡೆದು ಬಂದಿದೆ. ಮೂಲಭೂತವಾಗಿ, ಪರಿಸರ ನಾಶಕ್ಕೆ ಕಾರಣವಾಗುವ; ಜನಸಂಖ್ಯಾ ಸ್ಪೋಟ, ಜಾಗತಿಕ ತಾಪಮಾನದಲ್ಲಿ ಏರಿಕೆ, ಅರಣ್ಯನಾಶ, ಕಲುಷಿತಗೊಳ್ಳುತ್ತಿರುವ ಜಲ ಇತ್ಯಾದಿಗಳ ಮೇಲೆ ಹಿಡಿತ ಸಾಧಿಸುವ ಕಾರ್ಯಗಳು ಜಗತ್ತಿನಾದ್ಯಂತ ಆಯೋಜಿಸಲ್ಪಡುತ್ತವೆ.


ಈ ವಿಶೇಷ ದಿನದಂದು ಮಾತ್ರ ಇದನ್ನು ಮನವರಿಕೆ ಮಾಡಿಕೊಂಡರೆ ಸಾಕೆ?..ಇಲ್ಲ, ಬೇರು ಸಮೇತ ಕಿತ್ತು ಹೋಗಿರುವಂತಹ ನಮ್ಮ ಪೂರ್ವಜರ ಪ್ರಕೃತಿ ಪ್ರೀತಿ ಪುನಃ ಚಿಗುರಬೇಕಿದೆ. ಹಿಂದೆ, ಪರಿಸರದ ಉಳಿವಿಗಾಗಿಯೇ ಎಂಬಂತೆ ವಿವಿಧ ರೀತಿಯ ಪ್ರಕೃತಿ ಪೂಜೆಗಳು ನಡೆಯುತ್ತಿದ್ದವು. ಹಿರಿಯರು, ಪ್ರತಿಯೊಂದು ಚರಾಚರ ವಸ್ತು,, ಜೀವ ಸಂಕುಲಗಳಲ್ಲೂ ದೇವರನ್ನು ಕಾಣುತ್ತಿದ್ದುದರಿಂದ, ಅವರು ಅದರ ಜೊತೆ ಜೊತೆಗೇ ಜೀವಿಸುತ್ತಿದ್ದರು.. ಬೆಳೆಯುತ್ತಿದ್ದರು. ನಮ್ಮ ಚಿಕ್ಕಂದಿನಲ್ಲಿ, ಎಲ್ಲೆಲ್ಲೂ ಕಾಣುತ್ತಿದ್ದ ಮರಗಳು, ಕಾಡುಗಳು ಈಗೆಲ್ಲಿವೆ? ಜೊತೆಗೆ, ಪ್ಲಾಸ್ಟಿಕ್ ನ ದುರ್ಬಳಕೆ ಹಾಗೂ ನಿರುಪಯೋಗಿ ಪ್ಲಾಸ್ಟಿಕ್ ನ ಸರಿಯಾದ ನಿರ್ವಹಣೆಯಲ್ಲಿ ಆಗಿರುವ ಸೋಲು, ಪರಿಸರದ ನಾಶದಲ್ಲಿ ತನ್ನ ಕೊಡುಗೆಯನ್ನು ಕೊಡುತ್ತಲೇ ಬಂದಿದೆ.

ಈಗ ಜಗತ್ತಿನಲ್ಲಿ ಹರಡಿ, ಜನತೆಯನ್ನು ಭಯಭೀತಿಗೊಳಿಸುತ್ತಿರುವ ಕೊರೋನಾದಿಂದಾಗಿ, ಜನ ಜೀವನಚಕ್ರ ತಟಸ್ಥವಾಗಿದ್ದು, ಪ್ರಕೃತಿಯ ಪುನಃಶ್ಚೇತನಕ್ಕೆ ತನ್ನದೇ ಕೊಡುಗೆಯನ್ನು ನೀಡಿದ್ದು ಅಲ್ಲಗಳೆಯುವಂತಿಲ್ಲ. ಆದರೆ ಚಕ್ರ ತಿರುಗಲಾರಂಭಿಸಿದಾಗ ಇದರ ಬಗ್ಗೆ ಆಳವಾದ ಚಿಂತನೆ  ಮಾಡಬೇಕಾದ ಅಗತ್ಯ ಖಂಡಿತಾ ಇದೆ. ಪ್ರತಿಯೊಬ್ಬರೂ ಪರಿಸರ ನೈರ್ಮಲ್ಯದ ಜೊತೆಗೆ ಅದರ ಮೇಲೆ ಪ್ರೀತಿ ಹಾಗೂ ತಮ್ಮ ಬಾಧ್ಯತೆ, ಬದ್ಧತೆಗಳನ್ನು ಅರಿತು ನಡೆದರೆ ಪರಿಸರ ದಿನದ ಆಚರಣೆಯು ಅರ್ಥಪೂರ್ಣವಾಗುವುದರಲ್ಲಿ ಸಂಶಯವಿಲ್ಲ.

– ಶಂಕರಿ ಶರ್ಮ, ಪುತ್ತೂರು. 

5 Responses

  1. ನಯನ ಬಜಕೂಡ್ಲು says:

    ಹೌದು, ಪರಿಸರದ ಕಾಳಜಿ ಪರಿಸರ ದಿನಾಚರಣೆಯೊಂದಿಗೆ ಒಂದು ದಿನದಲ್ಲಿ ಮುಗಿಯಬಾರದು

  2. ಜಲಜಾರಾವ್ says:

    ಒಳ್ಳೆಯ ಲೇಖನ. ಮಾನವ ಸ್ವತಃ ಪ್ರಕೃತಿಯ ಶಿಶುವಾದರೂ ತನ್ನ ಸುತ್ತಲಿನ ಪರಿಸರವನ್ನೇ ರಕ್ಷಿಸಲು ಅಸಮರ್ಥನಾಗುತ್ತಿರುವುದು ಖೇದಕರ.. ಇನ್ನು ಮುಂದಾದರೂ ಹಸಿರೇ ಉಸಿರೆಂಬ ಧ್ಯೇಯ ಮೈಗೂಡಿಸಿಕೊಳ್ಳಲಿ..

  3. ಒಳ್ಳೆಯ ವಿಚಾರಪೂರ್ಣ ಸಕಾಲಿಕ ಲೇಖನ ಶಂಕರಿಶರ್ಮ.

Leave a Reply to ಜಲಜಾರಾವ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: