ಹಲೋ…ಹೇಳಿ

Share Button


” ಓಹೋ, ನಮಸ್ಕಾರ ಚೆನ್ನಾಗಿದ್ದೀರಾ?”
ನಮ್ಮ ಪರಿಚಿತರು ಸಿಕ್ಕಾಗ ಈ ತರಹ ಮಾತು ಆರಂಭಿಸುವುದು ರೂಢಿ.ಅಯಾಯ ದೇಶ ಭಾಷೆಗಳಿಗೆ ಅನುಗುಣವಾಗಿ ಇದರಲ್ಲಿ ಸ್ವಲ್ಪ ಬದಲಾವಣೆಗಳಾಗಲೂಬಹುದು. ಆದರೆ ‘ಹಲೋ’ ಎಂಬ ಎರಡಕ್ಷರದ ಪದ ಪ್ರಪಂಚದಾದ್ಯಂತ ಅತಿ ಹೆಚ್ಚು ಚಾಲ್ತಿಯಲ್ಲಿದೆ ಅನ್ನಿಸುತ್ತದೆ. ಅಪರಿಚಿತರನ್ನು ಪರಿಚಯ ಮಾಡಿಕೊಳ್ಳಲೂ ಇದೊಂದು ಸುಲಭ ಮಾರ್ಗ. ಇತ್ತೀಚೆಗೆ ಎಲ್ಲದಕ್ಕೂ ಒಂದೊಂದು ದಿನವನ್ನು ಆಚರಣೆಗೋಸ್ಕರ ರಾಷ್ಟ್ರ ಯಾ ಜಾಗತಿಕ ಮಟ್ಟದಲ್ಲಿ ನಿಗದಿಯಾಗಿರುತ್ತದೆ. ಹಾಗೆಯೇ ‘ಹಲೋ’ ಗೂ ಕೂಡಾ ದಿನವೊಂದು ನಿಗದಿಪಡಿಸಲ್ಪಟ್ಟಿದೆ. ಇಸ್ರೇಲ್ ಹಾಗೂ ಅರಬ್ ರಾಷ್ಟ್ರಗಳ ನಡುವೆ ನಡೆದ ಯುದ್ಧದ ಬಳಿಕ ವೈಮನಸ್ಸನ್ನು ತೊರೆದು ಶಾಂತಿಯುತ ಬಾಳುವೆ ನಡೆಸುವ ಸಂದೇಶವನ್ನು ಸಾರುವ ಸಲುವಾಗಿ ಬ್ರೈನ್ ಮತ್ತು ಮ್ಯಾಕ್ ಕೊರ್ಮಾಕ್ ಎಂಬವರು ನವೆಂಬರ್ 21ರನ್ನು ವಿಶ್ವ ‘ಹಲೋ’ ದಿನವಾಗಿ ಆಚರಿಸುವ ಯೋಜನೆಯನ್ನು ಮುಂದಿಟ್ಟರು.ಯಾವುದೋ ಕಾರಣದಿಂದ ವೈಮನಸ್ಸಿನಿಂದ ದೂರವಿದ್ದವರು ಅದನ್ನು ಮರೆತು ಸ್ನೇಹ ಬೆಳೆಸಲು ಅವಕಾಶ ಮಾಡಿಕೊಡುವುದು ಈದಿನ ಒಂದು ಹಲೋದಿಂದ.

ನನ್ನ ಜೀವನದಲ್ಲಿ ಈ ‘ಹಲೋ’ ಹೇಗೆ ಹಾಸುಹೊಕ್ಕಾಗಿದೆ ಹಾಗೂ ಜೀವನದ ಅವಿಭಾಜ್ಯ ಅಂಗವೇ ಆಗಿದೆ ಎಂಬುದನ್ನು ನೆನೆದರೆ ಹೆಮ್ಮೆ ಎನಿಸುತ್ತದೆ. ಈಗಿನಿಂದ ನಲುವತ್ತು ವರ್ಷಗಳ ಹಿಂದಿನ ಮಾತು. ವಿಜ್ಞಾನದಲ್ಲಿ ಪದವಿ ಮುಗಿಸಿ ಕೆಲಸದ ಬೇಟೆಯ ಸಮಯ.ನಾನು ಕಲಿತ ಪದವಿಪೂರ್ವ ಕಾಲೇಜಿನಲ್ಲಿಯೇ ಶಿಕ್ಷಕಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆ ಕಾಲೇಜಿನಲ್ಲಿ ಒಂದು ಪಿ. ಬಿ. ಎಕ್ಸ್, ಎಂದರೆ ಕಾಲೇಜಿನ ಒಳಗಡೆಯೇ ಕಾರ್ಯ ನಿರ್ವಹಿಸುವಂತಹ ಪುಟ್ಟ ದೂರವಾಣಿ ಕೇಂದ್ರ ಇತ್ತು. ಅಲ್ಲಿ ಒಬ್ಬರು ಫೋನ್ ಹಿಡಿದುಕೊಂಡು ಹಲೋ ಎನ್ನುತ್ತಾ ಮಾತನಾಡುತ್ತಾ ಸಂಪರ್ಕ ಕಲ್ಪಿಸುವ ದೃಶ್ಯ ನನ್ನ ಪಾಲಿಗೆ ಅತ್ಯಂತ ಆಕರ್ಷಣೀಯವಾಗಿತ್ತು. ಆ ಕಡೆಯಿಂದ ಆಚೀಚೆ ನಡೆದಾಡುತ್ತಿದ್ದಾಗ ನನ್ನ ದೃಷ್ಟಿಯೆಲ್ಲಾ ಅದರ ಮೇಲೆಯೇ. ಅದರಲ್ಲಿ ಕೆಲಸ ಮಾಡಿದರೆ ಎಷ್ಟು ಚೆನ್ನ ಎಂದುಕೊಳ್ಳುತ್ತಿದ್ದೆ. ಹಾಗೆಯೇ ಆ ಮಧ್ಯೆ ನಮ್ಮಣ್ಣ ದೂರವಾಣಿ ಇಲಾಖೆಯಲ್ಲಿ ನೌಕರಿಗೋಸ್ಕರ ನನ್ನ ಬಳಿ ಅರ್ಜಿಯನ್ನು ತುಂಬಿಸಿ ತಗೊಂಡು ಹೋಗಿದ್ದ. ಸ್ವಲ್ಪ ಸಮಯದಲ್ಲಿ ಸಂದರ್ಶನಕ್ಕೆ ಕರೆ ಬಂದಾಗ ಸ್ವರ್ಗಕ್ಕೆ ಮೂರೇ ಗೇಣು. ಆ ಕಾಲದಲ್ಲಿ ಎಲ್ಲರ ಮನೆಗಳಲ್ಲಿ ದೂರವಾಣಿ ಇರುತ್ತಿರಲಿಲ್ಲ.ಚರವಾಣಿಯಂತೂ ಇಲ್ಲವೇ ಇಲ್ಲ. ಹಾಗಾಗಿ ನಾನು ಅದನ್ನು ಆ ವರೆಗೆ ಸರಿಯಾಗಿ ನೋಡಿದವಳೂ ಅಲ್ಲ. ಸಂದರ್ಶನದಲ್ಲಿ ಫೋನಿನಲ್ಲಿ ಮಾತಾಡಲು ಹೇಳಿದಾಗ ಅದನ್ನು ಸರಿಯಾಗಿ ಹಿಡಿಯಲೂ ಬಾರದೆ ಪಜೀತಿ ಉಂಟಾಗಿದ್ದು ಸುಳ್ಳಲ್ಲ. ಮಂಗಳೂರಿನಲ್ಲಿ ಟೆಲಿಫೋನ್ ಆಪರೇಟರ್ ಹುದ್ದೆಗೆ ಆಯ್ಕೆಯಾಗಿ ಮೂರು ತಿಂಗಳ ತರಬೇತಿಯೂ ಮುಗಿದು ಕೆಲಸಕ್ಕೆ ಸೇರಿದಾಗ ಆದ ಆನಂದ ಅಷ್ಟಿಷ್ಟಲ್ಲ. ಆ ದೂರವಾಣಿ ವಿನಿಮಯ ಕೇಂದ್ರವು ಪೂರ್ತಿ ಹೆಣ್ಣುಮಕ್ಕಳದ್ದಾಗಿತ್ತು. ಹಗಲು-ರಾತ್ರಿ ಪಾಳಿಗಳಲ್ಲಿ ಕೆಲಸ. ನನಗೆ ಯಾವುದನ್ನು ನೋಡಿ ಅದರಲ್ಲಿ ಕೆಲಸ ಮಾಡಲು ಆಸೆಯಾಗಿತ್ತೋ ಅದರಲ್ಲೇ ನಾನು ಸೇರ್ಪಡೆಗೊಂಡ ಬಗ್ಗೆ ಈಗಲೂ ಯೋಚಿಸಿದರೆ ಅತ್ಯಾಶ್ಚರ್ಯವೆನಿಸುತ್ತದೆ! ದೇವರು ನನ್ನಾಸೆಯನ್ನು ಈಡೇರಿಸಿದುದರ ಬಗ್ಗೆ ಧನ್ಯತಾಭಾವವಿದೆ. ಇನ್ನು ನನ್ನ ಎಡೆಬಿಡದ ನಂಟು ಹಲೋದೊಂದಿಗೆ ಆಗಿತ್ತು. ಕನಸಿನಲ್ಲೂ ಹಲೋ ಎನ್ನುವಂತಾಗಿತ್ತು ನನ್ನ ಸ್ಥಿತಿ. ಈಗ ನನ್ನ ನೆಮ್ಮದಿಯ ನಿವೃತ್ತಿ ಜೀವನದಲ್ಲಿ ಕೆಲವೊಮ್ಮೆ ಯೋಚಿಸುವಾಗ ಈತನಕ ನಾನು ಎಷ್ಟು ಹಲೋಗಳನ್ನು ಹೇಳಿರಬಹುದೆಂದುಕೊಂಡರೆ ಆಶ್ಚರ್ಯವಾಗುವುದರ ಜೊತೆಗೆ ನಗುವೂ ಬರುತ್ತದೆ.

ಅಮೇರಿಕದಲ್ಲಿರುವ ಮಗಳಲ್ಲಿಗೆ ಹೋಗಿದ್ದಾಗ ಆದ ‘ಹಲೋ’ ಫಜೀತಿ ಅಷ್ಟಿಷ್ಟಲ್ಲ. ಅಮೇರಿಕಾ ತಲಪಿ ಇನ್ನೂ ಎರಡು ದಿನಗಳಾಗಿರಲಿಲ್ಲ. ಮಧ್ಯಾಹ್ನ ಹೊತ್ತು. ಬಹು ದೊಡ್ಡದಾದ ಅಂಗಡಿಗೆ ಕರಕೊಂಡು ಹೋಗಿದ್ದರು,ಮಗಳು ಅಳಿಯ. ನಮ್ಮ ದೇಶ ಹಾಗೂ ಅಮೇರಿಕಾಕ್ಕೆ ಹನ್ನೊಂದು ಗಂಟೆಗಳ ಕಾಲಮಾನ ವ್ಯತ್ಯಾಸವಿರುವುದರಿಂದ ನನಗಂತೂ ವಿಪರೀತ ನಿದ್ದೆಯಿಂದ ಕಣ್ಣೆಳೆಯುತ್ತಿತ್ತು. ಒಂದು ಕಡೆ ಕುಳಿತರೆ ಎಲ್ಲಿ ನಿದ್ದೆ ಮಾಡಿಬಿಡುವೆನೋ ಎಂದು ಹೆದರಿ ಒಬ್ಬಳೇ ಅಡ್ಡಾಡುತ್ತಿದ್ದೆ. ಆಗಲೇ ಎದುರಿನಿಂದ ಬಂದ ಅಮೇರಿಕನ್ ಒಬ್ಬರು ಹಲೋ ಅಂದು ಕೈ ಮುಂದೆ ಮಾಡಿದಾಗ ಗಾಬರಿಯಿಂದ ಮುಖ ಕೆಳಗೆ ಮಾಡಿ ಅಲ್ಲಿಂದ ಕಾಲ್ಕಿತ್ತೆ. ಇದೇನಪ್ಪಾ ಎಂದು ಮುಜುಗರ ಪಡುವಂತಾಯ್ತು. ಇನ್ನೊಮ್ಮೆಯೂ ಇದೇ ಅನುಭವವಾಯ್ತು. ಇಲ್ಲಿಯಂತೆ ಅಲ್ಲಿ ಜನಸಂದಣಿ ಅತ್ಯಂತ ಕಡಿಮೆ. ಇಲ್ಲವೆಂದರೂ ನಡೆದೀತು. ಒಮ್ಮೆ ಅಲ್ಲಿ ಸಾಯಂಕಾಲದ ಹೊತ್ತು ಒಬ್ಬಳೇ ವಾಕಿಂಗ್ ಹೊರಟೆ. ಎಷ್ಟು ದೂರ ನಡೆದರೂ ಒಬ್ಬರೇ ಒಬ್ಬರು ವ್ಯಕ್ತಿ ಕಾಣಸಿಗಲಿಲ್ಲ. ಹಾಗೆಯೇ ಒಬ್ಬರು ಅಮೇರಿಕನ್ ಎದುರಿಗೆ ಸಿಕ್ಕಿದಾಗ ತುಂಬಾ ಪರಿಚಿತರೋ ಎಂಬಂತೆ “ಹಲೋ ಹೌ ಡು ಯು ಡು” ಎನ್ನಬೇಕೇ. ನಾನಂತೂ ಕಕ್ಕಾಬಿಕ್ಕಿಯಾಗಿ ಪುನಃ ಉತ್ತರಿಸುವ ಬದಲು ಹಿಂದೆ ಮುಂದೆ ನೋಡಿ ಮುಖವೂ ಎತ್ತದೇ ಓಡು ನಡಿಗೆಯಲ್ಲಿ ಮುಂದಕ್ಕೆ ಹೋಗಿಬಿಟ್ಟೆ. ಹತ್ತಿರದಲ್ಲಿ ಬೇರೆ ಯಾರೂ ಇಲ್ಲದ್ದರಿಂದ ಹೆದರಿಬಿಟ್ಟಿದ್ದೆ. ಮನೆಗೆ ತಲಪಿದ ಮೇಲೆ ಮಗಳಲ್ಲಿ ವಿಷಯ ತಿಳಿಸಿದಾಗ ಬಿದ್ದು ಬಿದ್ದು ನಗಬೇಕೆ? ನನಗೆ ಸ್ವಲ್ಪ ತರಗತಿಯನ್ನೂ ತಗೊಂಡಳು ಅನ್ನಿ. ಆಮೇಲೆ ತಿಳಿಯಿತು, ಅದು ಅಲ್ಲಿಯ ರೂಢಿಯಾಗಿತ್ತು. ಎಲ್ಲರೂ ಹಾಗೆಯೇ ಪರಿಚಯವಿಲ್ಲದವರೊಡನೆಯೂ ಹಲೋ ಎಂದು ಮಾತಾಡಿಸ್ತಾರೆ ಮತ್ತು ಪ್ರತಿಕ್ರಿಯಿಸದೆ ಇದ್ದರೆ ಅವಮಾನಿಸಿದಂತೆ ಎಂದು ತಿಳಿದುಕೊಳ್ಳುತ್ತಾರೆ. ನನ್ನ ನಡವಳಿಕೆ ಬಗ್ಗೆ ನನಗೇ ತುಂಬಾ ಬೇಸರವಾಯ್ತು. ಅಂತೂ ಮುಂದಿನ ಆರು ತಿಂಗಳ ಅಮೇರಿಕಾ ವಾಸದಲ್ಲಿ ನಾನು ಎಷ್ಟು ಮುಂದುವರಿದೆನೆಂದರೆ ಎದುರಿಗೆ ಯಾರು ಸಿಕ್ಕಿದರೂ ನಾನೇ ಮೊದಲು ಹಲೋ ಎಂದು ಮುಗುಳ್ನಗುತ್ತಿದ್ದೆ.
ಇಲ್ಲಿ ನಾವು ಎಲ್ಲಿ ನಡೆದಾಡಿದರೂ ತುಂಬಾ ಜನರು ಸಿಗುತ್ತಿರುತ್ತಾರೆ. ಪರಿಚಯವಿಲ್ಲದವರನ್ನು ನೋಡಿ ಹಲೋ ಎಂದು ನಕ್ಕರಂತೂ ನಮ್ಮನ್ನು ವಿಚಿತ್ರಪ್ರಾಣಿ ಎಂಬಂತೆ ನೋಡ್ತಾರೆ. ಹೊರಗಡೆ ಹೋದರಂತೂ ಸಿಗುವ ದಟ್ಟಣೆಯ ಜನಸಂದಣಿಯಲ್ಲಿ ಹಲೋ ಎಂದು ಯಾರನ್ನೆಲ್ಲಾ ಮಾತಾಡಿಸಬಹುದು ಹೇಳಿ? ನಾವು ಮೂರ್ಖರೆನಿಸಿಕೊಳ್ಳಬೇಕು ಅಷ್ಟೆ. ಈಗಂತೂ ಮೊಬೈಲ್ ಯುಗ. ಕೈಯಲ್ಲಿ ಅದಿದ್ದರಂತೂ ಮುಗಿಯಿತು ಕತೆ. ಎದುರಿಗೆ ಪರಿಚಯದವರು ಸಿಕ್ಕಿದರೂ ಅವರಿಗೆ ಹಲೋ ಎನ್ನಲು ಸಮಯವಿಲ್ಲ.. ಮೊಬೈಲ್ ನಲ್ಲೇ ಹಲೋ ಎನ್ನುತ್ತಿರುತ್ತಾರಲ್ಲಾ? ಇರಲಿ..ಈಗಿನ ವಿಪರೀತ ಧಾವಂತದ ಬದುಕಿನ ದಿನಗಳಲ್ಲಿ ಅಕ್ಕಪಕ್ಕದವರು, ಬಂಧು ಬಾಂಧವರು, ಗೆಳೆಯರಿಗೆಲ್ಲಾ ಸ್ವಲ್ಪವಾದರೂ ಸಮಯವನ್ನು ಹೊಂದಿಸಿಕೊಂಡು ಆಗಾಗ ಹಲೋ ಎನ್ನುತ್ತಿರೋಣ. ಎಲ್ಲರೊಡನೆ ಮಧುರ ಬಾಂಧವ್ಯವನ್ನು ಉಳಿಸಿಕೊಳ್ಳೋಣ ಆಗದೇ?

ಶಂಕರಿ ಶರ್ಮ, ಪುತ್ತೂರು

2 Responses

  1. Avatar Nayana Bajakudlu says:

    ಹಿತವಾಗಿ ಹಾಸ್ಯಲೇಪಿತವಾದ ಲೇಖನ ಚೆನ್ನಾಗಿದೆ. ಕೊನೆಯಲ್ಲಿ ನೀಡಿರುವ ಸಂದೇಶ ಉತ್ತಮವಾಗಿದೆ .

  2. Avatar Pallavi Bhat says:

    “ಹಲೋ” ಎಂಬ ಪದವನ್ನು ದಿನಂಪ್ರತಿ ಅದೆಷ್ಟು ಬಾರಿ ಉಪಯೋಗಿಸುತ್ತೇನೆ ಎಂದು ಲೆಕ್ಕ ಹಾಕುವ ಹಾಗೆ ಮಾಡಿದೆ ನಿಮ್ಮ ಈ ಬರಹ. ಚೆನ್ನಾಗಿದೆ 🙂

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: