ಸೌತೆಕಾಯಿ ಯಾವುದಕ್ಕೂ ಸೈ

Share Button

 

ಇಂಗು,ತೆಂಗು ಇದ್ದರೆ ಮಂಗನೂ ಚೆನ್ನಾಗಿ ಅಡುಗೆ ಮಾಡುತ್ತದೆ ಅನ್ನುವ ಮಾತು ಪ್ರತೀತಿಯಲ್ಲಿದೆ. ಮನೆಯಲ್ಲಿ ಒಂದೇ ಬಗೆಯ ತರಕಾರಿ ಇದ್ದರೂ ಅದರ ಯಾವ ಭಾಗವನ್ನೂ ಎಸೆಯದೆ  ರುಚಿಕರವಾದ ತರಹೇವಾರಿ ಪದಾರ್ಥ ತಯಾರಿಸಬಹುದು.  ಅಂತಹ ಜಾತಿಗೆ ಸೇರಿದ ತರಕಾರಿಗಳಲ್ಲಿ ಸೌತೆಕಾಯಿ ಸೇರಿದೆ. ದಕ್ಷಿಣ ಕನ್ನಡದವರ ಬಾಯಲ್ಲಿ ಇದು ಸೌತೆಕಾಯಿ ಅಥವಾ ಒಡ್ಡುಸೌತೆ. ಆದರೆ ರಾಜ್ಯದ ಉಳಿದೆಡೆ ಇದಕ್ಕೆ ಮಂಗಳೂರು ಸೌತೆಕಾಯಿ ಅಥವಾ ಸಾಂಬಾರು ಸೌತೆಕಾಯಿ ಅನ್ನುವರು. ಮಗೆಕಾಯಿ ಅನ್ನುವ ಒಂದು ಸೌತೆಕಾಯಿ ಉತ್ತರಕನ್ನಡಕ್ಕೆ ಸೀಮಿತವಾಗಿರುವ ಒಂದು ವಿಶಿಷ್ಟ ತಳಿ ಎಂದು ಓದಿ ಬಲ್ಲೆ. ಸೌತೆಕಾಯಿ ಎಲ್ಲರಿಗೂ ಪ್ರಿಯವಾದ ತರಕಾರಿ ಎಂದರೂ ತಪ್ಪಿಲ್ಲ. ಎಲ್ಲಾ ರೀತಿಯ ಅಡುಗೆಗೂ ಸೈ. ಅದರಲ್ಲೂ ದೊಡ್ಡ ಸಮಾರಂಭಗಳಲ್ಲಿ ಇದನ್ನು ಉಪಯೋಗಿಸದೆ ಇರುವುದಿಲ್ಲ. ಅವಿಲು ತಯಾರಿಸುವಾಗಲೂ ಸೌತೆ ಇರಲೇಬೇಕು. ತೊಂಡೆಕಾಯಿ ಅಥವಾ ಅಲಸಂಡೆಗಳ ಜೊತೆ ಸೇರಿಸಿದರೂ ಇದರ ರುಚಿ ದ್ವಿಗುಣವಾಗುತ್ತದೆ. ಆರೋಗ್ಯಕರ ತರಕಾರಿಯಾದ ಸೌತೆ ಎಲ್ಲಾ ವಿಧದ ಅಡುಗೆಗಳಿಗೂ ಹೇಳಿ ಮಾಡಿಸಿದ ತರಕಾರಿ. ದಿಢೀರ್ ಉಪ್ಪಿನಕಾಯಿ ಮಾಡಲೂ ಸೌತೆಕಾಯಿ ಬೇಕೇ ಬೇಕು.

ನಾಲ್ಕು ಜನರಿರುವ ಸಣ್ಣ ಕುಟುಂಬದ “ಸೌತೆ ಸ್ಪೆಷಲ್ ದಿನ” ಹೀಗೂ ಮಾಡಬಹುದು.  ಬೆಳಗ್ಗಿನ ತಿಂಡಿಗೆ ಸೌತೆಕಾಯಿ ಹಾಕಿದ ದೋಸೆ. ನೆನೆಸಿದ ಬೆಳ್ತಿಗೆ ಅಕ್ಕಿ ಜೊತೆ ತೆಳುವಾಗಿ ಹಚ್ಚಿದ ಸೌತೆಯ ಹೋಳುಗಳು, ತೆಂಗಿನಕಾಯಿ ತುರಿ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿದರಾಯಿತು. ದೋಸೆ ಹಿಟ್ಟನ್ನು, ನೀರುದೋಸೆ ಹೊಯ್ಯುವ ರೀತಿಯಲ್ಲಿ ಕಾದ ಕಾವಲಿ ಮೇಲೆ ಹಾಕಿದಾಗ ಮೃದುವಾದ, ತೆಳುವಾದ ಸೌತೆಕಾಯಿ ದೋಸೆ ಸಿದ್ಧ (ಸೌತೆಕಾಯಿ ಸಿಹಿ ಕಡುಬು ಕೂಡಾ ಮಾಡುವರು). ಮಧ್ಯಾಹ್ಞದ ಅಡುಗೆಗೆ ಮಿಕ್ಕ ಸೌತೆ ಸಾಕು. ಸೌತೆಕಾಯಿಯ ಹೋಳುಗಳಿಂದ ಸಾಂಬಾರ್(ತೆಂಗಿನಕಾಯಿ ಸಹಿತ/ರಹಿತ-) ಅಥವಾ ಮಜ್ಜಿಗೆಹುಳಿ ಅಥವಾ ಪಲ್ಯ ತಯಾರಿಸಿದರೆ ಇನ್ನುಳಿದಿದ್ದು ಅದರ ಸಿಪ್ಪೆ ಮತ್ತು ಬೀಜಸಹಿತ ತಿರುಳು (ಬೊಂಡು).

ಯಾವುದನ್ನೂ ಬಿಸಾಡಬೇಕಿಲ್ಲ. ಸಿಪ್ಪೆಯ ಚಟ್ನಿ/ಪಲ್ಯ, ತಿರುಳಿನ ತಂಬುಳಿ, ಬೀಜದ ತಂಬುಳಿ ಅಥವಾ ಸಾರು. ಚಟ್ನಿ ಎರಡು ರೀತಿಯಲ್ಲಿ ಮಾಡಬಹುದು. ಒಂದು ಕ್ರಮದಲ್ಲಿ ಸೌತೆಯ ಸಿಪ್ಪೆ, ಓಮದ ಕಾಳುಗಳು, ಒಳ್ಳೆಮೆಣಸಿನ ಕಾಳುಗಳು (ಕರಿಮೆಣಸು), ಬೇಕಾದಷ್ಟು ಹುಣಸೆ ಹುಳಿ ಒಟ್ಟಿಗೆ ಬೇಯಿಸಿ, ಆರಿದ ನಂತರ ಸಲ್ಪ ತೆಂಗಿನಕಾಯಿ ತುರಿಯೊಡನೆ ರುಬ್ಬಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಒಗ್ಗರಣೆ ಕೊಟ್ಟರಾಯಿತು. ಇನ್ನೊಂದು ಕ್ರಮದಲ್ಲಿ ಒಟ್ಟಿಗೆ ಹುರಿದುಕೊಂಡ ಉದ್ದಿನಬೇಳೆ, ಇಂಗು ಹಾಗೂ ಕೆಂಪುಮೆಣಸು ಜೊತೆ ಬೇಯಿಸಿದ ಸಿಪ್ಪೆ, ತೆಂಗಿನಕಾಯಿ ತುರಿ, ಬೇಕಾದಷ್ಟು ಹುಣಸೆ ಹುಳಿ ಇವುಗಳನ್ನು ರುಬ್ಬಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಒಗ್ಗರಣೆ ಕೊಟ್ಟರಾಯಿತು. ಚಟ್ನಿ ಇಷ್ಟವಿಲ್ಲದಿದ್ದರೆ, ಸೌತೆಸಿಪ್ಪೆ ಚೂರಾಗಿ ಕತ್ತರಿಸಿ ಅದನ್ನು ಬಿಲ್ಲೆಯಂತೆ ಕತ್ತರಿಸಿದ ಹಲಸಿನ ಬೀಜದ ಜೊತೆ ಬೇಯಿಸಿ ಪಲ್ಯ ತಯಾರಿಸಬಹುದು.

ಸ್ವಲ್ಪ ಬೊಂಡನ್ನು ತೆಂಗಿನಕಾಯಿ ತುರಿ ಜೊತೆ ರುಬ್ಬಿಕೊಂಡು, ಆ ಮಿಶ್ರಣಕ್ಕೆ ಸ್ವಲ್ಪ ಮಜ್ಜಿಗೆಹುಳಿ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದ ಬಳಿಕ ಒಗ್ಗರಣೆ ಕೊಟ್ಟರೆ ಬೊಂಡು ತಂಬುಳಿ ಸಿದ್ಧ.  ಸೌತೆಬೀಜದ ತಂಬುಳಿ/ಸಾರು ಬಹಳ ರುಚಿ. ತಿರುಳಿನಿಂದ ಬೇರ್ಪಡಿಸಿದ ಬೀಜಗಳನ್ನು ತೆಂಗಿನಕಾಯಿ ತುರಿ ಜೊತೆ ರುಬ್ಬಿ ತೆಂಗಿನಕಾಯಿ ಹಾಲು ತೆಗೆಯುವ ರೀತಿಯಲ್ಲಿ ತೆಗೆದ ಹಾಲಿಗೆ ಸ್ವಲ್ಪ ಹುಳಿಮಜ್ಜಿಗೆ ,ಉಪ್ಪು ಹಾಕಿ ಒಗ್ಗರಣೆ ಕೊಟ್ಟರೆ ತಂಬುಳಿ ಸಿದ್ಧ. ತಂಬುಳಿ ಬೇಡವೆಂದರೆ ಮೇಲಿನ ರೀತಿ ತೆಗೆದ ಹಾಲಿಗೆ ಹುಳಿಮಜ್ಜಿಗೆ, ಉಪ್ಪು(ಬೇಕಾದರೆ ಸ್ವಲ್ಪ ಬೆಲ್ಲ),  ಹಸಿಮೆಣಸು, ಜಜ್ಜಿದ ಶುಂಠಿ, ಕೊತ್ತಂಬರಿ ಸೊಪ್ಪು ಹಾಕಿ ಕುದಿಸಬೇಕು, ಕುದಿದ ನಂತರ ಕರಿಬೇವಿನ ಸೊಪ್ಪು ಹಾಕಬೇಕು. ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ ಜೊತೆಗೆ, ಬಾಳಕದ ಮೆಣಸಿನ ಚೂರುಗಳನ್ನು ಸೇರಿಸಬೇಕು.

ಬಾಲ್ಯದಲ್ಲಿ ಸೌತೆಕಾಯಿ ಬೀಜ ಮೊಳಕೆಯೊಡೆಯುವುದು, ಗಿಡಹುಟ್ಟಿ, ಬಳ್ಳಿಯಾಗಿ ಹೂ ಬಿಟ್ಟು ಕಾಯಿಗಳು ಮೂಡಿ ಬೆಳೆಯುವ ಎಲ್ಲಾ ಹಂತಗಳನ್ನು ನೋಡಿ ಸಂಭ್ರಮಿಸಿದ ದಿನಗಳು ನೆನಪಾಗುತ್ತಿವೆ.   ಸೌತೆಯ ಎಳೆಗಿಡಗಳನ್ನು ಹರಿವೆ ಸೊಪ್ಪಿನಂತೆ ಬಳಸಿ ಮಾಡಿದ ಸಾಸುವೆಯ (ರುಬ್ಬುವಾಗ ತೆಂಗಿನಕಾಯಿ ತುರಿ, ಒಣಮೆಣಸಿನ ಕಾಯಿ ಜೊತೆ ಸಾಸಿವೆ ಕಾಳುಗಳನ್ನು ಹಾಕಿಕೊಳ್ಳಬೇಕು) ರುಚಿ ಈಗ ನೆನಪು ಮಾತ್ರ. ಮಳೆಗಾಲಕ್ಕಿರಲಿ ಅಂತ ಬಿದಿರಿನ ಗಳ ಕಟ್ಟಿ ಸೌತೆಕಾಯಿಗಳನ್ನು ನೇತುಹಾಕುತ್ತಿದ್ದರು. ಕೆಲವೊಮ್ಮೆ ಬೇಸಿಗೆಯಲ್ಲಿ ಅತಿ ದಾಹವಾದಾಗ, ಹಣ್ಣಾದ ಸೌತೆಕಾಯಿಯನ್ನು ಎರಡು ಭಾಗ ಮಾಡಿ ತೆಂಗಿನಕಾಯಿ ಹೆರೆದ ಹಾಗೆ ಹೆರೆದು, ಅದಕ್ಕೆ ಬೆಲ್ಲದ ಹುಡಿ ಮಿಶ್ರ ಮಾಡಿ ತಿನ್ನುತ್ತಿದ್ದದ್ದು ನೆನಪಿದೆ. ದಾಹ ನಿವಾರಣೆಯೂ ಆಗುತ್ತಿತ್ತು ಅಲ್ಲದೆ ದೇಹ ತಂಪಾಗುತ್ತಿತ್ತು.

ನನಗೆ ಗೊತ್ತಿರುವಂತೆ, ಸೌತೆಯ ವಿವಿಧ ಮಾಹಿತಿಗಳನ್ನು ಬರೆದಿರುವೆನು. ನಿಮಗೆ ಗೊತ್ತಿರುವ ಮಾಹಿತಿಗಳನ್ನು ತಿಳಿಸುವಿರಿ ಅಲ್ಲವೇ?

-ಡಾ.ಕೃಷ್ಣಪ್ರಭಾ, ಎಂ.ಮಂಗಳೂರು

  

23 Responses

 1. Avatar ಹರ್ಷಿತಾ says:

  ಸೌತೆಕಾಯಿಯನ್ನು ಅಡುಗೆ ಮನೆಯ ಆಪತ್ಭಾಂದವ ಎಂದೇ ಕರೆಯಬಹುದೋ ಏನೋ..

  • Avatar KRISHNAPRABHA M says:

   ನಿಜ. ಯಾವ ಕಾಲಕ್ಕೂ ಸಲ್ಲುವ ಆರೋಗ್ಯಕರ ತರಕಾರಿ. ಪ್ರತಿಕ್ರಿಯೆಗೆ ಧನ್ಯವಾದಗಳು

 2. Avatar Thrish says:

  ತುಂಬಾ ಉತ್ತಮವಾಗಿ ಮೂಡಿ ಬಂದಿದೆ

 3. Avatar ನಯನ ಬಜಕೂಡ್ಲು says:

  ಹೌದು, ಹಲವಾರು ಬಗೆಯ ಅಡುಗೆ ಸಾಧ್ಯ ಸೌತೆ ಕಾಯುಯಿಂದ, ಆರೋಗ್ಯಕ್ಕೂ ಒಳ್ಳೆಯದು. ಸೌತೆ ಕಾಯಿಯಿಂದ ಮಾಡಬಹುದಾದಂತಹ ಹಲವಾರು ಖಾದ್ಯಗಳ ವಿವರ ಸೊಗಸಾಗಿದೆ

  • Avatar KRISHNAPRABHA M says:

   ಧನ್ಯವಾದಗಳು ನಯನಾ. ಇನ್ನೊಂದು ವಿಷಯ ಸೌತೆ ಸಾಧಾರಣಕ್ಕೆ ಯಾರಿಗೂ “ಅಯ್ಯೋ ಅದನ್ನೇ ಮಾಡಬೇಕಲ್ಲಾ” ಅಂತ ಅನ್ನಿಸುವುದಿಲ್ಲ (ಬೊಡಿಯುವುದಿಲ್ಲ), ಮುಳ್ಳುಸೌತೆ ಬೇಗ ಸಾಕೆನಿಸುತ್ತದೆ.

 4. Avatar Anonymous says:

  ನಿಜ, ಚೆನ್ನಾಗಿ ಬರೆದಿದ್ದೀರಿ

 5. Avatar PADMANABHA says:

  Of course when it is very tender we can eat it directly along with salt and green chilly.
  In Bhadravati I tried a lot to get this vegetable. But no one was aware of this coastal special vegetable.
  Anyway the write up is super. Thanks and best wishes to K.Prabha for that.

  • Avatar KRISHNAPRABHA M says:

   ರಾಜ್ಯದ ಹೆಚ್ಚಿನೆಡೆ, ಸೌತೆ ಅಂದರೆ ನಮ್ಮ ಮುಳ್ಳುಸೌತೆ. ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು

 6. Avatar Anonymous says:

  ಸೌತೆಕಾಯಿಯ ಎಲ್ಲಾ ತರದ ಉಪಯೋಗಗಳನ್ನು ತಿಳಿಸಿದ್ದೀರಿ.ಇಷ್ಟನ್ನು ನಾನೂ ಮಾಡುತ್ತೇನೆ.ಆದರೆ ಹಣ್ಣು ಸೌತೆಕಾಯಲ್ಲಿ.ಮಾಡುವಂತಹುದು‌ ಇನ್ನೇನೂ ಉಳಿದಿಲ್ಲ.ಸೂಪರಾಗಿದೆ ಬರಹ.ಶೈಲಿ ಸುಂದರವಾಗಿದೆ.

 7. Hema Hema says:

  ಸೌತೆಕಾಯಿಯ ಹಲವಾರು ರೆಸಿಪಿಗಳನ್ನು ತಿಳಿಸಿದ್ದೀರಿ..ಚೆಂದದ ಬರಹ. ನಮ್ಮ ಬಾಲ್ಯದಲ್ಲಿಯೂ ಗದ್ದೆಯಲ್ಲಿ ಬೆಳೆಸಿದ ಸೌತೆಕಾಯಿಗಳನ್ನು ಮಳೆಗಾಲದ ಉಪಯೋಗಕ್ಕೆಂದು ಶೇಖರಿಸಿ ಇಡುತ್ತಿದ್ದುದನ್ನು ನೋಡಿದ ನೆನಪಿದೆ. ಬೇರೆ ತರಕಾರಿ ಸಿಗದಿದ್ದುದರಿಂದ ಮತ್ತು ಆ ದಿನಗಳಲ್ಲಿ ಪೇಟೆ ತರಕಾರಿಗಳನ್ನು ತಾರದೆ ಇರುತ್ತಿದ್ದುದರಿಂದ, ಆಗಾಗ ಬಳಸುತ್ತಿದ್ದ ಸೌತೆಕಾಯಿಯ ಬಗ್ಗೆ ನನಗೆ ಒಂತರಾ ತಾತ್ಸಾರ ಇತ್ತು. ಈಗ ಅಂಗಡಿಯಲ್ಲಿ ಹುಡುಕಿ ತರುತ್ತಿದ್ದೇವೆ!

  • Avatar KRISHNAPRABHA M says:

   ನನ್ನ ಅತ್ತೆಯವರು ಕಳೆದ ವರ್ಷ ಸೌತೆಕಾಯಿ ಬೆಳೆಸಿದ್ದರು. ಮಳೆಗಾಲದ ಬಳಕೆಗೆ ಇರಲೆಂದು, ಉಳಿದ ಸೌತೆಗಳನ್ನು ಬಿದಿರಿನ ಗಳುವಿಗೆ ನೇತು ಹಾಕಿದ್ದರು. ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು

 8. Avatar KRISHNAPRABHA M says:

  ಗೆಳತಿ ಭಾರತಿ ಅವರ ಪ್ರತಿಕ್ರಿಯೆ

  “ತುಂಬಾ ಚೆನ್ನಾಗಿದೆ ಲೇಖನ.ಸೌತೆಕಾಯಿಯ ಸರ್ವಾಂಗಗಳ ಉಪಯೋಗ ತಿಳಿಸಿದ್ದೀರಿ.ನಾನು ಇದೆಲ್ಲವನ್ನು ಮಾಡಿದರೂ ಮಾಡುವ ಹಲವು ವಿಧಗಳನ್ನು ನೀವು ತಿಳಿಸಿಕೊಟ್ಟಿದ್ದೀರಿ.ಶೈಲಿಯಂತೂ ಸೂಪರ್.ಸೈ ಸೌತೆಕಾಯಿ ಅಂತ ಹೇಳಿದ ಹಾಗೆ ನೀವು ಯಾವ ತರದ ಬರಹಕ್ಕೂ ಸೈ.”

 9. Avatar Rajeshwari says:

  ಸೌತೆಕಾಯಿಯಿಂದ ಒಡಪೆ ಮಾಡುತ್ತಾರೆ, ರಸಭರಿತ ಮಂಗಳೂರ ಸೌತೆಕಾಯಿಯನ್ನು ಚೆನ್ನಾಗಿ ತುರಿದು ತಾಳೆಪಟ್ಟು/ತಲೆಪಟ್ಟು ಅಥವಾ ಮಸಾಲೇ ರೊಟ್ಟಿ ಇಂಗು ತೆಂಗು, ಅಕ್ಕಿ ಹಿಟ್ಟು, ಜೀರಿಗೆ, ನೀರುಳ್ಳಿ ಹಾಕಿ ಕಲಸಿ,
  ಎಣ್ಣೆ ಹಚ್ಚಿ ರೊಟ್ಟಿಯ ಹಾಗೆ ತಟ್ಟಿ ಬೇಯಿಸಿ ಒಡಪೆ ಮಾಡುತ್ತಾರೆ. ಕಾಯಿ ಚಟ್ನಿ ಮೊಸರು ಒಳ್ಳೇ ಕಾಂಬಿನೇಷನ್.

  • Avatar KRISHNAPRABHA M says:

   ನನಗೆ ಇದು ತಿಳಿದಿರಲಿಲ್ಲ. ಮಾಹಿತಿಯನ್ನು ಹಂಚಿಕೊಂಡ ನಿಮಗೆ ತುಂಬು ಹೃದಯದ ಧನ್ಯವಾದಗಳು

 10. Avatar Geetha Poornima K says:

  ತುಂಬಾ ಚೆನ್ನಾಗಿದೆ ನಿಮ್ಮ ಲೀಖನ. ನಿಮ್ಮ ಹಲವು ಲೇಖನಗಳು ನನಗೆ ನನ್ನ ಬಾಲ್ಯದ ನೆನಪು ಮಾಡಿಸುತ್ತವೆ. ಹಿಂದೆ ಹೆಚ್ಚಿನ ಮನೆಗಳಲ್ಲಿ ಸೌತೆ ಕಾಯಿಯನ್ನು ಮಳೆಗಾಲದ ಸಮಯದಲ್ಲಿ ಉಪಯೋಗಿಸುವ ಸಲುವಾಗಿ ಸಂಗ್ರಹಿಸಿ ಇಡ್ತಾ ಇದ್ರು. ಅಂತಹ ಹಣ್ಣು ಸೌತೆಯ ತಿರುಳನ್ನು ತೆಗೆದು ಉಳಿದ ಭಾಗ ಮಾತ್ರ ತುರಿದು ನಮ್ಮಮ್ಮ ಬೆಲ್ಲ ಹಾಕಿ ಕೊಡ್ತಾ ಇದ್ರು. ತುಂಬಾ ರುಚಿಕರವಾಗಿರ್ತಿತ್ತು.

  • Avatar KRISHNAPRABHA M says:

   ಆರೋಗ್ಯಕ್ಕೂ ಒಳ್ಳೆದು. ದೇಹಕ್ಕೂ ತಂಪು. ಲೇಖನಗಳನ್ನು ಮೆಚ್ಚಿ ಪ್ರೋತ್ಸಾಹದ ನುಡಿ ಬರೆದಿದ್ದೀರಿ. ನಿಮಗೆ ತುಂಬು ಹೃದಯದ ಕೃತಜ್ಞತೆಗಳು.

 11. Avatar Savithri bhat says:

  ಆಹಾ..ಸೌತೆ ಯ ,ಅಡಿಗೆ ಬಹಳ ಚೆನ್ನಾಗಿದೆ. ಗಿಡ ದಿಂದ ತೊಡಗಿ ಬೀಜದ ವರೆಗೂ ತಿಳಿಸಿದಿರಿ. ನನಗೂ ಬಾಲ್ಯದ ನೆನಪಾಯಿತು. ಧನ್ಯವಾದ ಗಳು.

  • Avatar KRISHNAPRABHA M says:

   ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆ ತುಂಬು ಹೃದಯದ ಕೃತಜ್ಞತೆಗಳು.

 12. ಸೌತೆಕಾಯಿ ಪದಾರ್ಥವೇ ಮಾಡಿ ತಿನ್ನುವ ಈ ಕಾಲಘಟ್ಟದಲ್ಲಿ , ಕಡುಬು ದೋಸೆ ಗಳನ್ನು ಮಾಡಿಕೊಡುತ್ತಿದ್ದ ಬಾಲ್ಯದ ಅಮ್ಮನ ಅಡುಗೆ ಕೋಣೆಯನ್ನು ನೆನಪು ಮಾಡುತ್ತದೆ

 13. Avatar Anonymous says:

  ಅಡುಗೆ ಕೋಣೆಯಲ್ಲಿ ಆಪದ್ಬಾಂಧವ ಈ ಸೌತೆಕಾಯಿ. ಇದರ ಸಿಪ್ಪೆಯ ಚಟ್ನಿ ತುಂಬಾ ರುಚಿಯಾಗಿರುತ್ತದೆ. ಸಿಪ್ಪೆಯ ಪಲ್ಯವೂ ಚೆನ್ನಾಗಿರುತ್ತದೆ. ಚಂದದ ಬರಹಕ್ಕೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: