ಉಪ್ಪಿಟ್ಟಿನ ಬಗ್ಗೆ ಒಂದಿಷ್ಟು….

Share Button
ಮೊನ್ನೆ ಟಿ ವಿ ಕಾರ್ಯಕ್ರಮವೊಂದರಲ್ಲಿ ‘ಪ್ರತಿ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇರುತ್ತಾಳೆ ಅದು ಹೆಚ್ಚಾಗಿ ಮಡದಿ ಅಥವಾ ತಾಯಿ’ ಎಂಬ ವಿಷಯದ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಿತ್ತು.ಅದರಲ್ಲಿ ಈ ವಿಷಯದ ಬಗ್ಗೆ ವಿರೋಧಿ ಗುಂಪಿನಲ್ಲಿದ್ದವರು ಮಾತನಾಡುತ್ತಾ ಇದೆಲ್ಲಾ ಸುಳ್ಳು ಎಂದು ವಾದಿಸಿ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಇರುವದು ಮಾತೆ ರೂಪದ ಅಥವಾ ಮಡದಿ ರೂಪದ ಸ್ತ್ರೀಯಲ್ಲಾ ಬದಲಿಗೆ ಅವಳು ಮಾಡುವ ಉಪ್ಪಿಟ್ಟು! ಎಂದು ಸೋದಾಹರಣವಾಗಿ ಹಾಸ್ಯಮಯವಾಗಿ ವಿವರಿಸಿದರು.ಈ ಮಾತು ಅಕ್ಷರಶಃ ನಿಜ ಎಂದು ನನ್ನ ಅನಿಸಿಕೆ.
.
ಈ ಉಪ್ಪಿಟ್ಟಿಗೆ ದಕ್ಷಿಣದಲ್ಲಿ  ಉಪ್ಪಿಟ್ಟು ಅಥವಾ ಖಾರಾ ಭಾತ್ ಎಂದೂ ಉತ್ತರ ಹಾಗೂ ಮಹಾರಾಷ್ಟ್ರದಲ್ಲಿ ಉಪಮಾ ಎಂದೂ ಕರೆಯುತ್ತಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿದ್ದಿದ್ದೆ. ಇದು ಜನಸಾಮಾನ್ಯರ ಮೆಚ್ಚಿನ ದೇಶಿ ತಿಂಡಿ ಎಂದು ಕರೆಯಲು ಹೆಮ್ಮೆಯೆನಿಸುತ್ತದೆ.. ಇನ್ನು ತಯಾರಿಸಲು ಬೇಕಾದ ಮೂಲ ವಸ್ತು ಗೋದಿಯಿಂದ ತಯಾರಾದ ರವೆ.  ಇದು ತಲೆತಲಾಂತರದಿಂದ ಬಂದ ಅಬಾಲವೃದ್ಧರಾಗಿ ಎಲ್ಲರೂ ಮನೆಯಲ್ಲಿ ಫಲಹಾರಕ್ಕೆಂದು ಮಾಡುತ್ತ ಬಂದಿರುವ  ತಿಂಡಿ. ಮೆತ್ತಗಿರುವದರಿಂದ ಹಲ್ಲಿಗೆ ತೊಂದರೆಯಾಗುವದಿಲ್ಲ.ಎರಡು ಪ್ಲೇಟ್ ಉಪ್ಪಿಟ್ಟು ಹೊಟ್ಟೆಗೆ ಇಳಿಸಿಬಿಟ್ಟರೆ ಊಟದಷ್ಟೇ ಉಪಹಾರವಾದಂತಾಗಿ ಹೊಟ್ಟೆ ತುಂಬಿ ಬಿಡುತ್ತದೆ.ಹೊಟ್ಟೆಯಲ್ಲಿ ಇದು ರಿಕ್ ಆಗಿ ಕೂಡುವದರಿಂದಲೋ ಏನೋ ಇದಕ್ಕೆ ಕಾಂಕ್ರೀಟ್ ಎಂದೂ   ಕರೆಯುತ್ತಾರೆ!
.
ಹೆಚ್ಚಾಗಿ ಉಪ್ಪಿಟ್ಟಿಗೆ ಹೊಂದಿಕೆ ಆಗುವ ಸಿಹಿತಿಂಡಿ ಶಿರಾ. ಇದನ್ನು ಬೆಂಗಳೂರು ಕಡೆಗೆ ಕೇಸರೀ ಭಾತ್ ಎಂದು ಕರೆಯುವುದುಂಟು. ಕೇಸರಿ ಭಾತ್ ಮತ್ತು ಖಾರಾ ಭಾತ್ ಜತೆಯಾದ ತಿಂಡಿಯೇ  ಚೌಚೌ ಭಾತ್. ಬೆಳಪಿಗಿನ ಹೊತ್ತು ಹೋಟೆಲ್ಲಿಗೆ ಹೋಗುವ ಗ್ರಾಹಕ ಹೆಚ್ಚಾಗಿ  ಆರ್ಡರ್  ಮಾಡುವದು ಉಪ್ಪಿಟ್ಟನ್ನೆ. ರವಿವಾರಕ್ಕೊಮ್ಮೆ ಎಲ್ಲರ ಮನೆಯಲ್ಲಿ ಉಪ್ಪಿಟ್ಟು ಒಂದು  ಸರ್ವೇ ಸಾಮಾನ್ಯ ತಿಂಡಿ. ಶಾಲೆಗೆ ಹೋಗುವ ಹುಡುಗರಿಗೆ ತಾಯಂದಿರು ಡಬ್ಬಿಗೆ ಹಾಕಿಕೊಡುವದು ಉಪ್ಪಿಟ್ಟನ್ನೇ. ಶಾಲೆಯ ಬಿಸಿಯೂಟದ ಯೋಜನೆಯಲ್ಲೂ ಉಪ್ಪಿಟ್ಟಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ.
.
ಇದೊಂದು ಹಳೆಯ ರುಚಿಯ ತಿಂಡಿಯಾದುದರಿಂದ ಟಿವಿಯ ಯಾವ ಹೊಸ ರುಚಿ ಕಾರ್ಯಕ್ರಮದಲ್ಲೂ ಇದನ್ನು ಮಾಡುವ ವಿಧಾನ ಕುರಿತು ಬಂದಿಲ್ಲಾ.ಇದನ್ನು ಮಾಡುವ ವಿಧಾನ ತುಂಬಾ ಸರಳ.– ರವೆ (ಸ್ಪೆಶಲ್ ರವಾ ಅಥವಾ ಬಾಂಬೆ ರವಾ)ಯನ್ನು ಹುರಿದಿಟ್ಟುಕೊಳ್ಳಬೇಕು.  ಈರುಳ್ಳಿ,ಬಟಾಟೆ,ಮೆಣಸಿನಕಾಯಿ ಹಾಗು ಸ್ವಲ್ಪ ಹಸಿಶುಂಠಿ  ಕರಿಬೇವು ಸೊಪ್ಪು  ಹೆಚ್ಚಿ ಇಟ್ಟುಕೊಳ್ಳಬೇಕು, ಹಿಂದಾಲಿಯಂ ಬುಟ್ಟಿ ಅಥವಾ ಪಾತೇಲಿಯಲ್ಲಿ ಶೇಂಗಾ ಎಣ್ಣೆ ಕಾಸಲು ಇಟ್ಟು ಅದರ ಮೇಲೆ ಸಾಸಿವೆ ಅರಿಷಿಣ ಉದ್ದಿನಬೇಳೆ ಕಡ್ಲಿಬೇಳೆ ಹಾಕಬೇಕು.ಛಟ್ ಛಟ್ ಅಂದಮೇಲೆ ಅದರ ಮೇಲೆ ಹೆಚ್ಚಿಟ್ಟುಕೊಂಡ ಈರುಳ್ಳಿ , ಬಟಾಟಿ ಮೆಣಸಿನಕಾಯಿ, ಶುಂಠಿ,  ಕರಿಬೇವು  ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ,  ಪ್ರಮಾಣಬದ್ಧವಾಗಿ ನೀರು ಹಾಕಿ ಸ್ವಲ್ಪ ಸಮಯ ಮುಚ್ಚಿಡಬೇಕು .10 ನಿಮಿಷದ ನಂತರ ಹುರಿದ ರವೆ ಹಾಕಿ ಚೆನ್ನಾಗಿ  ಕೈಯಾಡಿಸಿ ಲಿಂಬೆಹಣ್ಣು ಹಿಂಡಿ ಮೇಲೆ ಹಸಿ ಕೊಬ್ಬರಿ ಉದುರಿಸಬೇಕು. ಆಗ ಉಪ್ಪಿಟ್ಟು ರೆಡಿ.

 

ಈ ಉಪ್ಪಿಟ್ಟಿಗೆ ಚಟ್ನಿಪುಡಿ ಹಾಕಿಕೊಂಡು ಮೇಲೆ ಸೇವು ಹಾಕಿಕೊಂಡು ತಿಂದರೆ ಏನು ರುಚಿ ಅಂತೀರಿ..ಇತ್ತೀಚೆಗೆ ಇಡ್ಲಿ ವಡಾ ಬಂದು ಉಪ್ಪಿಟ್ಟಿಗೆ  ಕಠಿಣ ಸ್ಪರ್ಧೆ ನೀಡಿವೆ.ಆದರೂ ಉಪ್ಪಿಟ್ಟು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.ನಮ್ಮ ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಂತೂ ಉಪ್ಪಿಟ್ ಸೇವು ಎಲ್ಲರ ಅಚ್ಚುಮೆಚ್ಚಿನ ತಿಂಡಿ. ಇದನ್ನು ತಯಾರಿಸುವ ವಿಧಾನ ಕ್ಲಿಷ್ಟಕರವಾಗದಿರುವದರಿಂದ ಮಹಿಳೆಯರು ಮನೆಯಲ್ಲಿ ಇದನ್ನೇ ಮಾಡಲು ಇಷ್ಟಪಡುತ್ತಾರೆ. ನನಗೂ ಇದು ಇಷ್ಟವಾಗುವ ತಿಂಡಿ. ಮಂಗಳೂರು ಅಥವಾ ಬೆಂಳೂರಿನಿಂದ ಬೆಳಿಗ್ಗೆ ವಾಪಸ್ ಧಾರವಾಡಕ್ಕೆ ಬಂದಾಗ ಬಸ್ ನಿಲ್ದಾಣದ ಪಕ್ಕದಲ್ಲಿರುವ ದರ್ಶಿನಿ ಹೋಟೆಲ್ಲಿನಲ್ಲಿ  ಒಂದು ಪ್ಲೇಟ್ ಉಪ್ಪಿಟ್ಟು ಹೊಡೆದೇ  ಮನೆಗೆ ಹೋಗುತ್ತೇನೆ!
ನನ್ನ ಮದುವೆಯಾಗಿ ಈಗ 36 ವರ್ಷ ಕಳೆದಿದೆ.ನಿಶ್ಚಿತಾರ್ಥವಾಗಿ ಮದುವೆಯಾಗುವವರೆಗೆ ನನ್ನ ಪತ್ನಿಯೊಟ್ಟಿಗೆ ಮಾತೇ ಆಡಿರಲಿಲ್ಲ.ಏನಿದ್ದರೂ ಪತ್ರ ಮುಖಾಂತರವೇ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಕಾಲವದು. ಆಗ ಪತ್ರಮುಖೇನ  ಅವಳ ಮೆಚ್ಚಿನ ತಿಂಡಿಯೂ ಉಪ್ಪಿಟ್ಟು ಎಂಬ ವಿಷಯ ಗೊತ್ತಾಗಿ ಜಾತಕದಲ್ಲಿ ಕೂಡಿದ 36 ಗುಣಗಳಲ್ಲಿ ಇದೂ ಒಂದು ತಿಳಿದು ಖುಷಿಪಟ್ಟಿದ್ದೆ!.
.
ಉಪ್ಪಿಟ್ಟಿನಲ್ಲಿ ಮಸಾಲಾ ಉಪ್ಪಿಟ್ಟು ಎಂತಲೂ ಮಾಡುವರು. ಅದು ಮಸಾಲೆ ಪದಾರ್ಥ ಜಾಸ್ತಿ ಇರುವದರಿಂದ ಇನ್ನೂ ರುಚಿಯಾಗಿರುತ್ತದೆ.ಈರುಳ್ಳಿ ಬಟಾಟೆ ಉಪಯೋಗಿಸದೆ ಬರೀ ಜೀರಿಗೆ  ಉಪಯೋಗಿಸಿ ಜೀರಿಗೆ ಉಪ್ಪಿಟ್ಟು ಎಂತಲೂ ಮಾಡುವರು. ಏಕಾದಶಿ,ಚಾತುರ್ಮಾಸದ ಸಮಯ ಮತ್ತು ಶಿವರಾತ್ರಿ ದಿವಸ ಫಲಹಾರಕ್ಕೆಂದು ಜೀರಿಗೆ ಉಪ್ಪಿಟ್ಟು ಮಾಡಿಕೊಂಡು ತಿನ್ನುವರು. ಇನ್ನು ಬೆಂಗಳೂರು ಕಡೆ ಅವರೆಕಾಳು ಹಾಕಿ ಅವರೆಕಾಳು ಉಪ್ಪಿಟ್ಟು ಎಂದು ತಯಾರಿಸುತ್ತಾರೆ.  ಎಂ.ಟಿ.ಆರ್, ಮಲ್ಯಾಸ್ ಮುಂತಾದವರ ಬ್ರಾಂಡ್ ಅಡಿಯಲ್ಲಿ ಯಾರಿಸಿದ ರವಾ  ಮಿಕ್ಸ್ ನಿಂದ  ದಿಢೀರ್ ಆಗಿ ಉಪ್ಪಿಟ್ಟು ತಯಾರಿಸಿ ವೇಳೆಯನ್ನು ಉಳಿಸಬಹುದು.ಮದುವೆ ಮುಂಜಿವೆಗಳಲ್ಲಿ ಬಹಳಷ್ಟು ಜನ ಸೇರಿದಾಗ ಫಲಹಾರಕ್ಕೆಂದು ಹೆಚ್ಚಾಗಿ ತಯಾರಿಸುವದು ಉಪ್ಪಿಟ್ಟನ್ನೆ.
.
ನಮ್ಮ ದೇಶದಲ್ಲಿ ರಾಷ್ಟ್ರೀಯ ಪಕ್ಷಿ, ರಾಷ್ಟ್ರೀಯ ಪ್ರಾಣಿ ಎಂದು ಇದ್ದಂತೆ ರಾಷ್ಟ್ರೀಯ ತಿಂಡಿ ಎಂತೇನಾದರೂ ಇದ್ದಿದ್ದರೆ ಉಪ್ಪಿಟ್ಟೇ ರಾಷ್ಟ್ರೀಯ ತಿಂಡಿಯಾಗಿರುತ್ತಿತ್ತು. ಜನಸಾಮಾನ್ಯನ  ಈ ಅಚ್ಚುಮೆಚ್ಚಿನ ತಿಂಡಿ ಉಪ್ಪಿಟ್ಟಿಗೆ ನಮೋನ್ನಮಃ.
.

-ಮಾಲತೇಶ ಎಂ ಹುಬ್ಬಳ್ಳಿ

3 Responses

  1. Shankari Sharma says:

    ಎಷ್ಟೇ ತರಹಗಳ ತಿಂಡಿಗಳು ಇದ್ದರೂ ನಮ್ಮ ಉಪ್ಪಿಟ್ಟು ಮಹಾರಾಜ ಈಗಲೂ ಎಲ್ಲರಿಗೂ ಇಷ್ಟ.. ಸೊಗಸಾದ ಬರಹ.

  2. Hema says:

    ಸೊಗಸಾದ ಲೇಖನವನ್ನು ಓದಿದಾದ ಹಬೆಯಾಡುವ ರುಚಿಯಾದ ಉಪ್ಪಿಟ್ಟನ್ನು ಸವಿದಂತಾಯಿತು.

  3. ನಯನ ಬಜಕೂಡ್ಲು says:

    ಟೇಸ್ಟಿ ಟೇಸ್ಟಿ ಉಪ್ಪಿಟ್ಟಿನ ಸವಿ ತುಂಬಿದ ಸೊಗಸಾದ ಬರಹ .

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: