ಪತ್ರಿಕೆಗೆ ಬರೆಯುವ ಮುನ್ನ ….ಭಾಗ 4

Share Button

 

ಅಡುಗೆ ರೆಸಿಪಿಯಲ್ಲಿ ಏನು ಮಹಾ ಸಾಹಿತ್ಯ ಇರೋದು ? ಉಪ್ಪು-ಹುಳಿ-ಮೆಣಸು-ತರಕಾರಿ ಹಾಕೋದೆಷ್ಟು ಅಂತ ಬರೆದು, ಚಿತ್ರಗಳನ್ನೂ ಕಳ್ಸೋದು, ಅಷ್ಟೇ ತಾನೆ? ನಾನೂ ಅಷ್ಟು ಮಾಡಿದ್ದೆ, ಆದರೆ ನಾನು ಕಳುಹಿಸಿದ ರೆಸಿಪಿಗಳನ್ನು ಅವರು ಪ್ರಕಟಿಸ್ಲೇ ಇಲ್ಲ  ..ಯಾಕಿರಬಹುದು ?’ ಎಂದು ಒಬ್ಬರು ಅಸಮಾಧಾನದಿಂದ ಕೇಳಿದ್ದರು.

ಬೇಕೆನಿಸಿದಾಕ್ಷಣ, ಅಂಗೈಯಲ್ಲಿರುವ ಮೊಬೈಲ್ ನಲ್ಲಿ ನೂರಾರು ರೆಸಿಪಿಯ ಯೂ-ಟ್ಯೂಬ್ ಲಿಂಕ್ ಗಳು ದೊರೆಯುವ ಈ ದಿನಗಳಲ್ಲಿಯೂ,  ದೂರದದರ್ಶನದ ಹಲವಾರು ಚಾನೆಲ್ ಗಳಲ್ಲಿ ಅಡುಗೆಯ ಮಹಾಪೂರವೇ ಬಿತ್ತರಗೊಳ್ಳುತ್ತಿದ್ದರೂ, ಮಹಿಳಾ ಪುರವಣಿಯಲ್ಲಿ ಅಡುಗೆಯ ಚಿತ್ರಗಳು ಕಂಗೊಳಿಸುತ್ತಿಲ್ಲವೇ? ಅಷ್ಟಕ್ಕೂ, ಅಡುಗೆ ಬರಹಗಳಿಗೆ ಬೆಲೆ ಇಲ್ಲವೆಂದಾದರೆ, ಹೆಚ್ಚಿನ ಪತ್ರಿಕೆಗಳು ವಾರಕ್ಕೆ ಒಂದು ದಿನ ಅರ್ಧಪುಟವನ್ನು ಇದಕ್ಕಾಗಿಯೇ ಮೀಸಲಿರಿಸುವುದು ಏತಕೆ? ಬರಹ ಯಾವುದೇ ಇರಲಿ, ಲಘುವಾಗಿ ಪರಿಗಣಿಸುವುದು ತಪ್ಪು, ಪ್ರತಿಯೊಂದಕ್ಕೂ ಅದರದ್ದೇ ಆದ ಮೌಲ್ಯಗಳಿರುತ್ತವೆ.

ಅಡುಗೆ ಬರಹಗಳಿಗೂ ಕೆಲವು ನಿಯಮಗಳನ್ನು ಪಾಲಿಸಬೇಕು. ಮೊದಲನೆಯದಾಗಿ, ಯಾವ ಪತ್ರಿಕೆಗೆ ಕಳುಹಿಸಬೇಕೆಂದು ಯೋಚಿಸಿದ್ದಿರೋ, ಆ ಪತ್ರಿಕೆಯಲ್ಲಿ, ನೀವು ಕಳುಹಿಸಬೇಕೆಂದಿರುವ ಅಡುಗೆಯ ಬಗ್ಗೆ ಇತ್ತೀಚೆಗೆ ಬರಹ ಬಂದಿದೆಯೇ ಎಂದು ಗಮನಿಸಿ. ಈಗಾಗಲೇ ಪ್ರಕಟವಾಗಿದ್ದರೆ, ಪತ್ರಿಕೆಯವರು ಕೆಲವು ತಿಂಗಳುಗಳ ನಂತರವೇ ಪರಿಗಣಿಸುವರಷ್ಟೆ. ಹಾಗಾಗಿ, ಬೇರೆ ಅಡುಗೆಯನ್ನು ಆಯ್ಕೆ ಮಾಡಿ ಅಥವಾ ಬೇರೆ ಪತ್ರಿಕೆಯತ್ತ ಗಮನ ಹರಿಸಿ.  ಪತ್ರಿಕೆಗಳಲ್ಲಿ  ಈಗಾಗಲೇ ಬಂದಿದೆಯೇ ಎಂದು ಹುಡುಕಲು ಸುಲಭೋಪಾಯ ಏನೆಂದರೆ, ಗೂಗಲ್ ನಲ್ಲಿ ಆ ಪತ್ರಿಕೆಯ ಹೆಸರು ಮತ್ತು ನಿಮ್ಮ ಆಯ್ಕೆಯ ತರಕಾರಿ/ಅಡುಗೆಯ ಹೆಸರನ್ನು ಬರೆದು ಹುಡುಕಿ. ಈಗಾಗಲೇ ಪ್ರಕಟವಾಗಿದ್ದರೆ, ಇ-ಪೇಪರ್ ನಲ್ಲಿ ಕಾಣಿಸುತ್ತವೆ.

ಈಗೀಗ ಬಹುತೇಕ ಮನೆಗಳಲ್ಲಿ ಐದಾರು ಮಂದಿ ಇದ್ದರೆ ಅದೇ ಹೆಚ್ಚು. ಹಾಗಾಗಿ, ಅಡುಗೆಯ ಪ್ರಮಾಣವು ಚಿಕ್ಕ ಕುಟುಂಬಕ್ಕೆ ಸಾಕಾಗುವಷ್ಟಿದ್ದರೆ ಒಳ್ಳೆಯದು.   ಅಳತೆಯ ಮಾಪನವು ಸೇರು, ಪಾವು ಎಂಬ ಹಳೆಯ ಪದ್ದತಿಯಲ್ಲಿದ್ದರೆ, ಈಗಿನ ಎಲ್ಲಾ ಓದುಗರಿಗೂ ಅರ್ಥವಾಗದು. ಹಾಗಾಗಿ ಅಳತೆಯನ್ನು ಕಪ್, ಸ್ಪೂನ್ ಗಳ ಪ್ರಮಾಣದಲ್ಲಿ ತಿಳಿಸಿದರೆ ಒಳ್ಳೆಯದು.

ಆಯಾ ಋತುವಿನಲ್ಲಿ ಸಿಗುವ ತರಕಾರಿಯ ಅಡುಗೆ, ಬೇಸಿಗೆಯಲ್ಲಿ ತಂಪು ಅಡುಗೆ/ಪಾನೀಯಗಳು, ಚಳಿಗಾಲದಲ್ಲಿ ಬಿಸಿ ಅಡುಗೆ/ಸೂಪ್ ಗಳು, ನಿರ್ಧಿಷ್ಟ ಹಬ್ಬಕ್ಕೆ ಸೂಕ್ತವಾದ ಅಡುಗೆ……ಹೀಗೆ ಸಾಂದರ್ಭಿಕತೆಯನ್ನು ಗಮನಿಸಿಕೊಳ್ಳಬೇಕು.  ಸ್ಪಷ್ಟವಾದ, ಸುಂದರವಾದ, ಸ್ವಲ್ಪ ಮಟ್ಟಿಗೆ ಕಲಾತ್ಮಕವಾಗಿ ಜೋಡಿಸಿದ ಅಡುಗೆಯ ಫೊಟೊವನ್ನು ಲಗತ್ತಿಸಬೇಕು. ಮೊಬೈಲ್ ಫೋನ್ ನಲ್ಲಿ ಕ್ಲಿಕ್ಕಿಸಿದ ಚಿತ್ರಗಳಾದರೂ ಅಡ್ಡಿಯಿಲ್ಲ. ಉತ್ತಮ ರೆಸ್ಲ್ಯೂಷನ್ ನಲ್ಲಿ ಇರಬೇಕು. ಅಂದರೆ, ಕನಿಷ್ಟ 2 MB ಗಾತ್ರದಲ್ಲಿರಬೇಕು. ಆಹಾರದ ಪ್ರೆಸೆಂಟೇಶನ್ ಆಕರ್ಷಕವಾಗಿರಲಿ, ಹಾಗೆಂದು ಮುಖ್ಯ ಅಡುಗೆಯನ್ನು ಮರೆಮಾಚುವಷ್ಟು ಅತಿಯಾದ ಅಲಂಕಾರವೂ ಬೇಡ.

ಹೀಗೆ, ಸರಳವಾದ ಬರೆದ ರೆಸಿಪಿಯೊಂದಿಗೆ, ಸೂಕ್ತವಾದ ಚಿತ್ರಗಳನ್ನೂ ಲಗತ್ತಿಸಿದ ಮೇಲೆ, ಆ ರೆಸಿಪಿಗಳ ಸಾಂದರ್ಭಿಕತೆ / ಕೆಲವು ಉಪಯುಕ್ತ ಸೂಚನೆಗಳು / ಆರೋಗ್ಯಕ್ಕೆ ಹೇಗೆ ಪೂರಕ …..ಇತ್ಯಾದಿ ಯಾವುದಾದರೂ ವಿಶೇಷತೆಯ ಬಗ್ಗೆ   5-6 ಸಾಲುಗಳ ಸಣ್ಣ ಟಿಪ್ಪಣಿಯನ್ನು ಬರೆದು ಕಳುಹಿಸಿದರೆ ಇನ್ನೂ ಉತ್ತಮ.

ಇನ್ನು ಪ್ರವಾಸ ಲೇಖನಗಳನ್ನು ಬರೆಯುವಾಗ ಉತ್ತಮ ಗುಣಮಟ್ಟದ ಚಿತ್ರಗಳು ಅತ್ಯಗತ್ಯ. ಪ್ರವಾಸದಲ್ಲಿ ಭೇಟಿಕೊಟ್ಟ ಸ್ಥಳದ ವಿವರಗಳಿಗಿಂತಲೂ, ಸ್ವಂತ ಅನುಭವಗಳನ್ನು ದಾಖಲಿಸಿದರೆ ಹೆಚ್ಚು ಆಕರ್ಷಕವೆನಿಸುತ್ತವೆ. ನಮ್ಮ ವೈಯುಕ್ತಿಕ ಮಾಹಿತಿಗಾಗಿ ದಿನಚರಿಯ ರೂಪದಲ್ಲಿ ಅಥವಾ ನೋಟ್ಸ್ ನ ಹಾಗೆ ಬರೆಯಬಹುದಾದರೂ, ಪತ್ರಿಕೆಯಲ್ಲಿ ಹೆಚ್ಚಿನ ವಿವರ ಬೇಕಿಲ್ಲ. ಸಂಕ್ಷಿಪ್ತ ವರದಿಯ ಜೊತೆಗೆ, ವಿಶಿಷ್ಟ ಎನಿಸಿದ ವಿಚಾರಗಳು, ಹೋಗುವ ದಾರಿ, ಅಂದಾಜು ವೆಚ್ಚ, ತೆಗೆದುಕೊಳ್ಳಬೇಕಾದ ಮುಂಜಾಗರೂಕತೆಗಳ ಬಗ್ಗೆಯೂ ತಿಳಿಸಿದರೆ ಮುಂದೆ ಭೇಟಿ ಕೊಡುವವರಿಗೆ ಅನುಕೂಲವಾಗುವುದು.

ಕೊನೆಯದಾಗಿ, ನನ್ನ ಸೀಮಿತ ಬರವಣಿಗೆಯ ಅನುಭವದಲ್ಲಿ ಅರ್ಥೈಸಿಕೊಂಡ ಸಂಗತಿಗಳನ್ನು ‘ಪತ್ರಿಕೆಗೆ ಬರೆಯುವ ಮುನ್ನ..’ ಲೇಖನ ಸರಣಿಯಲ್ಲಿ ಬರೆದಿದ್ದೇನೆ. ನನಗೇ ಮರೆತುಹೋಗಬಾರದೆಂಬುದೇ ಇದರ ಮುಖ್ಯ ಉದ್ದೇಶ. ಓದುಗರಿಗೆ ಯಾರಿಗಾದರೂ ಉಪಯುಕ್ತವೆನಿಸಿದರೆ ನನ್ನ ಶ್ರಮ ಸಾರ್ಥಕ.

ಎಲ್ಲರಿಗೂ ಹೊಸವರ್ಷವು ನೆಮ್ಮದಿ, ಸಂತಸ, ಸಂಭ್ರಮ ತರಲಿ ಎಂದು ಹಾರೈಸುತ್ತೇನೆ.

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ :  http://surahonne.com/?p=25547

(ಮುಗಿಯಿತು)


-ಹೇಮಮಾಲಾ.ಬಿ, ಮೈಸೂರು

14 Responses

 1. Avatar ASHA nooji says:

  ಉತ್ತಮ ಸಲಹೆ .ಮಾಲ .ಖುಷಿ ಆಯಿತು ನನಗೆ .ಓದಿ .

 2. Avatar Anupama Benachinamardi says:

  Definitely this series was superb and you are a good learner ma’am. Please focus on travelogue series ma’am.. I really wanted to read and enjoy

 3. Avatar Sharada Patil says:

  ತುಂಬಾ ಉಪಯುಕ್ತ ಮಾಹಿತಿ

 4. Avatar Parvathi K says:

  ಈ 4 ಸರಣಿಗಳಲ್ಲಿ ಪತ್ರಿಕೆಗೆ ಕಳುಹಿಸಲು ಅರಿಯವದರಿಗೆ ಬಹಳ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದೀರಿ ಹೇಮಾ ಅವರೆ.
  ನಾನಂತೂ ಇದರಿಂದ ತುಂಬಾ ಕಲಿತೆ. ತುಂಬು ಹೃದಯದ ಧನ್ಯವಾದಗಳು.

 5. Avatar Mohini Damle says:

  ಬಹಳ ಅಗತ್ಯವಾದ ಮಾಹಿತಿಗಳನ್ನು ನೀಡಿದ್ದೀರಿ ಹೇಮಾ. ಉಪಯುಕ್ತ ಲೇಖನ ಸರಣಿ

 6. Avatar Anitha Lakshmi says:

  ಉತ್ತಮ ಮಾಹಿತಿ

 7. Avatar Jessy Pudumana says:

  ಲೇಖನ ಸರಣಿ ಉತ್ತಮವಾಗಿತ್ತು. ಅಭಿನಂದನೆಗಳು ಮೇಡಂ

 8. Avatar Nalini Bheemappa says:

  ತುಂಬಾ ಉಪಯುಕ್ತ ವಾಗಿದೆ

 9. Avatar Sowmya Praveen says:

  ಒಳ್ಳೆಯ ಮಾಹಿತಿ.. ಧನ್ಯವಾದಗಳು ಮೇಡಂ

 10. Avatar ಸುರೇಖಾ ಭೀಮಗುಳಿ says:

  ಒಳ್ಳೆಯದಿತ್ತು ಲೇಖನ ಮಾಲಿಕೆ ಹೇಮಾ… ಖಂಡಿತಾ ಉಪಯುಕ್ತ.

 11. Avatar ಸುಬ್ರಹ್ಮಣ್ಯ ಹೆಚ್.ಎನ್. says:

  ಖಂಡಿತ ಉಪಯುಕ್ತ.

 12. Avatar ನಯನ ಬಜಕೂಡ್ಲು says:

  ಅತ್ಯುತ್ತಮ ಲೇಖನ ಸರಣಿ. ಖಂಡಿತಾ ಬರವಣಿಗೆಯಲ್ಲಿ ಆಸಕ್ತಿ ಇರುವವರಿಗೆ ಹಾಗು ಹೊಸ ಬರಹಗಾರರಿಗೆ ಉಪಯೋಗ ಆಗುವಂತದ್ದು .

 13. Avatar Shankari Sharma says:

  ಹೊಸ ಬರಹಗಾರರಿಗೆ ಉತ್ತಮ ಕೈ ದೀವಿಗೆ.

 14. Avatar Parvathikrishna says:

  ಒಳ್ಳೆಯ ಲೇಖನ ಮಾಲೆ .,,ಉಪಯುಕ್ತ ವಿಚಾರಗಳು. ಧನ್ಯವಾದಗಳು ಹೇಮಾ .

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: