ಲಕ್ಷ್ಮೀ ಬಾರಮ್ಮಾ…

Share Button

ಹಳ್ಳಿ ಮನೆಗಳಲ್ಲಿ ಬಾಗಿಲು ಹಾಕುವ ಪದ್ದತಿಯಂತು ಇಲ್ಲವೇ ಇಲ್ಲ. ಎಲ್ಲೋ ಕೆಲಸದ ಮೇಲೆ ಗದ್ದೆಗೋ ತೋಟಕ್ಕೋ ಹೋಗುವ ಸಂದರ್ಭದಲ್ಲಿ ಬಾಗಿಲು ಎಳೆದು ಕೊಳ್ಳುತ್ತಾರೆ ಅಷ್ಟೇ. ಆದರೆ ಬೀಗ ಜಡಿಯುತ್ತಿರಲಿಲ್ಲ. ಹೊರಗೆಯಿಂದ ಬಂದವರಿಗೆ ಮನೆಯೊಳಗೆ ಯಾರೂ ಇಲ್ಲಾ ಅಂತ ತೋರಿಸಿ ಕೊಳ್ಳುವುದರ ಸಂಕೇತ ಅಷ್ಟೆ ಅದು. ಇನ್ನು ಸಂಜೆ ಹೊತ್ತಂತೂ ಯಾರ ಮನೆಯ ಬಾಗಿಲುಗಳು ಮುಚ್ಚುತ್ತಿರಲಿಲ್ಲ. ಆ ಹೊತ್ತು ಲಕ್ಷ್ಮಿ ಮನೆಗೆ ಬರುವ ಹೊತ್ತಂತೆ. ಆದಕಾರಣ ಮುಂಬಾಗಿಲು ತೆರೆದು ಕೊಂಡೇ ಇರುತ್ತದೆ. ಹೆಚ್ಚೇಕೆ ಅದೆಷ್ಟೋ ಅನಿವಾರ್ಯ ಸಂದರ್ಭಗಳಲ್ಲು ಕೂಡ ಮನೆ ಬಾಗಿಲು ಹಾಕಿ ಎಲ್ಲರೂ ಹೋಗ ಬೇಕಾಗುತ್ತದೆ ಅನ್ನೋ ಚಿಂತೆಯಿಂದ ಯಾರಾದರು ಒಬ್ಬರು ಮುಂಬಾಗಿಲು ತೆರೆಯಲೋಸ್ಕರವೇ ಮನೆಯಲ್ಲಿ ಉಳಿದು ಬಿಡುತ್ತಿದ್ದರು.

ಸಂಜೆಯಾಗುವುದೇ ತಡ ಎಲ್ಲಾ ಊರುಗಳ ಜಗಲಿ ಕಟ್ಟೆಗಳು ಚುರುಕಾಗುತ್ತವೆ. ಕಾರಣ ಸಣ್ಣದಾದರೂ ಆ ಕ್ಷಣದ ಅಲ್ಲಿನ ಕಾರ್‍ಯ ಗಹನವಾದದ್ದೆ. ಅದೇ ಹೊತ್ತಿಗೆ ಮನೆಯ ಗಂಡಸರೆಲ್ಲಾ ಜಗಲಿ ಕಟ್ಟೆಯಲ್ಲಿ ದಣಿವಾರಿಸಿಕೊಂಡು ಸುಸ್ತಾಗಿ ಹಳ್ಳಿಯಾಚೆಯ ತಟ್ಟಿ ಅಂಗಡಿಗೋ, ದೇವಸ್ಥಾನದ ಬದಿಯಲ್ಲಿರುವ ಅರಳಿಕಟ್ಟೆಯ ಕಡೆಗೋ, ಅಥವ ಸ್ವಲ್ಪ ದೂರವೇ ಇರುವ ಗಡಂಗಿಗೋ ಪಾದ ಬೆಳೆಸಿರುತ್ತಿದ್ದರು. ಇಲ್ಲದಿದ್ದರೆ ಜಗಲಿ ಕಟ್ಟೆಯ ಮೇಲೆ ಕುಳಿತು ದಣಿವಾರಿಸಿ ಕೊಳ್ಳುವ ಧೈರ್ಯ ಮನೆಯೊಡತಿಯರಿಗೆ ಎಲ್ಲಿಂದ ಬಂದಾತು?. ದಾರಂದದ ಒಳಗೆ ಇಟ್ಟಿದ್ದ ಎಂ.ಕೆ.ಇಂದಿರಾರವರ ಕಾದಂಬರಿ ಓದುತ್ತಲೋ ಅಥವಾ ಕಸೂತಿ ಹಾಕುತ್ತಲೋ ದೂರದ ದಿಗಂತದಾಚೆಗೆ ದೃಷ್ಠಿ ನೆಟ್ಟು ಸೂರ್‍ಯ ಕಂತುವ ವಿಷಾದವನ್ನು ಮೈಯೊಳಗೆ ತುಂಬಿ ಕೊಳ್ಳುತ್ತಾ ಯಾವುದೋ ನೆನಕೆಯಲ್ಲಿಯೋ, ಆತ್ಮಾವಲೋಕನದಲ್ಲಿಯೋ ಹೆಂಗಳೆಯರು ತಮ್ಮನ್ನು ತಾವು ತುಸು ಹೊತ್ತು ಮರೆತು ಬಿಡುವುದಂತೂ ಸುಳ್ಳಲ್ಲ. ಇನ್ನು ಅಕ್ಕಪಕ್ಕದಲ್ಲಿ ಮನೆಗಳು ಇದ್ದರಂತೂ ಅದರ ಸೊಗಸೇ ಬೇರೆ. ಇವತ್ತು ಈ ಮನೆಯ ಜಗಲಿ ಕಟ್ಟೆಯಲ್ಲಿ ಕಷ್ಟ- ಸುಖಗಳು ಹಾಡಾಗಿ ಹರಿಯುತ್ತಿದ್ದರೆ, ನಾಳೆ ಆಚೆ ಮನೆಯ ಜಗಲಿ ಕಟ್ಟೆಗೆ ಅದು ಸ್ಥಳಾಂತರಗೊಳ್ಳುತ್ತಿತ್ತು. ಹೆಚ್ಚೇಕೆ ಜಗಲಿ ಕಟ್ಟೆಯನ್ನು ಕೇಳಿದರೂ ಗೊತ್ತಾಗುತ್ತೆ ಅದು ಎಷ್ಟೊಂದು ಸುಗ್ಗಿ-ಸಂಕಟಗಳನ್ನು ತನ್ನ ಎದೆಯೊಳಗೆ ಅಡಗಿಸಿ ಇಟ್ಟುಕೊಂಡಿದೆಯೆಂಬುದನ್ನು.

ಒಬ್ಬೊಬ್ಬರ ತಲೆ ಬಾಚುತ್ತಾ, ಇಲ್ಲದಿರುವ ಹೇನನ್ನು ಹೆಕ್ಕಿದಂತೆ ನಟಿಸುತ್ತಾ, ಸಖೀ ಗೀತದ ಪಟ್ಟ ಪಾಡೆಲ್ಲವೂ ಮತ್ತೊಂದು ಬಗೆಯಲ್ಲಿ ಹುಟ್ಟು ಹಾಡಾಗುವುದು ಕೂಡ ಇದೇ ಜಗಲಿ ಕಟ್ಟೆಯೆಂಬ ಧ್ಯಾನ ಸ್ಥಳದಲ್ಲಿ. ಇನ್ನು ಅಕ್ಕಪಕ್ಕದಲ್ಲಿ ಮಾತನಾಡಲು ಯಾರು ಇಲ್ಲ ಅಂದರೂ ಬೇಸರವೇನಿಲ್ಲ. ಹಾಗೇ ಸುಮ್ಮಗೆ ಜಗಲಿ ಕಟ್ಟೆಯ ಮೇಲೆ ಗಲ್ಲಕ್ಕೆ ಕೈಯಾನಿಸಿ ಕುಳಿತರೆ ಸಾಕು ದೂರ ದಿಗಂತದ ಅಂಚಿನವರೆಗೂ ಮನಸು ಹಕ್ಕಿಯಂತೆ ಹಾರುತ್ತಾ ಹೋಗಿ ಬಿಡುತ್ತದೆ. ಎಷ್ಟೊಂದು ಒತ್ತಡಗಳು, ಎದೆಯ ಬೇಗುದಿಗಳು, ಯಾರೊಂದಿಗೂ ಹೇಳಿಕೊಳ್ಳಲಾಗದ ಸಂಕಟಗಳು ಹಾಗೇ ಕರಗಿ ನೀರಾಗಿ ಹರಿಯುವ ಸುಖಕ್ಕೊಂದು ದಿವ್ಯ ಕ್ಷಣಗಳು ಒದಗಿ ಬಿಡುತ್ತವೆ ಇಲ್ಲಿ. ಮಾತನಾಡುತ್ತಲೇ ಅಕ್ಕಿ ಆರಿಸಿದ್ದು, ಹೂದಂಡೆ ಕಟ್ಟಿದ್ದು, ಎಳೆ ಮಕ್ಕಳೆಲ್ಲಾ ಅಲ್ಲೇ ಕುಕ್ಕುರುಗಾಲಲ್ಲಿ ಕುಳಿತು ಹೆಂಗಳೆಯರ ಕತೆಗಳಿಗೆ ಕಿವಿಯಾಗುತ್ತಾ ಯಾವುದೋ ಅದ್ಭುತ ಲೋಕದಲ್ಲಿ ಪಯಣ ಬೆಳೆಸಿದ್ದು, ಎಲ್ಲವಕ್ಕೂ ಜಗಲಿ ಕಟ್ಟೆಯೇ ವೇದಿಕೆ. ನನಗೂ ನೆನಪಿದೆ ಎಳವೆಯಲ್ಲಿ ಶಾಲೆಯಿಂದ ಬಂದಾಕ್ಷಣ ಮಾಡಬೇಕಾದ ಕೆಲಸಗಳನ್ನೆಲ್ಲ ಮುಗಿಸಿ ಅಕ್ಕಪಕ್ಕದವರ ಮನೆಯ ಮಕ್ಕಳಿಗೆ ನಾವು ಓದುತ್ತಿದ್ದೇವೆ ಅನ್ನೋದು ಗೊತ್ತಾಗಬೇಕು ಅನ್ನೋ ಉದ್ದೇಶವಿಟ್ಟುಕೊಂಡಂತೆ ದೊಡ್ಡಕ್ಕೆ ಓದುತ್ತಿದ್ದದ್ದು ಅದೇ ಜಗಲಿ ಕಟ್ಟೆಯಲ್ಲಿ. ಹಾಗೇ ಇನ್ನೇನು ಕತ್ತಲು ಆವರಿಸುತ್ತಿದೆ ಅನ್ನೋ ಹೊತ್ತಿನಲ್ಲಿ ಹೆಂಗಳೆಯರೆಲ್ಲರೂ ಆ ಕೆಲಸ ಬಾಕಿ ಇದೆ, ಈ ಕೆಲಸ ಬಾಕಿ ಇದೆ ಅನ್ನೋ ನೆಪ ಒಡ್ಡಿ ಸರ ಸರನೆ ಅವರವರ ಮನೆ ಹಾದಿ ಹಿಡಿದು ಬಿಡುತ್ತಿದ್ದರು. ಹೊರಗೆ ಹೋದ ಯಜಮಾನ ಆ ಹೊತ್ತಿಗಾಗಲೇ ಮನೆ ಸೇರಿ ಎಲೆಯಡಿಕೆ ಹಾಕಿಕೊಂಡು ರೇಡಿಯೋ ಕೇಳುತ್ತಲೋ, ಕುಡಿದ ಮತ್ತು ಹೆಚ್ಚಾಗಿದ್ದರೆ ತನ್ನದೇ ರಾಗ ಲಹರಿಗೆ ತಮಗೇ ಮಂಪರು ಹತ್ತಿಸಿಕೊಂಡು ಅಲ್ಲೇ ನಿದ್ದೆ ಮಾಡಿ ಬಿಡುತ್ತಿದ್ದರು.

ಆವೊತ್ತೊಮ್ಮೆ ಅವನು ಇಷ್ಟು ಬೇಗ ಬರುತ್ತಾನೆಂದು ಕಲ್ಪನೆಯೇ ಇಲ್ಲದ ಅವಳು ಹಾಗೇ ಯಾವುದೋ ಕನಸಿನ ಲೋಕದಲ್ಲಿ ತೇಲುತ್ತಾ ಆ ಮುಸ್ಸಂಜೆಯ ಹೊತ್ತಿನಲ್ಲಿ ಜಗಲಿ ಕಟ್ಟೆಯ ಮೇಲೆ ಹಾಗೇ ನಿದ್ದೆಗೆ ಜಾರಿ ಬಿಟ್ಟಿದ್ದಳು. ಜಗಲಿ ಕಟ್ಟೆಯಲ್ಲಿ ಈ ಹೊತ್ತಿನಲ್ಲಿ ಮಲಗಿದ್ದಿಯಲ್ಲೇ.. ಬಜಾರಿ.. ಅಂತ ಹಳಿದು ರೇಗಾಡೋಕೆ ಶುರು ಮಾಡಿದಾಗಲೇ ಭಯಾನಕ ಕನಸು ಕಂಡವಳಂತೆ ಗಡಬಡಿಸಿ ಎದ್ದು ಒಳಗೋಡಿದ್ದಳು. ಸುಂದರ ಕನಸಿಗೆ ಆವರಣ ಒದಗಿಸಿದ ಜಗಲಿ ಕಟ್ಟೆಯ ಮೇಲೇಯೇ ಆ ಕನಸು ಹಾಗೇ ಚದುರಿ ಹೋಗಿತ್ತು. ಇದು ಒಂದು ಉದಾಹರಣೆಯಷ್ಟೆ. ಅಡುಗೆ ಮನೆಯ ಒಲೆ ಕಟ್ಟೆಯ ಮೇಲೆ ನಮ್ಮ ಹಣೆಯ ಬರಹ ಬರೆದಿಟ್ಟಿದೆಯೇನೋ ಅಂತ ಅದೆಷ್ಟೋ ಹೆಣ್ಣು ಮಕ್ಕಳು ಸೆರಗಂಚಿನಲ್ಲಿ ಕಣ್ಣೀರು ಒರೆಸಿಕೊಂಡು ಮುಸಿ ಮುಸಿ ಅಳುತ್ತಾ ಓಲೆ ಊದಲು ಹಚ್ಚಿ ಕೊಳ್ಳುತ್ತಿದ್ದರು. ಈ ಕತೆಗಳನ್ನು ಕೇಳುತ್ತಾ , ಅನುಭವಿಸುತ್ತಾ ಬೆಳೆದ ಜಗಲಿ ಕಟ್ಟೆಯ ಕುಡಿಗಳ ಕಾಲಕ್ಕಾಗುವಾಗ ಯಾರ ಮೇಲಿನ ಕೋಪಕ್ಕೋ, ತಾಪಕ್ಕೋ, ಶಾಪಕ್ಕೋ, ಅಥವ ಕಾಲ ಮೌನವಾಗಿ ಕೊಟ್ಟ ಬದಲಾವಣೆಗೋ ಏನೋ ಮನೆಯಿಂದ ಜಗಲಿ ಕಟ್ಟೆಯನ್ನೇ ತೆಗೆದು ಹಾಕಿ ಬಿಟ್ಟಿದ್ದಾರೆ. ಎಲ್ಲೋ ಅಪರೂಪಕ್ಕೇನೋ ಎಂಬಂತೆ ಇರುವ ಜಗಲಿ ಕಟ್ಟೆಯ ಮೇಲೆ ಈಗ ಹೂ ಬಿಡದ ಕ್ರೋಟನ್ ಮತ್ತು ಗಂಧವಿಲ್ಲದ ಆಂತೋರಿಯಮ್ ಗಿಡಗಳದೇ ಬಿಂಕದ ನಗು. ಮನೆಗೆ ಅಲಂಕಾರ ಪ್ರಾಯವಾದ ಜಗಲಿ ಕಟ್ಟೆ ಕಾಣೆಯಾಗಿ ಮನೆಗಳು ಯಾವುದೋ ಒಂದು ತೆರನಾದ ಅಪೂರ್ಣತೆಯನ್ನು ಅನುಭವಿಸುತ್ತಾ ನಿಂತಂತೆ ಭಾಸವಾಗುತ್ತಿದೆ ಅಂದರೆ ಸುಳ್ಳಲ್ಲ. ಬಹುಷ; ಜಗಲಿ ಕಟ್ಟೆಯ ಮೇಲೆಯೇ ಬದುಕು ಕಂಡುಂಡ ಜೀವಿಗಳಿಗೆ ಮಾತ್ರ ಇದು ವೇದ್ಯವಾಗುವ ಸಂಗತಿಯೇನೋ. ಮಾತಿಗೆ,ನಗುವಿಗೆ ಪುರುಸೊತ್ತೇ ಸಿಗದೆ ಮನೆಯೊಳಗಿನ ಮನಸುಗಳು ಕೂಡ ನಿರ್ಭಾವುಕರಾಗುತ್ತಿದ್ದಾರೆ. ಈ ಅಪೂರ್ಣತೆಯನ್ನು ತುಂಬಲೇನೋ ಎಂಬಂತೆ ಕೈಗೊಂದರಂತೆ ಮೊಬೈಲು ಬಂದಿವೆ.

ಎಲ್ಲರ ಮನೆಯ ಒಳಗೂ ಜನರಿದ್ದಾರೆ. ಆದರೂ ಖಾಲಿ ಖಾಲಿ ಅನ್ನಿಸುತ್ತಿದೆ. ಅಗುಳಿ ಹಾಕಿ ಬಾಗಿಲು ಮುಚ್ಚಿಕೊಂಡಿದೆ. ಅಷ್ಟೇಕೆ ಪ್ರತೀ ಮನೆಯ ಕೊಠಡಿಗಳು ಕೂಡ ಮುಚ್ಚಿಕೊಂಡೇ ಇರುತ್ತದೆ. ಅವರ ಮನೆಗೆ ಇವರು, ಇವರ ಮನೆಗೆ ಅವರು ಹೊತ್ತಲ್ಲದ ಹೊತ್ತಿನಲ್ಲಿ ಆಮಂತ್ರಣವಿಲ್ಲದೆ ಹೋಗುವಂತಿಲ್ಲ. ಹಾಗೇನಾದರೂ ಹೋದರೆಂದರೆ ಔಪಚಾರಿಕಕ ಮಾತಿಗೂ ಹೆಚ್ಚಿನ ಕಡೆಗಳಲ್ಲಿ ಅವಕಾಶವಿರುವುದಿಲ್ಲ. ಎಲ್ಲರಿಗೂ ತುರ್ತು,ಕಾರ್ಯ ಬಾಹುಳ್ಯದ ಒತ್ತಡ. ಕೆಲವರು ಮೊಬೈಲ್ ಕಿವಿಯಾನಿಸಿಕೊಂಡು ಕಳೆದು ಹೋದರೆ, ಮತ್ತೆ ಕೆಲವರಿಗೆ ಟಿ. ವಿ. ಧಾರವಾಹಿಗಳ ಭರಾಟೆಯಲ್ಲಿ ಕಳೆದು ಹೋಗುವ ಆತುರ. ಒಟ್ಟಿನಲ್ಲಿ ಮುಖಕ್ಕೆ ಮುಖಕೊಟ್ಟು ಮಾತನಾಡಲು ಯಾರಿಗೂ ಅಂತಹ ಆಸ್ಥೆಯೇನಿಲ್ಲ. ಬಂದವರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಾದಿ ಹಿಡಿಯ ಬೇಕಷ್ಟೆ. ಕೆಲವೊಮ್ಮೆ ಕರೆಗಂಟೆ ಒತ್ತಿದಾಗಲೇ ಕಿಟಕಿಯಲ್ಲಿ ಇಣುಕಿ ನೋಡಿ ಕರೆಯೋಣ ಅನ್ನಿಸಿದರೆ ಮಾತ್ರ ಬಾಗಿಲು ತೆರೆದು ಕೊಳ್ಳುತ್ತದೆ. ಎಲ್ಲರಿಗೂ ಯಾರಿಗೂ ಹೇಳಿಕೊಳ್ಳಲಾಗದಂತಹ ನೂರೆಂಟು ತಾಪತ್ರಯಗಳು. ಎಲ್ಲರೂ ಅವರವರ ಗುಂಗಿನಲ್ಲಿ ಕಳೆದು ಹೋಗುತ್ತಿದ್ದಾರೆ. ಮೊದಲಿನಂತೆ ಬೇಕೆನ್ನಿಸುವ ಸಂಗತಿಗಳೆಲ್ಲಾ ಹಂಬಲಿಕೆಯಲ್ಲಿಯೇ ಕಳೆದು ಹೋಗುವ ಜಾಯಮಾನ ಜಾರಿ ಹೋಗಿದೆ. ಈಗ ಅವರೆಲ್ಲ ಬೇಕೆನ್ನಿಸಿದ್ದೆಲ್ಲಾ ಪಡೆದು ಕೊಳ್ಳುವ ವರವನ್ನು ಸಿದ್ಧಿಸಿಕೊಂಡಿದ್ದಾರೆ ಅಂತನ್ನಿಸುತ್ತದೆ. ಇಷ್ಟಾಗಿಯೂ ಯಾರೂ ಸಂಪೂರ್ಣ ತೃಪ್ತರಲ್ಲ ಎನ್ನುವುದೇ ಬಹು ದೊಡ್ಡ ವಿಪರ್‍ಯಾಸ.

ಎಲ್ಲಾ ಕಟ್ಟುಪಾಡುಗಳ ನಡುವೆ ಸೀಮಿತ ಸಮಯದಲ್ಲಾದರೂ ಜಗಲಿ ಕಟ್ಟೆಯಲ್ಲಿ ಅರಳಿ ಕೊಳ್ಳುತ್ತಿದ್ದ ಮನಸುಗಳು ಇವತ್ತು ಸಾಕಷ್ಟು ಸಹಜ ವಾತಾವರಣದ ನಡುವೆಯೂ ಮುಚ್ಚಿದ ಬಾಗಿಲಿನೊಳಗೆ ಪ್ರಜ್ಞಾಪೂರ್ವಕವಾಗಿ ನರಳುತ್ತಿದೆ. ಒಳಗಿನ ಕವಿತೆ ಮಾತ್ರ ಚಡಪಡಿಸುತ್ತಾ ಮುಚ್ಚಿದ ಬಾಗಿಲು ತೆರೆದು ಕೊಳ್ಳುವ ಕ್ಷಣಗಳಿಗಾಗಿ ಕಾಯುತ್ತಾ ಕುಳಿತಿದೆ. ಬಾಗಿಲು ತೆರೆದೊಡನೇ ಪುರ್ರನೇ ಹಾರುತ್ತಾ ಜಗಲಿ ಕಟ್ಟೆಯನ್ನು ಅರಸುತ್ತಾ.. ಅರಸುತ್ತಾ ಸಾಗಿದೆ. ತುಸು ವಿಶ್ರಮಿಸಿ ಕೊಳ್ಳಲು ಕೂಡ ಅಂಗೈ ಅಗಲ ಕಟ್ಟೆ ಕೂಡ ಸಿಗದೆ ಹೈರಾಣಾಗುತ್ತಿದೆ. ಅರಸುವಿಕೆಯಲ್ಲೇ ಹಾರುತ್ತಾ ಕಳೆದು ಹೋಗುತ್ತಿರುವ ಕವಿತೆಯ ರೆಕ್ಕೆ ಈಗ ಬಲವಾಗಿ ನೋಯುತ್ತಿದೆ. ಲಕ್ಷ್ಮಿಯಂತೂ ಪ್ರತೀ ಮನೆಯ ಬಾಗಿಲು ದಾಟುತ್ತಾ, ದಾಟುತ್ತಾ ಸುಸ್ತಾಗಿ ಮುಚ್ಚಿದ ಕದದ ಆಚೆ ತುಸು ನಿಂತು ಹಾಗೇ ಹಿಂದುರಿಗುತ್ತಿದ್ದಾಳೆಯೇನೋ ಅನ್ನಿಸುತ್ತಿದೆ. ಎಲ್ಲೋ ದೂರದಲ್ಲಿಮುಚ್ಚಿದ ಬಾಗಿಲ ಎಡೆಯಿಂದ ಲಕ್ಷ್ಮೀ ಬಾರಮ್ಮಾ.. ಅಂತ ಹಾಡು ತೇಲಿ ಬರುತ್ತಿದೆ. ಕವಿತೆಯೂ ಲಕ್ಷ್ಮಿಯೂ ಆ ಕಾಳ ರಾತ್ರಿಯಲ್ಲಿ ಏಕ ಕಾಲದಲ್ಲಿ ಎಲ್ಲೋ ಕರಗಿ ಹೋದಂತೆ ಅನ್ನಿಸುತ್ತಿದೆ.

-ಸ್ಮಿತಾ ಅಮೃತರಾಜ್. ಸಂಪಾಜೆ.

7 Responses

  1. Hema says:

    “ಲಕ್ಷ್ಮಿಯಂತೂ ಪ್ರತೀ ಮನೆಯ ಬಾಗಿಲು ದಾಟುತ್ತಾ, ದಾಟುತ್ತಾ ಸುಸ್ತಾಗಿ ಮುಚ್ಚಿದ ಕದದ ಆಚೆ ತುಸು ನಿಂತು ಹಾಗೇ ಹಿಂದುರಿಗುತ್ತಿದ್ದಾಳೆಯೇನೋ ಅನ್ನಿಸುತ್ತಿದೆ. ಎಲ್ಲೋ ದೂರದಲ್ಲಿಮುಚ್ಚಿದ ಬಾಗಿಲ ಎಡೆಯಿಂದ ಲಕ್ಷ್ಮೀ ಬಾರಮ್ಮಾ.. ಅಂತ ಹಾಡು ತೇಲಿ ಬರುತ್ತಿದೆ..” ಎಂಥಹ ವಿರೋಧಾಭಾಸ… ಬರಹ ಬಲು ಇಷ್ಟವಾಯಿತು.

  2. Shankari Sharma says:

    ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಜಗಲಿಕಟ್ಟೆಗೆಲ್ಲಿದೆ ಜಾಗ…ಅಲ್ಲವೇ .ಸುಂದರ ಬರಹ.

  3. Asha Nooji says:

    ಚೆನ್ನಾಗಿದೆ ಬರಹ

  4. Jayalakshmi Bhat says:

    Olleya baraha

  5. Deepak Kumar says:

    Baraha Tumba chennagidhe

  6. Smitha Amrithraj says:

    nimmellara prothsahada mathugalige sharanembe -smitha

  7. Krishna Pramod Mudipu says:

    ಸೂಪರ್ ಲೇಖನ

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: