ಪರಿಸರ ಪ್ರಜ್ಞೆ ಮತ್ತು ನಾಗರಿಕ ಪ್ರಜ್ಞೆ

Share Button

ಮತ್ತೆ ಎಂದಿನಂತೆ ಪರಿಸರ ದಿನಾಚರಣೆ ಬಾಗಿಲಿಗೆ ಬಂದಿದೆ. ಪ್ರತೀ ವರ್ಷವೂ ಬರುತ್ತದೆ ನಾವುಗಳು ಪ್ರತಿವರ್ಷವೂ ಅದೇ ಅದೇ ಹಳತಾದ ಭಾಷಣಗಳು, ಅದೇ ಗಿಡನೆಡುವ ಕಾರ್ಯಕ್ರಮ ಮಾಡಿ ಅದನ್ನು ಕಳುಹಿಸಿ ಕೊಟ್ಟು, ಎಂದಿನಂತೆ ನಮ್ಮ ನಮ್ಮ ಅರಿವಿನ ಬಾಗಿಲು ಮುಚ್ಚಿಕೊಂಡು, ನಮ್ಮ ದುರಾಸೆಯ ,ವಿಪರೀತ ವಸ್ತು ವ್ಯಾಮೋಹದ ಜೀವನ ಶೈಲಿಗೆ ಮರಳಿ ಹೋಗುತ್ತೇವೆ.

ಆದರೆ ಈ ಬಾರಿ ಪರಿಸರ ದಿನ ತಾನೊಂದೇ ಬಂದಿಲ್ಲ ಜೊತೆಯಲ್ಲಿ ಕರೋನ ಮಹಾಮಾರಿಯ ಕರೆತಂದಿದೆ.ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮ ಈ ಪರಿಸರವನ್ನ ಉಳಿಸುವೆಡೆಗೆ ದೃಢ ಸಂಕಲ್ಪ ಕೈಗೊಂಡು ಕಾರ್ಯ ಪ್ರವೃತ್ತರಾಗದೆ ಹೋದರೆ ನಮ್ಮೆಲ್ಲರ ವಿನಾಶ ಕಟ್ಟಿಟ್ಟ ಬುತ್ತಿ.

ಪರಿಸರದಲ್ಲಿ ಪ್ರತಿಯೊಂದೂ ಇನ್ನೊಂದರೊಂದಿಗೆ ಲಗತ್ತಿಸಿಕೊಂಡಿದೆ ಅಂತ ವಿಜ್ಞಾನ ಹೇಳುತ್ತದೆ. ಪರಿಸರದಲ್ಲಿ ಮಾನವನಿಗೆ ಎಷ್ಟು ಮಹತ್ವ ವಿದೆಯೋ ಒಂದು ಚಿಕ್ಕ ಇರುವೆಗೂ ಅಷ್ಟೇ ಮಹತ್ವವಿದೆ, ಜಗತ್ತಿನ ಅತ್ಯಂತ ಬೃಹತ್ ಜೀವಿಯಾದ ನೀಲಿ ತಿಮಿಂಗಿಲ ಎಷ್ಟು ಬೆರಗು ಹುಟ್ಟಿಸುವುದೋ ಅದಕ್ಕಿಂತ ಹೆಚ್ಚಿನ ಬೆರಗು, ದಿಗಿಲನ್ನು ಕಣ್ಣಿಗೇ ಕಾಣದ ಅತ್ಯಂತ ಸೂಕ್ಷ್ಮ ಜೀವಿಯಾದ ಕರೋನ ಎಂಬ ಒಂದು ವೈರಸ್ ಹುಟ್ಟಿಸಿ ಬಿಟ್ಟಿದೆ.

ಆದರೆ ಪರಿಸರದ ಸೂಕ್ಷ್ಮ ಪರಸ್ಪರ ಕೊಂಡಿಗಳನ್ನು ಅರಿಯದ ಮಾನವ ತನ್ನ ದುರಾಸೆಯಿಂದಾಗಿ,ತನಗೊಬ್ಬನಿಗೆ   ಈ ಭೂಮಿ, ಅದರ ಎಲ್ಲ ಸಂಪನ್ಮೂಲ ಅನ್ನುವ ಅಹಂಕಾರದಿಂದ ವಿಪರೀತವಾಗಿ ಬಳಕೆ ಮಾಡುತ್ತಾ,ಅದರಿಂದ ತನ್ನ ಗೋರಿ ತಾನೇ ತೋಡಿ ಕೊಳ್ಳುತ್ತಾ ಸಾಗಿದ್ದಾನೆ. ವಿಪರೀತ ಕೈಗಾರಿಕೀಕರಣ,ಅರಣ್ಯನಾಶ,ಅಭಿವೃದ್ದಿಯ ಹೆಸರಲ್ಲಿ ಬರಿದಾಗಿಸುತ್ತ ಹೋಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳು ಎಲ್ಲವೂ ಭೂಮಿಯನ್ನು ಬರಡಾಗಿಸುತ್ತ ಹೋಗುತ್ತಿವೆ. ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಂಡು ಪರಿಸರದ ಸೂಕ್ಷ್ಮ ಜೀವಜಾಲ ಸಮತೋಲನವನ್ನು ಕಾಪಡಿಕೊಂಡು ಹೋಗದಿದ್ದರೆ, ನಮ್ಮ ಸುಂದರ ನೀಲಿಗೋಲವಾದ ಭೂಗ್ರಹ ಸೌರ ಮಂಡಲದ ಇತರೆ ಬರಡು ಗ್ರಹಗಳ ಸಾಲಿಗೆ ಸೇರುವ ದಿನ ದೂರವಿಲ್ಲ.

ಹಾಗಾಗಿ ನಮ್ಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತ ರಾಗ ಬೇಕಾಗಿರುವುದು ನಮ್ಮ ಅತ್ಯಂತ ಆದ್ಯಕರ್ತವ್ಯವಾಗಿದೆ. ಪರಿಸರ ಸಂರಕ್ಷಣೆ ಕಾರ್ಯ ದಲ್ಲಿ ತೊಡಗಿಸಿಕೊಳ್ಳಲು “ಸಾವಿರ ಮೈಲುಗಳ ಪ್ರಯಾಣ ವಾದರೂ ಒಂದು ಹೆಜ್ಜೆಯಿಂದ ಪ್ರಾರಂಭವಾಗಬೇಕು” ಅನ್ನುವ ಮಾತಿನಂತೆ ನಾವೆಲ್ಲರೂ ನಮ್ಮಿಂದ ಆಗುವ ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಯಾಕೆ ಮಾಡಬಾರದು?

ಒಮ್ಮೆ ನಾನು ಕೆಲಸ ಮಾಡುವ ಶಾಲೆಯಿರುವ ಗ್ರಾಮದ ಪಂಚಾಯತ್ ನ ಅಭಿವೃದ್ದಿ ಅಧಿಕಾರಿ ಅಂದರೆ ಪಿ ಡಿ ಒ ಶಾಲೆಗೆ ಬಂದು ಮಾತನಾಡುತ್ತಿರುವಾಗ, ಗ್ರಾಮದ ವಿದ್ಯುತ್ ಬಿಲ್ ಅಧಿಕ ಪ್ರಮಾಣದಲ್ಲಿ ಬಂದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ, ನಮ್ಮೆಲ್ಲರೊಂದಿಗೆ  ಮಾತನಾಡುತ್ತ  “ನೋಡಿ ಮೇಡಂ,ಹಳ್ಳಿಯಲ್ಲಿ ಎಲ್ಲರೂ ಸಮಯಕ್ಕೆ ಸರಿಯಾಗಿ ಬೀದಿ ದೀಪಗಳನ್ನು ಹಾಕುವುದು, ಆರಿಸುವುದು ಮಾಡಬಹುದಿತ್ತು, ಕೆಲವು ಸಾರಿ ಸಂಜೆ ಐದು ಘಂಟೆಗೆ ಹಾಕಿ ಬೆಳಿಗ್ಗೆ ಎಂಟು ಗಂಟೆಯಾದರೂ ಕೆಲವು ಬೀದಿಗಳಲ್ಲಿ ದೀಪ ಉರಿಯುತ್ತಿರುವದನ್ನು ನೋಡಿದ್ದೇನೆ. ಎಷ್ಟೋ ಸಾರ್ವಜನಿಕ ನಲ್ಲಿಗಳಲ್ಲಿ ನೀರು ಹರಿದು ಹೋಗುತ್ತಿರುತ್ತದೆ,ಕಸ ಸಂಗ್ರಹಣೆಯ ವ್ಯಾನ್ ಬರುವ ತನಕ ಕಾಯುವ ವ್ಯವಧಾನವೂ ಕೆಲವರಿಗೆ ಇರುವುದಿಲ್ಲ, ಖಾಲಿ ಸೈಟ್ ಕಂಡರೆ ಸಾಕು ಕಸ ಎಸೆದು ಹೋಗುತ್ತಿರುತ್ತಾರೆ.ತಮ್ಮ ಅಕ್ಕ ಪಕ್ಕ ಚೆನ್ನಾಗಿ ಇಟ್ಟು ಕೊಳ್ಳುವ ನಾಗರಿಕ ಪ್ರಜ್ಞೆ ಬೇಡವೇ? ಇದೆಲ್ಲದಕ್ಕೆ ನಮ್ಮ ಪಂಚಾಯತ್ ಹಣವನ್ನು ಕಟ್ಟಬೇಕು. ಇಷ್ಟು ಸಣ್ಣ ಸಣ್ಣ ವಿಷಯಗಳ ಕಡೆಗೆ ನಮ್ಮ ಜನ ಗಮನ ಹರಿಸಿದರೆ ಸಾಕು, ಉಳಿತಾಯವಾಗುವ ಹಣವನ್ನು ಊರಿನ ಅಭಿವೃದ್ಧಿಗೆ ಬಳಸ ಬಹುದಲ್ಲವೆ” ಎಂದು ಹೇಳಿದರು.

ಹೌದಲ್ಲವೇ ಒಂದು ಚಿಕ್ಕ ಗ್ರಾಮಕ್ಕೆ ಅನ್ವಯಿಸುವುದು ಇಡೀ ಪ್ರಪಂಚಕ್ಕೆ ಅನ್ವಯಿಸುವುದಿಲ್ಲವೇ. ನಾವು ಕಸ ಹಾಕುತ್ತೇವೆ ನೀವು ಶುಚಿ ಮಾಡಿ ಅಂತ ಎಲ್ಲಾ ವಿಷಯಕ್ಕೂ ಸರ್ಕಾರವನ್ನು ದೂರುವುದು ಸರಿಯೇ? ನಾಗರಿಕರಾಗಿ ನಮ್ಮ ಕರ್ತವ್ಯಗಳೂ ಕೂಡ ಕೆಲವು ಇಲ್ಲವೇ?

ಪ್ರತಿನಿತ್ಯ ಸಂಜೆಯ ವಾಕ್ ಮಾಡುವಾಗ ರಸ್ತೆ ಬದಿಯಲ್ಲಿ ಎಸೆದಿರುವ ಕಸ ನೋಡಿದಾಗ ತಮ್ಮ ಕಸವನ್ನು ತಾವೇ ಸರಿಯಾಗಿ ನಿರ್ವಹಣೆ ಮಾಡಲಾಗದ ಜನರ ಬಗ್ಗೆ ಅಪಾರ ಕೋಪ ಬರುತ್ತದೆ. ಮನೆಯಲ್ಲಿ ಕಸದ ನಿರ್ವಹಣೆ ಏನೂ ಅಂತಹ ರಾಕೆಟ್ ಸೈನ್ಸ್ ಅಲ್ಲ ಬಿಡಿ. ಚಿಕ್ಕ ಚಿಕ್ಕ ವಿಷಯಗಳ ಕಡೆಗೆ ಗಮನ ನೀಡಿದರೆ ಸಾಕು ಪ್ರತಿ ಮನೆಯು ಶೂನ್ಯ ಕಸ ಉತ್ಪಾದಿಸುವ ಮನೆಯಾಗಬಹುದು. ಅಂಗಡಿಯಿಂದ ಯಾವುದೇ ಸಾಮಗ್ರಿ,ಹಣ್ಣು ತರಕಾರಿ ತರುವಾಗ ಒಂದು ಬಟ್ಟೆಯ ಕೈಚೀಲ ತೆಗೆದು ಕೊಂಡು ಹೋದರಾಗದೆ? ಮನೆಯಲ್ಲೇ ಹಳೇ ನ್ಯೂಸ್ ಪೇಪರ್ ಬಳಸಿ ಚಿಕ್ಕ ಚಿಕ್ಕ ಪೇಪರ್ ಬ್ಯಾಗ್ ತಯಾರಿಸಿ ಕೊಂಡು ಅಂಗಡಿ ಸಾಮಗ್ರಿಗಳನ್ನ ತರಬಹುದಲ್ಲವೇ. ಮನೆಯಲ್ಲೇ ತಾರಸಿಯಲ್ಲಿ, ಬಾಲ್ಕನಿಯಲ್ಲಿ ಇಲ್ಲವೇ ಹೊರಗಡೆ ಅಂಗಳದಲ್ಲೇ ಒಂದು ನಾಲ್ಕಾರು ಗಿಡಗಳ ಕುಂಡಗಳನ್ನಿಟ್ಟುಕೊಂದರೆ ಮನೆಯ ತರಕಾರಿ ಹಣ್ಣಿನ ಸಿಪ್ಪೆಯನ್ನು ಗೊಬ್ಬರವಾಗಿ ಬಳಸಬಹುದು. ಕೈ ತೋಟ ವಿದ್ದರೆ ಇನ್ನೂ ಚೆನ್ನ. ಊಟ ಮಾಡುವಾಗ ಸ್ವಲ್ಪವೂ ತಟ್ಟೆಯಲ್ಲಿ ಬಿಡದಂತೆ ತಿನ್ನುವ ಅಭ್ಯಾಸ ನಾವೂ ಮಾಡಿಕೊಂಡು ನಮ್ಮ ಮಕ್ಕಳಿಗೂ ಮಾಡಿಸಿದರೆ ಅದರಿಂದ ಎಷ್ಟೋ ಕಸದ ಉತ್ಪತ್ತಿ ಆಗುವುದು ನಿಲ್ಲುವುದಿಲ್ಲವೇ.

ಇನ್ನ ಮರು ಬಳಕೆಗೆ, ಮರು ಚಕ್ರೀಕರಣಕ್ಕೆ ಒಳಪಡಬಲ್ಲ ವಸ್ತುಗಳನ್ನು ಬಳಸಿ ಹಲವು ಉಪಯುಕ್ತ ವಸ್ತುಗಳನ್ನು ತಯಾರಿಸಲು ಈಗ ಎಷ್ಟೊಂದು ಅವಕಾಶ,ಮಾರ್ಗದರ್ಶನ ಲಭ್ಯವಿದೆ.  ಮನೆಯ ಒಳಾಂಗಣ ಅಲಂಕಾರಕ್ಕೆ ಲಕ್ಷಗಟ್ಟಲೆ ವ್ಯಯ ಮಾಡುವ ಜನ , ಆ ವೆಚ್ಚದ ಸ್ವಲ್ಪ ಭಾಗವನ್ನದರೂ ಮಳೆನೀರು ಕುಯಿಲಿಗೆ, ಸೌರ ವಿದ್ಯುತ್ ವ್ಯವಸ್ಥೆಗೆ ಬಳಸಿದರೆ ಎಷ್ಟು ಚೆನ್ನ.

ಕೆಲವರಿಗಂತೂ ವಾಹನಗಳಿಲ್ಲದೆ ಒಂದು ನಾಲ್ಕು ಹೆಜ್ಜೆಯೂ ನಡೆಯಲಾಗದು. ನಡೆದು ಹೋಗಿಯೇ ತಲುಪಬಲ್ಲ ಜಾಗಗಳಿಗೂ ಬೈಕ್, ಕಾರ್ ತೆಗೆಯುವವರು ತಮ್ಮ ಈ ದುರಭ್ಯಾಸ ಎಂದು ಬಿಡುವರೋ.ಚಿಕ್ಕ ಚಿಕ್ಕ ದೂರಗಳಿಗೆ ಕಾಲ್ನಡಿಗೆ ಇಲ್ಲವೇ ಬೈಸಿಕಲ್ ಬಳಸಿದರೆ ಹಣವೂ ಉಳಿದು,ಆರೋಗ್ಯವೂ ಹೆಚ್ಚುತ್ತದೆ. ಮನೆಯ ಬಳಿಯ ಬೀದಿದೀಪಗಳನ್ನು ಅನಾವಶ್ಯಕವಾಗಿ ಉರಿಸುವುದನ್ನು ತಪ್ಪಿಸುವುದು, ನೀರಿನ ಮಿತಬಳಕೆ, ನಮ್ಮ ಮನೆಯ ಕಸದ ಸೂಕ್ತ ವಿಲೇವಾರಿ ನಾವೇ ಮಾಡಿಕೊಳ್ಳುವುದು ಇದೆಲ್ಲ ಅತ್ಯಂತ ಚಿಕ್ಕ ಚಿಕ್ಕ ವಿಷಯ ಗಳದರೂ ,ಸಮುದಾಯದ ಪ್ರತಿಯೊಬ್ಬರೂ ಮಾಡಿದರೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅವುಗಳು ದೊಡ್ಡ ಕೊಡುಗೆಯನ್ನೇ ನೀಡಬಲ್ಲವು.

ಮಕ್ಕಳಿಗೆ ಎಳವೆಯಿಂದಲೆ ಪರಿಸರ ಪ್ರಜ್ಞೆ ಖಂಡಿತವಾಗಿ ಬೆಳೆದ ಬೇಕಾಗಿರುವುದು ಎಲ್ಲಾ ಹೆತ್ತವರ ಮತ್ತು ಶಿಕ್ಷಕರ ಕರ್ತವ್ಯ.
ನಾನು ಕೆಲಸ ಮಾಡುವ ಶಾಲೆಯಲ್ಲಿ ಯಾವುದೇ ಮಗುವಿನ ಇಲ್ಲವೇ ಶಿಕ್ಷಕರ ಜನ್ಮ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಗುತ್ತಿದೆ  .ಮಕ್ಕಳು ಅವರ ಜನ್ಮದಿನದಂದು ಚಾಕೋಲೇಟ್ ಹಂಚುವ ವಾಡಿಕೆ ಇತ್ತು.ಆದರೆ ಮಕ್ಕಳು ಚಾಕೋಲೇಟ್ ತಿಂದ ಬಳಿಕ ಅದರ ಪ್ಲಾಸ್ಟಿಕ್ ಕವರ್ ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು. ದೊಡ್ಡ ಗಾತ್ರದ ಪ್ಲಾಸ್ಟಿಕ್ ಕಸ ಮರು ಬಳಕೆ ಮಾಡುವುದು ಸಾಧ್ಯ ಆದರೆ ಲೆಕ್ಕಕ್ಕೆ ಸಿಗದ ಈ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ತುಣುಕುಗಳು ಸುಲಭವಾಗಿ ಮಣ್ಣು ಸೇರಿ ಹೆಚ್ಚಿನ ಪ್ರಮಾಣದ ಹಾನಿ ಉಂಟು ಮಾಡುತ್ತವೆ. ಆದ್ದರಿಂದ ಮಕ್ಕಳಲ್ಲಿ ಪರಿಸರ ಜಾಗೃತಿಯ ಅರಿವನ್ನು ಮೂಡಿಸುವ ಸಲುವಾಗಿ ನಮ್ಮ ಶಾಲೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಶಾಲೆಯನ್ನಾಗಿ ಮಾಡುವ ಗುರಿ ಸಾಧನೆಗಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಮರು ಚಕ್ರಿಕರಣಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ..ಬಳಸಿ ಎಸೆದ ಪ್ಲಾಸ್ಟಿಕ್ ನೀರಿನ ಬಾಟಲ್ ಗಳು ನಮ್ಮ ಮಕ್ಕಳ ಕೈಯಲ್ಲಿ ಹೂ ಬೆಳೆಸುವ ಕುಂಡಗಳಾಗಿವೆ.ಅಕ್ಷರ ದಾಸೋಹ ಅಡಿಗೆ ಮನೆಯ ಅಕ್ಕಿ ಬೇಳೆ ತೊಳೆದ ನೀರು ಈ ಹೂ ಕುಂಡಗಳ ಗಿಡಗಳ ಪಾಲು.ಅಡಿಗೆ ಮನೆಯ ತರಕಾರಿ ಸಿಪ್ಪೆಗಳನ್ನು ಗೊಬ್ಬರದ ಗುಂಡಿಗೆ ಹಾಕುತ್ತಿದ್ದಾರೆ.ಶಾಲೆಯಲ್ಲಿ ಪೇಪರ್ ಹರಿಯುವುದೂ ನಿಷಿದ್ಧ. ಒಂದು ಹಾಳೆ ಹರಿದು ವ್ಯರ್ಥಮಾಡಿದರೆ ಅದು ಮರವೊಂದರ ರೆಂಬೆ ಮುರಿದಂತೆ ಎಂದು ಮಕ್ಕಳ್ಳಲ್ಲಿ ಹೇಳಿದ್ದರಿಂದ ಈಗ ಶಾಲೆಯಲ್ಲಿ ಬೀಳುವ ಕಸದ ಪ್ರಮಾಣ ಇಲ್ಲವೆಯಿಲ್ಲ ಎಂಬಷ್ಟು ಕಡಿಮೆ ಯಾಗಿದೆ. ಮಕ್ಕಳಲ್ಲಿ ಎಳವೆ ಯಿಂದಲೆ ಪರಿಸರ ಜಾಗೃತಿ ಮೂಡಿಸುವುದು ಇಂದಿನ ತುರ್ತು.ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಎಲ್ಲ ಶಿಕ್ಷಕರು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದಾರೆ.

ನಮ್ಮ  ಈ ಎಲ್ಲಾ ಪ್ರಯತ್ನಕ್ಕೆ ಪೋಷಕರೂ ಕೂಡ ಸಹಕಾರ ನೀಡುತ್ತಿದ್ದಾರೆ.ಗಿಡ ನೆಡುವ ಕಾರ್ಯಕ್ರಮ ಮಕ್ಕಳಿಗೆ ಎಷ್ಟು ಖುಷಿ ನೀಡುತ್ತದೆ ಎಂದರೆ ಹಬ್ಬಕ್ಕೆ ಶಾಲೆ ಗೆ ಗಿಡ ನೀಡುವಾಗ ಪುಟಾಣಿಗಳ ಮುಖದಲ್ಲಿ ಅರಳುವ ಸಂಜೆ ಶಾಲೆ ಬಿಡುವ ವರೆಗೂ ನಳ ನಳಿ ಸುತ್ತಲೇ ಇರುತ್ತದೆ.

-ಸಮತಾ, ಆರ್. ಸೋಮವಾರಪೇಟೆ

 

16 Responses

  1. UMA VINOD says:

    ಮಕ್ಕಳಲ್ಲಿ ನೀವು ಮೂಡಿಸುತ್ತಿರುವ ಈ ಜಾಗೃತಿ ಅಭಿನಂದನಾರ್ಹ ಸಮತ… *ಮಕ್ಕಳ ಸ್ಕೂಲ್ ಮನೇಲಲ್ವೇ* ಎಂಬಂತೆ ಮನೆ~ಶಾಲೆ ಎರಡೂ ಕಡೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿದಲ್ಲಿ ಇಂದಿನ ಮಕ್ಕಳು ಮುಂದಿನ ಸತ್ಪ್ರಜೆಗಳಾಗುವುದರಲ್ಲಿ ಸಂಶಯವಿಲ್ಲ. ಇದರೊಂದಿಗೆ ನನ್ನದೊಂದು ಮನವಿ, ಮಕ್ಕಳಿಗೆ ಎಲ್ಲೆಂದರಲ್ಲಿ ಉಗುಳುವ ದುರಭ್ಯಾಸದ ಬಗ್ಗೆ, ಅದರಿಂದಾಗುವ ಕೆಡುಕುಗಳ ಬಗ್ಗೆ ತಿಳುವಳಿಕೆ ನೀಡಿದಲ್ಲಿ ಸ್ವಲ್ಪ ಮಟ್ಟಿನ ಶುಚಿತ್ವ ಕಾಪಾಡುವ ಪ್ರಜ್ಞೆ ಎಳವೆಯಲ್ಲಿಯೇ ಬರುತ್ತದೆ ಅಲ್ಲವೇ.

    • Samatha says:

      ಧನ್ಯವಾದಗಳು ಉಮಾ.ನೀವು ಹೇಳುವುದು ಸರಿ.ನಮ್ಮ ಶಾಲೆಯಲ್ಲಿ ಚ್ಯೂಯಿಂಗ್ ಗಮ್ ತಿನ್ನುವುದನ್ನು ಕೂಡ ನಿಷೆದಿಸಿದ್ದೆವೆ.ಇನ್ನೂ ಕ್ರಮಿಸುವ ದಾರಿ ಬಹಳ ಇದೆ

  2. Rajani ravi says:

    ಸಮತ ಯಾವುದೇ ಕೆಲಸ ಮಾಡುವಾಗಲೂ ದಾಖಲೀಕರಣ ಮುಖ್ಯವಾಗಿ ಮಾಡಬೇಕು ಎಂದು ನಾನು ಇತ್ತೀಚೆಗೆ ರಾಧಾಕೃಷ್ಣನ್ ಪಿಳ್ಳೈ ” ಆಧುನಿಕ ಚಾಣಕ್ಯ ” ಅವರ ಸಂದರ್ಶನ ವೊಂದರಲ್ಲಿ ನೋಡಿದ್ಧೆ ದಾಖಲೆಯನ್ನು ಮಾತ್ರ ನಂಬುವ ಪೀಳಿಗೆಗೆ ಇದು ಅವಶ್ಯ. ನೈಜವಾಗಿ ಅಭಿವೄಕ್ತ ಪಡಿಸಿದ್ಧಿರ. ಉತ್ತಮವಾಗಿದೆ

  3. ನಯನ ಬಜಕೂಡ್ಲು says:

    ಸಾಕಷ್ಟು ಒಳ್ಳೆಯ, ಅನುಸರಿಸಲು ಯೋಗ್ಯ ವಿಚಾರಗಳಿಂದ ಕೂಡಿದ ಬರಹ. ಪರಿಸರ ದಿನಾಚರಣೆಯ ನಿಜವಾದ ಅರ್ಥ ಏನು ಅನ್ನೋದನ್ನು ಬಹಳ ಅರ್ಥವತ್ತಾಗಿ ವಿವರಿಸಿದ್ದೀರಿ.

  4. Latha v.p. says:

    Sanna sanna kelasa galindalu parisara samrakshanege kai jodisabahudenu heliddira ……… arthapoorna lekhana samatha

  5. Roopashree a says:

    Good thinking ,keep it up .

  6. SmithaAmrithraj. says:

    ಸಮತಾ,ಸಕಾಲಿಕ ಮತ್ತು ಅಳವಡಿಸಿ ಕೊಳ್ಳಬೇಕಾದ ಬರಹ

  7. ASHA nooji says:

    SUPER ಬರಹ

  8. Veena says:

    Parisara bagge eruva nimma kaalaji yannu mechhabeku enthaha shikshaki yannu padederuva makkalu haagu naavu punyavantharu. Baraha tumbha chennagi moodi bandide.makkalige paatada jothege parisara kaalaji bagge arivu moodisuva nimma baraha eradannu mechhabeku. Good thinking .

  9. ಶಂಕರಿ ಶರ್ಮ says:

    ಸೊಗಸಾದ ಸಕಾಲಿಕ ಬರಹ.

  10. Jayalakshmi says:

    Very good Sami
    In place of celebrating environmental day in school I celebrated this time by reading u r article and forward to my colleagues. It’s very applicable too. Parisara premige jai

  11. Jayalakshmi says:

    I celebrated environmental day by reading u r article and forwarded to my colleagues.highly applicable.right article on right day.parisara premige jai

  12. Arpitha says:

    Thoughtful insights:)

  13. Anonymous says:

    Very thoughtful article, keep it up Samatha sister.

  14. Dayananda Diddahalli says:

    Very thoughtful article, keep it up Samatha sister.

  15. Pruthvi says:

    Sakaalika haagu saarvakaalikavagiyu agatyavada chintane

Leave a Reply to UMA VINOD Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: