ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 21

Share Button


ಪ್ರಕೃತಿಯ ಮಡಿಲಲ್ಲಿ..

ಸುಂದರ ಜಲಪಾತದ ಸೌಂದರ್ಯ ಸವಿದಾದ ಬಳಿಕ ನಮ್ಮ ಕಾರುಗಳು ಹೂವಿನ ತೋಟದ ಕಡೆಗೆ ಚಲಿಸುತ್ತಿದ್ದಾಗ ತಿಳಿಯಿತು..ಅಲ್ಲಿ ವಾಹನ ಚಾಲನೆ ಎಷ್ಟು ಕಷ್ಟವೆಂದು! ನಮಗೆ ಹೆಚ್ಚೆಂದರೆ U ತಿರುವುಗಳ ಬಗ್ಗೆ ತಿಳಿದಿದೆ. ಆದರೆ ಇಲ್ಲಿ ತುಂಬಾ V ಮೇಲ್ತಿರುವುಗಳು! ಜೊತೆಗೇ ಅತ್ಯಂತ ಕಡಿದಾದ ರಸ್ತೆ. ವಾಹನ ಚಾಲನೆ ಮಾಡುವುದು ಬಿಡಿ..ಅದರೊಳಗೆ ಕುಳಿತುಕೊಳ್ಳಲೂ ಭಯವಾಗುವಂತಿತ್ತು. ರಸ್ತೆಯ ಒಂದು ಬದಿ ಎತ್ತರವಾದ ಬೆಟ್ಟ.. ಇನ್ನೊಂದೆಡೆ ಮಂಜು ಮುಸುಕಿದ ಆಳವಾದ ಕಣಿವೆ. ದೂರದಲ್ಲಿ ಮೋಡ ಕವಿದ ಪರ್ವತಗಳ ಸಾಲು.. ನಿಜಕ್ಕೂ ಅತ್ಯಂತ ಸುಂದರ ನಿಸರ್ಗ ನೋಟವೇ ಸರಿ! ಆದರೆ ನಾನಂತೂ, ಚಾಲಕನ ಚಾಲನೆಯ ಚಾಕಚಕ್ಯತೆಯನ್ನು ಮೆಚ್ಚುಗೆಯಿಂದ ವೀಕ್ಷಿಸುತ್ತಾ ಕಾರೊಳಗೆ ಗಟ್ಟಿಯಾಗಿ ಕುಳಿತಿದ್ದೆ ಭಯದಿಂದ! ದೊಡ್ಡ ಬೆಟ್ಟದ ತಪ್ಪಲಿನಲ್ಲಿ ಇರುವ ಹೂವಿನ ತೋಟವು, ಸಿಕ್ಕಿಂ ಕೃಷಿ ಇಲಾಖೆಯಿಂದ ನಿರ್ವಹಿಸಲ್ಪಡುವುದು.

ಕಾರುಗಳಲ್ಲಿರುವವರೆಲ್ಲರೂ ಒಂದೆಡೆ ಸೇರಿದ ಕೂಡಲೇ, ಅಲ್ಲೇ ರಸ್ತೆ ಪಕ್ಕದ ಪುಟ್ಟ ಅಂಗಡಿಗಳಲ್ಲಿದ್ದ ಹಣ್ಣಿನ ಹೋಳುಗಳು ಎಲ್ಲರ ಹೊಟ್ಟೆಯನ್ನು ತಂಪು ಮಾಡಿದುವು. ಮಕ್ಕಳು  ಹಿರಿಯರ ಪಾಲುಗಳಲ್ಲೂ ಭಾಗಿಗಳಾಗಿ, ಹಿರಿಯರೊಂದಿಗೆ ಮಕ್ಕಳೂ ಖುಷಿಪಟ್ಟರು. ಹೊರಗಡೆ ತಣ್ಣನೆಯ ಗಾಳಿ ಬೀಸುತ್ತಾ, ಸ್ವೆಟರ್ ಇಲ್ಲದವರನ್ನು ಗದಗುಟ್ಟಿಸುತ್ತಿತ್ತು. ಒಂದರ್ಧ ಗಂಟೆ ಮೇಲೇರಿ ಹೋಗಿ ಹೂದೋಟ ನೋಡಿ ಬರಲು ಎಲ್ಲರಿಗೂ ಪ್ರವೇಶ ಶುಲ್ಕವನ್ನು ತೆತ್ತು ತಯಾರಾಗಿದ್ದರು ಗಣೇಶಣ್ಣ. ಬೆಟ್ಟದ ಮೇಲಕ್ಕೆ ಹೋಗಲಿರುವ ಪುಟ್ಟ ಕಾಲುದಾರಿಯ ಇಕ್ಕೆಲಗಳಲ್ಲಿ ದೊಡ್ಡದಾಗಿ ಬೆಳೆದ ಗಿಡಗಳು; ಹಾಗೆಯೇ ಅವುಗಳ ಕಾಂಡಗಳಲ್ಲಿ ಅವುಗಳ ಬಗ್ಗೆ ಬರೆದ ವಿವರಗಳ ಚೀಟಿ‌. ಆಗಾಗ ಅದನ್ನು ನೋಡುತ್ತಾ, ಅಂಕುಡೊಂಕಾದ ಕಲ್ಲು ಹಾಸಿನ ದಾರಿಯಲ್ಲಿ ಮೇಲೇರುತ್ತಿದ್ದಂತೆ ಅಲ್ಲಲ್ಲಿ ಹೂವು ತುಂಬಿ ನಗುತ್ತಿದ್ದ  ಗಿಡಗಳ ಗುಂಪು ಕಾಣಸಿಗುತ್ತಿದ್ದುವು. ಆಗಷ್ಟೇ ಹೂ ಬಿಡುವ ಕಾಲ ಕಳೆದುದರಿಂದ, ಇಡೀ ತೋಟದಲ್ಲಿ ಹೂಗಳು ಸ್ವಲ್ಪ ಕಡಿಮೆಯಿವೆ ಅನ್ನಿಸಿತು. ಆದರೂ  ಹೆಚ್ಚು ಹೂ ಕಂಡಲ್ಲಿ ನಿಂತು ಫೋಟೋ ಕ್ಲಿಕ್ಕಿಸಲು ನಾವು ಯಾರೂ ಮರೆಯಲಿಲ್ಲ! ಕೊನೆಯ ಹಂತದಲ್ಲಿ, ಮೇಲ್ಗಡೆಗೆ, ಗಾಜಿನ ಮನೆಯೊಳಗೆ ಬೆಳೆಸಿದ ಹೂವಿನ ಗಿಡಗಳು ಕಾಣಿಸಿದುವು.

ಅಲ್ಲಿಯೂ ಅಷ್ಟೇನೂ ಉತ್ಸಾಹದಾಯಕವಾಗಿ ಹೂ ಕಾಣದಿದ್ದರೂ, ಇದ್ದುದನ್ನೇ ಖುಷಿಯಿಂದ ಆಸ್ವಾದಿಸಿ ಕ್ಯಾಮೆರಾದೊಳಗೆ ತುಂಬಿಕೊಂಡೆವು. ಅದಾಗಲೇ ಆಗಸದಲ್ಲಿ ದಟ್ಟ ಮೋಡ ತುಂಬಿ ಮಳೆ ಬರುವ ಸೂಚನೆಯನ್ನಿತ್ತಿತು. ನಾವಿದ್ದ ಬೆಟ್ಟದ ತುದಿ ಮೋಡದಲ್ಲಿ ಮರೆಯಾಯಿತು. ಕೊಡೆಯಂತೂ ಯಾರ ಕೈಯಲ್ಲೂ ಇರಲಿಲ್ಲ. ಆದಷ್ಟು ಬೇಗನೆ ವಾಹನ ಸೇರುವ ತವಕ ಎಲ್ಲರಿಗೂ. ಅಂತೂ ಓಡೋಡಿ ಕಾರಲ್ಲಿ ಕುಳಿತಾಗ ತಿಳಿಯಿತು..ಮಕ್ಕಳ ಗುಂಪು ನಾಪತ್ತೆ! ಗಣೇಶಣ್ಣ ಅವರನ್ನು ಹುಡುಕಿ ಕರೆತರುವಷ್ಟರಲ್ಲಿ ತುಂತುರು ಮಳೆ ಪ್ರಾರಂಭವಾಗಿಯೇ ಬಿಟ್ಟಿತು. ಮುಂದಕ್ಕೆ, ಇನ್ನೊಂದು ಬೆಟ್ಟದ ತಪ್ಪಲಿನಲ್ಲಿ ನಮ್ಮ ವಾಹನಗಳು ನಿಂತಾಗ, ಬೆಟ್ಟದ ಮೇಲೆ ಎತ್ತರದಲ್ಲಿರುವ ಹನುಮಾನ್ ಟೋಕ್ ಕಾಣುತ್ತಿತ್ತು. ಗೇಂಗ್ ಟೋಕ್ ನಿಂದ ಸುಮಾರು ಹನ್ನೊಂದು ಕಿ.ಮೀ. ದೂರವಿರುವ ಇದು, ಸಮುದ್ರ ಮಟ್ಟದಿಂದ ಸುಮಾರು 7,200 ಅಡಿ ಎತ್ತರದಲ್ಲಿದೆ. ನಮ್ಮ ಹೆಮ್ಮೆಯ ಯೋಧರಿಂದಲೇ ನಿರ್ವಹಿಸಲ್ಪಡುವ ಅಪರೂಪದ ದೇವಸ್ಥಾನವಿದು.

ತುಂತುರು ಮಳೆ.. ಎತ್ತರಕ್ಕೆ ಹತ್ತಲಿರುವ ಐವತ್ತಕ್ಕೂ ಮಿಕ್ಕಿ ಮೆಟ್ಟಿಲುಗಳು ಮಕ್ಕಳಿಗೆ ಯಾವ ಲೆಕ್ಕ? ಆದರೆ ನಮ್ಮ ಪ್ರವಾಸಿ ಬಂಧುಗಳಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾದುದರಿಂದ ಹತ್ತಲಿರುವ ದೂರವನ್ನು ನೋಡಿ ತಮ್ಮ ಮಂಡಿಗಳನ್ನು ನೆನಪಿಸಿಕೊಂಡುದು ತಪ್ಪೇನೂ ಅಲ್ಲ ಅಲ್ಲವೇ? ಆದರೂ ಉತ್ಸಾಹಕ್ಕೇನೂ ಕೊರತೆಯಿರಲಿಲ್ಲ ಬಿಡಿ. ಮಕ್ಕಳು ಕ್ಷಣದಲ್ಲಿ ಮೇಲ್ತುದಿಯಲ್ಲಿದ್ದರೆ; ಉಳಿದ ನಾವೆಲ್ಲ ಅಕ್ಕ ಪಕ್ಕ ನೋಡುತ್ತಾ ನಿಧಾನವಾಗಿ ಮೇಲಕ್ಕೆ ಹೋಗುತ್ತಿದ್ದಾಗ ಆಶ್ಚರ್ಯವೊಂದನ್ನು ಗಮನಿಸಿದೆವು. ಸಿಖ್ ಆಜಾನುಬಾಹು ವ್ಯಕ್ತಿಗಳು, ಸ್ವಚ್ಛ ಬಿಳಿ ಬಟ್ಟೆ ತೊಟ್ಟು, ಕಸಬರಿಕೆಯಿಂದ ಮರ ಗಿಡಗಳ ಮಧ್ಯೆ ಸ್ವಚ್ಛ ಮಾಡುತ್ತಿದ್ದರು. (ಇವರು ಯೋಧರೆಂದು ಆಮೇಲೆ ತಿಳಿಯಿತು.) ಇಡೀ ವಾತಾವರಣವು ಅಲೌಕಿಕ ನಿಶ್ಶಬ್ದತೆಯಿದ ಕೂಡಿ, ಎಲ್ಲಿ ನೋಡಿದರಲ್ಲಿ ಕಾಣುವ ಸ್ವಚ್ಛತೆಯು ಮನ ಸೆಳೆಯುವಂತಿತ್ತು. ಸುತ್ತಲೂ ದಟ್ಟ ಹಸಿರು ಮರಗಳು.. ಎದುರುಗಿನ ಆಳ ಕಣಿವೆಯಲ್ಲಿ ದಟ್ಟ ಮಂಜು.. ಸ್ನಿಗ್ಧ ರಮಣೀಯ ಪ್ರಕೃತಿಯು ಹತ್ತುವ ಶ್ರಮವನ್ನು ಮರೆಸಿತ್ತು. ನಡೆಯಲಾಗದ ಅಂಗವಿಕಲ ಹಾಗೂ  ವಯೋವೃದ್ಧ ಪ್ರವಾಸಿಗರ ವೀಲ್ ಕುರ್ಚಿಗಳ ಅನುಕೂಲಕ್ಕಾಗಿ ಪುಟ್ಟ  ರಸ್ತೆಯನ್ನೂ, ಮೆಟ್ಟಿಲುಗಳ ಪಕ್ಕದಲ್ಲಿ ರೂಪಿಸಿದ್ದರು. ನಾವು ಮೇಲ್ಗಡೆಗೆ ತಲಪುವಾಗ ಮಳೆ ಕಡಿಮೆಯಾಗಿದ್ದರೂ, ಜೋರಾದ ಚಳಿಗಾಳಿ ಬೀಸುತ್ತ ಕಚಗುಳಿ ಇಡುತ್ತಿತ್ತು. ಎದುರಿಗೇ ಕಾಣುತ್ತಿತ್ತು..ಚಿಕ್ಕ ಚೊಕ್ಕ ಹನುಮ ದೇವಸ್ಥಾನ.

ಇಲ್ಲಿ ಈ ದೇವಸ್ಥಾನ ಇರುವುದಕ್ಕೂ ಪೌರಾಣಿಕ ಹಿನ್ನೆಲೆಯೊಂದು ಇರುವುದು ವಿಶೇಷ. ರಾಮಾಯಣದಲ್ಲಿ, ರಾಮ-ಲಕ್ಷ್ಮಣರು ಯುದ್ಧದ ಸಮಯ ಮೂರ್ಛೆ ಹೋದಾಗ, ಹನುಮಂತನು ಅವರಿಗಾಗಿ ಸಂಜೀವಿನಿ ಪರ್ವತವನ್ನು ಹೊತ್ತೊಯ್ಯುತ್ತಿದ್ದ ಸಂದರ್ಭದಲ್ಲಿ ಈ ಪರ್ವತದ ತುದಿಯಲ್ಲಿ ಸ್ವಲ್ಪ ಸಮಯ ವಿರಮಿಸಿದನಂತೆ!

ಅತೀ ಎತ್ತರದ ಈ ಜಾಗದಿಂದ ಕಾಂಚನಜುಂಗಾ ಪರ್ವತದ ಜೊತೆಗೆ ಇತರ ಪರ್ವತಗಳ ಶ್ರೇಣಿಯ ವಿಹಂಗಮ ದೃಶ್ಯವನ್ನು ವೀಕ್ಷಿಸಬಹುದು..ಅದೃಷ್ಟ ಚೆನ್ನಾಗಿದ್ದರೆ! ಯಾಕೆಂದರೆ, ನಮಗೆ ಮಳೆ ಮೋಡ, ಮಂಜು ಮುಸುಕಿದ ಪ್ರಕೃತಿ ಸೌಂದರ್ಯವು ಮಾತ್ರ ಲಭ್ಯವಾಯಿತು. ಇಲ್ಲಿಯ ಗುಡಿಯಲ್ಲಿ ಪೂಜಾರಿಗಳಿಲ್ಲ..ಪವಿತ್ರವಾದ ಪ್ರಕೃತಿಯ ಪೂಜೆಯೇ ನಿರಂತರ! ಗುಡಿಯೊಳಗಿನ ಗೋಡೆಯಲ್ಲಿ ದೇವ, ದೇವರುಗಳ ಶ್ಲೋಕಗಳು, ಶ್ರೀರಾಮಚಂದ್ರನಾರತಿಯ ಪ್ರಾರ್ಥನಾ  ಶ್ಲೋಕಗಳು ದೇವನಾಗರಿ ಲಿಪಿಯಲ್ಲಿ ಬರೆದುದು ಆನಂದ ಉಂಟು ಮಾಡುವುದಲ್ಲದೆ, ಒಂದಿನಿತು ಹೊತ್ತು ಅವುಗಳನ್ನು ಮನನ ಮಾಡುವ ಮನಸ್ಸಾಗುವುದು ನಿಜ. ಹೊರಗಡೆಗೆ ಯೋಧರು ತಂಪಾದ ಶರಬತ್ತು, ಬಿಸ್ಕೆಟ್ ಜೊತೆಗೆ ಪ್ರವಾಸಿಗರ ಆದರಾತಿಥ್ಯಕ್ಕೆ ಸಜ್ಜಾಗಿ ನಿಂತಿದ್ದರು. ಅವರ ಒತ್ತಾಯದ ಮೇರೆಗೆ ಅವುಗಳ ಸೇವನೆಯ ಜೊತೆಗೆ, ಅವರೊಡನೆ ಹೆಮ್ಮೆಯಿಂದ ನಿಂತು ಫೋಟೋ ತೆಗೆದುದು ಖುಷಿಯ ಸಂಗತಿ.

ಮುಂದಕ್ಕೆ,  ಅನತಿ ದೂರದಲ್ಲಿರುವ ಗಣೇಶ್ ಟೋಕ್ ಗೆ ನಮ್ಮ ಪಯಣ. ಇದು ಕೂಡಾ ಬೆಟ್ಟದ ಮೇಲ್ತುದಿಯಲ್ಲಿರುವ ಪುಟ್ಟ ಗುಡಿ. ಇಲ್ಲಿಗೆ ತಲಪಿದ ಕೂಡಲೇ ಮಳೆಯ ರಭಸ ಜೋರಾದ್ದರಿಂದ ಹೆಚ್ಚಿನವರು ಮೇಲೆ ಬರಲಿಚ್ಛಿಸಲಿಲ್ಲ. ನಾವು ಮೇಲೇರಿದಾಗ, ಚಪ್ಪಲಿಗಳನ್ನು ಇಡಲು ಇದ್ದ ಉತ್ತಮ  ವ್ಯವಸ್ಥೆ ಕಂಡು ನಿಜಕ್ಕೂ ಖುಷಿಯಾಯಿತು. ಹತ್ತೈವತ್ತು ಮೆಟ್ಟಲೇರಿದಾಗಲೇ ಗಣೇಶನ ದರ್ಶನವಾಯಿತು.  ಶೃಂಗರಿಸಿದ ಪುಟ್ಟ ಗುಡಿಯೊಳಗಡೆ ಕುಳಿತ ಭಂಗಿಯಲ್ಲಿ ಸುಮಾರು ಹತ್ತು ಅಡಿಗಳಷ್ಟು ಎತ್ತರದ ಸುಂದರ ವಿಗ್ರಹಕ್ಕೆ ಭಕ್ತಿಯಿಂದ ಕೈ ಮುಗಿದು ಬೇಗನೇ ಹಿಂತಿರುಗುವ ಧಾವಂತದಲ್ಲಿ ಸುತ್ತಲೂ ಕಣ್ಣಾಡಿಸಿದಾಗ ಆ ಚಳಿಯಲ್ಲಿಯೂ ಪ್ರಕೃತಿಯ ನೋಟ ಮನ ಸೆಳೆಯಿತು. ತಿಳಿ ಹವಾಮಾನದಲ್ಲಿ ಇಲ್ಲಿಂದಲೂ ಕಾಂಚನಜುಂಗಾ ಪರ್ವತದ ಜೊತೆಗೆ, ಗೇಂಗ್ ಟೋಕ್ ಪಟ್ಟಣದ ‌ಬಹು ಪಾಲು ಭಾಗಗಳನ್ನು ವೀಕ್ಷಿಸಬಹುದಾಗಿದೆ. ದೇವರ ದರ್ಶನ ಪಡೆದು ಹಿಂತಿರುಗುವಾಗ ಅದಾಗಲೇ ಮಧ್ಯಾಹ್ನದ ಹೊತ್ತೆಂದು ಹೊಟ್ಟೆಗೆ ಗೊತ್ತಾಗಿತ್ತು… ಬೆಟ್ಟದ ತಿರುವಿನ ರಸ್ತೆಯಲ್ಲಿ ಚಾಲಕರು ಚಾಕಚಕ್ಯತೆಯಿಂದ ಕಾರುಗಳನ್ನು ಓಡಿಸಿ,  ನಗರದ ಮಧ್ಯೆದಿಂದಾಗಿ ಹೋಟೇಲ್ ದಾರಿ ಹಿಡಿದಾಗ, ಪಟ್ಟಣದ ಸೊಬಗನ್ನು ಕಂಡು ಆನಂದವೂ, ಅಚ್ಚರಿಯಾಯಿತು. ರಸ್ತೆ ಇಕ್ಕೆಲಗಳಲ್ಲಿ ಹೂ ಕುಂಡಗಳಲ್ಲಿ ಚಂದದ ಹೂಗಳನ್ನು ಬೆಳೆಸಿ, ಜೋಡಿಸಿ ನಗರದ ಸೊಬಗನ್ನು ಇಮ್ಮಡಿಗೊಳಿಸಿದ್ದರು.  ಎಲ್ಲವನ್ನೂ ಕಣ್ತುಂಬಿಕೊಂಡು..ಮನ ತುಂಬಿಕೊಳ್ಳುತ್ತಿರುವಾಗಲೇ ಹೋಟೆಲ್ ನತ್ತ  ಕಾರಿನ ಓಟ ಸಾಗಿತ್ತು…

(ಮುಂದುವರಿಯುವುದು..)

ಹಿಂದಿನ ಸಂಚಿಕೆ ಇಲ್ಲಿದೆ : ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 20

-ಶಂಕರಿ ಶರ್ಮ, ಪುತ್ತೂರು.

4 Responses

  1. ನಯನ ಬಜಕೂಡ್ಲು says:

    Nice madam ji

  2. Anonymous says:

    ಚೆನ್ನಾಗಿದೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: