ವಿದ್ಯಾರ್ಥಿ ಮಿತ್ರರಿಗೊಂದು ಪತ್ರ

Share Button

ನನ್ನ ನಲ್ಮೆಯ ವಿದ್ಯಾರ್ಥಿ ಮಿತ್ರರಿಗೆ ಶುಭ ಹಾರೈಕೆಗಳು.. ಎಲ್ಲರೂ ಹೇಗಿದ್ದೀರಿ. ಇನ್ನೇನು ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ.ಇಂತಹ ಸಮಯದಲ್ಲಿ ನೀವೆಲ್ಲರೂ ಆತ್ಮವಿಶ್ವಾಸದಿಂದ ಸಕಲ ಸಿದ್ಧತೆ ಮಾಡಿಕೊಂಡಿರುವೆಂದು  ಭಾವಿಸಿರುವೆ.

ಒಂದೆಡೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ನಾಣ್ಣುಡಿಯ ಸಾರ್ವಕಾಲಿಕವಾದದು. ಮೊಗ್ಗಿನ ಮನಸಿನ ಮಕ್ಕಳನ್ನು ಜ್ಞಾನದ ಪರಿಮಳವ ಬೀರುವ ಹೂಗಳಂತಾಗಿಸುವ ಕೆಲಸವನ್ನು ಶಿಕ್ಷಣವು ಮಾಡುತ್ತದೆ. ನಾಲ್ಕು ಗೋಡೆಗಳ ಮಧ್ಯೆ, ಕಪ್ಪು/ಹಸಿರು ಹಲಗೆಯ ಮೇಲೆ, ಪುಸ್ತಕ ರಾಶಿಗಳ ನಡುವೆ, ಶಿಕ್ಷಕರ ಮನಮುಟ್ಟುವ ಬೋಧನೆಯನ್ನು ಶೈಕ್ಷಣಿಕ ವರ್ಷದಲ್ಲಿ ಕಲಿತ ವಿದ್ಯಾರ್ಥಿಗಳು  ಕಲಿಕೆಯ ಫಲಿತವನ್ನು ಅಳೆಯಲು ಇರುವ ಮಾನದಂಡವೇ ಪರೀಕ್ಷೆಗಳು.

ಪೋಷಕರು ಮತ್ತು ಶಿಕ್ಷಕರ ಕನಸುಗಳನ್ನು ನನಸಾಗಿಸುವ ಹೊಣೆ ಹೊತ್ತು, ವರ್ಷವೆಲ್ಲಾ ಕಲಿತಿದ್ದನ್ನು ಮೂರು ಗಂಟೆಗಳ ಅವಧಿಗಳೊಳಗೆ, ಎಂಬತ್ತು ಅಥವಾ ನೂರು ಅಂಕಗಳ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡು ಉತ್ತರ ಬರೆಯುತ್ತಾರೆ. ಪರೀಕ್ಷೆಯ ನಂತರ ಫಲಿತಾಂಶ ಬಂದೇ ಬರುತ್ತದೆ. ಕೆಲವರು ಉತ್ತೀರ್ಣಗೊಂಡರೆ, ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿರುತ್ತಾರೆ.

ಪರೀಕ್ಷೆಯೆಂದರೆ ಸಾಕು  ಕಲಿಕೆಯಲ್ಲಿ ಹಿಂದುಳಿದ ಕೆಲವು ವಿದ್ಯಾರ್ಥಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಿರುತ್ತದೆ. ಆದರೆ ಶೈಕ್ಷಣಿಕ ವರ್ಷದಲ್ಲಿ ಕಲಿತ ಜ್ಞಾನದ ಮಟ್ಟವನ್ನು ನಿರ್ಧರಿಸುವ ಔಪಚಾರಿಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಭಯವನ್ನು ಪಡದೇ ಎದುರಿಸುವ ಕಲೆಯನ್ನು ರೂಪಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ. ಮತ್ತೊಂದೆಡೆ ವಿದ್ಯಾರ್ಥಿಗಳು ಸಹ ಮೊದಲು ಪರೀಕ್ಷೆಯನ್ನು ಎದುರಿಸುವ ಆತ್ಮವಿಶ್ವಾಸವನ್ನು ಹೊಂದಿರಬೇಕು.

ಆತ್ಮೀಯ ವಿದ್ಯಾರ್ಥಿ ಮಿತ್ರರೇ ಪರೀಕ್ಷೆಯೆಂಬ ಯುದ್ಧದ ಸಮಯ ಹತ್ತಿರವಿರುವ ಸಮಯದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಮಾಡುವ ಬದಲಾಗಿ ಶೈಕ್ಷಣಿಕ ವರ್ಷದ ಆರಂಭದಿಂದಲೇ ನಿಗದಿತ ವೇಳಾಪಟ್ಟಿಯ ಹಾಕಿಕೊಂಡು, ಆಯಾ ದಿನದ ಪಾಠಗಳಿಗೆ  ಸಂಬಂಧಿಸಿದ ಅನುಮಾನ, ಗೊಂದಲಗಳನ್ನು ಶಿಕ್ಷಕರು, ಪೋಷಕರು, ಸ್ನೇಹಿತರ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳಿರಿ. ಆಗ ಕಲಿಕೆಯಲ್ಲಿ ಪ್ರಗತಿ ಕಂಡು ಬರುತ್ತದೆ.

ಇನ್ನು ಪರೀಕ್ಷೆಗಳು ಸಮೀಪಿಸಿದಾಗ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಪರೀಕ್ಷೆಗಳಿರುವುದು ನಮ್ಮ ಕಲಿಕೆಯ ಜ್ಞಾನ ಮಟ್ಟವನ್ನು ಆಳೆಯುವ ಮಾಪನಗಳೇ ವಿನಾಃ ನಮ್ಮ ವೈಯುಕ್ತಿಕ ಪ್ರತಿಭೆಗಳನ್ನು, ಕೌಶಲ್ಯಗಳನ್ನು ಆಳೆಯುವ ಮಾನದಂಡಗಳಲ್ಲ ಎಂಬುದನ್ನು ಅರಿತಿರಬೇಕು.ಪರೀಕ್ಷೆಯ ಕೇಂದ್ರಗಳಿಗೆ ತೆರಳುವ ಮುನ್ನ ಪರೀಕ್ಷೆಯ ಭಯವನ್ನು ಮರೆತು ಹೋಗಬೇಕು.

                                                       PC: Internet

ಪ್ರಶ್ನೆ ಪತ್ರಿಕೆಗಳನ್ನು ಸಾವಧಾನವಾಗಿ ನೋಡಿಕೊಂಡು ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ನಿರ್ದಿಷ್ಟ ಹಾಗೂ ನಿಖರವಾದ ಉತ್ತರವನ್ನು ಸ್ಪಷ್ಟವಾಗಿ ಬರೆಯುವ ಮನೋಭಾವ ರೂಢಿಸಿಕೊಳ್ಳಿರಿ. ನಕಲು ಮಾಡುವ ಆಲೋಚನೆಯ ಹೊಂದದೆ ಗೊತ್ತಿರುವುದನ್ನು ಪ್ರಾಮಾಣಿಕವಾಗಿ ಬರೆಯಿರಿ. ಪರೀಕ್ಷೆಯಲ್ಲಿ ಏನಾದರೂ ಕಡಿಮೆ ಅಂಕ ಬಂದರೆ ಅಥವಾ ಅನುತ್ತೀರ್ಣಗೊಳ್ಳುವ ಪೂರ್ವಾಗ್ರಹ ಪೀಡಿತ ಮನೋಭಾವದಿಂದ ಹೊರಬಂದು ಆತ್ಮಸ್ಥೈರ್ಯದಿಂದ ಪರೀಕ್ಷೆಯನ್ನು ಎದುರಿಸಿ. ಪರೀಕ್ಷೆಯೆಂದರೆ ಯುದ್ಧಭೂಮಿಯಲ್ಲ, ನಮ್ಮ ಜ್ಞಾನ ಮಟ್ಟವನ್ನು ಪರೀಕ್ಷಿಸುವ ಪ್ರಯೋಗಾಲಯವಷ್ಟೇ ಎಂದು ಭಾವಿಸಿರಿ. ಪೋಷಕರ ಹಾಗೂ ಶಿಕ್ಷಕರು ಭರವಸೆಗಳನ್ನು ಹುಸಿಗೊಳಿಸಿದೆ ಸಾಕಾರ ಮಾಡೇ ಮಾಡ್ತೀನಿ ಎಂಬ ಧೃಡ  ಸಂಕಲ್ಪವನ್ನು ಹೊಂದಿಕೊಂಡರೆ ಸಾಕು ಪರೀಕ್ಷೆಯ ಭಯದ ಪೆಡಂಭೂತ ದೂರವಾಗಿ ಹೋಗುತ್ತದೆ.

ಶಾಲೆಯಲ್ಲಿ ಶಿಕ್ಷಕರು ನೀಡಿರುವ ಸಲಹೆ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಿರಿ. ಪರೀಕ್ಷೆ ಮುಗಿಯುವರೆಗೂ ಸಾಮಾಜಿಕ ಜಾಲ ತಾಣಗಳಿಂದ, ಮನಸ್ಸನ್ನು ವಿಚಲಿತಗೊಳಿಸು ಮೊಬೈಲು, ಆರೋಗ್ಯ ಹದಗೆಡಿಸುವ ತಿಂಡಿ ತಿನಿಸುಗಳಿಂದ ದೂರವಿರಿ. ಪರೀಕ್ಷೆ ಸಮಯದಲ್ಲಿ ಪೋಷಕರೊಂದಿಗೆ ವಾಹನದಲ್ಲಿ ಪರೀಕ್ಷೆ ಕೇಂದ್ರಗಳಿಗೆ ಹೋಗಿ ಬನ್ನಿರಿ. ಪರೀಕ್ಷೆ ಮುಗಿದ ನಂತರ ಆ ದಿನದ ಪ್ರಶ್ನೆ ಪತ್ರಿಕೆಯ ಬಗ್ಗೆ ಚಿಂತಿಸದೆ, ಮುಂದಿನ ವಿಷಯದ ಬಗ್ಗೆ ಹೆಚ್ಚು ಗಮನ ನೀಡಿರಿ. ಪ್ರಶ್ನೆ ಪತ್ರಿಕೆಗಳ ಸೋರಿಕೆಯ ವದಂತಿಗಳ ಬಗ್ಗೆ ಗಮನ ನೀಡದಿರಿ. ಪರೀಕ್ಷೆಯ ಕೇಂದ್ರಗಳಿಗೆ ತೆರಳುವ ಮುನ್ನ ತಂದೆ ತಾಯಿಯರ ಆಶೀರ್ವಾದ, ದೇವರ ದರ್ಶನ ಮಾಡಿಕೊಂಡು, ಪರೀಕ್ಷೆಯ ಸಮಯ ಆರಂಭವಾಗುವ ಮುಂಚೆಯೇ ಹೋಗಿರಿ. ಪರೀಕ್ಷೆ ಕೊಠಡಿಯಲ್ಲಿ ಏಕಾಗ್ರತೆಯಿಂದ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಸೂಕ್ತವಾದ ಹಾಗೂ ನಿರ್ಧಿಷ್ಟ ಉತ್ತರ ಬರೆಯಿರಿ. ಪ್ರಮುಖ ಮುಖ್ಯಾಂಶಗಳಿಗೆ ಅಡಿಗೆರೆ ಹಾಕಿರಿ. ಬರೆದಾದ ಮೇಲೆ ಉತ್ತರಗಳನ್ನು ಒಮ್ಮೆ ಗಮನಿಸಿರಿ. ಪರೀಕ್ಷೆ ಕೇಂದ್ರಗಳಲ್ಲಿ ಏನಾದರೂ ಅಕ್ರಮಗಳು ಕಂಡು ಬಂದರೆ ಪೋಷಕರು ಹಾಗೂ ಶಿಕ್ಷಕರ ಗಮನಕ್ಕೆ ತನ್ನಿರಿ.

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬರೆಯಲು ಸಿದ್ಧವಾಗಿರುವ ಎಲ್ಲಾ ವಿದ್ಯಾರ್ಥಿ ಮಿತ್ರರೇ ಪರೀಕ್ಷೆ ಭಯವ ಬಿಟ್ಟು, ಜೀವನದ ಮುಂದಿನ ಹಂತಕ್ಕೆ ಪರೀಕ್ಷೆಗಳು ಸೂಕ್ತ ವೇದಿಕೆಯೆಂದು ಭಾವಿಸಿ, ಸಿಕ್ಕಿರುವ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ವಿದ್ಯಾರ್ಥಿ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆಂಬುದನ್ನು ಮರೆಯದಿರಿ.

ಅಂತಿಮವಾಗಿ ವಿದ್ಯಾರ್ಥಿ ಮಿತ್ರರೇ ಪರೀಕ್ಷೆಗಳ ಫಲಿತಾಂಶ ಬರುವ ದಿನದಂದು ಭಾವನಾತ್ಮಕ ಒತ್ತಡಗಳಿಗೆ ಒಳಗಾಗದಿರಿ. ಪರೀಕ್ಷೆಯೆಂದ ಮೇಲೆ ಉತ್ತೀರ್ಣ ಹಾಗೂ ಅನುತ್ತೀರ್ಣ ಸಹಜ. ಆಕಸ್ಮಾತ್ ಕಡಿಮೆ ಅಂಕಗಳು ಬಂದರೆ, ಅಥವಾ ಅನುತ್ತೀರ್ಣಗೊಂಡಾಗ ಪೋಷಕರು, ಬಂಧು ಬಾಂಧವರು, ಸ್ನೇಹಿತರು, ಶಿಕ್ಷಕರು ಏನಾದರೂ ಅನ್ನುವರು, ಅವಮಾನಿಸುವರೆಂದು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆ ಮಾಡದಿರಿ. ಎಷ್ಟೋ ಮಹನೀಯರು  ಮೊದಲ ಪರೀಕ್ಷೆಯಲ್ಲಿ
ಅನುತ್ತೀರ್ಣಗೊಂಡರೂ ಮುಂದೆ ಮರು ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಜೀವನದಲ್ಲಿ ಮಹಾನ್ ಸಾಧನೆ  ಮಾಡಿರುವರೆಂಬುದನ್ನು  ಮರೆಯದಿರಿ.

ಈಸಬೇಕು ಇದ್ದು ಜೈಸಬೇಕು. ನಿಮ್ಮೆಲ್ಲರ ಕನಸುಗಳು ಸಾಕಾರಗೊಳ್ಳುವ ಸಮಯವಿದು. ಶುಭ ಹಾರೈಕೆಗಳು ನಿಮಗೆ.. ಒಳ್ಳೆಯದಾಗಲಿ ನಿಮಗೆ.

ಇಂತಿ ನಿಮ್ಮ ಪ್ರೀತಿಯ ಮಿತ್ರ..

-ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.

6 Responses

  1. ನಯನ ಬಜಕೂಡ್ಲು says:

    ಪ್ರಸ್ತುತ ಪರಿಸ್ಥಿತಿ ಯಲ್ಲಿ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವಂತಹ ಮಾತುಗಳು. ಎಷ್ಟು ಸಮಾಧಾನ ವಾಗಿದ್ದರೂ ಭವಿಷ್ಯ ಅನ್ನುವ ಚಿಂತೆ ಅದನ್ನು ರೂಪಿಸಿಕೊಳ್ಳ ಹೊರಟವರನ್ನು ಕಾಡದೆ ಬಿಡದು, ಅಂತಹ ಪರಿಸ್ಥಿತಿ ಯಲ್ಲಿ ಇದ್ದವರಿಗೆ ಸಾಂತ್ವಾನ ನೀಡುವ ಸಾಲುಗಳು.

    • ಶಿವಮೂರ್ತಿ ಹೆಚ್ says:

      ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು ಮೇಡಂ

  2. Hema says:

    ಅಧ್ಯಾಪಕರಿಂದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಸಕಾಲಿಕ ಬರಹ..ಚೆನ್ನಾಗಿದೆ.

    • ಶಿವಮೂರ್ತಿ ಹೆಚ್ says:

      ನಿಮ್ಮ ಪ್ರೋತ್ಸಾಹವೂ ಸದಾಕಾಲ ಹೀಗೆ ಇರಲಿ ಮೇಡಂ..

  3. Shankari Sharma says:

    ಪರೀಕ್ಷಾ ಭಯವಿರುವ ಮಕ್ಕಳಿಗೆ ಧೈರ್ಯ ತುಂಬುವ ಸಕಾಲಿಕ ಬರಹ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: