ಮನೋಲ್ಲಾಸದ ಹಿರಿಮೆ – ಕುಕ್ಕರಹಳ್ಳಿ

Share Button

Vinaya Kumar V

 

ಬೆಳಿಗ್ಗೆ 5.45. ’ಓಹ್! ತಡವಾಯಿತಲ್ಲಾ! ಇನ್ನೂ ತಡ ಮಾಡಿದರೆ ಖಂಡಿತಾ ಸಿಗುವುದಿಲ್ಲ’ ಎಂದುಕೊಳ್ಳುತ್ತಾ ತಕ್ಷಣ ಎದ್ದು ತಯಾರಾಗಿ ಬೂಟ್ ಧರಿಸಿ ಹೊರಡುತ್ತಲೇ 6 ಘಂಟೆ. ಮನೆಯಿಂದ ಹೊರಡುತ್ತಲೇ ಓಡುತ್ತಾ ಸಾಗಿ 10 ನಿಮಿಷಗಳ ಒಳಗಾಗಿ ಸೇರಬೇಕಾದ ಸ್ಥಳ ಸೇರಿದೆ. ’ಸದ್ಯ, ಸರಿಯಾದ ಸಮಯಕ್ಕೆ ಬಂದಿದ್ದೇನೆ!’ ಎಂದು ಕೊಳ್ಳುತ್ತಿರುವಾಗಲೇ ಕತ್ತಲೆಯಿಂದ ನೀಲಿಗಿ ತಿರುಗಿ, ನೀಲಿಯಿಂದ ತೆಳು ನೀಲಿಗೆ ಬದಲಾಗಿ ಬೀದಿ ದೀಪಗಳ ಮಬ್ಬಾಗಿಸುವ ಬಾನು. ತಾಯಿಯ ಮಡಿಲಿಂದ ತುಸುನಾಚಿ, ನಿಧಾನವಾಗಿ  ಹೊರ ಬರುವ ರವಿ. ನಿತ್ಯದ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ತವಕಿಸುವ ಅದೆಷ್ಟೋ ಜನ. ಅದನ್ನು ತಮ್ಮಲ್ಲೇ ಸೆರೆ ಹಿಡಿದಿಟ್ಟು ಕೊಳ್ಳಬಯಸಿ ಕ್ಯಾಮೆರಾ ಕ್ಲಿಕ್ಕಿಸುವ ಇನ್ನಷ್ಟು ಮಂದಿ.

ಅಲ್ಲೇ ಜೀವಿಸುವ ಜೀವಸಂಕುಲಗಳಿಗೆ ನಿಜವಾಗಿ ಜೀವ ಬರುವುದೇ ಈ ಘಳಿಗೆಯಲ್ಲಿ. ಚಿಲಿಪಿಲಿ ಕಲರವದಿಂದ ಸ್ವಾಗತಿಸುವ ಹಕ್ಕಿಗಳು, ಸೂರ್ಯನ ಕಿರಣಗಳಿಂದ ಚೈತನ್ಯ ತುಂಬಿಕೊಂಡು ಅರಳಿ, ಹೊಳೆಯುವ ಹೂವುಗಳು, ದಡದಲ್ಲಿ ಈವರೆಗೂ ಮಲಗಿ, ಈಗ ಚಕ್ಕನೆ ನೀರಿಗಿಳಿದು ಸದ್ಧಿಲ್ಲದೆ ಈಜುವ ಬಾತುಕೋಳಿ, ಬೆಳ್ಳನೆ ಬೆಳಗಿಗೆ ತನ್ನ ಮೈಬಣ್ಣವನ್ನೇ ಹೋಲಿಸಿಕೊಳ್ಳುವ ಮುದ್ದು ಹಂಸ, ಕೆರೆಯಲ್ಲಿ ನಾವೂ ಇದ್ದೇವೆ ಎದ್ದು ಗುಟುರು ಹಾಕಿ ಎಚ್ಚರಿಸುವ ಕಪ್ಪೆಯೋ, ಮೊಸಳೆಯೋ, ಇನಾವುದೋ ಜೀವ. ಇಷ್ಟೂ ನೈಸರ್ಗಿಕ ಸೊಬಗಿಗೆ ದಿನನಿತ್ಯ ಸಾಕ್ಷಿಯಾಗಿರುವುದೇ ನನ್ನ ನೆಚ್ಚಿನ ಕುಕ್ಕರಹಳ್ಳಿ ಕೆರೆ.

 

1864 ರಲ್ಲಿ ನಿರ್ಮಿಸಲ್ಪಟ್ಟ ಈ ಕೆರೆ, ಬಹುವರ್ಷಗಳ ತನಕ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರೊದಗಿಸುತ್ತಿತ್ತು. ಕೃಷ್ಣ ರಾಜ ಸಾಗರ ಅಣೆಕಟ್ಟಿನ  ನಿರ್ಮಾಣದ ನಂತರ ಈ ಕೆರೆಯ ಮೇಲಿನ ಜನರ ಅವಲಂಬನೆ ಕಡಿಮೆಯಾಯಿತು.  ಆದರೂ ನೂರಾರು ಜೀವಸಂಕುಲಗಳಿಗೆ, ಪ್ರತಿ ವರ್ಷ ನಾನಾ ದೇಶಗಳಿಂದ ವಲಸೆ ಬರುವ ಪಕ್ಷಿಗಳಿಗೆ ಆಗರವಾಗಿರುವ ಈ ಕೆರೆ ಮೈಸೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಅದೆಷ್ಟೋ ಕವಿಗಳಿಗೆ, ಕಾದಂಬರಿಕಾರರಿಗೆ ಬರಹದ ವಸ್ತುವಾಗಿರುವುದೂ ಸುಳ್ಳಲ್ಲ.

 ಆರು ತಿಂಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯ ಪ್ರವೇಶಿಸಿದ ಹೊಸತರಲ್ಲಿ ಕೆರೆಯ ಸುತ್ತ ಒಂದು ಮ್ಯಾರಥಾನ್ ಓಟ ಏರ್ಪ್ದಿಸಿದ್ದರು. ’ಮನಸೋಲ್ಲಾಸ’ ಎಂದು ಅದರ ಹೆಸರು. ಮೊದಲ ಬಾರಿಗೆ ಕೆರೆ ಪ್ರವೇಶಿಸಿದ ನನಗೆ ನಿಸರ್ಗದ ಸೌಂದರ್ಯ ಸ್ವಾಗತಿಸಿತ್ತು. ಸ್ವಲ್ಪ ದೂರ ಸಾಗುತ್ತಿದಂತೆಯೇ ಸಾಕಾಗಿ ಹೋಗಿ, ’ ಅಬ್ಬಾ, ಇನ್ನೆಷ್ಟು ದೂರ ಓಡಬೇಕಪ್ಪಾ! ಈ ಹಾಳು ಕೆರೆ ಅದು ಯಾವಾಗ ಮುಗಿಯುತ್ತೋ! ’ ಎಂದು ಶಪಿಸಿದ್ದೆ. ಆದರೆ ಈಗ ದಿನಕ್ಕೊಮ್ಮೆಯಾದರೂ ಇಲ್ಲಿಗೆ ಬರದಿದ್ದರೆ ಏನೋ ಕಳೆದುಕೊಂಡಂತೆ. ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಒಮ್ಮೊಮ್ಮೆ ಬೆಳಿಗ್ಗೆ – ಸಂಜೆ ಎರಡೂ ಸಲ ಬರುವುದುಂಟು. ಪ್ರತಿ ಸಲವೂ ಹೊಸ ಹೊಸ ಅನುಭವಗಳನ್ನು ಕೊಡುವ ಈ ಕೆರೆಯ ಸೌಂದರ್ಯಕ್ಕೆ ಮಾರುಹೋಗುವವರು ಅದೆಷ್ಟು ಮಂದಿ ಗೊತ್ತೇ.

 

ಪ್ರತೀ ದಿನ ಕೆರೆಯ ಉದ್ಯಾನದ ಬಾಗಿಲು ತೆರೆಯುತ್ತಲೇ ಮಲಗಿರುವ ಕೆರೆಯನ್ನು ನಿಧಾನವಾಗಿ ಎಬ್ಬಿಸಲು ಬಂದಂತೆ ಕಾಣುವ ಜನ ನಿಜವಾಗಿ ಎಚ್ಚರಗೊಳ್ಳುವುದು ಇಲ್ಲಿಯೇ. ಹಳೆಯ ಸುಕ್ಕು ಹಿಡಿದ ಪೈಜಾಮ ತೊಟ್ಟು ತಮ್ಮ ಮೊಬೈಲಿನಲ್ಲಿರುವ ಸುಪ್ರಭಾತವನ್ನು ಎಲ್ಲರಿಗೂ ಕೇಳಿಸಬಯಸುವ ಹಿರಿಯ ಜೀವವೊಂದು ನಿಧಾನವಾಗಿ ಸಾಗುತ್ತಲೇ ಟ್ರ್ಯಾಕ್ ಸೂಟ್ ಧರಿಸಿ ಬಂದವನು ತಾನೇನು ಕಮ್ಮಿ ಎನ್ನುವಂತೆ ತನ್ನಲ್ಲಿರುವ ಯಾವುದೋ ಇಂಗ್ಲಿಷ್ ಪಾಪ್ ಸಾಂಗ್ ಪ್ಲೇ ಮಾಡಿಕೊಂಡು ಓಡುವ ಯುವಕ, ಇದನ್ನು ನೋಡಿ ಇನ್ನಷ್ಟು ಹಿರಿಯ ನಾಗರಿಕರು ಹಣೆ ತಟ್ಟಿಕೊಳ್ಳುತ್ತಿರುವಾಗಲೇ ಇವರ ಕೋಪವನ್ನು ಇನ್ನಷ್ಟು ಹೆಚ್ಚಿಸುವ ಕೆದರಿದ ಮುಂಗುರುಳುಗಳ, ಅದಾವುದೋ ಸ್ಪೋರ್ಟ್ಸ್ ತುಂಡುಡುಗೆ ತೊಟ್ಟು ಓಡುವ ಪೋರಿ. ಇವಾವುದರ ಪರಿವೇ ಇಲ್ಲದಂತೆ ತಮ್ಮ ಪಾಡಿಗೆ ತಮ್ಮ ಕಿವಿಗಳಿಗೆ ಹೆಡ್ ಫೋನ್ ಸಿಕ್ಕಿಸಿಕೊಂಡು ನಡೆಯುವ, ಓಡುವ ಇನ್ನಷ್ಟು ಮಂದಿ, ಅದ್ಯಾರೋ ಡಾಕ್ಟರರ ಸಲಹೆಯ ಮೇರೆಗೆ ಕೈಗಳನ್ನು ಉದ್ದುದ್ದ ಬೀಸುತ್ತಾ, ದಾರಿಯುದ್ದಕ್ಕೂ ಚಪ್ಪಾಳೆ ಹೊಡೆದುಕೊಂಡು ಸಾಗುವ ಜನ,

ಈ ವೇಗದ ಜೀವನ ಶೈಲಿಯಲ್ಲಿ ದಿನಕ್ಕೊಂದು ಘಂಟೆಯಾದರೂ ಸ್ನೇಹಿತರ ಜೊತೆಗೂಡಿ ಕಷ್ಟ-ಸುಖ ಹಂಚಿಕೊಂಡು, ಕಾಫಿ ಹೀರುತ್ತಾ ಹರಟ ಬಯಸುವ ಗೃಹಸ್ಥರು, ಇನ್ನು ಜೀವನದ ಕಷ್ಟ, ಸಾಲ, ನಿರುದ್ಯೋಗ, ಭಗ್ನ ಕನಸು, ಪ್ರೇಮ ನಿರಾಸೆ, ಮಾರಣಾಂತಿಕ ರೋಗ, ವೃತ್ತಿಸೋಲು, ಹತಾಶೆಗಳಿಂದ ಕೊರಗುತ್ತಿರುವ ಪ್ರಕೃತಿ ಸೌಂದರ್ಯದಲ್ಲಿ ಎಲ್ಲವನ್ನೂ ಮರೆಯ ಬಯಸುವ ಅದೆಷ್ಟೋ  ಜೀವಿಗಳು, ಚುನಾವಣೆ ಬಂತೆಂದರೆ ಸಾಕು, ಕೆರೆಯ ದ್ವಾರಪಾಲಕರಂತೆ ಬಾಗಿಲಲ್ಲೇ ನಿಂತು, ಬಂದವರ ಕೈ ಕುಲುಕಿ, ಮತ ಯಾಚಿಸುವ ರಾಜಕಾರಿಣಿಗಳು, ದೇಹ ತೂಕ ಇಳಿಸಿಕೊಳ್ಳಲು, ಸಧೃಢತೆ ಕಾಪಾಡಿಕೊಳ್ಳಲು ಸಾಕಷ್ಟು ಶ್ರಮ ಪಡುವ, ಬೆವರು ಹರಿಸುವವರ ಹಿಂಡು,

 

ಹೀಗೆ ನಾನಾ ರೀತಿಯ ಜನ ನೋಡಸಿಗುವಾಗ ತಂದೆಯ ಬೆರಳನ್ನು ಹಿಡಿದು ನಿಧಾನವಾಗಿ ಸಾಗಿ ಬರುವ ಹಾಲುಗಲ್ಲದ ಕಂದನ ಹರುಷ ನೋಡಲದೆಷ್ಟು ಚೆಂದಾ. ’ಇಷ್ಟು ಪುಟ್ಟ ಮಗು ಇಡೀ ಕೆರೆಯ ಸುತ್ತ ನಡೆಯಬಲ್ಲದೆ? ’ ಎಂದು ತಂದೆಯನ್ನು ಕೇಳಿದರೆ, ’ ಇಲ್ಲ, ಸ್ವಲ್ಪ ದೂರ ನಡೆಯುತ್ತಾಳಷ್ಟೆ. ಇವಳಿಗೆ ಇಲ್ಲಿರುವ ಮೊಲಗಳ ಜೊತೆಯಲ್ಲಾಡುವುದೆಂದರೆ ತುಂಬಾ ಇಷ್ಟ. ನನ್ನ ತಂದೆ ನನ್ನನ್ನೂ ಈ ವಯಸ್ಸಿನಿಂದಲೇ ಇಲ್ಲಿಗೆ ಕರೆತರುತ್ತಿದ್ದರು. ನಾನೂ ಈ ಅಂಗಳದಲ್ಲೇ  ಆಡಿ ಬೆಳೆದವನು. ಒಂದು ಮಗುವಿನ ತಂದೆಯಾದರೂ ಈ ಕೆರೆಯ ಪಾಲಿಗೆ ನಾನಿನ್ನೂ ಮಗು ಎನ್ನುವ ಭಾವನೆಯೇ ಎಷ್ಟು ಚೆಂದವಲ್ಲವೇ? ಈ ಆನಂದ ನನ್ನ ಮಗುವಿಗೂ ಸಿಗಬೇಕೆನ್ನುವುದೇ ನನ್ನ ಆಸೆ’ ಎಂದು ಹೇಳುವ ಆ ಆಶಾ ಜೀವಯ ಕಣ್ಣುಗಳಲ್ಲಿದ್ದ ಆ ಆನಂದವನ್ನು ನೋಡುವುದೇ ಖುಷಿ. ಹೀಗೆ ಬೆಳಗಾಯಿತೆಂದರೆ, ನಾನಾ ಬಗೆಯ ಜನಸಮೂಹವೇ ಕಾಣಸಿಗುತ್ತದೆ. ಕೆಂಪಗಿದ್ದ ಸೂರ್ಯ ಕಿತ್ತಳೆ ಬಣ್ಣಕ್ಕೆ ತಿರುಗಿ, ನಂತರ ಹಳದಿಗೆ ತಿರುಗುತ್ತಿದ್ದಂತೇ ಅವನ ಕಿರಣಗಳ ತೀವ್ರತೆ ಹೆಚ್ಚಾಗಿ, ನಿಧಾನವಾಗಿ ಇಲ್ಲಿನ ಜನಸಮೂಹ ಮಾಯವಾಗ ತೊಡಗುತ್ತದೆ.

ಇನ್ನು ಸಂಜೆಯಾಯಿತೆಂದರೆ ಬೇರೆಯದೇ ಚಿತ್ರಣ ಕಾಣಸಿಗುತ್ತದೆ. ಇದರಲ್ಲಿ ಬಹುಪಾಲು ಯುವ ಪ್ರೆಮಿಗಳದ್ದು. ದಾರಿಯುದ್ದಕ್ಕೂ ಸಿಗುವ ಬೆಂಚು ಕಲ್ಲುಗಳು, ಮಂಟಪಗಳು, ಎಲ್ಲವನ್ನೂ ತಮಗಾಗಿಯೆ ಹಾಕಿಸಿದ್ದಾರೆಂದು ಭಾವಿಸಿ ಕಳೆದು ಹೋಗುವ ಜೋಡಿಗಳಿಗೇನೂ ಕಡಿಮೆಯಿಲ್ಲ. ಅದಕ್ಕೇ ಇರಬೇಕು, ಸಿನಿಮಾಗಳಲ್ಲೂ ’ಕೂರಕ್ಕುಕ್ರಳ್ಳಿ ಕೆರೆ ವ್ಹಾ ವ್ಹಾ! ’ ಎಂದು ಹಾಡುವುದು. ಇನ್ನುಳಿದವರೆಂದರೆ, ಬೆಳಿಗ್ಗೆಯಿಂದ ಮನೆ ಸಂಭಾಳಿಸಿ, ಸ್ನೇಹಿತೆಯರ ಜೊತೆ ಹರಟೆ ಕೊಚ್ಚ ಬಯಸುವ ಗೃಹಿಣಿಯರು, ಅವರೊಂದಿಗೆ ಬಂದು ಉದ್ಯಾನದಲ್ಲಿರುವ ’ಜಾರುವ ಬಂಡಿ’, ’ಟಕ್ಕಾ ಟಿಕ್ಕೀ’, ಇನ್ನಿತರ ಆಟಿಕೆಗಳ ಸುತ್ತ ಆಡುವ ಪುಟಾಣಿಗಳು, ಸಮಾಜದ ಯಾವುದೋ ವಿಷಯವಾಗಿ ಆರೋಗ್ಯಕರ ಚರ್ಚೆಗೆ ಯಾವುದಾದರೂ ಮಂಟಪ ಹುಡುಕಿಕೊಳ್ಳುವ ವಿಚಾರವಂತರ ಬಳಗ, ಕೆರೆಯ ಸುತ್ತಮುತ್ತಲಿನ ಸಮಸ್ಯೆ, ಅಭಿವೃಧ್ಧಿ ಹೀಗೆ ನಾನಾ ಯೊಜನೆಗಳನ್ನು ಹಾಕಿಕೊಳ್ಳುವ ಕೆರೆಯಂಚಿನ ವಾಯುವಿಹಾರಿಗಳ ಸಂಘ, ಹೀಗೆ ಅದೆಷ್ಟೋ ರೀತಿಯ ಜನರನ್ನು ಎದುರುಗೊಳ್ಳುತ್ತೇವೆ. ಹೀಗೆ ಕಾಲ ಕಳೆಯುತ್ತಿದ್ದಂತೆ ರವಿ ತನ್ನ ತಾಯಿಯ ಮಡಿಲನ್ನು ಸೇರುವ ಹಂಬಲದಿಂದ ನಿಧಾನವಾಗಿ ಕೆಳಗಿಳಿಯುತ್ತಿದ್ದಂತೆ, ಅವನ ಜೊತೆ ಮಾಯವಾದಂತೆ ಕಾಣುವ ಹಕ್ಕಿಗಳ ಹಿಂಡು, ನಿಧಾನವಾಗಿ ಒಂದೊಂದಾಗಿ ಹೊತ್ತಿಕೊಳ್ಳುವ ವಿದ್ಯುದ್ದೀಪಗಳು ಸಂಜೆಯ ಆಟದ ತೆರೆ ಎಳೆಯಲು ಸಿದ್ಧವಾಗುತ್ತವೆ. ೭ ಘಂಟೆಯ ಹೊತ್ತಿಗೆ ಕೆರೆಯ ಬಾಗಿಲಿಗೆ ಬೀಗ ಬೀಳಿತ್ತದೆ. ಇನ್ನೇನಿದ್ದರೂ ಮರುದಿನದ ಪ್ರಾತ: ಕಾಲದ ರಸನಿಮಿಷಗಳಿಗಾಗಿ ಕಾಯುವುದು.

ಅದೆಷ್ಟೋ ವರ್ಷಗಳಿಂದ ಈ ಬೆಳಕು-ಕತ್ತಲೆಯ ಕಣ್ಣಾ ಮುಚ್ಚಾಲೆಗೆ ಸಾಕ್ಷಿಯಾಗಿ ಭೇಟಿ ಕೊಟ್ಟವರ ಮನಸೋಲ್ಲಾಸ ಹೆಚ್ಚಿಸುವ ಈ ವಿಸ್ಮಯ ತಾಣ ಮುಂದೆಂದೂ  ಅಳಿಯದಿರಲಿ.

 

 

– ವಿನಯ್ ಕುಮಾರ್. ವಿ

 

15 Responses

 1. Shruthi Sharma Shruthi Sharma says:

  ತುಂಬಾ ಉತ್ತಮವಾಗಿ ನಿರೂಪಿಸಿದ್ದೀರಾ ವಿನಯ್ ! ನಿಮ್ಮ ಬರಹದ ಶೈಲಿಯು ಇಷ್ಟವಾಯಿತು. ಇನ್ನಷ್ಟು ಬರಹಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ 🙂

 2. Hema Hema says:

  ಉತ್ತಮ ಬರಹ . ನಿಮ್ಮ ಕಾವ್ಯಮಯ ಶೈಲಿ ಹಾಗೂ ಗುಣಗ್ರಾಹಿತ್ವ ಇಷ್ಟವಾಯಿತು. ಇನ್ನೂ ಬರೆಯಿರಿ!

 3. Avatar savithrisbhat says:

  ಕುಕ್ಕರಹಳ್ಳಿ ಕೆರೆಗೆ ಇಂದೇ ಹೋಗಿ ಅಲ್ಲಿನ ಸೂರ್ಯೋದಯಾ ಸೂರ್ಯಾಸ್ತಮಾನದ ಸೊಬಗನ್ನು ಸವಿಯಬೇಕೆನಿಸುತ್ತದೆ.ಬಹಳ ಚೆನ್ನಾಗಿ ಬರೆದಿದ್ದೀರಿ .

 4. Avatar jayashree says:

  ನಿಮ್ಮ ಬರಹಕ್ಕೆ ಅದ್ಭುತವಾದ ಚಿತ್ರಕ ಸಾಮರ್ಥ್ಯ ಇದೆ. ಉತ್ತಮವಾದ ಭಾಷೆ ಹಾಗೂ ವೈಚಾರಿಕ್ಲತೆ ಕೂಡ. ಅಭಿನಂದನೆಗಳು. ಬಹುಷಃ ನೀವು ಚೆನ್ನಾಗಿ ಕಥೆ ಹಾಗೂ ಕವನ ಬರೆಯ ಬಲ್ಲಿರಿ. ಸೃಜನಶೀಲ ಕಲ್ಪನೆ. ಹೀಗೆಯೇ ಮುಂದುವರಿಯಿರಿ. ಶುಭವಾಗಲಿ.

 5. ವಿನಯ್ ಕಣ್ಣಿಗೆ ಕಟ್ಟುವ ಹಾಗೆ ವರ್ಣನೆ ಮಾಡಿದ್ದೀರಾ. ಹೀಗೆ ಮುಂದುವರೆಸು.

 6. Avatar VINAY KUMAR V says:

  ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹದಿಂದ ಇನ್ನಷ್ಟು ಹೊಸ ಪ್ರಯತ್ನಗಳನ್ನು ಮಾಡುತ್ತೇನೆ. 🙂

 7. Avatar Ghouse says:

  Nice article…. Many a times, I visited this lake but never realize this part of fact behind it. Thanks for bringing a light on us with your meaningful article.

 8. Avatar Mounesh Pattar says:

  ಸೂಪರ್ ರೈಟಿಂಗ್ ಸರ್

 9. ತುಂಬಾ ಚೆನ್ನಾಗಿದೆ. ಉತ್ತಮವಾದ ಭಾಷೆ ಹಾಗೂ ಸೃಜನಶೀಲ ಕಲ್ಪನೆ ಹೀಗೆ ಮುಂದುವರೆಯಲಿ.

 10. Avatar Bharat M says:

  ನೈಸ್ ಅಂಡ್ ವೆಲ್ ಡೆಸ್ಕರಿಬ್ಡ್ ಆರ್ಟಿಕಲ್.ಥ್ಯಾಂಕ್ಸ್ ಫಾರ್ ಶೇರಿಂಗ್ .ವೈಟಿಂಗ್ ಫಾರ್ ನವ ಅಪ್ಡೇಟ್ಸ್.

 11. Avatar Impressbss says:

  Thank you for providing useful article.
  web design company in chennai

 12. Avatar Shivakumara says:

  Nice

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: