ಪುಸ್ತಕ ನೋಟ: ‘ತಾರಸಿ ಮಲ್ಹಾರ್’

Share Button

ಮೈಸೂರಿನಲ್ಲಿರುವ ನಮ್ಮ ಮನೆಯಿಂದ ಕೇವಲ  ಮೂರು ನಿವೇಶನಗಳಾಚೆ ಇರುವ ಆ ಮನೆಯು ಸಾಹಿತಿ ದಂಪತಿಯಾದ ಶ್ರೀ.ಜಿ.ಕೆ.ರವೀಂದ್ರಕುಮಾರ್ ಹಾಗೂ ಡಾ.ಮಂದಾರವಲ್ಲಿ ಅವರಿಗೆ ಸೇರಿದ್ದೆಂದು ಗೊತ್ತು.  ಆದರೆ ತಮ್ಮ ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ವಾಸ್ತವ್ಯ ಹೂಡುತ್ತಾ, ತಮ್ಮ ಮನೆಗೆ ತಾವೇ ಅತಿಥಿಗಳಂತೆ ಬರುವ ಕಾರಣ ಅವರೊಂದಿಗೆ ನಮ್ಮ ಭೇಟಿ, ಮಾತುಕತೆಗೆ ಅವಕಾಶ ಹಾಗೂ ಸಂದರ್ಭ ಬಹಳ ಕಡಿಮೆ. ಹಾಗಾಗಿ, ಒಂದೇ ಬೀದಿಯಲ್ಲಿ ಮನೆ ಇದ್ದರೂ, ಆಕಸ್ಮಿಕವಾಗಿ  ಕಂಡರೆ ಪರಿಚಯದ ಮುಗುಳ್ನಗೆ ಬೀರುವ ಗಂಭೀರ  ವ್ಯಕ್ತಿತ್ವ ರವೀಂದ್ರಕುಮಾರ್ ಅವರದು.

ಇತ್ತೀಚೆಗೆ ಜೆ.ಕೆ.ರವೀಂದ್ರಕುಮಾರ್ ಅವರ  ‘ತಾರಸಿ ಮಲ್ಹಾರ್’ ಎಂಬ ಕೃತಿಯನ್ನು ಓದಿದೆ. ಓದಿದ ನಂತರ, ಇಷ್ಟು ಗಂಭೀರ ಸ್ವಭಾವದ ವ್ಯಕ್ತಿಯೊಬ್ಬರು ತಮ್ಮ ಬಾಲ್ಯದ ಹುಡುಗಾಟಿಕೆಗಳು, ದಿನನಿತ್ಯದ ಆಗುಹೋಗುಗಳು, ಪ್ರಾಕೃತಿಕ ವಿದ್ಯಮಾನಗಳು, ವಿವಿಧ ನೆನಪುಗಳ ಮೆರವಣಿಗೆ,  ಸಾಹಿತ್ಯ ಜಗತ್ತು, ಉದ್ಯೋಗ ಪರ್ವ ಇಂತಹ ಹಲವಾರು ವಿಚಾರಗಳಿಗೆ ಉತ್ತಮ ಅಭಿರುಚಿಯನ್ನು ಬೆರೆಸಿ ಇಷ್ಟು ಹಾಸ್ಯಮಯವಾಗಿ ಹೇಗೆ ಬರೆದದರೆಂದು ಅನಿಸಿದ್ದು ಸತ್ಯ.  ಪುಸ್ತಕದಲ್ಲಿ ವಿಶಿಷ್ಟ ಛಾಪಿನ, ವೈವಿಧ್ಯಮಯ ವಿಷಯಗಳುಳ್ಳ ಹನ್ನೊಂದು  ಪ್ರಬಂಧಗಳಿವೆ. ಲಲಿತ ಪ್ರಬಂಧಗಳ ಓದಿನ ಸೊಗಸೇ ಬೇರೆ. ಇದನ್ನು ಪ್ರಥಮ ಪುಟದಿಂದಲೇ ಓದಬೇಕೆಂಬ ಶಿಸ್ತು ಪಾಲಿಸಬೇಕಿಲ್ಲ. ಗಮನ ಸೆಳೆಯುವ ಪ್ರಬಂಧವನ್ನು ಮೊದಲ ಆದ್ಯತೆಯಿಂದ ಅಮೂಲಾಗ್ರವಾಗಿ ಓದಿ ಸಂತಸಪಟ್ಟು, ಆಮೇಲೆ ಉಳಿದ ಪುಟಗಳನ್ನು ಅಲ್ಲಲ್ಲಿ ಕಣ್ಣು ಹಾಯಿಸಿದಂತೆ ಓದಿದರೆ ಪುಸ್ತಕದ ಪ್ರಥಮ ಝಲಕ್ ಸಿಗುತ್ತದೆ. ನಿಧಾನವಾಗಿ, ಇನ್ನೊಂದು ಬಾರಿ, ಎಲ್ಲಾ ಬರಹಗಳ ಎಲ್ಲಾ ಸಾಲುಗಳನ್ನು ಓದಿದರೆ ಸಂಪೂರ್ಣವಾಗುತ್ತದೆ.

ತನ್ನ  ಶೀರ್ಷಿಕೆಯ ಸೊಗಸಿನಿಂದ ಅಯಸ್ಕಾಂತದಂತೆ ಸೆಳೆದು ಓದಿಸಿಕೊಂಡು ಹೋದ ಪ್ರಬಂಧ ‘ತಾರಸಿ ಮಲ್ಹಾರ್’. ಕರಾವಳಿಯ ಹಳ್ಳಿಯಲ್ಲಿ ಬಾಲ್ಯ ಕಳೆದ ನನಗೆ,  ‘ಸೋರುತಿರುವ ಮನೆಯ ಮಾಳಿಗೆ’ಯ ನೆನಪು ಬಲು ಅಪ್ಯಾಯಮಾನ.  ಪ್ರಬಂಧವನ್ನು ಓದುತ್ತಾ,  ಮಳೆನೀರು ಸೋರುವ ಕಡೆಯಲ್ಲಿ ತಪ್ಪಲೆ, ಬಕೆಟ್ ಇರಿಸಲು ಲೇಖಕರ ಜೊತೆಗೆ, ನಾನೂ ‘ಓಡಾಡಿದೆ’!  ‘ಉಂಡು ತಿಂದ ಪ್ರಬಂಧ’ ದಲ್ಲಿ ಲೇಖಕರು ತಮ್ಮ ಬಾಲ್ಯದಲ್ಲಿ ಹೋಟೆಲ್ ನ ದೋಸೆ ತಿನ್ನುವ ಅವಕಾಶಗಳನ್ನು ಹೆಚ್ಚಿಸಲು ಮಾಡುತ್ತಿದ್ದ ಜಾಣ್ಮೆಯ ಲೆಕ್ಕಾಚಾರಗಳು ಬಹುತೇಕ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪದ್ಧತಿಯಾಗಿತ್ತು. ಹಾಗೆ ಕಷ್ಟಪಟ್ಟು ದೋಸೆ ತಿಂದಾಗ ಸಿಗುತ್ತಿದ್ದ ತೃಪ್ತಿ, ಈಗ ಹೋಟೆಲ್ ನಲ್ಲಿ ಆರ್ಡರ್ ಮಾಡಿ ತಿಂದಾಗ ಸಿಗುತ್ತಿಲ್ಲ ಎನ್ನುವುದು ನಮ್ಮ ಅಭಿಮತ.  ಅದೇ ರೀತಿ, ‘ಟೀಂ ಗುಂಜಿಗನೂರು ಪ್ರಬಂಧವನ್ನು ಓದುವಾಗ ನಾವೂ ತೆಂಗಿನ ಹೆಡೆಮಟ್ಟೆಯ ಬ್ಯಾಟ್ ಹಿಡಿದುಕೊಂಡು, ಪಕ್ಕದ ಹೊಲಕ್ಕೆ ಬಿದ್ದು ಕಾಣೆಯಾಗಿದ್ದ ಚೆಂಡನ್ನು ಎದುರಾಳಿಗಳು ಹುಡುಕಿ ತರುವಲ್ಲಿ ವರೆಗೆ ‘ರನ್’ ಮಾಡುತ್ತಾ ಇರಬಹುದು! ಈಗ ಮಧ್ಯವಯಸ್ಸಿನಲ್ಲಿರುವ ಹೆಚ್ಚಿನವರ ಬಾಲ್ಯದ ನೆನಪುಗಳು ಸುಮಾರಾಗಿ ಹೀಗೆಯೇ ಎನ್ನಬಹುದು. ಆದರೆ, ಅವುಗಳಿಗೆ ಸುಂದರವಾದ ಚೌಕಟ್ಟು ನಿರ್ಮಿಸಿ, ಕಲಾತ್ಮಕವಾಗಿ ಮಂಡಿಸಿರುವುದು ಲೇಖಕರಿಗೆ ಸಿದ್ಧಿಸಿದ ಕಲೆ.

‘ಕುನ್ನಕುಡಿ ಮತ್ತು ನಾನು’ ಪ್ರಬಂಧದಲ್ಲಿ, ಸಂಗೀತ ರಸಾಸ್ವಾದನೆಗಾಗಿ ಹೊರಟ ಲೇಖಕರು,  ಕತ್ತಲಲ್ಲಿ ಒಬ್ಬಂಟಿಯಾಗಿ ನಡೆದು, ತಮಗಿದ್ದ ‘ದೆವ್ವಭಯ’ವನ್ನು ಗೆದ್ದ ಸಾಧನೆಗೆ ಓದುಗರಿಗೂ ಸಡಗರವೆನಿಸುತ್ತದೆ.  ಇದನ್ನು ಅವರ  ‘ಸಂಗೀತ ಸಾಧನೆ’ ಎಂದು ಪರಿಗಣಿಸಿದರೇನು ತಪ್ಪು? ಸಂಗೀತದಿಂದ ಮಳೆ ಬರಿಸಬಹುದಂತೆ, ದೀಪ ಉರಿಸಬಹುದಂತೆ….ಹಾಗಾದರೆ ಸಂಗೀತದ ಆಸಕ್ತಿಯಿಂದ ದೆವ್ವದ ಬಗ್ಗೆ ಭಯ ಹೋಗಲಾಡಿಸಬಾರದೆ? ಏನೇ ಇರಲಿ, ಲೇಖಕರ ಬಹುಮುಖವಾದ, ಅನನ್ಯವಾದ ಶ್ರದ್ಧೆ, ಆಸಕ್ತಿ ಹಾಗೂ ಜ್ಞಾನಕ್ಕೆ ಶರಣು. ಸಂಗೀತಮೇವ ಜಯತೇ!

‘ಅಸ್ತವ್ಯಸ್ತ ಮೀಮಾಂಸೆ’ ಪ್ರಬಂಧದ ಸೋಫಾದ ಮೇಲಿರುವ ಶಾಲು, ಅರ್ಧ ಓದಿದ ಪೇಪರ್, ಕುಡಿದಿಟ್ಟ ಲೋಟ, ಹೊಲಿದಿಟ್ಟ ಕ್ಯಾಲೆಂಡರ್ …ಇತ್ಯಾದಿಗಳ ಜೊತೆಗೆ, ಓದುಗರು ತಮ್ಮ ಮನೆಯ ಅಸ್ತವ್ಯಸ್ತತೆಯ ಮಾಪನವಾಗಿ ಅರ್ಧ ಹೆಚ್ಚಿದ ಈರುಳ್ಳಿ,  ಸ್ಟವ್ ನಲ್ಲಿ ಉಕ್ಕಿದ ಹಾಲು, ಕಾಣೆಯಾದ ಶೂ ಲೇಸ್, ಮುಚ್ಚಳವಿಲ್ಲದ ಪೆನ್ನು..ಹೀಗೆ ಸೇರಿಸುತ್ತಾ ಓದಿದರೆ ಇನ್ನಷ್ಟು ನೈಜವೆನಿಸುತ್ತದೆ! ‘ಉಲ್ಟಾ ಉಲ್ಲಾಸ’ದ ಪರಿಕಲ್ಪನೆ ನನ್ನ ಮಟ್ಟಿಗೆ  ‘ಗ್ರೀಕ್ ಅಂಡ್ ಲ್ಯಾಟಿನ್’. ಉಲ್ಟಾ ಕನ್ನಡದಲ್ಲಿ ಮಾತನಾಡುವುದರ ಜೊತೆಗೆ ಹಾಡನ್ನೂ  ಹಾಡುವ ಜಾಣರಿಗೆ ಶಿರಸಾನಮನಗಳು.  ಆಡು ಭಾಷೆಯ ಸೊಗಸನ್ನು ಹೀಗೂ ಹೆಚ್ಚಿಸಬಹುದೆಂದು ಅರ್ಥವಾಯಿತು. ಇದುವರೆಗೆ ಪ್ರಯತ್ನಿಸದವರಿಗೆ ಮೆದುಳಿಗೆ ಕೆಲಸ ಕೊಡುತ್ತದೆ. ನೂನಾ ಕ್ಕೆನಧಾನಿ ವೆಸುತ್ನಿಯಪ್ರ!
   

ಈಗಿನ ಕಾಲದಲ್ಲಿ ಎಲ್ಲರೂ ಬ್ಯುಸಿ. ಅನುಕೂಲತೆಗಳು ಹೆಚ್ಚಾದಷ್ಟೂ ಕನಿಷ್ಟ ನಗಲೂ ಬಿಡುವಿಲ್ಲದೆ ಮುಖ ಬಿಗಿದುಕೊಂಡೇ ಇರುವ ಜಾಯಮಾನ. ಕೆಲವು ಗಂಟೆಗಳ ಕಾಲ ಮೊಬೈಲ್ ಫೋನ್  ಬಳಸದೆ, ಟಿ.ವಿ.ಕಾರ್ಯಕ್ರಮಗಳನ್ನು ನೋಡದೆ,  ‘ಚುಕ್ಕಿ…ಚುಕ್ಕಿ’, ‘ಹಾಗೇ ಸುಮ್ಮನೆ’, ‘ಒಂದು ಅಸಂಗತ ಲಹರಿ’ ‘ಇದು ಚಿತ್ರಗೀತೆಗಳ ಸಮಯ’  ‘ಪದ್ಯವಂತರಿಗೆ ಇದು ಕಾಲವಲ್ಲ‘ ಹೀಗೆ ಎಲ್ಲ ಪ್ರಬಂಧಗಳನ್ನೂ ಓದಿ ನೋಡಿ. ಸಾಹಿತ್ಯ, ಸಂಗೀತ, ವಾಸ್ತವ ಹಾಗೂ ವೈಚಾರಿಕತೆಗಳ ಆಳಕ್ಕೆ ಇಳಿಯುತ್ತಾ, ಗಾಂಭೀರ್ಯವನ್ನು  ಅನುಭವಿಸುತ್ತಾ, ಲಾಲಿತ್ಯದೊಂದಿಗೆ ತೇಲುತ್ತಾ  ಬಾಲ್ಯ ಮತ್ತು ವರ್ತಮಾನಗಳ ನಡುವೆ ಚಂಗುಚಂಗನೆ ಜೂಟಾಟ ಆಡುತ್ತಾ,  ನಿಮಗರಿವಿಲ್ಲದಂತೆಯೇ ಮುಕ್ತವಾಗಿ ನಕ್ಕುಬಿಡುತ್ತೀರಿ. ಇದು  ‘ತಾರಸಿ ಮಲ್ಹಾರ್’ ಪುಸ್ತಕದ ವಿಶೇಷತೆ.

ಶ್ರೀ ಅಬ್ದುಲ್ ರಶೀದ್ ಅವರ ಮುನ್ನುಡಿಯೊಂದಿಗೆ ಪುಸ್ತಕವು ಬಹಳ ಆಪ್ತವಾಗಿ, ಸೂಕ್ತವಾಗಿ ಮೂಡಿಬಂದಿದೆ. ಉತ್ತಮ ಅಭಿರುಚಿಯ ಪ್ರಬಂಧ ಸಂಕಲನವನ್ನು ಓದುಗರಿಗೆ ಕೊಟ್ಟ ಶ್ರೀ ಜೆ.ಕೆ.ರವೀಂದ್ರಕುಮಾರ್ ಅವರಿಗೆ ಅಭಿನಂದನೆಗಳು.

-ಹೇಮಮಾಲಾ.ಬಿ, ಮೈಸೂರು 

6 Responses

 1. Avatar Smitha Amrithraj says:

  ನಾನೂ ಓದಿರುವೆ. ತುಂಬ ಇಷ್ಟವಾದ ಪ್ರಬಂಧ ಸಂಕಲನ.ಚೆನ್ನಾಗಿ ನಿರೂಪಿಸಿರುವಿರಿ ಹೇಮಕ್ಕ. ಜಿ.ಕೆ.ಸರ್.ನೀವು ಇಬ್ಬರೂ ಅಭಿನಂದನಾರ್ಹರು

 2. Avatar ನಯನ ಬಜಕೂಡ್ಲು says:

  ಸುಪರ್ಬ್ ಹೇಮಕ್ಕ, ನಿಮ್ಮ ಪುಸ್ತಕದ ಕುರಿತಾದ ಅಭಿಪ್ರಾಯ ಓದಿದ ನಂತರ ಆ ಪುಸ್ತಕವನ್ನು ತರಿಸಿ ಓದಬೇಕು ಅನ್ನೋ ಮನಸಾಗಿದೆ . ನಿಮ್ಮ ಬರಹದಲ್ಲಿರೋ ಬಾಲ್ಯದ , ಊರಿನ ಸೊಗಡೇ ಇಷ್ಟೊಂದು ಸೆಳೆಯುತ್ತಿರುವಾಗ ಇನ್ನು ಇಡೀ ಪುಸ್ತಕ ಎಷ್ಟೊಂದು ಚೆನ್ನಾಗಿರಬಹುದು ….,?

 3. Avatar Jessy Pudumana says:

  ಉತ್ತಮ ಪುಸ್ತಕ ಪರಿಚಯ ಮೇಡಂ. ಅಭಿನಂದನೆಗಳು

 4. Avatar Raghupathi Thamankar says:

  ವಾಹ್

 5. Hema Hema says:

  ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

 6. Avatar ಕಲಾ ಚಿದಾನಂದ says:

  ಈ ಪುಸ್ತಕದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿದ್ದೆ.
  ನೀವು ನೀಡಿದ ಪರಿಚಯ ಓದಿ ಓದುವ ತೃಷೆ ಇನ್ನಷ್ಟು ಹೆಚ್ಚಿತು. ಚಂದ..

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: