ಮಹಾತ್ಮಾಗಾಂಧೀಜಿಗೆ-ಕೊಡಗಿನ ಗೌರಮ್ಮನ ಕೊಡುಗೆ

Share Button


ಹೆಸರೇ ಸೂಚಿಸುವಂತೆ ಕೊಡಗಿನಗೌರಮ್ಮ ಕೊಡಗಿನಲ್ಲೇ ಹುಟ್ಟಿ ಕೊಡಗಿನಲ್ಲೇ ಬೆಳೆದು ವಿದ್ಯಾಭ್ಯಾಸಹೊಂದಿ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಥೆಗಾರ್ತಿಯಾದವಳು. ಗೌರಮ್ಮ 1912 ರಲ್ಲಿ ಜನಿಸಿದಳು. ಗೌರಮ್ಮನ ತಂದೆಯ ಹೆಸರು ರಾಮಯ್ಯ, ತಾಯಿ ನಂಜಕ್ಕ. ಆಕೆಯ ಪತಿಯ ಹೆಸರು ಬಿ.ಟಿ.ಗೋಪಾಲಕೃಷ್ಣ. ಗೌರಮ್ಮನ ವಿದ್ಯಾಭ್ಯಾಸ ಅಂದಿನ ಮೆಟ್ರುಕ್ಯುಲೇಶನ್ ಹಾಗೂ ಹಿಂದಿವಿಶಾರದಾ. ಮಹಾತ್ಮಾಗಾಂಧೀಜಿ ಹರಿಜನೋದ್ಧಾರಕ್ಕಾಗಿ ದೇಶದೆಲ್ಲೆಡೆ ಸಂಚರಿಸುತ್ತಿದ್ದ ಕಾಲವದು. ಆ ಸಮಯದಲ್ಲಿ ಒಮ್ಮೆ ಅವರು ಕೊಡಗಿಗೂ ಬಂದಿದ್ದರು. ಅಲ್ಲಿ ಗುಂಡುಕುಟ್ಟಿ ಮಂಜುನಾಥಯ್ಯನವರ ಮನೆಯಲ್ಲಿ ತಂಗಿದ್ದರು. ಆಗ ಅವರಿಗೆ ಒಂದೊದು ನಿಮಿಷವೂ ಅಮೂಲ್ಯವಾಗಿತ್ತು. ಅವರು ಇನ್ನಷ್ಟು ಊರುಗಳಿಗೆ ಭೇಟಿ ಕೊಡಬೇಕಿತ್ತು. ಹಾಗೆ ಹೋದವರು ತಮ್ಮ ಕೆಲಸ ಪೂರೈಸಿಕೊಂಡು ಹೊರಡುವುದರಲ್ಲಿದ್ದಾಗ ಆಶ್ಚರ್ಯಕರವಾದ ಸುದ್ದಿಯೊಂದು ಅವರ ಕಿವಿಗೆ ಬಿತ್ತು. ನೆರೆಮನೆಯ ಹುಡುಗಿಯೊಬ್ಬಳು ಗಾಂಧೀಜಿ ನನ್ನ ಮನೆಗೆ ಬರಬೇಕು.ಅವರು ಕೈಕೊಂಡ ಹರಿಜನೋದ್ಧಾರಕ್ಕಾಗಿ ನನ್ನ ಆಭರಣವನ್ನು ನನ್ನ ಕೈಯಿಂದಲೇ ನನ್ನಮನೆಯಲ್ಲೇ ಅವರಿಗೆ ಸಮರ್ಪಿಸಬೇಕು.ಅವರಿಂದ ಆಶೀರ್ವಾದ ಪಡಕೊಳ್ಳಬೇಕು ಎಂದು ಉಪವಾಸ ಕುಳಿತು ಹಠಹಿಡಿದಿದ್ದಾಳೆ.

ಯಾರು ಆ ಹುಚ್ಚುಹುಡುಗಿ!.ನಾನೇ ಬರಬೇಕೆಂದೇನು? ಗಾಂಧೀಜಿ ತನ್ನ ಸಹಜ ಸುಂದರನಗುವನ್ನು ಬೀರುತ್ತಾ ನುಡಿದರು. ಆದರೆ ಅವರ ಮನದೊಳಗೆ ಹುಡುಗಿಯ ತ್ಯಾಗ ಮನೋಭಾವವು ಮೆಚ್ಚುಗೆಯಾಯ್ತು.

ಹೆಸರು ಗೌರಮ್ಮ ಬಾಪೂಜಿ. ನೀವೇ ಬರಬೇಕಂತೆ. ಯಾರು ಹೇಳಿದರೂ ಕೇಳಲೊಲ್ಲಳು. ಅವರ ಸಹಾಯಕಿ ಮೀರಾಬೆನ್ ಹೇಳಿದಳು.ಈ ಮಾತನ್ನು ಕೇಳಿ ಗಾಂಧೀಜಿ ಗಟ್ಟಿಯಾಗಿ ನಕ್ಕು ಮೀರಾಬೆನಳನ್ನು ಮುಂದಕ್ಕೆ ಕಳುಹಿಸಿ ಕೊಟ್ಟರು. ಗೌರಮ್ಮಾ ಗಾಂಧೀಜಿಯೇ ಬರಬೇಕೆಂಬ ಹುಚ್ಚು ನಿನಗೇಕೆ?ಈ‌ಉಪವಾಸವನ್ನು ಮುಗಿಸು ತಗೋ ಈ ಕಿತ್ತಳೆರಸ ಎನ್ನುತ್ತಾ ಸಲಿಗೆಯಿಂದ ಅವಳ ಗಲ್ಲವನ್ನು ಮುಟ್ಟಿ ಮೀರಾಬೆನ್ ಹಣ್ಣನ್ನು ಸುಲಿಯತೊಡಗಿದಳು.

ಇಲ್ಲ ತಾಯಿ, ಗಾಂಧೀಜಿ ಬಾರದೆ ನಾನು ನೀರನ್ನೂ ಕುಡಿಯಲಾರೆ. ಎಂದಳುಗೌರಮ್ಮ. ಬಿಡು,ಬಿಡು ಇದೆಲ್ಲ ನೋಡಿದರೆ ಯಾರಾದರೂ ನಕ್ಕಾರು. ಹಣ್ಣಿನರಸ ಸ್ವೀಕರಿಸಿ ಉಪವಾಸ ಮುಗಿಸು ಎಂದು ಉಪಚರಿಸುತ್ತಾ ಮೀರಾಬೆನ್ ಕಿತ್ತಳೆರಸ ಕೊಡಹೋದರೆ ಗೌರಮ್ಮ ಒಡಂಬಡಲೇ‌ಇಲ್ಲ.ಗಾಂಧೀಜಿ ಬಂದರೇನೆ ಮುಂದಿನಮಾತು ಎಂದು ಹಠಹಿಡಿದು ಭಿಮ್ಮನೆ ಕುಳಿತಳು ಗೌರಮ್ಮ.

 

ಗಾಂಧೀಜಿ ಕೈಯಲ್ಲಿ ಕೋಲೂರುತ್ತಾ ತಿಳಿನಗು ಬೀರುತ್ತಾ ಏನಂತಾಳೆ ಆಕೆ! ಉಪವಾಸವನ್ನು ಇನ್ನೂಮುಗಿಸಿಲ್ಲವೇನು ಎನ್ನುತ್ತಾ ಗೌರಮ್ಮನ ಮನೆಬಾಗಿಲಿಗೆ ಬಂದೇಬಿಟ್ಟರು.

ಮೀರಾಬೇನಳ ಮುಂದೆ ಕೊಡಗಿನ ಹುಡುಗಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಕುಳಿತಿದ್ದಾಳೆ ಗೌರವರ್ಣ,ಗೌರವಸ್ತ್ರ, ಗೌರವದ ಗೌರಿ!. ಗಾಂಧೀಜಿಗೆ ಮತ್ತೆ ನಗು ಬಂತು. ನಿನ್ನ ಉಪವಾಸ ಏಕಮ್ಮಾ?ಗಾಂಧೀಜಿ ಕೇಳಿದರು. ಗಾಂಧೀಜಿ ನನ್ನ ಮನೆಗೆ ನೀವೇ ಬರಬೇಕು ಹರಿಜನೋದ್ಧಾರಕ್ಕಾಗಿ ನಾನುಕೊಡುವ ಕಾಣಿಕೆಯನ್ನು ಸ್ವೀಕರಿಸಬೇಕು.ಇದೇ ನನ್ನಿಚ್ಛೆ ಎಂದಳು. ಆಯಿತಲ್ಲ ಬಂದಿದ್ದೇನೆ. ಎಂದಾಗ ನನ್ನ ಉಪವಾಸವೂ ಮುಗಿಯಿತು ಗಾಂಧೀಜಿ‌ಎಂದಳು. ಮೀರಾಬೆನ್ ಕಿತ್ತಳೆರಸವನ್ನು ಗೌರಮ್ಮನಿಗೆ ಕೊಟ್ಟಳು. ಗೌರಮ್ಮ ಅದನ್ನು ಸೇವಿಸಿ ಆಭರಣದ ಮಾತುಕತೆಗೆ ಪ್ರಾರಂಭವಾಯಿತು.

ಗೌರಮ್ಮ ತನ್ನ ಮಂಗಲಸೂತ್ರವೊಂದನ್ನುಳಿದು ಮಿಕ್ಕೆಲ್ಲ ಆಭರಣಗಳನ್ನು ಒಂದೊಂದೇ ತೆಗೆದು ಗಾಂಧೀಜಿಯ ಮುಂದಿಟ್ಟಳು. ಗಾಂಧೀಜಿ ಗೌರಮ್ಮನ ಪತಿಯನ್ನು ಕರೆದು ನಿಮ್ಮ ಪತ್ನಿಯು ತನ್ನ ಒಡವೆಗಳನ್ನೆಲ್ಲ ಹರಿಜನೋದ್ಧಾರಕ್ಕಾಗಿ ಕೊಡಲಿಚ್ಛಿಸುತ್ತಾಳೆ. ಇದು ನಿಮಗೆ ಸಮ್ಮತಿಯಷ್ಟೇ?. ಕೇಳಿದರು. ನನ್ನ ಅಸಮ್ಮತಿಗೇನು ಬಾಪೂಜಿ. ಅವಳ ಒಡವೆಗಳನ್ನು ಅವಳೇ ಕೊಡುತ್ತಿದ್ದಾಳೆ.ಇದರಿಂದ ನನಗೂ ಸಂತೋಷವೇ.ಎಂದರವರು.

ಈ ದಂಪತಿಗಳ ತ್ಯಾಗಬುದ್ಧಿಯನ್ನು ಕಂಡು ಬಾಪೂಜಿಗೆ ಸಂತಸವಾಯಿತು. ಇನ್ನುಮುಂದೆ ಮಂಗಲಸೂತ್ರ, ಬೆಂಡೋಲೆಗಳ ಹೊರತಾಗಿ ಬೇರೆ ಆಭರಣಗಳನ್ನೆಂದೂ ಧರಿಸಲಾರೆ ಎಂದು ದೃಢನಿರ್‍ಧಾರ ಮಾಡುವುದಾದರೆ ಮಾತ್ರ ಈ ಆಭರಣಗಳನ್ನು ಸ್ವೀಕರಿಸುತ್ತೇನೆ ಎಂದರು ಗಾಂಧೀಜಿ.ಹಾಗಲ್ಲದಿದ್ದರೆ ಅದು ನಿಜವಾದ ತ್ಯಾಗವಾಗಲಾರದು ಎಂದರು.

ಎಂದೆಂದಿಗೂ ನಾನು ಮಾಂಗಲ್ಯವನ್ನುಳಿದು ಮಿಕ್ಕ ಆಭರಣ ಧರಿಸಲಾರೆ.ಅಸಂಖ್ಯ ಪ್ರಜೆಗಳು ದರಿದ್ರಾವಸ್ಥೆಯಲ್ಲಿರುವಾಗ ಒಬ್ಬ ಹೆಣ್ಣುಮಗಳು ಆಭರಣ ಧರಿಸುವುದೆಂದರೇನು? ಅದರಿಂದ ಏನುಶ್ರೇಯಸ್ಸು ದೊರಕೀತು.ಬಾಪೂಜಿ ಇದೋ ಮಾತುಕೊಡುತ್ತೇನೆ.ನನಗೆ ಒಡವೆ ವಸ್ತುಗಳು ಬೇಡವೇಬೇಡ.ಎಂದು ಗೌರಮ್ಮ ಪ್ರತಿಜ್ಞೆ ಮಾಡಿದಳು. ಭೇಷ್ ಜೀವನದಲ್ಲಿ ಸರಳತನಕ್ಕಿಂತ ಹೆಚ್ಚಿನ ಸೌಂದರ್‍ಯವಿಲ್ಲ ಎಂದು ಆಭರಣಗಳನ್ನು ಸ್ವೀಕರಿಸಿದ ಬಾಪೂಜಿ ಅಲ್ಲಿಂದ ನಿರ್ಗಮಿಸಿದರು.
ಗೌರಮ್ಮನಿಗೆ ಆಗ ಇಪ್ಪತ್ತೊಂದು ವರ್ಷ ವಯಸ್ಸು. ಆಕಿರಿಯ ವಯಸ್ಸಲ್ಲೇ ಆಕೆಯಲ್ಲಿ ತ್ಯಾಗ,ದೀನದಲಿತರ ಬಗ್ಗೆ ಅನುಕಂಪ, ರಾಷ್ಟ್ರಪ್ರೇಮ, ದೇಶಾಭಿಮಾನ, ಮೊದಲಾದ ಹಿರಿಯಗುಣಗಳು ತುಂಬಿದ್ದುವು. ನಾಡುನುಡಿಯ ಏಳ್ಗೆಯ ಮಾತೊಂದಿದ್ದರೆ ಅವಳಿಗೆ ಬೇರೇನೂ ಬೇಕಾಗುತ್ತಿರಲಿಲ್ಲ.ನಾವು ದೊಡ್ಡವರಾಗದೆ ನಮ್ಮ ನಾಡು-ನುಡಿ ದೊಡ್ಡದಾಗದೆಂಬ ಆಶಯವು ಆಕೆಯಲ್ಲಿತ್ತು.

ಗೌರಮ್ಮ ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಅಪೂರ್ವವಾದ ಕೊಡುಗೆಯನ್ನು ಕೊಟ್ಟಿದ್ದಾಳೆ. ‘ಕಂಬನಿ’ಮತ್ತು ‘ಚಿಗುರು‘ ಎಂಬೆರಡು ಕಥಾಸಂಕಲನಗಳು ಆಕೆಯ ಕೃತಿಗಳು. ಸ್ತ್ರೀ ಸಾಹಿತ್ಯವು ಆಕೆಯ ಹೃದಯದ ಕಂಬನಿಯಿಂದ ಚಿಗುರುತ್ತಲಿತ್ತು. ಒಂದು ದಿನ ತನ್ನ ಊರಲ್ಲಿದ್ದ ಹರದೂರಿನ ಹೊಳೆಯಲ್ಲಿ ಈಜಲು ಹೋದ ಗೌರಮ್ಮ ನಡುನೀರಿನಲ್ಲಿ ಮುಳುಗಿಹೋದಳು. ನಿರ್ಮಲವಾದ ನಡತೆಯನ್ನು ನುಡಿಯಲ್ಲಿ ಮೀಯಿಸುವುದಕ್ಕೆ ಯತ್ನಿಸುತ್ತಿರುವ ಕಾಲದಲ್ಲೇ ಗೌರಮ್ಮ ಕನ್ನಡನಾಡಿಗೆ ಇನ್ನಿಲ್ಲವಾದಳು. ಆಗ ಆಕೆಗೆ ಕೇವಲ ಇಪ್ಪತ್ತೇಳು ವರ್ಷ ವಯಸ್ಸು. 1912 ರಿಂದ  1939 ಆಕೆಯ ಕಾಲ. ಆಗ ಆಕೆಯ ಮಗ ಬಿ.ಜಿ.ವಸಂತ ಆರು ವರ್ಷದ ಮಗು.

– ಸಂಗ್ರಹ,ವಿಜಯಾಸುಬ್ರಹ್ಮಣ್ಯ,ಕುಂಬಳೆ.
ಸಂಚಾಲಕಿ, ಕೊಡಗಿನಗೌರಮ್ಮಕಥಾಸ್ಪರ್ಧೆ

4 Responses

 1. Avatar ನಯನ ಬಜಕೂಡ್ಲು says:

  Beautiful. ನನ್ನ ಪಾಲಿಗೆ ಇದೊಂದು ಹೊಸ ವಿಚಾರ. ಗಾಂಧೀಜಿಯ ಬಗ್ಗೆ ಹಲವಾರು ಕಥೆಗಳನ್ನು ಓದಿದ್ದರೂ ಕೂಡ ಇದು ಹೊಸದು

 2. Avatar ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

  ಮೊದಲಿಗೆ ಸಂಪಾದಕಿ ಹೇಮಮಾಲಾ ಅವರಿಗೆ ಧನ್ಯವಾದ ಹೇಳುತ್ತಾ ನಯನ ಬಜಕೂಡ್ಲು ಅವರು ನನ್ನ ಲೇಖನ ಓದಿ ಮೆಚ್ಚಿಕೊಂಡಿದ್ದು ಸಂತೋಷ ತಂತು.

 3. Hema Hema says:

  ಅಪರೂಪದ ವಿಶಿಷ್ಟ ಮಾಹಿತಿ ತಿಳಿದಂತಾಯಿತು. ಧನ್ಯವಾದಗಳು ..

 4. Avatar Shankari Sharma says:

  ಒಳ್ಳೆಯ ಮಾಹಿತಿಯುಕ್ತ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: