ತುಳುನಾಡಿನ ವಿಶೇಷ: ಸೋಣ ಸಂಕ್ರಮಣ

Share Button

ಬರುತ್ತಿದೆ ಸಿಂಹ ಸಂಕ್ರಮಣ. ತುಳುನಾಡಿನಲ್ಲಿ ಸೋಣ ಸಂಕ್ರಮಣ ಎಂದೇ ಜನಜನಿತ. ಅನಂತರ ಬರುವುದೇ ತುಳುವರ ಸೋಣ ತಿಂಗಳು. ಚಾಂದ್ರಮಾನ ಪಂಚಾಂಗದ ಪ್ರಕಾರ ಶ್ರಾವಣ ತಿಂಗಳು, ಸೌರಮಾನ ಪಂಚಾಂಗ ಅನುಸರಿಸುವ ತುಳುವರ ಪಾಲಿಗೆ ಸೋಣ ತಿಂಗಳು (ಅಲ್ಲಿ ಹದಿನೈದು ದಿನದ ವ್ಯತ್ಯಾಸ ಇದೆ).  ಸೋಣ ಸಂಕ್ರಮಣಕ್ಕೆ  ತುಳುನಾಡಿನಲ್ಲಿ ವಿಶೇಷ ಆದ್ಯತೆಯಿದೆ. ಸೋಣ ಸಂಕ್ರಮಣ ಬಂತೆಂದರೆ  ಸಂಭ್ರಮ ಶುರು. ಹಿಂದೂ ಸಂಪ್ರದಾಯದ ಪ್ರಕಾರ ಆಷಾಢ ಮಾಸ(ತುಳುವರ ಆಟಿ ತಿಂಗಳು) ದಲ್ಲಿ ಶುಭಕಾರ್ಯಗಳು ನಿಷಿದ್ಧ. ಅದರಿಂದಾಗಿಯೋ ಏನೋ, ಸೋಣ ಬಂತೆಂದರೆ ಮೈಮನಗಳಲ್ಲಿ ಪುಳಕ. ಸ್ತಬ್ಧವಾಗಿದ್ದ ಚಟುವಟಿಕೆಗಳೆಲ್ಲಾ ಮತ್ತೆ ಮರುಚಾಲನೆ ಪಡೆಯುತ್ತವೆ. ಸೋಣ ಸಂಕ್ರಮಣದ ನಂತರ ಒಂದರ ಹಿಂದೊಂದು ಹಬ್ಬಗಳ ಸಾಲೇ ಬರುತ್ತವೆ. ನಮ್ಮ ಸಂಸ್ಕೃತಿಯಲ್ಲಿ, ಎಷ್ಟೊಂದು ಆಚರಣೆಗಳು ಹಾಸುಹೊಕ್ಕಾಗಿದ್ದವು. ಕೆಲವೊಂದು ಆಚರಣೆಗಳು ಈಗ ಕಣ್ಮ್ರರೆಯಾಗಿವೆಯಾದರೂ ಕೆಲವೊಂದು ಉಳಿದುಕೊಂಡಿವೆ. ಸೋಣ ಸಂಕ್ರಮಣ ಆಚರಣೆಯ ಆಶಯದಲ್ಲಿ ಸಾಮ್ಯತೆ ಇದ್ದರೂ, ಬೇರೆ ಬೇರೆ ಪಂಗಡದವರ ಆಚರಣೆಯಲ್ಲಿ ವ್ಯತ್ಯಾಸವಿರುತ್ತದೆ ಅಲ್ಲದೆ  ಊರಿಂದ ಊರಿಗೆ ಆಚರಣೆಗಳಲ್ಲಿ ಸಣ್ಣ ಸಣ್ಣ ಬದಲಾವಣೆಗಳು ಕಂಡುಬರುತ್ತವೆ.  ತುಳುನಾಡಿನಲ್ಲಿ ರೂಢಿಯಿರುವ ಸೋಣ ಸಂಕ್ರಮಣದ ಆಚರಣೆಯ ಕುರಿತಂತೆ ಈ ಲೇಖನ.

ಹಬ್ಬಗಳನ್ನು ಸ್ವಾಗತಿಸಲೆಂದೋ ಗೊತ್ತಿಲ್ಲ, ಹೆಚ್ಚಾಗಿ  ಸಂಕ್ರಮಣ ಬರುವ ಎರಡು ದಿನಗಳ ಮೊದಲೇ, ಮನೆಯ ಎಲ್ಲಾ ಬಾಗಿಲುಗಳನ್ನು ನೀರಿನಿಂದ ತೊಳೆದು, ಹೊಸ್ತಿಲನ್ನು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿರುತ್ತಿದ್ದರು ಮನೆಯ ಹೆಂಗಸರು. ತೊಳೆದ ಬಾಗಿಲು ಮತ್ತು ಕಿಟಕಿ ಬಾಗಿಲುಗಳ ಮೇಲೆ ಜೇಡಿಮಣ್ಣಿನಿಂದ ತಯಾರಿಸಿದ ಶೇಡಿಯಿಂದ ಸುಂದರ ವಿನ್ಯಾಸಗಳನ್ನು ಬಿಡಿಸುವ ಕ್ರಮವಿತ್ತು. ಮನೆಯ ಬಾಗಿಲುಗಳ ಮೇಲಿರುವ ವಿನ್ಯಾಸಗಳು ಮನೆಯೊಡತಿಯ ಕಲಾಸಕ್ತಿ ಹಾಗೂ ಅದರಲ್ಲಿರುವ ಅಭಿರುಚಿಯನ್ನು ಪ್ರತಿನಿಧಿಸುತ್ತಿದ್ದವು ಎಂದರೂ ತಪ್ಪಾಗಲಾರದು. ಸಂಬಂಧಿಕರ ಅಥವಾ ಊರಿನ ಯಾವುದಾದರೂ ಮನೆಗೆ ಹೋದಾಗ ಅಲ್ಲಿಯ ಬಾಗಿಲಿನ ಮೇಲಿರುವ ವಿನ್ಯಾಸವನ್ನು ಗಮನಿಸಿ, ಇಷ್ಟವಾಗಿದ್ದರೆ ಅಂತಹ ವಿನ್ಯಾಸವನ್ನು ತಮ್ಮ ಮನೆಯಲ್ಲೂ ಬಿಡಿಸಲು ಕಾಯುತ್ತಿದ್ದುದು ಸೋಣ ಸಂಕ್ರಮಣವನ್ನೇ. ಈ ಆಚರಣೆಗಳು ನಿಧಾನವಾಗಿ ಮರೆಗೆ ಸರಿಯುತ್ತಿವೆ. ಆದಾಗ್ಯೂ, ಸೋಣ ಸಂಕ್ರಮಣದ ದಿನ ಹೊಸ್ತಿಲಿಗೆ ನಮಸ್ಕಾರ ಮಾಡುವ ಪದ್ಧತಿ ಬಹುತೇಕ ಮನೆಗಳಲ್ಲಿ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ ಅನ್ನುವುದು ಗಮನಾರ್ಹ ಸಂಗತಿ.

ಸಾಮಾನ್ಯವಾಗಿ ಬೆಳಗಿನ ಹೊತ್ತು ಮನೆಯ ಪ್ರಧಾನ ಹೊಸ್ತಿಲಿಗೆ (ಹೆಚ್ಚಾಗಿ ದೇವರ ಕೋಣೆಯ ಒಳಗೆ ಹೋಗುವ ಜಾಗದಲ್ಲಿರುವ ಹೊಸ್ತಿಲು) ವರ್ಷದ ಎಲ್ಲಾ ದಿನಗಳಲ್ಲೂ ಹೊಸ್ತಿಲ ನಮಸ್ಕಾರ ಸಂದರೆ, ಸೋಣ ತಿಂಗಳಿನ ಮೊದಲನೇ ದಿನ ಅಂದರೆ ಸೋಣ ಸಂಕ್ರಮಣದ ದಿನ ಕಡ್ಡಾಯವಾಗಿ ಮನೆಯಲ್ಲಿರುವ ಎಲ್ಲಾ ಹೊಸ್ತಿಲುಗಳಿಗೆ ಪೂಜೆ ಸಲ್ಲಲೇಬೇಕು. ಸೋಣ ತಿಂಗಳಿನಲ್ಲಿ ರಾತ್ರಿ ಕೂಡಾ ಹೊಸ್ತಿಲಿಗೆ ನಮಸ್ಕರಿಸುತ್ತಾರೆ. ಶುಭ್ರಸ್ನಾತರಾದ ಮನೆಯ ಹೆಂಗಸರು ಮತ್ತು ಹೆಣ್ಣುಮಕ್ಕಳು ಸೇರಿ ಮನೆಯಲ್ಲಿರುವ ಎಲ್ಲಾ ಹೊಸ್ತಿಲುಗಳ ಪೂಜೆ ಮಾಡುತ್ತಾರೆ. ಹೊಸ್ತಿಲನ್ನು ತೊಳೆದು, ಶೇಡಿಯನ್ನು ಬಳಸಿ, ಲಾಗಾಯ್ತಿನಿಂದ ಬಂದ ಕೆಲವು ಚಿತ್ರ/ಚಿಹ್ನೆಗಳನ್ನು ಬಿಡಿಸಿ ಹೊಸ್ತಿಲ ಬರಹವನ್ನು ಬರೆಯಲಾಗುತ್ತದೆ. ಈ ಕ್ರಮಕ್ಕೆ ಹೊಸ್ತಿಲು ಬರೆಯುವುದು ಎಂದೇ ಹೆಸರು. ಹೊಸ್ತಿಲ ಬರಹದಲ್ಲಿ ಬಳಕೆಯಾಗುವ ಚಿತ್ರ ಯಾ ಚಿಹ್ನೆಗಳು, ಊರಿಂದ ಊರಿಗೆ ಹಾಗೆಯೇ ಕುಟುಂಬದಿಂದ ಕುಟುಂಬಕ್ಕೆ ವ್ಯತ್ಯಾಸವಾಗುತ್ತದೆ.

ಸೋಣ ಸಂಕ್ರಮಣದ ನಾಲ್ಕೈದು ದಿನ ಮೊದಲೇ ನೆನೆಸಿಟ್ಟ ಹುರುಳಿಯನ್ನು ಮಣ್ಣಿನಲ್ಲಿ ಬಿತ್ತಿ, ಮಣ್ಣಿನ ಮೇಲೆ ಮಣ್ಣಿನ ಮಡಕೆಯನ್ನು ಬೋರಲು ಹಾಕುತ್ತಾರೆ. ಬಿತ್ತಿದ್ದ ಹುರುಳಿ ಮೊಳಕೆಯೊಡೆದು ಸಣ್ಣ ಗಿಡವಾಗಿರುತ್ತದೆ. ಸೂರ್ಯಕಿರಣಗಳ ಸಂಪರ್ಕ ಇಲ್ಲದುದರಿಂದ  ಎಲೆಗಳು ಬಿಳಿಮಿಶ್ರಿತ  ತಿಳಿ ಹಳದಿ ಬಣ್ಣದಲ್ಲಿರುತ್ತವೆ. ಇದಕ್ಕೆ ಹುರುಳಿಯ  ಹೂ (ಕುಡುತ ಪೂ- ತುಳು) ಅನ್ನುತ್ತಾರೆ. ಹುರುಳಿಯ ಹೂ  ಸೋಣ ಸಂಕ್ರಮಣದ ದಿನದ ಹೊಸ್ತಿಲಪೂಜೆಯ ಸಂದರ್ಭ ಇರಲೇಬೇಕು. ಜೊತೆಗೆ ಮಳೆಗಾಲದಲ್ಲಿ, ಮನೆಯ ಸುತ್ತಮುತ್ತ ಯಥೇಚ್ಛವಾಗಿ ಕಾಣಸಿಗುವ ಸೋಣ ಹೂವು (ಗುಲಾಬಿ ಬಣ್ಣದ  ಸಣ್ಣ ಹೂಗಳಿರುವ  ನೀರ್ಕಡ್ಡಿ ಗಿಡವನ್ನು ಸೋಣ ಹೂವಿನ ಗಿಡ ಅನ್ನುತ್ತಾರೆ),  ಸೀತೆ, ಸೀತೆಯ ಅತ್ತೆ, ಹೆರೆಮಣೆ (ಪೆರೆತಮಣೆ- ತುಳು) ಎಂದು ಕರೆಸಿಕೊಳ್ಳುತ್ತಿದ್ದ ಕೆಲ ಜರಿಸಸ್ಯಗಳು, ಮದುಮಗಳು ಹೂ (ಮದಿಮಾಳ್  ಪುಷ್ಪ – ತುಳು), ಹೊದಳಿನ  ಗಿಡ (ಪೊದ್ದೊಳು ಪುಷ್ಪ- ತುಳು), ಚಿಟಿಕೆ ಹೂವು (ನೆಟ್ಟಿ ಪುಷ್ಪ – ತುಳು) ಮುಂತಾದ ಸಸ್ಯದ ಕಡ್ಡಿ ಯಾ ಹೂವುಗಳನ್ನು ಹೊಸ್ತಿಲಿನ ಇಕ್ಕೆಲಗಳಲ್ಲೂ ಇಟ್ಟ ಬಳಿಕ, ಕೊನೆಯಲ್ಲಿ ನೀರು ತುಂಬಿದ ಗಿಂಡಿ ಹಾಗೂ ದೀಪವನ್ನು ಹೊಸ್ತಿಲ ಮಧ್ಯೆ ಇಟ್ಟು, ಹೊಸ್ತಿಲಿಗೆ ಅರಿಶಿನ-ಕುಂಕುಮ ಹಚ್ಚಿ, ಎಲ್ಲರೂ ಒಟ್ಟಾಗಿ ಸೇರಿ ಹೊಸ್ತಿಲಿಗೆ ನಮಸ್ಕಾರ ಮಾಡುತ್ತಾರೆ. ಮನೆಯ ಒಳಬದಿಯಿಂದ ನಮಸ್ಕಾರ ಮಾಡುವುದು ಕ್ರಮ. ಬಳಿಕ ದೀಪವನ್ನು ತೆಗೆದು ಕೆಳಗಿಟ್ಟು, ಗಿಂಡಿಯಿಂದ ಒಂದು ಹನಿ ನೀರನ್ನು ಹೊಸ್ತಿಲಿನ ಒಳಗೆ ಎರೆಯುತ್ತಾರೆ. ಹೊಸ್ತಿಲ ಮೇಲಿರಿಸಿದ ಹೂವೊಂದನ್ನು ತೆಗೆದು ಮುಡಿಗಿಡುತ್ತಾರೆ. ಆ ಬಳಿಕ ಮನೆಯ ಮುಂಭಾಗದಲ್ಲಿರುವ ತುಳಸಿಗಿಡಕ್ಕೆ ಗಿಂಡಿಯಲ್ಲಿರುವ ನೀರನ್ನು ಹಾಕಿ, ತುಳಸಿಕಟ್ಟೆಗೆ ಪ್ರದಕ್ಷಿಣೆ ಬಂದು ನಮಸ್ಕರಿಸುವುದು ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿ.  ಹೊಸ್ತಿಲು ಪೂಜೆ ಮಾಡುವ ಸಂದರ್ಭದಲ್ಲಿ, ಬೇರೆ ಯಾರೂ ಹೊಸ್ತಿಲನ್ನು ದಾಟಿ ಒಳಹೊರಗೆ ಹೋಗುವಂತಿಲ್ಲ. [ಇದೇ ತರದ ಆಚರಣೆಯನ್ನು  ಆಟಿ ಹುಣ್ಣಿಮೆಯ ದಿನವೂ ಮಾಡುವ ಪದ್ಧತಿ ಇದೆ. ಆ ದಿನ ಹೊಸ್ತಿಲಿಗೆ ನಮಸ್ಕಾರ ಮಾಡುವಾಗ, ಮೇಲೆ ವಿವರಿಸಿದ ಎಲ್ಲಾ ಸಾಮಗ್ರಿಗಳ ಜೊತೆ ಬೇಯಿಸಿದ ಹಲಸಿನಬೀಜಗಳನ್ನೂ ಸಹಾ ಹೊಸ್ತಿಲ ಇಕ್ಕೆಲಗಳಲ್ಲಿ ಇಡುತ್ತಾರೆ]

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚಿನ ಮನೆಗಳಲ್ಲಿ ನಡೆಯುವ ಸೋಣ ಸಂಕ್ರಮಣದ ಹೊಸ್ತಿಲು ಪೂಜೆಯ ಸಂದರ್ಭ  ಲಕ್ಷ್ಮಿದೇವಿಯ ಸ್ವರೂಪವಾದ ಹೊಸ್ತಿಲಜ್ಜಿಯನ್ನು ಸ್ವಾಗತಿಸಿ ಪೂಜಿಸುವುದು ಅನ್ನುವ ಪ್ರತೀತಿ ಇದೆ. ಆಕೆಯನ್ನು ತಡ್ಯದಜ್ಜಿ (ತಡ್ಯ ಅಂದರೆ ತುಳುವಿನಲ್ಲಿ ಹೊಸ್ತಿಲು ಎಂದರ್ಥ), ಸೋಣದಜ್ಜಿ ಎಂದೂ ಕರೆಯುತ್ತಾರೆ. ಕೆಲವು ಸಮುದಾಯಗಳಲ್ಲಿ, ಸೋಣ ಸಂಕ್ರಮಣದ ದಿನ ಬೆಳಗಿನ ಹೊತ್ತು ಮಾಡುವ ಹೊಸ್ತಿಲ ಪೂಜೆಯ ಸಂದರ್ಭವೇ, ಸುಟ್ಟ ಗೇರುಬೀಜದ ಬೊಂಡು, ಬೇಯಿಸಿದ ಹಲಸಿನ ಬೀಜ ಇತ್ಯಾದಿಗಳನ್ನು ಹೊಸ್ತಿಲಜ್ಜಿಗೆ ಸಮರ್ಪಿಸುತ್ತಾರೆ. ಇನ್ನೂ ಹಲವು ಸಮುದಾಯಗಳಲ್ಲಿ, ಸೋಣ ತಿಂಗಳ ಕೊನೆಯ ದಿನ ಸಂಜೆ ಹೊಸ್ತಿಲ ಪೂಜೆ ಮಾಡುವಾಗ, ತೆಂಗಿನಕಾಯಿ ಒಡೆದು, ದೋಸೆ, ಶ್ಯಾವಿಗೆ, ಸಾರು ಮುಂತಾದುವುಗಳನ್ನು ಸಮರ್ಪಿಸಿ ಹೊಸ್ತಿಲಜ್ಜಿಯನ್ನು ಬೀಳ್ಕೊಡುವ ಕ್ರಮವೂ ಇದೆಯಂತೆ.

ಕಾಲ ಬದಲಾಗಿದೆ. ಉದ್ಯೋಗ ನಿಮಿತ್ತ, ಹಳ್ಳಿಯಲ್ಲಿದ್ದ ಹೆಚ್ಚಿನವರು ನಗರವಾಸಿಗಳಾಗಿದ್ದಾರೆ. ನಗರ ಪ್ರದೇಶಗಳಲ್ಲಿ, ಹಿಂದಿನವರು ಬಳಸುತ್ತಿದ್ದ ನಿರ್ದಿಷ್ಟ  ಗಿಡಗಳು ಕಾಣಸಿಗುತ್ತಿಲ್ಲ. ಸೋಣ ಸಂಕ್ರಮಣದಂದು ಹೊಸ್ತಿಲ ಪೂಜೆ ಮಾಡುವಾಗ, ಹಣ ಕೊಟ್ಟು ತಂದ ಕಾಕಡ, ಸೇವಂತಿಗೆ ಮುಂತಾದ ಹೂಗಳ ಬಳಕೆ ಮಾಡುವುದು ಅನಿವಾರ್ಯವಾಗಿದೆ.   ಹಳ್ಳಿಯ ಮನೆಗಳು ಕೂಡಾ ಬದಲಾಗುತ್ತಿವೆ. ಹೊಸ ವಿನ್ಯಾಸದ ಮನೆಗಳಲ್ಲಿ ಹೊಸ್ತಿಲುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹಳ್ಳಿಗಳಲ್ಲಿರುವ ಹೊಸ ಪೀಳಿಗೆಯ ಜನರಿಗೆ, ಆ ಗಿಡಗಳ ಪರಿಚಯವೂ ಇಲ್ಲ. ಪರಿಚಯವಿದ್ದರೂ, ಸಮಯದ ಅಭಾವದಿಂದಾಗಿ, ಆ ಗಿಡಗಳನ್ನು ಹುಡುಕಿಕೊಂಡು ಹೋಗುವ ವ್ಯವಧಾನವೂ ಇಲ್ಲವಾಗಿದೆ.  ಮಳೆಗಾಲದಲ್ಲಿ ಅನೇಕ ವಿಧದ ಸಸ್ಯಗಳಿರುವುದು ಸರ್ವೇಸಾಮಾನ್ಯವಾಗಿರುವಾಗ,  ಯಾಕೆ ಅದೇ ನಿರ್ದಿಷ್ಟ ಗಿಡಗಳನ್ನು ಸೋಣ ತಿಂಗಳಲ್ಲಿ ಹೊಸ್ತಿಲ ಪೂಜೆಗೆ ಬಳಸುತ್ತಿದ್ದರು ಎಂದು ಕಾರಣ ತಿಳಿಯಹೊರಟರೆ ಖಂಡಿತಾ ಒಂದು ಸಂಶೋಧನೆಯ ವಿಷಯವಾದೀತು.

– ಡಾ.ಕೃಷ್ಣಪ್ರಭಾ, ಮಂಗಳೂರು

15 Responses

  1. Hema says:

    ಚೆಂದದ ಬರಹ..ನಮ್ಮ ಅಜ್ಜಿ, ಅಮ್ಮ,ಅತ್ತೆಯರು ಪಾಲಿಸುತ್ತಿದ್ದ ಸಂಸ್ಕೃತಿಯನ್ನು ನೆನಪಿಸಿತು ..

    • Krishnaprabha says:

      ಧನ್ಯವಾದಗಳು..‌‌ಧಾವಂತದ ಬದುಕಿನಲ್ಲಿ ಆಚರಣೆಗಳು ಮರೆಯಾಗುತ್ತಿವೆ

  2. ನಯನ ಬಜಕೂಡ್ಲು says:

    Beautiful ಮೇಡಂ, ಹೊಸ್ತಿಲು ಬರೆಯುವ ಕ್ರಮವನ್ನು ದಿನ ನಿತ್ಯ ಆಚರಿಸುತ್ತೇವೆ , ಆದರೆ ಅದರ ಮಹತ್ವ ಹಾಗು ಸಾಕಷ್ಟು ಸಂಗತಿಗಳನ್ನು ನಿಮ್ಮ ಲೇಖನದಿಂದ ತಿಳ್ಕೊಂಡೆ . very nice.

    • Krishnaprabha says:

      ಧನ್ಯವಾದಗಳು ನಯನಾ ಅವರಿಗೆ. ಆಚರಣೆಗಳ ಹಿಂದಿರುವ ಕಾರಣಗಳು ಅಧ್ಯಯನ ಯೋಗ್ಯ ವಿಷಯ..‌

  3. Vishwanath T says:

    ಅಚ್ಚ ಕನ್ನಡದಿ ಅಚ್ಚುಕಟ್ಟಿನ ಆಚರಣೆಗಳ ನೆಚ್ಚಿ ಬರೆವ ನಮ್ಮ KP ಮೇಡಂ ಗೆ ಅಕ್ಕರೆಯ ಶುಭಾಶಯಗಳು.

    • Krishnaprabha says:

      ಲೇಖನದ ಬಗ್ಗೆ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು

  4. Santosh Shetty says:

    ಯಾಂತ್ರಿಕ ಜೀವನ ಶೈಲಿಯ ಲ್ಲಿ ಬಾಲ್ಯದ ದಿನಗಳ ಆಚರಣೆ ಮರೆತೇ ಹೋಗಿದ್ದವು : ಮತೆ ಮನಃಪಟಲದಲ್ಲಿ ಮೂಡಿದ ಅನುಭವ ವಾಯಿತು.
    ಧನ್ಯ ವಾದಗಳು… ಕೃಷ್ಣ ಪ್ರಭಾ.
    ಕಾಯುವೆ ನಾ… ನಿಮ್ಮ ಮಗದೊಂದು ಲೇಖನಕ್ಕೆ.

    • Krishnaprabha says:

      ಧನ್ಯವಾದಗಳು ಸಂತೋಷ್ ಅವರಿಗೆ… ಪ್ರೋತ್ಸಾಹದ ನುಡಿಗಳು ಲೇಖನ ಬರೆಯಲು ಪ್ರೇರಣೆ

  5. ವಿಜಯಾಸುಬ್ರಹ್ಮಣ್ಯ , says:

    ಬಹಳ ಒಳ್ಳೆಯ ಲೇಖನ ತಂಗೀ.
    ನಮ್ಮಲ್ಲಿಯೂ ಹೆಂಗಳೆಯರು ಹೊಸ್ತಿಲಿಗೆ ಹೀಗೇ ಬರೆಯುವುದು. ಋತುಮತಿಯಾಗಿ ನಾಲ್ಕು ದಿನಗಳ ನಂತರ ಸ್ನಾನಮಾಡಿ ಬಂದು ಹೊಸ್ತಿಲಿಗೆ ಬರೆದು ಹೀಗೆಯೇ ನಮಸ್ಕಾರ ಮಾಡಲು ಕಲಿಸಿದ್ದು ನನ್ನಮ್ಮ.
    ಉಚಿತವಾದ ಸಂಗ್ರಹ ಯೋಗ್ಯ ಬರಹ.

    • Krishnaprabha says:

      ಧನ್ಯವಾದಗಳು ವಿಜಯಕ್ಕ…‌ಹಿರಿಯರ ಆಶೀರ್ವಾದ ಮತ್ತು ಪ್ರೋತ್ಸಾಹವೆಂದಿಗೂ ಶ್ರೀರಕ್ಷೆ

  6. Shankari Sharma says:

    ಹೌದು, ನಾನು ಪ್ರತಿ ವರ್ಷ ತಿಂಗಳಿಡೀ ಆಚರಿಸುವ ಆಚರಣೆಯಿದು..ಹೆಮ್ಮೆ ಎನಿಸುತ್ತದೆ. ಈ ಐದೂ ಸಸ್ಯಗಳು ಮನೆ ಹಿತ್ತಲಲ್ಲಿ ಒದಗುವುದರಿಂದ ಸಮಾಧಾನ. ಹೊಸ್ತಿಲು ಬರೆಯುವ ಕ್ರಮ ಬೇರೆ ರೀತಿಯಲ್ಲಿದ್ದರೂ ವಿಧಾನ ಸ್ವಲ್ಪ ಇದುವೇ. ಸೋಣೆಯ ಮೊದಲ ದಿನ ಮತ್ತು ಕೊನೆಯ ದಿನ ಹಲಸಿನ ಬೀಜ ಮತ್ತು ಗೇರುಬೀಜ ಸುಟ್ಟು ಅದನ್ನು ಜೊತೆಗಿಟ್ಟು ಹೊಸ್ತಿಲಿಗೆ ನಮಸ್ಕಾರ ಮಾಡುವುದೂ ನಮ್ಮ ರೂಢಿ. ನಾನು ಊರಲ್ಲಿಲ್ಲದುದರಿಂದ ಈ ಸಲ ನನಗೆ ತಪ್ಪಿ ಹೋಯಿತು.
    ಒಳ್ಳೆಯ ಲೇಖನ..ಧನ್ಯವಾದಗಳು.

    • Krishnaprabha says:

      ಹಳ್ಳಿಗಳಲ್ಲಿ ಸುಲಭವಾಗಿ ಕಾಣಸಿಗುತ್ತವೆ ಈ ಸಸ್ಯಗಳು…ಪೇಟೆಯಲ್ಲಿ ಸ್ವಲ್ಪ ಕಷ್ಟ…. ಧನ್ಯವಾದಗಳು ಶಂಕರಿ ಅವರಿಗೆ…

  7. Anonymous says:

    ಉತ್ತಮ ಲೇಖನ. ಕಾರ್ ಆಟಿ ತಿಂಗಳಲ್ಲಿ ಸೂರ್ಯನನ್ನು ಕಾಣದೆ ಭೋರ್ಗರೆಯುವ ಮಳೆಗೆ ಜರ್ಜರಿತವಾದ ಬದುಕಿಗೆ ಹೊಸ ಚೈತನ್ಯ ವನ್ನು ಕೊಡುವ ಮಾಸವೇ ಸೋಣ .ಅದರ ಮಹತ್ವವನ್ನು ಆಚರಿಸುವ ವಿಧಾನವನ್ನು ಚಂದವಾಗಿ ಬರೆದಿದ್ದಾರೆ. ಅಭಿನಂದನೆಗಳು.

    • Krishnaprabha says:

      ಅನುಭವಗಳನ್ನು ಬರಹ ರೂಪಕ್ಕಿಳಿಸಿದೆ‌..‌ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು….

  8. Anonymous says:

    ಸೋಣೆ ತಿಂಗಳಿನ ವಿಶೇಷತೆ,ಹಾಗೂ ಹೊಸ್ತಿಲು ಪೂಜೆಯ ಬಗ್ಗೆ ಚೆನ್ನಾದ ಮಾಹಿತಿ..ನಾನು ಹೊಸ್ತಿಲು ಮಾಡುತ್ತೇನೆ,ಹೊರತು ಆ ಆಚರಣೆಯ ಬಗ್ಗೆ ತಿಳಕೊಂಡಿರಲಿಲ್ಲ.ನಿಮ್ಮ ಲೇಖನಕ್ಕೆ ಧನ್ಯವಾದಗಳು

Leave a Reply to Santosh Shetty Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: