ತನ್ನಂತೆ ಪರರೆಂದು ಬಗೆಯುವ ಮುನ್ನ….

Share Button
ಕುಟುಕಿ ಹೋಗುವವರ ನಡುವೆ ಕಡೆದಿಟ್ಟಂತೆ ನಿಲ್ಲುವುದು ಇಂದಿನ ಅಗತ್ಯ ಎಂಬ ವಿಷಯ ನನಗೆ ಆಗಾಗ್ಗೆ ಮನವರಿಕೆ ಆಗುತ್ತಲೇ ಇರುತ್ತದೆ. ನಾನಂತೂ ಈ ವಿಷಯದಲ್ಲಿ ಬಹಳ ನಿಷ್ಠುರಳು. ಪ್ರೀತಿ ವಿಶ್ವಾಸಕ್ಕೆ ಸದಾ ಮನ ಮಣಿಯುವುದು. ಆದರೆ ಹಣಿಯಲು ನೋಡುವವರ ಎದುರಲ್ಲಿ ಅದೇ ಮನ ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯೇ ಸತ್ಯ ಎಂದು ಸಾರಲು ಹೆಡೆ ಎತ್ತುವುದು. ಹಣಿಯಲು ಹವಣಿಸುವವರ ಕುರಿತು ನನ್ನ ಬಳಿ ಹಲವಾರು ಸ್ವಾನುಭವಗಳ ಪ್ರಸಂಗಗಳ ಸುರುಳಿಯೇ ಇದೆ. ಇಂತಹ ಪ್ರಸಂಗಗಳು ಆದಾಗೆಲ್ಲಾ ಎರಡು ಘಟನೆಗಳು ಆಗಿಯೇ ತೀರುವುದು ನಿಶ್ಚಿತ.
1) ನಾನವರಿಗೆ ತಿರುಗೇಟು ನೀಡುತ್ತಾ ಅವರಿಗೆ ಎಚ್ಚರಿಕೆ ನೀಡಿ ಇರುವ ವಿಚಾರದ ಸತ್ಯಾಸತ್ಯತೆ ಕುರಿತು ಅರ್ಥಮಾಡಿಸಿರುತ್ತೇನೆ.
2) ಇಂತಹ ಘಟನೆಗಳಿಂದ ನನ್ನ ಆತ್ಮವಿಶ್ವಾಸ ಇಮ್ಮಡಿಸುವುದನ್ನು ಪ್ರತ್ಯಕ್ಷ ಕಂಡುಕೊಳ್ಳುತ್ತೇನೆ.
.
ಅದರ ಒಂದು ಉದಾಹರಣೆ ಇಲ್ಲಿ ದಾಖಲಿಸಲೇ ಬೇಕು…..
ಮೊನ್ನೆ ಎಂದರೆ ತೀರಾ ಮೊನ್ನೆಯಲ್ಲ. ಕೆಲವು ತಿಂಗಳುಗಳ ಕೆಳಗೆ, ಒಂದು ದೂರದ ಊರಿಗೆ ಸಮಾನಮನಸ್ಕರು ಸೇರಿ ಆಯೋಜಿಸಲಾಗಿದ್ದ ಒಂದು ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನ ಮಕ್ಕಳೊಡನೆ ಹೋಗಿದ್ದೆ. ಹಲವು ಸಹೃದಯರ ಪರಿಚಯ, ಹಿರಿಯ ಸಾಹಿತಿಗಳ ಒಡನಾಟ ಬಹಳ ಆಪ್ಯಾಯಮಾನ ಎನಿಸಿತ್ತು. ಅಲ್ಲಿ ನನ್ನಂತೆಯೇ  ದೂರದೂರುಗಳಿಂದ ಬಂದಿದ್ದ ಸಾಹಿತ್ಯಾಸಕ್ತರಿದ್ದರು. ಅವರಲ್ಲೊಬ್ಬರು ‘ಹಸಿರು ಕಣಿವೆ’ಯ ನಾಡಿನಿಂದ ಬಂದಿದ್ದರು. ಹಾಗೂ ನನಗೆ ಇತ್ತೀಚೆಗಷ್ಟೇ ಪರಿಚಿತರಾದವರು. ಹಾಗೆನ್ನುವುದಕ್ಕಿಂತಲೂ, ಇಷ್ಟು ದಿನಗಳವರೆಗೂ ಅವರು ಅಪರಿಚಿತರು ಎನ್ನುವುದೇ ಸರಿ.
.
ನನ್ನ ಬಳಿ ಮಾತನಾಡಲು ಬಂದವರು, ಮಾತಿನ ನಡುವೆ ಸರಕಾರಿ ಸೇವೆಗೆ ಸೇರುವ ಅವರ ಮಗನ ಹಂಬಲದ ಬಗ್ಗೆ ನನ್ನ ಬಳಿ ಹೇಳಿಕೊಂಡರು. ಹಾಗೆಯೇ ಅದರ ಸಾಧ್ಯತೆಗಳ ಬಗ್ಗೆ ವಿಚಾರಿಸಿದರು. ನಾನೂ ಸರಕಾರಿ ನೌಕರಿಯಲ್ಲಿ  ಇರುವುದರಿಂದ ಹಾಗೂ ಈ ಸೇವೆಗೆ ಸೇರುವಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ಆಯ್ಕೆಗೊಂಡು ಬಂದುದರಿಂದ ಆ ಕುರಿತು ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಹೇಳಲು ಉದ್ಯುಕ್ತಳಾದೆ. ಪರೀಕ್ಷಾ ಪ್ರಕ್ರಿಯೆಯ ಬಗ್ಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ನನಗೆ ಗೊತ್ತಿರುವುದನ್ನು ತಿಳಿಸಿಕೊಟ್ಟೆ. ಈಗ ಪರೀಕ್ಷಾ ಪ್ರಕ್ರಿಯೆಯು ಅಲ್ಪಸ್ವಲ್ಪ ಬದಲಾಗಿದೆ ಎಂದೂ.., ನನಗೆ ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವೆಂದೂ ಯಾವುದಾದರೂ ತರಬೇತಿ ಸಂಸ್ಥೆಗೆ ಸೇರುವ ಮೂಲಕ ಅವರ ಮಗ ಆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದೂ ತಿಳಿಸಿಕೊಟ್ಟೆ. ಹಾಗೆಯೇ ಸರಿಯಾಗಿ ತಯಾರಿ ಮಾಡಿಕೊಂಡು ಪರೀಕ್ಷೆಯನ್ನು ತುಂಬು ವಿಶ್ವಾಸ, ಧೈರ್ಯ, ಪ್ರಾಮಾಣಿಕತೆಯಿಂದ ಎದುರಿಸುವಂತೆ ಹೇಳಿ, ಯಶಸ್ಸು ಗಳಿಸಲಿ ಎಂದು ನನ್ನ ಶುಭಾಶಯಗಳನ್ನೂ ತಿಳಿಸಿದೆ.
.
ಬಹುಶಃ ಅವರಿಗೆ ಸತ್ಯ ಮಾರ್ಗಕ್ಕಿಂತಲೂ ಅನೇರವಾಗಿ ಆಯ್ಕೆಯಾಗುವ ಕುರಿತು ಮಾಹಿತಿ ಬೇಕಿತ್ತೇನೋ.. ಅಥವಾ ಅವರಿಗೆ ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದವರು ತಪ್ಪು ಮಹಿತಿ ನೀಡಿರಬಹುದೇನೋ…! ಅವರು ಹೀಗೆಂದರು.., ‘’ನಿರ್ದಿಷ್ಟ ಕೆಲಸಕ್ಕೆ ಆಯ್ಕೆಯಾಗಲು ಹಣ, ಅಧಿಕಾರ, ಪ್ರಭಾವ-ವಶೀಲಿಗಳನ್ನು ಹೇಗೆ ಬಳಕೆ ಮಾಡುವುದು? ಅವುಗಳು workout ಆಗುತ್ತವೆಯಾ..? ಹತ್ತಿರ ಹತ್ತಿರ ಒಂದು ಕೋಟಿ ಖರ್ಚು ಬೀಳುತ್ತದೆ selection ಗೆ ಎನ್ನುತ್ತಾರಲ್ಲಾ… ” ಎಂದು ಕೇಳಿದರು. ರಾಜ್ಯ ಸರಕಾರಿ ಸೇವೆಗೆ ನಾನು ನನ್ನ ಬ್ಯಾಚಿನಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಆಯ್ಕೆಯಾಗಿದ್ದರಿಂದ  ಅವರು ವಿಚಾರಿಸುತ್ತಿರುವ ವಿಷಯದ ಕುರಿತು ನನ್ನಲ್ಲಿ ಮಾಹಿತಿ ಕೊರತೆ ಇದೆ ಎಂದೂ ಅದೊಂದು ಸಾಮಾಜಿಕವಾಗಿ ಹರಿದಾಡುತ್ತಿರುವ ಸುಳ್ಳು ಎಂದೂ ತಿಳಿಸಿದೆ. ಮತ್ತೂ ಬೇರೆ ಬೇರೆ ರೀತಿ ಕೇಳಿದಾಗ, ಅದರ ಬಗ್ಗೆ ನನಗೆ ಗೊತ್ತಿಲ್ಲವೆಂದು ಪ್ರಾಮಾಣಿಕ ಮಾತುಗಳಲ್ಲಿ ಹೇಳಿದೆ. ಬಹುಶಃ ನನ್ನಿಂದ ಬೇರೆ ಉತ್ತರ ನಿರೀಕ್ಷಿಸಿದ್ದ ಅವರು ಎಲ್ಲ ಕೇಳಿಯಾದ ಮೇಲೆ “ಅದೂ ಸರಿ ಬಿಡಿ, ನಾನೂ ಕೆಲವರ ಬಳಿ ವಿಚಾರಿಸಿದ್ದೀನಿ, ಕೆಲಸಕ್ಕೆ ಸೇರಿದ ಮೇಲೆ ಯಾರನ್ನು ಕೇಳಿದ್ರೂ ನಾವು ದುಡ್ಡುಕೊಟ್ಟು ಬಂದ್ವಿ ಅಂತ ಒಪ್ಪಿಕೊಳ್ಳೋಲ್ಲ. ಪ್ರಾಮಾಣಿಕವಾಗಿಯೇ ಆಯ್ಕೆಯಾಗಿ ಬಂದ್ವಿ ಅಂತಾನೇ ಹೇಳೋದು, ಇರ್ಲಿ ಬಿಡಿ… ” ಎನ್ನುತ್ತಾ ನನ್ನ ಮರುಪ್ರತಿಕ್ರಿಯೆಗೂ ಕಾಯದೇ ಹೊರಟು ಹೋದರು…! ಬಹುಶಃ ಅವರಿಗೆ ತಮ್ಮ ಮಗನ ಆಯ್ಕೆಗೆ ಅಂತಹ ಯಾವುದಾದರೂ ವಾಮಮಾರ್ಗಗಳಲ್ಲಿ ಅವಕಾಶ ಸಿಗಬಹುದೇನೋ ಎಂಬ ಆಸೆ- ಹಂಬಲ ಇದ್ದಿರಬಹುದು.
.
.
ನನಗೆ ತಕ್ಷಣಕ್ಕೆ ಬಹಳ ಬೇಜಾರಾಯ್ತು. ಹೀಗೆ ವ್ಯವಸ್ಥೆಯನ್ನು ಪೂರ್ವಾಗ್ರಹ ಪೀಡಿತರಾಗಿ ನೋಡುವ ಅವರ ಕುರಿತು ‘ಅಯ್ಯೋ ಪಾಪ’ ಎನಿಸಿತು. ಇಂಥಾ ತಾಯಿಯ ಮಗನಾಗಿ ಬಹುಶಃ ತನಗಿಷ್ಟ ಇಲ್ಲದಿರುವುದನ್ನು ಓದಬೇಕಾದ ಒತ್ತಡಕ್ಕೆ ಒಳಗಾಗಿರಬಹುದಾದ ಅವರ ಮಗನ ಬಗ್ಗೆಯೂ ಕನಿಕರ ಮೂಡಿತು. ಹಾಗೆಯೇ…, ಹಲವು ಬಾರಿ ಹೀಗೆಯೇ ಯೋಚಿಸುವಂತೆ ಮಾಡಿರುವ ಪರಿಸ್ಥಿತಿಗಳ ಬಗ್ಗೆ, ಅದರಂತೆ ತಯಾರಾಗಿರುವ ಮನಸ್ಥಿತಿಗಳ ಬಗ್ಗೆ ಯೋಚಿಸಿ ಮತ್ತಷ್ಟು ಬೇಸರವಾಯ್ತು.
.
ಈ ಲೇಖನದ ಉದ್ದೇಶ ವ್ಯವಸ್ಥೆಯನ್ನು ಹಳಿಯುವುದೋ ವಿಮರ್ಶಿಸುವುದೋ ಅಥವಾ ಅವರ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ವಿಶ್ಲೇಷಿಸುವುದೋ ಅಲ್ಲ. ನಾವು ಸರಿ ಇದ್ದರೆ ಸಮಾಜವೂ ಸರಿ ಇರುತ್ತದೆ ಎಂಬುದು ಖಂಡಿತ ಸತ್ಯ.  ಅದಕ್ಕೆ ಪುಷ್ಠಿಕೊಡುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಅವುಗಳನ್ನು ನೋಡಿ ಅರಿತುಕೊಳ್ಳುವ ಬುದ್ಧಿ, ಒಳಗಣ್ಣು ನಮಗಿರಬೇಕು ಎಂಬುದನ್ನು ಸ್ಪಷ್ಟಪಡಿಸುವುದೇ ಆಗಿದೆ.
.
ಪ್ರತೀ ಸಲವೂ ಆಯ್ಕೆ ಪ್ರಕ್ರಿಯೆ ಕುರಿತು ನಡೆದಿರುವ ಹಲವಾರು ಹಗರಣಗಳು, ಮೋಸಜಾಲಗಳನ್ನು ಮಾಧ್ಯಮಗಳು, ಪೊಲೀಸ್ ಇಲಾಖೆ, ಸರಕಾರವು ಹೊರಗಿಡುತ್ತಿರುವುದನ್ನು ಕಂಡೂ., ತಿಳುವಳಿಕೆ ಇರುವ, ನಾಗರಿಕರು ಎನಿಸಿಕೊಂಡಿರುವ ಜನರೇ ಹೇಗೆ ಮೋಸಕ್ಕೆ ಮನಸ್ಸನ್ನು ಒಪ್ಪಿಸುತ್ತಾರೆ ಎಂದು ಆಶ್ಚರ್ಯವಾಗುತ್ತದೆ.
.
ಅದೆಲ್ಲಾ ಒಂದೆಡೆ ಇರಲಿ, ಆದರೆ ಹೀಗೆ ತೀರಾ ಅಪರಿಚಿತರನ್ನು ಅನುಚಿತವಾಗಿ ಏಕಾಏಕಿ ಪ್ರಶ್ನಿಸುವುದು ಎಂಥಾ ಸಂಸ್ಕೃತಿ..? ತಮ್ಮ ಅಜ್ಞಾನದ ಮಟ್ಟಕ್ಕೆ ಎದುರಿರುವವರನ್ನೂ ಇಳಿಸಿ, ಅಳೆದು ನೋಡುವ ಮೂಲಕ ಅವರನ್ನು ಮುಜುಗರಕ್ಕೆ ಈಡುಮಾಡುವ ಇಂಥ ಸೋಕಾಲ್ಡ್ ನಾಗರೀಕರ  ನಡವಳಿಕೆಯನ್ನು ಸುಧಾರಿಸುವುದು ಹೇಗೆ..?!
.
ಆ ಕ್ಷಣವೇ ಅವರ ಮಾತು- ಮನಸ್ಥಿತಿಯನ್ನು ಖಂಡಿಸಬೇಕು ಎನಿಸಿತ್ತು. ”SHORT CUT WILL CUT YOU SHORT“ ಎಂಬ ಮಾತನ್ನು ಸದಾಕಾಲ ನೆನಪಿಟ್ಟುಕೊಳ್ಳಿರೆಂದು ಅಕ್ಕರೆಯಿಂದ ತಿಳಿಸಬೇಕಿತ್ತು. ಅವರ ಮಗ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲೆಂದು ಶುಭನುಡಿಗಳನ್ನು ಆಡಬೇಕಿತ್ತು. ಆದರೆ ಏನುಮಾಡಲಿ ಬಹುಶಃ ಅವರಿಗೆ ತಮ್ಮ ಅನುಚಿತ ಮಾತುಗಳಿಗೆ ಪಶ್ಚಾತಾಪ ಉಂಟಾಗಿರಬಹುದು. ಏಕೆಂದರೆ, ನನ್ನನ್ನು ಎದುರಿಸುವ ಧೈರ್ಯ ತಾಳದೇ ಅವರಾಗಲೇ ಅವರ ಊರ ಕಡೆಗೆ ಓಡಿದ್ದರು…
.
– ವಸುಂಧರಾ. ಕೆ. ಎಂ., ಬೆಂಗಳೂರು.

.

5 Responses

  1. ನಯನ ಬಜಕೂಡ್ಲು says:

    ಫಸ್ಟ್ ಒಫ್ ಆಲ್ ,ನಿಮ್ಮ ಬಗ್ಗೆ ಹೆಮ್ಮೆ ಅನಿಸುತ್ತಿದೆ ಮೇಡಂ. ನನಗನ್ನಿಸೋದು ಪ್ರಾಮಾಣಿಕತೆಗೆ ಈಗಲೂ ಬೆಲೆ ಇದೆಯಾ? ಅಂತ. ಜನರೇ ಹಣದ ಹೊಳೆ ಹರಿಸಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ , ಅಧಿಕಾರಕ್ಕೆ ಬಂದ ಮೇಲೆ ಆ ಹಾಕಿದ ಹಣದ ಡಬಲ್ ಸುಲಿಗೆಗೆ ಇಳೀತಾರೆ , ಇನ್ನು ವ್ಯವಸ್ಥೆ ಎಕ್ಕುಟ್ಟು ಹೋಗೋಕೆ ಬೇರೇನು ಬೇಕು ?, ಇಂತಹವರ ನಡುವೆಯೂ ಪ್ರಾಮಾಣಿಕತೆ, ಪರಿಶ್ರಮ, ಒಳ್ಳೆಯತನಕ್ಕೆ ಬೆಲೆ ಕೊಡುವ ನಿಮ್ಮಂತವರನ್ನು ನೋಡುವಾಗ ಮಾನವೀಯತೆ ಇನ್ನೂ ಜೀವಂತವಾಗಿದೆ ಕೆಲವಾದರೂ ಮನಸುಗಳಲ್ಲಿ ಅಂತ ಅನ್ನಿಸಿ ಖುಷಿ ಆಗ್ತದೆ ಮೇಡಂ .

    • km vasundhara says:

      ಧನ್ಯವಾದಗಳು ಮೇಡಂ. ನನ್ನ ಬರಹದ ಆಶಯವನ್ನು ಗ್ರಹಿಸಿದ್ದೀರಿ…

  2. Shankari Sharma says:

    ಪರರ ನಿಂದಿಸದಿರು…ಸಾರ್ವಕಾಲಿಕ ಒಳ್ನುಡಿ. ಆದರೆ ಮನ ನೋಯಿಸಿ ಮಾತಾಡುವುದರಲ್ಲೇ ತಮ್ಮ ಸಂತೋಷವನ್ನು ಕಂಡುಕೊಳ್ಳುವರು ಹಲವರು. ಇವರ ನಡುವೆಯೇ ತಲೆಯೆತ್ತಿ ನಡೆಯುವ ಧೀಶಕ್ತಿ ಬೇಕಿದೆ ..ನಮಗೆ..ನಿಮಗೆ..ಎಲ್ಲರಿಗೂ. ಒಳ್ಳೆಯ ಚಿಂತನಾತ್ಮಕ ಲೇಖನ.

    • km vasundhara says:

      ಧನ್ಯವಾದಗಳು ಮೇಡಂ.. ನಮ್ಮ ಆತ್ಮವಿಶ್ವಾಸವೇ ನಮಗೆ ದಾರಿದೀಪ..

  3. Nagarekha Gaonkar says:

    Short cut method cut u short
    ವಾಮಮಾರ್ಗದಲ್ಲೇ ನಡೆದು ಅಭ್ಯಾಸವಾದವರಿಗೆ
    ನೇರಮಾರ್ಗ ಅಡೆತಡೆ ಎನಿಸುವುದು.
    ಲೇಖನ ಸ್ವಾನುಭವದೊಂದಿಗೆ ಲೋಕಾನುಭವದ ಸಂಗತಿಯನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: