ಸುವರ್ಣನಗರದ ಸಿರಿ..

Share Button

ಈ ದಿನಗಳಲ್ಲಿ, ವಿವಿಧ  ನೂತನ ವಿನ್ಯಾಸಗಳಲ್ಲಿ ನಿರ್ಮಿಸಲಾದ ಅಂದವಾದ ಮಂದಿರಗಳನ್ನು ನೋಡಿದ್ದೇವೆ. ಆದರೆ, ಇದೀಗ ಲೋಕಾರ್ಪಣೆಗೊಂಡ,  ಪುರಾತನ ಶೈಲಿಯ ಅಧುನಿಕ  ಶಿಲಾಮಯ ದೇಗುಲಕ್ಕೆ ಭೇಟಿ ಕೊಡಬೇಕೆ?  ಹೀಗೆ ಬನ್ನಿ.  ಮೈಸೂರಿನ ಹೊರವಲಯದಲ್ಲಿರುವ ವರ್ತುಲರಸ್ತೆಯನ್ನು ದಾಟಿ,  ಬೋಗಾದಿ-ಗದ್ದಿಗೆ ರಸ್ತೆಯಲ್ಲಿ ಅಂದಾಜು  4 ಕಿ.ಮೀ  ನಷ್ಟು ದೂರ ಬಂದು,  ಎಡಗಡೆಗೆ ‘ಸುವರ್ಣನಗರ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುವ ದಾರಿ’ ಎಂಬ ರಸ್ತೆಸೂಚಕವನ್ನು ಅನುಸರಿಸುತ್ತಾ ಬಂದರೆ    ವಿಶಾಲವಾದ  ಬಡಾವಣೆಯಲ್ಲಿ ನಿರ್ಮಿಸಲಾದ ಭವ್ಯವಾದ   ಶಿಲಾದೇಗುಲ ಕಾಣಿಸುತ್ತದೆ.

ಮೆಟ್ಟಿಲುಗಳುಳ್ಳ  ಸುಂದರವಾದ ಕಲ್ಲಿನ ಪ್ರಾಕಾರವನ್ನು ದಾಟಿ ದೇವಾಲಯದ  ಒಳಗೆ ಬಂದಾಗ, ಪ್ರಾಚೀನ ಶಿಲಾ ದೇಗುಲಗಳಲ್ಲಿ ಇರುವಂತಹ ಶಿಲಾ  ವಾತಾಯನ ರಂಧ್ರಗಳು, ಕರಾವಳಿಯ ದೇವಾಲಯಗಳ ಮಾದರಿಯ ಕಲ್ಲಿನ ಮುಖಮಂಟಪ ಹಾಗೂ ಕಟ್ಟೆಯುಳ್ಳ ಪುಟ್ಟ ಬಾವಿಯನ್ನು ಗಮನಿಸಿ ಬೆರಗಾಗುತ್ತೇವೆ. ಇಲ್ಲಿಯ ಗರ್ಭಗುಡಿಯಲ್ಲಿ ಲಿಂಗಸ್ವರೂಪಿಯಾಗಿ   ಚಾಮುಂಡೇಶ್ವರಿ ದೇವಿ ವಿರಾಜಮಾನಳಾಗಿದ್ದಾಳೆ. ದೇವಿಗೆ ನಮಿಸಿ ಪ್ರದಕ್ಷಿಣೆ ಮಾಡುವಾಗ ಪರಿವಾರ ದೇವತೆಗಳಾದ ಬಾಲಗಣಪತಿ, ಸುಬ್ರಹ್ಮಣ್ಯ ಹಾಗೂ ಪ್ರಸನ್ನ ಆಂಜನೇಯಸ್ವಾಮಿಯರ  ಗುಡಿಗಳನ್ನೂ ಕಾಣಬಹುದು.

ಸ್ಥಳ ಪುರಾಣದ ಪ್ರಕಾರ, 1500  ವರ್ಷಗಳ ಹಿಂದೆ ಅವಧೂತ ಪರಂಪರೆಯ ಋಷಿಯೊಬ್ಬರು  ‘ಗೋಹಳ್ಳಿ’ ಎಂದು ಕರೆಯಲ್ಪಡುವ ಈ ಜಾಗದಲ್ಲಿ, ಲಿಂಗಸ್ವರೂಪಿಯಾದ  ಚಾಮುಂಡೇಶ್ವರಿಯನ್ನು ಸ್ಥಾಪಿಸಿ  ಸಣ್ಣ ಗುಡಿಯಲ್ಲಿಟ್ಟು ಆರಾಧಿಸಿದ್ದರು. ಅನತಿ ದೂರದಲ್ಲಿ ಆ ಅವಧೂತರ ಸಮಾಧಿ ಈಗಲೂ ಇದೆ.  2010 ರಲ್ಲಿ , ಇಲ್ಲಿ ಹೊಸ ಬಡಾವಣೆಯನ್ನು ನಿರ್ಮಿಸುವ ಸಲುವಾಗಿ ಕಾರ್ಯನಿರತವಾಗಿದ್ದ ಮೈಸೂರಿನ ದೀಪಾ ಗೃಹ ನಿರ್ಮಾಣ ಸಹಕಾರ ಸಂಘದ ತೀರ್ಮಾನದ ಫಲಶ್ರುತಿಯಾಗಿ, ಶ್ರೀ ಗೋಕರ್ಣನಾಥೇಶ್ವರ ಟ್ರಸ್ಟ್ ನವರು, ಈ ದೇವಾಲಯದ ನಿರ್ಮಾಣವನ್ನು ಆರಂಭಿಸಿದರು.  ಮಂದಿರದ ನಿರ್ಮಾಣವು ಸಂಪೂರ್ಣವಾದ ಮೇಲೆ, 2018 ರ ಎಪ್ರಿಲ್ ತಿಂಗಳಿನಲ್ಲಿ  ಬ್ರಹ್ಮಕಲಶೋತ್ಸವವನ್ನು ನೆರವೇರಿಸಿದರು, ಅಂದಿನಿಂದ ಇಲ್ಲಿ ದೇವತಾರಾಧನೆ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ.

ಇನ್ನೂ ಹೊಸ ಬಡಾವಣೆಯಾದುದರಿಂದ ‘ಸುವರ್ಣನಗರವು’ ಮೈಸೂರಿನಲ್ಲಿಯೇ ಬಹಳಷ್ಟು ಮಂದಿಗೆ ಅಪರಿಚಿತವಾಗಿದ್ದು, ಈ ದಿನಗಳಲ್ಲಿ ಇಲ್ಲಿಯ ಚಾಮುಂಡೇಶ್ವರಿ ಕ್ಷೇತ್ರವು ತನ್ನ ಭವ್ಯತೆಯಿಂದ ಆಸ್ತಿಕರನ್ನು ಸೆಳೆಯುತ್ತಿದೆ.  ಜನದಟ್ಟಣೆಯಿಲ್ಲದ ಈ ಸ್ಥಳವು ಶಾಂತವಾಗಿದ್ದು, ಆಸ್ತಿಕ ಮನಸ್ಸಿನ  ದೈವಾನುಭೂತಿಗೆ ಪೂರಕವಾಗಿದೆ.

– ಹೇಮಮಾಲಾ.ಬಿ. ಮೈಸೂರು

7 Responses

 1. Avatar savithri s bhat says:

  ಸುವರ್ಣನಗರದ ಸಿರಿದೇವಿಯ ದರುಶನ ಭಾಗ್ಯವು ಎಲ್ಲರಿಗೂ ಸಿಗುವಂತಾಗಲಿ. ಉತ್ತಮ ಮಾಹಿತಿಗೆ ಧನ್ಯವಾದಗಳು..

 2. Avatar Shankari Sharma says:

  ದೇಗುಲದ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಿ ..ಧನ್ಯವಾದಗಳು .

 3. Avatar Shruthi Sharma says:

  ಬಹಳ ಉತ್ತಮ ಮಾಹಿತಿ. ದೇವಾಲಯದ ಚಿತ್ರಗಳು ನಮ್ಮ ಊರಾದ ಕಾಸರಗೋಡಿನ ಹಲವು ದೇಗುಲಗಳನ್ನು ನೆನಪಿಗೆ ತಂದಿತು.

 4. Avatar Ravi Anoor says:

  Very good temple for a very good lay out.
  Definitely everybody should visit

 5. Avatar Somashekar says:

  ವಿವರಣೆ ಚಿಕ್ಕದಾದರೂ ಚೂಕ್ಕವಾಗಿ ಬಂದಿದೆ. ದೇವಾಲಯಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚುವಸಾಧ್ಯತೆ ಇದೆ.
  ಸೋಮಶೇಖರ್

 6. Hema Hema says:

  ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: