ವೃದ್ಧಾಪ್ಯದಲ್ಲಿ ಕಾಡುವ ‘ಆಲ್ಝೀಮರ್’ ವ್ಯಾಧಿ..

Share Button

ಡಿ.ಕೆ. ಶ್ರೀನಿವಾಸನ್

ಇತ್ತೀಚೆಗೆ  ‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯಲ್ಲಿ ಓದಿದ ಬರಹವೊಂದರ  ಮೊದಲ ವಾಕ್ಯ   ‘ನಮ್ಮ ಅತ್ತೆಗೆ ಇತ್ತೀಚೆಗೆ ತೀರಾ ಮರೆವು, ಬಾಗಿಲು ತೆಗೆದು ರಸ್ತೆಗೆ ಹೋಗುತ್ತಾರೆ, ವಾಪಸ್ಸು ಮನೆಗೆ ಬರಲು ದಾರಿಯೇ ಗೊತ್ತಾಗೊಲ್ಲ’ ನನ್ನ  ಮನಕಲಕಿತು.  ಏನಿದು ? ವಯೋಸಹಜವಾಗಿ ಅರಳು ಮರಳು ರೂಪದಲ್ಲಿ ಬರುವ ಮರೆವಿನ ಸಮಸ್ಯೆ ಇದ್ದವರೆಲ್ಲಾ ಹೀಗೆ ಮನೆಯಿಂದ ಹೊರಗೆ ಹೋಗಿ ಮರಳಿ ಬರಲು ದಾರಿಯೇ ತಿಳಿಯದ ಹಾಗೆ ಇರುತ್ತಾರೆಯೇ ? ಎಲ್ಲ ಪ್ರಸಂಗಗಳಲ್ಲಿ ಅಲ್ಲದಿದ್ದರೂ ಹಲವು ವೇಳೆ ಇದು ವಾಸ್ತವ.

ಹೌದು. ಇತ್ತೀಚೆಗೆ ಇದೊಂದು ವಯೋವೃದ್ಧರಿಗೆ ದೊಡ್ಡ ಸಮಸ್ಯೆಯಾಗಿರುವ ಮಾನಸಿಕ/ಮೆದುಳಿನ ವ್ಯಾಧಿ. ವಯೋವೃದ್ಧರ ಸಂಖ್ಯೆಯಲ್ಲಿ ಶೇಕಡಾ 10  ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲು ಮರೆಗುಳಿತನದಿಂದ ಪ್ರಾರಂಭವಾಗಿ ನಂತರ ಮುಂದುವರೆದು, ಬುದ್ಧಿ ಸಾಮರ್ಥ್ಯದ ಸವೆತವಾಗಿ ದುಃಸ್ಥಿತಿಗೆ ತಲುಪುವ ವ್ಯಾಧಿ. ಇದನ್ನು ಸ್ಥೂಲವಾಗಿ ‘ಡಿಮಿನ್ಷಿಯಾ’ ಎಂದೂ, ಪ್ರಕೃತವಾಗಿ ‘ಆಲ್ಝೀಮರ್’ ಎಂತಲೂ ಹೇಳುತ್ತಾರೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ‘ವಿಶ್ವ ಆಲ್ಝೀಮರ್’ ದಿನವನ್ನು 21  ನೇ ತಾರೀಖು ಆಚರಿಸುತ್ತಾರೆ. ‘ನೆನಪಿಗೊಂದು ನಡಿಗೆ’ ಎಂಬ ಜಾಗೃತಿ ಜಾಥಾವನ್ನೂ ಆಯೋಜಿಸುತ್ತಾರೆ.

ಡಿಮಿನ್ಷಿಯಾ ಎನ್ನುವುದು ಸಮಾನ ಲಕ್ಷಣಗಳುಳ್ಳ ಹಲವು ವ್ಯಾಧಿಗಳ ಒಂದು ಸಮೂಹ ಸೂಚಕ (Umbrella Word) ಪದ. ಈ ಡಿಮಿನ್ಷಿಯಾ ಗುಂಪಿನ ವ್ಯಾಧಿಗಳು ಹಲವು ಇದ್ದು, ಬೇರೆ ಬೇರೆ ಕಾರಣಗಳಿಂದ ಉಂಟಾಗುತ್ತೆ. ಕೆಲವು ಗುಣಪಡಿಸಬಹುದು, ಕೆಲವು ಸಾಧ್ಯವಿಲ್ಲ. ಈ ಸಮೂಹದಲ್ಲಿ ಅತಿ ಮುಖ್ಯವಾದದ್ದು ಆಲ್ಝೀಮರ್ ಖಾಯಿಲೆ. ಇದು ಡಿಮಿನ್ಷಿಯಾ ಗುಂಪಿನಲ್ಲಿ ಶೇ. 50 ಕ್ಕಿಂತ ಹೆಚ್ಚು ಇದೆ. ಹಲವು ವರ್ಷಗಳ ಸಂಶೋಧನೆಯ ನಂತರ, ಈ ಖಾಯಿಲೆಗೆ ನಿಖರವಾದ ಕಾರಣವೇನೋ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಮೆದುಳಿನ ನರಮಂಡಲದಲ್ಲಿ ನರಕೋಶಗಳ ಒಂದಕ್ಕೊಂದರ ಸಂಪರ್ಕ ತಾಣದಲ್ಲಿ ಅಸಹಜ ಹಾಗೂ ಮಾರಕವಾದ ಅಮಿಲಾಯ್ಡ್ ಬೀಟ ಮತ್ತು ಟಾವ್ ಎಂಬ ಪ್ರೋಟೀನುಗಳು ಆವರಿಸಿ ನರಕೋಶಗಳ ಸಂದೇಶವಾಹಕ ಕ್ರಿಯೆಗೆ ಅಡ್ಡಿಯಾಗಿ, ನರಕೋಶಗಳು ಕುಂಟಿತಗೊಂಡು ನಂತರ ನಶಿಸಿಹೋಗುತ್ತಿರುತ್ತವೆ. ಇಷ್ಟು ಮಾಹಿತಿ ತಿಳಿದರೂ ಇದನ್ನು ನಿವಾರಿಸಲು ಔಷಧಿಗಳು ಇನ್ನೂ ಪ್ರಾಯೋಗಿಕ ಹಂತದಲ್ಲಿವೆ. ಆದರೂ ಈ ವ್ಯಾಧಿಯನ್ನು ಪ್ರಾರಂಭದ ಹಂತದಲ್ಲೇ ಗುರುತಿಸಿದರೆ ಅದರ ಪ್ರಖರತೆಯನ್ನು ಕಡಿಮೆ ಮಾಡಬಹುದು.

ಹಾಗಾಗಿ ಈ ವ್ಯಾಧಿಯ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ತಿಳಿದಿರಬೇಕು. ವಯಸ್ಸು ಹೆಚ್ಚಾಗುತ್ತಾ ಹೋದಂತೆ ದೇಹದ ಎಲ್ಲಾ ಅಂಗಗಳ ಸಾಮರ್ಥ್ಯವು ಕಡಿಮೆಯಾಗುವುದು ಪ್ರಕೃತಿ ನಿಯಮ. Wear and Tear. ಅದೇ ರೀತಿ ಮೆದುಳು ಕೂಡ ಸ್ವಲ್ಪ ಮಟ್ಟಿಗೆ ತೀಕ್ಷ್ಣತೆ ಕಳೆದುಕೊಳ್ಳುತ್ತೆ. ಪ್ರಾಯದಲ್ಲಿದ್ದಷ್ಟು ಚುರುಕುತನ ಇಲ್ಲದಿರಬಹುದು. ಸ್ಮರಣೆಯು ಕಡಿಮೆಯಾಗಬಹುದು. ಇವೆಲ್ಲವೂ ವಯೋ ಸಹಜ.

ಆದರೆ, ಬದುಕಿನ ಅತ್ಯಂತ ಮೂಲ ವಿಷಯಗಳನ್ನೇ ಮರೆತುಬಿಡುವುದು, ಎಂದರೆ ಸುಮ್ಮನೆಯಾ ? ತಿನ್ನುವುದು, ಮಾತನಾಡುವುದು, ಕಲಿತ ಭಾಷೆ, ಕೌಶಲವನ್ನು ಮರೆಯುವುದು, ಕುಟುಂಬದ ಸದಸ್ಯರುಗಳ ಹೆಸರುಗಳನ್ನೇ ಮರೆಯುವುದು, ದಿನನಿತ್ಯದ ಕೆಲಸಗಳಿಗೆ ಪರಾವಲಂಬಿಯಾಗುವುದು, ತನ್ನ ಮನೆಯನ್ನೇ ಮರೆತು ಆಚೆ ಹೋಗಿ ಮರಳಿ ಬಾರದಿರುವುದು, ಮೂಲಸ್ವಭಾವವೇ ಅಳಿಸಿ ಮುಂಗೋಪಿ, ಹಠಮಾರಿ ಆಗುವುದು, ಈ ತರಹದ ಸಮಸ್ಯೆ ಉಂಟಾದರೆ ಬಹಳ ಗಂಭೀರ ವ್ಯಾಧಿ ಎಂದು ಪರಿಗಣಿಸಬೇಕಾಗುತ್ತದೆ.

ನಿಮಗನಿಸಿರಬಹುದು, ಹಲವು ವ್ಯಾಧಿಗಳ ಜೊತೆಗೆ ಇದೂ ಒಂದು, ಯಾರಿಗೋ ಬರುವ ವ್ಯಾಧಿಯ ಬಗ್ಗೆ ಎಲ್ಲರೂ ಏಕೆ ತಲೆಕೆಡಸಿಕೊಳ್ಳಬೇಕು ಅಂತ. ಆದರೆ ಇದು ಅಪರೂಪಕ್ಕೆ ಬರುವ, ಯಾರಿಗೋ ಅಲ್ಲಲ್ಲಿ ವಿರಳವಾಗಿ ಕಾಣುವ ವ್ಯಾಧಿಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ವಯೋವೃದ್ಧರಿಗೆ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಜನಸಮುದಾಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ವ್ಯಾಧಿಯಾಗಿ ಎಪಿಡೆಮಿಕ್ (Epidemic) ರೂಪ ತಾಳಿದೆ.  ಈ ವ್ಯಾಧಿಯ ವಿಷಯಕ್ಕೆ ಹೋಗುವ ಮುಂಚೆ, ನೆನಪು-ಮರೆವು ಇವುಗಳು ನಮ್ಮ ಜೀವನದಲ್ಲಿ ಎಂತಹ ನಿರ್ಣಾಯಕ ಪಾತ್ರ ವಹಿಸುತ್ತೆ ಎಂಬುದನ್ನು ತಿಳಿಯೋಣ.

ನಮ್ಮ ಜೀವನ ಅಂತ ಹೇಳ್ತೀವಿ. ಏನಿದು ಜೀವನ ? ಇದರ ಕಂಟೆಂಟ್ ಏನು ? ಹುಟ್ಟು ಸಾವುಗಳ ಮಧ್ಯೆ ಇರುವ ಅಂತರದಲ್ಲಿ ಉಂಡಿದ್ದು, ಕಂಡಿದ್ದು, ಕೇಳಿದ್ದು, ಹೆಣಗಿದ್ದು, ನೋವು-ನಲಿವು, ಸಂಬಂಧಗಳು, ಕಲಿಕೆ, ಕನಸುಗಳು, ಕಲ್ಪನೆಗಳು ಇವೆಲ್ಲದರ ಸಂವೇದನೆ ; ಅದರಿಂದಾಗುವ ಅನುಭವಗಳೇ ‘ನೆನಪು’ಗಳಾಗಿ ಮೆದುಳಿನ (ಮನಸ್ಸಿನ) ಅಂತರಾಳದಲ್ಲಿ ದಾಖಲಾಗುತ್ತವೆ. ಮುಂದೆ ಯಾವುದೇ ಸಂದರ್ಭದಲ್ಲಿ ಈ ದಾಖಲೆಗಳನ್ನು ಮರುಸ್ಮರಣೆ (Retrieve) ಮಾಡಿಕೊಂಡು ಮುಂದಿನ ಜೀವನ ನಿರ್ವಹಣೆಗೆ ಸಹಾಯಕವಾಗಿ ಪಡೆಯಬಹುದು.

ಈ ನೆನಪುಗಳು ಜೀವನ ನಿರ್ವಹಿಸುವ ಸಾಮರ್ಥ್ಯ ತಂದುಕೊಡುತ್ತೆ. ಹೇಗೆಂದರೆ ದಾಖಲಾದ, ಕಲಿತ ಭಾಷೆಯಾಗಲೀ, ಕೌಶಲವಾಗಲೀ, ತಿಳುವಳಿಕೆಯಾಗಲೀ, ಇನ್ನೊಂದು ಸಂದರ್ಭದಲ್ಲಿ ಮತ್ತೆ ಅರಿವಿಗೆ ತಂದುಕೊಂಡು ಅದರ ತಿಳುವಳಿಕೆಯ ಪಾಠ ಅರಿತು ಕಾರ್ಯನಿರ್ವಹಿಸುತ್ತೇವೆ.

ಇಂತಹ ಜೀವನದ ಸೆಲೆಯಾದ ನೆನಪೇ ಕ್ಷೀಣಿಸುತ್ತಾ ಅಳಿಸಿ ಹೋಗುತ್ತೆ ಎಂದಾಗ ಇನ್ನು ಜೀವನ ಎಷ್ಟು ದುಃಸ್ಥಿತಿ ಅಲ್ಲವೇ ?
ಹೀಗಿರುವಾಗ ಸಾಲದೆಂಬಂತೆ ನೆನಪಿನ ಜೊತೆ ಮೂಲ ಸ್ವಭಾವವೇ ಕುಂಠಿತವಾಗಿ ವಿವೇಚನೆಯೇ, ಬುದ್ಧಿ ಸಾಮರ್ಥ್ಯವೇ ಇಲ್ಲದೆ, ದಿನನಿತ್ಯದ ಬದುಕಿಗೆ ಪರಾವಲಂಬಿಯಾದಾಗ ಇನ್ನೆಂತಹ ದುರಂತ ?

ಸಾಮಾನ್ಯವಾಗಿ 60 ರಿಂದ 65 ವರ್ಷಗಳ ನಂತರ ಈ ಆಲ್ಝೀಮರ್ ಖಾಯಿಲೆ ಕಾಣಿಸಿಕೊಂಡು ಸುಮಾರು 75-80 ವರ್ಷದ ಹೊತ್ತಿಗೆ ಉಲ್ಭಣವಾಗುತ್ತದೆ. ಅಂಕಿ ಅಂಶಗಳ ಪ್ರಕಾರ ಇಡೀ ವಿಶ್ವದಲ್ಲಿ ಇದು ಎಲ್ಲಾ ಸಮುದಾಯಗಳಲ್ಲಿ ಕಾಣುತ್ತಿದ್ದು, ವಿಶ್ವದ ಮಟ್ಟದಲ್ಲಿ ಸುಮಾರು ೫೦ ಕೋಟಿ ಜನರಿಗೆ ಈ ವ್ಯಾಧಿಯಿದೆಯಂತೆ. 2050 ರ ಹೊತ್ತಿಗೆ ಇದು ಮೂರು ಪಟ್ಟು ಆಗುವ ಅಂದಾಜಿದೆ.

ಭಾರತದಲ್ಲೇ ಈಗ ಸುಮಾರು 1.20  ಕೋಟಿ ಡಿಮೆನ್ಷಿಯ ರೋ50ಗ ತಗುಲಿದ ರೋಗಿಗಳಿದ್ದಾರೆ. ಈಗಾಗಲೇ ವ್ಯಾಧಿ ಉಲ್ಭಣಗೊಂಡು ಅಂತಿಮ ಹಂತದಲ್ಲಿರುವವರೇ ಸುಮಾರು 50 ಲಕ್ಷ ಜನರಂತೆ. ಇದೂ ಕೂಡ 2030 ರ ಹೊತ್ತಿಗೆ ದುಪ್ಪಟ್ಟು ಆಗುತ್ತದಂತೆ. ಮೈಸೂರು ನಗರದಲ್ಲೇ ಸುಮಾರು 3000 ಹಾಗೂ ಬೆಂಗಳೂರಿನಲ್ಲಿ ಸುಮಾರು 30,000 ರೋಗಿಗಳು ಗುರುತಿಸಿಕೊಂಡಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಮೊದಮೊದಲು ನೆನಪು ಅಳಿಸಿ ಸ್ಮರಣೆ ಶಕ್ತಿ ಕುಂದುವುದು ನಂತರ ವ್ಯಾಧಿಯು ಉಲ್ಭಣಗೊಂಡು ವಿಕೋಪಕ್ಕೆ ತಿರುಗುತ್ತದೆ. ಕೊನೆಗೆ ಬುದ್ಧಿ ಭ್ರಮಣೆಗೂ ಒಳಗಾಗಬಹುದು (Delerium).

ಈ ವ್ಯಾಧಿಯ ಅಪಾಯವೆಂದರೆ, ಮೊದಮೊದಲು ಕಾಣಿಸಿಕೊಳ್ಳುವ ಮರೆಗುಳಿತನವನ್ನು ಕೇವಲ ವಯೋಸಹಜ ‘ಅರುಳು-ಮರಳು’ ಎಂದುಕೊಂಡು ಉದಾಸೀನದಿಂದ ಸುಮ್ಮನಾಗಿಬಿಡುತ್ತೇವೆ. ವಯೋಸಹಜ ಮರೆಗುಳಿತನವೂ ಹಾಗೂ ಆಲ್ಝೀಮರ್ ವ್ಯಾಧಿಯ ಪ್ರಾರಂಭದ ಹಂತದಲ್ಲಿ ಕಾಣಿಸಿಕೊಳ್ಳುವು ಮರೆಗುಳಿತನವು ಒಂದೇ ರೀತಿ ಕಾಣುತ್ತೆ. ಆದರೆ, ಈ ಡಿಮೆನ್ಷಿಯ ವ್ಯಾಧಿಯ ಪ್ರಾರಂಭದಲ್ಲಿ ಕಾಣುವ ಮರೆಗುಳಿತನಕ್ಕೂ ವಯೋಸಹಜದ ‘ಮರೆಗುಳಿತನ’ಕ್ಕೂ ವ್ಯತ್ಯಾಸ ಗುರುತಿಸುವುದು ಬಹಳ ಕಷ್ಟ, ಆದರೆ ಬಹಳ ಮುಖ್ಯ ಕೂಡ. ಆದ್ದರಿಂದ ವಯೋವೃದ್ಧರಿಗೆ ಮರೆಗುಳಿತನ ಮತ್ತು ಇನ್ನು ಕೆಲವು ಲಘು ಮಾರ್ಪಾಡುಗಳು ಕಂಡಕೂಡಲೆ ನರರೋಗ ತಜ್ಞರ/ಮನೋವೈದರ ಹತ್ತಿರ ಪರೀಕ್ಷೆ ಮಾಡಿಸಿ ಈ ಮಾರ್ಪಾಡಿನ ಸ್ವರೂಪ, ಇದು ವಯೋಸಹಜವೇ ಅಥವಾ ಡಿಮೆನ್ಷಿಯಾ/ಆಲ್ಝೀಮರ್ ರೋಗಕ್ಕೆ ಪೂರ್ವ ಸೂಚನೆಯೋ ಎಂಬುವುದನ್ನು ಅರಿಯುವುದು ಒಳಿತು.

ಈ ವ್ಯಾಧಿಗೆ ಸದ್ಯಕ್ಕೆ ಯಾವ ಮದ್ದೂ ಇಲ್ಲದಿದ್ದರೂ ಇತ್ತೀಚಿನ ಸಂಶೋಧನೆಗಳ ಪ್ರಕಾರ ಈ ವ್ಯಾಧಿಯ ಪ್ರಾರಂಭದ ಹೊತ್ತಿನಲ್ಲೇ ಅದರ ಸ್ವರೂಪ, ಸೂಚನೆಗಳನ್ನು ನಿಖರವಾಗಿ ದೃಢಪಡಿಸುವ ಪರೀಕ್ಷೆಗಳು ಮಾನ್ಯವಾಗಿವೆ. ಪ್ರಾರಂಭದ ಹಂತದಲ್ಲೇ ತಜ್ಞರ ಸಲಹೆ ತೆಗೆದುಕೊಂಡರೆ ವ್ಯಾಧಿಯ ಪ್ರಖರತೆಯನ್ನು ಮುಂದೂಡಬಹುದು.ಇನ್ನೊಂದು ಮಾಹಿತಿ ಏನೆಂದರೆ, ಕೆಲವು ಅಸ್ಪಷ್ಟ ಕಾರಣಗಳಿಗಾಗಿ ಈ ವ್ಯಾಧಿ ಬಂದರೂ, ನಮ್ಮ ಜೀವನಶೈಲಿ ದೋಷದಿಂದ (ದೇಹ, ಮೆದುಳು ಚಟುವಟಿಕೆಯಿಲ್ಲದೆ, ನಿಷ್ಕ್ರಿಯವಾಗಿ) ಹಾಗೂ ಆಹಾರದ ಅಸಮತೋಲನದಿಂದಲೂ ಉಲ್ಭಣ ಸ್ಥಿತಿಗೆ ಹೋಗಬಹುದು.ಈ ವ್ಯಾಧಿಯ ಬಗ್ಗೆ ಯಾಕಿಷ್ಟು ಭಯ ಎಂದೆನಿಸಬಹುದು. ಇದು ಇನ್ನಿತರ ರೋಗಗಳಂತೆ ದೇಹಕ್ಕೆ ಸೀಮಿತವಾಗಿ ಬರುವ ರೋಗವಲ್ಲ.

ನಮ್ಮ ಮನಸ್ಸನ್ನು, ವ್ಯಕ್ತಿತ್ವವನ್ನು, ಅಸ್ತಿತ್ವವನ್ನೇ, ಅಸ್ತಿತ್ವದ ಅರಿವನ್ನೇ (Identity – Sense of Self) ಇಲ್ಲವಾಗಿಸುವ, ಬದುಕಿದ್ದೂ, ಪ್ರಜ್ಞೆಯಿದ್ದೂ, ಅರಿವು ವಿವೇಚನೆಯಿಲ್ಲದೆ, ಜೀವನವನ್ನು ಶೂನ್ಯವಾಗಿಸುವ ವ್ಯಾಧಿ ಇದು. ದೈಹಿಕ ನಿಶ್ಚಲತೆ, ನಿಷ್ಕ್ರಿಯತೆ ಏನೂ ಇರಬೇಕೆಂತಿಲ್ಲ. ಆದರೆ ಮೆದುಳಿನ ಒಂದು ಭಾಗವಾದ ಗ್ರೇ ಮ್ಯಾಟರ್ ಸವೆದು, ನರಕೋಶಗಳು ರಚನೆಗೆಟ್ಟು, ಡೀಜನರೇಟ್ ಆಗಿ ರೋಗಿಯ ಸ್ಮರಣೆ ಕುಂಠಿತವಾಗುವ ಜೊತೆಗೆ ಕೌಶಲ, ಭಾಷೆ, ವಿವೇಚನೆ, ವ್ಯಕ್ತಿತ್ವ, ಸ್ವಭಾವ ಎಲ್ಲವನ್ನೂ ಕುಂಠಿತವಾಗಿಸುತ್ತದೆ. ತನ್ನ ಕುಟುಂಬದವರ ಹೆಸರು, ಸಂಬಂಧವನ್ನೇ ಮರೆಯುತ್ತಾನೆ. ತನ್ನ ಹೆಸರನ್ನೇ ಮರೆಯುತ್ತಾನೆ. ಮನೆಯಿಂದ ಹೊರೆಗೆ ಹೋಗಿ ಮರಳಿ ಬರುವ ದಾರಿಯೇ ಮರೆಯುತ್ತಾನೆ. ಮುಂಗೋಪಿ, ಹಠಮಾರಿಯಾಗಲು ಬಯಸುತ್ತಾನೆ. ಕೊನೆಗೆ ಬುದ್ಧಿ ಭ್ರಮಣೆಗೂ (ಡೆಲೀರಿಯಂ) ಒಳಗಾಗಬಹುದು. ರೋಗಿಯು ಸಮಸ್ಯೆಯಾಗಿ ದಿನನಿತ್ಯದ ಬದುಕಿನಲ್ಲಿ ಕುಟುಂಬದ ಸದಸ್ಯರಿಗೆ ಅತೀವ ಆತಂಕ ತರುತ್ತಾನೆ. ತಾನು ವ್ಯಾಧಿಗ್ರಸ್ಥ ಎಂದು ಅವನಿಗೆ ಅನಿಸುವುದೇ ಇಲ್ಲ. ಇದಕ್ಕೆ ‘ಅನೋಸೋಗ್ನೋಸಿಯಾ’ (Anosognosia) ಎಂದು ಕರೆಯುತ್ತಾರೆ.

ವ್ಯಕ್ತಿಯ ದೈಹಿಕ ಖಾಯಿಲೆಗಳು ಆ ವ್ಯಕ್ತಿಗೆ ಮಾತ್ರ ಕಂಟಕಪ್ರಾಯವಾಗುತ್ತದೆ ಅಷ್ಟೆ. ಇಷ್ಟನೆಂಟರು, ಮನೆಯವರು, ಹೀಗಾಯಿತಲ್ಲಾ ಎಂದು ಕೊರಗಬಹುದು. ಹೆಚ್ಚೆಂದರೆ, ಖಾಯಿಲೆಗಳ ಆರೈಕೆಗೆ ಆರ್ಥಿಕವಾಗಿ ಹೊರೆಯಾಗಬಹುದು. ಆದರೆ ಮನೆಯಲ್ಲೊಬ್ಬರಿಗೆ ಅದೂ ವಯೋವೃದ್ಧರಿಗೆ ಬುದ್ಧಿ ಸಾಮರ್ಥ್ಯದ ಕ್ಷೀಣತೆಯಿಂದ ಮಾನಸಿಕ ಖಾಯಿಲೆಯಂತಹುದೇನಾದರೂ ಬಂದುಬಿಟ್ಟರೆ ಇಡೀ ಮನೆಯವರು ಮುಳ್ಳಿನ ಮೇಲಿದ್ದಂತಾಗುತ್ತದೆ. ಆರ್ಥಿಕ ಹೊರೆಯ ಜೊತೆ ಈ ಮಾನಸಿಕ ರೋಗಿಯನ್ನು ನಿಭಾಯಿಸುವ ಹೊಣೆ ಅಸಹನೀಯವಾಗುತ್ತದೆ. ನುಂಗಲಾರದ, ಉಗುಳಲೂ ಬಾರದ ಬಿಸಿ ತುಪ್ಪದಂತಾಗುತ್ತದೆ. ಎಲ್ಲರ ನೆಮ್ಮದಿಯೂ ಕೆಡುತ್ತದೆ. ಸಂಸಾರದ ಎಲ್ಲರ ಕಾರ್ಯನಿರ್ವಹಣಾ ಚಾಕಚಕ್ಯತೆಯೂ ಮೊಂಡಾಗುತ್ತದೆ. ದೈಹಿಕ ಖಾಯಿಲೆಯಾದರೆ, ಆರೈಕೆಗೆ ಹಣವಾದರೂ ತೆತ್ತು ಶುಷ್ರೂಷೆಗೆ ಇನ್ನೊಬ್ಬರಿಗೆ ವಹಿಸಬಹುದು. ಆದರೆ ಮಾನಸಿಕ ಅಸಮತೋಲನವಾದವರಿಗೆ ಸಹನೆಯಿಂದ, ಸಹಾನುಭೂತಿಯಿಂದ ನೋಡಿಕೊಳ್ಳಲು ಮನೆಯವರಿಗೇ ಕಷ್ಟವಾದಾಗ ಹೊರಗಿನವರು ಪ್ರಾಮಾಣಿಕವಾಗಿ ಆಸ್ಥೆಯಿಟ್ಟು ನೋಡಿಕೊಳ್ಳುತ್ತಾರೆಯೇ ? ಯಥೇಚ್ಛ ಖರ್ಚು ಮಾಡಿಯೂ, ಖಾಯಿಲೆಯ ವ್ಯಕ್ತಿಯ ಜೊತೆ ಈ ಅನಾಸಕ್ತ ಶುಷ್ರೂಷಕರನ್ನು ನಿರ್ವಹಿಸುವ ದುಪ್ಪಟ್ಟು ಜವಾಬ್ದಾರಿ.

ಒಬ್ಬ ಡಿಮೆನ್ಷಿಯ/ಆಲ್ಝೀಮರ್ ರೋಗಿಯನ್ನು ನಿಭಾಯಿಸಬೇಕಾದರೆ ವೈಯುಕ್ತಿಕವಾಗಿ ವಾರ್ಷಿಕ ಸುಮಾರು ಎರಡು  ಲಕ್ಷ ರೂ. ಆದರೂ ಬೇಕಾಗುತ್ತದೆ. ಮದ್ಯಮವರ್ಗದವರಿಗೆ ಇದು ನರಕ ಸದೃಶವೇ ಸರಿ. (ಇಡೀ ಭಾರತದ ಹಿನ್ನೆಲೆಯಲ್ಲಿ ನೋಡಿದರೆ, ಈ ಡಿಮೆನ್ಷಿಯ ರೋಗಿಗಳಿಗೆ ಉಪಚಾರ ಮಾಡಲು ಸರ್ಕಾರವೇ ವಾರ್ಷಿಕ 15,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆಯಂತೆ. ಆದ್ದರಿಂದ ಡಿಮೆನ್ಷಿಯ/ಆಲ್ಝೀಮರ್ ರೋಗಿಗೆ ಸಂಬಂಧಪಟ್ಟ ಮನೆಯವರು, ಶುಷ್ರೂಷಕರು ಈ ವ್ಯಾಧಿಯ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆಯುವುದು ಬಹಳ ಮುಖ್ಯ.

ಈ ಮರೆಗುಳಿತನ ವಯೋಸಹಜವಾಗಿ ಬಂದರೆ ಬುದ್ಧಿ ಸಾಮರ್ಥ್ಯವು ಏನೂ ಕುಂದಿರುವುದಿಲ್ಲ. ಈಗ ಮರೆಯುತ್ತಾರೆ ಮತ್ತೆ ಸ್ವಲ್ಪ ಹೊತ್ತಿನಲ್ಲಿ ನೆನಪು ಮಾಡಿಕೊಳ್ಳುತ್ತಾರೆ. ಒಮ್ಮೊಮ್ಮೆ ಹೆಸರು ಮರೆಯಬಹುದು, ಆದರೆ ಸಂಬಂಧ ಮರೆಯುವುದಿಲ್ಲ. ದಿನನಿತ್ಯದ ಕೆಲಸಗಳಿಗೆ ಪರಾವಲಂಬಿಯಾಗುವುದಿಲ್ಲ. ವಿವೇಚನೆ ಇರುತ್ತೆ. ಮನೆ ಬಿಟ್ಟು ಹೋಗಿ ಕಳೆದು ಹೋಗುವುದಿಲ್ಲ. ಈ ಸಮಸ್ಯೆಗಳು ಯಾವ ವಿಕೋಪಕ್ಕೂ ಹೋಗುವುದಿಲ್ಲ.

ಆದರೆ ಈ ಡಿಮೆನ್ಷಿಯ/ಆಲ್ಝಿಮರ್ ವ್ಯಾಧಿಯ ಪ್ರಾರಂಭದ ಹಂತದಲ್ಲಿ ಕಾಣುವ ‘ಮರೆಗುಳಿತನ’ಕ್ಕೂ ವಯೋಸಹಜವಾದ ಮರೆಗುಳಿತನಕ್ಕೂ ವ್ಯತ್ಯಾಸ ಗುರುತಿಸುವುದು ಬಹಳ ಕಷ್ಟ. ಇಷ್ಟೇನಾ ಅಂತ ಉಪೇಕ್ಷೆ ಮಾಡಿ ಸುಮ್ಮನಿದ್ದು, ನಂತರ ಈ ಸಮಸ್ಯೆ ಉಲ್ಭಣಗೊಂಡಾಗ ಪರಿತಪಿಸುತ್ತಾರೆ. ಏಕೆಂದರೆ ಈ ವ್ಯಾಧಿಯ ಲಕ್ಷಣಗಳು ಸ್ಪಷ್ಟವಾಗಿ ಹೊರಸೂಸಬೇಕಾದರೆ ಸುಮಾರು 15 ರಿಂದ 20 ವರ್ಷಗಳೇ ಬೇಕು. ಅಲ್ಲಿಯವರೆಗೂ ಗೌಣವಾಗಿ ರೋಗಿಗೆ ತಿಳಿಯದಂತೆ, ಒಳಗೊಳಗೆ ಕ್ರಿಯಾಶೀಲವಾಗಿ, ಗೆದ್ದಲು ಹುಳುವಂತೆ ಒಳಗೊಳಗೇ ಕೊರೆಯುವಂತೆ, ಮುಂದುವರಿಯುತ್ತದೆ.

ಈ ಆಲ್ಝೀಮರ್ ಖಾಯಿಲೆ ಮೊದಲು ಲಘುತರವಾಗಿ ಲಕ್ಷಣ ಹೊಂದಿರುವ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ Mild Cognitive Impairment (MCI) ಎಂದು ಕರೆಯುತ್ತಾರೆ. ನಂತರ ಮುಂದುವರಿದು ತೀವ್ರತರವಾದ ವ್ಯಾಧಿಯಾಗಿ ಪರಣಮಿಸುತ್ತೆ.

ಆದ್ದರಿಂದ ವಯೋವೃದ್ಧರಿಗೆ ಮರೆಗುಳಿತನ ಮತ್ತು ಇನ್ನೂ ಕೆಲವು ಲಘು ಮಾರ್ಪಾಡುಗಳು ಕಂಡಕೂಡಲೆ ನರರೋಗ ತಜ್ಞರ ಹತ್ತಿರ ಪರೀಕ್ಷೆ ಮಾಡಿಸಿ ಈ ಮಾರ್ಪಾಡಿನ ಸ್ವರೂಪ ಅರಿಯುವುದು ಒಳಿತು. ಇದರಲ್ಲಿ Mini Mental Status Assessment (MMSA) ಪರೀಕ್ಷೆ ಪ್ರಪ್ರಥಮ ಹಾಗೂ ಬಹಳ ಉಪಯುಕ್ತ. ಈ ಮರೆಗುಳಿತನವು ವಯೋಸಹಜವಾಗಿದ್ದರೆ ಅಷ್ಟೇನು ಆತಂಕವಿಲ್ಲ. ಆದರೆ ಇದು ಆಲ್ಝೀಮರ್ ಖಾಯಿಲೆಯ ಮೊದಲ ಹಂತ ಎಂದು ಸೂಚನೆ ಸಿಕ್ಕಿದರೆ, ಮುಂದುವರಿದು, ನರವಾಹಕ ಕ್ರಿಯೆಗೆ ಅಡ್ಡಿಪಡಿಸುತ್ತಿರುವ ಅಸಹಜ ಪ್ರೋಟೀನ್‌ಗಳ ಪತ್ತೆಗೆ ರಕ್ತ ಪರೀಕ್ಷೆ ಹಾಗೂ PET Scan ಮಾಡಿಸಿ ಇನ್ನೂ ಖಚಿತಪಡಿಸಿಕೊಳ್ಳಬಹುದು.

ಈ ವ್ಯಾಧಿಯನ್ನು ಗುಣಪಡಿಸುವ, ನಿಖರವಾದ ಔಷಧಿಗಳಾಗಲೀ, ಇತರೆ ಉಪಚಾರಗಳಾಗಲೀ ಪ್ರಸ್ತುತಕ್ಕೆ ಇಲ್ಲದಿದ್ದರೂ, ಇದರ ವಿಷಯದಲ್ಲಿ ವಿಜ್ಞಾನಿಗಳು ಬಹಳಷ್ಟು ಸಂಶೋಧನೆಗಳನ್ನು ಕೈಗೊಂಡು ಆಶಾದಾಯಕವಾಗಿದ್ದಾರೆ. ವ್ಯಾಧಿಗ್ರಸ್ಥ ಆದಷ್ಟು ಸ್ವಾವಲಂಬಿಯಾಗಿ, ನೆಮ್ಮದಿಯಾಗಿ ಬದುಕಲು ಅನುಕೂಲತೆಗಳನ್ನು ಮನೆಯವರು ಮಾಡಿಕೊಟ್ಟು, ಆತನಲ್ಲಿ ಅಳಿದುಳಿದ ಬುದ್ಧಿಶಕ್ತಿ, ಚತುರತೆಗಳನ್ನು ಉಪಯೋಗಿಸಿಕೊಂಡು ಆತ ಮನೆಯವರಿಗೆ ಹೆಚ್ಚು ಹೊರೆಯಾಗದಂತೆ ಜೀವಿಸಲು ಪ್ರೋತ್ಸಾಹ ಕೊಡಬೇಕಾಗುತ್ತದೆ. ಮನೆಯವರ ಸಂಯಮ, ಸಹನೆ, ಸಹಾನುಭೂತಿ ಬಹಳ ಮುಖ್ಯ.

ಜೊತೆಗೆ ಮೆದುಳು ನಶಿಸಿ ಹೋಗದ ಹಾಗೆ, ತೀವ್ರತೆ ಕಡಿಮೆಯಾಗಿಸುವ ಅನೇಕ ಮಾರ್ಗಗಳು, ಜೀವನ ಶೈಲಿಯ ಕೆಲವು ದೋಷರಹಿತ ಮಾರ್ಪಾಡುಗಳು:.

  • ದೇಹ, ಮೆದುಳು ಸದಾ ಚಟುವಟಿಕೆಗಳಿಂದ ತೊಡಗಿಸಿಕೊಳ್ಳುವ ಉತ್ತೇಜನಕಾರಿಯಾದ ಯೋಗ, ಧ್ಯಾನ, ಪ್ರಾಣಾಯಾಮ ಇತ್ಯಾದಿ,
  • ಒಂಟಿಯಾಗಿದ್ದು ವ್ಯಾಕುಲಗೊಳ್ಳುವ ಬದಲು ಸಮಾಜದ ಸಹೃದಯ ಜನರೊಂದಿಗೆ ಸಂಬಂಧ ಸಂಪರ್ಕಗಳನ್ನು ಇರಿಸಿಕೊಳ್ಳುವುದು,
  • ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗುವ ಆಹಾರ ಪೌಷ್ಠಿಕಾಂಶಗಳನ್ನು ಅಗತ್ಯವಾಗಿ ಪೂರೈಸುವುದು ಎಲ್ಲವೂ ವ್ಯಾಧಿಯ ತೀವ್ರತೆಯನ್ನು ಮುಂದೂಡುತ್ತದೆ.

 

-ಡಿ.ಕೆ. ಶ್ರೀನಿವಾಸನ್ , ಮೈಸೂರು

6 Responses

  1. Hema says:

    ಉತ್ತಮ ಮಾಹಿತಿಯುತವಾದ ಬರಹ.. ತಾವು ನನ್ನ ಲೇಖನದ ಸಾಲನ್ನು ಉದಾಹರಿಸಿ ಬರೆದಿದ್ದುದು ಸಂತಸವಾಯಿತು. .ಧನ್ಯವಾದಗಳು..

  2. Shruthi Sharma says:

    ಮಾಹಿತಿಪೂರ್ಣ ಬರಹ. ಧನ್ಯವಾದಗಳು.

  3. Shankari Sharma says:

    ಉಪಯುಕ್ತ ಮಾಹಿತಿಯುಕ್ತ ಬರಹ …ಧನ್ಯವಾದಗಳು

  4. Sahana Pundikai says:

    ಉತ್ತಮ‌ಬರಹ.ಈಗ ಮರೆವಿನ ಖಾಯಿಲೆ ಸರ್ವೇ ಸಾಮಾನ್ಯವಾಗಿರುವುದು ಆತಂಕಕಾರಿ ವಿಚಾರ

  5. Asha Nooji says:

    ಧನ್ಯವಾದಗಳು … ಮಾಹಿತಿ ತಿಳಿಸಿದ್ದಕ್ಕಾಗಿ …..ಈಗ ಹೆಚ್ಚಿನವರಿಗೂ ಮರೆಗುಳಿತನ ಬಂದುಬಿಟ್ಟಿದೆ 60ವರ್ಷ ಕಳೆಯಬೇಕೆಂದಿಲ್ಲ ……ಅದೆ ಸರಿಯಾದ ಸಮಯಕ್ಕೆ dr .ತ್ರ ತೋರಿಸಬೇಕು

  6. Dr S G Mangalgi says:

    Very Educative article, stress on early diagnosis is highly appreciated from the article, simple curative methods suggested are very useful

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: