‘ಆನೆ ಸಾಕಲು ಹೊರಟ’ ಸಹನಾ ಕಾಂತಬೈಲು

Share Button

ಮಾನವನ ಪ್ರಕೃತಿ ವಿರೋಧ  ಕೃತ್ಯಗಳಿಂದಾಗಿ,ಕಾಡಿನಲ್ಲಿ ಆಹಾರ ಸಿಗದೇ ನಾಡಿನತ್ತ ಲಗ್ಗೆ ಹಾಕುತ್ತಿರುವ ಆನೆಗಳಿಗೆ ಕಾಡಿನಲ್ಲಿಯೇ ಆಹಾರ ಲಭ್ಯವಾಗಬೇಕೆಂಬ ಸದುದ್ದೇಶವನ್ನುಹೊಂದಿದ ಸಹನಾ ಕಾಂತಬೈಲು ಅರಣ್ಯಾಧಿಕಾರಿಗಳ ಸಹಾಯದಿಂದ ಕಾಡಿನಲ್ಲಿ ಕಲ್ಲುಬಾಳೆಯ ಬೀಜಗಳನ್ನು ಬಿತ್ತಿ ಬೆಳೆಸಿದ ಸಾಹಸಿ ಮಹಿಳೆ. ಇವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಕಾಂತಬೈಲಿನಲ್ಲಿ ವಾಸಿಸುವ ರೈತ ಮಹಿಳೆ.ಕೃಷಿಯೇ ಪ್ರಧಾನವಾಗಿರುವ ಕುಟುಂಬದಲ್ಲಿ ಗ್ರಹಕೃತ್ಯ ,ತೋಟದ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ತಮ್ಮ ಸಾಹಿತ್ಯಾಸಕ್ತಿಯನ್ನು ಬರಹರೂಪಕ್ಕೆ ಇಳಿಸಿದವರು.

ಉದಯವಾಣಿ ಪತ್ರಿಕೆಯಲ್ಲಿ ‘ಭೂಮಿ ಗೀತ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡ 26  ಪ್ರಬಂಧಗಳ ಸಂಕಲನವೇ ಇವರ “ಆನೆ ಸಾಕಲು ಹೊರಟವಳು” ಎಂಬ ಕೃತಿ. ರೈತ ಮಹಿಳೆಯೊಬ್ಬಳ ದಿನಚರಿಯ ಪುಟಗಳನ್ನುಮಗುಚಿ ಹಾಕುತ್ತಿರುವಂತಹ ಆತ್ಮೀಯ ಭಾವದ ಎಳೆಯನ್ನುಓದುಗರ ಸುತ್ತ ನೇಯುವಂತಹ ಕಲಾತ್ಮಕ ಬರಹ ಇವರದ್ದು.

ಅತಿವೃಷ್ಟಿ, ಬರಗಾಲ,ಕೈಗೆಟುಕದ ಕೆಲಸಗಾರರು,ಬೆಳೆದ ಬೆಳೆಗಳ ಬೆಲೆಗಳಲ್ಲಾಗುವ ಏರುಪೇರು,ಗಗನಕ್ಕೇರುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆ ಇವೆಲ್ಲವುಗಳ ನಡುವೆ ಸೆಣಸಾಡುವ ರೈತರ ಬವಣೆ, ಕಷ್ಟಗಳು ಇವರ ಲೇಖನಗಳಲ್ಲಿ ಎದ್ದು ಕಾಣುವ ವಸ್ತು. ಹೆಣ್ಣು – ಭೂಮಿ-ಕೃಷಿ ಇವುಗಳ ಚಿತ್ರಣವನ್ನು ಕೂಡ ತಮ್ಮ ಪ್ರಬಂಧಗಳಲ್ಲಿ ಚಿತ್ರಿಸುವುದರ ಜೊತೆಗೆ ತಮ್ಮ ಪ್ರತಿಯೊಂದು ಲೇಖನದಲ್ಲೂ ಸುಂದರ ಸಂದೇಶವನ್ನು ಸೂಚ್ಯವಾಗಿ, ಸೂಕ್ಶ್ಮವಾಗಿ ನೀಡಿರುವುದು ಮೆಚ್ಚುವಂತಹ ವಿಷಯ.

ರೈತರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಒದಗಿಸದೆ ,ಸಾಲಮನ್ನಾ ಎಂಬ ಆಮಿಷವನ್ನು ಒಡ್ಡಿ, ಓಟು ಗಳಿಸುವ ಧೂರ್ತ ರಾಜಕಾರಣಿಗಳನ್ನು ಟೀಕಿಸಲು ಇವರು ಅಂಜುವುದಿಲ್ಲ. ಕೃಷಿಯನ್ನೇ ನಂಬಿ ಜೀವನವನ್ನು ಸಾಗಿಸುವುದು ಕಷ್ಟ ಎಂದು ಪಟ್ಟಣವನ್ನು ಸೇರುತ್ತಿರುವ ಜನರನ್ನು ಉದ್ದೇಶಿಸಿ, ಕಂಪ್ಯೂಟರಿನಿಂದ ಅನ್ನ ಉದುರಲಾರದು ಎಂಬ ಕಟುಸತ್ಯವನ್ನು ನುಡಿದು ಅರಿವನ್ನು ಮೂಡಿಸುವ ಪ್ರಯತ್ನ ಮಾಡುತ್ತಾರೆ. ಕೃಷಿಯನ್ನು ನೆಚ್ಚಿ ಜೀವನ ಸಾಗಿಸಲಾಗದು ಎಂದು ಗೋಳಾಡುವ ರೈತರಿಗೆ, ಪ್ರಕೃತಿಯಲ್ಲಿ ದೊರೆಯುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಸಮತೋಲನವನ್ನು ಸಾಧಿಸಿಕೊಳ್ಳುವ ಬಗೆಯನ್ನು ತಿಳಿಸಿಹೇಳುವ ಆರ್ಥಿಕತಜ್ಞೆಯಾಗುತ್ತಾರೆ.ತೋಟಗಳಲ್ಲಿ ಬೆಳೆಯುವ ಸತ್ವಯುತ,ಔಷಧೀಯ ಗುಣಗಳಿಂದ ಕೂಡಿದ ತರಕಾರಿ,ಸೊಪ್ಪು,ಗಿಡಮೂಲಿಕೆಗಳನ್ನು ದಿನನಿತ್ಯದ ಅಡುಗೆಯಲ್ಲಿ ಬಳಸಿ ಅರೋಗ್ಯ ಕಾಪಾಡಿಕೊಳ್ಳಿ ಎಂದು ಕಾಳಜಿ ತೋರುವ  ವೈದ್ಯೆಯಾಗುತ್ತಾರೆ.

ನೀರು,ಅಡುಗೆ ಅನಿಲ,ವಿದ್ಯುತ್ ಮೊದಲಾದ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸಿರೆಂದು ಕಿವಿಮಾತು ಹೇಳುವ ಪರಿಸರಪ್ರೇಮಿ ಹಿರಿಯಕ್ಕನಾಗುತ್ತಾರೆ.ದಿನಕ್ಕೊಂದು ಸವಾಲನ್ನು ಎದುರಿಸುವ ರೈತ ಯುವಕನಿಗೆ ಹೆಣ್ಣು ಕೊಡುವವರಾರು ?ಎಂಬ ಕಳಕಳಿ ಕೂಡ ಇವರಲ್ಲಿ ತುಂಬಿದೆ .ಕೃಷಿಕ ಮಹಿಳೆಯಾಗಿ ಹಲವಾರು ತಾಪತ್ರಯಗಳ ನಡುವೆಯೂ ತಮ್ಮ ಆಸಕ್ತಿಗಳನ್ನು ಹೇಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕೆಂಬುದನ್ನು ಸಾಧಿಸಿತೋರುವ ಮಾದರಿಯಾಗುತ್ತಾರೆ.

ಹಳ್ಳಿಯ ದೈನಂದಿನ ಬದುಕಿನ ಚಿತ್ರಣವನ್ನುತಮ್ಮ  ಪ್ರಾಮಾಣಿಕ ಬರಹಗಳ ಮೂಲಕ ಓದುಗರೆದುರಿಗೆ ತೆರೆದಿಟ್ಟಿದ್ದಾರೆ.ಹಲಸಿನ ಹಣ್ಣಿನ ಅಂಟಿನ ಜೊತೆಗೆ ಅದರ ಖಾದ್ಯಗಳ  ಸ್ವಾದವನ್ನು ಉಣಬಡಿಸುತ್ತಾರೆ .ಹಂಡೆಯ ಬಿಸಿನೀರಿನ ಹಿತವಾದ ಸ್ನಾನದ ನೆನಪು ಮರುಕಳಿಸುವಂತೆ ಮಾಡುತ್ತಾರೆ. ತಮ್ಮ ಕೊಟ್ಟಿಗೆಯಲ್ಲಿ ಬೆಳೆದ ಮುದ್ದಿನ ಹೋರಿಕರುವೊಂದನ್ನು ದಟ್ಟಕಾಡಿನ ನಡುವೆ ಅನಿವಾರ್ಯವಾಗಿ ಬಿಟ್ಟುಬರುವಾಗ ಕಣ್ಣೀರಿಡುವ ಸಹನಾರವರ ಮಮತಾಮಯಿ ಹೃದಯದ ಪರಿಚಯ ‘ಹೋರಿಕರುವಿನ ವಿದಾಯ ಪ್ರಸಂಗ’ ಲೇಖನದ ಮೂಲಕ ನಮಗೆ ಆಗುತ್ತದೆ.

ಸಹನಾರವರವರು ತಮ್ಮ ಹೆಸರಿಗೆ ತಕ್ಕಂತೆ ಸಹನೆಯಿಂದ ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಛಲವುಳ್ಳವರೆಂದು ಅವರ ಲೇಖನಗಳ ಮೂಲಕ ತಿಳಿಯುತ್ತದೆ. ಜೇನು ಸಾಕಣೆಯ ಬಗ್ಗೆ ಬರೆದ ಲೇಖನದಲ್ಲಿ, ಮೈ ಕೈ,ತುಟಿಗಳಿಗೆ ಜೇನು ಕಡಿದರು ಸಹ, ತುಟಿಕಚ್ಚಿ ನೋವನ್ನು ಸಹಿಸಿ ತಮ್ಮ ಕಾರ್ಯವನ್ನು ಪೂರ್ಣಗೊಳಿಸುವತ್ತ ಗಮನಹರಿಸಿದ ಅವರ ಕಾರ್ಯತತ್ಪರತೆಯೇ ಇದಕ್ಕೆ ಸಾಕ್ಷಿ. ಹಳ್ಳಿಯ ಚಿತ್ರಣಗಳ ಜೊತೆಗೆ ತಾವು ಭೇಟಿ ನೀಡಿದ ದೇಶ, ವಿದೇಶಗಳ ಅನುಭವಗಳನ್ನು ಕೂಡ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂಬೈ ಶಹರಿಗೆ ಬಂದರೂ ಅಲ್ಲಿಯೂ ಆಕಳಿನ ಹಾಲು ಕರೆದು ತಮ್ಮತನವನ್ನು ಉಳಿಸಿಕೊಂಡಿದ್ದಾರೆ. ಅಮೆರಿಕಾದಲ್ಲಿಯ ಸುಸಜ್ಜಿತ,ಅಚ್ಚುಕಟ್ಟಾದ ಗ್ರಂಥಾಲಯವನ್ನು ಕಂಡು, ಮಾರುಹೋಗಿ ಮುಂದಿನ ಜನ್ಮದಲ್ಲಿ ಅಮೇರಿಕಾದಲ್ಲಿ ಹುಟ್ಟಬೇಕೆಂಬ ಆಶಯವನ್ನು ವ್ಯಕ್ತಪಡಿಸುವ ಮುಗ್ಧತೆ ಅವರಲ್ಲಿದೆ.

ನಾಗೇಶ ಹೆಗಡೆಯವರ ಸುಂದರವಾದ ಮುನ್ನುಡಿ,ಡಾ.ಬಿ .ಜನಾರ್ಧನ್ ಭಟ್ ಅವರ ಚಿಕ್ಕ ಚೊಕ್ಕ ಬೆನ್ನುಡಿಯೊಂದಿಗೆ ಈ ಕೃತಿ ಅಚ್ಚುಕಟ್ಟಾಗಿ ಮೂಡಿಬಂದಿದೆ.ಶ್ರೀ ರಾಮ ಗ್ರಾಫಿಕ್ ಮಂಡ್ಯ ಅವರ ಸಮರ್ಪಕವಾದ ಮುಖಪುಟ ವಿನ್ಯಾಸ ಈ ಕೃತಿಗೆ ಇನ್ನಷ್ಟು ಮೆರಗು ನೀಡಿದೆ. ಒಟ್ಟಿನಲ್ಲಿ ಸಹನಾ ಕಾಂತಬೈಲು ಅವರ ಈ ಕೃತಿ ಹಳ್ಳಿಯಲ್ಲಿ ಹುಟ್ಟಿ ಬೆಳೆದು,ನಂತರ ಪಟ್ಟಣ ಸೇರಿದವರಿಗೆ ಸವಿನೆನಪುಗಳನ್ನು ತೆರೆದಿಡುವ ಸಿಹಿ ಬುತ್ತಿಯಾದರೆ, ಪಟ್ಟಣದಲ್ಲಿಯೇ ಹುಟ್ಟಿ ಬೆಳೆದವರಿಗೆ ಹಳ್ಳಿಯ ಸಮಗ್ರ ಚಿತ್ರಣವನ್ನು ಕಣ್ಮುಂದೆ ತೆರೆದಿಡುತ್ತದೆ.

ಬರಹದ ಮೂಲಕ ನೆಮ್ಮದಿಯನ್ನು ಗಳಿಸಲು ಸಾಧ್ಯ ಎಂದು ಹೇಳುವ ಸಹನಾ ತಮ್ಮ ಈ ಕೃತಿಯ  ಮೂಲಕ ಓದುಗರಿಗೆ ನೆಮ್ಮದಿಯನ್ನು ನೀಡಿದ್ದಾರೆ. ಆನೆ ಸಾಕಲು ಹೋರಾಟ ಸಹನಾ ಕಾಂತಬೈಲು ಮುಂದೊಂದು ದಿನ ಇತರ ಕಾಡುಪ್ರಾಣಿಗಳನ್ನು ಕೂಡ ಸಾಕಲು ಹೊರಟರೆ ಅಚ್ಚರಿಯೇನಿಲ್ಲ.ಅಂತಹ ಸಂವೇದನಾಶೀಲ,ಸಾಹಸಪ್ರವೃತ್ತಿಯುಳ್ಳ ವ್ಯಕ್ತಿತ್ವ ಅವರದ್ದು. ಒಟ್ಟಾರೆಯಾಗಿ, ಯಾವುದೇ ಆಡಂಬರ, ಕೃತ್ರಿಮತೆಯ ಸೋಗಿಲ್ಲದ,ಸೋಂಕಿಲ್ಲದ ಸಹಜ, ಸರಳ,ಸುಂದರ ಕೃತಿ ಇದು.

-ಶಶಿಕಲಾ ಹೆಗಡೆ

4 Responses

  1. ನಯನ ಬಜಕೂಡ್ಲು says:

    ಹಳ್ಳಿಯ ಸೊಗಡಿನ ಚಿತ್ರಣ ಪುಸ್ತಕದೆಡೆಗೆ ಆಕರ್ಷಿಸುತ್ತದೆ. ಸುಂದರವಾಗಿದೆ ಪುಸ್ತಕ ವಿಮರ್ಶೆ.

  2. ಡಾ. ಗುರುಸಿದ್ಧಯ್ಯಾ ಸ್ವಾಮಿ, ಅಕ್ಕಲಕೋಟ says:

    ಅಭಿನಂದನೆಗಳು

  3. Shankari Sharma says:

    ಸಹಜ ಸುಂದರ ಪುಸ್ತಕ ವಿಮರ್ಶೆ.

  4. sangeetha raviraj says:

    ತುಂಬಾ ಚೆನ್ನಾಗಿ ಅಭಿವ್ಯಕ್ತಿ ಗೊಳಿಸಿದ್ದೀರಿ ಶಶಿಕಲಾರವರೇ . ಸಹನಕ್ಕನ ಕ್ರತಿ ಸಾರ್ಥಕ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: