ಮಹಿಳಾ ದಿನಾಚರಣೆಯಂದು…

Share Button

ನನ್ನ ಸಂಚಾರಿವಾಣಿ ರಿಂಗಣಿಸಿತು. “ಹಾಯ್ ಶಂಕರಿ ಅಕ್ಕಾ,ನಾನು ಆಶಾ ಮಾತನಾಡುವುದು.ನಾಡಿದ್ದು ೮ನೇ ತಾರೀಕಿಗೆ, ನಮ್ಮ ಕಾಲೇಜಲ್ಲಿ ಮಹಿಳಾ ದಿನಾಚ್ರರಣೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಬಹುದೇ?”

ಆಶಾ, ವಿವೇಕಾನಂದ ಕಾಲೇಜಲ್ಲಿ ಲೆಕ್ಚರರ್ ಆಗಿದ್ದರು..ಮನೆ ಹತ್ತಿರದವರು. ನನಗೆ ಇದು ಕನಸೋ ನನಸೋ ಗೊತ್ತಾಗಲಿಲ್ಲ. ಇನ್ನೊಮ್ಮೆ ಕೇಳಿ ಖಚಿತಪಡಿಸಿಕೊಂಡೆ. ಅಹುದು..ನಾನು ಕಲಿತ ಕಾಲೇಜಿನಲ್ಲಿ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಬರಲು ಆಮಂತ್ರಿಸಿದ್ದರು.ಅಲ್ಲಿ ನಾನು ಭಾಷಣ ಮಾಡಬೇಕಾಗಿತ್ತು…!

ನಾನು ಅವಳಿಗೆ ಹೇಳಿದೆ..”ಆಶಾ, ನನಗೆ ಭಾಷಣ ಮಾಡಲು ಎಲ್ಲಾ ಬರುವುದಿಲ್ಲ.. ಬೇಡ ಆಗದೇ.”. ” ಅಲ್ಲಿ ನಾವು ಸ್ವಲ್ಪ ಮಂದಿ ಹಾಗೂ ಮಕ್ಕಳು ಇರುತ್ತಾರೆ..ಹೇಗೆ ಮಾತಾಡಿದರೂ ಆಗುತ್ತದೆ” ಎಂದರು. ಸ್ವಲ್ಪ ಯೋಚಿಸಿ ಸರಿ ಎಂದು ಒಪ್ಪಿಕೊಂಡೆ. ಪ್ರೈಮರಿ ಶಾಲೆಯಲ್ಲಿ ಮಾಡುತ್ತಿದ್ದ ಭಾಷಣ..ಈಗೆಲ್ಲಿಗೆ? ಕಾರ್ಯಕ್ರಮ ನಿರ್ವಹಣೆ ಮಾಡಿ ಸ್ವಲ್ಪ ಅನುಭವವಿತ್ತು . ಭಾಷಣಕ್ಕೆ ಒಪ್ಪಿಕೊಂಡಾಗಿತ್ತು.ಮುಂದೆ ತಯಾರಿ ಮಾಡಬೇಕಲ್ಲಾ.ಎದೆಯಲ್ಲಿ ಅವಲಕ್ಕಿ ಕುಟ್ಟಲು ಆಗಲೇ ಸುರುವಾಗಿತ್ತು. ಅಂತೂ ಸಖತ್ತಾದ ಭಾಷಣವೊಂದು ಈ ಕೆಳಗಿನಂತೆ ಸಿದ್ಧವಾಯಿತು.

ಅಂತರರಾಷ್ಟ್ರೀಯ ಮಹಿಳಾ ದಿನವು ಭಾರೀ ಹೋರಾಟದ ಮೂಲಕವೇ ಪ್ರಾರಂಭವಾಯಿತೆನ್ನಬಹುದು. 1910 ರಲ್ಲಿ ಡೆನ್ಮಾರ್ಕ್ ನ ಕೋಪನ್ ಹೇಗನ್ ನಲ್ಲಿ 2 ನೇ ಜಾಗತಿಕ ಮಹಿಳಾ ಸಮ್ಮೇಳನ ನಡೆಯುತ್ತಿತ್ತು.ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್ ನ ಮುಖ್ಯಸ್ಥೆ ಕ್ಲಾರಾ ಜೆಟ್ ರೆನ್ ಅದರ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಅವಳು ಮಾರ್ಚ್ 8 ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂಬ ನಿರ್ಣಯವನ್ನು ಮಂಡಿಸಿದಳು.ಅದು ಎಲ್ಲಾ ರಾಷ್ಟ್ರಗಳ ಪ್ರತಿನಿಧಿಗಳಿಂದ 1911 ರಲ್ಲಿ ಸರ್ವಾನುಮತದಿಂದ ಅಂಗೀಕೃತವಾಯಿತು. ಆ ದಿನಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ.ಮಹಿಳೆಯರಿಗೆ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟು ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಹಾಗೆಯೇ ಮಹಿಳೆಯರ ಹೋರಾಟಕ್ಕೊಂದು ಚಾಲನಾ ರೂಪ ಸಿಕ್ಕಿತು.

ಈ ದಿನ, ಮಹಿಳೆಯರ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ಸಾಧನೆಗಳನ್ನು ಸ್ಮರಿಸಲಾಗುತ್ತದೆ.ಹಾಗೆಯೇ ಅವರ ಹೋರಾಟಕ್ಕೊಂದು ವೇದಿಕೆಯೂ ಅಹುದೆನ್ನಬಹುದು.ಶಿಕ್ಶಣ, ಕ್ರೀಡೆ,ರಾಜಕೀಯ,ಕಲೆ ಇತ್ಯಾದಿ ಎಲ್ಲಾ ಕ್ಷೇತ್ರಗಲ್ಲಿ ಪುರುಷರಿಗಿಂತಲೂ ಮಿಗಿಲಾಗಿ ನಿಂತು ಮಿಂಚುತ್ತಿದ್ದಾರೆ.ಆದರೆ ಎಷ್ಟು ಮಂದಿ ಮಹಿಳೆಯರಿಗೆ ಈ ಮಹಿಳಾ ದಿನಾಚರಣೆಯ ಬಗ್ಗೆ ಗೊತ್ತು? ನೂರರಲ್ಲಿ 95 ಮಂದಿಗೂ ತಿಳಿದಿರಲಾರದು ಅಲ್ಲವೇ? ಅಲ್ಲೇ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವವಳು,ಇಲ್ಲೇ ಕಸಗುಡಿಸುವವಳು,ನಮ್ಮ ನಿಮ್ಮ ಮನೆಗಳಿಗೆ ಬರುವ ಕೆಲಸದಳು..ಇವರಿಗೆಲ್ಲಾ ಗೊತ್ತಿದೆಯೇ ಹೀಗೊಂದು ದಿನವಿದೆ ಎಂದು..?? ನಿಜ ಹೇಳಬೇಕೆಂದರೆ ಇದೇನು ಹಬ್ಬದ ದಿನ ಅಲ್ವಲ್ಲಾ..ಮಹಿಳಾ ಸಂಘರ್ಷದ ದಿನ ..ಇದು ಕೂಡಾ,.ಹುಟ್ಟಿದಂದಿನಿಂದ ಸಾಯುವ ತನಕ ಒಂದಿಲ್ಲೊಂದು ಸಂಘರ್ಷದಿಂದ ಏನೋ ಒಂದು ಸಾಧಿಸಿದ ದಿನದ ಒಂದು ಸ್ಮರಣೆಯೆಂದೇ ಹೇಳಬಹುದು.ವಿಶ್ವಸಂಸ್ಥೆಯು 1975 ರಲ್ಲಿ ಈ ದಿನವನ್ನು ವಿಶ್ವಮಹಿಳಾದಿನ ಎಂದು ಘೋಷಿಸಿತು.ಈ ದಿನ ದುಡಿವ ಮಹಿಳೆಯನ್ನು ಗುರುತಿಸಿ, ಗೌರವಿಸಿ,ಪ್ರೋತ್ಸಾಹಿಸಲಾಗುತ್ತದೆ. ಆದರೆ ಪ್ರೋತ್ಸಾಹಿಸುವವರು ಮತ್ತು ಪ್ರೋತ್ಸಾಹಿಸಲ್ಪಡುವವರು ಬರೇ ಸ್ವಲ್ಪ ಮಂದಿ ಮಾತ್ರ ಅಲ್ಲವೇ? ನಿತ್ಯ ಹಣ್ಣಿನ ಮೇಲಿನ ಅನಾಚಾರ, ಶೋಷಣೆ,ದೌರ್ಜನ್ಯ,ವರದಕ್ಷಿಣೆ ಹಿಂಸೆ,ಹೆಣ್ಣು ಭ್ರೂಣ ಹತ್ಯೆ ಇವುಗಳಿಗೆಲ್ಲಿದೆ ಅಂತ್ಯ? ಇದನ್ನೆಲ್ಲಾ ನೋಡುತ್ತಾ ಇದ್ದರೆ ಈ ಮಹಿಳಾ ದಿನಾಚರಣೆಗೆ ಅರ್ಥವಿದೆಯೇ ಎಂದೊಮ್ಮೆ ಅನಿಸುವುದಿಲ್ಲವೇ?

ಈ 21 ನೇ ಶತಮಾನದಲ್ಲಿ ಮಹಿಳೆಯ ಪಾತ್ರ ಅತ್ಯದ್ಭುತ ರೂಪದಲ್ಲಿ ಬದಲಾಗಿದೆ. ಮನೆಯ ಒಳಗೂ ಹೊರಗೂ ದುಡಿದು ವೃತ್ತಿ ಮತ್ತು ಸಂಸಾರ ಎರಡನ್ನೂ ಅತ್ಯಂತ ಸಮತೋಲನದಿಂದ ನಿಭಾಯಿಸಬಲ್ಲಳು ಎಂದು ತೋರಿಸಿಕೊಟ್ಟಿದ್ದಾಳೆ.ನಮ್ಮ ದೇಶದಲ್ಲಿ ಈಗ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಸವಲತ್ತುಗಳನ್ನು ಕೊಡುತ್ತಾ ಇದೆ. ಆದ್ದರಿಂದ ಹೆಚ್ಚೆಚ್ಚು ಹೆಣ್ಣುಮಕ್ಕಳು ವಿದ್ಯಾವಂತೆಯರಾಗುತ್ತಿದ್ದಾರೆ. “ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು”.ತಾಯಿ ವಿದ್ಯಾವಂತೆಯಾದರೆ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನೂ ಅವಳೇ  ಹೊರುತ್ತಾಳೆ.ದಿಟ್ಟೆಯಾಗಿ ಜೇವನದ ಪ್ರತಿ ಸಮಸ್ಯೆಗಳಿಗೂ ತನ್ನದೇ ರೀತಿಯಲ್ಲಿ ಪರಿಹಾರ ಕಂಡುಕೊಂಡು ಆತ್ಮಶಕ್ತಿಯಿಂದ ಬೆಳಗುತ್ತಿದ್ದಾಳೆ. ಗಳಿಸಿದ್ದನ್ನೆಲ್ಲಾ ಶರಾಬು ಅಂಗಡಿಗೆ ಸುರಿದು, ಬರಿಕೈಯಲ್ಲಿ ಮನೆಗೆ ಬಂದು ಹೆಂಡತಿ ಮಕ್ಕಳನ್ನು ಬಡಿಯುತ್ತಿದ್ದ ಗಂಡಸರಿಗೆ ಸಡ್ಡು ಹೊಡೆದು ನಿಂತಿದ್ದಾಳೆ,ಆ ಮನೆ ಯಜಮಾನಿ! ಈ ದಿನಗಳಲ್ಲಿ ತುಂಬಾ ಪ್ರಗತಿಪಥದಲ್ಲಿರುವ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಗಳಿಸಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಡಿಯ ಸ್ತ್ರೀಶಕ್ತಿ ತಂಡವು ಸ್ತ್ರೀ ಸಂಘಟನಾ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ.ಇಂಥಹ ಸಬಲ,ಶಕ್ತಿಯುತ ಮಹಿಳಾ ಸಂಘಗಳು ಸಶಕ್ತ ಕುಟುಂಬಕ್ಕೆ ನಾಂದಿ ಹಾಡಿವೆ.

ಸ್ತ್ರೀಯು ತನ್ನ ಸಹಜ ಗುಣಗಳಾದ ತಾಳ್ಮೆ, ಚುರುಕುತನ, ಸಹನಾಶೀಲತೆ,ಪರಿಶ್ರಮಗಳಿಂದ ಅತೀ ದೊಡ್ಡ ಹುದ್ದೆಗಳನ್ನು ನಿಭಾಯಿಸುತ್ತಿದ್ದಾಳೆನಿಜ.ಆದರೆ ಹೊರಗೆ ದುಡಿಯುವುದು ಮಾತ್ರ ಕೆಲಸವಲ್ಲವಲ್ಲ.  90% ಗಿಂತಲೂ ಜಾಸ್ತಿ ಮಹಿಳೆಯರು ಇನ್ನೂ ಮನೆಯೊಳಗೇ ದುಡಿಯುತ್ತಿರುವರಲ್ಲಾ? ಬೆಳಗ್ಗೆದ್ದು ರಾತ್ರಿ ಮಲಗುವ ತನಕವೂ ಎಡೆಬಿಡದೆ ಕೆಲಸಗಳನ್ನು ಮಾಡುವಳಲ್ಲಾ ಆ ತಾಯಿ,ಅಕ್ಕ,ತಂಗಿ,ಪತ್ನಿ..ಇವರಿಗೆಲ್ಲಾ, ಇವರ ಪರಿಶ್ರಮಕ್ಕೆ ಶಾಭಾಸ್ ಗಿರಿ ಯಾರು ಕೊಡುತ್ತಾರೆ? ನಾವು ಯಾವುದೇ ನೌಕರಿಯಿಂದ ನಿವೃತ್ತಿ ಹೊಂದಿರಬಹುದು ಆದರೆ ಕೆಲಸದಿಂದಲ್ಲ.ನಾನು ನಿವೃತ್ತಿ ಹೊಂದುವ ಸಮಯದಲ್ಲಿ ತುಂಬಾ ಮಂದಿ ಕೇಳಿದರು,ನಿವೃತ್ತಿ ಆದ ಮೇಲೆ ಏನು ಮಾಡ್ತೀರಿ ಎಂದು.ನನಗೇ ಆಶ್ಚರ್ಯ! ಹೌದಲ್ಲಾ,ನಮಗೆ ನಿವೃತ್ತಿ ಇದೆಯಾ ? ನಿಜವಾಗಿ ನಾವು ಡಬ್ಬಲ್ ಕೆಲಸದವರಲ್ವಾ?ಆಫೀಸ್ ಮತ್ತು ಮನೆ..ನಮಗೆ 60 ವರ್ಷ ಆದಾಗ ಆಫೀಸ್ನಿಂದ ಮನೆಗೆ ಕಳುಹಿಸುತ್ತಾರಷ್ಟೆ..ಇನ್ನು ಫುಲ್ ಡ್ಯೂಟಿ ಅಲ್ಲೇ ಮಾಡು ಎಂದು.!

ಈ ಮಧ್ಯೆ ನನಗೆ ನನ್ನ ಶೈಕ್ಷಣಿಕ ಜೀವನದ ನೆನಪು ಬರ್ತಾ ಇದೆ.ನನ್ನ ಪ್ರಾಥಮಿಕ ಶಿಕ್ಷಣವು ನಮ್ಮ ಹಳ್ಳಿಯಲ್ಲಿಯೇ ಇದ್ದ ಶಾಲೆಯಲ್ಲಿ ನಡೆಯಿತು.ಮುಂದಿನ ಕ್ಲಾಸಿಗೆ ಹೋಗಬೇಕಾದರೆ 6 ಮೈಲುಗಳಷ್ಟು ದೂರ ನಡೆಯಬೇಕಿತ್ತು.ಇದೇ ಕಾರಣಕ್ಕೆ ನನ್ನ ಅಕ್ಕನ ವಿದ್ಯಾಭ್ಯಾಸವು ಅಷ್ಟಕ್ಕೇ ನಿಂತಿತ್ತು. ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತದೆ. ತಂದೆ ಇಲ್ಲದ ನನಗೆ. ನನ್ನಜ್ಜ ನನ್ನ ವಿದ್ಯಾಭ್ಯಾಸಕ್ಕೆ ಇನ್ನಿಲ್ಲದ ಒತ್ತಾಸೆ ಕೊಟ್ಟರು..6 ಮೈಲುಗಳನ್ನು ದಿನಾ ನಡೆದು ಹೋಗಿಬರುವುದು (ಕಾಣಲೂ ಸಣ್ಣಗಿದ್ದ) ನನ್ನಿಂದಾಗದ ಕೆಲಸವಾಗಿತ್ತು.ಏನು ಮಾಡುವುದೆಂದು ಯೋಚಿಸಿ, ನಮ್ಮ ಸಂಬಂಧಿಕರ ಮನೆಯಲ್ಲಿ ನಿಂತು ಹೋಗುವ ಬಗ್ಗೆ ಮಾತನಾಡಿದರು.ಆ ಮನೆಯಲ್ಲಿ ಅದಾಗಲೇ ತುಂಬಾ ಜನರಿದ್ದರು.ಅಲ್ಲಿಂದ 1ಮೈಲು ಶಾಲೆಗೆ..ನನ್ನ ಹೈಸ್ಕೂಲು ವಿದ್ಯಾಭ್ಯಾಸ ಅಲ್ಲಿಂದ ಸುರುವಾಯಿತು. ೮ನೇ ತರಗತಿ ಪಾಸಾಯಿತು.ಮರು ವರ್ಷಕ್ಕೆ ಆ ಮನೆಯರು ಒಪ್ಪಲಿಲ್ಲ.ಕಾರಣ, ಹುಡುಗಿಬೇಡವೆಂದು.ಮುಂದೇನು? ನಮ್ಮಜ್ಜ  ತಮ್ಮ ಹಟ ಬಿಡಲಿಲ್ಲ. ಇನ್ನೊಂದು ಸಂಬಂಧಿಕರ ಮನೆಯಿಂದ ಹೋಗುವಂತೆ ಏರ್ಪಾಡು ಮಾಡಿ  ಬೇರೆಯೇ ಶಾಲೆಗೆ ಸೇರಿಸಿದರು.ಆಲ್ಲಿ ನನ್ನ 9 ನೇ ತರಗತಿಯನ್ನು ಮುಗಿಸಿದೆ.ಆ ಮನೆಯಲ್ಲಿ, ಮನೆಯವರೊಡನೆ ಅವರ ಮನೆ ಕೆಲಸಗಳನ್ನೂ ಮಾಡಬೇಕಿತ್ತು…ಅಲ್ಪ ಸ್ವಲ್ಪ ಬೈಗುಳೂ ಸಿಗುತ್ತಿತ್ತು. ಆ ವರ್ಷ ಪಾಸಾದ ಮೇಲೆ ಮುಂದಿನ 10 ನೇ ತರಗತಿಗೆ ಆ ಮನೆಯಲ್ಲಿ ಇರಿಸಿಕೊಳ್ಳಲು ತಯಾರಿರಲಿಲ್ಲ,ಗೊತ್ತಲ್ಲಾ ಯಾಕೆಂದು…ಹುಡುಗಿಯೆಂದು!

ಮುಂದಿನ ವಿದ್ಯಾಭ್ಯಾಸವು ನನಗೆ ಸವಾಲೇ ಆಗಿತ್ತು. ಹಾಸ್ಟೆಲ್ ಇದ್ದ ಶಾಲೆಗಳೋ ತುಂಬಾ ದೂರ ಇದ್ದುದರಿಂದ ಮನೆಯಿಂದ ದೂರ ಕಳಿಸಲು ಮನೆಯಲ್ಲಿ ಯಾರೂ ತಯಾರಿರಲಿಲ್ಲ.ನಮ್ಮ ಸಂಬಂಧಿಕರ ಕಡೆಯಿಂದೆಲ್ಲ ಮಾತುಗಳು ಬರತೊಡಗಿದವು.ಏನು ಗೊತ್ತಾ..?.ಕಲಿಯಲು ದೂರ ಕಳಿಸುವುದು ಸರ್ವಥಾ ಸರಿಯಲ್ಲ ಎಂದು.!..ಹುಡುಗಿಯನ್ನು ಹೀಗೆ ಹೊರಗಡೆ ಕಳುಹಿಸಿದರೆ ಅವಳು ಕೆಟ್ಟೇ ಹೋಗುತ್ತಾಳೆ ಹುಷಾರು ಎಂದು ಬುಧ್ಧಿ ಮಾತು ಬೇರೆ! ಮೊದಲಿನ ಶಾಲೆಗೆ ಹೋಗುವುದಿದ್ದರೆ 6 ಮೈಲಿ ನಡೆದು ಹೋಗಿ ಬರಬೇಕಿತ್ತು.ನಾನೇ ಗಟ್ಟಿ ಧೈರ್ಯ ಮಾಡಬೇಕಿತ್ತು. ಒಬ್ಬಳೇ ಹೋಗಲೂ ಭಯ! ಆಗ ಮನೆಯಿಂದ 2 ಮೈಲು ದೂರದಲ್ಲಿದ್ದ ನನ್ನ ಗೆಳತಿಯೊಬ್ಬಳು ನನ್ನಂತೆಯೇ ಶಾಲೆಗೆ ಹೋಗಲು ಆಸೆ ಪಡುತ್ತಿದ್ದರೂ ಮನೆಯವರ ಅನುಮತಿ ಸಿಕ್ಕಿರಲಿಲ್ಲ. ನಮ್ಮಜ್ಜ ಅವರ ಮನೆಯವರ ಮನ ಒಲಿಸಿ ನಾವಿಬ್ಬರೂ ಜೊತೆಗೆ ಹೋಗಿಬರುವ ಏರ್ಪಾಡಾಯಿತು. ಸರಿ ನಮ್ಮ ಶಾಲೆಯ ಪಯಣ ಸುರುವಾಯಿತು. ದೊಡ್ಡದಾದ 2 ಗುಡ್ಡಗಳನ್ನು ಏರಿ ಇಳಿಯಬೇಕಿತ್ತು. ಕಷ್ಟವಾದರೂ ಆ ದಿನಗಳ ನೆನಪುಗಳು ಮನಸ್ಸಿಗೆ ಖುಷಿ ಕೊಡುತ್ತವೆ. ೧೦ನೇ ತರಗತಿಯಲ್ಲಿ ಇಬ್ಬರೂ ಪಾಸಾದೆವು.ನಾನು ಮೊದಲ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದೆ. ಇದು ನೋಡಿ,೪೫ ವರ್ಷಗಳ ಹಿಂದಿನ ಮಾತು.ಇಷ್ಟು ಕಲಿತದ್ದೇ ಜಾಸ್ತಿ. ಮುಂದಿನದು ಮದುವೆಯ ಮಾತು! ನಾನು ಸತ್ಯಾಗ್ರಹ ಮಾಡಿದ್ದಾಯಿತು. ಆಜ್ಜ ನನ್ನ ಬೆಂಬಲಕ್ಕೆ ನಿಂತರು. ಪಿ.ಯು.ಸಿ.ಗೆ ಸೇರಲು ಸಾವಿರ ಅಡ್ಡಿಗಳು. ಅಂತೂ 10 ಮೈಲು ದೂರದಲ್ಲಿನ ಪಿ.ಯು. ಕಾಲೇಜಿಗೆ ಸೇರಿಸಿದರು. ಅಲ್ಲಿದ್ದ ಹೆಣ್ಣುಮಕ್ಕಳ ಹಾಸ್ಟೆಲ್ ನಲ್ಲಿ ನನ್ನ ವಾಸ್ತವ್ಯ.  ವಿಜ್ಞಾನ ವಿಷಯವನ್ನು ಆರಿಸಿಕೊಡಿದ್ದೆ. ಪಿ.ಯು.ಸಿಯಲ್ಲೂ ಪ್ರಥಮ ಶ್ರೇಣಿಯಲ್ಲಿ ಪಾಸಾಯಿತು. ಮುಂದಿನ ವಿದ್ಯಾಭ್ಯಾಸವು ಸುಲಭವಾಗಿರಲಿಲ್ಲ.ಮನೆಯಲ್ಲಿ ಎಲ್ಲರ ವಿರೋಧಗಳ ನಡುವೆಯೂ ಅಜ್ಜ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ತಯಾರಿ ನಡೆಸುತ್ತಿದ್ದರು! ನಡುವೆ ಮದುವೆ ಪ್ರಸ್ತಾಪವೂ ಆಯಿತೆನ್ನಿ. ಹಾಗೆಯೇ ನನ್ನ ಸತ್ಯಾಗ್ರಹಕ್ಕೆ ಜಯವಾಯಿತು! ಆಜ್ಜನಿಗೆ ನನ್ನನು ಮೇಡಂ ಮಾಡಬೇಕೆಂಬ ಆಸೆ. ಅಂತಹವರು ನನ್ನ ಪೋಷಕರಾಗಿದ್ದುದು ನನ್ನ ಭಾಗ್ಯ ಎನ್ನಬಹುದು.

ಜ್ಜ ನನ್ನನ್ನು ಇದೇ ಕಾಲೇಜಿಗೆ ಸೇರಿಸಿದರು. ನಮ್ಮ ಕುಟುಂಬದ ಎಲ್ಲಾ ಬಂಧುಗಳಲ್ಲಿ ನಾನೇ ಮೊದಲಿನವಳಾಗಿದ್ದೆ, ಕಾಲೇಜು ಮೆಟ್ಟಲು ಹತ್ತಿದವಳು!  ಇಲ್ಲೂ ನನ್ನ ಇಷ್ಟದ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಆರಿಸಿಕೊಡಿದ್ದೆ.ಇಲ್ಲೇ ಹಾಸ್ಟೆಲ್ ನಲ್ಲಿ ಇದ್ದುಕೊಂಡು ನಡೆಯಿತು ನನ್ನ ವ್ಯಾಸಂಗ. ಫಸ್ಟ್ ಕ್ಲಾಸಲ್ಲಿ .ಬಿ.ಯಸ್.ಸಿ. ಡಿಗ್ರಿ ಪಡೆಯುವ ಭಾಗ್ಯ ನನ್ನದಾಯಿತು.ಇಷ್ಟೆಲ್ಲಾ ಆಗುವುದರೊಳಗೆ ಬಂಧುಗಳ ಮಧ್ಯೆ ನನ್ನ ಸ್ಥಾನ ಮೇಲೇರಿತ್ತು! ಇಷ್ಟೆಲ್ಲಾ ಯಾಕೆ ಹೇಳಿದೆ ಅಂದ್ರೆ, ಈಗಿನಂತೆ ಸೌಲಭ್ಯಗಳು ಇಲ್ಲದೆಯೂ ಮುಂದೆ ಬರಬೇಕಾದರೆ ಆಗಿನ ಸಮಯದಲ್ಲಿ ಎಷ್ಟು ಕಷ್ಟ ಇತ್ತು ಎಂಬ ತಿಳುವಳಿಕೆಗೋಸ್ಕರ ಮಾತ್ರ.

ಹಿರಿಯರು ಹೇಳ್ತಾರೆ “ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾ”,ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾನೆ. ಹೌದು, ನಾರಿಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದು ಮಾತ್ರವೇ ಸಾಕೇ? ನಾರಿಯರಿಗೆ ಪೂಜ್ಯ ಸ್ಥಾನ ಕೊಡಬೇಕು.ಅದು ಹೃದಯದಿಂದ ಬರಬೇಕು.ಆಗಲೇ ಅಲ್ಲಿ ದೇವನೂ ನೆಲೆಗೊಳ್ಳುವನು ಅಲ್ಲವೇ? ಸ್ತ್ರೀ ಸಹನಾ ಶೀಲೆ. ಹಾಗೆಂದೇ ಅವಳನ್ನು ಭೂಮಾತೆಗೆ ಹೋಲಿಸುವರು.ಈಗಂತೂ ಅತ್ಯುನ್ನತ ಹುದ್ದೆಗಳಲ್ಲಿ ಹಾಗೂ ಯಾವುದೇ ಸಾಧನೆ ಮತ್ತು ಕ್ಲಿಷ್ಟಕರ ಕೆಲಸಗಳನ್ನು ನಿಭಾಯಿಸುವುದರಲ್ಲಿ ನಮ್ಮ ನಾರಿಯರೇನೂ ಕಡಿಮೆಯಲ್ಲ.ಸಮಾಜದಲ್ಲಿರುವ ದುರುಳರನ್ನು ಮಟ್ಟ ಹಾಕಿದ ಕಿರಣ್ ಬೇಡಿಯವರ ಹೆಸರೇ ಒಂದು ಸ್ಪೂರ್ತಿ. ನಾವೂ ಅವರಂತೆ ಆಗಬೇಕೆಂಬ ವ್ಯಕ್ತಿತ್ವ ಅವರದು. ರಾಣಿ ಅಬ್ಬಕ್ಕದೇವಿ,ಝಾನ್ಸಿ ರಾಣಿ ಲಕ್ಷ್ಮಿಬಾಯಿ,ಒನಕೆ ಓಬವ್ವ ನಮಗೆ ದಾರಿ ದೀಪ. ರಿಯೋ ಒಲಿಂಪಿಕ್ಸ್ 2016 ರಲ್ಲಿ ಪದಕಗಳ ಖಾತೆ ತೆಗೆದವರು ಯಾರು, ವನಿತೆಯರೇ ಅಲ್ಲವೇ? ಅಮೆರಿಕದ ಈಗಿನ ಖ್ಯಾತ ಟೆನ್ನಿಸ್ ತಾರೆಯರಾದ ವೀನಸ್ ವಿಲಿಯಮ್ಸ್ ಮತ್ತು ಸೆರಿನಾ ವಿಲಿಯಮ್ಸ್ ಸಹೋದರಿಯರ ಬದುಕು ಕೂಡಾ ಹೋರಾಟದ್ದೇ ಆಗಿತ್ತು.ಬಿಳಿಯರ ಅವಹೇಳನ,ನಿಂದನೆ,ಅಪಹಾಸ್ಯಗಳಿಗೆ ಮಾನಸಿಕ ಸಮತೋಲನ ಕಳೆದುಕೊಳ್ಳದೆ ಅವರನ್ನು ಮೀರಿಸಿ,ಮೆಟ್ಟಿ ನಿಂತು ಜಗತ್ತಿನ ನಂ.1 ಆಟಗಾರ್ತಿಯಾರಾಗಿ ಮೆರೆದರು. ಅದಕ್ಕಾಗಿ ಅವರ ತಂದೆ ಅವರಲ್ಲಿ ತುಂಬಿದ ಆತ್ಮವಿಶ್ವಾಸವೇ ಕಾರಣವಾಗಿತ್ತು. ಗಗನಯಾತ್ರಿ ಸುನೀತಾ ವಿಲಿಯಮ್ಸ್, ತನ್ನ ಊನ ಕಾಲಿನಲ್ಲಿಯೇ ಎವರೆಸ್ಟ್ ಶಿಖರವನ್ನೇರಿದ ವೀರ ವನಿತೆ ಬಚೇಂದ್ರಿಪಾಲ್,ಅಪ್ಪಟ ದೇಶಾಭಿಮಾನಿ,ಕವಯಿತ್ರಿ ಕೊಡಗಿನ ಗೌರಮ್ಮ,ಪಾದರಸದಂತೆ ಚುರುಕಿನ ರಾಜಕಾರಿಣಿ ಸುಷ್ಮಾಸ್ವರಾಜ್ ಇವರೆಲ್ಲರ ಜೀವನಗಾಥೆಯು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ.

ಹೌದು,ಇಂದು   ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಇದೆ. ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕಿದೆ. ಸ್ವಾವಲಂಬನೆಯ ಹಾದಿಯಲ್ಲಿ ಬದುಕು ಸಾಗಬೇಕು.ಅದಕ್ಕಾಗಿ ಪ್ರತಿಯೊಂದು ಹೆಣ್ಣು ಮಗುವಿಗೂ ಶಿಕ್ಷಣ ದೊರಕುವಂತಾಗಬೇಕು.ಸರಕಾರವು ಶಿಕ್ಷಣಕ್ಕಾಗಿ ಕೊಡುವಂತಹ ಸವಲತ್ತುಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಮೇಲೆ ಬರಬೇಕು.ಎಲ್ಲಾ ಶಾಲೆಗಳಲ್ಲಿ ಹೆಣ್ಣುಮಕ್ಕಳು ಕರಾಟೆಯಂತಹ ಸ್ವರಕ್ಷಾ ಶಿಕ್ಷಣಗಳನ್ನು ಕಲಿಯುವಂತಾಗಬೇಕು.

ಮಹಿಳೆಯರ ದಿನ ಯಾವುದೆಂದು ತಿಳಿಯದೆ
ಸಂಘರ್ಷದ ಬದುಕಿನಲಿ ನಲುಗಿ ಬರಿದಾಗಿದೆ.
ಸಿಗುವುದೇ ಸ್ವಾತಂತ್ರ್ಯಈ ಪರಿಯ ಜೀವನದಿ
ಮನದಲ್ಲೇ ಕೊರಗುತ್ತ ಕಾಯುತಿಹಳು….ನಾರಿ ಕಾಯುತಿಹಳು….!!

ಆದರೆ, ಎಲ್ಲಿ, ಯಾವಾಗ ನಾರಿಯೊಬ್ಬಳು ಖಚಿತ ಮನೋಬಲ ಹಾಗೂ ಆತ್ಮಸ್ಥೈರ್ಯದೊಂದಿಗೆ ಯಾವ ಕಾಲದಲ್ಲೂ,ಯಾವ ಜಾಗದಲ್ಲೂ ಯಾವ ಭಯವೂ ಇಲ್ಲದೆ ಓಡಾಡಬಹುದೋ ಆವಾಗಲೇ ಸ್ತ್ರೀಯೊಬ್ಬಳ ದಿನ ಮಹಿಳಾದಿನವಾಗುತ್ತದೆ ಅಲ್ಲವೇ?

-ಶಂಕರಿ ಶರ್ಮ, ಪುತ್ತೂರು

6 Responses

  1. Hema says:

    ಉತ್ತಮ ಬರಹ. ಕೊನೆಯ ಸಾಲು ಇಷ್ಟವಾಯಿತು..ಗಾಂಧೀಜಿಯವರ ನಿರೀಕ್ಷೆಯೂ ಅದೇ ಆಗಿತ್ತು

  2. KVRajalakshmi says:

    ಬಹಳ.ಚೆನ್ನಾಗಿದೆ…
    ಆಶಯವಿದ್ದರೆ ಸಾಲದು,ಆ ದಿಸೆಯಲ್ಲಿ ಪ್ರೋತ್ಸಾಹಿಸುವ ಹೃದಯವೈಶಾಲ್ಯವೂ ಇರಬೇಕು…

  3. Nayana Bajakudlu says:

    ಬಹಳ ಚೆನ್ನಾಗಿ ಬರ್ದಿದ್ದೀರಿ ಮೇಡಂ ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ . ನಿಮ್ಮ ವಿದ್ಯಾಭ್ಯಾಸದ ಕುರಿತು ಓದಿ , ಅಲ್ಲಿದ್ದ ಕಷ್ಟ ಮನಸ್ಸನ್ನು ಸ್ವಲ್ಪ ಮಟ್ಟಿಗೆ ಆರ್ದ್ರ ಗೊಳಿಸಿತು . ಅಂತಹ ಕಷ್ಟದ ದಿನಗಳಲ್ಲೂ ಸಾಧನೆಯ ಹಾದಿ ಹಿಡಿದ ನಿಮ್ಮ ಛಾತಿ ಗೊಂದು ಸಲಾಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: