ಕಸಿನೋ…ಬೆಳ್ಳನೆ ಬೆಳಗಾಯಿತೆ?

Share Button

2011 ರಲ್ಲಿ ಕೆಲವು ಸಹೋದ್ಯೋಗಿಗಳೊಂದಿಗೆ, ಕಾನ್ಫರೆನ್ಸ್ ಪ್ರಯುಕ್ತ ಹಾಂಗ್ ಕಾಂಗ್ ಪಕ್ಕದ ಮಕಾವ್ ದ್ವೀಪಕ್ಕೆ ಹೋಗಿದ್ದೆ.  ಸಂಜೆ ವಿರಾಮ ಕಾಲದಲ್ಲಿ ಹೊರಗಡೆ ಸುತ್ತಾಡುವ ಆಲೋಚನೆ ಮಾಡಿದೆವು. ಅಲ್ಲಿನ ಆರ್ಥಿಕ ವ್ಯವಸ್ಥೆ ಹಾಗೂ  ಪ್ರವಾಸೋದ್ಯಮಕ್ಕೆ ಪ್ರಮುಖ ಮೂಲ ‘ಕಸಿನೋ’. ಮಕಾವ್ ನ ಮುಖ್ಯ ರಸ್ತೆಯಲ್ಲಿ  ನಿಂತು ಯಾವ ಕಡೆಗೆ ಕ್ಯಾಮರಾ ತಿರುಗಿಸಿದರೂ ಯಾವುದೊ ಒಂದು ಕಸಿನೊ ಸಿಗುತ್ತದೆ. ಕಸಿನೊ ಅಂದರೆ, ಸುಲಭವಾಗಿ ಹೇಳುವುದಾರೆ ಅತ್ಯಾಧುನಿಕ ಜೂಜುಗಾರರ ಅಡ್ಡೆ. ಕೇವಲ ಮಕಾವ್ ಸಿಟಿಯೊಂದರಲ್ಲೇ 60 ಕ್ಕೂ ಹೆಚ್ಚು ವೈಭವೊಪೇತ ಕಸಿನೊಗಳಿವೆಯಂತೆ. ಇನ್ನೊಂದು ಇಲ್ಲಿನ ಗಮನಾರ್ಹ ಅಂಶವೇನೆಂದರೆ ಈ ಕಸಿನೊಗಳಲ್ಲಿ ಆಡುವ ಹೆಚ್ಚಿನವರು ವಿದೇಶೀಯರಂತೆ.

ನಾವು ಐದು ಜನ ಸಹೊದ್ಯೋಗಿಗಳು ಕಸಿನೋಕ್ಕೆ ಭೇಟಿ ಕೊಡಲು ನಿರ್ಧರಿಸಿದೆವು. ನಾವು ಉಳಕೊಂಡಿದ್ದ ಹೋಟೆಲ್ ನಿಂದ ಗಂಟೆಗೆ ಒಂದು ಬಾರಿಯಂತೆ   ಹೋಟೆಲ್ ನ  ಬಸ್  ‘ವೆನೇಶಿಯ’ ಎಂಬ ಕಸಿನೋ ದ ಬಳಿ ಹೋಗುತ್ತದೆಯೆಂದು ಗೊತ್ತಾಯಿತು. ಅದೇ ಬಸ್ ಅಲ್ಲಿಂದ ಗಂಟೆಗೊಮ್ಮೆ ಹಿಂತಿರುಗಿ ಬರುತ್ತದೆ. ಈ ಉಚಿತ ವ್ಯವಸ್ಥೆಯನ್ನು ಯಾರು ಬೇಕಾದರೂ  ಉಪಯೋಗಿಸಬಹುದು. ಇದೇ ಬಸ್ ನಲ್ಲಿ  ಮಾರ್ಕೆಟ್ ಹಾಗೂ ಇತರ ಪ್ರವಾಸಿಗಳಿಗೂ ಭೇಟಿ ಕೊಡಬಹುದು. ನಾವು ಬಸ್ಸನ್ನೇರಿ ಹೊರಟೆವು
.
Kasino-4ದಾರಿಯಲ್ಲಿ ಬೇರೆ  ಹೋಟೆಲ್ ಅಥವಾ ಕಸಿನೋ ಗಳ ನಾಮಫಲಕ ಹೊತ್ತ ಹಲವಾರು ಬಸ್ ಗಳನ್ನು ನೋಡಿದೆ. ಎಲ್ಲೂ ನೂಕು ನುಗ್ಗಲು ಇಲ್ಲ, ಟಿಕೆಟ್ ಕೊಡಬೇಕಾಗಿಲ್ಲ. ಕೆಲವು ಕಸಿನೋಗಳ ಹತ್ತಿರ ನಿಲ್ಲಿಸುವ ಈ ಉಚಿತ ಬಸ್ ಸೇವೆಯನ್ನು ಬೇರೆ ಗ್ರಾಹಕರೂ ಬಳಸಬಹುದು. ಈ ರೀತಿ ಸಮೂಹ ಸಾರಿಗೆ ವ್ಯವಸ್ಥೆ ತುಂಬಾ ಅನುಕೂಲಕರವಾಗಿ ಇರುವುದಿಂದ, ರಸ್ತೆಯಲ್ಲಿ ವಾಹನಗಳ ದಟ್ಟಣೆ ಬಲು ಕಡಿಮೆ ಇತ್ತು. ಕಿರಿಚುವ ಹಾರ್ನ್ ಇರಲೇ ಇಲ್ಲ. ಪ್ರವಾಸಿಗಳಿಗೆ  ಇದು ತುಂಬ ಅನುಕೂಲಕರವಾಗಿದೆ. ಕಸಿನೋ ಪ್ರವೇಶಿಸುವ ಮುನ್ನವೇ ಅವುಗಳ  ಮಾರ್ಕೆಟಿಂಗ್ ತಂತ್ರ ದ ಪರಿಚಯ ನಮಗಾಯಿತು.ದಾರಿಯುದ್ದಕ್ಕೂ ವಿವಿಧ ವಿನ್ಯಾಸಗಳ ಕಸಿನೋ ಗಳು ಕಂಗೊಳಿಸುತ್ತಿದ್ದುವು. ಕಟ್ಟಡಗಳು ಒಂದಕ್ಕಿಂತ ಇನ್ನೊಂದು ಸುಂದರವಾಗಿದ್ದುವು. ಕಸಿನೋದ ಇಸ್ಪಿಟ್ ಆಡುವ ಸ್ಥಳಗಳಲ್ಲದೆ, ಶಾಪಿಂಗ್ ಮಾಲ್ ಗಳು, ಹೊಟೆಲ್ ಗಳು, ಸ್ಪಾ ಗಳು… ಇತ್ಯಾದಿ ಇವೆ.
.
‘ವೆನೇಶಿಯ’ ಎಂಬುದು ಮಕಾವ್ ನಲ್ಲಿ ಸ್ಥಾಪಿತವಾದ ಮೊದಲ ಕಸಿನೋವಂತೆ. ಅದೊಂದು ಭವ್ಯವಾದ ಕನಸಿನ ಲೋಕ. ಇಲ್ಲಿ ಏನು ಇದೆ, ಏನಿಲ್ಲ? ಬಹಳ ದೊಡ್ಡದಾದ, ವೈಭವೊಪೇತವದ ಕಸಿನೋ ವನ್ನು ಸುತ್ತಾಡಲು ತುಂಬಾ ಸಮಯ ಬೇಕು. ಸೀಮಿತ ಅವಧಿಯಲ್ಲಿ ಒಂದು ಕಸಿನೋದ ಒಳಗೆ ಸುತ್ತಾಡಿದ್ದರ ಅನುಭವವಿದು.ಭವ್ಯವಾದ  ಕಟ್ಟಡ. ಎತ್ತ ನೋಡಿದರೂ ಹಲವಾರು ವೃತ್ತಾಕಾರದ ಮೇಜುಗಳ ಮುಂದೆ   ಗೈಡ್ ಗಳು  ಕುಳಿತಿದ್ದರು. ಸಮವಸ್ತ್ರಧಾರಿಯಾಗಿದ್ದ ಅವಳ ಬಳಿ ಕರೆನ್ಸಿ ಇಡಲು ಒಂದು ಬಾಕ್ಸ್ ಇತ್ತು. ಕೇರಂ ಆಟದ ಕಾಯಿನ್ ಗಳನ್ನು ಹೋಲುವ ನಾಣ್ಯಗಳನ್ನು ಆಗಾಗ ಮೇಜಿನಲ್ಲಿ ತಳ್ಳುತ್ತಿದ್ದಳು. ಅವಳ ಮುಂದೆ ಇಸ್ಪಿಟ್ ಎಲೆಗಳನ್ನು ಹೊಂದಿಸುತ್ತ ಆಡುವವರು ಕೆಲವರು. ಬಹುಶ: ದುಡ್ಡು ಕಳೆದುಕೊಂಡವರಿರಬೇಕು, ಚಿಂತಾಕ್ರಾಂತರಾಗಿ, ಆಲೋಚನಾ ಮಗ್ನರಾಗಿ ಇದ್ದವರು ಕೆಲವರು. ಆಗ ಸುಮಾರು ರಾತ್ರಿ ಹನ್ನೊಂದು ಗಂಟೆಯಾಗಿದ್ದರೂ , ಎಷ್ಟೋ ಮಂದಿ ಯುವತಿಯರು ಕೂಡ ಆರಾಮವಾಗಿ ಆಟ ಆಡುತ್ತಿದ್ದರು. ಅಲ್ಲಿದ್ದ ಜನಸಂಖ್ಯೆ ನೋಡಿ ದುಡ್ಡು ಕಳೆದುಕೊಳ್ಳಲೂ ಇಷ್ಟೊಂದು ಪೈಪೋಟಿಯೇ ಎನಿಸಿತು.
.
ಇಸ್ಪೀಟ್ ಆಟಗಳಲ್ಲದೆ, ಕಂಪ್ಯೂಟರ್ ಮುಂದೆ ಒಬ್ಬರೇ ಕುಳಿತು ಆಡುವ ಆಟಗಳು ಕೆಲವು. ಬೇರೆ  ದೇಶದ ಕರೆನ್ಸಿಯನ್ನು  ಬದಲಿಸಿ  ಮಕಾವ್ ನ ಕರೆನ್ಸಿಯನ್ನು ಕೊಡುವ ಕೌಂಟರ್ ಗಳು ಅಲ್ಲಲ್ಲಿ  ಇದ್ದವು.  ಸುಮಾರು 10000 ಕ್ಕೂ  ಹೆಚ್ಚು ಜನ ಅಲ್ಲಿ ಇದ್ದಿರಬಹುದಾದರೂ ಹೆಚ್ಚು ಗೌಜು-ಗಲಾಟೆ ಇರಲಿಲ್ಲ. ಒಟ್ಟಿನ ಮೇಲೆ ಪಂಚತಾರಾ ಹೊಟೆಲ್ ನಂತೆ ಇತ್ತು. ನಾವು ಹೋಗಿದ್ದ ಸಮಯ ಕ್ರಿಸ್ ಮಸ್ ಗೆ ಹತ್ತಿರವಾಗಿತ್ತು. ಹಾಗಾಗಿ ಕಸಿನೋ ದಲ್ಲಿ ಅಲ್ಲಲ್ಲಿ ‘ಕ್ರಿಸ್ ಮಸ್ ಟ್ರೀ’ ಯನ್ನು ಬಹಳ ಕಲಾತ್ಮಕವಾಗಿ ಜೋಡಿಸಿದ್ದರು.  ಅದ್ಭುತವಾದ ವರ್ಣಚಿತ್ರಗಳು ಅಲ್ಲಿನ ಗೋಡೆಗಳನ್ನು ಅಲಂಕರಿಸಿದ್ದುವು. ಒಂದೆಡೆ ಚೈನಿಸ್ ಸಂಗೀತ ಕಾರ್ಯಕ್ರಮ ನಡೆಯುತಿತ್ತು.  ಪುಟ್ಟ ಪುಟ್ಟ  ಚೈನಿಸ್ ಲಲನೆಯರು, ಸಣ್ಣದಾದ ಪಿಟೀಲಿನಂತಹ ತಂತಿವಾದ್ಯವನ್ನು ಸುಶ್ರಾವ್ಯವಾಗಿ ನುಡಿಸುತಿದ್ದರು. ಕಸಿನೊ ದ ಒಳಗೆ   ಫೊಟೊ ತೆಗೆಯುವುದು ನಿಷಿದ್ದ ಹಾಗೂ  ಶಿಕ್ಷಾರ್ಹ ಅಪರಾಧವಂತೆ.
.
ತಮಾಷೆಗೆಂದು, ನಮ್ಮ ಅದೃಷ್ಟವನ್ನೂ ನೋಡೇಬಿಡೋಣ  ಎಂದು ನಿರ್ಧರಿಸಿದೆವು.  ಮೊದಲನೆಯದಾಗಿ. ಕೌಂಟರಿಗೆ  ಹೋಗಿ ಯು.ಎಸ್ ಡಾಲರ್ ಕೊಟ್ಟು, ಮಕಾವ್ ನ ಡಾಲರ್ ಪಡಕೊಂಡೆವು. ಒಂದು ಯು.ಎಸ್ ಡಾಲರಿಗೆ ಸುಮಾರ್ 6 ಮಕಾವ್ ಡಾಲರ್ ಸಿಕ್ಕಿತು. ಒಂದು  ಕಂಪ್ಯೂಟರ್   ಮುಂದೆ ಕುಳಿತು ಎಲ್ಲಾ ಬಟನ್ ಪ್ರಯೋಗ ಮಾಡಿದೆವು. ಏನು ಗೊತ್ತಾಗಲಿಲ್ಲ. ಕೊನೆಗೆ ನಮ್ಮ ಪಕ್ಕದಲ್ಲಿ ಆಡುತಿದ್ದ ಒಬ್ಬರನ್ನು ಕೇಳಿದೆವು. ಹರಕು-ಮುರುಕು ಇಂಗ್ಲಿಷನಲ್ಲಿ ವಿವರಿಸಿದ. ನಮಗೆ ಅರ್ಥವಾದಿದ್ದು ಇಷ್ಟು. ಕಂಪ್ಯೂಟರ್ ನಲ್ಲಿರುವ  ಸ್ಲಾಟ್ ಗೆ ನಾವು ದುಡ್ಡು ಹಾಕಬೇಕು. ಹತ್ತು ಸಲ ಗುಂಡಿ  ಒತ್ತಬಹುದು. ಪ್ರತೀ ಸಾರಿಯೂ,  ಪರದೆಯಲ್ಲಿರುವ ಮೂರು ತಿರುಗುವ ರಿಂಗ್ ಗಳು ಸುತ್ತುತ್ತವೆ.  ಅವುಗಳ ಚಲನೆ  ನಿಂತಾಗ, ಪರದೆಯ ಮೇಲೆ ಮೂಡಿದ ಅಂಕಿಗಳಲ್ಲಿ ಏಕರೂಪತೆ ಇದ್ದರೆ , ನಮಗೆ ದುಡ್ಡು ಸಿಗುತ್ತದೆ. ಉದಾ:  7-7-7  ಎಂದು ಬಂದರೆ ನಮಗೆ ದುಡ್ಡು ಸಿಗುತ್ತದೆ.
.

ಸುಮಾರಾಗಿ ಎ.ಟಿ.ಎಮ್ ಮೆಶಿನ್ ಅನ್ನು ಹೋಲುವ  ಅದನ್ನು ನಮಗೆ ಅರ್ಥವಾದಂತೆ ಚಾಲನೆ ಮಾಡಿದೆವು.  ಮೆಶಿನ್   30  ಡಾಲರ್ ಗಳನ್ನು ಗುಳುಂ ಮಾಡಿತು.  ಯಾವುದೋ ಹಂತದಲ್ಲಿ 45  ಡಾಲರ್ ಬೋನಸ್ ಬಂತು ಎಂದು ಕಂಪ್ಯೂಟರ್ ತೋರಿಸಿತು. ಅದೇ ಗೆಲುವಿನ ಉತ್ಸಾಹದಲ್ಲಿ ನಾವು ಹಾಕಿದ್ದ 30  ಡಾಲರ್ ನ್ನು  ಹಿಂತೆಗೆಯುವ  ಜಾಣತನ ಪ್ರದರ್ಶಿಸಿದೆವು.  ಇನ್ನ್ಯಾವುದೋ ಹಂತದಲ್ಲಿ ಪರದೆಯ ಮೇಲೆ ನಮ್ಮ ಲಾಭ ಸೊನ್ನೆ ಎಂದು ಮೂಡಿ ಬಂತು.  ಲಾಭವೂ ಇಲ್ಲ ನಷ್ಟವೂ ಇಲ್ಲ ಎಂದು, ಆದರೆ ನಾವೂ ಜೂಜಾಡಿದೆವು ಎಂದು ನಗುತ್ತಾ ಜಾಗ ಖಾಲಿ ಮಾಡಿದೆವು. ಮರುದಿನ ನಮ್ಮ ತಂಡದ ಇತರ ಸಹೋದ್ಯೋಗಿಗಳಲ್ಲಿ ಕೆಲವರು ಸರಿಯಾಗಿ ಟೋಪಿ ಹಾಕಿಸಿಕೊಂಡಿದ್ದಾರೆಂದು ಗೊತ್ತಾಯಿತು.

 

ಹಾಗೆಯೇ ಇನ್ನೇನಿದೆ ಎಂದು ನೊಡಲು ಹೊರಟೆವು. ಆಗ ರಾತ್ರಿ 11 ಗಂಟೆಯಾಗಿತ್ತು. ಅದುವರೆಗೆ ಜಗಮಗಿಸುವ ವಿದ್ಯುದೀಪಗಳ ನಡುವೆ ಇದ್ದೆವು. ಇದ್ದಕ್ಕಿದ್ದಂತೆ ‘ಬೆಳ್ಳನೆ  ಬೆಳಗಾಯಿತು’!.

ನಾವು ಮೂರನೆಯ ಮಹಡಿಯಲ್ಲಿದ್ದ  ಫುಡ್ ಕೋರ್ಟ್ ತಲಪಿದ್ದೆವು. ವಿವಿಧ ದೇಶಗಳ ಆಹಾರ ಮಳಿಗೆಗಳ ಜತೆಗೆ  ಅಲ್ಲಿನ  ಪ್ರಮುಖ ಆಕರ್ಷಣೆಯಾಗಿ  ಹಾಡು ಹಗಲಿನ ವಾತಾವರಣವನ್ನು ಸೃಷ್ಟಿಸಿದ್ದರು. ನಾನು ಅಲ್ಲಿನ  ಪೋರ್ಚುಗೀಸ್ ರೆಸ್ಟಾರಂಟ್ ಒಂದರಿಂದ ಘೀ-ರೈಸ್ ತಂದೆ.  ಕೇವಲ 2 ಕಪ್ ಅನ್ನ ಮತ್ತು ಸ್ವಲ್ಪ ತರಕಾರಿ ಇದ್ದ ಈ ಭೋಜನಕ್ಕೆ 78 ಮಕಾವ್ ಡಾಲರ್ ತೆರಬೇಕಾಯಿತು. ಅಂದರೆ ಸುಮಾರು  500 ರೂ!. ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ದುಡ್ಡಿಗೆ ನಮ್ಮ ರೂಪಾಯಿಯನ್ನು ಹೋಲಿಸಿವುದು ಮಹಾ ದಡ್ಡತನ! ನನ್ನ ಸಹೋದ್ಯೋಗಿಗಳು ಬೇರೆ ಬೇರೆ ಕಡೆಗಳಿಂದ ತಮಗೆ ಇಷ್ಟವಾದ ಅಡುಗೆಗಳನ್ನು ಆರಿಸಿ ತಂದರು.

ಎಲ್ಲರೂ ಆ ಮಾನವ ನಿರ್ಮಿತ ಆಕಾಶದ ಅಡಿಯಲ್ಲಿ ಕುಳಿತು ಊಟ ಮಾಡಿದೆವು. ಒಟ್ಟಾರೆಯಾಗಿ ಇದೊಂದು ಅದ್ಭುತ ಅನುಭವವಾಗಿತ್ತು.
– ಹೇಮಮಾಲಾ.ಬಿ, ಮೈಸೂರು

4 Responses

 1. Avatar Jennifer Shawn says:

  Very interesting and informative! Thanks for sharing your experiences, Hema!

 2. Avatar Ghouse says:

  As usual, as the other article from Hema, this article is also an interesting and very informative one.

 3. Avatar Krishnaveni Kidoor says:

  ದೇವ ನಿರ್ಮಿತ ಆಕಾಶದ ಅಡಿ ಉಣ್ಣಲು ಅವರು ಯಾವ ಚಾರ್ಜು ಕೂಡ ಇಟ್ಟವರಲ್ಲ.ಮಾನವ ನಿರ್ಮಿತಕ್ಕೆ ಹೇಳಿದ್ದೆ ಚಾರ್ಜು .ಅನುಭವ ಚೆನ್ನಾಗಿದೆ.

 4. Hema Hema says:

  ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: