ಉತ್ತರ ಇಲ್ಲದ ಪ್ರಶ್ನೆಗಳು

Share Button

ಜೀವನದಲ್ಲಿ ನಡೆಯುವ, ನೋಡುವ ಕೆಲವೊಂದು ವಿಷಯಗಳು ನಮ್ಮ ಊಹೆಗೂ ನಿಲುಕುವುದಿಲ್ಲ. ಆ ವಿಷಯಗಳು ಯಾಕಾಗಿ ಆಗುತ್ತವೆ ಅನ್ನುವುದಕ್ಕೆ ಸ್ಪಷ್ಟ ಕಾರಣಗಳನ್ನು ಕೂಡಾ ಕೊಡಲಾಗುವುದಿಲ್ಲ. ಕೆಲವೊಮ್ಮೆ ಮುಂದೆ ಘಟಿಸಲಿರುವ ವಿದ್ಯಮಾನಗಳನ್ನು ಮನಸ್ಸು ಮೊದಲೇ  ಗ್ರಹಿಸುವುದು (Intuition) ಮತ್ತು ಆ ಘಟನೆಗಳು ನಡೆದೇ ಬಿಡುವುದು. ಯಾಕೆ ಹೀಗೆ ಎಂದು ಆಲೋಚಿಸಿದರೆ ಕಾರಣಗಳು ಸಿಗುವುದಿಲ್ಲ. ನಿರುತ್ತರವೇ ಕಾದಿರುತ್ತದೆ.  ಅತ್ತ ತಾರ್ಕಿಕ ನೆಲೆಗಟ್ಟಿನಲ್ಲೂ ಉತ್ತರ ಸಿಗುವುದಿಲ್ಲ, ಇತ್ತ ವೈಜ್ಞಾನಿಕವಾಗಿ ವಿಮರ್ಶಿಸಿದರೂ ಉತ್ತರಗಳು ದೊರಕುವುದಿಲ್ಲ. ಹಲವರ ಜೀವನದಲ್ಲಿ ಇಂತಹ ಅನುಭವಗಳು ಆಗಿರುತ್ತವೆ.  ಅಂತಹ ಎರಡು ಅನುಭವಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಅನುಭವ -1

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳು. ನಾನಾಗ ಬಹುಶಃ  ಮೂರನೇ ತರಗತಿ ಇರಬೇಕು. ಹಳ್ಳಿಯ ಎಲ್ಲಾ ಮನೆಗಳಲ್ಲೂ ದನಕರುಗಳನ್ನು ಸಾಕುತ್ತಿದ್ದರು. ಬೆಳಗಿನ ಹೊತ್ತು, ಅಕ್ಕಚ್ಚು, ಹಿಂಡಿ ಕೊಟ್ಟ ಬಳಿಕ ದನದ/ದನಗಳ ಹಾಲು ಕರೆದಾದ ಬಳಿಕ, ಕುತ್ತಿಗೆಯ ಹಗ್ಗ ಸಡಿಲಿಸಿ ದನಗಳನ್ನು ಹಟ್ಟಿಯಿಂದ ಮೇಯಲು ಬಿಡುವುದು ಎಲ್ಲರ  ಮನೆಯ ದಿನಚರಿಯಾಗಿತ್ತು. ಮನಸೋ ಇಚ್ಛೆ ಹುಲ್ಲು ಮೇದು, ಹೊಟ್ಟೆ ತುಂಬಿಸಿಕೊಂಡ ದನಗಳು ಸಾಯಂಕಾಲ ಮನೆ ಸೇರುತ್ತಿದ್ದವು (ಗೋಧೂಳಿ ಸಮಯ). ಕೆಲವೊಮ್ಮೆ, ನಿಗದಿತ ಸಮಯದೊಳಗೆ ದನಗಳು ಹಿಂದಿರುಗದಿದ್ದಲ್ಲಿ, ಮನೆಯ ಹಿರಿಯರು ದನಗಳ ಹೆಸರು ಕರೆಯುತ್ತಾ ಹುಡುಕಲು ತೆರಳುತ್ತಿದ್ದರು. ಕೆಲವು ತುಡುಗು ಬುದ್ಧಿಯ ದನಗಳು ಬೇರೆ ಮನೆಯವರ ತೋಟಕ್ಕೆ ನುಗ್ಗಿ ಉಪದ್ರ ಕೊಡುವುದಿತ್ತು. ಅಂತಹ ಸಂದರ್ಭದಲ್ಲಿ, ಬೇಲಿ ಹಾರಿದ ದನಗಳನ್ನು ಆ ಮನೆಯವರು ಕಟ್ಟಿ ಹಾಕುವುದು ಅಥವಾ ದನಗಳ ದೊಡ್ಡಿಗೆ ಕೊಂಡುಹೋಗುವುದು ಕೂಡಾ ಮಾಮೂಲಿಯಾಗಿತ್ತು.

ಒಂದು ದಿನ ಸಂಜೆ, ಮೇಯಲು ಹೋಗಿದ್ದ ನಮ್ಮ ಮನೆಯ ದನಗಳ ಜೊತೆ ಯಾರದೋ ಮನೆಯ ಇನ್ನೊಂದು  ಕೆಂಪು ಬಣ್ಣದ ದನ ಬಂದಿತ್ತು. ಹಟ್ಟಿಯಲ್ಲಿ ಖಾಲಿ ಇದ್ದ ಜಾಗದಲ್ಲಿ ಬಂದು ಮಲಗಿಕೊಂಡಿತು. ದಾರಿ ತಪ್ಪಿ ಬಂದಿರಬೇಕು ಅಂತ ನಾವಂದುಕೊಂಡೆವು. ಆದರೆ ಪ್ರತಿದಿನವೂ ಆ ದನ ನಮ್ಮ ಮನೆಗೇ ಬಂದು ಮಲಗುತ್ತಿತ್ತು. ನಾವೆಲ್ಲಾ ಸೇರಿ ಕೆಂಪಿ ಎಂದೇ ಕರೆಯುತ್ತಿದ್ದೆವು. ಅದೊಂದು ದಿನ ಸಂಜೆ, ಕೆಂಪಿಯ ಯಜಮಾನ ನಮ್ಮ ಮನೆಯ ಬಳಿ ಹಾಜರ್.  “ನೀವು ನಮ್ಮ ದನವನ್ನು ಕಟ್ಟಿ ಹಾಕಿದ್ದೀರಿ” ಅನ್ನುವ ವೃಥಾ ಆರೋಪ ಮಾಡಿದಾಗ, ನನ್ನ ತಂದೆಯವರು “ನಿಮ್ಮ ದನವನ್ನು  ನಾವು ಕಟ್ಟಿ ಹಾಕಿಲ್ಲ. ನಮಗೆ ಯಾರ ದನ ಎಂದು ಕೂಡಾ ಗೊತ್ತಿಲ್ಲ. ನೀವು  ನಿಮ್ಮ ದನವನ್ನು ಕರೆದುಕೊಂಡು ಹೋಗಬಹುದು” ಅಂದರು. ಕೆಂಪಿಯ ಕೊರಳಿಗೆ ಹಗ್ಗ ಹಾಕಿ ಬಲವಂತವಾಗಿ ಕರೆದುಕೊಂಡು ಹೋದರು ಅವಳ ಯಜಮಾನ. ವಿಚಾರಿಸಲಾಗಿ, ನಂತರ ತಿಳಿದು ಬಂದ ವಿಷಯ ಎಂದರೆ, ಕೆಂಪಿ ದನ ನನ್ನ ತರಗತಿಯ ಯಶೋದಳ ಮನೆಯದ್ದು ಅಂತ. ನಮ್ಮ ಮನೆಯಿಂದ ಸುಮಾರು ಮುಕ್ಕಾಲು ಮೈಲಿ ದೂರದಲ್ಲಿ ಯಶೋದಳ ಮನೆ. ಸೋಜಿಗದ ಸಂಗತಿ ಎಂದರೆ, ಮೇಯಲು ಬಿಟ್ಟ ಕೆಂಪಿ ಹಗಲು ಹೊತ್ತಿನಲ್ಲಿ ತನ್ನ ಮನೆಯ ಹತ್ತಿರವೇ ಹುಲ್ಲು ಮೇಯುತ್ತಿದ್ದರೂ, ಅಲ್ಲಿಗೆ ಹೋಗದೇ  ಸಂಜೆ ಆಗುತ್ತಲೇ ನಮ್ಮ ಮನೆಗೆ ಬರುತ್ತಿದ್ದಳು.

ಅದಕ್ಕೋಸ್ಕರ  ಕೆಂಪಿಯನ್ನು ಹಟ್ಟಿಯಿಂದ ಹೊರಗೆ ಬಿಡುತ್ತಿರಲಿಲ್ಲ. ಇಡೀ ತಿಂಗಳು ಕಟ್ಟಿ ಹಾಕಿ, ಒಂದು ದಿನ ಹೊರಗೆ ಬಿಟ್ಟರೂ ಕೆಂಪಿ ನಮ್ಮ ಮನೆಗೆ ಓಡಿ ಬರುತ್ತಿದ್ದಳು. ಸುಮಾರು ಆರು ತಿಂಗಳು ಹೀಗೇ ಮುಂದುವರೆಯಿತು.  ಹೀಗಿರಲು ನಮ್ಮ ತಂದೆಯವರು ಒಂದು ನಿರ್ಧಾರಕ್ಕೆ ಬಂದರು. ಸೀದಾ ಕೆಂಪಿಯ ಯಜಮಾನನ (ಯಶೋದಾಳ ತಂದೆ) ಮನೆಗೆ ಹೋಗಿ “ದಯವಿಟ್ಟು ಕೆಂಪಿಯನ್ನು ನಮಗೆ ಕೊಡ್ತೀರಾ?” ಅಂತ ಕೇಳಿಕೊಂಡರು. ಮೊದಮೊದಲು ನಿರಾಕರಿಸಿದರೂ, ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡರು ಕೆಂಪಿಯ ಯಜಮಾನ. ಕೆಂಪಿಯನ್ನು ಮನೆಗೆ ತರುತ್ತಾರೆ ಎಂದು ತಿಳಿದಾಗ ನಮಗೆಲ್ಲಾ ಹೇಳತೀರದ ಸಂಭ್ರಮ. ಒಳ್ಳೆ ದಿನ ನೋಡಿ ಕೆಂಪಿಯನ್ನು ಖರೀದಿಸಿ ತರುವುದೆಂದು ನಿಶ್ಚಯಿಸಿದ ನಮ್ಮ ತಂದೆಯವರು, ಹಣದ ವ್ಯವಸ್ಥೆ ಆದ ನಂತರ ಹೊಸ ಹಗ್ಗದೊಡನೆ ಕೆಂಪಿಯ ಯಜಮಾನನ ಮನೆಗೆ ಹೋಗಿ, ಹಣ ನೀಡಿದ ಬಳಿಕ  “ಬಾ ಕೆಂಪಿ, ಮನೆಗೆ ಹೋಗೋಣ” ಅಂದರಂತೆ. ತಂದೆಯವರ ಹಿಂದೆಯೇ ನಡೆದು ಬಂದಳು ಕೆಂಪಿ. ಕೆಂಪಿಯನ್ನು ತರಲು ಹಿಡಿದುಕೊಂಡು ಹೋದ ಹಗ್ಗ ತಂದೆಯವರ ಕೈಯಲ್ಲಿಯೇ ಇತ್ತು. ಯಾಕೆಂದರೆ, ಕೆಂಪಿಯ ಕುತ್ತಿಗೆಗೆ ಹಗ್ಗ ಹಾಕುವ ಅವಶ್ಯಕತೆಯೇ ಬರಲಿಲ್ಲ. ನಮ್ಮ ಮನೆಗೆ ಬಂದ ನಂತರ ಕೆಂಪಿಯೊಂದಿಗಿನ ಒಡನಾಟವನ್ನು ಮರೆಯಲು ಸಾಧ್ಯವೇ ಇಲ್ಲ, ಪದಗಳಲ್ಲಿ ಹಿಡಿದಿಡಲೂ ಸಾಧ್ಯವಿಲ್ಲ. ನಮ್ಮ ತಂದೆಯವರ ಹಿಂದೆಯೇ ಬಂದು, ಅನಿರ್ವಚನೀಯ ಪ್ರೀತಿ ತೋರಿದ ಬಾಯಿ ಬಾರದ ಮೂಕ ಪ್ರಾಣಿ ಕೆಂಪಿಯ ನೆನಪು ಇಂದಿಗೂ ನಮ್ಮ ಮನದಲ್ಲಿ ಹಸಿರು. “ಕೆಂಪಿ ಯಾಕೆ ನಮ್ಮಲ್ಲಿಗೆ ಬಂದಳು? ನಮಗೂ ಕೆಂಪಿಗೂ ಅದಾವ ಪರಿಯ ಜನ್ಮಜನ್ಮಾಂತರದ ಸಂಬಂಧ?”ಎಂಬ ಪ್ರಶ್ನೆಗಳಿಗೆ ಉತ್ತರ ಆ ದೇವನೊಬ್ಬನೇ ಬಲ್ಲ.

ಅನುಭವ-2

ಕೆಂಪಿಯ ಮಗಳಿಗೆ ನಾವಿಟ್ಟ ಹೆಸರು ಗೋದಾವರಿ. ಮುದ್ದಿನಿಂದ ಗೋದೆ ಎಂದು ಕರೆಯುತ್ತಿದ್ದೆವು. ಗೋದೆಗೆ ಕೊಂಡಾಟ ಜಾಸ್ತಿ. ಗೋದೆಯೂ ತಾಯಿಯಾದಳು. ಮೊದಲಿನ ಎರಡು ತಿಂಗಳು ಎಲ್ಲಾ ಸುಸೂತ್ರವಾಗಿತ್ತು. ಇದ್ದಕ್ಕಿದ್ದಂತೆ ಗೋದೆಯಲ್ಲಿ ಬದಲಾವಣೆ. ಹಾಲು ಕರೆಯುವಾಗ ಈವರೆಗೂ ಸುಮ್ಮನಿದ್ದ ಗೋದೆ, ಕೆಚ್ಚಲಿಗೆ ಕೈ ಹಾಕಿದೊಡನೆಯೇ ಕಾಲಿನಿಂದ ಒದೆಯಲು ಶುರು ಮಾಡಿದಳು. ಎಷ್ಟೋ ಬಾರಿ ಗೋದೆಯ ಕಾಲಿನ ಒದೆಯಿಂದಾಗಿ ಕರೆದಾದ ಹಾಲು ಚೆಲ್ಲಿ ಹೋದದ್ದಿದೆ. ಅನುನಯಿಸಿದರೂ, ಬೈದರೂ ಗೋದೆ ಬದಲಾಗಲಿಲ್ಲ. ಅನಂತರ  ಅವಳ ಕಾಲನ್ನು ಒಂದು ಗೂಟಕ್ಕೆ ಕಟ್ಟಿ,  ಹಾಲು ಕರೆಯಬೇಕಾಯ್ತು. ಮುಂದಿನ ಕರುವಲ್ಲಾದರೂ ಗೋದೆ ಒದೆಯಲಿಕ್ಕಿಲ್ಲ ಅನ್ನುವ ಆಶಾಭಾವನೆ ನಮಗೆ. ಎರಡನೆಯ, ಮೂರನೆಯ, ನಾಲ್ಕನೆಯ ಕರು ಹುಟ್ಟಿದಾಗಲೂ, ಗೋದೆ ಅದೇ ಚಾಳಿ ಮುಂದುವರಿಸಿದಳು. ನಮಗೋ ಧರ್ಮಸಂಕಟ. ಗೋದೆಯ ಮೇಲೆ ಅತೀವ ಪ್ರೀತಿ. ಆದರೆ ಹಾಲು ಕರೆಯುವುದೇ ಒಂದು ಸಾಹಸ. ಅದೂ ಅಲ್ಲದೆ, ಗೋದೆ ನೋಡಲು ಸಣ್ಣ ಗಾತ್ರವಾದರೂ, ಸರಿಯಾಗಿ ಹಿಂಡಿ ಹಾಕಿದರೆ ಒಂದು ಹೊತ್ತಿಗೆ ಎಂಟರಿಂದ ಹತ್ತು ಕುಡ್ತೆ (6 ಕುಡ್ತೆ= 1 ಲೀಟರ್) ಹಾಲು ಕೊಡುತ್ತಿದ್ದಳು.

ಮನಸ್ಸಿಲ್ಲದ ಮನಸ್ಸಿನಿಂದ ಗೋದೆಯನ್ನು ಮಾರುವ ನಿರ್ಧಾರಕ್ಕೆ ಬಂದರು ನಮ್ಮಮ್ಮ. ಗಿರಾಕಿಗಳಿಗೇನೂ ಕಮ್ಮಿ ಇರಲಿಲ್ಲ. ಬಂದವರ ಬಳಿ ಸರಿಯಾಗಿ ತಿನ್ನಲು ಕೊಟ್ಟರೆ, ಹೊತ್ತಿಗೆ ಹತ್ತು ಕುಡ್ತೆ ಹಾಲು ಕೊಡುತ್ತದೆ ಹಸು ಅನ್ನುತ್ತಿದ್ದೆವು.  ಒಬ್ಬರು ಗೋದೆಯನ್ನು ಖರೀದಿಸಿದರು ಸಹಾ. ಗೋದೆಯ ಹೊಸ ಯಜಮಾನರೊಮ್ಮೆ, ನಮ್ಮ ತಂದೆಯವರಿಗೆ ಪೇಟೆಯಲ್ಲಿ ಕಾಣಸಿಕ್ಕಿದಾಗ, ಖುಷಿಯಿಂದ ಹೇಳಿದರಂತೆ “ನೀವು ಹೇಳಿದ್ದು, ದನ ಹತ್ತು ಕುಡ್ತೆ ಹಾಲು ಕೊಡ್ತದೆ ಅಂತ. ಆದರೆ ನಮಗೆ ಹನ್ನೆರಡರಿಂದ ಹದಿನಾಲ್ಕು ಕುಡ್ತೆ ಹಾಲು ಸಿಗ್ತಿದೆ”. ನಮ್ಮ ತಂದೆಯವರು “ಹಾಲು ಕರೆಯುವಾಗ ಕಾಲಿನಿಂದ ಒದೀತದಾ?” ಅಂತ ಮೆಲ್ಲಗೆ ಕೇಳಿದಾಗ  “ಏನು ಕೇಳ್ತಿದ್ದೀರಿ ಯಜಮಾನ್ರೇ, ನಿಮ್ಮ ದನ ದೇವತೆ. ತುಂಬಾ ಪಾಪದ ದನ. ಅವಳದ್ದು ಏನೂ ಉಪದ್ರ ಇಲ್ಲ. ನಮಗೆಲ್ಲಾ ತುಂಬಾ ಇಷ್ಟದ ದನ”. ತಂದೆಯವರು ಮನೆಗೆ ಬಂದ ನಂತರ ಈ ವಿಷಯ ಮನೆಯಲ್ಲಿ ಹಂಚಿಕೊಂಡಾಗ ನಮಗೆಲ್ಲಾ  ಆನಂದವೂ, ಆಶ್ಚರ್ಯವೂ ಒಟ್ಟಿಗೆ ಆಯಿತು. ಎಲ್ಲರ ಮನದಲ್ಲಿ ಮೂಡಿದ ಪ್ರಶ್ನೆ “ಅಷ್ಟೊಂದು ಒದೆಯುತ್ತಿದ್ದ ಗೋದೆ ಹೇಗೆ ಬದಲಾದಳು?”.

ಚಿತ್ರಕೃಪೆ: ಅಂತರ್ಜಾಲ

– -ಡಾ.ಕೃಷ್ಣಪ್ರಭಾ, ಮಂಗಳೂರು

17 Responses

 1. Avatar Rama.M says:

  Super,Akka , namma maneya danagala jothe namma bhavanathmaka sambandhagalu nijakku madhurathi madhura, naave dhanyaru

  • Avatar Krishnaprabha says:

   Thank you..ಮೂಕ ಪ್ರಾಣಿಗಳು ತೋರಿಸುವ ಪ್ರೀತಿ, ಸಂವೇದನೆಯ ಖುಷಿ ಅನುಭವಿಸಿದವರಿಗೆ ಮಾತ್ರ ಗೊತ್ತು…

 2. Avatar ನಯನ ಬಜಕೂಡ್ಲು says:

  Beau…….tiful article . ಬಹಳ ಅಪ್ಯಾಯಮಾನ ಹಾಗು ಮನ ತುಂಬಿ ಬರುವಂತಹ ಬರಹ. ದನ ಕರುಗಳ ಸಾಮಿಪ್ಯ, ಒಡನಾಟ ನಿಜಕ್ಕೂ ಅಪ್ಯಾಯಮಾನವಾಗಿರುತ್ತದೆ . ಅವುಗಳಿಗೆ ಬಾಯಿ ಒಂದು ಬರುವುದಿಲ್ಲ ಅಷ್ಟೇ , ಮತ್ತೆ ಉಳಿದಂತೆ ನಮ್ಮೆಲ್ಲಾ ಭಾವನೆಗಳು ಅವುಗಳಿಗೆ ಅರ್ಥ ಆಗುತ್ತದೆ ಮತ್ತೆ ಆ ಭಾವನೆಗಳಿಗೆ ಅವು ಸ್ಪಂದಿಸುತ್ತವೆ ಕೂಡ . ನೀವು ಬರೆದ ಎರಡನೆಯ ಅನುಭವ ನಮ್ಮ ಮನೆಯಲ್ಲೂ ನಡೆದಿದೆ , ನಮ್ಮಲ್ಲಿ ಮೆಟ್ಟಿ ಹಾಲು ಚೆಲ್ಲಿ ಹಾಕುತಿದ್ದ ದನ , ಕೊಟ್ಟಲ್ಲಿ ಹೆಚ್ಚಿಗೆ ಹಾಲು ನೀಡುವುದಲ್ಲದೆ ಮೆಟ್ಟದೆ ಸುಮ್ಮಗೆ ನಿಲ್ಲುತಿತ್ತು , ಇದೊಂದು ಅಚ್ಚರಿಯೇ ಸರಿ . ಚಂದದ ಬರಹ ಮೇಡಂ

  • Avatar Krishnaprabha says:

   ಧನ್ಯವಾದಗಳು ನಯನಾರಿಗೆ. ನಾನೀಗ ಮೊದಲಿನ ನೆನಪುಗಳನ್ನಷ್ಟೆ…ನಗರವಾಸಿಗಳಾಗಿ ಈ ಆನಂದ ಮರೀಚಿಕೆಯಾಗಿದೆ

 3. Avatar Anitha Lakshmi says:

  ಬಾಲ್ಯವ ನೆನಪಿಸಿದ ಬರಹ

  • Avatar Krishnaprabha says:

   ಹಳ್ಳಿಯಲ್ಲಿ ಹುಟ್ಟಿ ಬೆಳೆದವರೆಲ್ಲರಿಗೂ ಈ ಅನುಭವ ಆಗ್ತದೆ

 4. Avatar ಗಿರೀಶ says:

  ಮಧುರ ಅನುಭವ. ನಿರೂಪಣೆ ಕೂಡ ಚೆನ್ನಾಗಿದೆ. ಪ್ರಾಣಿಪ್ರಪಂಚ ಅದ್ಭುತ.

  • Avatar Krishnaprabha says:

   ಧನ್ಯವಾದಗಳು ಗಿರೀಶರಿಗೆ … ಸಾಕು ಪ್ರಾಣಿಗಳು ತೋರಿಸುವ ಪ್ರೀತಿ ಅಪಾರ

 5. Avatar Shankari Sharma says:

  ಸವಿ..ಸವಿ..ನೆನಪಿನ ಬರಹ..ಚಿಕ್ಕಂದಿನಲ್ಲಿ ನಮ್ಮ ಕೊಟ್ಟಿಗೆಯಲ್ಲಿದ್ದ ದನ ಕರುಗಳ ಸವಿ ನೆನಪ ತರಿಸಿತು.

 6. Avatar Krishnaprabha says:

  ಧನ್ಯವಾದಗಳು. ಹಳ್ಳಿಯಲ್ಲಿ ಹುಟ್ಟಿ ಬೆಳೆದವರೆಲ್ಲಾ ಸಾಕುಪ್ರಾಣಿಗಳ ಜೊತೆ ನಿಕಟ ಸಾಮೀಪ್ಯ ಹೊಂದಿದವರೇ…ಮೂಕಪ್ರಾಣಿಗಳು ತೋರಿಸುವ ಪ್ರೀತಿ ಅಪಾರ…

 7. Avatar Krishnaprabha says:

  ಲೇಖನಕ್ಕೆ ಪೂರಕವಾದ ಸೂಕ್ತ ಚಿತ್ರಗಳನ್ನು ಆಯ್ದು, ಲೇಖನಕ್ಕೊಂದು ಹೊಸ ರೂಪ, ಆಯಾಮ ನೀಡಿ ಪ್ರಕಟಿಸುವ ಹೇಮಾ ಮೇಡಂ ಅವರಿಗೆ ಧನ್ಯವಾದಗಳು…

 8. Avatar ಕನ್ನಡತಿ ಜಲಜಾರಾವ್ says:

  ಗೋದಾವರಿ ಅವಳ ಅಮ್ಮ ಕೆಂಪಿಯ ಚಾಳಿಯನ್ನೇ ಮುಂದುವರಿಸಿರಬೇಕು. ಕೆಂಪಿ ಅವಳ ಮೊದಲ ಮನೆಯನ್ನು ಬಿಟ್ಟು ನಿಮ್ಮ ಮನೆ ಇಷ್ಟಪಟ್ಟು ಬರಲಿಲ್ಲವಾ ಹಾಗೇಯೇ ನಿಮ್ಮಲ್ಲಿ ಇರಲು ಇಷ್ಟ ಪಡದ ಗೋದೆ ಬೇರೆಡೆ ಹೋದ ತಕ್ಷಣ ಖುಷಿಯಾಗಿ ತನ್ನ ವರಸೆ ಬದಲಿಸಿರಬೇಕು.
  ಚೆಂದದ ಬರಹ.

 9. Avatar Savithri bhat says:

  ನಿಮ್ಮ ಗೋಮಾತೆಯ ನೆನಪಿನ ಲೇಖನ ಮನ ಮುಟ್ಟಿತು. ಬಾಲ್ಯ ನೆನಪಾಯಿತು. ನಮ್ಮಲ್ಲಿ ಈಗಲೂ ಎರಡು ಹಾಲು ಕರೆಯುವ ಹಸುಗಳಿವೆ. ಆದರೆ ಹುಲ್ಲುಗಾವಲು ಇಲ್ಲ. ಗೋವುಗಳ ಒಡನಾಟ ಮನಸಿಗೆ ಮುದ ನೀಡುತ್ತಿದೆ.

  • Avatar Krishnaprabha says:

   ಧನ್ಯವಾದಗಳು ಸಾವಿತ್ರಿ ಅವರಿಗೆ.. ಗೋವುಗಳು ತೋರಿಸುವ ಪ್ರೀತಿ ಅನುಭವಿಸಿದವರು ಧನ್ಯರು

 10. Avatar Thrish says:

  Really touching experience madam.. Keep writing

 11. Avatar Satish hiremath says:

  ನಿಮ್ಮ ಬರಹದಲ್ಲಿನ ಅನುಭವ ನಿಜ ಅನಿಸಿತು ಮೇಡಂ.
  ಪ್ರತಿಯೊಂದು ಪ್ರಾಣಿಯಲ್ಲೂ ಭಾವನಾತ್ಮಕ ಬೆಸುಗೆ ಇದೆ.ಅದನ್ನು ಗುರುತಿಸುವ ತಾಳ್ಮೆ ಮತ್ತು ಪ್ರೀತಿಸುವ ಮೂಲಕ ಅನುಭವಿಸುವ ಮನಸ್ಸು ಬೇಕು.
  ನಿಮಗಾದ ಅನುಭವ ನನಗೂ ಹಸುವಿನಿಂದ ಆಗಿದೆ.
  ನಮ್ಮನೆಯ ಗಂಗೆ ಎಂಬ ಹಸುವನ್ನು ನಾನೊಬ್ಬನೆ ಹಾಲು ಕರೆಯಬೇಕಿರುವ ಅನಿವಾರ್ಯತೆ ಇತ್ತು .ಏಕೆಂದರೆ ನನ್ನ ಹೊರತಾಗಿ ಯಾರಿಗೂ ಕೆಚ್ಚಲಿಗೆ ಕೈ ಹಾಕಲು ಬಿಡುತ್ತಿರಲಿಲ್ಲ.ನಾನು ಹಾಲು ಕರೆಯುವಾಗ ನನ್ನ ಮೈ ಮತ್ತು ತಲೆಯನ್ನು ನೆಕ್ಕುತ ತನ್ನ ಕರುವಿಗೆ ನೀಡುವ ಪ್ರೀತಿಯನ್ನು ನನಗೂ ನೀಡುತ್ತಿತ್ತು.ನಾನೂ ಅಷ್ಟೇ ಮನೆಯವರಿಗೆಲ್ಲ ಅವಳ ಮೇಲೆ ಕೋಪ .ಏಕೆಂದರೆ ಅವಳು ಯಾರನ್ನೂ ಸನಿಹ ಬರಲು ಬಿಡುತ್ತಿರಲಿಲ್ಲ ಇರಿಯುತ್ತಿದ್ದಳು.
  ಪ್ರತಿ ದಿನ ಹಸುವಿಗೆ ನನ್ನ ಭಾವ ತುಂಬಿದ ಸ್ಪರ್ಶದಿಂದ ಅದಕ್ಕೆ ಪ್ರೀತಿ ನೀಡುತ್ತಿದ್ದೆ.ಅದುವೇ ನಮ್ಮಿಬ್ಬರ ನಡುವಿನ ಸಂಬಂಧಕ್ಕೆ ಕಾರಣ.ವಿಚಿತ್ರ ಎಂದರೆ ಮನೇಲಿ ಎಲ್ರೂ ಅವಳಿಗೆ ಮೇವು ನೀರಿನ ವ್ಯವಸ್ಥೆ ಮಾಡುತ್ತಿದ್ದರು.ಸಂಜೆ ಮತ್ತು ಬೆಳಗಿನ ಜಾವ ಮಾತ್ರ ನನ್ನ ಒಡನಾಟ ಅವಳ ಜೊತೆಗಿತ್ತು.ನಾನು ಕರುವಿಗೆ ಮೂರು ಮೊಲೆಗಳು ಬಿಟ್ಟು ಒಂದು ಮೊಲೆಯ ಒಂದು ಲೀಟರ್ ಹಾಲು ಮಾತ್ರ ಕರೆದುಕೊಳ್ಳುತ್ತಿದ್ದೆ.ಅದರಿಂದ ಕರುಗಳು ಶಕ್ತಿಯುತವಾಗಿ ಬೆಳೆಯುತ್ತಿದ್ದವು.ಒಂದು ಹೆಣ್ಣು ಕರುವನ್ನು ಹಾಲು ಕುಡಿಯಲು ನಿಲ್ಲಿಸಿ ದೊಡ್ಡದಾದ ಮೇಲೆ ತೋಟದಿಂದ ಮನೆಗೆ ತಂದು ದೊಡ್ಡಪ್ಪನಿಗೆ ಕೊಡಲು ನಿರ್ಧರಿಸಿದೆ.ನಾನು ಅವಳ ಕೊರಳಿನ ಹಗ್ಗ ಕಳಚಿ ಬೈಕ್ ಮೇಲೆ ಕುಳಿತು ನಿಧಾನವಾಗಿ ಮುಂದೆ ಬರುತ್ತಿದ್ದರೆ ಊರಿನ ವರೆಗೂ ನನ್ನನ್ನು ಗುರುತಿಸಿ ಎರಡು ಕಿಲೋಮೀಟರ್ ದೂರದ ವರೆಗೆ ಓಡೋಡಿ ಬಂದಿತ್ತು.ಊರೊಳಗಿನ ಜನರೆಲ್ಲ ಆಶ್ಚರ್ಯದಿಂದ ನೋಡುತ್ತಿದ್ರು.ಅದೊಂದು ಇಬ್ಬರ ನಡುವಿನ ಬಾಂಧವ್ಯದ ಪರೀಕ್ಷೆ ಎನ್ನಬಹುದು.ಆವತ್ತು ಮನೆಗೆ ಬಂದ ದಿನ ದೊಡ್ಡಪ್ಪನ ಮನೆಗೆ ಕರೆತಂದು ಅವರ ಕೊಟ್ಡಿಗೆಲಿ ಕಟ್ಟಿ ಮರು ದಿನ ತೋಟಕ್ಕೆ ಹೋಗಿದ್ದೆ .ಮನೆಗೆ ಬಂದೊಡನೆ ಕರು ಎಲ್ಲೋ ಹೋಗಿದೆ ಕಾಣುತ್ತಿಲ್ಲ ಎಂದು ಹೇಳಿದ್ರು .ಬೈಕ್ ಮೇಲೆ ಹುಡುಕಲು ಹೋಗಿರುವ ನನಗೆ ಆಶ್ಚರ್ಯ ಕಾದಿತ್ತು.ನಮ್ಮ ಊರಾಚೆಯ ತೋಟವೊಂದರ ಮನೆಯ ಕೊಟ್ಟಿಗೆಯಲ್ಲಿ ಬೆಳೆ ತಿಂದಿತೆಂದು ಕಟ್ಟಿ ಹಾಕಲಾಗಿತ್ತು.ನಾನು ಬೈಕ್ ಮೇಲೆ ಕುಳಿತು ಕೇಳುತ್ತ ಸಮೀಪ ಹೋಗುವುದೇ ತಡ ಕರು ಬೈಕ್ ಶಬ್ದವನ್ನು ಗ್ರಹಿಸಿ ನನ್ನ ದ್ವನಿಯನ್ನು ಗುರುತಿಸಿ ಕುಂತಿದ್ದು ಎದ್ದು ನಿಂತು ಕಿವಿಯನ್ನ ಅಗಲ ಮಾಡಿ ಗಾಬರಿಯಿಂದ ನನ್ನೆಡೆಗೆ ಮುಖ ಮಾಡಿ ಕರೆಯಲಾರಂಭಿಸಿತು.ಅವರಿಗೂ ಆಶ್ಚರ್ಯ ಎಷ್ಟು ಜಾಣ ಕರು ತಮ್ಮದು ಅಂತ ಕೊಂಡಾಡಿ ಬಿಟ್ಟು ಕಳಿಸಿದರು.
  ಹೀಗೆ ಅವುಗಳ ನಡುವಿನ ಬಾಂಧವ್ಯ ಎಲ್ಲಿ ಹೋದರೂ ಮನ ಸೆಳೆಯುತ್ತವೆ.ಅವುಗಳಿಗೂ ಮನಸಿದೆ ಮುಗ್ದ ಪ್ರೀತಿ ನೀಡಿದರೆ ಮಾತ್ರ ಅವುಗಳ ಮನಸ್ಸು ಗೆದೆಯಬಹುದು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: