ಓದುವ ಖುಷಿ : ವಾಸುದೇವ ನಾಡಿಗ್ ಅವರ ‘ಅವನ ಕರವಸ್ತ್ರ’

Share Button

ಶ್ರೀ ವಾಸುದೇವ ನಾಡಿಗ್ ರವರು ನಾಡಿನ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಹೊಸ ಹಾಗೂ 7ನೇ ಕವನ ಸಂಕಲನ ‘ಅವನ ಕರವಸ್ತ್ರ’ ಬಿಡುಗಡೆ ಆಗಿದೆ. ಈ ಕವನ ಸಂಕಲನದಲ್ಲಿ ಒಟ್ಟು 60 ಕವಿತೆಗಳು ಇವೆ. ಪ್ರತಿಯೊಂದು ಕವಿತೆಯು ಪುಸ್ತಕದಿಂದ ಹೃದಯಕ್ಕಿಳಿದು ಓದುಗನನ್ನು ಪುಸ್ತಕದೊಳಗೆ ಇಳಿಸಿಕೊಳುತ್ತವೆ. ಇವರ ಕವಿತೆಗಳು ಸಹಜ ಉಸಿರಾಟದ ಲಯದಂತೆ ಸೂಕ್ಷ್ಮ ಸಂವೇದನೆಯನ್ನು ಉದ್ಧೀಪಿಸುವಂತೆ ಇವೆ. ಕಾವ್ಯವನ್ನೇ ಬದುಕುತ್ತಿರುವಂತೆ ಹಾಗೂ ಬದುಕನ್ನೆಲ್ಲಾ ಕಾವ್ಯವಾಗಿಸುವ ಪರಿಗೆ ಓದುಗ ಬೆರಗಾಗದೆ ಇರಲಾರ ಎಂಬಂತೆ ಇವೆ ಇವರ ಕಾವ್ಯ ಕುಸುರಿ.

ಅವರಸಂಬಂಧ’ ಕವಿತೆಯ ಸಾಲು

“ಶ್…..ದಯಮಾಡಿ ಸುಮ್ಮನಿರಿ
ಮಧು ಹನಿಯೊಂದು ಬಿದ್ದಿದೆ ಅಂತರಾಳದ ಕೊಳಕೆ
ಹೆಸರಿಸದ ಸಂಬಂಧವೊಂದು ಮಾಗುತಿದೆ
ಹೆಪ್ಪಾಗುತಿರುವ ಹಾಲಿನ ಶಬ್ದವೂ ಕೇಳಿಸುತಿದೆ”

ಈ ಪದ್ಯದಲ್ಲಿ ಸಂಬಂಧದ ಸೂಕ್ಷ್ಮತೆಯನ್ನು ತಿಳಿಸಿಕೊಟ್ಟಿದ್ದಾರೆ.

‘ಮುನಿ’ ಕವಿತೆಯಲ್ಲಿ ಹೇಗೆ ಒಬ್ಬ ಸಾಮಾನ್ಯ ಮನುಷ್ಯ ಅಸಮಾನ್ಯನಾಗಿ ಬದಲಾಗಿ ಬದುಕುವುದು ಕಷ್ಟ ಎಂಬುದನ್ನು ಪ್ರತಿಮೆಗಳ ಮೂಲಕ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

“ತೊರೆದು ಬದುಕುವುದು ಸರಳವಲ್ಲ
ಅರಿವಿನ ಮೂಲ ಪರಿತಾಪಗಳನು
ಹಸಿವು ನಿದ್ದೆ ಮೈಥುನ ಹಠಕ್ಕೆ ಬಿದ್ದ ಮಕ್ಕಳು
ರಂಪ ರಚ್ಚೆಗಳನು ಮಚ್ಚಿಡಲಾಗುವುದಿಲ್ಲ
ಮನೆ ತೊರೆದು ಬದುಕಬಹುದು
ಮನ ತೊರೆದು ಬಾಳಲಾಗದು”.

ಇಲ್ಲೆ ಇರು” ಎಂಬ ಕವಿತೆಯಲ್ಲಿ ಹೇಗೆ ಒಂದು ಮಗು ತನ್ನ ಅಮ್ಮನ ಅನುಪಸ್ಥಿತಿಯಲ್ಲಿ ಅವಳ ಬರುವಿಕೆಗೆ ಕಾಯುತ್ತಾ, ಅನುಭವಿಸುವ ತಳಮಳ, ಅಭದ್ರತೆಗಳನ್ನು ಕಣ್ಣಿಗೆ ಕಟ್ಟುವ ಹಾಗೆ ನಿರೂಪಿಸಲಾಗಿದೆ ಎಂದರೆ, ಆ ಮಗು ತಮ್ಮೆದುರೇ ನಿಂತು ಕಣ್ತುಂಬಿಕೊಂಡಿದಿಯೇನೋ ಎಂಬಂತೆ ಭಾಸವಾಗುತ್ತದೆ. ನಾನು ಓದುತ್ತಿರುವ ಇತ್ತೀಚಿನ ಕವಿತೆಗಳಲ್ಲಿ ಈ ತರಹದ ಅದ್ಭುತ ಕವಿತೆಗಳನ್ನು ನಾಡಿಗರೇ ಬರೆಯಬಲ್ಲರೇನೋ ಎಂಬಂತಿವೆ ಸಾಲುಗಳು.

“ಕೇಳುತಿದೆಯೆ ಅಮ್ಮ?
ಕಂದನ ಕಣ್ಣದನಿ?
ಬೆರಳು ನುಡಿಸುವ ತಂಬುರ?
ಬಂದು ಬಿಡು ಬೇಗ
ಜಗದ ತೊಟ್ಟಿಲ ಒಮ್ಮೆ ತೂಗಿಬಿಡು
ಮೊಣಕಾಲೂರಿ ಕೂತಿದೆ ಮಗು ಹೊಸ್ತಿಲಿಗೆ
ನೀನೆಳೆದ ರಂಗವಲ್ಲಿ ಅದು ಕರುಳ ಹೂ”

 ಬೆಳಕಿಗಾಗಿ ಬೇಯುವುದು” ಕವಿತೆಯಲ್ಲಿ ರೇಷ್ಮೆ ಹುಳುವಿನ ಜೀವನ ವೃತ್ತಾಂತವನ್ನು ವಿವರಿಸುತ್ತಾ ಮಾನವ ತಮ್ಮ ಬದುಕಿಗೆ ಹೋಲಿಕೆ ಮಾಡಿಕೊಂಡು ಹೇಗೆ ಜೀವನ ಪ್ರೀತಿಯನ್ನು ಕಲಿಯಬಹುದು ಎಂಬುದು ತಿಳಿಯಬಹುದು.

“ಕಟ್ಟಿಕೊಂಡ ಗೂಡನ್ನೂ
ಬೀಳಿಸಿಕೊಂಡು ಕುದಿವ ನೀರಲಿ
ಎಳೆ ಎಳೆಯಾಗಿ ಏಳುವ
ಗಳಿಗೆ ಗಳಿಗೆ ಕಾದಿದ್ದೇನೆ
ಅದಾವ ಬೆರಳುಗಳಿಗೆ ಸಿಕ್ಕು
ನಳನಳಿಸುವ ವಲ್ಲಿಯಾಗುವೆನೋ
ಕಾಸಿ ಬಡಿದ ಲೋಹ ಅದಾವ ರೂಪಾಗುವುದೋ”

 ಹಾಗೊಂದು ವೇಳೆ” ಕವಿತೆಯಲ್ಲಿ ಮನಸಿನ ಮಾತನ್ನು ಅದುಮಿಡದೇ ಮನಸಿನಂತೆ ಮುಂದುವರೆದಿದ್ದರೇ ವಾಸ್ತವ ಬೇರೆ ಏನೋ ಆಗಬಹುದಿತ್ತೇನೋ ಎಂಬ ಭಾವವನ್ನು ನಿರೂಪಿಸಿದ್ದಾರೆ

‘ಮುಚ್ಚಿದ ಬಾಗಿಲುಗಳು ಅಸಾಧ್ಯವನ್ನು ಪರಿಚಯಿಸಿದವು
ತೆರೆಯದ ಬೀಗಗಳು ಮಿತಿಯನ್ನು ಹೊಳೆಯಿಸಿತು”

ಅವನ ಕರವಸ್ತ್ರ” ಕವಿತೆಯು ಪುಸ್ತಕದ ಶೀರ್ಷಿಕೆ ಒದಗಿಸಿರುವ ಕವಿತೆ. ಈ ಕವಿತೆಯಲ್ಲಿ ಹೇಗೆ ಒಬ್ಬ ವ್ಯಕ್ತಿ ತನ್ನೆಲ್ಲ ಸಂತೋಷ ಗಳನ್ನು ತನ್ನವರಿಗಾಗಿ ತ್ಯಾಗ ಮಾಡಿ ತಾನು ಎಲ್ಲಾ ನೋವುಗಳನ್ನು ಅನುಭವಿಸಿ ಜಗತ್ತಿಗೆ ಸಾಂತ್ವನ ಹರಿಸಿ ತಾನು ತನ್ನ ದುಃಖವನ್ನು ಮರೆಮಾಚುತ್ತಾನೆ ಎಂಬುದನ್ನು ಹೃದಯಂಗಮವಾಗಿ ವರ್ಣಿಸಲಾಗಿದೆ‌.

ಈಗ ಅವನ ಕರವಸ್ತ್ರದಲ್ಲಿ ಅವನ ಕಣ್ಣೀರಿಗೆ ಜಾಗವಿಲ್ಲ”

ಹೀಗೆ ಈ ಪುಸ್ತಕದ ಪ್ರತಿಯೊಂದು ಕವಿತೆಯೂ ಶುದ್ಧ ಕಾವ್ಯ ಸಂತೋಷವನ್ನು ನೀಡುವಲ್ಲಿ ಯಶಸ್ವಿಯಾಗಿವೆ. ಎಷ್ಟೋ ಬಾರಿ ಕವಿತೆಯ ಒಂದೇ ಒಂದು ಸಾಲು ಕೂಡ ಕಾಡಲು ಸಾಕಾಗುತ್ತದೆ. ಆ ಒಂದೇ ಒಂದು ಸಾಲು ಮತ್ತೆ ಮತ್ತೆ ರೋಮಾಂಚನವನ್ನು ಉತ್ಪತ್ತಿಮಾಡುತ್ತವೆ‌.

ನಾಡಿನ ಹಿರಿಯ ಕವಿಗಳಾದ ಶ್ರೀ ಸುಬ್ರಾಯ ಚೊಕ್ಕಾಡಿರವರು ಈ ಪುಸ್ತಕಕ್ಕೆ ಬೆನ್ನುಡಿ ಬರೆದು ಕೊಟ್ಟಿದ್ದಾರೆ. ಒಣ ವೈಚಾರಿಕತೆಯ ಭಾರವಿಲ್ಲದ ಭಾವಾತಿರೇಕದ ಗೋಳೂ ಇಲ್ಲದ ಇಲ್ಲಿನ ಕವಿತೆಗಳು ಬುದ್ಧಿ ಭಾವಗಳ ಹಿತವಾದ ಸಾಂಗತ್ಯದಲ್ಲಿ ಹೂವರಳಿದಂತೆ ಅರಳಿಕೊಂಡಿವೆ ಎಂದು ಕವಿತೆಗಳ ಬಗ್ಗೆ ಮಾತುಗಳನ್ನಾಡಿದ್ದಾರೆ.

ಅವನ ಕರವಸ್ತ್ರ ಪುಸ್ತಕ ವನ್ನು ತುಮಕೂರಿನ “ಗೋಮಿನಿ ಪ್ರಕಾಶನ”ದಿಂದ ಅಚ್ಚುಕಟ್ಟಾಗಿ ಪ್ರಕಟಿಸಲಾಗಿದೆ. ಮುಖಪುಟವನ್ನು ಯುವ ವಿನ್ಯಾಸಕಾರರಾದ ” ಅಜಿತ್ ಕೌಂಡಿನ್ಯ ಚಂದವಾಗಿ ವಿನ್ಯಾಸ ಮಾಡಿದ್ದಾರೆ. ಶುದ್ಧ ಕಾವ್ಯದ ಆನಂದ ಪಡೆಯಲು “ಅವನ ಕರವಸ್ತ್ರ” ಓದಲೇ ಬೇಕಾದ ಪುಸ್ತಕವಾಗಿದೆ. ಓದಲಾರಂಭಿಸಿದರೇ ಅವನ ಕರವಸ್ತ್ರ ನಮ್ಮದೇ ಕರವಸ್ತ್ರವಾಗುವುದು. 

-ಶರತ್ ಪಿ.ಕೆ. ಹಾಸನ

4 Responses

  1. Avatar ನಯನ ಬಜಕೂಡ್ಲು says:

    “ಅವನ ಕರವಸ್ತ್ರ ” ಕವನ ಸಂಕಲನದ ಸಾಲುಗಳು ಬಹಳ ಸರಳ ರೂಪದಲ್ಲಿ , ಮನ ಮುಟ್ಟುವಂತಿದೆ ಅನ್ನಿಸಿತು . ಚೆನ್ನಾಗಿದೆ ಪುಸ್ತಕವನ್ನು ಪರಿಚಯಿಸಿದ ರೀತಿ .

  2. Hema Hema says:

    ಪುಸ್ತಕ ಪರಿಚಯವನ್ನು ಸೊಗಸಾಗಿ ಮಾಡಿದ್ದೀರಿ. . ‘ಓದಲಾರಂಭಿಸಿದರೇ ಅವನ ಕರವಸ್ತ್ರ ನಮ್ಮದೇ ಕರವಸ್ತ್ರವಾಗುವುದು ‘ ..ಸಾಲು ಬಹಳ ಸುಂದರ. ಕವಿಗೂ ತಮಗೂ ಅಭಿನಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: