ಆವಿಷ್ಕಾರದ ಅಗತ್ಯ

Spread the love
Share Button

ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿದ ಸ್ಮಾರ್ಟಫೋನ್ ಕೈಜಾರಿ ಬಿದ್ದು ಒಡೆಯಿತು. ಅದನ್ನು ರಿಪೇರಿ ಮಾಡಿಸಲು ಸಾಧ್ಯವಾದರೆ, ಸಾಕಷ್ಟು ಹಣ ಖರ್ಚು ಮಾಢಬೇಕು. ಇಲ್ಲದಿದ್ದರೆ ಹೊಸ ಫೋನ್‍ ಖರೀದಿ ಮಾಡಬೇಕು.

ಹೃದಯದ ಸಮಸ್ಯೆ ಎದುರಿಸುತ್ತಿರುವ ಕೆಲವರಿಗೆ ಸಹಾಯವಾಗಲು, ವೈದ್ಯರು ಸರ್ಜರಿ ಮಾಡಿ ಪೇಸ್‍ಮೇಕರ್ ಆಳವಡಿಸುತ್ತಾರೆ.  ಆದರೆ ಪೇಸ್‍ಮೇಕರ್ ನಲ್ಲಿರವ ಲೋಹದ ಬಿಡಿಭಾಗಗಳಿಂದಾಗಿ, ಪೇಸ್ ಮೇಕರ್ ಅಳವಡಿಸಿಕೊಂಡವರು, ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣಗಳಿಂದ ಅಂತರ ಕಾಯ್ದುಕೊಂಡಿರಬೇಕಾಗುತ್ತದೆ. ಉದಾಹರಣೆಗೆ, ಮೊಬೈಲ್ ಫೋನ್, ಎಂಪಿ3 ಪ್ಲೇಯರ್, ಗೃಹೋಪಯೋಗಿ ಉಪಕರಣಗಳು, ಮೈಕ್ರೋವೇವ್ ಓವನ್‍ ಮೊದಲಾದವುಗಳನ್ನು ಬಳಸುವಾಗ, ವಿಮಾನ ನಿಲ್ದಾಣ ಅಥವಾ ಮಾಲ್‍ಗಳಲ್ಲಿರುವ ಮೆಟಲ್‍ ಡಿಟೆಕ್ಟರ್ ಗಳಿಂದ ಸೆಕ್ಯೂರಿಟಿ ಚೆಕ್‍ ನೆಡೆಯುವಾಗ, ಪೇಸ್‍ಮೇಕರ್ ಕಾರ್ಯಾಚರಣೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುವ ಸಾಧ್ಯತೆಗಳಿರುತ್ತವೆ.

ಜನಸಾಮಾನ್ಯರು ಎದುರಿಸುವ ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆಯನ್ನು ಹೊಸ ತಂತ್ರಜ್ಞಾನವೊಂದು ನೀಡುತ್ತಿದೆ. ಉದಾಹರಣೆಗೆ, ಈ ತಂತ್ರಜ್ಞಾನ ಬಳಸಿ ತಯಾರಿಸಿದ ಸ್ಮಾರ್ಟ ಫೋನ್‍ಗಳು ಜಾರಿ ಬಿದ್ದರೂ ಒಡೆಯುವುದಿಲ್ಲ, ಪೇಸ್‍ ಮೇಕರ್ ಗಳಲ್ಲಿ ಲೋಹದ ಬಿಡಿಭಾಗಗಳನ್ನು ಬಳಸುವುದಿಲ್ಲ, ಇತ್ಯಾದಿ.

ಲೇಸರ್ ಬಳಸಿ ಮಾಡಲಾಗುವ ಸೆರಮಿಕ್ ವೆಲ್ಡಿಂಗ್ ಎನ್ನುವ ಈ ಹೊಸ ತಂತ್ರಜ್ಞಾನವನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞರ ತಂಡವೊಂದು ಅಭಿವೃದ್ಧಿಪಡಿಸಿದೆ. ಅಲ್ಟ್ರಾವೇಗದ ಫಲ್ಸಡ್ ಲೇಸರ್ ಬಳಸಿ ಸೆರಮಿಕ್ ವೆಲ್ಡಿಂಗ್ ಮಾಡುವ ಈ ವಿಧಾನದಲ್ಲಿ 50 ವ್ಯಾಟ್‍ಗಳಿಗಿಂತ ಕಡಿಮೆಯ ಲೇಸರ್ ಬಳಸಲಾಗುತ್ತದೆ.

ಸಾಂಪ್ರದಾಯಿಕ ತಂತ್ರಜ್ಞಾನಗಳನ್ನು ಬಳಸಿ ಸೆರಮಿಕ್ ವೆಲ್ಡಿಂಗ್‍ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಅತಿ ಹೆಚ್ಚು ಉಪ್ಣತೆಯುಂಟು ಮಾಡುವ ಫರ್ನೆಸ್‍ಗಳಲ್ಲಿ ಸೆರಮಿಕ್ ಕರಗಿಸಿ, ಎರಡು ಸೆರಮಿಕ್ ವಸ್ತುಗಳನ್ನು ಬೆಸಯಲಾಗುತ್ತದೆ. ಆದರೆ ಈ ರೀತಿ ಅತಿ ಹೆಚ್ಚು ಉಷ್ಣತೆಯಲ್ಲಿ ಸೆರಮಿಕ್ ವಸ್ತುಗಳನ್ನು ಕರಗಿಸುವಾಗ, ಈ ವಸ್ತುಗಳು ಬಿರುಕು ಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಿರಕು ಬಿಟ್ಟ ಸೆರಮಿಕ್ ವಸ್ತುಗಳನ್ನು ಬಳಸಲು ಸಾಧ್ಯವಾಗುವುದಿಲ್ಲವಾದ ಕಾರಣ, ತ್ಯಾಜ್ಯ ಮತ್ತು ಆರ್ಥಿಕ ನಷ್ಟ ಉಂಟಾಗುತ್ತದೆ.
ಬಾಹ್ಯಾಕಾಶ ನೌಕೆಗಳಲ್ಲಿ ಬಳಸಲಾಗುವ ವಿದ್ಯುನ್ಮಾನ ಉಪಕರಣಗಳು, ಅತ್ಯಂತ ಕಡಿಮೆ ಮತ್ತು ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ಕೂಡಾ ಕೆಲಸ ಮಾಡುವಂತೆ ತಯಾರಿಸಬೇಕಾಗುತ್ತದೆ. ಆದರೆ ಅತ್ಯಂತ ಸೂಕ್ಷ್ಮವಾದ ಎಲ್ಕೆಟ್ರಾನಿಕ್ಸ್ ಬಿಡಿಭಾಗಗಳನ್ನು ಸಾಂಪ್ರದಾಯಿಕ ಸೆರಮಿಕ್ ವೆಲ್ಡಿಂಗ್ ವಿಧಾನದಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅತ್ಯಂತ ವಿಪರೀತ ತಾಪಮಾನಗಳಲ್ಲಿ ಕೆಲಸ ಮಾಡುವ ವಿದ್ಯುನ್ಮಾನ ಉಪಕರಣಗಳಲ್ಲಿ ಬಹುಪಯೋಗಿ ಸೆರಮಿಕ್‍ಗಳನ್ನು ಬಳಸಲು ವಿಜ್ಞಾನಿಗಳಿಗೆ ಸಮಸ್ಯೆಯಾಗುತ್ತದೆ.

ಅಲ್ಟ್ರಾವೇಗದ ಫಲ್ಸಡ್‍ ಲೇಸರ್ ಬಳಸುವ ವಿಧಾನದಲ್ಲಿ ಸೆರಮಿಕ್ ವಸ್ತುಗಳನ್ನು ವೆಲ್ಡಿಂಗ್ ಮಾಡಬೇಕಾದ ಪ್ರದೇಶದಲ್ಲಿ ಮಾತ್ರ ಲೇಸರ್ ಶಕ್ತಿಯನ್ನು ಕೇಂದ್ರಿಕೃತ ಗೊಳಿಸಲಾಗುತ್ತದೆ. ಹೀಗಾಗಿ ಇಡೀ ಸೆರಮಿಕ್ ವಸ್ತು ವಿಪರೀತ ಬಿಸಿಯಾಗುವುದಾಗಲಿ, ಅದರ ಜೊತೆಗಿರುವ ಎಲ್ಕೆಟ್ರಾನಿಕ್ ವಸ್ತುಗಳು ಸುಟ್ಟು ಹಾಳಾಗುವುದಾಗಲಿ ಆಗುವುದಿಲ್ಲ.

 

ಆವಿಷ್ಕಾರಕ್ಕೆ ಈಗಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ಜನಸಾಮಾನ್ಯರು ಬಳಸುವ ಹಲವಾರು  ತಂತ್ರಜ್ಞಾನ ಮತ್ತು ವಿಧಾನಗಳಲ್ಲಿ ಇರುವ ಕೊರತೆಗಳನ್ನು ಸರಿಪಡಿಸುವ ತಂತ್ರಜ್ಞಾನದ ಅಭಿವೃದ್ಧಿ ಕೂಡಾ ಮಹತ್ವದ ಆವಿಷ್ಕಾರವಾಗುತ್ತದೆ.

ಭಾರತದಲ್ಲಿ ಇಂತಹ ಆವಿಷ್ಕಾರಗಳಿಗೆ ವಿಫುಲವಾದ ಅವಕಾಶಗಳಿವೆ. ಶಾಲೆಗಳ ವಿದ್ಯಾರ್ಥಿಗಳು ಇಂತಹ ಪ್ರಯೋಗಕ್ಕೆ ಮುಂದಾಗುತ್ತಿರುವಾಗ, ಪದವಿ ಮತ್ತು ಸ್ನಾತಕ್ಕೋತ್ತರ ಶಿಕ್ಷಣದ ವಿದ್ಯಾರ್ಥಿಗಳು ಕೂಡಾ ಇಂತಹ ಆವಿಷ್ಕಾರಗಳ ಕಡೆ ಹೆಚ್ಚು ಗಮನ ಕೊಡಬೇಕಾಗಿರುವುದು ಅತ್ಯಗತ್ಯವಾಗಿದೆ.
.

-ಉದಯಶಂಕರ ಪುರಾಣಿಕ

2 Responses

  1. ನಯನ ಬಜಕೂಡ್ಲು says:

    ವೆರಿ ನೈಸ್ . ವಿದ್ಯಾರ್ಥಿಗಳೂ ಓದಬಹುದಾದಂತಹ ಉಪಯುಕ್ತವಾದ ಲೇಖನ.

  2. Krishnaprabha says:

    ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯಲು ಬಹಳಷ್ಟು ಅವಕಾಶಗಳಿವೆ. ಸ್ನಾತಕೋತ್ತರ ಪದವಿ ಪಡೆದು, ಸಂಶೋಧನೆ ಮಾಡಿ ಎಂದು ಪದವಿ ವಿದ್ಯಾರ್ಥಿಗಳಿಗೆ ಆಗಾಗ ಹೇಳುತ್ತಿರುತ್ತೇನೆ. ಒಳ್ಳೆಯ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: