ಗುಬ್ಬಚ್ಚಿ ಗೂಡು

Share Button

ಒಂದು ಹಳೆಯ ಕಾಲದ ಹಂಚಿನ  ಮನೆ . ಆ ಮನೆಯಲ್ಲೊಂದು  ಪುಟ್ಟ ಸಂಸಾರವಿತ್ತು. ಅಪ್ಪ , ಅಮ್ಮ, ಮಗ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು  ಆ ಮನೆಯಲ್ಲಿ ವಾಸವಾಗಿದ್ದರು.ಆ ಕುಟುಂಬವನ್ನು ಬೆಸೆದಿದ್ದದ್ದು  ಹೃದಯಗಳ ನಡುವಿನ ಸುಂದರ ಪ್ರೀತಿ .

ಮನೆಯ ಮುಂದೆ ಒಂದು ವಿಶಾಲವಾದ ಅಂಗಳವಿತ್ತು .ಅಂಗಳದ ಬದಿಗೆ ಆ ಮನೆಯೊಡತಿ ನೀರು , ಪ್ರೀತಿ ಎರಡನ್ನೂ ಎರೆದು ಪೋಷಿಸಿದ  ಸುಂದರವಾದ ಹೂದೋಟವಿತ್ತು  . ಅಂಗಳದಲ್ಲಿ ನಿಂತು ಕಣ್ಣು ಹಾಯಿಸಿದರೆ  ಹೃನ್ಮನ ಎರಡೂ ಅರಳುವಂತಿತ್ತು  ಆ ಹೂದೋಟ . ಅಂಗಳದ ಇನ್ನೊಂದು ಬದಿಗೆ ಒಂದು ಶಿಥಿಲಾವಸ್ಥೆಯಲ್ಲಿದ್ದ  ಕಟ್ಟಡವಿತ್ತು . ಆ ಕಟ್ಟಡದ  ಹೊರಭಾಗದಲ್ಲಿ ಹಕ್ಕಿಯೊಂದು  ಗೂಡು ಕಟ್ಟಿ ವಾಸವಾಗಿತ್ತು .ಆ ಗೂಡಿನೊಳಗೆ  ಅದರ ಮೊಟ್ಟೆಗಳಿದ್ದವು.

ಒಂದು ದಿನ ಅನಿವಾರ್ಯ ಕಾರಣಗಳಿಂದಾಗಿ ಆ ಕಟ್ಟಡವನ್ನು  ಉರುಳಿಸಬೇಕಾದ  ಪರಿಸ್ಥಿತಿ ಬಂತು . ಆಗ ಆ ಮನೆಯ ಮಗನಿಗೆ ಹಕ್ಕಿ ಗೂಡನ್ನು ಏನು ಮಾಡುವುದೆಂಬ ಚಿಂತೆ ಕಾಡತೊಡಗಿತು . ಎಷ್ಟು ಯೋಚನೆ ಮಾಡಿದರೂ ಆ ಗೂಡನ್ನು ತೆಗೆಯುವ ಹೊರತು ಬೇರಾವ ಪರಿಹಾರ ಕಾಣಲಿಲ್ಲ .

ಹಾಗಾಗಿ ಆ ಹಕ್ಕಿ ಇಲ್ಲದ ಸಮಯ ನೋಡಿ ಅವರು ಆ ಗೂಡನ್ನು ಆ ಕಟ್ಟಡದಿಂದ  ಹಾನಿಯಾಗದಂತೆ ತೆಗೆದು ಅಲ್ಲೇ ಪಕ್ಕದಲ್ಲಿದ್ದ  ಮನೆಯ ಮಾಡಿಗೆ  ನೇತು ಹಾಕಿದರು . ಸ್ವಲ್ಪ ಹೊತ್ತು ಕಳೆದ ನಂತರ ಆ ಹಕ್ಕಿ ಮರಳಿ ಬಂತು.ಮೊದಲಿದ್ದ ಜಾಗದಲ್ಲಿ ತನ್ನ ಗೂಡು ಕಾಣದೆ ಕಂಗಾಲಾಗಿ  ಅತ್ತಿಂದಿತ್ತ  ಹಾರಾಡತೊಡಗಿತು . ಹೃದಯ ವಿದ್ರಾವಕವಾಗಿ ಚೀರಾಡತೊಡಗಿತು. ಕಣ್ಣೀರಿಡತೊಡಗಿತು. ಹಕ್ಕಿಯ ಆ ಕೂಗು  ಯಾವ ಕಲ್ಲು ಮನಸ್ಸನ್ನೂ ಕರಗಿಸುವ ರೀತಿ ಇತ್ತು.

ಆ ಮನೆಯ ಸೊಸೆಗೆ ಆ ಹಕ್ಕಿಯ ಯಾತನೆಯನ್ನು  ಸಹಿಸಲಾಗಲಿಲ್ಲ . ಅದರ ನೋವನ್ನು ಕಂಡು ಅವಳ ಹೃದಯವೂ ಒದ್ದಾಡಿತು. ಅವಳು ಎಲ್ಲಾ ಕೆಲಸಗಳನ್ನು ಬಿಟ್ಟು ಆ ಹಕ್ಕಿಯನ್ನೇ ಗಮನಿಸುತಿದ್ದಳು.

ಅದರ ರೋಧನ  ಮುಗಿಲು ಮುಟ್ಟಿದಾಗ ಅವಳಿಂದ  ತಡೆಯಲಾಗಲಿಲ್ಲ . ಅವಳು ಆ ಹಕ್ಕಿಯ ಬಳಿ  ” ಯಾಕೆ ಇಷ್ಟೊಂದು ರೋಧಿಸುತ್ತಿ, ಇಷ್ಟೊಂದು ಹಿಂಸೆ ಪಡುತ್ತಿ?, ನಿನ್ನ ಗೂಡು ಇಲ್ಲಿದೆ ನೋಡು ”  ಎಂದು ಹೇಳಿ ಆ ಹಕ್ಕಿಗೆ ಕಾಣುವ ಹಾಗೆ ಹೇಳಿ ಗೂಡಿನ ಬಳಿ ಹೋಗಿ ನಿಂತಳು . ಬಹಳ ದಿನಗಳಿಂದ ಅವಳ ಮತ್ತು ಆ ಹಕ್ಕಿಯ ನಡುವೆ ಒಂದು ಆಪ್ತ ಮೌನ ಸಂವಾದ ನಡೆಯುತಿತ್ತು. ಅವಳು ಆಚೆ ಈಚೆ ಓಡಾಡುವಾಗ ಆ ಹಕ್ಕಿಯ ಬಳಿ ದೂರದಿಂದಲೇ  ಮಾತನಾಡುತ್ತಿದ್ದಳು, ಅದರ ಚಿಲಿಪಿಲಿಗೆ ಹಿತವಾದ ಮಾತಿನಲ್ಲಿ, ಮಮತೆ ತೋರಿ ಸ್ಪಂದಿಸುತಿದ್ದಳು.

ಆ ಹಕ್ಕಿಗೆ ಅವಳ ಮಾತು ಅರ್ಥವಾಯಿತೋ, ಮೌನ ಭಾಷೆ ಅರ್ಥವಾಯಿತೋ ಗೊತ್ತಿಲ್ಲ . ಒಟ್ಟಲ್ಲಿ ಅದು ತನ್ನ ಗೂಡನ್ನು ಗುರುತಿಸಿತು. ಅದರಲ್ಲಿ ಮತ್ತೆ ವಾಸಿಸಲು ಪ್ರಾರಂಭಿಸಿತು . ಅದರಲ್ಲಿದ್ದ  ಮೊಟ್ಟೆಗಳು ಒಡೆದು , ಮರಿಗಳಾಗಿ, ಅವು ಹಾರಿ ಹೋದ ನಂತರ ಒಂದು ದಿನ ಆ ಹಕ್ಕಿಯೂ ಗೂಡನ್ನು ತೊರೆಯಿತು . ಅಷ್ಟು ದಿನಗಳವರೆಗೆ  ಆ ಹಕ್ಕಿ ಅದರಲ್ಲೇ ವಾಸಿಸುತಿತ್ತು.

ಕೆಲವರ ಪ್ರಕಾರ ಹಕ್ಕಿ ಗೂಡನ್ನು ಮನುಷ್ಯರು ಒಮ್ಮೆ ಮುಟ್ಟಿದರೆ ಮತ್ತೆ ಆ ಹಕ್ಕಿ ಆ ಗೂಡನ್ನು ಪುನಃ ಬಳಸುವುದಿಲ್ಲ, ಆ ಗೂಡಿನಲ್ಲಿ ವಾಸಿಸುವುದಿಲ್ಲ ಎಂಬ ಒಂದು ನಂಬಿಕೆ ಇದೆ. ಆ ಸೊಸೆಯ  ಪಾಲಿಗಂತೂ ಈ ಘಟನೆ ಒಂದು ಕೌತುಕ, ಸೋಜಿಗ . ಆ ಹಕ್ಕಿ ಇರುವವರೆಗೂ  ಅವಳು ಅದರೊಡನೆ  ದೂರದಿಂದಲೇ ಮಾತನಾಡುತ್ತಿದ್ದಳು , ಅದರ ಆಟಗಳಿಗೆ ಪ್ರೀತಿಯಿಂದ ಸ್ಪಂದಿಸುತಿದ್ದಳು.

ಸ್ನೇಹಿತರೇ ,    ಮೂಕ ಪ್ರಾಣಿ ಪಕ್ಷಿಗಳೂ ಸಹ ನಮ್ಮ ವ್ಯವಹಾರ , ಸ್ಪಂದನೆ, ಆತ್ಮಸಂವಾದ ಹಿತಕರವಾಗಿದ್ದಲ್ಲಿ ನಮ್ಮೊಡನೆ  ಖಂಡಿತಾ ಸ್ಪಂಧಿಸುತ್ತವೆ. ನಮ್ಮಲ್ಲಿ ಅವುಗಳನ್ನು ಹಿಂಸಿಸುವ ಮನೋಭಾವ ಇರಬಾರದು ಅಷ್ಟೇ . ನಾವು ನಮ್ಮ ಪ್ರಕೃತಿಯನ್ನು , ಪ್ರಾಣಿ ಪಕ್ಷಿಗಳನ್ನು ಸ್ವಚ್ಛ ಮನಸಿನಿಂದ ಹಿತಮಿತವಾಗಿ ಪ್ರೀತಿಸೋಣ.ಆವಾಗ ಅವುಗಳು ಕೂಡ ನಮ್ಮೊಡನೆ ಬೆರೆತು ಬಾಳುತ್ತವೆ.

(ಸತ್ಯ ಘಟನೆ ಆಧಾರಿತ).

 – ನಯನ ಬಜಕೂಡ್ಲು

2 Responses

  1. Hema says:

    ಪಶು ಪಕ್ಷಿಗಳ ಮೇಲೆ ವಾತ್ಸಲ್ಯವಿರುವುದು ಮಾನವೀಯ ಮೌಲ್ಯ… ಈ ಬರಹದಲ್ಲಿರುವ ‘ಸೊಸೆ’ ನೀವೇ ಆಗಿರಬಹುದು ಎಂದು ನನಗೆ ಅನಿಸಿತು!

  2. Shankari Sharma says:

    ಸುಂದರ ಬರಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: