ಮುಂಬಯಿಲಿ ಅರಳಿದ ಅಚ್ಚ ಕನ್ನಡದ ಕತೆಗಳು

Share Button

ಕಳೆದ ನವೆಂಬರ್ ತಿಂಗಳಿನಲ್ಲಿ ಮೊಟ್ಟ ಮೊದಲ ಬಾರಿಗೆ ಮುಂಬಯಿ ಮಹಾನಗರಕ್ಕೆ ಸಾಹಿತ್ಯ ಕಾರ್ಯಕ್ರಮದ ನೆಪದಲ್ಲಿ ಹೋದಾಗ ಪರಿಚಿತರಾದವರು ಸಾ. ದಯಾ. ತೀರಾ ಸರಳ ಸಜ್ಜನಿಕೆಯ ಅಪರೂಪದ ವ್ಯಕ್ತಿತ್ವ ಅವರದ್ದು. ದಕ್ಷಿಣಕನ್ನಡದಿಂದ ಮುಂಬಯಿಗೆ ಬಂದು ಅಲ್ಲಿಯೇ ನೆಲೆ ನಿಂತು ಬದುಕು ಕಟ್ಟಿಕೊಂಡರೂ ತನ್ನ ಸೃಜನಶೀಲತೆಯನ್ನು ಆ ಧಾವಂತದ ನಗರದಲ್ಲಿ ಬತ್ತದಂತೆ ಕಾಪಿಟ್ಟುಕೊಂಡವರು. ಕನ್ನಡಕ್ಕಾಗಿ ಸದಾ ತುಡಿಯುವ ಮನಸು ಸಾ.ದಯಾ, ಅವರದ್ದು. ಅದಕ್ಕಾಗಿಯೇ ಕತೆ, ಕವಿತೆ,ನಾಟಕ,ಯಕ್ಷಗಾನ ಹೀಗೆ ಹತ್ತು ಹಲವು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು. ಇತ್ತೀಚೆಗೆ ಅವರಿತ್ತ ‘ಪಾಟಕ್’ ಕತಾ ಗುಚ್ಚವನ್ನು ಓದುವ ಭಾಗ್ಯ ನನಗೆ ದಕ್ಕಿತು. ಅದರಲ್ಲಿರುವ ಒಟ್ಟು 9 ಕತೆಗಳು ಬದುಕಿನ ಬೇರೆ ಬೇರೆ ಮಗ್ಗಲುಗಳನ್ನು ಪರಿಚಯಿಸುತ್ತಾ, ಭೂತ ಮತ್ತು ವರ್ತಮಾನಗಳ ತಲ್ಲಣವನ್ನು ಬಲು ಹೃದಯಂಗಮವಾಗಿ ಕಟ್ಟಿಕೊಡುತ್ತಾರೆ.

ಅವರ ಸಂಕಲನದ ಮೊದಲ ಕತೆ ಬದುಕನರಸಿದ ಕೈಗಳು‘. ಈ ಕತೆಯುದ್ದಕ್ಕೂ ಮುಂಬಯಿಯ ಮಹಾನಗರದ ಚಿತ್ರಣವನ್ನು ಕಟ್ಟಿಕೊಡುತ್ತಲೇ, ಹಣ ಮನುಷ್ಯನನ್ನು ಎಷ್ಟೊಂದು ಬಗೆಯಲ್ಲಿ ಸತಾಯಿಸಿ,ನಿಸ್ಸಾಹಯಕತೆಯಿಂದ ಅದರ ಮುಂದೆ ಸೋಲೊಪ್ಪಿಕೊಳ್ಳುವಂತೆ ಮಾಡುತ್ತದೆ ಅನ್ನುವ ನೈಜ್ಯ ಚಿತ್ರಣ, ವಾಸ್ತವದ ಬದುಕಿಗೆ ಹಿಡಿದ ಕೈಗನ್ನಡಿಯಂತಿದೆ. ನಿರುದ್ಯೋಗದ ಬವಣೆ ಮನುಷ್ಯನನ್ನು ಎಷ್ಟೊಂದು ಅಸಹಾಯಕ ಸ್ಥಿತಿಗೆ ತಳ್ಳುತ್ತದೆಯೆಂಬ ಸಂಕಟಕ್ಕೆ ಮನಸು ಮಿಡುಕದೆ ಇರಲಾರದು. ಉದ್ಯೋಗವಿಲ್ಲದೆ ತೊಳಲಾಡುವ ಮಗನಿಗೆ ಯಾವುದೋ ಒಂದು ಗಳಿಗೆಯಲ್ಲಿ ಅನಾಯಾಸವಾಗಿ ದಕ್ಕುವ ಹಣ, ಅದನ್ನು ಹಿಡಿದಾಗ ಸಣ್ಣಗೆ ಕಂಪಿಸುವ ಪಾಪ ಪ್ರಜ್ಞೆ, ಅದರ ನಡುವೆ ಹಸಿದ ಹೊಟ್ಟೆ, ಮನೆಯೊಳಗಿನ ಅಸಹಾಯಕ ಮುಖಗಳ ಮುಂದೆ ಖಾಲಿ ಕೈ ಅದನ್ನು ನೂರೆಂಟು ಸಮರ್ಥನೆಗಳಿಗೆ ಒಡ್ಡಿಕೊಂಡು ಅದನ್ನು ತನ್ನದಾಗಿಸಿಕೊಂಡು ಬಿಡುತ್ತದೆ. ಬಹುಷ; ಇಂತಹ ಸಮರ್ಥನೆಗಳೇ ಮುಂದೊಮ್ಮೆ ಬೇಕಾಗಿಯೋ,ಇಲ್ಲವೋ ,ಅದುವೇ ಬದುಕಿನ ಭಾಗವಾಗಿ ಹೋಗಿಬಿಡುವುದು ಒಂದು ಸೋಜಿಗ. ಈ ಕತೆಯಲ್ಲಿ ಎದುರಾಗುವುದು ಕೂಡ ಇಂತಹದೇ ಗಳಿಗೆ. ಯಾವುದೋ ಒಂದು ಕ್ಷಣದಲ್ಲಿ ತರ್ಕಕ್ಕೆ ಎಡೆಯಿಲ್ಲದ ಸಮಯದಲ್ಲಿ ಅರಿವಿಲ್ಲದೆಯೇ ಅಪ್ಪನ ಕಾಸು ಮಗನ ಕೈ ಸೇರುವುದು ಕಾಣದ ಶಕ್ತಿಯ ಕೈವಾಡ. ಕೊನೆಗೆ ಹಣ ಕಳೆದುಕೊಂಡ ಅಪ್ಪನ ದುರ್ಮರಣ. ಹಣ ದಕ್ಕಿದರೂ, ದಕ್ಕದಿದ್ದರೂ ಮನುಷ್ಯನನ್ನು ನೆಮ್ಮದಿಯಾಗಿರಲು ಬಿಡಲಾರದು ಎಂಬುದನ್ನು ಕತೆ ಸೂಚ್ಯವಾಗಿ ಕಟ್ಟಿ ಕೊಡುತ್ತದೆ.

ಬದುಕಿನ ಹಾದಿಯಲ್ಲಿ ಎಲ್ಲ ಮರೆತು ಮುನ್ನಡೆಯುವಾಗಲು ಹಿಂದಿನಿಂದ ಅಟ್ಟಾಡಿಸಿಕೊಂಡು ಬರುವ ಕರಾಳ ನೆರಳುಗಳಿಂದ ಬಿಡಿಸಿಕೊಂಡು ಹೋಗಲು ಯಾರಿಂದಲೂ ಸಾಧ್ಯವೇ ಇಲ್ಲ . ಹಾದಿ’ ಕತೆಯೊಂದು ಇದೇ ತೊಳಲಾಟವನ್ನು ಕಟ್ಟಿಕೊಡುತ್ತದೆ. ಊರಿನಲ್ಲಾದ ಒಂದು ಅವಮಾನದಿಂದ ತಪ್ಪಿಸಿಕೊಳ್ಳಲೋಸುಗ ಮುಂಬಯಿಯ ಮಹಾನಗರಕ್ಕೆ ಬರುವುದು,ಅಪರಿಚಿತ ಊರಿಗೆ ಬಂದು ಇನ್ನು ನೆಮ್ಮದಿಯಾಗಿರುವೆನೆಂದು ನೆನೆದುಕೊಳ್ಳುವುದು ಭ್ರಮೆ ಅಷ್ಟೇ. ದು:ಸ್ವಪ್ನದಂತಹ ನೆನಪುಗಳಿಂದ ಬಿಡುಗಡೆ ಹೊಂದುವುದು ಅಷ್ಟೊಂದು ಸುಲಭವಲ್ಲ. ಪ್ರತಿಯೊಂದು ಮುಖದ ಹಿಂದೆಯೂ ಅನುಮಾನದ ಛಾಯೆ ಸರಿದು ಹೋಗುವುದು,ಹೀಗೆ ಒಂದು ಮಾನಸಿಕ ಸ್ಥಿತಿಯನ್ನು ಕತೆಗಾರ ಸಹಜವಾಗಿ ವಿವರಿಸುತ್ತಾ ಹೋಗುವಾಗ ನಮ್ಮ ಹೃದಯದ ಬಡಿತ ಕೂಡ ಏರುಪೇರಾಗಿ ಆತಂಕದಿಂದ ಕೊನೇಯ ಕ್ಷಣಗಳ ಬಗ್ಗೆ ಕುತೂಹಲ ತಾಳುವಂತೆ ಮಾಡಿಬಿಡುತ್ತದೆ. ಇದೇ ಕತೆಯ ಯಶಸ್ಸು. ಎಲ್ಲರಿಂದ ಬಾಹ್ಯವಾಗಿ ದೂರ ಓಡುತ್ತಾ ಎಲ್ಲವುಗಳಿಂದ ಬಚಾವು ಆದೇನು ಅಂದು ಕೊಂಡರೂ ಆಂತರಿಕವಾಗಿ ನಮ್ಮೊಳಗೇ ಹುದುಗಿರುವ ‘ಭೂತ’ವನ್ನು ಕಿತ್ತೆಸೆಯದ ವಿನ; ಇವುಗಳಿಂದ ಮುಕ್ತಿ ಹೊಂದುವುದು ಸಾಧ್ಯವಿಲ್ಲ. ಇದು ಎಲ್ಲರಿಗೂ ಸಾಧ್ಯವಾಗುವ ಮಾತಲ್ಲ. ಬದುಕಿನ ಸಂಕಟದಿಂದ ಪಾರಾಗಲು ಹೆಣಗಾಡುವ ಒಂದು ಅಸಹಾಯಕ ಮನಸಿನ ತಾಕಲಾಟವನ್ನು ನಮ್ಮೊಳಗನ್ನೂ ಕಲಕುವಂತೆ ಸಶಕ್ತವಾಗಿ ಕಟ್ಟಿಕೊಡುವಲ್ಲಿ ಇಲ್ಲಿ ಕತೆಗಾರ ಯಶಸ್ವಿಯಾಗಿದ್ದಾರೆ.

‘ಬಾವ ಭಾವಗಳ ನಡುವೆ’ ಕತೆಯ ಎಳೆ ಎಳೆಯೂ ಗಾಡವಾಗಿ ನಮ್ಮೊಳಗನ್ನು ತಾಕುತ್ತಾ ಸಾಗಬಲ್ಲದು. ಅಂತ್ಯಕ್ಕೆ ಬಂದಾಗ ‘ವಾವ್’ ಅನ್ನುವ ಉದ್ಗಾರವೊಂದು ನನಗರಿವಿಲ್ಲದೆಯೇ ಕೇಳಿಯೂ ಕೇಳಿಸದಂತೆ ಹೊರಬಿದ್ದಿದೆ. ಇಲ್ಲಿ ನಾನು ಕತೆಯನ್ನು ಅನುಭವಿಸುವುದಕ್ಕಿಂತ ಹೆಚ್ಚಾಗಿ ಅವರ ಕಥನ ಕಟ್ಟುವ ಕುಶಲತೆಗೆ ಬೆರಗಾದೆ. ಅಷ್ಟು ಪರಿಣಾಮಕಾರಿಯಾಗಿ ನಮ್ಮನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ತುಂಬಾ ಇಷ್ಟವಾದ ಕತೆ ಇದು.

‘ಹಾವು ಮತ್ತು ವಿಜು ಎಂಬ ಹುಡುಗ’, ಅಬ್ಬಾ! ಅನ್ನಿಸುವಷ್ಟು ಮೈ ನವಿರೇಳಿಸುವ ಕತೆ. ಮೂರು ದಶಕಗಳ ಹಿಂದೆಯೇ ಇಂತಹ ಒಂದು ಪ್ರತಿಮಾತ್ಮಕ ಕತೆಯ ರಚನೆಯ ಮೂಲಕ ನಾವು ಅವರ ಪ್ರತಿಭೆಯನ್ನು ಒರೆಗೆ ಹಚ್ಚಬಹುದು. ವಿಭಿನ್ನ ಪ್ರಯೋಗಶೀಲತೆಯ ಹೊಳಹನ್ನು ನಾವಿಲ್ಲಿ ಕಾಣಬಹುದು. ಏನನ್ನೋ ಹೇಳುತ್ತಾ ಕತೆಯ ಕೊನೆಯಲ್ಲಿ ಪಕ್ಕನೆ ಧ್ವನಿಪೂರ್ಣ ಹೊಳಹುಗಳನ್ನು ಕೊಡುವುದು ಅವರ ಕತೆಗಳ ವೈಶಿಷ್ಟ್ಯ.

ಇನ್ನು ‘ದಾಹ’ ಕತೆಯೊಂದು ಪ್ರತಿಯೊಬ್ಬನ ಬದುಕಿನ ಆಳದಲ್ಲಿ ಹುದುಗಿರುವ ದಾಹವನ್ನು ಬಯಲು ಮಾಡುವಂತಿದೆ. ಎಷ್ಟೊಂದು ದಾಹಗಳು ಈ ಬದುಕಿನಲ್ಲಿ?. . ಒಬ್ಬೊಬ್ಬರ ದಾಹಗಳು ಒಂದೊಂದು ತೆರನವು. ಕೆಲವೊಂದು ದಾಹಗಳ ಇಂಗದ ಬಾಯಾರಿಕೆ ಎಷ್ಟಿವೆಯೆಂದರೆ ಮನುಷ್ಯ ಸಂಬಂಧಗಳನ್ನೇ ಹದಗೆಡಿಸುವಷ್ಟು. ಬದುಕಿನ ಅಂತಿಮ ಸತ್ಯದ ಸಾಕ್ಷಾತ್ಕಾರ ಆಗುವವರೆಗೆ ಕೆಲವೊಮ್ಮೆ ಇಂತಹ ದಾಹಗಳನ್ನು ತಣಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಕತೆಯ ಪಾತ್ರಧಾರಿ ರಾಜುವಿನ ಮೂಲಕ ಬದುಕಿನ ನಗ್ನಸತ್ಯವನ್ನು ತೆರೆದು ತೋರಿಸುವ ಹಂತದಲ್ಲಿ ಎಲ್ಲರ ದಾಹಗಳು ಆರಿ ಹೋಗಿ ಮಾನವೀಯ ಶುದ್ಧ ಅಂತ;ಕರಣದ ಕನ್ನಡಿಯಲ್ಲಿ ಮನಸುಗಳು ಪ್ರತಿಫಲಿಸುವುದು ಈ ಕತೆಗೊಂದು ಹೊಸ ತಿರುವು. ಎಲ್ಲೂ ನಿರಾಶೆಯಲ್ಲಿ ಅಂತ್ಯಗೊಳ್ಳದೆ ಆಶಾದಾಯಕ ಅಂತ್ಯ ಈ ಕತೆಯ ಗೆಲುವು ಕೂಡ.

ಈ ಕಥಾ ಹೊತ್ತಿಗೆ ಶೀರ್ಷಿಕೆ ಹೊತ್ತ ಕತೆ ‘ಪಾಟಕ್’. ಹೊಸತಾಗಿ ಮದುವೆಯಾಗಿ ಹಳ್ಳಿ ಬಿಟ್ಟು ನಗರಕ್ಕೆ ಬಂದಿಳಿದ ಹೆಣ್ಮಗಳೊಬ್ಬಳು ಮದುವೆಯ ದಿನವೇ ಅನ್ಯಾಯಕ್ಕೆ ಒಳಗಾದರೂ ತದನಂತರ ಅವಳು ತೆಗೆದು ಕೊಳ್ಳುವ ಗಟ್ಟಿನಿರ್ಧಾರದಿಂದ ಬದುಕು ಒಂದು ಹಂತಕ್ಕೇರಿತು ಅನ್ನುವಾಗಲೇ ಮನೆ ಬಿಟ್ಟು ಹೋದ ಗಂಡ ಧುತ್ತನೆ ಎದುರಿಗೆ ಬಂದು ನಿಲ್ಲುವುದು , ಇದು ಮಾಮೂಲಿ ಶೈಲಿ ಅಂತನ್ನಿಸಿದರೂ ನಿರೂಪಣೆ ಎಲ್ಲೂ ನಾಟಕೀಯ ಅನ್ನಿಸದೆ ಕತೆಗೊಂದು ಬಿಗಿಯನ್ನು ತಂದು ಕೊಡುತ್ತದೆ. ನಡೆದು ಹೋದ ಅಚಾತುರ್ಯಕ್ಕೆ ಕಾರಣಗಳನ್ನು ಕೊಡುತ್ತಲೇ ಕತೆಗಾರ ಕತೆಯ ಎಳೆಯೊಳಗೆ ಬದುಕಿನ ಮತ್ತೊಂದು ಮಗ್ಗಲನ್ನು ಪರಿಚಯಿಸುತ್ತಾನೆ . ಒಂದು ಅನ್ಯಾಯದ ಹಿಂದೆ, ಒಂದು ಸೋಲಿನ ಹಿಂದೆ, ಏನೆಲ್ಲಾ ಅವಮಾನಗಳಿವೆ, ಹತಾಷೆಗಳು ಇವೆಯಲ್ಲ ಅಂತ ಚಿಂತನೆಗೆ ಹಚ್ಚುವಂತೆ ಮಾಡುತ್ತದೆ.

‘ಅಪ್ಪ ಎಲ್ಲಿಹನಮ್ಮ’ ಕತೆಯೊಂದು ನಮ್ಮನ್ನು ಕತೆಯ ಇತರ ಸಾಧ್ಯತೆಗಳ ಕಡೆಗೆ ತಿರುಗುವಂತೆ ಮಾಡಿ ಗುಂಗಿ ಹುಳುವಿನಂತೆ ನಮ್ಮನ್ನು ಕಾಡತೊಡಗುತ್ತದೆ. ಇಂತಹ ಒಂದು ಕಾಡುವಿಕೆ, ಚಡಪಡಿಕೆ, ಹೊಸತೊಂದು ಸಂಗತಿ ಕುತೂಹಲಕರವಾಗಿ ಕಣ್ಣರಳಿಸಿ ಪ್ರಶ್ನೆ ಹಾಕಿ ನಿಂತು ಬಿಡುವುದು ನಮ್ಮನ್ನು ಹೊಸ ಯೋಚನೆಯೆಡೆಗೆ ನೂಕುವಂತೆ ಮಾಡಿ ಬಿಡುತ್ತದೆ. ಇದೇ ತಾನೇ ಒಳ್ಳೆಯ ಕತೆಗಳ ತಾಕತ್ತು?.

ಮತ್ತೊಬ್ಬರ ಬದುಕಿಗೆ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಮಾನವೀಯ ಕಾಳಜಿಯ ನೆಲೆಯಲ್ಲಿ ಕಟ್ಟಿದ ಕಲ್ಪನೆಯ ಕತೆಗಳ ಕತೆ ‘ನಂದು’. ಪ್ರತೀ ಕಲ್ಪನೆಯ ಎಳೆಯೂ ಒಂದೊಂದು ವೇದನೆಯನ್ನು, ಸಂಕಟವನ್ನು, ಬದುಕಿನ ಸಂದಿಗ್ಧತೆಯನ್ನು ಮೀರಲು ಪಡುವ ಪಡಿಪಾಟಲನ್ನು ಕತೆ ಮಾರ್ಮಿಕವಾಗಿ ಬಿಚ್ಚಿಡುತ್ತದೆ.

ಈ ಸಂಕಲನದ ಕೊನೇಯ ಕತೆ ‘ ನನ್ನ ರಕ್ತಕ್ಕೆ ಕೆಂಪು ಬಣ್ಣ ಕೊಡಿ‘. ಹಳ್ಳಿಯಿಂದ ನಗರಕ್ಕೆ ಬಂದು ಹೊಸ ಮನುಷ್ಯನಾಗಿದ್ದೇನೆಂದು ಭ್ರಮೆಯಲ್ಲಿ ‘ಭೂತ’ದ ಸಂಗತಿಗಳಿಂದ ಕಳಚಿಕೊಳ್ಳಬೇಕೆಂದು ಬಯಸಿದಷ್ಟೂ ವರ್ತಮಾನದ ಪ್ರತಿಕ್ಷಣಗಳೂ ಭೂತದ ಸಂಕೋಲೆಗಳಿಂದ ಬಿಗಿಯುತ್ತಾ ಇದರಿಂದ ತಪ್ಪಿಸಿಕೊಳ್ಳಲಾರದೆ ಭ್ರಮಾಧೀನ ಸ್ಥಿತಿ ತಲುಪುವ ಸನ್ನಿವೇಶ ಆಘಾತವುಂಟಾಗುವಂತಹ ಸಂದರ್ಭ. ಬಹುಷ; ಕಥಾನಾಯಕ ವಾಸು ಎದುರಿಸುವ ಸ್ಥಿತಿ ಹಲವರದ್ದು.

80 ರ ದಶಕದಲ್ಲಿಯೇ ಕತೆಗಾರ ಸಾ. ದಯಾ ಅವರಿಂದ ಬರೆಸಿಕೊಂಡ ಇಲ್ಲಿನ ಕತೆಗಳು ಮುಂಬಯಿ ಮತ್ತು ಹುಟ್ಟೂರು ಇವೆರಡರ ನಡುವೆ ಓಡುವ ರೈಲು ಗಾಡಿಯಂತೆ ಹಲವು ಅನುಭವಗಳನ್ನು , ನಿಗೂಡ ಸಂಗತಿಗಳನ್ನು ಹೊತ್ತು ಸಾಗುತ್ತದೆ . ಒಂದೊಂದು ಬೋಗಿಯಲ್ಲೂ ಒಂದೊಂದು ಕತೆಗಳು. ಎಲ್ಲ ಸಂಗತಿಗಳನ್ನು ಹೊತ್ತುಕೊಂಡು ಎರಡು ಊರುಗಳ ಬೆಸೆಯುವ ಕೊಂಡಿಯಂತೆ ಇಲ್ಲಿಯ ಕತೆಗಳು ಗೋಚರಿಸುತ್ತವೆ. ಕಾವ್ಯಾತ್ಮಕವಾಗಿಯೂ, ಧ್ವನಿಪೂರ್ಣವಾಗಿರುವ ಇಲ್ಲಿನ ಕತೆಗಳಿಗೆ ಓದಿಸಿಕೊಂಡು ಹೋಗುವ ಗುಣ ಇದೆ. ಕತೆಗಳು ಎಲ್ಲಿಯೂ ವಾಚಾಳಿಯಾಗದೆ ಸೂಚ್ಯವಾಗಿ ಕಟ್ಟಿಕೊಡುವುದು ಇಲ್ಲಿಯ ಕತೆಗಳ ಹೆಚ್ಚುಗಾರಿಕೆ. ಹೆಚ್ಚಿನ ಕತೆಗಳಲ್ಲಿ ಆಶಾದಾಯಕ ಮತ್ತು ಚಿಕಿತ್ಸಾತ್ಮಕವಾದ ಗುಣವನ್ನು ನಾವು ಕಾಣಬಹುದು. ಧಾವಂತದ ಮುಂಬಯಿ, ಸಾವಧಾನದ ಹಳ್ಳಿ ಇವೆರಡರ ನಡುವೆ ನಿಂತು ಎರಡು ದಿಕ್ಕನ್ನು ಬೆರಗುಗಣ್ಣಿನಿಂದ ತುಂಬಿಕೊಳ್ಳುತ್ತಾ ಇವರ ಕತೆಕಟ್ಟುವ ಪರಿ ಅನನ್ಯ. ಸಾ. ದಯಾ ಅವರ ಕಥಾಯಾನ ನಿರಂತರವಾಗಿರಲಿ.( ಸಾ. ದಯಾ-9004957989).

-ಸ್ಮಿತಾ ಅಮೃತರಾಜ್. ಸಂಪಾಜೆ.

4 Responses

 1. Avatar Rajesh thenana says:

  ಶುಭಾಶಯಗಳು ಬಾರಿಸು ಕನ್ನಡ ದಿಮ್ ದಿಮ್ ಮಾವ
  ವಂದನೆಗಳು

 2. Avatar Raghunath Krishnamachar says:

  ಚಂದದ ಬರಹ ಇಬ್ರಿಗೂ ಅಭಿನಂದನೆ .ನನ್ನ ಗೆಳೆಯರ ಕಥೆಗಳನ್ನು ಕುರಿತು ಬರೆದದ್ದಕ್ಕೆ ಧನ್ಯವಾದ

 3. Avatar Nayana Bajakudlu says:

  ಕಥಾಸಂಕಲನದ ವಿಶ್ಲೇಷಣೆ ಬಹಳ ಚೆನ್ನಾಗಿದೆ. ಕಥಾಸಂಕಲನದ ಕಡೆಗೆ ಮನಸ್ಸನ್ನು ಸೆಳೆಯುವಂತಿದೆ .

 4. Avatar Smitha Amrithraj says:

  ವಂದನೆಗಳು ಸರಹೊನ್ನೆ ಮತ್ತು ಓದಿ ಪ್ರತಿಕ್ರಿಯಿಸಿದ ನಿಮ್ಮೆಲ್ಲರ ಸಹೃದಯತೆಗೆ -ಸ್ಮಿತಾ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: