ಪ್ರೀತಿಯ ಗೆಳತಿ ..”ಪುಸ್ತಕ”

Share Button

ನಾನು ಇನ್ನೂ ಪ್ರಾಥಮಿಕ ಶಾಲೆಯಲ್ಲಿದ್ದ ಸಮಯ, ನಾಲ್ಕನೇ ಕ್ಲಾಸಲ್ಲಿ ಓದುತ್ತಿದ್ದೆನೇನೋ. ಮನೆಯಲ್ಲಿ ಅಜ್ಜ, ಅಜ್ಜಿ, ಚಿಕ್ಕಪ್ಪಂದಿರು, ನನ್ನಕ್ಕ, ಜೊತೆಗೆ ಗಂಡ ಮಕ್ಕಳನ್ನು ಕಳಕೊಂಡಿದ್ದ ನನ್ನ ಸೋದರತ್ತೆ.  ನಾನೇ ಮನೆಯ ಅತೀ ಕಿರಿಯ ಸದಸ್ಯೆ; ಮನೆಯಲ್ಲಿ ಆಡಲು ಒಡನಾಡಿಗಳು ಯಾರೂ ಇರಲಿಲ್ಲ. ನನ್ನಕ್ಕ ನನಗಿಂತ ಆರು ವರ್ಷ ದೊಡ್ಡವಳಿದ್ದುದರಿಂದ ಆಡಲು ಜೊತೆ ಸರಿಹೊಂದುತ್ತಿರಲಿಲ್ಲ. ಹಳ್ಳಿಗಳಲ್ಲಿ ಮನೆಗಳೂ ತುಂಬಾ ದೂರದಲ್ಲಿ ಇರುತ್ತಿದ್ದುದರಿಂದ ನಾನು ಒಬ್ಬಂಟಿಯಾಗಿಯೇ ಬೆಳೆದೆ. ಶಾಲೆಯು ನನ್ನ ಅತ್ಯಂತ ಪ್ರೀತಿಯ ತಾಣವಾಗಿತ್ತು. ಮನೆಗೆ ಬಂದ ಮೇಲೆ ತೋಟ, ಗುಡ್ಡ ಸುತ್ತುವುದು; ದನ, ಕರು, ನಾಯಿ, ಬೆಕ್ಕುಗಳೊಡನೆ ಆಟವಾಡುವುದು ಖುಷಿಯ ವಿಷಯವಾಗಿತ್ತು. ಶಾಲೆಯಲ್ಲಿ ಎಲ್ಲಾ ಪಾಠಗಳನ್ನೂ ನಮ್ಮಲ್ಲಿಯೂ ಓದಿಸುತ್ತಿದುದರಿಂದ ಓದುವ ಹವ್ಯಾಸ ಆಗಲೇ ಪ್ರಾರಂಭವಾಗಿದ್ದಿರಬಹುದು.

ಆಗೆಲ್ಲಾ ಮನೆಗೆ ಯಾವ ಪತ್ರಿಕೆಯೂ ಬರುತ್ತಿರಲಿಲ್ಲ. ಮನೆಗೆ ಸಾಮಾನು ಕಟ್ಟಿಕೊಂಡು ಬಂದ ಪೇಪರ್ ತುಂಡುಗಳನ್ನು ಅತ್ಯಂತ ಪ್ರೀತಿಯಿಂದ, ಚಾಕಲೇಟ್ ಚಪ್ಪರಿಸಿದಂತೆ ಓದುವುದಿತ್ತು. ಮನೆಯವರಿಗೆಲ್ಲಾ ತುಂಬಾ ಓದುವ ಹವ್ಯಾಸ ಇದ್ದುದರಿಂದ, ಸಾರ್ವಜನಿಕ ಗ್ರಂಥಾಲಯದಿಂದ ಎಂ.ಕೆ. ಇಂದಿರ, ತ್ರಿವೇಣಿ, ಸಿ.ಎನ್. ಮುಕ್ತ ಇತ್ಯಾದಿ ಮಹಿಳಾ ಬರಹಗಾರ್ತಿಯರ ಪುಸ್ತಕಗಳು; ಪುರುಷೋತ್ತಮ,  ಎಚ್.ಎನ್. ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿಗಳು; ಟಿ.ಕೆ. ರಾಮರಾವ್, ತ,ರಾ.ಸು ಮುಂತಾದವರ ಐತಿಹಾಸಿಕ ಕಾದಂಬರಿಗಳನ್ನು ಚಿಕ್ಕಪ್ಪಂದಿರು ತರುತ್ತಿದ್ದರು. ನಮ್ಮತ್ತೆ ಈ ಎಲ್ಲಾ ಕಾದಂಬರಿಗಳನ್ನು ಓದುತ್ತಿದ್ದರು. ನಾನು ಅವರ ಬಳಿ ಕುಳಿತು ಅವರು ಓದುವುದನ್ನೇ ನೋಡುತ್ತಿದ್ದೆ.  ಓದಲು ಕೇಳಿದರೆ, ನನಗೆ ಯಾರೂ ಕೊಡುತ್ತಿರಲಿಲ್ಲ. ಅತ್ತೆ ಅದರ ಕತೆಗಳನ್ನು ಹೇಳುತ್ತಿದ್ದರು.

ನಮ್ಮ ಮನೆ ಅಟ್ಟದಲ್ಲಿ ಬೀಗ ಜಡಿದ ಒಂದು ಮರದ ಪೆಠಾರಿ ಇತ್ತು. ಅದರಲ್ಲಿ ಪುಸ್ತಕಗಳು ಇತ್ತೆಂದು ಗೊತ್ತಿತ್ತು, ಆದರೆ ನನಗೆ ಓದಲು ಯಾರೂ ಕೊಡುತ್ತಿರಲಿಲ್ಲ. ಕುತೂಹಲದಿಂದ ಅದರ ಮುಚ್ಚಳವನ್ನು ಚಿಕ್ಕಪ್ಪ ತೆಗೆಯುವುದನ್ನೇ ಕಾಯುತ್ತಿದ್ದೆ. ಅವರು ಬೀಗ ಹಾಕಲು ಮರೆತ ದಿನ ಅಮೂಲ್ಯವಾದ ನಿಧಿಯೇ ಸಿಕ್ಕಿದಷ್ಟು ಸಂತಸಪಟ್ಟಿದ್ದು ಇನ್ನೂ ನೆನಪಿದೆ. ಕತ್ತಲೆ ತುಂಬಿದ ಅಟ್ಟದಲ್ಲಿ ಅದರ ಎದುರಿಗೆ ಕುಳಿತು ನೋಡುತ್ತೇನೆ..ವಾಹ್! ಹಳೆಯ ಚಂದಮಾಮಗಳನ್ನು ಒಗ್ಗೂಡಿಸಿ ಹೊಲಿದು ಮಾಡಿದ ದಪ್ಪ ಪುಸ್ತಕಗಳ ಸಂಗ್ರಹವೇ ಅಲ್ಲಿತ್ತು. ಚಿಕ್ಕಪ್ಪನಲ್ಲಿ ಅತ್ತೂ ಕರೆದು ಕೆಲವೇ ದಿನಗಳು ಓದಲು ಅವರ ಪರ್ಮಿಶನ್ ಸಿಕ್ಕಿತು. ಆಂದಿನಿಂದ ಒಂದಕ್ಷರವೂ ಬಿಡದೆ ಓದಿದ್ದೇ ಓದಿದ್ದು. ಅವುಗಳಲ್ಲಿ ನನಗೆ ಪ್ರಿಯವಾಗಿದ್ದವೆಂದರೆ ವಿಕ್ರಮಾದಿತ್ಯ ಬೇತಾಳ ಕತೆಗಳು. ಅದರಲ್ಲಿ “ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆ ಒಡೆದು ಚೂರು ಚೂರಾದೀತು..ಜೋಕೆ!”ನ್ನುವ ಬೇತಾಳನ ಮಾತುಗಳಿಂದ ನನ್ನ ತಲೆಯೇ ಹೋದಷ್ಟು ಹೆದರಿಕೆಯಾಗುತ್ತಿತ್ತು. ಕೊನೆಗೆ ವಿಕ್ರಮಾದಿತ್ಯ ರಾಜನು ಉತ್ತರ ಹೇಳಿದ ಮೇಲೆಯೇ ನನಗೆ ನಿರಾಳ. ಅಷ್ಟು ಕಷ್ಟದ ಪ್ರಶ್ನೆಗೆ ರಾಜನು ಎಷ್ಟು ಚೆನ್ನಾಗಿ ಉತ್ತರ ಹೇಳುತ್ತಾನೆಂದು ಆಶ್ಚರ್ಯ ಬೇರೆ! ಪ್ರತೀ ದೊಡ್ದ ರಜೆಗೂ ಅವೇ ಪುಸ್ತಕಗಳನ್ನು ಹೊಸತನ್ನು ಓದುವಷ್ಟೇ ಕುತೂಹಲಗಳಿಂದ ಓದುವುದೇ ನನ್ನ ಅತ್ಯಂತ ಪ್ರೀತಿಯ ಕಾರ್ಯವಾಗಿತ್ತು.

ಹೀಗೆ ಮುಂದುವರಿದ ನನ್ನ ಓದು, ಹೈಸ್ಕೂಲಿಗೆ ತಲಪಿದಾಗ ಕಾದಂಬರಿಗೆ ಭಡ್ತಿ ಸಿಕ್ಕಿತ್ತು. ಮನೆಗೆ ತಂದ ಪ್ರತೀ ಕಾದಂಬರಿಗಳನ್ನೂ ಬಿಡದೆ ಓದುತ್ತಿದ್ದೆ. ತ್ರಿವೇಣಿ ನನ್ನ ಅಚ್ಚುಮೆಚ್ಚಿನ ಕಾದಂಬರಿಗಾರ್ತಿಯಾಗಿದ್ದಳು. ಮುಂದೆ, ವಿದ್ಯಾಭ್ಯಾಸ, ನೌಕರಿ, ಸಂಸಾರ ನಿರ್ವಹಣೆಯ ನಡುವೆ ಆಸೆಯಾದರೂ, ದೀರ್ಘ ಓದುವಿಕೆಗೆ ಬಿಡುವು ದೊರೆಯುವುದು ಕಷ್ಟವಾಗುತ್ತಿತ್ತು. ನಿವೃತ್ತಿ ಬಳಿಕ ಓದುವ ಆಸೆಯಿಂದ, ನನ್ನ ಪ್ರೀತಿಯ ಸುಧಾ, ಕಸ್ತೂರಿಯಂತಹ ಪತ್ರಿಕೆಗಳನ್ನು ಸಂಗ್ರಹಿಸಿಟ್ಟಿದ್ದೆ. ನಿವೃತ್ತಿ ಬಳಿಕ ಒಮ್ಮೆ ಮಗನಲ್ಲಿ ಕೇಳಿದೆ, “ಇವುಗಳನ್ನು ಓದಿ ಮುಗಿಸಲು ಎಷ್ಟು ಸಮಯ ಬೇಕಾಗಬಹುದು?” ಅವನು ಕೊಟ್ಟ ಉತ್ತರ ನನಗೆ ನಿಜವಾಗಿಯೂ ಚಿಂತಿಸುವಂತೆ ಮಾಡಿತ್ತು “ ಆಮ್ಮಾ. ನಿನಗೆ ನೂರು ವರ್ಷ ಆಯುಸ್ಸು ಇದ್ದರೂ ಇವುಗಳನ್ನು ಮುಗಿಸಲು ಸಾಧ್ಯವಿಲ್ಲ.”  ಕೊನೆಗೆ ಅವುಗಳನ್ನೆಲ್ಲಾ ಶಾಲೆಗಳಿಗೆ ಕೊಟ್ಟು ಸದುಪಯೋಗ ಪಡಿಸಿಕೊಳ್ಳುವಂತಾಯಿತು. ಸದ್ಯಕ್ಕೆ ಮನೆಯಲ್ಲೇ ಪುಟ್ಟ ಲೈಬ್ರರಿ ಇದೆ. ಸಮಯ ಸಿಕ್ಕಾಗ ಓದುವ ತುಡಿತ ಇದ್ದರೂ, ನಾನೇ ಪೇರಿಸಿಕೊಡ ಕೆಲವು ಕೆಲಸಗಳಿಂದಾಗಿ ಪೂರ್ತಿಯಾಗಿ ಅದರಲ್ಲೇ ತೊಡಗಿಸಿಕೊಳ್ಳಲು ಆಗುತ್ತಿಲ್ಲ.

ಒಮ್ಮೆ ಆಕಸ್ಮಿಕವಾಗಿ ಡಾ. ಗುರುರಾಜ ಕರಜಗಿಯವರ ‘ಕರುಣಾಳು ಬಾ ಬೆಳಕೆ` ಲೇಖನ ಸಂಗ್ರಹದ ಪುಸ್ತಕವೊಂದು ನನಗೆ  ದೊರಕಿತು. ಅದರಲ್ಲಿನ ಲೇಖನಗಳನ್ನು ಓದಿದಾಗ, “ಹೌದಲ್ಲಾ, ಇದರಲ್ಲಿ ನಮೂದಿಸಿದ ವಿಷಯಗಳೆಷ್ಟು ಸತ್ಯ!?” ಎಂದೆನಿಸಿತು.ಅದನ್ನು ಓದಿದಾಗ, ಬದುಕಿಗೆ ಅತೀ ಹತ್ತಿರವಾದ, ಮನಸ್ಸಿಗೆ ಆತ್ಮೀಯವಾದ ಭಾವನೆ ಹುಟ್ಟುವುದಂತೂ ಸುಳ್ಳಲ್ಲ. ಇದರಲ್ಲಿ ಸಾಹಿತ್ಯ, ಸಂಗೀತ, ಧರ್ಮ, ಹೀಗೆ ಹಲವಾರು ಭಾವನಾ ಲಹರಿಗಳ ಹರಿವು ಸುಲಲಿತ! ಚಿಕ್ಕ ಚೊಕ್ಕ ಸಂಕ್ಷಿಪ್ತ ರೂಪದ ಈ ಲೇಖನಗಳು ಎಲ್ಲೋ ಒಂದು ಕಡೆ ನಮ್ಮ ಮನವನ್ನು ಮುಟ್ಟಿ, ತಟ್ಟಿ ಎಬ್ಬಿಸಿಬಿಡುತ್ತವೆ. ನಮ್ಮ ಯಾವುದೋ ಸಮಸ್ಯೆಗೆ ಅದರ ಯಾವುದೋ ಒಂದು ಲೇಖನದಲ್ಲಿ ಪರಿಹಾರವಂತೂ ಖಚಿತ. ಅದನ್ನು ಓದಲು ಪ್ರಾರಂಭಿಸಿದರೆ, ಒಂದನ್ನೂ ಬಿಡದೆ, ಕೊನೆ ತನಕವೂ ಓದುವ ಕುತೂಹಲವನ್ನು ಹುಟ್ಟಿಸುತ್ತದೆ. ಒಂದು ಪುಸ್ತಕದಲ್ಲಿ ನೂರು ಲೇಖನಗಳಂತೆ, ಪುಸ್ತಕವು ಈಗಾಗಲೇ ಹನ್ನೆರಡು ಭಾಗಗಳಲ್ಲಿ ಪ್ರಕಟವಾಗಿದೆ. ನನ್ನ ಅಚ್ಚುಮೆಚ್ಚಿನ ಈ ಪುಸ್ತಕಗಳು ನನ್ನ ಸಂಗ್ರಹದಲ್ಲಿ ಸದಾ ಸಿದ್ಧವಾಗಿದ್ದು, ಆತ್ಮೀಯರಿಗೆ ಹಾಗೂ ಯಾವುದೇ ಕಾರ್ಯಕ್ರಮಗಳಲ್ಲಿ ಉಡುಗೊರೆ ರೂಪದಲ್ಲಿ ಹಂಚಲು ಅಭಿಮಾನವೆನಿಸುವುದಂತೂ ಸುಳ್ಳಲ್ಲ.

-ಶಂಕರಿ ಶರ್ಮ, ಪುತ್ತೂರು.

4 Responses

  1. Nayana Bajakudlu says:

    ಬಹಳ ಚೆನ್ನಾಗಿ ಬರೆದಿದ್ದೀರಿ ಮೇಡಂ. ಬಾಲ್ಯದ ದಿನಗಳಲ್ಲಿ ಇದ್ದ ಕಥೆ, ಕಾದಂಬರಿಗಳನ್ನು ಓದುವ ಹುಚ್ಚು , ಓದಿನ ಸಲುವಾಗಿ ಮಾಡುತಿದ್ದ ಕಳ್ಳಾಟಗಳು ನೆನಪಾಯಿತು . ಆ ಚಂದಮಾಮ , ಬಾಲಮಂಗಳದ ಕಾಲವೇ ಬಹಳ ಸೊಗಸಾಗಿತ್ತು. ಈಗಿನ ಮಕ್ಕಳಿಗೆ ಅಂತಹ ಒಂದು ನೆನಪನ್ನು ಸವಿಯುವ ಅದೃಷ್ಟ ಇಲ್ಲ ಆಗುತ್ತಿರುವ ಬದಲಾವಣೆಗಳಿಂದಾಗಿ .

  2. Asha Nooji says:

    ಶಂಕರಿಯಕ್ಕ ಚೆನ್ನಾಗಿ ಬರೆದಿರಿ ನಾನು ಓದುತ್ತಿದ್ದೆ ಹೇಮಾಮಾಲರ ಅಜ್ಜನಮನೆಗೆ ಅವಳ ಮಾವ ತರಿಸುವಾಗ ￿ಅವರಿಗೆ ಯಾವಾಗ ಓದಿಯಾಗುವುದನ್ನೆ ಕಾಯುತ್ತಾ ನಂತರ ನನ್ನ ಸರದಿ .ನೆನೆಪಾಯಿತು ನನಗೂ ನನ್ನ ಬಾಲ್ಯದ ಕ್ಷಣಗಳು

  3. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

    ಓದು ಹಾಗೂ ನಾವು ಅದೊಂದು ಅವಿನಾಭಾವ ಸಂಬಂಧ.. ನೀವು ಹೇಳಿದಂತೆ ನಾನೂ ಸಹ ಮದುವೆ, ಉಪನಯನಗಳಿಗೆ ನಾನು ನನ್ನ ಪುಸ್ತಕಗಳನ್ನೇ ಉಡುಗೊರೆ ಕೊಡುವ ಪರಿಪಾಠ ಇಟ್ಟುಕೊಂಡಿರುತ್ತೇನೆ.
    ಚೆನ್ನಾಗಿದೆ ಬರಹ.

  4. Shankari Sharma says:

    ಲೇಖನವನ್ನು ಓದಿದ, ಮೆಚ್ಚಿದ ತಮಗೆಲ್ಲರಿಗೂ ಧನ್ಯವಾದಗಳು.

Leave a Reply to Nayana Bajakudlu Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: