ಹೆಣ್ಣಲ್ಲವೇ ನಮ್ಮನೆಲ್ಲ‌ ಪೊರೆವ ತಾಯಿ

Share Button
 
ಅದೊಂದು ಪೇಟೆಯ ಸರ್ಕಲ್.ಆ ಪೇಟೆ ದಿನದಿಂದ ದಿನಕ್ಕೆ ಇನ್ನಿಲ್ಲದಂತೆ ಬೆಳೆಯುತ್ತಿದೆ.ಆ ಸರ್ಕಲಿನಿಂದ ಕೊಂಚ ಮುಂದೆ ಒಂದು ಹಳದೀ ಬಣ್ಣದ ಬಸ್ಸು ನಿಂತಿತ್ತು.ಯಾರೇ ನೋಡಿದರೂ ಹೇಳಬಲ್ಲರು ಅದೊಂದು ಶಾಲೆಯ ಬಸ್ ಎಂದು. ಆದರೆ ಆ ಬಸ್ಸಿನ ಮೇಲಿದ್ದ ಹೆಸರು ನನ್ನನ್ನು ಆ ಬಸ್ಸಿನೊಳಗಿನ ಮಕ್ಕಳನ್ನೊಮ್ಮೆ ನೋಡುವಂತೆ ಮಾಡಿತು.ಅದುವೇ ವಿಶೇಷ ಮಕ್ಕಳ ಶಾಲೆ.(ಆ ಶಾಲೆಯ ಹೆಸರು ನೆನಪಿಲ್ಲ,ಅದರ ಅಗತ್ಯ ಇಲ್ಲಿ ಇಲ್ಲ ಬಿಡಿ.)ನಾನು ಅಲ್ಲಿ ಬೆಂಗಳೂರಿಗೆ ಬರುವ ಬಸ್ಸಿಗಾಗಿ ಕಾಯುತ್ತಿದ್ದೆ.

ಆ ಬಸ್ಸು ಒಂದು ಐದು ನಿಮಿಷ ಅಲ್ಲಿಯೇ ನಿಂತಿತ್ತು.ಬೇರೆ ಬರುವ ಮಕ್ಕಳಿಗಾಗಿ ಕಾಯುತ್ತಿರಬಹುದು ಅಂದುಕೊಂಡೆ.ಬಸ್ಸಿನೊಳಗೆ ಬರಿಯ ಮುಗ್ಧತೆಯದ್ದೇ ಓಡಾಟ ಕಂಡೆ. ಬೆನ್ನಿನಿಂದ ಬ್ಯಾಗನ್ನು ಕೆಳಗಿಳಿಸದೆ ಹೊರಜಗತ್ತನ್ನು ಕಿಟಿಕಿಯಾಚೆ ದಿಟ್ಟಿಸಿ ನೋಡುವ ಮಗು(ವರುಷ ಎಂಟು ಹತ್ತು ಇದ್ದರೂ  ನಾನು ಅವರನ್ನು ಮಗು ಎಂದೇ ಹೇಳುತ್ತೇನೆ.ಕಾರಣ ಅವರಲ್ಲಿ ಇರುವ ಮುಗ್ಧತೆ), ಬೆರಳಿನಿಂದ ತಲೆಯನ್ನು ಮುಟ್ಟಿ ಮುಟ್ಟಿ ನೋಡುವ ಇನ್ನೊಂದು ಕಂದ, ತಣ್ಣನೆಗಾಳಿಗೆ ಹಾಗೆಯೇ ಸಣ್ಣಕೆ ನಿದ್ದೆ ಹೋದ ಮಗು, ಕೆಳಗೊಮ್ಮೆ ಬಗ್ಗಿ ನೋಡಿ ಅದೇನೋ ಹೆಕ್ಕಿಕೊಂಡ ಕೂಸು, ಆ ಶಾಲೆಯ ಟೀಚರ್(ಇರಬಹುದು) ಸಮಾಧಾನ ಪಡಿಸುತ್ತಿರುವ ಅಳುತ್ತಿರುವ ಮಗು, ಅಕ್ಕ ಪಕ್ಕ ಕೂತು ಕಣ್ಣಲ್ಲೇ ಸಂಭಾಷಿಸುತ್ತಿರುವ ಮುದ್ದು ಮಕ್ಕಳು, ಬಸ್ಸಿನ ಸ್ಟಿಯರಿಂಗ್ ಮೇಲೆ ಕೈ ಇಟ್ಟು ಇನ್ನೆಲ್ಲೋ ಹೊರಗೆ ದಿಟ್ಟಿಸುತ್ತಿರುವ ಬಸ್ ಡ್ರೈವರ್…..

ಹೀಗೆ ನನ್ನ ಕಣ್ಣು ಬಸ್ಸಿನೊಳಗೆ ದೃಷ್ಟಿಹಾಯಿಸಿಕೊಂಡು, ಮನಸಿನೊಳಗೆ ಸಾವಿರ ಯೋಚನೆಗಳು ನುಗ್ಗಿಬರುತ್ತಿರುವಾಗ ಮಧ್ಯವಯಸ್ಸಿನ ಅಪ್ಪ ಅಮ್ಮ ಒಂದು ಮಗು(ಏಳೆಂಟು ವರುಷದ ಪ್ರಾಯ ಇರಬಹುದು)ವನ್ನು ಕೈ ಕೈ ಹಿಡಿದು ,ಅಮ್ಮ ಇನ್ನೊಂದು ಕೈಯಲ್ಲಿ ಮಗುವಿನ ಬ್ಯಾಗ್ ಹಿಡಿದುಕೊಂಡು ಧಾವಂತದಲ್ಲಿ ಬಸ್ ಬಳಿ ಬಂದು ,ಇನ್ನೇನು ಮಗುವನ್ನು ಬಸ್ಸಿಗೆ ಹತ್ತಿಸಬೇಕು ಅನ್ನುವಷ್ಟರಲ್ಲಿ,ಆ ಮಗು ಜೋರಾಗಿ ಅಳುವುದಕ್ಕೆ ಪ್ರಾರಂಭಿಸಿತು.“ಅಮ್ಮಾ.…..ಅಮ್ಮಾ.…….ಅಮ್ಮಾ.….”ಎನ್ನುವ ಕೂಗು. ಅಮ್ಮ‌ ಬಿಟ್ಟುಹೋಗುತ್ತಾಳೆ, ಅಪ್ಪ ಬಿಟ್ಟು ಹೋಗುತ್ತಾರೆ ನನ್ನ ಎನ್ನುವುದು ಆ ಬಸ್ಸಿನ ಮೆಟ್ಟಿಲೇರಿಸುವಾಗ ಗೊತ್ತಾಗಿರಬಹುದು. ಅಷ್ಟೂ ಹೊತ್ತು ಅಪ್ಪ ಅಮ್ಮನ ವೇಗಕ್ಕೆ ಸರಿಸಮಾನವಾಗಿ ತನ್ನ ವೇಗವನ್ನೂ ಹೆಚ್ಚಿಸಿ ಬರುತ್ತಿದ್ದ ಮಗು ಅಪ್ಪ ಅಮ್ಮನ ಕೈ ಜಾರಿದ ತಕ್ಷಣ ಏನೋ ಆತಂಕ, ಭಯ ಕಾಡಿರಬಹುದು.ಆ ಮಗು ಎಲ್ಲರಂತಲ್ಲವಲ್ಲ! ವಿಶೇಷವಾದ ಮುದ್ದು ಕಂದ. ಇದನ್ನೆಲ್ಲ ಮೂಕಿಯಂತೆ ನೋಡುತ್ತಿದ್ದ ನಾನು ಕಣ್ಣು ಒರೆಸುವಾಗ ಆ ತಾಯಿಯನ್ನೊಮ್ಮೆ ನೋಡಿದಾಗ ಆಕೆ ಅಲ್ಲೇ ಪಕ್ಕದ ವಿದ್ಯುತ್ ಕಂಬಕ್ಕೊರಗಿ ಕಣ್ಣೀರು ಒರೆಸಿಕೊಳ್ಳುತ್ತಿದ್ದರು.

ಯಾರ ಮಗುವಾದರೇನು? ನಾನೂ ತಾಯಿ,ಕಂಬಕ್ಕೊರಗಿದವಳೂ ಕೂಡ ತಾಯಿ.
ಬಸ್ಸಿನೊಳಗೆ ಟೀಚರ್ ಬಲವಂತವಾಗಿ (ಸಮಾಧಾನದಿಂದ)ಕರೆದುಕೊಂಡು ಹೋದ ತಕ್ಷಣ ಓಡಿ ಹೋಗಿ ಬಸ್ಸಿನ ಹಿಂಬದಿಯ ಗಾಜಿಗೆ ಎರಡೂ ಕೈಗಳನ್ನು ಇಟ್ಟು ಅಪ್ಪ ಅಮ್ಮನನ್ನೇ ನೋಡಿ ಕೂಗುತ್ತಿತ್ತು.‘ಅಮ್ಮಾ.……ಅಮ್ಮಾ.….‘ಅಂದಿರಬೇಕು.ಸರಳುಗಳುಳ್ಳ ಬಸ್ಸಿನಿಂದ ದನಿ ಕೇಳಿಸಲಿಲ್ಲ.ಬಸ್ಸು ಚಲಿಸಿತು. 
                 
ಅದೊಂದು ಶಾಲೆ.ಶಾಲೆ ಬಿಡುವ ಹೊತ್ತು. ಅಪ್ಪ ಅಮ್ಮಂದಿರೆಲ್ಲ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವ ಸಮಯ. ಅಲ್ಲೊಬ್ಬಾಕೆ ತಾಯಿ ಕಂಕುಳಲ್ಲಿ ಒಬ್ಬ ಪುಟ್ಟ ಹುಡುಗನನ್ನು ಎತ್ತಿಕೊಂಡು ಬರುತ್ತಿದ್ದಳು.ಆ ಶಾಲೆಯಿಂದ ಬಂದ ತನ್ನ‌ ಮಗಳನ್ನು ಕರೆದುಕೊಂಡು ಹೋಗುತ್ತಿದ್ದಳು.ಸ್ವಲ್ಪ ದೂರ ಹೋದ ಮೇಲೆ ಕಂಕುಳಲ್ಲಿದ್ದ ಹುಡುಗನನ್ನು (ಮಗ) ಕೆಳಗಿಳಿಸಿ,”ನಡೀ ನಡೀ,ನೀನು ನಡೆಯದೇ ನಡೆಯದೇ ಹಿಂಗಾಗಿದ್ದಿ.ನಡಿ”ಅಂತ ಗದರುತ್ತಾ ನಡೆಯುತ್ತಿದ್ದಾಗ ಆ ಮಗು ಅತ್ತುಕೊಂಡೇ ,”ಎತ್ತು ಎತ್ತು” ಅಂತಲೇ ಕುಂಟುಕಾಲಿನಲ್ಲಿ ಅಮ್ಮನನ್ನು ಆವರಿಸಿಕೊಂಡುಬಿಟ್ಟ. ಮತ್ತಷ್ಟು ಗದರಿದಳು.ಕೂಗಿದಳು.ಕೊನೆಗೆ ಒಂದು ಏಟನ್ನೇ ಕೊಟ್ಟಳು.ಊಹೂ…ಆ ಪುಟ್ಟ ಹುಡುಗ ಬೆನ್ನು ಉಜ್ಜಿಕೊಂಡೇ,“ಎತ್ತು,ಎತ್ತು,ನೋವಾಗ್ತಿದೆ”ಅಂದ.ಅಮ್ಮ ಅದೇನೋ ಗೊಣಗಿಕೊಂಡು ಮತ್ತೆ ಕಂಕುಳಲ್ಲಿ ಎತ್ತಿಕೊಂಡು ,ಮಗಳನ್ನೂ ಕರೆದುಕೊಂಡು ಮುಂದಿನ ತಿರುವಲ್ಲಿ ಮರೆಯಾದರು.ಆ ತಾಯಿ ಒಳಗೊಳಗೇ ಅತ್ತಿರಬೇಕು.ನನಗೋ ಆ ಒಂದು ಕ್ಷಣ ಆಕೆಯ ಮೇಲೆ ಕೋಪ ಬಂತು.ಪಕ್ಕದಲ್ಲಿದ್ದ ಆತ್ಮೀಯರ ಹತ್ತಿರ,”ಯಾಕೆ ಆ ಅಮ್ಮ ಎತ್ತಿಕೊಳ್ಳುವುದಿಲ್ಲ?” ಅಂತಂದೆ ಅಸಮಾಧಾನದಿಂದ ಕಣ್ಣೊರೆಸುತ್ತಾ.ಅವರಂದರು,”ಮಗು ತಾನಾಗಿಯೇ ನಡೆಯಲಿ ಅಂತ ಒಂದೊಳ್ಳೆ ಕಾರಣಕ್ಕೆ”ಅಂದರು.ಹೌದೆನಿಸಿತು.ಅಲ್ಲಿ ಮಗುವಿಗೆ ನಡೆಯಲು ಅಸಹಾಯಕತೆ.ಅದೇ ತಾಯಿಗೆ ಎತ್ತಲೂ ಅಲ್ಲ ಬಿಡಲೂ ಅಲ್ಲ ಎನ್ನುವ ಅಸಹಾಯಕತೆ.ಬದುಕು ವಿಚಿತ್ರ ಅಂತನಿಸಿತು.ಹಾಗೆಯೇ ಬದುಕು ನಮ್ಮೆದುರಿಗೆ ತಂದು ನಿಲ್ಲಿಸುವ ಚಾಲೆಂಜ್ ಗಳ ಬಗ್ಗೆ ಸೋಜಿಗವೆನಿಸಿತು!

ನಾನೂ ಒಬ್ಬ ತಾಯಿ, ಕಂಬಕ್ಕೊರಗಿ ಕಣ್ಣೊರಿಸಿದವಳೂ ತಾಯಿ, ಮಗುವಿಗೆ ಸಣ್ಣ ಪೆಟ್ಟುಕೊಟ್ಟು ಗೊಣಗಿಕೊಂಡು ಎತ್ತಿದವಳೂ ತಾಯಿ.ಆ ಅಮ್ಮಂದಿರಿಗೆ ನನ್ನ ಪರಿಚಯವಿಲ್ಲ.ನನಗೂ ಅವರ ಪರಿಚಯವಿರಲಿಲ್ಲ.ಅಲ್ಲಿ ಮಾತೃತ್ವ ಮಾತ್ರ ಮೂವರಿಗೂ ಚಿರಪರಿಚಿತವಾಗಿತ್ತು.ಮಾತೃತ್ವದಲ್ಲಿ ಸುಖವಿದೆ,ನೆಮ್ಮದಿಯಿದೆ,ಕರುಣೆಯಿದೆ,ಕಠಿಣವಾಗಿರಬೇಕಾದ ಸಂದರ್ಭಗಳಿವೆ,ನಗುವಿದೆ, ಕಣ್ಣೀರಿದೆ,ತಾಳ್ಮೆಯ ಕಲಿಸುವ ಪಾಠವಿದೆ ಹೀಗೆ ಬದುಕಿನ ಅಷ್ಟೂ ಗುಣಗಳಿವೆ.

ಮಹಿಳಾ ದಿನಾಚರಣೆಯಾದ ಇಂದು ನನಗೆ ಈ ಇಬ್ಬರೂ ತಾಯಂದಿರು ನೆನಪಾದರು,ಸಾಧಕಿಯರಂತೆ ಕಂಡರು.ಅವರಿಬ್ಬರೂ ಮಾಡುತ್ತಿರುವುದು ಕರ್ತವ್ಯವೇ ಆದರೂ, ಮಗು ಸ್ವಂತ ಕಾಲಿನಲ್ಲಿ ನಿಲ್ಲಬೇಕೆಂಬ ಛಲ ಹೊತ್ತ ಅಮ್ಮ, ಮಗು ಕಣ್ಣೀರು ಸುರಿಸಿ, ಗದ್ಗದಿತ ದನಿಯಲ್ಲಿ ಕೂಗಿದರೂ ಮಗುವಿನೆದುರು ತೊಟ್ಟು ಕಣ್ಣೀರು ಹಾಕದೆ ಶಾಲೆಯಲಿ ಕಲಿತು ಮಗು ಮುಂದೆ ಸ್ವತಂತ್ರವಾಗಿ ಬದುಕಬೇಕು ಎನ್ನುವ ದಿಟ್ಟೆಯರಿಬ್ಬರೂ ನನ್ನ ದೃಷ್ಟಿಯಲ್ಲಿ ಅತೀ ಎತ್ತರದಲ್ಲಿ ನಿಲ್ಲುತ್ತಾರೆ.

ಸ್ತ್ರೀ ಸಮಾನತೆ, ಸ್ತ್ರೀ ಸ್ವಾತಂತ್ರ್ಯ ಎಂದೇ ಮಾತನಾಡುವ ಈ ಕಾಲಘಟ್ಟದಲ್ಲಿ ಇದರ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳದೆ ಬದುಕಿನ ಗುರಿ ಕೇವಲ ಕಣ್ಣ ಮುಂದಿರುವ ಮಗುವಿನ ಭವಿಷ್ಯ ವೆಂದೇ ತಿಳಿದಿರುವ ಇಂತಹ ತ್ಯಾಗಮಯಿ ಮಾತೃಕೆಯರಿಗೆ ನನ್ನದೊಂದು ನಮನ. ನಮ್ಮ ಸುತ್ತಲಿನ ಅಷ್ಟೂ ಇಂತಹ ಅಮ್ಮಂದಿರಿಗೆ ಹಾಗೆಯೇ ಇಂತಹ ಮಕ್ಕಳನ್ನ ನೋಡಿಕೊಳ್ಳುವ,ಸಲಹುವ ಪ್ರತಿಯೊಬ್ಬ ಹೆಣ್ಣುಮಗಳಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.

ಇಂತಹ ಅಮ್ಮಂದಿರಿಗೆ ಸಮಾಜ, ಮನೆಮಂದಿ, ಕುಟುಂಬಿಕರು, ಸಂಬಂಧಿಕರು, ಸ್ನೇಹಿತರು ಹೀಗೆ ಎಲ್ಲರ ಸಹಾಯ ಬೇಕು, ಮೆಚ್ಚುಗೆ ಬೇಕು.ಬರಿಯ ಕನಿಕರ ತೋರಿಸಿದರೆ ಆಗದು.ಕೈಲಾದ ಸಹಾಯ ಮಾಡಬೇಕು.ಅವರಲ್ಲಿ ಜೀವನೋತ್ಸಾಹ ತುಂಬಬೇಕು,ಬದುಕು ಚೆಂದವಿದೆ ಅನ್ನುವುದನ್ನು ತೋರಿಸಬೇಕು,ಕುಗ್ಗದಂತೆ ನೋಡಿಕೊಳ್ಳಬೇಕು.ಆ ನೋಡಿಕೊಳ್ಳುವ ಕೆಲಸ ಮಗುವಿನ ಅಮ್ಮನಿಗೇ ಸೀಮಿತವೆಂದು ತಿಳಿಯದೆ ಸಾಧ್ಯವಾದ ಸಹಾಯ ಮಾಡಬೇಕು.ಯಾಕೆಂದರೆ, ಆ ಅಮ್ಮನೂ ಅನೇಕ ಕನಸು ಕಟ್ಟಿಕೊಂಡಾಕೆ, ತ್ಯಾಗಮಾಡಿದಾಕೆ, ಆಕೆಯೂ ಅವಳ ಅಪ್ಪ ಅಮ್ಮನ ಮುದ್ದಿನ ಮಗಳೇ ಆಗಿದ್ದವಳು,ಇರುವವಳು….ಅಲ್ವಾ? ಯೋಚಿಸಿ.

(ಇದು ಕತೆಯಲ್ಲ..ಕಂಡ ಬದುಕು)

-ಸಹನಾ ಪುಂಡಿಕಾಯಿ

5 Responses

  1. Hema says:

    ನಿಜ.ಯಶಸ್ವಿ ಅಮ್ಮನಾಗುವುದು ಮಹಿಳೆಯರ ಜೀವನದ ಅತಿ ದೊಡ್ಡ ರಿಯಾಲಿಟಿ ಟಾಸ್ಕ್…ಚೆಂದದ ಬರಹ

  2. Shankari Sharma says:

    ಸಕಾಲಿಕ ಸುಂದರ ಬರಹ

  3. Nayana Bajakudlu says:

    ಅಳು ಬರ್ತಿದೆ. ಆ ಅಮ್ಮಂದಿರ ಸಾಧನೆಯನ್ನು ಗುರುತಿಸಿದ ನಿಮ್ಮ ಮನಸು, ಹೃದಯಕ್ಕೊಂದು ಸಲಾಂ. ಬಹಳ ಚೆನ್ನಾಗಿ ಬರ್ದಿದ್ದೀರಿ

  4. Shankara Narayana Bhat says:

    ಸಹಜ ಘಟನೆ, ಮನ ಕಲಕುವಂತಹ ದೆ,ಅಮ್ಮಂದಿರ ದಿನ ಪ್ರತ್ಯೇಕ ಇದೆಯಲ್ಲವೇ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: