ಪತ್ರಿಕೆಗೆ ಬರೆಯುವ ಮುನ್ನ…..ಭಾಗ 1

Share Button

ಸ್ವಯಂಶಿಸ್ತು ಮತ್ತು ತಾಳ್ಮೆ ಅಗತ್ಯ

‘ನನಗೂ ಬರೆಯಲು ಆಸಕ್ತಿ ಇದೆ, ಪೇಪರ್ ಗೆ ಹೇಗೆ ಕಳಿಸುವುದು? ‘
‘ನಾನೂ ಪೇಪರ್ ಗೆ ಕಳುಹಿಸುತ್ತಾ ಇರ್ತೇನೆ, ಪ್ರಕಟ ಆಗಲ್ಲ… ‘
‘ನಮ್ಮ ಬರಹ ಎಲ್ಲಿ ಹಾಕ್ತಾರೆ…’  ‘ನಿಮಗೆ ಅಲ್ಲಿ ಪರಿಚಯದವರಿದ್ದಾರಾ?.’

ಈ ರೀತಿಯ ಕೆಲವು ಮಾತುಗಳನ್ನು ಅಥವಾ ಫೇಸ್ ಬುಕ್ ಪ್ರತಿಕ್ರಿಯೆಗಳನ್ನು ಕೇಳಿದ್ದೇವೆ ಅಥವಾ ಓದಿರುತ್ತೇವೆ. ಇತ್ತೀಚೆಗೆ ಅಲ್ಪಸ್ವಲ್ಪ ಪತ್ರಿಕೆಗೆ ಬರೆಯಲಾರಂಭಿಸಿದ ನನಗೂ ಆರಂಭದಲ್ಲಿ ಇದೇ ಅಳುಕುಗಳು ಕಾಡಿದ್ದುವು. ನಿಧಾನವಾಗಿ ಕೆಲವು ಬರಹಗಳು ಮುದ್ರಿತ ಪತ್ರಿಕೆಗಳಲ್ಲಿ ಪ್ರಕಟವಾದಾಗ ನಾನೂ ಬರೆಯಬಲ್ಲೆ ಎಂಬ ವಿಶ್ವಾಸ ಮೂಡಿತು. ನಾನು ಕಳುಹಿಸಿದ ಎಲ್ಲಾ ಬರಹಗಳು ಈಗಲೂ ಪ್ರಕಟವಾಗುತ್ತಿಲ್ಲ.ಈ ನಿರೀಕ್ಷೆ ಬರಹಗಾರರಿಗೆ ಇರಬಾರದು ಕೂಡ.  ಆಗಾಗ್ಗೆ ಬರೆಯುವ ಹಾಗೂ ‘ಸುರಹೊನ್ನೆ’ಯನ್ನು ನಿರ್ವಹಣೆ ಮಾಡುವ ನನ್ನ ಸೀಮಿತ ಅನುಭವದ ಮೇರೆಗೆ, ನಾನು ಅರ್ಥೈಸಿಕೊಂಡ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ:

ಪತ್ರಿಕೆಗೆ ಬರೆಯುವುದೆಂದರೆ, ಕೈಬರಹದಲ್ಲಿ ಬರೆದು , ತಿರಸ್ಖೃತವಾದರೆ ಹಸ್ತಪ್ರತಿಗಾಗಿ ಸ್ವವಿಳಾಸದ ಲಕೋಟೆಯನ್ನೂ ಲಗತ್ತಿಸಿ, ಅಂಚೆ ಚೀಟಿ ಹಚ್ಚಿ ಪೋಸ್ಟ್ ಮಾಡಿ, ಪ್ರಕಟವಾಗುತ್ತದೆಯೇ, ಗೌರವ ಪ್ರತಿ ಬಂದಿದೆಯೇ ಎಂದು ತವಕದಿಂದ ಕಾಯುತ್ತಿದ್ದ ಕಾಲವಿತ್ತು.  ಬದಲಾದ ಈ ದಿನಗಳಲ್ಲಿ  ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿ, ಆಯಾ ಪತ್ರಿಕೆಯ ಇ-ಮೈಲ್ ಗೆ ಕಳುಹಿಸಿದರಾಯಿತು.

ಆಸಕ್ತರು ವಾಟ್ಸಾಪ್ , ಫೇಸ್ ಬುಕ್ , ವಿವಿಧ ಗ್ರೂಪ್ ಗಳು, ತಮ್ಮದೇ ಬ್ಲಾಗ್ ಹಾಗೂ ಇ-ಪತ್ರಿಕೆಗಳಿಗೆ ಬರೆಯುವುದರಿಂದ ಈಗ ಅಂತರ್ಜಾಲದಲ್ಲಿ ಬರೆಯುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಆಸಕ್ತರ ಭಾಷಾ ಕೌಶಲ್ಯ ಹಾಗೂ ಅಭಿವ್ಯಕ್ತಿಗೆ ಇವುಗಳು ಉತ್ತಮ ವೇದಿಕೆಯನ್ನು ಸೃಷ್ಟಿಸಿರುವುದು ನಿಜ. ಆದರೆ , ಅವುಗಳನ್ನು ಅತಿಯಾಗಿ ಬಳಸಿದರೆ ಬೆಲೆ ಕಳೆದುಕೊಳ್ಳುವುದೂ ಅಷ್ಟೇ ಸತ್ಯ.

ಗೊತ್ತಿದ್ದೋ ಗೊತ್ತಿಲ್ಲದೆಯೋ, ಕೆಲವರು ಬರಹವನ್ನು ತಮ್ಮ ಫೇಸ್ ಬುಕ್ ನಲ್ಲಿಯೂ ಲಗತ್ತಿಸಿ, ಬೇರೆ ಕೆಲವು ಗ್ರೂಪ್ ಗಳಲ್ಲಿ ಪೋಸ್ಟ್ ಮಾಡಿ, ಆಮೇಲೆ ಕೆಲವು ಅಂತರ್ಜಾಲ ಪತ್ರಿಕೆಗಳು ಹಾಗೂ ಮುದ್ರಿತ ಪತ್ರಿಕೆಗಳಿಗೂ ಒಂದೇ ಇ-ಮೈಲ್ ನಲ್ಲಿ ಏಕಕಾಲದಲ್ಲಿ ಕಳುಹಿಸುತ್ತಾರೆ! ಇದು ಮುಗ್ಧತೆಯೂ ಇರಬಹುದು, ಪ್ರಚಾರಪ್ರಿಯತೆಯೂ ಆಗಿರಬಹುದು. ಆದರೆ ಗಮನಿಸಬೇಕಾದ ಅಂಶವೇನೆಂದರೆ, ಯಾವುದೇ ಪತ್ರಿಕೆಯವರು ಈ ರೀತಿ ‘ಊರಿಗೆಲ್ಲಾ ಹಂಚಿದ’ ಬರಹವನ್ನು ಪ್ರಕಟಿಸಲಾರರು ಹಾಗೂ ಅಂತಹ ಲೇಖಕರ ಮುಂದಿನ ಬರಹಗಳನ್ನು ಪರಿಗಣಿಸದಿರುವ ಸಾಧ್ಯತೆಗಳೇ ಹೆಚ್ಚು.

ಫೇಸ್ ಬುಕ್ , ವಾಟ್ಸಾಪ್, ವಿವಿಧ ಗ್ರೂಪ್ ಗಳು ತಕ್ಷಣವೇ ಅವರವರ ವೃತ್ತದಲ್ಲಿರುವ ಓದುಗರನ್ನು ತಲಪುತ್ತವೆ. ಬಹುಶ : ಹೆಚ್ಚಿನ ಲೈಕ್ , ಕಮೆಂಟ್ ಗಳನ್ನು ಪಡೆಯಬಹುದು. ನಮಗೆ ಇಷ್ಟ ಬಂದಂತೆ ಬರೆದು, ನಾವೇ ಪೋಸ್ಟ್ ಮಾಡಿಕೊಳ್ಳುವುದಕ್ಕೂ, ಇನ್ನೊಬ್ಬರು ‘ಸಂಪಾದಿಸಿ’ ಪ್ರಕಟಿಸುವುದಕ್ಕೂ ವ್ಯತ್ಯಾಸವಿದೆ. ಅದರ ಮೌಲ್ಯ ಬೇರೆಯೇ ಇದೆ. ನಮ್ಮ ಬರಹವು ಪತ್ರಿಕೆಯಲ್ಲಿ ಪ್ರಕಟವಾಗಬೇಕು, ಅದು ನಮ್ಮ ಪರಿಚಿತರಿಗೆ ತಿಳಿಯಬೇಕೆಂಬ ಹಂಬಲ ಸಹಜ. ಇದಕ್ಕೆ ಸುಲಭೋಪಾಯ ಏನೆಂದರೆ, ಪತ್ರಿಕೆಯಲ್ಲಿ ಪ್ರಕಟವಾದ ಮೇಲೆ, ಅದರ ಲಿಂಕ್ ಅಥವಾ ಚಿತ್ರ ಸಮೇತ ವಾಟ್ಸಾಪ್, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವುದು.

ಕೆಲವರು, ತಮ್ಮ ಅರಿವಿಲ್ಲದೆ ಒಂದು ಪತ್ರಿಕೆಗೆ ಕಳುಹಿಸಿದ ಇ-ಮೈಲ್ ಅನ್ನು ಕೆಲವು ದಿನಗಳ ನಂತರ ಇನ್ನೊಂದು ಪತ್ರಿಕೆಗೆ ಯಥಾವತ್ ‘ಫಾರ್ ವರ್ಡ್’ ಮಾಡುತ್ತಾರೆ. ಇದರಿಂದಾಗಿ, ಎರಡನೆಯ ಇ-ಮೈಲ್ ತಲಪಿದವರಿಗೆ, ಮೊದಲನೆಯ ಪತ್ರಿಕೆಯಲ್ಲಿ ‘ಅಸ್ವೀಕೃತ’ವಾದ ಬರಹ ಇದು ತಕ್ಷಣವೇ ಗೊತ್ತಾಗುತ್ತದೆ! ಲೇಖಕರೇ ತಮ್ಮ ಬಗ್ಗೆ ನೆಗಟಿವ್ ಪಬ್ಲಿಸಿಟಿ ಕೊಡುವುದು ಎಂದರೆ ಹೀಗೆ! ಈ ರೀತಿಯ ಗಡಿಬಿಡಿ ಸಲ್ಲದು. ಇನ್ನೊಂದು ಪತ್ರಿಕೆಯನ್ನು ಉದ್ದೇಶಿಸಿ, ಹೊಸ ಇ-ಮೈಲ್ ಮಾಡಿದರೆ ಈ ಮುಜುಗರವನ್ನು ತಪ್ಪಿಸಬಹುದು.

ಯಾವುದೇ ಬರಹವನ್ನು ಒಂದು ಪತ್ರಿಕೆಗೆ ಕಳುಹಿಸಿದ ಮೇಲೆ, ಕನಿಷ್ಟ ಹದಿನೈದು ದಿನಗಳಾದರೂ ಕಾದು, ಅಲ್ಲಿಂದ ಪ್ರತಿಕ್ರಿಯೆ ಬಂದಿಲ್ಲವಾದರೆ ಅಥವಾ ಪ್ರಕಟಿಸಿಲ್ಲವಾದರೆ, ಒಮ್ಮೆ ಇ-ಮೈಲ್ ನಲ್ಲಿ ವಿಚಾರಿಸಿ, ಆಮೇಲೆ ಇನ್ನೊಂದು ಪತ್ರಿಕೆಗೆ ಕಳುಹಿಸಿದರೆ ತೊಂದರೆಯಾಗದು. ಒಂದೇ ಬರಹವನ್ನು ಬೇರೆ ಬೇರೆ ಪತ್ರಿಕೆಗಳಿಗೆ ಪ್ರತ್ಯೇಕ ಇ-ಮೈಲ್ ಗಳಲ್ಲಿ ಕಳುಹಿಸಿದರೂ, ಅದು ಏಕಕಾಲದಲ್ಲಿ ಪ್ರಕಟವಾದರೆ ಬರಹಗಾರರು ತಾವಾಗಿಯೇ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಯಾವ ಪತ್ರಿಕೆಗೆ ಲೇಖನವನ್ನು ಕಳುಹಿಸಬೇಕೆಂಬ ಉದ್ದೇಶವಿದೆಯೋ ಆ ಪತ್ರಿಕೆಯ ಸಂಬಂಧಿತ ವಿಭಾಗ ಅಥವಾ ಪುರವಣಿಯನ್ನು ಕೂಲಂಕುಷವಾಗಿ ಗಮನಿಸಿ ಓದುವುದು ಅವಶ್ಯ. ಉದಾ: ಯಾವ ರೀತಿಯ ಬರಹಗಳು ಪ್ರಕಟವಾಗುತ್ತಿವೆ? ಲೇಖನದ ಅಂದಾಜು ಅಕ್ಷರಮಿತಿ ಎಷ್ಟು? ಪ್ರವಾಸ ಲೇಖನಗಳಾದರೆ ಎಷ್ಟು ಚಿತ್ರಗಳಿದ್ದುವು? ಶೈಲಿ ಹೇಗಿದೆ? ವಿಶೇಷ ಬರಹಗಳಿಗೆ ಆಹ್ವಾನವಿದೆಯೇ ? ಕಳುಹಿಸಬೇಕಾದ ಇ-ಮೈಲ್ ವಿಳಾಸ ಯಾವುದು? ಪುರವಣಿ ವಾರದ ಯಾವ ದಿನ ಪ್ರಕಟವಾಗುತ್ತದೆ? ……ಇತ್ಯಾದಿ

ಸಾಮಾನ್ಯವಾಗಿ, ಯಾವುದೇ ಪುರವಣಿಗೆ ಅದು ಪ್ರಕಟವಾಗಲಿರುವ ಒಂದು ವಾರ ಮೊದಲು ತಲಪುವಂತೆ ಬರಹವನ್ನು ಕಳುಹಿಸಿದರೆ ಉತ್ತಮ. ಪತ್ರಿಕಾ ಕಚೇರಿಗೆ ಆಗಲೇ ಹಲವಾರು ಬರಹಗಳು ಬಂದಿರುತ್ತವೆ.  ಹಾಗಾಗಿ , ಸಾಂದರ್ಭಿಕತೆ ಮತ್ತು ಬರಹದ ಗುಣಮಟ್ಟವನ್ನು ಗಮನಿಸಿಕೊಂಡು ಆದ್ಯತೆ ಕೊಡಬೇಕಾಗುತ್ತದೆ. ಪ್ರತಿ ಪತ್ರಿಕೆಗೆಗೂ ತನ್ನದೇ ಆದ ಧ್ಯೇಯ, ಮಿತಿ, ಚೌಕಟ್ಟು ಹಾಗೂ ನಿಯತಕಾಲಿಕತೆ ಇರುತ್ತದೆ. ಹಾಗಾಗಿ. ಮುದ್ರಿತ ಪತ್ರಿಕೆಯಲ್ಲಿ ಪ್ರಕಟವಾಗಬೇಕಿದ್ದರೆ ಬರಹಗಾರರಿಗೆ ತಾಳ್ಮೆ ಹಾಗೂ ಸ್ವಯಂಶಿಸ್ತು ಇರಬೇಕು.

(ಮುಂದುವರಿಯುವುದು)
PC: Internet

-ಹೇಮಮಾಲಾ.ಬಿ

7 Responses

 1. Avatar ನಯನ ಬಜಕೂಡ್ಲು says:

  ಉತ್ತಮ ಮಾರ್ಗದರ್ಶನ ಹೊಸ ಬರಹಗಾರರಿಗೆ ಹಾಗು ಪತ್ರಿಕೆಗಳಿಗೆ ಬರಹಗಳನ್ನು ಕಳುಹಿಸುವವರಿಗೆ . ಮುಕ್ತವಾಗಿ ಪತ್ರಿಕೆಗಳಿಗೆ ಬರಹಗಳನ್ನು ಕಳುಹಿಸುವ ವಿಚಾರದಲ್ಲಿ ನಿಮ್ಮ ಅನಿಸಿಕೆ , ಅಭಿಪ್ರಾಯಗಳನ್ನು ಹಂಚಿಕೊಂಡ ರೀತಿ ಬಹಳ ಇಷ್ಟವಾಯಿತು .

 2. Avatar ಕೃಷ್ಣವೇಣಿ says:

  ಅರ್ಥವತ್ತಾದ ಮಾಹಿತಿ. ಈ ಕ್ಷೇತ್ರದಲ್ಲಿ ಹೇಗೆ, ಏನು ಎಂಬ ವಿವರ ತಿಳಿದಲ್ಲಿ ಅನೇಕ ಬರಹಗಾರರಿಗೆ ಉಪಯುಕ್ತ ಆಗಬಲ್ಲುದು. ಧನ್ಯವಾದಗಳು.

 3. Avatar ಕೃಷ್ಣವೇಣಿ says:

  ಅರ್ಥ ಪೂರ್ಣ ಮಾಹಿತಿ. ಓದುಗರಿಗೆ ಉಪಯುಕ್ತ. “ಊರಿಗೆಲ್ಲ ಹಂಚಿದ ಬರಹ…

  ..ಉಪಯುಕ್ತ ಮಾಹಿತಿ. ಓದುಗರಿಗೆ ಸದುಪಯೋಗ ಆಗುವ ವಿವರಗಳನ್ನು ಕೊಟ್ಟಿದ್ದೀರಿ. “ಊರಿಗೆಲ್ಲ ಹಂಚಿದ…… “ಅಪ್ಪಟ ಸತ್ಯ.

 4. Avatar ಹರ್ಷಿತಾ says:

  ತುಂಬಾ ಉಪಯುಕ್ತವಾಗುವಂತಹ ಮಾಹಿತಿ

 5. Avatar Mantheshakumar. B. N. says:

  ಒಳ್ಳೆಯ ಮಾಹಿತಿ ನೀಡಿದ್ದೀರಿ. ನಮಸ್ತೆ

 6. Avatar ASHA nooji says:

  ನನಗುಇದೇ ಯೋಚನೆ ಇತ್ತು ,ಈಗ ನಿಮ್ಮ ಮಾರ್ಗದರ್ಶನದಂತೆ ,ಬರೆಯುವೆ ನೋಡ ,ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು .

 7. Avatar Shankari Sharma says:

  ಅತ್ಯುಪಯುಕ್ತ ಮಾಹಿತಿಗಾಗಿ ಧನ್ಯವಾದಗಳು ಮಾಲಾ. ಪ್ರೋತ್ಸಾಹ, ಉತ್ತೇಜನಗಳಿಂದ ಧೈರ್ಯ ತುಂಬಿ ನಮ್ಮಂತಹ ಆರಂಭಿಕರಿಗೆ ಮುಂದೆ ಹೋಗಲು ದಾರಿ ತೋರಿಸಿದ ನಿಮಗೆ ನಮ್ಮೆಲ್ಲರ ಪರವಾಗಿ ತುಂಬು ಹೃದಯದ ಧನ್ಯವಾದಗಳು.

Leave a Reply to ಹರ್ಷಿತಾ Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: