ಮುಂಚೆ ಹೋದ ಅತಿಥಿಯ ಪಾಡು

Share Button

ನಮ್ಮ ತಂದೆ ಕೆ.ಎಸ್.ನ ಅವರನ್ನು ಕುರಿತು ಮಾತನಾಡಲು ಆ ಸಂಘಟಣೆಯ ಕಾರ್ಯದರ್ಶಿಯವರು ಆಹ್ವಾನಿಸುವಾಗ “ಅರ್ಧ ಗಂಟೆ ಮುಂಚಿತವಾಗಿ ಬನ್ನಿ .ನಮ್ಮ ಕಾರ್ಯಕಾರಿ ಸಮಿತಿಯವರನ್ನು ಪರಿಚಯ ಮಾಡಿಕೊಳ್ಳಬಹುದು” ಎಂದಿದ್ದರು.

ಅದರಂತೆ ಆ ದಿನ ವಿಧೇಯವಾಗಿ ಹತ್ತೂವರೆಗೆ ಆರಂಭವಾಗಬೇಕಿದ್ದ ಸಮಾರಂಭಕ್ಕೆ ಸರಿಯಾಗಿ ಹತ್ತು ಗಂಟೆಗೆ ಹೋದೆ. ನನ್ನೆದುರೇ ಒಬ್ಬಾತ ಬಂದು ಗೇಟ್ ಬೀಗ ತೆರೆದು ಪೊರಕೆ ತಂದು ಆವರಣ ಗುಡಿಸಲಾರಂಭಿಸಿದ. ಅವನ ಹಿಂದೆಯೇ ಬಹುಶಃ ಕೇಟರರ್ ಇರಬೇಕು. ಮತ್ತೊಬ್ಬ ಬಂದು, ಎಲ್ಲಿಂದಲೋ ಒಂದು ಟೇಬಲ್ ಹೊಂಚಿ ತಂದು ಬಿಸ್ಕತ್ ಪೊಟ್ಟಣ ಒಡೆದು ಜೋಡಿಸಿ,ಟೀ ,ಕಾಫಿ ಫ್ಲಾಸ್ಕ್ ಸಿದ್ಧಮಾಡಿಕೊಂಡ.

ಆ ಕಸ ಗುಡಿಸುವಾತ ನಾನು ನಿಂತಲ್ಲೆಲ್ಲ ಕಸ ಗುಡಿಸಲು  ಬಂದು ಆವರಣದ ತುಂಬ ಓಡಿಯಾಡಿಸಿದ. ಹಾಗೆಯೇ ಕಾಫಿ ಟೇಬಲ್ ಹತ್ತಿರ ಹೋದಾಗ “ಇಲ್ಲೇಕೆ ಬಂದ್ರಿ.ಕಾರ್ಯದರ್ಶಿಗಳು ಬಂದು ಹೇಳೋತನಕ ಯಾರಿಗೂ ಕಾಫಿ,ಬಿಸ್ಕತ್ ಏನೂ  ಕೊಡೋದಿಲ್ಲ” ಎಂದು ಗದರಿದ ಆ ಕಾಫಿ ಭಟ್ಟ.

ಆಗ ಅಲ್ಲಿಗೆ ಒಬ್ಬ ಕುತೂಹಲಿ ಸಭಾಸದ ಬಂದ. ಬಿಸ್ಕತ್ ಕಾಫಿಗಳತ್ತ ಒಂದು ಚಿಕಿತ್ಸಕ ನೋಟ ಬೀರಿ, ನನ್ನತ್ತ ಬಂದು “ಯಾರಂತೆ ಮಾತಾಡೋದು?” ಎಂದು ಕೇಳಿದ. ಹತ್ತಿರದಲ್ಲೇ ನನ್ನ ಫೋಟೋಸಹಿತ ಕಾರ್ಯಕ್ರಮಸೂಚಿ ಇದ್ದುದು ಏಕೋ ಅವನ ಕಣ್ಣಿಗೆ ಬೀಳಲಿಲ್ಲ.

ನಾನು ಸುಮ್ಮನೆ ಹೆಸರು ಹೇಳಿದೆ..
“ಹೇಗೆ ಮಾತಾಡ್ತಾರಂತೆ?’ಅವನ ಮುಂದಿನ ಪ್ರಶ್ನೆ..
“ಏನೋ ಗೊತ್ತಿಲ್ಲ.” ಎಂದೆ. ನನ್ನ ಮಾತು ನಾನೇ ಕೇಳುವ ಸಾಹಸ ಮಾಡಿರಲಿಲ್ಲವಲ್ಲ.!.
“ನೀವು ಏನೇ ಹೇಳಿದ್ರೂ  ಮಾತಂದ್ರೆ ಪ್ರಾಣೇಶ್ ,ಗುಂಡೂರಾವ್,ರಿಚರ್ಡ್ ಲೂಯಿಸ್ ಏನಂತೀರಿ ಎಂದು ಪ್ರಶ್ನಿಸಿದ.
“ನಿಜ,ನಿಜ “ಎಂದೆ.ಅವರ ಮಾತುಗಾರಿಕೆ ನನಗೂ ಮೆಚ್ಚಿಗೆಯಾದದ್ದೇ ತಾನೆ.
“ಬರೀ  ,ಬಿಸ್ಕತ್ತು ಕಾಫೀ ಅಂತ ಕಾಣತ್ತೆ”ಅವನ ಅನುಮಾನ.
“ಹಾಗೇ ಕಾಣತ್ತೆ”ಎಂದು ಉತ್ತರಿಸಿದೆ.
“ಹೋದ ಸಾರಿ ಉಪ್ಪಿಟ್ಟು ಕಾಫಿ ಇತ್ತು.ಬೊಂಬಾಟಾಗಿತ್ತು.”ಸವಿನೆನಪಿಗೆ ಜಾರಿದ.
“ಹಾಗೇನು ?” ಅಂದೆ.
.
ಇದ್ದಕ್ಕಿದ್ದಂತೆ  ಆ ಕುತೂಹಲಿಯ ಮೊಬೈಲ್ ರಿಂಗಣಿಸಿತು.”ಏನೂ, ಎಬಿಸಿ ಆಡಿಟೋರಿಯಮ್ಮಾ? ಶಾವಿಗೆ ಭಾತೂ, ಕೊಬ್ಬರಿ ಮಿಠಾಯೀನಾ? ಈಗಲೆ ಬಂದೆ.ಇಲ್ಲಿ ಬರೀ ಬಿಸ್ಕತ್ತು ಕಾಫಿ.ಅದನ್ನು ಕೋಡೋಕ್ಕೂ ತಕರಾರು ಮಾಡ್ತವ್ರೆ.” ಎಂದು ಸೈಕಲ್ಲೇರಿ ಶರವೇಗದಲ್ಲಿ ಮಾಯವಾದ.ಇದ್ದೊಬ್ಬ ಪ್ರೇಕ್ಷಕನೂ ಖೋತಾ.
.
ಆರಂಭದ ಆವಧಿ ಸಮೀಪಿಸುತ್ತಿತ್ತು.ಕಾರ್ಯದರ್ಶಿಗಳು ನಿಧಾನವಾಗಿ ಬಂದರು.ಫೋಟೋ ಆಹ್ವಾನ ಪತ್ರಿಕೆಯಲ್ಲೇ ಇದ್ದುದರಿಂದ ಗುರುತು ಹಿಡಿದರು.”ಈಗ ಬಂದ್ರಾ?” ಎಂದು ಕೇಳಿದರು..
ನಾನು ಬಾಯಿ ತೆರೆಯುವಷ್ಟರಲ್ಲಿ ಆ ಕಸ ಗುಡಿಸುವವ ”ನಾ ಗೇಟ್ ತೆರೀತಿದ್ದ ಹಾಗೇ ಇಳಿದ್ರು” ಎಂದು ನನ್ನ ಪರವಾಗಿ ಬ್ಯಾಟ್ ಬೀಸಿದ..
“ಇವತ್ತು ಭಾನುವಾರ ನೋಡಿ.ನಿಧಾನವಾಗಿ ಒಬ್ಬೊಬ್ಬರಾಗಿ ಬರ್ತಾರೆ”.(ಹಾಗಿದ್ದರೆ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಎಂಬ ಕವಿವಾಣಿ ಸುಳ್ಳೆ?)
“ಕಾಫಿ ಆಯ್ತಾ ?” ಎಂದು ಕೇಳಿ, ಎರಡು ಕಾಫಿ ತರಲು ಭಟ್ಟನಿಗೆ ಹೇಳಿದರು.
ಅವನು ಕಾಫಿ ತರುತ್ತ “ಆಗಲೇ ಕೇಳಿದ್ರು. ನಾನು ನೀವು  ಬರೋತನಕ ಕೊಡೋದಿಲ್ಲ ಎಂದಿದ್ದೆ” ಅಂದ. ಛೀ! ಸುಳ್ಳು ಅಪವಾದ. ಏನಾದರೂ ಚೌತಿ ಚಂದ್ರನನ್ನು ನೋಡಿದ್ದೆನೆ? ಎಂದುಕೊಂಡೆ..
“ಬನ್ನಿ ಒಳಗೆ ಹೋಗೋಣ. ಒಂದು ಮೂವತ್ತು ಜನ  ಬರುತ್ತಿದ್ದ ಹಾಗೇ ಆರಂಭ ಮಾಡಿಬಿಡೋಣ.” ಎಂದರು..
ಧೂಳು ಹೊದ್ದ ಕುರ್ಚಿಗಳು, ಬೋಳು ವೇದಿಕೆ ಅಷ್ಟೇ ಕಂಡದ್ದು.
“ನಿಮ್ಮ ಕರ್ಚೀಪಿನಲ್ಲಿ ಧೂಳು ಒರೆಸಿಕೊಂಡು  ಆ ಕುರ್ಚಿ ಮೇಲೆ ಕುಳಿತುಕೊಳ್ಳಿ “ಎಂಬ ಹಿತವಾದ ಅವರಿಂದ.
.
ಬ್ಯಾನರ್ ತೆಗೆದು ಕೊಡವಿದರು.ಅಷ್ಟರಲ್ಲಿ ಅವರಿಗೆ ಫೋನ್ ಬಂತು.”ಹೌದು,ಹೌದು ನಾನು ಬರೋದಕ್ಕೂ ಅವರು ಬರೋದಕ್ಕೂ ಸರಿಹೋಯ್ತು.ಹೊರಟಿದ್ದೀರಾ, ಬನ್ನಿ ನಿಧಾನವಾದ್ರೂ  ಪರವಾಗಿಲ್ಲ” ಎನ್ನುತ್ತಾ “ನಮ್ಮ ಅಧ್ಯಕ್ಷರ ಫೋನು” ಎಂದು ನನಗೆ ತಿಳಿಸಿದರು.
.
ನಾನು ಅರ್ಧ ಗಂಟೆ ಮುಂಚೆ ವಕ್ಕರಿಸಿದ್ದನ್ನು ಅವರಿಗೆ ತಿಳಿಸದೆ ಇದ್ದುದಕ್ಕೆ ಸ್ವಲ್ಪ ಬೇಸರವಾಯಿತು.
ಆದರೂ ಸಮಾಧಾನಿಸಿಕೊಂಡು “ಏನಾದರು ಸಹಾಯ ಬೇಕೆ?” ಎಂದು ಕೇಳುವಷ್ಟರಲ್ಲಿ “ಬನ್ನಿ ಈ ಬ್ಯಾನರ್  ಕಡೆ ಹಿಡಿದುಕೊಳ್ಳಿ” ಎಂದು ಕರೆದರು..ಸುಮ್ಮನೆ ಸಹಕರಿಸಿದೆ.
.
ಮ್ಯಾಜಿಕ್ ಸಂಖ್ಯೆ ಮೂವತ್ತು ತಲುಪುವರೆಗೆ ಸಮಾರಂಭ ಬಡಪಟ್ಟಿಗೆ ಆರಂಭವಾಗುವಂತಿರಲಿಲ್ಲ.ಜೇಬಿನಿಂದ ಮೊಬೈಲ್ ತೆರೆದು ಸುಡೊಕು ಆಡಲಾರಂಭಿಸಿದೆ.ಅಂತೂ ಇವರ  ಕಾರ್ಯಕಾರಿ ಸಮಿತಿಯೆಂದರೆ ಈ ಬಡಕಾರ್ಯದರ್ಶಿ,, ಕಸಗುಡಿಸುವವ ,ಕಾಫಿ ಭಟ್ಟ ಮತ್ತೆ ಉತ್ತಮ ಚರುಪಿಗಾಗಿ ಓಡಿಹೋದ ಕುತೂಹಲಿ ಅವರಷ್ಟೇನೆ?

.

–  ಕೆ.ಎನ್.ಮಹಾಬಲ .

7 Responses

  1. T S SHRAVANA KUMARI says:

    ಸಕತ್ತಾಗಿದೆ ಮಹಾಬಲ

  2. Hema says:

    ಸೂಪರ್…ಉತ್ತಮ ಹಾಸ್ಯಬರಹ!

  3. ನಯನ ಬಜಕೂಡ್ಲು says:

    . ಚೆನ್ನಾಗಿದೆ ಸರ್. ಇವತ್ತು ಇದುವೇ ಸತ್ಯ ಅಲ್ವಾ ಸರ್, ಯಾವ ಸಾಹಿತ್ಯ ಕಾರ್ಯಕ್ರಮ ಗಳ ಮೇಲೂ ಯಾರಿಗೂ ಆಸಕ್ತಿನೇ ಇಲ್ಲ. ಇನ್ನೂ ಭಾನುವಾರ ವಂತೂ ಜನ ಬೆಳಗ್ಗೆ ಹಾಸಿಗೆ ಬಿಟ್ಟು ಏಳೋದೇ 8-9 ಗಂಟೆಯ ಮೇಲೆ, ಇನ್ನೂ ಈ ತರದ ಪ್ರೋಗ್ರಾಮ್ ಗಳನ್ನು ಅಟೆಂಡ್ ಮಾಡೋ ಮಾತೆಲ್ಲಿಂದ ಬಂತು? ನವಿರಾದ ಹಾಸ್ಯದಿಂದ ಕೂಡಿದ ಬರಹ.

  4. ಶಂಕರ ರಾವ್ says:

    ಚೆನ್ನಾಗಿದೆ

  5. ಹಾಸ್ಯಮಿಶ್ರಿತ ಕಟುಸತ್ಯದಿಂದ ಕೂಡಿದ ಬರಹಗಳಿಗೆ ಮಹಾಬಲ ಅವರೇ ಸಾಟಿ. ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಇದೇ ರೀತಿಯ ಅವರ ಇತರ ಬರಹಗಳನ್ನೂ ಈ ವೇದಿಕೆಯಲ್ಲೂ ನಿರೀಕ್ಷಿಸೋಣವೇ?

  6. Shankari Sharma says:

    ಇಂದಿನ ಸಮಾಜದಲ್ಲಿ ದಿನ ದಿನ ನಡೆಯುತ್ತಿರುವಂತಹ ಕಹಿ ಘಟನೆಗಳಿವು.. ವಿಡಂಬನಾತ್ಮಕ ಬರಹ ಚೆನ್ನಾಗಿದೆ ಸರ್.

  7. Anonymous says:

    ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: