ಮೌಲ್ಯಾಧಾರಿತ ಸುಖೀ ಸಂಸಾರ

Share Button

ನಮ್ಮ ಈ ಸುಂದರ ಬದುಕು ಅನ್ನುವಂತದ್ದು ಮನುಷ್ಯನಿಗೆ ಸಿಕ್ಕಿದ ಬಹು ದೊಡ್ಡ ಕೊಡುಗೆ. ನಾವು ನಮ್ಮ ಬದುಕಿನಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ಗುರಿಯೆಡೆಗೆ ಧಾವಿಸುತ್ತಿರುತ್ತೇವೆ. ನಮ್ಮ ಎಲ್ಲಾ ಸಾಧನೆಯ, ಯಶಸ್ಸಿನ ಹಿಂದಿನ ಸ್ಫೂರ್ತಿಯ ಸೆಲೆ ಮತ್ತು ನೆಲೆ ಸುಖೀ ಸಂಸಾರದಲ್ಲಡಗಿದೆ. ನಾವು ಎಲ್ಲೇ ಇರಲಿ, ಹೇಗೇ ಇರಲಿ ನಮ್ಮ ಮೂಲ ಬೇರುಗಳು ಸದಾ ಸಂಸಾರದೊಳಗೆ ಬೇರು ಬಿಟ್ಟುಕೊಂಡಿರುತ್ತದೆ ಎನ್ನುವುದು ಕೂಡ ಅಷ್ಟೇ ನಿಜ. ವಿಶ್ವ ಮಾನವತಾವಾದಿ ರಾಷ್ಟ್ರ ಕವಿ ಕುವೆಂಪುರವರು ತಮ್ಮ ಕಾವ್ಯದಲ್ಲಿ ‘ಮನೆ ಮನೆ ನನ್ನ ಮನೆ.. ನಾನು ಹುಟ್ಟಿ ಬೆಳೆದ ಮನೆ..’ ಹೀಗೆ ಮನೆಯೊಂದಿಗಿನ ಆಪ್ತತೆಯ ಕ್ಷಣಗಳನ್ನು ಬಹು ನವಿರಾಗಿ ಕಟ್ಟಿ ಕೊಡುತ್ತಾರೆ. ಬಹುಷ; ಸುಖೀ ಸಂಸಾರವೇ ನಮ್ಮೆಲ್ಲರ ಆಶೋತ್ತರಗಳ, ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿ ಅನ್ನುವಂತದ್ದನ್ನು ನಾವ್ಯಾರು ಅಲ್ಲಗಳೆಯುವ ಹಾಗಿಲ್ಲ.

ಒಂದು ಕುಟುಂಬದ ಮೌಲ್ಯತೆಯನ್ನು ಆಧರಿಸಿ ಎಷ್ಟೊಂದು ಹಿರಿದು ಘನ ಕಾರ್ಯಗಳೆಲ್ಲಾ ಜರುಗುತ್ತವಾ? ಅಂತ ನೆನೆದುಕೊಂಡರೆ ನಿಜಕ್ಕೂ ಅಚ್ಚರಿಯಾಗದೇ ಇರಲಿಕ್ಕಿಲ್ಲ. ಆದರೆ ಇಂತಹ ಮೌಲ್ಯಾಧಾರಿತ ಸುಖೀ ಸಂಸಾರ ನಮ್ಮೆಲ್ಲರ ಪಾಲಿಗೆ ದಕ್ಕಿದೆಯಾ? ಅಂತ ನಾವೆಲ್ಲರು ಪ್ರಶ್ನೆ ಮಾಡಿಕೊಳ್ಳುವುದರ ಜೊತೆಗೆ ಒಂದು ಸುಖೀ ಸಂಸಾರದ ಮೌಲ್ಯವನ್ನು ಹೆಚ್ಚಿಸಲು ನನ್ನ ಕೊಡುಗೆಯೇನು ಎನ್ನುವುದನ್ನು ಕೂಡ ಮೊಟ್ಟ ಮೊದಲನೆಯದಾಗಿ ಪರಾಮರ್ಶಿಸಿ ಕೊಳ್ಳಬೇಕಿದೆ. ಮೌಲ್ಯವೆಂದರೆ ಬಹು ಜನರು ಒಪ್ಪಿರುವ ಒಂದು ಆದರ್ಶ. ಸಂಸಾರ ಸುಖಮಯವಾಗಿರಲು ಇಂತಹ ಆದರ್ಶಗಳು ಅಗತ್ಯ.

ಸುಖೀ ಸಂಸಾರವೆಂದರೇನು? ಎಂಬ ಪ್ರಶ್ನೆಯನ್ನು ನಾವು ಹಾಕಿ ಕೊಂಡಾಗ, ಸುಖವೆಂದರೆ ಇದುವೇ ಹೀಗೇ ಅಂತ ನಾವು ನಿರ್ಧಿಷ್ಟವಾಗಿ ಹೇಳುವ ಹಾಗಿಲ್ಲ. ಇದು ಅವರವರ ಮನೋವಲಯಕ್ಕೆ ಸಂಬಂಧಿಸಿದ ವಿಚಾರ. ನಮಗೆ ಬಾಹ್ಯಕ್ಕೆ ತೋರುವ ಮಾದರಿಗಳಾದ ಆಡಂಬರ, ಐಶಾರಾಮ ಜೀವನ, ಶ್ರೀಮಂತಿಕೆಯನ್ನೇ ನಾವು ಸುಖವೆಂದು ಭ್ರಮಿಸಿದರೆ ಅದು ನಮ್ಮ ತಪ್ಪು ಕಲ್ಪನೆ. ಬಾಹ್ಯಕ್ಕೆ ತೋರುವ ಸಂಗತಿಗಳು ಅಂತರಂಗಕ್ಕೆ ಹೊಂದಿಕೆಯಾಗಲಾರವು. ಇವತ್ತು ಸಾಂಸಾರಿಕ ಜೀವನದಲ್ಲಿ ಮೌಲ್ಯಗಳು ನಶಿಸಿ ಹೋಗುತ್ತಿರುವುದೇ ಇವತ್ತು ನಮ್ಮ ಅನೇಕ ಸಾಮಾಜಿಕ ಅಧ;ಪತನಕ್ಕೆ ಕಾರಣ.

ಹಿಂದೆ ಕೂಡು ಕುಟುಂಬ. ಮನೆಯ ಯಜಮಾನ ಸಂಸಾರದ ನಿರ್ವಹಣೆಯನ್ನು ಹೊರುತ್ತಿದ್ದರೆ, ಸಂಸಾರದ ಎಲ್ಲಾ ಸದಸ್ಯರ ಮೇಲೂ ಜವಾಬ್ಧಾರಿಗಳಿರುತ್ತಿದ್ದವು. ಎಲ್ಲರೂ ಕೆಲಸದಲ್ಲಿ ಕೈಗೂಡಿಸುತ್ತಿದ್ದರು. ಕಡಿಮೆ ಖರ್ಚು ಉಳಿಕೆಯ ದೃಷ್ಠಿಯಿಂದ ಇದು ಹೆಚ್ಚು ಪ್ರಯೋಜನಕಾರಿಯಾಗಿತ್ತು. ಈ ವ್ಯವಸ್ಥೆಯಲ್ಲಿ ಸಾಧಕಗಳ ಜೊತೆಗೆ ಬಾಧಕಗಳು ಇಲ್ಲವೆಂದೇನಿಲ್ಲ. ಅದರ ಹೊರತಾಗಿ ಯಾವುದೇ ಕಷ್ಟ ನಷ್ಟವಾದರೂ ಒಂದು ಭದ್ರತೆ ಮತ್ತು ರಕ್ಷಣೆ ಸಂಸಾರದೊಳಗೆಯೇ ಸಿಗುತ್ತಿತ್ತು. ಎಳೆಯ ಮಕ್ಕಳು ಹಿರಿಯರನ್ನು ಅನುಕರಿಸುತ್ತಾ ಬದುಕಿನ ಪಾಠವನ್ನು ಬಹು ಬೇಗನೇ ಕಲಿತು ಕೊಳ್ಳುತ್ತಿದ್ದರು. ಹಾಗಾಗಿ ಒಂದು ಕುಟುಂಬದಲ್ಲಿ ನಡೆಯುವ ಸಂಪ್ರದಾಯ ಆಚರಣೆಗಳು ತಲೆ ತಲಾಂತರದಿಂದ ಹಾಗೇ ರವಾನೆಯಾಗುತ್ತಾ ನಮ್ಮ ಸಂಸ್ಕೃತಿಗಳು ಮುಂದಿನ ತಲೆಮಾರಿಗೆ ಅನಾಯಸವಾಗಿ ವರ್ಗಾವಣೆಯಾಗುತ್ತಿತ್ತು. ಇಲ್ಲಿ ಸಂಸ್ಕೃತಿಯ ಉಳಿವು ಅಂದರೆ ಮೌಲ್ಯಗಳ ಉಳಿವು.

ಒಂದು ಸಂಸಾರ ಎಂದರೆ ಅಮ್ಮ-ಅಪ್ಪ,ಅಜ್ಜ-ಅಜ್ಜಿ,ಮಕ್ಕಳು ..ಹೀಗೆ ಇನ್ನಿತರ ಸಂಬಂಧಗಳ ಪಟ್ಟಿ ಸಾಗುತ್ತಾ ಹೋಗುತ್ತದೆ. ಮೌಲ್ಯಗಳು ಹೆತ್ತವರಲ್ಲಿ, ಹಿರಿಯರಲ್ಲಿ, ಮಕ್ಕಳಲ್ಲಿ , ಒಡನಾಡಿಗಳಲ್ಲಿ ಹೇಗಿರಬೇಕು?, ಇಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಹಿಂದಿನ ಉದ್ದೇಶ ಏನು ಎಂಬುದನ್ನು ನಾವು ಅರ್ಥ ಮಾಡಿ ಕೊಳ್ಳಬೇಕಿದೆ ,ಅದನ್ನು ಇತರರಿಗೆ ತಿಳಿ ಹೇಳಬೇಕಿದೆ. ಸಂಸಾರದ ರಥ ನಡೆಯುವುದು ಸುಲಭ ಸಾಧ್ಯವಲ್ಲ. ಗಂಡು-ಹೆಣ್ಣುಗಳಿಬ್ಬರು ರಥದ ಗಾಲಿಗಳಿದ್ದಂತೆ. ಎರಡು ಚಕ್ರ ಸಮತೋಲನ ಕಾಯ್ದುಕೊಂಡರಷ್ಟೇ ಸಾಮರಸ್ಯ ಸಾಧ್ಯ.

ಇವತ್ತು ನಮ್ಮಲ್ಲೊಂದು ಆತಂಕ ಶುರುವಾಗಿದೆ. ಪ್ರಾಚೀನ ಮೌಲ್ಯಯುತ ಸಂಸಾರದ ಚಿತ್ರಣ ಇವತ್ತು ಕಣ್ಮರೆಯಾಗುತ್ತಿದೆ. ಸಾಂಸಾರಿಕ ನೆಮ್ಮದಿ ಹಾಳಾಗುತ್ತಿದೆ, ಸಲಹಾ ಕೇಂದ್ರಗಳು ಹೆಚ್ಚುತ್ತಿವೆ, ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿವೆ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಸಾಂಸಾರಿಕ ಬದುಕಿನ ಭಾಂದವ್ಯವನ್ನು ಸಡಿಲಗೊಳಿಸುತ್ತಿವೆ, ಕೂಡು ಕುಟುಂಬಗಳ ಚಿತ್ರಣ ಬದಲಾಗುತ್ತಿದೆ, ದೊಡ್ಡ ದೊಡ್ದ ಮನೆಯೊಳಗೆ ಸಣ್ಣದಾದ ಮನಸ್ಸುಗಳು, ಅದರೊಳಗೆ ಹೊಗೆಯಾಡುತ್ತಿರುವ ಮುನಿಸುಗಳು. ಇವತ್ತು ನಮ್ಮ ದೇಶದಲ್ಲಿ ವೃದ್ಧಾಶ್ರಮಗಳು ಅತೀ ವೇಗದಲ್ಲಿ ಹೆಚ್ಚುತ್ತಿರುವುದನ್ನು ನೋಡಿದರೆ ನಮ್ಮ ಸಾಂಸಾರಿಕ ಮೌಲ್ಯ ಎಷ್ಟು ಅಧ;ಪತನಕ್ಕೆ ಇಳಿದಿದೆ ಎಂಬುದು ಗೋಚರವಾಗುತ್ತದೆ. ಒಂದು ಹಳತಾದರೂ ಯಾವ ಕಾಲಕ್ಕೂ ಪ್ರಸ್ತುತವೆನ್ನಿಸ ಬಹುದಾದ ಕತೆಯೊಂದು ಎಲ್ಲರಿಗೂ ಗೊತ್ತೇ ಇದೆ. ಮನೆಯಲ್ಲಿ ಮಗನೊಬ್ಬ ಅವನ ತಂದೆಗೆ ಮಣ್ಣಿನ ತಟ್ಟೆಯಲ್ಲಿ ಊಟ ಕೊಟ್ಟು ಅದನ್ನು ಎತ್ತಿ ಬಿಸಾಡಿ ಬಿಡುತ್ತಿದ್ದ. ಇದನ್ನು ನೋಡುತ್ತಾ ಬೆಳೆದ ಆ ಮನೆಯ ಎಳೆ ಮಗು ಅಜ್ಜನ ತಟ್ಟೆಗಳನ್ನ ತೊಳೆದು ತಂದಿಟ್ಟದ್ದಕ್ಕೆ ಅಪ್ಪ ಗದರಿದರೆ,ಆ ಮಗು ನಿನಗೂ ನಾಡಿದ್ದಿಗೆ ಕೊಡೋದಿಕ್ಕೆ ನನಗೆ ಬೇಕಾಗುತ್ತದಲ್ಲ ಅಂತ ತಣ್ಣಗೆ ಉತ್ತರಿಸುತ್ತಾನೆ. ಒಂದಂತು ಸತ್ಯ, ಮಕ್ಕಳು ಹಿರಿಯರನ್ನು ಸದಾ ಅನುಕರಿಸುತ್ತವೆ. ನಮ್ಮ ಮಕ್ಕಳ ಮೇಲೆ ಮನೆಯ ವಾತಾವರಣದ ಜೊತೆಗೆ ಸುತ್ತ ಮುತ್ತಲಿನ ವಾತಾವರಣವೂ ಪ್ರಭಾವ ಬೀರುತ್ತದೆ.

ಇವತ್ತು ಹೆಚ್ಚುತ್ತಿರುವ ವಿಚ್ಛೇಧನಗಳನ್ನು ಗಮನಿಸಿದರೆ ನಮ್ಮ ಸಾಂಸಾರಿಕ ಬದುಕು ಯಾವ ಮಟ್ಟದಲ್ಲಿದೆಯೆಂಬುದು ಗೋಚರವಾಗುತ್ತದೆ. ಇವತ್ತು ಅಹಂನಿಂದಾಗಿ ಗಂಡ-ಹೆಂಡತಿಯರ ನಡುವೆ ದೊಡ್ಡ ಗೋಡೆ ಏರ್ಪಟ್ಟಿದೆ. ಇದು ತುಂಬಾ ಅಪಾಯಕಾರಿಯಾದ ಸನ್ನಿವೇಶ. ಒಂದಷ್ಟು ವರುಷಗಳ ಹಿಂದೆ ಮಕ್ಕಳ ಹಿತ ದೃಷ್ಟಿಯಿಂದ ದಾಂಪತ್ಯದಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡು ಬದುಕುತ್ತಿದ್ದರು. ಇವತ್ತು ಹೆಚ್ಚಿನ ಕಡೆಗಳಲ್ಲಿ ನಾವು ಗಮನಿಸುತ್ತೇವೆ, ಬಹಳ ಸಂಭ್ರಮದಲ್ಲಿ ತಾವೇ ಪ್ರೀತಿಸಿ ಮದುವೆಯಾದ ದಂಪತಿಗಳು ಒಂದು ವರುಷಕ್ಕೆ ಮುಂಚೆ ವಿಚ್ಛೇದನವನ್ನೂ ಕೊಟ್ಟು ಬಿಡುತ್ತಾರೆ. ಮಕ್ಕಳಿದ್ದರೆ ಅವರ ಸ್ಥಿತಿ ಅತಂತ್ರವಾಗಿ ಬಿಡುತ್ತದೆ. ಹಾಗಾಗಿ ನಮ್ಮ ಮಕ್ಕಳಿಗೆ ಇವತ್ತು ಅಪ್ಪ-ಅಮ್ಮ ಇವರೇ ಅಂತ ನಿಖರವಾಗಿ ಹೇಳುವ ಸ್ಥಿತಿಯಲ್ಲಿ ಇಲ್ಲ. ನಾವು ಎಷ್ಟು ಕೆಟ್ಟ ಪರಂಪರೆಗೆ ಕೊಡುಗೆಯನ್ನು ನೀಡುತ್ತಿದ್ದೇವೆ? ಇದನ್ನು ನೋಡುತ್ತಾ ಬೆಳೆಯುವ ಮಗು ಇನ್ನೇನಾಗಲು ಸಾಧ್ಯ? ಅನ್ನುವಂತದ್ದನ್ನು ನಾವು ಗಂಭೀರವಾಗಿ ಯೋಚಿಸ ಬೇಕಿದೆ.

ಮೊದಲೆಲ್ಲಾ ಜಗಲಿ ಕಟ್ಟೆ ನಮ್ಮೆಲ್ಲರ ಭಾವನೆಗಳನ್ನು ಹೊರ ಹಾಕುವ ಒಂದು ನಿರ್ಮಲ ತಾಣವಾಗಿತ್ತು. ಇವತ್ತು ಜಂಗಮವಾಣಿ ಬಂದು ಮನೆಯೊಳಗಿನ ಎಲ್ಲಾ ಸದಸ್ಯರು ದ್ವೀಪಗಳಾಗುತ್ತಿದ್ದಾರೆ, ಸಾಮಾಜಿಕ ಜಾಲತಾಣಗಳನ್ನೇ ತಮ್ಮ ಮನೆಯಾಗಿಸಿ ಕೊಂಡಿದ್ದಾರೆ. ಅಪರಿಚಿತರು ಪರಿಚಿತರಾಗುತ್ತಿದ್ದಾರೆ. ಪರಿಚಿತರು ಅಪರಿಚಿತರಾಗಿಯೇ ಉಳಿದು ಬಿಡುವ ಕಾಲಘಟ್ಟಕ್ಕೆ ನಾವು ಬಂದು ನಿಂತಿದ್ದೇವೆ.

ಹಾಗಾದರೆ ನಾವು ಮೌಲ್ಯಗಳನ್ನು ಮೂಡಿಸುವುದು ಹೇಗೆ?
ಎಳವೆಯಲ್ಲಿಯೆ ಸರಿಯಾದ ಶಿಕ್ಷಣ, ಶಿಕ್ಷಣದ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆ, ಯೋಗ ಧ್ಯಾನದಂತಹ ಚಟುವಟಿಕೆ,ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡುವುದು, ಕತೆಗಳನ್ನು ಹಾಡುಗಳನ್ನು ಹೇಳುವುದ ಮೂಲಕ ಮಕ್ಕಳ ಕಲ್ಪನಾ ಶಕ್ತಿಯನ್ನು ವಿಕಸನಗೊಳಿಸ ಬೇಕಿದೆ.

ಮೌಲ್ಯಗಳನ್ನು ಮೂಡಿಸದೇ ಇದ್ದರೆ, ಎಳವೆಯಲ್ಲಿಯೇ ಮಕ್ಕಳು ನಾನಾ ರೀತಿಯ ಅಪರಾಧಗಳನ್ನು ಮಾಡಿ ಬಿಡಬಲ್ಲರು.
ಮೌಲ್ಯಗಳು ಯಾಕೆ ಅಧ;ಪತನ ಹೊಂದುತ್ತವೆಯೆಂದರೆ..

ಸಂಪತ್ತಿನ ಅಸಮಾನ ವಿತರಣೆಯಿಂದಾಗಿ ಕಳ್ಳತನ, ದರೋಡೆ, ವೇಶ್ಯಾವಾಟಿಕೆಯಂತಹ ಅನಾಹುತಗಳು ನಡೆಯಬಲ್ಲವು. ಇನ್ನು, ಮತಾಂಧತೆ ಮೌಲ್ಯಗಳನ್ನು ಮರೆಸುತ್ತದೆ. ಜಾತ್ಯಾತೀತ ರಾಷ್ಟ್ರ ಎನ್ನುವುದು ನಮ್ಮ ಮೌಲ್ಯವಾದರೆ ಜಾತಿ ಸಂಘಟನೆಗಳು ಸ್ವಾರ್ಥಕ್ಕಾಗಿ ಮೌಲ್ಯಗಳನ್ನು ಕಡೆಗಣಿಸುತ್ತಿವೆ. ಇನ್ನು ಸ್ವಾರ್ಥಿಗಳು, ಸೇಡಿನ ಮನೋಭಾವದವರು ಮೌಲ್ಯಗಳನ್ನು ಮುರಿಯುತ್ತಾರೆ ಎಂಬುದ್ದಕ್ಕೆ ಚರಿತ್ರೆಯಲ್ಲಿ ಸಾಕಷ್ಟು ಉದಾಹರಣೆಗಳಿವೆ. ಇವಕ್ಕೆಲ್ಲಾ ಮುಖ್ಯ ತಳಹದಿ ನಮ್ಮ ಮನೆಯೇ ಆಗಿರಬಹುದು ಅಥವಾ ನಮ್ಮ ಪರಿಸರದ ಪ್ರಭಾವ ಕೂಡ ಇರಬಹುದು. ಇಂತಹ ಹೊತ್ತಿನಲ್ಲಿ ಮೌಲ್ಯಗಳನ್ನು ವೃದ್ಧಿ ಪಡಿಸಲು ಉನ್ನತ ಮಟ್ಟದ ಚಿಂತನೆ, ವಿಶ್ವ ಸಹೋದರತೆ, ಪ್ರಾಮಾಣಿಕತನ, ಸರ್ವ ಪ್ರೇಮ ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ.

ಲಿಯೋ ಟಾಲ್ ಸ್ಟಾಯ್ ತನ್ನ ಅನ್ನ ಕರೇನಿನಾ ಪುಸ್ತಕದಲ್ಲಿ ಒಂದು ಕಡೆ ಹೀಗೆ ಹೇಳುತ್ತಾರೆ, ‘ಎಲ್ಲಾ ಸುಖೀ ಸಂಸಾರವೂ ಕೂಡ ಅಸುಖಿಯಾಗಿರುತ್ತದೆ‘ ಅಂತ. ನಾವು ಎಷ್ಟೇ ಸುಖಿಗಳು ಅಂತ ಅನ್ನಿಸಿದರೂ ನಾವ್ಯಾರು ಒಳಗೊಳಗೆ ಪೂರ್ಣತೆಯನ್ನು ಸಾಧಿಸಲಾಗದು. ಆದರೂ ಮಾನವೀಯ ನೆಲೆಯಲ್ಲಿ ಯೋಚಿಸುತ್ತಾ, ಒಳ್ಳೆಯ ಅಂತ;ಕರಣ ಇಟ್ಟುಕೊಂಡು , ನಿಷ್ಠೆ ಪ್ರಾಮಾಣಿಕತನದಿಂದ ಇದ್ದರಷ್ಟೇ ಬದುಕು ಹಸನಾಗಬಲ್ಲದು.

ತ್ಯಾಗದ ಭೋಗದ ಅಕ್ಕರದ
ಗೇಯದ ಗೊಟ್ಟಿಯ ಅಲಂಪಿನ
ಇಂಪುಗಳಿಗೆ ಆಗರಮಾದ ಮಾನಿಸರೇ
ಮಾನಿಸರ್ -ಅನ್ನುವ ಪಂಪನ ಮಾತು ಇವತ್ತಿಗೂ ಹೆಚ್ಚು ಪ್ರಸ್ತುತ ಅನ್ನಿಸುತ್ತದೆ. ಸಾಹಿತ್ಯ ಸಾಂಸ್ಕೃತಿಕ ಸೃಜನಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ. ಆಗ ನಾವು ನಿಜದ ಅರ್ಥದಲ್ಲಿ ಮನುಷ್ಯರಾಗಬಲ್ಲೆವು. ಮಾನವೀಯ ನೆಲೆಯಲ್ಲಿ ಯೋಚಿಸಲು ಶಕ್ಯರಾಗಬಲ್ಲೆವು.

ಬದಲಾಗಿರುವ ಜಗತ್ತಿನ ಒಂದು ಭಾಗ ನಾವೇ ಆಗಿರುವ ಕಾರಣ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಲೇ, ಸರಿ ತಪ್ಪುಗಳನ್ನು ತುಲನೆ ಮಾಡಿಕೊಂಡು ಹದವಾಗಿ ಬದುಕಿದರೆ ನಮ್ಮ ಮೌಲ್ಯಗಳು ಪರಂಪರೆಯನ್ನು ಬೆಸೆಯುವ ಕೊಂಡಿಯಾಗಬಲ್ಲದು. ಉತ್ತಮ ಮೌಲ್ಯಗಳೇ ನಾವು ನಮ್ಮ ಮಕ್ಕಳಿಗೆ ಕೊಡ ಬಹುದಾದ ಬಹು ದೊಡ್ಡ ಆಸ್ತಿ. ಒಂದು ಮೌಲ್ಯಾಧಾರಿತ ಸುಖೀ ಸಂಸಾರ ಇಡೀ ದೇಶದ ಚಿತ್ರಣವನ್ನೇ ಬದಲಾಯಿಸಬಲ್ಲದು.

-ಸ್ಮಿತಾ ಅಮೃತರಾಜ್. ಸಂಪಾಜೆ.

7 Responses

  1. Vijay Amrithraj says:

    ಸಹೋದರಿ ಸ್ಮಿತಾ ಅವರೇ,
    ಇದೊಂದು ಮನಮುಟ್ಟುವ ಹಾಗೂ ಸಂಸಾರಗಳಿಗೆ ಸುಖ ಜೀವನಕ್ಕಾಗಿ ರಚಿತವಾದ ಕೈಪಿಡಿ, ಎಲ್ಲರ ಅದರಲ್ಲೂ ಸುಖ ಬಯಸುವವರು ಈ ಬರಹವನ್ನು ಕಾಯ್ದಿರಿಸಿ ಕೊಳ್ಳಬೇಕು , ಅಷ್ಟು ಮಾಡಿದರೆ ಸಾಕು ಅದು ಓದಿಸಿಕೊಳ್ಳುತ್ತದೆ ಸಂಸಾರವನ್ನು ಸುಖಿಯಾಗಿರುತ್ತದೆ ಪ್ರಾರಂಭದಲ್ಲಿ ಸ್ವಲ್ಪ ಕಷ್ಟವೆನಿಸಬಹುದು.

  2. ಕಲಾ ಚಿದಾನಂದ says:

    ‘ಮೌಲ್ಯಾಧಾರಿತ ಸುಖೀ ಸಂಸಾರದದಿಂದ ದೇಶ ಬದಲಾಗಲು ಸಾಧ್ಯ ‘ ಎಂಬ ಕಿವಿಮಾತು ಆಪ್ತವಾಯಿತು. ಸಾಹಿತ್ಯಿಕ ಬರಹ ಚಂದ..

  3. Shobha Hirekai says:

    ಎಲ್ಲಾ ಸುಖಿ ಕುಟುಂಬಗಳೂ .. ಅಸುಖಿಯಾಗಿರುತ್ತವೆ. ಹೌದೆನಿಸಿತು.. ಚಂದ ಬರೆದಿರವಿ ಗೆಳತಿ

  4. Gopal trasi says:

    ಲಾಗಾಯಿತ್ತಿನಿಂದ ಪ್ರಚಲಿತವಿರುವ ಕೆಲವು ಪ್ರಶ್ನೆಗಳನ್ನು ಕೆದಕುತ್ತ, ತಾತ್ವಿಕ ಸಮಜಾಯಿಸಿಯನ್ನೂ ಕೊಡುವ ನಿಮ್ಮ ಪ್ರಯತ್ನ ಅರ್ಥಪೂರ್ಣವಾಗಿದೆ.
    ಕೆಲವು ಪ್ರಶ್ನೆಗಳು ಸರಳವಿರಬಹುದು, ಆದರೆ ಉತ್ತರ ಜಟಿಲವೇ ಹೌದು.. ನೀವಂದ ಮಾತು, ” ಮೌಲ್ಯಾದಾರಿತ ಸುಖ , ಸಂಸಾರದಲ್ಲಿ ಗಂಡು ಹೆಣ್ಣೆಂಬ ತಾರತಮ್ಯವಿರದೇ ಸಾಧ್ಯವೇ” ಮನನೀಯವಾದುದು.
    ಹೌದು ಮನೆ ಕುಟುಂಬದಲಿ ಶಾಂತಿ ಮುಖ್ಯ. ಮಕ್ಕಳನ್ನು ಈ ನಿಟ್ಟಿನಲಿ ನಿರೀಕ್ಷಿಸುವುದು ಯಾವತ್ತೂ ನಮ್ಮ ಕಾಳಜಿಯಾಗಿರಲಿ… ಗಂಭೀರ ವಿಷಯವನ್ನು ಸರಳವಾಗಿ ಹೇಳುವ ಶೈಲಿ ಖುಷಿ ನೀಡಿತು.. ಅಭಿನಂದನೆಗಳು…

  5. Nayana Bajakudlu says:

    ಕೌಟುಂಬಿಕ ಮೌಲ್ಯಗಳ ಕುರಿತಾಗಿ ಬಹಳ ಚೆನ್ನಾಗಿ ಹೇಳಿದಿರಿ . ನಿಜಕ್ಕೂ ಎಲ್ಲರೂ ಕೂಡಿ ಬಾಳುವುದರಲ್ಲೇ ನಿಜವಾದ ಸುಖ. ಕುಟುಂಬದಲ್ಲಿ ಹಿರಿಯರ ನೆರಳಿದ್ದರೆ ಆ ಕುಟುಂಬದ ಮಕ್ಕಳಿಗೆ ತನ್ನಿಂದ ತಾನಾಗಿಯೇ ಮೌಲ್ಯಯುತ ಶಿಕ್ಷಣ ದೊರೆಯುತ್ತದೆ . ನಾವು ದೊಡ್ಡವರು ಮನೆಯ ಹಿರಿಯರನ್ನು ಗೌರವಿಸುವುದನ್ನು ಕಂಡು ನಮ್ಮ ಮಕ್ಕಳೂ ಕೂಡ ಅದನ್ನು ಅನುಸರಿಸುತ್ತಾರೆ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: