ಬಳಪದ ಕಲ್ಲಿನ ಪಾತ್ರೆಗಳು

Share Button

ಇಂದಿನ ಆಧುನಿಕ ಯುಗದಲ್ಲಿ ದಿನದಿಂದ ದಿನಕ್ಕೆ ತಂತಜ್ಞಾನ ಬದಲಾಗುತ್ತಿದೆ. ತಂತ್ರಜ್ಞಾನದ ಜೊತೆಗೆ ಜನರ ಜೀವನ ಶೈಲಿ, ವೇಷ-ಭೂಷಣ, ಉಡುಗೆ-ತೊಡುಗೆ ಅಷ್ಟೇ ಏಕೆ ಅಡುಗೆ ಮಾಡುವ ಪಾತ್ರೆಗಳು ಬದಲಾಗುತ್ತಿವೆ. ಆದರೆ ಇಂದಿಗೂ ತನ್ನ ಪಾರಂಪರಿಕ ವೈಭವವನ್ನು ಹಾಗೆಯ ಉಳಿಸಿಕೊಂಡು ಬಂದಿರುವ ಕೆಲವೇ ಕೆಲವು ವಸ್ತುಗಳಲ್ಲಿ ಬಳಪದ ಕಲ್ಲಿನ ಪಾತ್ರೆಗಳು ಒಂದು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ವಸ್ತುಪ್ರದರ್ಶನ ಮೈದಾನಕ್ಕೆ ಭೇಟಿ ನೀಡಿದರೆ ನಮಗೆ ಈ ಬಳಪದ ಕಲ್ಲಿನ ಪಾತ್ರೆಗಳ ವಿಶೇಷ ಮಳಿಗೆಯನ್ನು ಕಾಣಬಹುದು. ಮರೆಯಾಗುತ್ತಿರುವ ಅಪರೂಪದ ಈ ಕಲ್ಲಿನ ಪಾತ್ರೆಗಳ ತಯಾರಿ ಕಾಯಕವನ್ನು ಇಂದಿಗೂ ಉಳಿಸಿಕೊಂಡು ಬಂದಿರುವವರಲ್ಲಿ ಒಬ್ಬರಾದ ಮುಹಮ್ಮದ್ ಹೇಳುವಂತೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಅರುವ ಎಂಬ ಪ್ರದೇಶದಲ್ಲಿ ಈ ಬಳಪದ ಕಲ್ಲುಗಳು ದೊರೆಯುತ್ತವೆ. ಭೂಗರ್ಭದಲ್ಲಿ ದೊರೆಯುವ ಈ ವಿಶಿಷ್ಟ ಕಲ್ಲುಗಳನ್ನು ಬೇಕಾದ ಆಕಾರದಲ್ಲಿ ಕೊಯ್ದು ಫಾಲಿಶ್ ಪೇಪರ್‌ನಿಂದ ಉಜ್ಜುವ ಮೂಲಕ ವಿವಿಧ ಪಾತ್ರೆಗಳನ್ನು ತಯಾರಿಸಲಾಗುತ್ತದೆ. ಪ್ರಸ್ತುತ ಐದು ಜನ ಕಾರ್ಮಿಕರು ಕಲ್ಲುಗಳನ್ನು ತೆಗೆಯುವ ಕೆಲಸ ಮಾಡುತಿದ್ದಾರೆ.

ಎಲ್ಲಾ ಕಡೆಗಳಲ್ಲೂ ಇಂದು ಕೆಲಸ ಕಾರ್ಯಗಳು ಯಾಂತ್ರಿಕಮಯವಾಗಿರುವಾಗ ಈ ಬಳಪದ ಕಲ್ಲಿನ ಪಾತ್ರೆಗಳನ್ನು ಮಾತ್ರ ಯಾವುದೇ ಯಾಂತ್ರಗಳನ್ನು ಬಳಸದೆ ಕೈಯಿಂದಲೇ ತಯಾರಿಸಲಾಗುತ್ತದೆ. ಪ್ರತೀ ಪಾತ್ರೆಗಳನ್ನು ರೂಪುಗೊಳಿಸಲು ಅರ್ಧ ಗಂಟೆಯಿಂದ ಒಂದುವರೆ ಗಂಟೆಯವರೆಗೂ ಸಮಯ ತಗುಲುತ್ತದೆ. ಪ್ರಸ್ತುತ ದರ 200 ರಿಂದ 400 ರೂಪಾಯಿಗಳವರೆಗೆ ಈ ಪಾತ್ರೆಗಳನ್ನು ಮಾರಾಟ ಮಾಡಲಾಗುತ್ತದೆ.

ಬೆಳ್ತಂಗಡಿ ತಾಲೂಕಿನಲ್ಲಿ ತಯಾರಾಗುವ ಈ ಪಾತ್ರೆಗಳನ್ನು ಪುತ್ತೂರು, ಕಡಬ, ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಮತ್ತು ಪಕ್ಕದ ಕೊಡಗು ಜಿಲ್ಲೆಯಲ್ಲೂ ಮಾರಾಟ ಮಾಡುತ್ತಾರೆ. ಅಂಗಡಿಗಳಿಗೆ ಹೋಲ್‌ಸೇಲ್ ದರದಲ್ಲಿ ಸರಬರಾಜು ಮಾಡಲಾಗುತ್ತದೆ. ತಿಂಗಳಿಗೆ 40 ರಿಂದ 40 ಪಾತ್ರೆಗಳು ಮಾರಾಟವಾಗುತ್ತವೆ.

ಈ ವಿಶಿಷ್ಟ ಬಳಪದ ಕಲ್ಲಿನ ಪಾತ್ರೆಗಳಲ್ಲಿ ರೊಟ್ಟಿ, ನೀರುದೋಸೆ, ಗುಳಿಯಪ್ಪ, ಓಡುದೋಸೆ ಹೀಗೆ ವಿವಿಧ ತಿಂಡಿಗಳನ್ನು ತಯಾರಿಸುವ ಪಾತ್ರೆಗಳು ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಒಲೆಗಳು ಹೆಚ್ಚಾಗಿರುವುದರಿಂದ ಗ್ಯಾಸ್ ಒಲೆ ಮತ್ತು ಸೌದೆ ಒಲೆಗಳಿಗೆ ಪ್ರತ್ಯೇಖವಾದ ಪಾತ್ರೆಗಳನ್ನೇ ತಯಾರಿಸಿ ಮಾರಲಾಗುತ್ತದೆ. ಕಾಲ ಬದಲಾದರೂ ಈ ಪಾತ್ರೆಗಳ ಬೇಡಿಕೆ ಇಂದಿಗೂ ಕಡಿಮೆಯಾಗಿಲ್ಲ.

ಸುಮಾರು ಹತ್ತು ವರ್ಷಗಳಿಂದ ಧರ್ಮಸ್ಥಳ ದೀಪೋತ್ಸವದಲ್ಲಿ ಇವರು ತಮ್ಮ ಮಾರಾಟ ಮಳಿಗೆಯನ್ನು ತೆರೆಯುತಿದ್ದಾರೆ. ಕೇವಲ ಮಾರಾಟ ಮಾತ್ರವಲ್ಲದೆ ಸ್ಥಳದಲ್ಲೇ ಪಾತ್ರೆಗಳನ್ನು ತಯಾರಿಸುವುದರಿಂದ ಯುವಜನರಿಗೆ ಈ ಪಾರಂಪರಿಕ ಪಾತ್ರೆಗಳ ಬಗ್ಗೆ ಸಂಪೂರ್ಣ ಮಾಹಿತಿಯು ದೊರೆತಂತಾಗುತ್ತದೆ.

ತಮ್ಮ ಪೂರ್ವಜರು ಪ್ರಾರಂಭ ಮಾಡಿದ ಈ ವಿಶಿಷ್ಟ ಕಾಯವನ್ನು ಮುಹಮ್ಮದ್ ಮತ್ತು ಅವರ ತಂಡವರಾದ ಸಂದೀಪ್, ರಾಘವೇಂದ್ರ, ಬಶೀರ್ ಮತ್ತು ಸತೀಶ್ ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯಗಳು ನಾಶವಾಗುತ್ತಿರುವ ಪ್ರಸ್ತುತ ಕಾಲಗಟ್ಟದಲ್ಲಿ ಪ್ರಾಚೀನ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಇವರ ಕೆಲಸ ಮಾತ್ರ ನಿಜಕ್ಕೂ ಶ್ಲಾಘನೀಯ.

-ಹಾರಿಸ್ ಸೋಕಿಲ
ಎಸ್.ಡಿ.ಎಂ ಕಾಲೇಜು ಉಜಿರೆ.

1 Response

  1. Anonymous says:

    Mr.Sunil Hegde, where I can get these items in Bangalore for my kitchen usage, can you please let me know adress & phone numbers.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: